ಶಾಲೆಗಳು ಆರಂಭವಾಗಿವೆ. ಕಾಲೇಜುಗಳೂ...
ಜೂನ್ ಎಂಬುದು, ಹೆತ್ತವರಿಗೆ ಸಂತೋಷ ಮತ್ತು ಸಂಕಟವನ್ನು ಒಟ್ಟೊಟ್ಟಿಗೆ ಕೊಡುವ ತಿಂಗಳು. ಅದು ಹೇಗೆ ಎಂಬುದನ್ನು ವಿವರಿಸುತ್ತೇನೆ ಕೇಳಿ: ಮಗುವಿಗೆ ನಾಲ್ಕು ವರ್ಷ ತುಂಬುತ್ತಿದೆ ಅನ್ನಿಸಿದ ತಕ್ಷಣ, ಅದನ್ನು ಯಾವ ಶಾಲೆಗೆ ಸೇರಿಸಬೇಕೆಂದು ಅಪ್ಪ-ಅಮ್ಮ ಯೋಚಿಸತೊಡಗುತ್ತಾರೆ. ಯಾವ ಶಾಲೆಯಲ್ಲಿ ಡೊನೇಷನ್ ಕಡಿಮೆಯಿದೆ? ಯಾವ ಶಾಲೆಯಲ್ಲಿ ಶಿಸ್ತು ಚೆನ್ನಾಗಿದೆ? ಯಾವ ಶಾಲೆಯಲ್ಲಿ ಚೆನ್ನಾಗಿ ಪಾಠ ಮಾಡ್ತಾರೆ? ಕಳೆದ ವರ್ಷ ಆ ಶಾಲೆಗೆ ಸಿಕ್ಕಿರುವ ಫಲಿತಾಂಶದ ಪರ್ಸೆಂಟೇಜ್ ಎಷ್ಟು? ಯಾವ ಶಾಲೆಗೆ ಸೇರಿಸಿದರೆ ಮಗುವಿಗೆ ಒಳ್ಳೆಯದಾಗುತ್ತೆ ಎಂಬುದನ್ನು ಚರ್ಚಿಸುತ್ತಾರೆ, ಈ ಸಂಬಂಧವಾಗಿ, ಪರಿಚಿತರು ಹಾಗೂ ಬಂಧುಗಳ ಸಲಹೆ ಪಡೆದು, ಕಡೆಗೂ ಒಂದು ಶಾಲೆಯನ್ನು ಆಯ್ಕೆ ಮಾಡುತ್ತಾರೆ. ಆನಂತರದಲ್ಲಿ ಮತ್ತೊಂದು ಬಗೆಯ ಯೋಚನೆ ಶುರುವಾಗುತ್ತದೆ; ನಮ್ಮ ಮಗು ಖುಷಿಯಿಂದ ಶಾಲೆಗೆ ಹೋಗುತ್ತದೋ ಅಥವಾ ಸ್ಕೂಲ್ ಬೇಡಾ ಎಂದು ಅತ್ತು ರಂಪ ಮಾಡುತ್ತದೋ ಎಂಬುದೇ ಹೆಚ್ಚಿನ ತಾಯ್ತಂದೆಯರ ಚಿಂತೆಯಾಗಿರುತ್ತದೆ. ಇಂಥ ಸಂದರ್ಭದಲ್ಲಿ ಮಗುವೇನಾದರೂ ಸ್ವಯಂ ಸ್ಫೂರ್ತಿಯಿಂದ ಬ್ಯಾಗ್ ತೆಗೆದುಕೊಂಡು ಸ್ಕೂಲ್‌ಗೆ ಹೋಗ್ತೇನೆ ಎಂದರೆ ಅಥವಾ ಹಾಳೆಯ ಮೇಲೆ ಒಂದೇ ಸಮನೆ ಗೀಚುತ್ತಾ ಕೂತು ಬಿಟ್ಟರೆ- ಅಹಾ, ಮಗುವಿಗೆ ಓದಿನ ಬಗ್ಗೆ ತುಂಬಾ ಆಸಕ್ತಿ ಇದೆ ಎಂದುಕೊಂಡು ಸಂಭ್ರಮಿಸುತ್ತಾರೆ.
ಇದು, ಮಕ್ಕಳು ಶಾಲೆಗೆ ಹೋಗುವುದನ್ನು/ಹೋಗಲು ಸಿದ್ಧತೆ ನಡೆಸುವುದನ್ನು ಕಂಡು ಖುಷಿ ಪಡುವ ಪೋಷಕರ ಕಥೆಯಾಯಿತು. ಮಕ್ಕಳು ಶಾಲೆಗೆ ಹೋಗುತ್ತಾರೆ ಎಂಬುದನ್ನು ತಿಳಿದೇ ಸಂಕಟ ಪಡುವ ಪೋಷಕರ ಬಗ್ಗೆಯೂ ಇಲ್ಲಿ ಹೇಳಬೇಕು. ಅಂದ ಹಾಗೆ, ಆ ಮಕ್ಕಳು ಎಸ್ಸೆಸ್ಸೆಲ್ಸಿ ಮುಗಿಸಿರುತ್ತಾರೆ. ಕಾಲೇಜಿಗೆ ಹೊರಟು ನಿಂತಿರುತ್ತಾರೆ, ಅಂಥವರನ್ನು ಕಂಡು ಹೆತ್ತವರು ಕಣ್ಣೀರು ಸುರಿಸುವುದೇಕೆ ಎಂಬುದನ್ನು ವಿವರಿಸಲು ನಿಮಗೆ ಧನಂಜಯ ಕುಲಕರ್ಣಿಯವರ ಕಥೆ ಹೇಳಬೇಕು. ಕುಲಕರ್ಣಿಯವರು ರಾಯಚೂರು ಕಡೆಯವರು. ವೃತ್ತಿಯಿಂದ ಬ್ಯಾಂಕ್ ಮ್ಯಾನೇಜರ್. ಬಡ ಕುಟುಂಬದಿಂದ ಬಂದ ಅವರು, ವಾರಾನ್ನದ ಸೌಲಭ್ಯದೊಂದಿಗೆ ಓದಿದವರು. ಹುಟ್ಟೂರಿನಿಂದ ನೂರಾರು ಮೈಲಿ ದೂರವಿದ್ದ ಒಂದು ಮಠದಲ್ಲಿ ಹಾಸ್ಟೆಲ್‌ಗೆ ಸೇರಿಕೊಂಡರೆ ಉಚಿತ ಊಟ ಸಿಗುತ್ತದೆ ಅನ್ನಿಸಿದಾಗ, ಎರಡನೇ ಯೋಚನೆ ಮಾಡದೆ ಹಾಸ್ಟೆಲ್‌ಗೆ ಹೋದವರು. ಡಿಗ್ರಿ ಮುಗಿಸುವವರೆಗೂ ಅವರು ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಸಂಕಟಗಳು ಸಾಲು ಸಾಲಾಗಿ ಬಂದರೂ ಕುಲಕರ್ಣಿಯವರು ಧೈರ್ಯಗೆಡಲಿಲ್ಲ. ಶ್ರದ್ಧೆಯಿಂದ ಓದಿದರು. ಒಳ್ಳೆಯ ಅಂಕ ಪಡೆದರು. ಪರಿಣಾಮವಾಗಿ, ಬ್ಯಾಂಕ್‌ನ ಅಧಿಕಾರಿ ಅನ್ನಿಸಿಕೊಂಡರು.
ಇಂಥ ಹಿನ್ನೆಲೆಯ ಕುಲಕರ್ಣಿಯವರಿಗೆ ಇಬ್ಬರು ಮಕ್ಕಳು. ಮೊದಲನೆಯವನು ಈಗ ಪಿಯುಸಿ ವಿದ್ಯಾರ್ಥಿ. ಮಕ್ಕಳನ್ನು ಡಾಕ್ಟರ್ ಮಾಡಬೇಕು, ಎಂಜಿನಿಯರ್ ಮಾಡಬೇಕು. ಛಾನ್ಸ್ ಸಿಕ್ಕರೆ ಐಎಎಸ್‌ಗೇ ಕಳಿಸಬೇಕು ಎಂದು ಉಳಿದೆಲ್ಲ ಅಪ್ಪ-ಅಮ್ಮಂದಿರೂಯೋಚಿಸ್ತಾರಲ್ಲ; ಅದೇ ರೀತಿ ಕುಲಕರ್ಣಿಯವರೂ ಯೋಚಿಸಿದರು. ಆದರೆ, ವಿಪರೀತ ಮುದ್ದಿನ ಮಧ್ಯೆ ಬೆಳೆದ ಅವರ ಮಗ, ಎಸ್ಸೆಸ್ಸೆಲ್ಸಿಯಲ್ಲಿ ಶೇ. 60ರಷ್ಟು ಅಂಕಗಳನ್ನು ಪಡೆಯುವುದಕ್ಕೆ ಸುಸ್ತಾಗಿ ಹೋದ. ಮಗ, ಇಡೀ ಶಾಲೆಗೆ ನಾಲ್ಕನೆಯವನಾಗಿ ಫಲಿತಾಂಶ ಪಡೆಯಬಹುದು ಎಂದು ಭಾವಿಸಿದ್ದ ಕುಲಕರ್ಣಿಯವರಿಗೆ ಇದರಿಂದ ಶಾಕ್ ಆಯಿತು. ಅವರು ಗುಟ್ಟಾಗಿ ಪ್ರಾಚಾರ್ಯರನ್ನು ಭೇಟಿ ಮಾಡಿದರು. ನನ್ನ ಮಗನ ಕಳಪೆ ಸಾಧನಗೆ ಕಾರಣವೇನು ಸ್ವಾಮೀ? ಅವನಿಗೆ ಓದುವುದರಲ್ಲಿ ಆಸಕ್ತಿ ಇದೆಯೋ ಇಲ್ಲವೋ, ವಿವರಿಸಿ ಹೇಳಿ ಎಂದು ಪ್ರಾರ್ಥಿಸಿದರು. ಮಗನ ಬಗ್ಗೆ ತಮಗಿರುವ ಕನಸುಗಳನ್ನು ಹೇಳಿಕೊಂಡರು. ಆಗ ಪ್ರಾಚಾರ್ಯರು ಹೇಳಿದರಂತೆ: 'ನಿಮ್ಮ ಮಗನಿಗೆ ಓದುವುದರಲ್ಲಿ ಆಸಕ್ತಿಯಿದೆ. ಆದರೆ ಅತಿಯಾದ ಮುದ್ದಿನಿಂದ ಅವನು ಹಾಳಾಗಿ ಹೋಗ್ತಿದಾನೆ. ಅವನನ್ನು ಭವಿಷ್ಯದಲ್ಲಿ ಒಳ್ಳೆಯ ಆಫೀಸರ್ ಮಾಡಬೇಕು ಅಂತ ನಿಜವಾಗ್ಲೂ ನಿಮಗೆ ಆಸೆಯಿದ್ರೆ, ಮೊದಲು ಶಿಸ್ತು ಕಲಿಸಿ. ಮನೆಯಿಂದ ದೂರ ಇಟ್ಟು ಓದಿಸಿ...' ಪ್ರಾಚಾರ್ಯರ ಮಾತು ಕೇಳಿದ್ದೇ ತಡ, ಕುಲಕರ್ಣಿಯವರು ಹುಷಾರಾದರು. ಶಿಸ್ತಿನ ಕಾಲೇಜು ಮತ್ತು ಹಾಸ್ಟೆಲ್‌ನ ಬಗ್ಗೆ ಹಲವರಲ್ಲಿ ವಿಚಾರಿಸಿದರು. ಕಡೆಗೂ, ಬೆಂಗಳೂರಿನಿಂದ 450 ಕಿ.ಮೀ. ದೂರವಿರುವ ಒಂದು ರೆಸಿಡೆನ್ಶಿಯಲ್ ಕಾಲೇಜಿನಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ಮಗನ ಅಡ್ಮಿಷನ್ ಮಾಡಿಸಿದರು. ಮುಂದಿನ ವಾರದಿಂದ ಕಾಲೇಜುಗಳು ಆರಂಭವಾಗಲಿವೆ. ಈ ಸಂಬಂಧವಾಗಿ, ಕುಲಕರ್ಣಿಯವರಿಗೆ ಕಾಲೇಜಿನಿಂದ ಪತ್ರ ಬಂದಿದೆ. ಮಗನನ್ನು ಅಷ್ಟು ದೂರದ ಊರಿಗೆ ಕಳಿಸಬೇಕಲ್ಲ ಎಂಬ ಆತಂಕದಲ್ಲಿ ಅವರು ಯೋಚಿಸಿ ಹಣ್ಣಾಗಿದ್ದಾರೆ. ಮಗನಿಗೆ ಅಲ್ಲಿನ ವಾತಾವರಣ ಹಿಡಿಸುತ್ತದೆಯೋ ಇಲ್ಲವೋ? ಹಾಸ್ಟೆಲ್‌ನ ಊಟ ಅವನಿಗೆ ಒಗ್ಗದಿದ್ದರೆ ಏನು ಮಾಡುವುದು? ಕಾಲೇಜಿನಿಂದ ಹಾಸ್ಟೆಲ್‌ಗೆ ಅರ್ಧ ಕಿ.ಮೀ. ದೂರವಿದೆ. ಅಷ್ಟೂ ದೂರವನ್ನು ನಡೆದೇ ಮುಗಿಸಬೇಕು. ದಿನವೂ ನಡೆದೂ ನಡೆದು, ಮಗ ಸುಸ್ತಾಗಿ ಹೋಗಬಹುದು. ಅಕಸ್ಮಾತ್ ಮಧ್ಯಾಹ್ನ ಕಾಲೇಜಿನಿಂದ ಹಾಸ್ಟೆಲ್‌ಗೆ ಹಿಂದಿರುಗುವಾಗ ಆಯಾಸದಿಂದ ತಲೆ ತಿರುಗಿ ಬಿದ್ದು ಬಿಟ್ಟರೆ? ಅಥವಾ ಹಾಸ್ಟೆಲನಲ್ಲಿ ಕೆಟ್ಟ ಹುಡುಗರ ಸಹವಾಸ ಮಾಡಿಬಿಟ್ಟರೆ...
ಕುಲಕರ್ಣಿಯವರ ಯೋಚನೆಗಳೆಲ್ಲಾ ಹೀಗೆಯೇ ಇದ್ದವು. ಹೇಳಲು ಮರೆತಿದ್ದೆ. ಈ ಮಹರಾಯರು ನನಗೆ ದೂರದ ಸಂಬಂಧಿ. ಮೊನ್ನೆ ಮದುವೆಯೊಂದರಲ್ಲಿ ಸಿಕ್ಕವರು ಅದೇಕೋ ಕಾಣೆ: ಎಲ್ಲವನ್ನೂ ಹೇಳಿಕೊಂಡರು. ಕಡೆಗೆ, ಏನಾದ್ರೂ ಸಜೆಷನ್ ಕೊಡ್ತೀರಾ ನೋಡ್ರಿ ಅಂದರು. ಸಲಹೆ ಕೊಡುವಷ್ಟು ಅನುಭವವಾಗಲಿ, ಹಿರಿತನವಾಗಲಿ ನನಗಿಲ್ಲ ಸರ್. ಆದರೆ ನನಗೆ ಅನಿಸಿದ್ದನ್ನು ಮಾತ್ರ ಹೇಳ್ತೀನಿ ಅಂದವಳೇ-'ಸರ್, ದಶಕಗಳ ಹಿಂದೆ; ನೀವೂ ಹೆತ್ತವರಿಂದ ದೂರವಿದ್ದೇ ಓದಿದವರು. ಈಗ ನಿಮ್ಮ ಮಗನಿಗೆ ಸಿಗುತ್ತಿದೆಯಲ್ಲ; ಅಂಥ ಯಾವ ಅನುಕೂಲವೂ ನನಗಿರಲಿಲ್ಲ. ಮುಖ್ಯವಾಗಿ ಗಾಡ್‌ಫಾದರ್‌ಗಳ ಬೆಂಬಲವಿರಲಿಲ್ಲ. ಇಷ್ಟೆಲ್ಲ ತೊಂದರೆಗಳಿದ್ದರೂ ನೀವು ಚೆನ್ನಾಗಿಯೇ ಓದಿದಿರಲ್ಲ? ನೆನಪಿಡಿ: ಪರಿಸ್ಥಿತಿ ಮತ್ತು ಸಂದರ್ಭಗಳು, ಮನುಷ್ಯನಿಗೆ ಬದುಕುವುದನ್ನು ಕಲಿಸುತ್ತವೆ. ಇಷ್ಟು ದಿನ ತುಂಬ ಮುದ್ದಿನಿಂದ ಬೆಳೆದ ಮಗ, ಮುಂದಿನ ಒಂದೆರಡು ವರ್ಷ ಕಷ್ಟ ಹಾಗೂ ಶಿಸ್ತಿನ ಮಧ್ಯೆ ಬದುಕಿದರೆ ತಪ್ಪೇನು? ಹಾಸ್ಟೆಲ್ ವಾಸ ಎಂಬುದೂ ಒಂದರ್ಥದಲ್ಲಿ ಬದುಕುವುದನ್ನು ಕಲಿಸುವ ಸ್ಥಳವೇ ತಾನೇ? ಈಗ ಎರಡು ವರ್ಷ ಕಷ್ಟ ಪಟ್ಟರೆ, ಮುಂದಿನ 20 ವರ್ಷ ನೆಮ್ಮದಿಯಿಂದ ಬದುಕಬಹುದು. ಈ ರೀತಿಯಲ್ಲಿ ನೀವೇಕೆ ಯೋಚಿಸುವುದಿಲ್ಲ?' ಎಂದು ಪ್ರಶ್ನಿಸಿದೆ. ಕುಲಕರ್ಣಿಯವರಿಗೆ ನನ್ನ ಕಡೆಯ ಮಾತುಗಳು ಬಹಳ ಇಷ್ಟವಾದವು. ಈಗ ಎರಡು ವರ್ಷ ಕಷ್ಟಪಟ್ರೆ ಮುಂದಿನ 20 ವರ್ಷ ನೆಮ್ಮದಿ; ಹಾಗೆ ಮಾಡದೆ ಪಿಯುಸಿ ಸಂದರ್ಭದ ಎರಡು ವರ್ಷ ಕಷ್ಟಪಡದೇ ಮಜಾ ಮಾಡಿದ್ರೆ ಬದುಕು ಪೂರಾ ಸಂಕಟ... ಭಾಳಾ ಚೆನ್ನಾಗಿ ಹೇಳಿದ್ರಿ ಕಣ್ರೀ. ನಾಳೆಯೇ ಹಾಸ್ಟೆಲ್‌ಗೆ ಹೋಗಲು ಮಗನನ್ನು ರೆಡಿ ಮಾಡ್ತೀನಿ ಎನ್ನುತ್ತಾ ಕಣ್ಣೊರೆಸಿಕೊಂಡರು. ಅವರ ಮಾತು ಕೇಳಿದಾಗ- ಕಾಲೇಜು ಶಿಕ್ಷಣಕ್ಕೆಂದು ಮಕ್ಕಳನ್ನೂ ದೂರದ ಊರಿಗೆ ಕಳಿಸಲು ನಿರ್ಧರಿಸಿ, ಮಕ್ಕಳನ್ನು ಬಿಟ್ಟಿರಲಾರದೆ ಬಿಕ್ಕಳಿಸುವ ತಾಯ್ತಂದೆಯರ ನೆನಪಾಯಿತು.
-ನಾನು ಪ್ರಣತಿ
Advertisement