ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೇಗಿವೆ?

ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೇಗಿವೆ?

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೀಗ ಏನು ನಡೆಯುತ್ತಿದೆ? ನರೇಂದ್ರ ಮೋದಿಯವರ ಪ್ರವಾಹದಲ್ಲಿ ನಾವು, ಇಂದಿಗೂ ಕೆಲವು ರಾಜ್ಯಗಳಲ್ಲಿನ ಸರ್ಕಾರಗಳು ತಮ್ಮ ಹೈಕಮಾಂಡ್‌ನ ಮನಸ್ಥಿತಿಯನ್ನೇ ಹೊಂದಿವೆ ಎನ್ನುವುದನ್ನು ಮರೆತುಬಿಟ್ಟಿದ್ದೇವೆ. ಕೌರವರು ನೂರು ಜನರಿದ್ದರೂ ಐವರು ಪಾಂಡವರೇ ಗೆದ್ದರು ಎಂದು ಕುಟುಕಿದರು ಮಲ್ಲಿಕಾರ್ಜುನ ಖರ್ಗೆ. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿಗೆ ಕೇವಲ ದುರ್ಯೋಧನನನ್ನು ಉಲ್ಲೇಖಿಸುವುದಕ್ಕಷ್ಟೇ ಸಾಧ್ಯವಾಯಿತು ಮತ್ತು ಇದರಿಂದಾಗಿ ಖರ್ಗೆ ಅವರು ಹೇಳಿದ ಅಂಶಕ್ಕೇ ಅವರು ಒತ್ತುಕೊಟ್ಟಂತಾಯಿತು. ಆದಾಗ್ಯೂ ಧರ್ಮಕ್ಷೇತ್ರೆ ಕುರುಕ್ಷೇತ್ರೆಯ ನಿಯಮಗಳಲ್ಲಿ, ಹೈಕಮಾಂಡ್ ಯಾರಿಗೂ ಉತ್ತರದಾಯಿಯಾಗಬೇಕಿರಲಿಲ್ಲ, ಅದನ್ನು ಯಾರೂ ಪ್ರಶ್ನಿಸುತ್ತಲೂ ಇರಲಿಲ್ಲ. ಆದರೆ ಇಂದು ಸಾಮಾನ್ಯ ಕಾಂಗ್ರೆಸ್ಸಿಗನಿಗೂ ಕೂಡ ಹೈಕಮಾಂಡ್‌ನ ಸಂಸ್ಕೃತಿಯಿಂದಾಗಿಯೇ ಇಂದು ಭಾರತೀಯರು ಕಾಂಗ್ರೆಸ್ ಅನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ ಎನ್ನುವುದು ತಿಳಿದಿದೆ. ಕಾಂಗ್ರೆಸ್ ಇನ್ನೊಂದು ಯುದ್ಧ ಮಾಡಲು ಶಕ್ತವಾಗಿರಬಹುದು ಆದರೆ, ನೂರು ಕೋಟಿ ಭಾರತೀಯರನ್ನು ಆಳುವ ಏಕೈಕ ಹಕ್ಕು 'ಕುಟುಂಬವೊಂದಕ್ಕೇ' ಇದೆ ಎನ್ನುವ ಮನಸ್ಥಿತಿಯಂತೂ ಸೋತುಹೋಗಿದೆ. ಹೈಕಮಾಂಡ್ ಈಗ ಸತ್ತ ಕುದುರೆಯಷ್ಟೆ.
ಸತ್ತ ಕುದುರೆಗೆ ಚಡಿಯೇಟು ಕೊಟ್ಟು ಶಕ್ತಿ ವ್ಯಯ ಮಾಡಬಾರದು ಎನ್ನುವುದು ಸರಿ. ಆದರೆ ಮ್ಯಾನೇಜ್‌ಮೆಂಟ್ ಗುರುಗಳು ಈ ವಿಷಯದ ಬಗ್ಗೆ ಬೇರೆಯದ್ದೇ ನಿಲುವು ಹೊಂದಿದ್ದಾರೆ. ಒಂದು ಕುದುರೆ ಸತ್ತಾಗ ಸುಮಾರು 21 ತಂತ್ರಗಳನ್ನು ಅನುಸರಿಸಬಹುದು ಎಂದು ಪರಿಹಾಸ್ಯದ ಧ್ವನಿಯಲ್ಲಿ ಅವರು ಹೇಳುತ್ತಾರೆ. ಅದರಲ್ಲಿ ಮೂರು ಅಥವಾ ನಾಲ್ಕು ತಂತ್ರಗಳನ್ನು ನೋಡಿದರೆ ಸಾಕು, ಉಳಿದವುಗಳ ಪೂರ್ಣ ಚಿತ್ರಣ ಸಿಗಬಹುದೆನಿಸುತ್ತದೆ. ಉದಾಹರಣೆಗೆ: ಕುದುರೆಯ ಬಗ್ಗೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ನೇಮಕ ಮಾಡಬೇಕು; ವಿಶ್ವ ಪರ್ಯಟನೆ ಕೈಗೊಂಡು, ಅನ್ಯ ದೇಶಗಳಲ್ಲಿ ಸತ್ತ ಕುದುರೆಯ ಮೇಲೆ ಹೇಗೆ ಸವಾರಿ ಮಾಡುತ್ತಾರೆ ಎನ್ನುವುದನ್ನು ನೋಡಬೇಕು; ಸವಾರಿಯಲ್ಲಿ ನೈಪುಣ್ಯ ಗಳಿಸಲು ತರಬೇತಿ ಪಡೆಯಬೇಕು; ಕುದುರೆಗೆ ಬಾರಿಸಲು ಉತ್ತಮ ಗುಣಮಟ್ಟದ ಬಾರುಕೋಲನ್ನು ತರಿಸಿಕೊಳ್ಳಬೇಕು.
ಯಾವ ಅಶ್ವಾರೋಹಿ ಆ ಕುದುರೆಯನ್ನು ಚಾಟಿಯೇಟಿನಿಂದ ಕೊಂದನೋ, ಆತನನ್ನು ಅದೇ ಚಾಟಿಯಿಂದ ಬಾರಿಸುವುದು ಅತ್ಯಂತ ತಾರ್ಕಿಕ ನಡೆ. ಆದರೆ ಕಾಂಗ್ರೆಸ್‌ಗೆ ತಪ್ಪುಗಳಿಂದ ಪಾಠ ಕಲಿಯುವ ಗುಣವಿಲ್ಲ ಎನ್ನುವುದೂ ಬಿಜೆಪಿಗೆ ತಿಳಿದಿದೆ. ಹಾಗಾಗೇ ಬಿಜೆಪಿ ಅಚ್ಛೇ ದಿನ್ ಆನೇ ವಾಲೇ ಹೇ ಎಂದು ಹೇಳುತ್ತಿರುವುದು. ಇತ್ತ ಕಾಂಗ್ರೆಸ್ ಮಾತ್ರ ಕೆಲವು ರಾಜ್ಯಗಳು ಇನ್ನೂ ತನ್ನ ಬತ್ತಳಿಕೆಯಲ್ಲಿರುವುದರಿಂದ 'ಒಳ್ಳೆಯ ದಿನಗಳು' ತನ್ನಿಂದ ದೂರವಾಗಿಲ್ಲ ಎಂಬ ಭ್ರಮೆಯಲ್ಲಿದೆ.
ಇನ್ನು ಅದರ ಬತ್ತಳಿಕೆಯಲ್ಲಿರುವ ಅಸ್ತ್ರಗಳ ಪಾಡಂತೂ ಹೇಳುವಂತೆಯೇ ಇಲ್ಲ. ಇನ್ನು ನಾಲ್ಕು ತಿಂಗಳಲ್ಲಿ ಚುನಾವಣೆಯನ್ನು ಎದುರಿಸಲಿದೆ ಮಹಾರಾಷ್ಟ್ರ. ಅಲ್ಲಿನ ಕಾಂಗ್ರೆಸ್ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ಮುಖ್ಯಮಂತ್ರಿಯಾದವನು ಕೇವಲ ನಿಷ್ಕಳಂಕನಾಗಿದ್ದರೆ ಸಾಲದು, ಆತ ಬಲಿಷ್ಠ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವವನಾಗಿರಬೇಕು ಎನ್ನುವುದು ಪೃಥ್ವಿರಾಜ್ ಚೌಹಾಣ್ ಅವರ ಪರಿಸ್ಥಿತಿಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಸಚಿವ ರಾಣೆ, ಬಹಿರಂಗವಾಗಿಯೇ ಬಂಡಾಯವೆದ್ದು ಕ್ಯಾಬಿನೆಟ್ ಸಭೆಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಇನ್ನು ಶರದ್ ಪವಾರ್ ಅವರ ಎನ್‌ಸಿಪಿ ವಿಷಯಕ್ಕೆ ಬಂದರೆ, ಅವರ ಅಳಿಯ ಅಜಿತ್ ಪವಾರ್‌ನ ಅಹಂಕಾರದಿಂದಾಗಿ, ಆ ಪಕ್ಷದಿಂದ ಉತ್ತಮ ದಿನಗಳು ಎಂದೋ ದೂರವಾಗಿವೆ. ರಾಜ ಠಾಕ್ರೆ ಅವರಿಗೆ ಈಗ ಮೊದಲಿನ ಖದರಿಲ್ಲ. ಇದರಿಂದಾಗಿ ಪ್ರಾಂತೀಯ ನಿಷ್ಠರ ಮೇಲಿನ ಹಿಡಿತ ಈಗ ಸಂಪೂರ್ಣವಾಗಿ ಶಿವಸೇನೆಗೆ ದೊರೆತಂತಾಗಿದೆ. ಬಿಜೆಪಿಯೊಂದಿಗಿನ ಅದರ ಮೈತ್ರಿ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಫಲಪ್ರದವಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ರಾಬರ್ಟ್ ವಾದ್ರಾ ಭೂಹಗರಣ ಸುದ್ದಿಯಾಗುತ್ತಿದ್ದಂತೆಯೇ ಹರ್ಯಾಣದ ಕಾಂಗ್ರೆಸ್ ನಾಯಕ, ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹತ್ತು ಸ್ಥಾನಗಳಲ್ಲಿ ಕೇವಲ ಒಂದೇ ಸ್ಥಾನವನ್ನು ಗೆಲ್ಲಲು ಮಾತ್ರ ಆ ಪಕ್ಷಕ್ಕೆ ಸಾಧ್ಯವಾಯಿತು. ಪಕ್ಷದೊಳಗಿನವರೇ ಅವರ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದಾರೆ. ಬಂಡಾಯವೆದ್ದವರನ್ನು ಮುನ್ನಡೆಸುತ್ತಿರುವವರು  ಸೋನಿಯಾ ಗಾಂಧಿಗೆ ಆಪ್ತರೆನಿಸಿಕೊಂಡ ಕುಮಾರಿ ಶೆಲ್ಜಾ.
ದಕ್ಷಿಣದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬಿ.ಎಸ್.ಯಡಿಯೂರಪ್ಪನವರು ಹಗರಣಗಳ ಹಿಂದೆ ಬಿದ್ದು, ಕರ್ನಾಟಕವನ್ನು ಕಾಂಗ್ರೆಸ್‌ಗೆ ಉಡುಗೊರೆಯಾಗಿ ಕೊಟ್ಟರು. ಆದರೆ ಆಡಳಿತ ನಡೆಸುವ ಸರಿಯಾದ ಉಮೇದು ಇಲ್ಲದೆ ಕಾಂಗ್ರೆಸ್ ಮತ್ತೆ ಕರ್ನಾಟಕವನ್ನು ಬಿಜೆಪಿಗೆ ಉಡುಗೊರೆಯಾಗಿಕೊಡಬಹುದಾದ ಹಾದಿಯಲ್ಲಿದೆ. ಕಳಂಕಿತ ನಾಯಕರು ಪಕ್ಷದ ಚಹರೆಯನ್ನು ಹಾಳುಗೆಡವುತ್ತಿದ್ದಾರೆ. ಇದಷ್ಟೇ ಅಲ್ಲದೆ, ಕಾಂಗ್ರೆಸ್‌ನ ಸಚಿವರೊಬ್ಬರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯನ್ನು ಸೋಲಿಸುವುದಕ್ಕಾಗಿ ಪ್ರಚಾರ ನಡೆಸಿ ಸುದ್ದಿಯಾಗಿದ್ದಾರೆ. ದುರಂತವೆಂದರೆ ಕರ್ನಾಟಕದ ಜನರಿಗೆ ಮೂರನೆಯ ಆಯ್ಕೆ ಎನ್ನುವುದೇ ಇಲ್ಲ.
ಕೇರಳಿಗರೂ ಇಂಥದ್ದೇ ದುರ್ದೈವಿಗಳು. ಪ್ರಸಕ್ತ ಕಾಂಗ್ರೆಸ್ ಸರ್ಕಾರ ಹಿಂದಿನ ಎಲ್ಲಾ ಕಾಂಗ್ರೆಸ್ ಸರ್ಕಾರಗಳ ರೆಕಾರ್ಡ್ ಮುರಿದು ಹಗರಣಗಳನ್ನು ಮಾಡುತ್ತಾ ಹೊರಟಿದೆ. ಮತದಾರರು ಸಾಂಪ್ರದಾಯಿಕ ಪರ್ಯಾಯವಾದ ಸಿಪಿಐ-ಎಮ್ ಮತ್ತು ಅದರ ಮಿತ್ರಪಕ್ಷಗಳತ್ತ ತಿರುಗಬಹುದಿತ್ತು. ಆದರೆ ಸಿಪಿಐ-ಎಮ್ ಜನ ವಿರೋಧಿ ಅಲೆಯಲ್ಲಿ ಸಿಲುಕಿಬಿಟ್ಟಿದೆ. ಒಂದೊಮ್ಮೆ ಜನಾನುರಾಗಿ ನಾಯಕರಿಂದ ಮುನ್ನಡೆಸಲ್ಪಡುತ್ತಿದ್ದ ಪಕ್ಷ ಸಿಪಿಐ-ಎಮ್. ಆದರೆ ಈಗ ಅದರ ನಾಯಕನನ್ನು ಇಡೀ ಕೇರಳವೇ ದ್ವೇಷಿಸುತ್ತದೆ. ಇದಕ್ಕೆ ಕಾರಣ ಆತನ ಅಹಂಕಾರ, ಕೆಟ್ಟ ಪದಪ್ರಯೋಗಗಳು ಮತ್ತು ನೀತಿಗಳು. ಸಿಪಿಐ-ಎಮ್ ತನ್ನ ಗೋರಿಯನ್ನು ತಾನೇ ತೋಡಿಕೊಂಡಿರುವುದರಿಂದ ಕಾಂಗ್ರೆಸ್ ತನ್ನೆಲ್ಲಾ ಗೋಜಲುಗಳ ನಡುವೆಯೂ ಕ್ಷೇಮವಾಗಿದೆ.
ಹಾಗಿದ್ದರೆ ಕೇರಳವೊಂದರಲ್ಲೇ ಕಾಂಗ್ರೆಸ್‌ನ ಅಸ್ತಿತ್ವ ಉಳಿಯಲಿದೆಯೇ? ಈ ಪ್ರಶ್ನೆಗೆ ಉತ್ತರ ಎರಡು ಅಂಶಗಳ ಮೇಲೆ ಅವಲಂಬಿತವಾಗಿದೆ. 1) ಮೋದಿ ಜನಪ್ರಿಯ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಫಲರಾಗುತ್ತಾರೋ ಇಲ್ಲವೋ ಮತ್ತು 2) ಕೋಮುವಾದಿ ಘಟನೆಗಳನ್ನು ಬುಡದಲ್ಲೇ ಕತ್ತರಿಸಿ ಹಾಕಲಾಗುತ್ತದೋ ಅಥವಾ ನಿಷ್ಕ್ರೀಯತೆಯ ಪಿತೂರಿಯ ಮೂಲಕ ಅವಕ್ಕೆ ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತದೋ?
ಕಾದು ನೋಡಬೇಕಷ್ಟೆ.

-ಟಿಜೆಎಸ್ ಜಾರ್ಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com