ಹತ್ತು ಮಾತು -ಕಿವಿ ಮಾತು

ಈ ಹತ್ತು ಸಲಹೆ, ಕಿವಿಮಾತುಗಳು ಎಷ್ಟು ಸರಳ, ಉಪಯುಕ್ತವಾಗಿವೆಯೆಂದರೆ...

ಈ ಹತ್ತು ಸಲಹೆ, ಕಿವಿಮಾತುಗಳು ಎಷ್ಟು ಸರಳ, ಉಪಯುಕ್ತವಾಗಿವೆಯೆಂದರೆ, ಇವುಗಳನ್ನು ಅಳವಡಿಸಿಕೊಂಡಿದ್ದೇ ಆದರೆ ನಮ್ಮಲ್ಲೊಂದಿಷ್ಟು ಬದಲಾವಣೆಗಳಾಗಿರುತ್ತವೆ.
ಯೋಗಿ ದುರ್ಲಭಜೀ ಮಾತಿಗೆ ಸಿಕ್ಕಿದ್ದರು. ಲೋಕಾಭಿರಾಮ ಮಾತಿನ ಸುತ್ತಾಟದ ಬಳಿಕ ಅವರನ್ನು ಕೇಳಿದೆ. 'ಯೋಗಿಜೀ, ಬಹಳ ಸರಳವಾದ, ಆಚರಣೆಗೆ ಅನುಕೂಲವಾಗುವ, ಆದರೆ ತೀರಾ ಉಪಯುಕ್ತವಾಗುವ ಕೆಲವು ಸಲಹೆ, ಕಿವಿ ಮಾತುಗಳನ್ನು ಹೇಳಿ. ಅವುಗಳನ್ನು ನನ್ನ ಓದುಗರಿಗೆ ತಲುಪಿಸುತ್ತೇನೆ' ಅಂದೆ. ಅದಕ್ಕೆ ಯೋಗಿಜೀ ಕೆಲವು ಪಾಯಿಂಟ್‌ಗಳನ್ನು ಹೇಳಿದರು.
ಬಹುವಚನ ಬಳಸುವುದರಿಂದ ನಿಮಗೇನೂ ಖರ್ಚಾಗುವುದಿಲ್ಲ. ಏಕವಚನ ಬಳಸಿದಷ್ಟೇ ಖರ್ಚಾಗುತ್ತದೆ. ಆದ್ದರಿಂದ ಬಹುವಚನವನ್ನೇ ಬಳಸಿ.
-    ಬೇರೆಯವರಿಂದ ಬರೆಯಲು ಪೆನ್ ತೆಗೆದುಕೊಂಡಾಗ ವಾಪಸ್ ಮಾಡಿ. ನಿಮ್ಮದು ಮರೆಗುಳಿ ಸ್ವಭಾವವಾಗಿದ್ದರೆ ಪೆನ್ ತೆಗೆದುಕೊಳ್ಳುವಾಗ ಮುಚ್ಚಳ ಅವರಿಗೇ ಕೊಟ್ಟು ಬಳಸಿ ಹಿಂದಿರುಗಿಸಿ. ನಿಮ್ಮ ಹತ್ತಿರ ಬೇರೆಯವರು ಪೆನ್ ಕೇಳಿದಾಗ ಮುಚ್ಚಳ ತೆಗೆದುಕೊಡಿ.
-    ಪಾರ್ಟಿಯಲ್ಲಾಗಲಿ, ಕಾರ್ಯಕ್ರಮದಲ್ಲಾಗಲಿ ಯಾರಾದರೂ ಹಾಡಿ ಎಂದು ಒತ್ತಾಯಿಸಿದರೆ, ಪರವಾಗಿಲ್ಲ ಹಾಡಿ. ಯಾಕೆ ಅಂದ್ರೆ, ಎಷ್ಟೆಂದರೂ ಕೇಳುವವರು ಅವರೇ ತಾನೆ.
-    ಯಾರದೇ ಮನೆಗೆ ಹೋದಾಗ ಡೋರ್‌ಮ್ಯಾಟನ್ನು ಕಂಡ ಕೂಡಲೇ ಕಾಲನ್ನು ಒರೆಸಿಕೊಳ್ಳಬೇಡಿ. ಅದು ಕ್ಲೀನಾಗಿದ್ದರೆ ಮಾತ್ರ ಒರೆಸಿಕೊಳ್ಳಿ.
-    ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಿ. ನಿಮ್ಮ ರಕ್ತ ಬೇರೆಯವರಲ್ಲೂ ಹರಿಯಲಿ.
-    ನಾಲ್ಕು ಜನ ಸೇರಿದಾಗ ಸಂದರ್ಭಕ್ಕೆ ಸರಿ ಹೊಂದುವ, ಎಲ್ಲೂ ಕೇಳಿರದ ಐದಾರು ಜೋಕುಗಳನ್ನು ಹೇಳಿ. ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ.
-    ಸ್ನೇಹಿತರು ಹಣ ಕೇಳಿದಾಗ ಕೊಟ್ಟರೆ ಅಥವಾ ಕೊಡದಿದ್ದರೆ ನಷ್ಟವಾಗುವುದು ನಿಮಗೇ. ನಷ್ಟವನ್ನು ಎಷ್ಟು ಕಡಿಮೆ ಮಾಡಿಕೊಳ್ಳುತ್ತೀರಿ ಎಂಬುದಷ್ಟೇ ಜಾಣತನ.
-    ನಿಮ್ಮ ಬಳಿ ಸದಾ ನಿಮ್ಮ ವಿಸಿಟಿಂಗ್ ಕಾರ್ಡ್ ಇರಲಿ. ನಮ್ಮ ಗುರುತಿಗಾಗಿ ಬೇರೆಯವರಿಗೆ ನಾವು ಕೊಡುವ ಕನಿಷ್ಠ ಹಾಗೂ ಗರಿಷ್ಠವಾದುದೆಂದರೆ ಅದೇ.
-    ಪರ್ಸ್ ಇಲ್ಲದೇ ಬೇರೆ ಊರು, ದೇಶಕ್ಕೆ ಹೋಗುವುದು ಅಸಾಧ್ಯ ತಾನೆ? ಈ ನಿಯಮವನ್ನು ಪರ್ಸ್‌ಗೆ ಮಾತ್ರ ಅಲ್ಲ, ಕೆಮರಾಕ್ಕೂ ಅನ್ವಯಿಸಿ.
-    ಬೇರೆಯವರ ಗೆಲವು, ಯಶಸ್ಸು ಕಂಡು ಸಂತಸಪಡುವ, ಅದನ್ನು ನಾಲ್ಕು ಜನರ ಮುಂದೆ ಹೇಳುವ ಗುಣ ಬೆಳೆಸಿಕೊಳ್ಳಿ. ಆಗ ನೀವೂ ಗೆಲ್ಲುತ್ತೀರಿ.
ಈ ಹತ್ತು ಸಲಹೆ, ಕಿವಿಮಾತುಗಳು ಎಷ್ಟು ಸರಳ, ಉಪಯುಕ್ತವಾಗಿವೆಯೆಂದರೆ, ಇವುಗಳನ್ನು ಅಳವಡಿಸಿಕೊಂಡಿದ್ದೇ ಆದರೆ ನಮ್ಮಲ್ಲೊಂದಿಷ್ಟು ಬದಲಾವಣೆಗಳಾಗಿರುತ್ತವೆ.

ವಿಶಿಷ್ಟ ಪುಸ್ತಕದ ಅಂಗಡಿ
ಟರ್ಕಿಯ ಇಸ್ತಾನಬುಲ್‌ನಲ್ಲಿ ಒಂದು ವಿಶಿಷ್ಟ ಪುಸ್ತಕದಂಗಡಿಯಿದೆ. ಅಲ್ಲಿ, ಇರೋದೇ ಸುಮಾರು ಆರುನೂರು ಟೈಟಲ್‌ಗಳು. ಆ ಪೈಕಿ ಕನಿಷ್ಠ ಐನೂರು ಟೈಟಲ್‌ಗಳ ಪುಸ್ತಕಗಳು ನಿಮಗೆ ಇಷ್ಟವಾಗುತ್ತವೆ. ಆ ಎಲ್ಲ ಕೃತಿಗಳನ್ನೂ ಖರೀದಿಸಲೇಬೇಕೆಂದು ನಿಮಗೆ ಅನಿಸುತ್ತದೆ. ಕೊನೆಗೆ ಅಂಗಡಿಯಿಂದ ಬರುವಾಗ ನೀವು ಏನಿಲ್ಲವೆಂದರೂ ಹತ್ತು ಪುಸ್ತಕಗಳನ್ನಾದರೂ ಖರೀದಿಸಿರುತ್ತೀರಿ. ಇದು ನಿಮ್ಮ ಖರೀದಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಅದು ಬೇರೆ ಮಾತು. ಆ ಅಂಗಡಿಗೆ ಬರುವವರು ಯಾರೂ ಬರಿಗೈಲಿ ಹೋಗುವುದಿಲ್ಲ. ನೂರಾರು ಕೃತಿಗಳನ್ನು ಖರೀದಿಸುವವರೇನು ಕಮ್ಮಿ ಇಲ್ಲ.
ಈ ಅಂಗಡಿ ವೈಶಿಷ್ಟ್ಯವೇನೆಂದರೆ, ಪುಸ್ತಕವನ್ನು ಮಾರಾಟಕ್ಕೆ ಇಡುವ ಮೊದಲು ಅಂಗಡಿ ಮಾಲೀಕ ಅದನ್ನು ಓದಿರುತ್ತಾನೆ. ಆತನಿಗೆ ಇಷ್ಟವಾಗುವ ಪುಸ್ತಕಗಳನ್ನಷ್ಟೇ ಅಲ್ಲಿ ಇಟ್ಟಿರುತ್ತಾನೆ. ಅಂಗಡಿಯಲ್ಲಿರುವ ಪುಸ್ತಕಗಳನ್ನು ಓದದೇ ಇರುವುದಿಲ್ಲ. ಅಂದರೆ ಅಲ್ಲಿರುವ ಎಲ್ಲ ಕೃತಿಗಳೂ ಅವನ ಪ್ರಕಾರ, ಓದಲೇಬೇಕಾದವು. ಅಷ್ಟೇ ಅಲ್ಲ, ಅವನ ಅಂಗಡಿಯಲ್ಲಿರುವ ಎಂಟು 'ಪುಸ್ತಕ ರೀಡರ್‌'ಗಳ ಅಭಿಪ್ರಾಯವನ್ನು ಪಡೆದು ಆತ ಪುಸ್ತಕಗಳನ್ನು ಮಾರಾಟಕ್ಕೆ ಇಟ್ಟಿರುತ್ತಾನೆ. ಈ ರೀಡರ್‌ಗಳಿಗೆ ಪುಸ್ತಕ ಓದುವುದಷ್ಟೇ ಕೆಲಸ. ಆದರೆ ಆ ಅಂಗಡಿಯಲ್ಲಿರುವ ಎಲ್ಲ ಕೃತಿಗಳನ್ನು ಕನಿಷ್ಠ ಒಂಭತ್ತು ಮಂದಿ ಓದಿ, ಅವರೆಲ್ಲ ಮೆಚ್ಚಿದ ನಂತರವೇ ಅದು ಮಾರಾಟಕ್ಕೆ ಅರ್ಹವಾಗುತ್ತದೆ. ಖ್ಯಾತನಾಮ ಸಾಹಿತಿಯೋ, ಕಾದಂಬರಿಕಾರನ ಕೃತಿಯೋ ಎಂದ ಮಾತ್ರಕ್ಕೆ ಅದು ಆ ಅಂಗಡಿಯಲ್ಲಿ ಮಾರಾಟಕ್ಕೆ ಅರ್ಹತೆ ಪಡೆಯುತ್ತದೆ ಎಂದಿಲ್ಲ. ಆ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯವಿದೆಯೆಂದರೆ ಅದು ಉತ್ತಮ ಕೃತಿಯಾಗಿರಲೇಬೇಕು ಎಂಬುದು ಸರ್ವವಿದಿತ. ಟಾಪ್‌ಟೆನ್ ಪಟ್ಟಿಯಲ್ಲಿರುವ ಪುಸ್ತಕಗಳು ಸಹ ಅಲ್ಲಿ ಸಿಗದಿರಬಹುದು. 'ಒಂದು ಪುಸ್ತಕ ಚೆನ್ನಾಗಿದೆಯೋ ಇಲ್ಲವೋ ಎಂಬುದಕ್ಕೆ ಟಾಪ್‌ಟೆನ್ ಪಟ್ಟಿ ಮಾನದಂಡ ಅಲ್ಲ. ನಮ್ಮ ಓದೇ ಅದಕ್ಕೆ ಅಳತೆಗೋಲು' ಎಂಬುದು ಆ ಅಂಗಡಿಯ ಸಿದ್ಧಾಂತ.
ಇಂಥದ್ದೊಂದು ಕಠಿಣ ನಿಯಮವನ್ನು ಪಾಲಿಸಿಕೊಂಡು ಬರುತ್ತಿರುವ ಈ ಅಂಗಡಿ ಮಾಲೀಕನಿಗೆ ವ್ಯಾಪಾರಕ್ಕಿಂತ ಪುಸ್ತಕ ಸಂಸ್ಕೃತಿಯನ್ನು ಗಟ್ಟಿಗೊಳಿಸುವುದಷ್ಟೇ ಆಶಯ. ಆ ಅಂಗಡಿಯಲ್ಲಿ ಮಾರಾಟಕ್ಕೆ ಜಾಗ ಗಿಟ್ಟಿಸಿಕೊಂಡಿದೆ ಅಂದ್ರೆ ಆ ಪುಸ್ತಕ ಚೆನ್ನಾಗಿರಲೇಬೇಕು ಎಂದರ್ಥ. ನಿಮಗೆ ಇಷ್ಟವಾದ ಪುಸ್ತಕವನ್ನು ಶಿಫಾರಸು ಮಾಡಿದರೆ, ಅವರು ಓದಿ, ಅವರಿಗೂ ಇಷ್ಟವಾದರೆ, ಅದನ್ನು ಅವರು ಮಾರಾಟಕ್ಕೆ ಇಡುತ್ತಾರೆ. ಆಗ ತಾನೆ ಬಿಡುಗಡೆಯಾದ ಪುಸ್ತಕ ಸಹ ಅಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಬಿಡುಗಡೆಗೊಳ್ಳುವ ಕನಿಷ್ಠ ನಲವತ್ತೈದುದಿನ ಮೊದಲು (ಹಸ್ತಪ್ರತಿ) ಓದಲು ಕೊಡಬೇಕು. ಈ ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಪುಸ್ತಕಗಳನ್ನು ನೀವು ಖರೀದಿಸಿ, ಓದಿದ ಬಳಿಕ, ನಿಮಗೆ ಇಷ್ಟವಾಗದಿದ್ದರೆ ಅದನ್ನು ವಾಪಸ್ ಮಾಡಬಹುದು. ನಿಮ್ಮಂಥ ಐದು ಜನ ಆ ಪುಸ್ತಕದ ಬಗ್ಗೆ ಕೆಟ್ಟ ಪ್ರತಿಕ್ರಿಯೆ ಕೊಟ್ಟರೆ, ಆ ಪುಸ್ತಕವನ್ನು ಅಲ್ಲಿಂದ ತೆಗೆದು ಹಾಕಲಾಗುತ್ತದೆ.
ಹಾಗೆಂದು ಅಲ್ಲಿರುವ ಪುಸ್ತಕಗಳು, ಗಂಭೀರ ಓದಿನ ಪುಸ್ತಕಗಳು ಎಂದು ಭಾವಿಸಬೇಕಿಲ್ಲ. ಜೋಕ್ ಪುಸ್ತಕಗಳು, ಪೋಲಿ ಪುಸ್ತಕಗಳು ಸಹ ಅಲ್ಲಿವೆ. ಆದರೆ ಅವೂ ಸಹ ಒಳ್ಳೆಯ ಜೋಕು ಹಾಗೂ ಪೋಲಿ ಸಾಹಿತ್ಯಗಳೇ. ಈ ಅಂಗಡಿಯಲ್ಲಿ 'ಪುಸ್ತಕ ರೀಡರ್‌'ಗಳ ಪಾತ್ರ ಬಹಳ ದೊಡ್ಡದು. ಅವರ ತೀರ್ಮಾನವನ್ನು ಆಧರಿಸಿ ಪುಸ್ತಕವನ್ನು ಮಾರಾಟಕ್ಕೆ ಸ್ವೀಕರಿಸಲಾಗುತ್ತದೆ. ಯಾವುದಾದರೂ ಕೃತಿ ಬಗ್ಗೆ ಹೆಚ್ಚು ಅಸಮಾಧಾನ ವ್ಯಕ್ತವಾದರೆ, ಬೇರೆ ರೀಡರ್‌ಗಳ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ನಿಮಗೆ ಎರಡು -ಮೂರು ಗಂಟೆ ಸಮಯ ಸಿಕ್ಕರೆ, ಈ ಅಂಗಡಿಗೆ ಹೋಗಿ ಸುಮ್ಮನೆ ಓದುತ್ತಾ ಕುಳಿತುಕೊಳ್ಳಬಹುದು. ಪುಸ್ತಕ ಖರೀದಿಸಲೇಬೇಕೆಂದೇನಿಲ್ಲ. ಆದರೆ ಆ ಕೃತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿದರೆ ಸಾಕು. ಇಲ್ಲಿ ಪುಸ್ತಕ ಓದುವ ಪ್ರಕ್ರಿಯೆಗೆ Book reading ಎಂದು ಕರೆಯುವುದಿಲ್ಲ. Book tasting ಅಂತಾರೆ. ಅಂದರೆ ಪುಸ್ತಕದ ರುಚಿ ನೋಡುವುದು. ಪ್ರತಿದಿನ ಹೀಗೆ 20-30 ಓದುಗರು ಡಿಛಡಡಿಜ ನೋಡಿ ಹೋಗುತ್ತಾರೆ. ಅವರ ಅಭಿಪ್ರಾಯವನ್ನು ಆಧರಿಸಿಯೂ ಪುಸ್ತಕವನ್ನು ಮಾರಾಟಕ್ಕೆ ಪರಿಗಣಿಸುವುದುಂಟು. ನೀವು ಉತ್ತಮ ಪುಸ್ತಕ ಓದುಗರಾಗಿದ್ದರೆ, ಕೃತಿಯ ವಿಮರ್ಶಕರಾಗಿದ್ದರೆ, ನಿಮ್ಮ ಮನೆಗೇ ಪುಸ್ತಕವನ್ನು ಕಳಿಸಿಕೊಡುತ್ತಾರೆ. ನೀವು ಓದಿ ಅಭಿಪ್ರಾಯ ತಿಳಿಸಿದರಾಯಿತು. ಈ ರೀತಿ ಈ ಅಂಗಡಿ ಮುನ್ನೂರಕ್ಕೂ ಹೆಚ್ಚು ಬಾಹ್ಯ ರೀಡರ್‌ಗಳನ್ನು ಗುರುತಿಸಿ ಅವರಿಂದ ಪುಸ್ತಕ ಓದಿಸಿ, ಅವರು ಕೊಟ್ಟ ತೀರ್ಮಾನದ ಬಳಿಕವೇ ಮಾರಾಟಕ್ಕಿಡುತ್ತದೆ.
ಇದೊಂದು ರೀತಿಯಲ್ಲಿ ಗಂಭೀರ ಪುಸ್ತಕ ವ್ಯಾಪಾರ. ಗ್ರಾಹಕ ಸಂತೃಪ್ತಿಯೇ ಪರಮಧರ್ಮ. ಅದಕ್ಕಿಂತ ಹೆಚ್ಚಾಗಿ ಉತ್ತಮ ಕೃತಿಯನ್ನು ಜನರಿಗೆ ತಲುಪಿಸುವ, ಓದುಗರಿಗೆ ಓದಲು ನೆರವಾಗುವ ಪ್ರಯತ್ನವೂ ಹೌದು. ಇಲ್ಲಿ ವ್ಯಾಪಾರ, ಮಾರಾಟ, ಲಾಭವನ್ನು ಮೀರಿದ ಪುಸ್ತಕ ಕಾಳಜಿ, ಪ್ರೇಮವಿದೆ. ಕಳೆದ ನೂರಾಹದಿನೇಳು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಪುಸ್ತಕದಂಗಡಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೂ ಬಂದು ಹೋಗಿದ್ದಾರೆ. ತಮ್ಮ ಕೃತಿಯನ್ನು ಮಾರಾಟಕ್ಕೇಕೆ ಇಟ್ಟಿಲ್ಲ ಎಂದು ಜಗಳ ತೆಗೆದವರೂ ಉಂಟು. ನಾಲ್ಕು ತಲೆಮಾರುಗಳು ಕಳೆದರೂ ಮೂಲ ಆಶಯದಲ್ಲಿ ಮಾತ್ರ ಸ್ವಲ್ಪವೂ ಬದಲಾವಣೆಯಾಗಿಲ್ಲ.
ಪುಸ್ತಕ ಬರೆದ ಮಾತ್ರಕ್ಕೆ ಯಾರೂ ಸಾಹಿತಿಗಳೂ ಅಲ್ಲ. ಬರಹಗಾರರೂ ಅಲ್ಲ. ಅವರು ಲಿಪಿಕಾರರು ಅಷ್ಟೇ.
ಈ ಅಂಗಡಿಯಲ್ಲಿ ನಿಮ್ಮ ಕೃತಿ ಜಾಗ ಗಿಟ್ಟಿಸಿಕೊಂಡರೆ ಅದಕ್ಕಿಂತ ದೊಡ್ಡ ಪುರಸ್ಕಾರ ಮತ್ತೊಂದಿಲ್ಲ. ಕನ್ನಡದಲ್ಲೂ ಇಂಥದ್ದೊಂದು ಪುಸ್ತಕ ಅಂಗಡಿ ತೆರೆದರೆ ಓದುಗರಿಗೆ ದೊಡ್ಡ ಉಪಕಾರವಾಗುತ್ತದೆ. ಆದರೆ ಆ ಅಂಗಡಿಯಲ್ಲಿ ಜಾಗ ಪಡೆಯುವ ಕೃತಿಗಳೆಷ್ಟು?

ಕಾರ್ಡು-ಸಂದೇಶ
ಕೆಲ ದಿನಗಳ ಹಿಂದೆ ಗೋವಾದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವಾಗ, ಓದುಗ ಅಭಿಮಾನಿಯೊಬ್ಬರು ಬಂದು ಒಂದು ಪುಸ್ತಕ ಹಿಡಿದು 'ಏನಾದರೂ ಬರೆದುಕೊಡಿ' ಎಂದರು. ನನ್ನ ಕೋಟಿನಲ್ಲಿ ಚೇತನ್ ಭಗತ್ ಬರೆದ ಸಾಲುಗಳನ್ನು ಪ್ರಿಂಟ್ ಹಾಕಿದ ಒಂದು ಕಾರ್ಡ್ ಇತ್ತು. ಇಂಥವರಿಗಾಗಿಯೇ ಸುಂದರ ಸಾಲುಗಳನ್ನು ಕಂಡಾಗೆಲ್ಲ ಅದನ್ನು ಪ್ರಿಂಟ್ ಹಾಕಿಸಿ ಕಾರ್ಡ್ ಮಾಡಿ ಜೇಬಿನಲ್ಲಿಟ್ಟುಕೊಂಡಿರುತ್ತೇನೆ. ಆ ಸಾಲನ್ನು ಹೇಳಿದವರ ಅಥವಾ ಬರೆದವರ ಹೆಸರಿನ ಜತೆಗೆ ಸಣ್ಣ ಅಕ್ಷರಗಳಲ್ಲಿ ನನ್ನ ಇಮೇಲ್‌ನ್ನು ಪ್ರಿಂಟ್ ಹಾಕಿಸಿರುತ್ತೇನೆ. ವಿಮಾನದಲ್ಲಿ ಸಿಕ್ಕ ಅಭಿಮಾನಿ ಓದುಗರೊಬ್ಬರಿಗೆ ಆ ಕಾರ್ಡ್‌ನ್ನು ಕೊಟ್ಟೆ. ಅದರಲ್ಲಿ ಬರೆದಿತ್ತು-'ಪ್ರತಿ ರಾಜನೂ ಒಬ್ಬ ಅಳುವ ಮಗುವಾಗಿದ್ದ ಹಾಗೂ ಪ್ರತಿ ಕಟ್ಟಡವೂ ಮೊದಲು ನೀಲನಕ್ಷೆಯಾಗಿತ್ತು. ಇಂದು ನೀವು ಏನಾಗಿದ್ದೀರಿ ಎಂಬುದು ಮುಖ್ಯ ಅಲ್ಲ. ನಾಳೆ ನೀವು ಏನಾಗಬೇಕೆಂದು ಬಯಸಿದ್ದೀರಿ ಎಂಬುದು ಮುಖ್ಯ. ನೀವು ಹೊಂದಿರುವ ಸ್ಥಾನಮಾನದ ಬಗ್ಗೆ ಅತಿಯಾದ ಗರ್ವ ಬೇಡ. ಚೆಸ್ ಆಟ ಮುಗಿದ ಬಳಿಕ, ರಾಜ, ಮಂತ್ರಿ, ಸೈನಿಕರೆಲ್ಲ ಒಂದೇ ಪೆಟ್ಟಿಗೆಯನ್ನು ಸೇರುತ್ತಾರೆ.' ಈ ಸಾಲುಗಳನ್ನು ಓದಿ ಅವರಿಗೆ ಸಂತಸವಾಗಿರಬೇಕು. 'ಸಾರ್ ನೀವು ಕೊಟ್ಟ ಚೇತನ್ ಭಗತ್ ಸಾಲುಗಳನ್ನು ಗೋಡೆಗೆ ಅಂಟಿಸಿಕೊಂಡಿದ್ದೇನೆ' ಎಂದು ಇಮೇಲ್ ಮಾಡಿದ್ದರು.
ಹದಿನೈದು ದಿನಗಳ ಹಿಂದೆ, ದಿಲ್ಲಿ ವಿಮಾನ ನಿಲ್ದಾಣದಲ್ಲಿ ಒಂದು ಕೈಯಲ್ಲಿ ಬ್ಯಾಗು ಹಾಗೂ ಮತ್ತೊಂದರಲ್ಲಿ ಹತ್ತಾರು ಪುಸ್ತಕಗಳಿದ್ದವು. ಆ ಪೈಕಿ ಎರಡು ಪುಸಕ ಬಿದ್ದು ಹೋದವು. ನನ್ನ ಪಾಡು ಕಂಡ ಹುಡುಗಿಯೊಬ್ಬಳು 'ನಾನು ಹೆಲ್ಪ್ ಮಾಡಬಹುದಾ?' ಎಂದು ಕೇಳಿ, ಆ ಎರಡು ಪುಸ್ತಕಗಳನ್ನು ಎತ್ತಿಕೊಟ್ಟಳು. ಅವಳಿಗೆ ಬರೀ ಒಣ ಥ್ಯಾಂಕ್ಸ್‌' ಎಂದು ಹೇಳುವ ಬದಲು ನನ್ನ ಕೋಟಿನಿಂದ ಒಂದು ಕಾರ್ಡನ್ನು ತೆಗೆದುಕೊಟ್ಟೆ. ಅದರಲ್ಲಿ ಬರೆದಿತ್ತು-'Make someone smile whenever you can, you never know how much of a difference, you could be making in their life at that moment.'
ಅಂದ ಹಾಗೆ ಆ ತರುಣಿ ಈಗ ನನ್ನ ಸ್ನೇಹಿತೆ.
ಪರಿಚಿತರಾಗುವ ಮೊದಲು ಎಲ್ಲರೂ ಅಪರಿಚಿತರೇ. ನಮ್ಮ ಸಣ್ಣ ನಡೆಯಿಂದ ಅಸಾಧಾರಣ ಬದಲಾವಣೆ ತರಲು ಸಾಧ್ಯ. ನೀವೂ ಪ್ರಯತ್ನಿಸಿ.

-ವಿಶ್ವೇಶ್ವರ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com