ಸಾಯಲು ಹೊರಟಾಕೆಯ ಬಾಳ ಬೆಳಗಿಸಿತು ಸಾವಯವ ಕೃಷಿ!

ಅದು ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಒಂದು ಹಳ್ಳಿ. ಅಲ್ಲಿ, ಮಾಧವರೆಡ್ಡಿ ...
ಸಾಯಲು ಹೊರಟಾಕೆಯ ಬಾಳ ಬೆಳಗಿಸಿತು ಸಾವಯವ ಕೃಷಿ!
Updated on

ಅದು ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಒಂದು ಹಳ್ಳಿ. ಅಲ್ಲಿ, ಮಾಧವರೆಡ್ಡಿ ಎಂಬಾತನಿದ್ದ. ಅವನಿಗೆ 18 ಎಕರೆ ಜಮೀನಿತ್ತು. ಕೃಷಿ, ಅವನ ಆಸಕ್ತಿಯ ಕ್ಷೇತ್ರವಾಗಿರಲಿಲ್ಲ. ನೌಕರಿಗೆ ಸೇರಬೇಕು. ಕೆಲಸದ ನೆಪದಲ್ಲಿ ಊರೂರು ತಿರುಗುತ್ತಾ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂಬುದು ಮಾಧವರೆಡ್ಡಿಯ ವಾದವಾಗಿತ್ತು. ರೋಗಿ ಬಯಸಿದ್ದೂ ಹಾಲು ಅನ್ನ... ಎಂಬ ಮಾತಿನಂತೆ, ರೆಡ್ಡಿಗೆ ಚಿಟ್‌ಫಂಡ್ ಕಂಪನಿಯಲ್ಲಿ ನೌಕರಿ ಸಿಕ್ಕಿತು. ನಂತರದ ಕೆಲ ದಿನಗಳಲ್ಲಿ ಮದುವೆಯೂ ಆಯಿತು. ರೆಡ್ಡಿಯ ಮನದನ್ನೆಯಾಗಿ ಬಂದಾಕೆಯ ಹೆಸರು ಶಶಿಕಲಾ. ಮದುವೆಯಾದಾಗ ಆಕೆಗೆ ಜಸ್ಟ್ 18 ತುಂಬಿತ್ತು. ಅದೊಂದು ದಿನ, ಹೆಂಡತಿಯನ್ನು ಎದುರು ಕೂರಿಸಿಕೊಂಡು ಮಾಧವ ರೆಡ್ಡಿ ಹೇಳಿಬಿಟ್ಟ: 'ಇಂಟ್ಲೋ ಚಿನ್ನ ಚಿನ್ನ ಪನಿ ಚೇಸ್ಕೋನಿ ಆರಾಮ್‌ಗಾ ಉಂಡು. ಜಮೀನ್, ವ್ಯವಹಾರಲಾ ಗೊಡವಾ ನೀಕು ವದ್ದು...' (ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡ್ಕೊಂಡು ಆರಾಮಾಗಿ ಇರು. ಜಮೀನು ಹಾಗೂ ವ್ಯವಹಾರದ ಉಸಾಬರಿ ನಿನಗೆ ಬೇಡ...) ಮುಂದೆ ಈ ದಂಪತಿಗೆ ಗಂಡು ಮಗುವಾಯಿತು. ಅದಕ್ಕೆ ಸಾಯಿರಾಂ ರೆಡ್ಡಿ ಎಂದು ಹೆಸರಿಡಲಾಯಿತು. ಮನೆ ಹಾಗೂ ಮಗು-ಇವೆರಡೇ ತನ್ನ ಪ್ರಪಂಚ ಅನ್ನಿಸಿದಾಗ ಶಶಿಕಲಾ ಓದಲು ಆಸೆಪಟ್ಟಳು. ಈ ವಿಷಯವಾಗಿ ಗಂಡನನ್ನು ಒಪ್ಪಿಸಿ, ತೆಲುಗು ಸಾಹಿತ್ಯದಲ್ಲಿ ಪದವಿ ಮುಗಿಸಿದಳು. ಇಷ್ಟೆಲ್ಲಾ ಆಗುವ ವೇಳೆಗೆ ಈಕೆಗೆ 29 ವರ್ಷ ತುಂಬಿತ್ತು. ಮಗ 13ನೇ ವರ್ಷಕ್ಕೆ ಕಾಲಿಟ್ಟಿದ್ದ.
ಸಂಸಾರ ನಿರ್ವಹಣೆಗೆ ಗಂಡನ ಸಂಪಾದನೆಯಿದೆ. ಜಮೀನಿನ ಉಸ್ತುವಾರಿ ಬಂಧುಗಳ ಕೈಯಲ್ಲಿದೆ. ಗೊಂದಲವೇ ಇಲ್ಲದ ಸಂತೃಪ್ತ ಬದುಕು ನನ್ನದು ಎಂಬ ಸಡಗರದಲ್ಲಿ ಶಶಿಕಲಾ ಇದ್ದಾಗಲೇ, ಆಕೆ ಕನಸಿನಲ್ಲೂ ಊಹಿಸಿರದಂಥ ದುರಂತವೊಂದು ನಡೆದುಹೋಯಿತು. ಅದೊಂದು ಮುಂಜಾನೆ, ನೌಕರಿಗೆ ಹೊರಟು ನಿಂತ ಮಾಧವರೆಡ್ಡಿ, ಹೊಸ್ತಿಲು ದಾಟುತ್ತಿದ್ದಂತೆಯೇ, ಯಾಕೋ ಎದೆ ನೋಯುತ್ತಿದೆ ಎಂದವನೇ ಕುಸಿದು ಕುಳಿತ. ರೆಡ್ಡಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾಯ್ತು. ಆದರೆ ಪ್ರಯೋಜನವಾಗಲಿಲ್ಲ. ತೀವ್ರ ಹೃದಯಾಘಾತದಿಂದ ಆತ ತೀರಿಕೊಂಡ. ವಾರದ ನಂತರ, ಮತ್ತೊಂದು ಶಾಕಿಂಗ್ ಸುದ್ದಿ ಶಶಿಕಲಾಳನ್ನು ತಲುಪಿತು. ಏನೆಂದರೆ -ಬಿಜಿನೆಸ್ ನೆಪದಲ್ಲಿ ಮಾಧವ ರೆಡ್ಡಿ 4.50 ಲಕ್ಷ ರೂಪಾಯಿ ಸಾಲ ಮಾಡಿದ್ದ!
ರೆಡ್ಡಿಯ ಮದುವೆಯಾದ ಮೂರು ವರ್ಷದಲ್ಲಿ ಆತನ ಹೆತ್ತವರು ತೀರಿಕೊಂಡಿದ್ದರು. ಈಗ ಇಡೀ ಮನೆಗೆ ಶಶಿಕಲಾ ಮತ್ತು ಆಕೆಯ ಮಗ ಇಬ್ಬರೇ ಆದರು. ಅದುವರೆಗೂ ಮನೆಯಿಂದ ಹೊರಗೇ ಬಾರದಿದ್ದ ಶಶಿಕಲಾ, ಈಗ ಹೊಟ್ಟೆಪಾಡಿನ ಕಾರಣಕ್ಕಾದರೂ ಹೊರಗೆ ಬರಲೇಬೇಕಿತ್ತು. ಗಂಡನ ಹೆಸರಲ್ಲಿ ಜಮೀನಿತ್ತು ನಿಜ. ಆದರೆ ಬೇಸಾಯ ಮಾಡಿಸುವುದು ಹೇಗೆಂದೇ ಈಕೆಗೆ ಗೊತ್ತಿರಲಿಲ್ಲ. ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬಂಧುಗಳ ಬಳಿ ಹೋಗಿ, ಅದುವರೆಗೂ ಆಗಿರುವ ಕೆಲಸದ ವಿವರ ಕೇಳಿದರೆ, ಅದನ್ನೆಲ್ಲಾ ನಿನ್ನ ಗಂಡನಿಗೆ ಹೇಳಿದ್ದೆವಲ್ಲ; ಈಗ ನಿನಗೂ ಯಾಕೆ ಹೇಳ್ಬೇಕು ಎಂದರಂತೆ. ಅಷ್ಟಕ್ಕೇ ಸುಮ್ಮನಾಗದೆ, ಆ ಜಮೀನಿನಿಂದ ಏನೂ ಗಿಟ್ಟುವುದಿಲ್ಲ. ಅದನ್ನು ನಮಗೆ ಮಾರಿಬಿಡು ಎಂದು ಒತ್ತಾಯಿಸಿದರಂತೆ. ಹಾಗೇನಾದರೂ ಮಾಡಿದರೆ ತನ್ನ ಬದುಕಿಗೆ ಇರುವ ಆಸರೆ ತಪ್ಪಿ ಹೋಗಿ ಬೀದಿ ಪಾಲಾಗಬೇಕಾಗುತ್ತದೆ ಅನಿಸಿದ್ದರಿಂದ -ಉಹುಂ, ಏನೇ ಕಷ್ಟ ಬಂದರೂ ಸರಿ, ಜಮೀನು ಮಾರಲಾರೆ. ಇನ್ಮೇಲೆ ನಾನೇ ನಿಂತು ಬೇಸಾಯ ಮಾಡಿಸ್ತೇನೆ ಎಂದು ಬಿಟ್ಟಿದ್ದಾಳೆ ಶಶಿಕಲಾ.
ಶಶಿಕಲಾಳ ಯಶೋಗಾಥೆ ಆರಂಭವಾಗುವುದೇ ಇಲ್ಲಿಂದ. ಜಮೀನನ್ನ ಮಾರುವುದಿಲ್ಲ ಎಂದು ಈಕೆ ಖಡಾಖಂಡಿತವಾಗಿ ಹೇಳಿದ್ದರಿಂದ ಸಿಟ್ಟಿಗೆದ್ದ ಬಂಧುಗಳು, ಈಕೆಯ ವಿರುದ್ಧ ಅಪಪ್ರಚಾರ ಮಾಡಿದರು. ಈ ಹೆಂಗಸಿನ ಕಾಲ್ಗುಣ ಚೆನ್ನಾಗಿಲ್ಲ ಕಣ್ರೀ. ಹಾಗಾಗಿ ಗಂಡನೇ ಸತ್ತು ಹೋದ ಅಂದರು. ಗಂಡನನ್ನೇ ತಿನ್ಕೊಂಡವಳು, ವಿಧವೆ ಎಂದು ಹೆಜ್ಜೆ ಹೆಜ್ಜೆಗೂ ಹಂಗಿಸಿದರು. ಇಂಥ ಮಾತುಗಳಿಗೆ ಶಶಿಕಲಾ ಕೇರ್ ಮಾಡಲಿಲ್ಲ. ಅದೊಂದು ದಿನ, ಕೂಲಿ ಕಾರ್ಮಿಕರ ನೆರವಿನೊಂದಿಗೆ ಕೃಷಿ ಕೆಲಸ ಆರಂಭಿಸಿಯೇ ಬಿಟ್ಟಳು. ಕೆಲವೇ ತಿಂಗಳಲ್ಲಿ ಬಗೆಬಗೆಯ ಹಣ್ಣು, ತರಕಾರಿಯ ಬೆಳೆಯಿಂದ ಕೃಷಿ ಭೂಮಿ ನಳನಳಿಸಿತು. ಶಶಿಕಲಾಳ ಈ ಏಳಿಗೆಯನ್ನು ಸಹಿಸದ ಬಂಧುಗಳು, ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಬೆಳೆಯನ್ನೆಲ್ಲ ಕತ್ತರಿಸಿ ಹಾಕಿದರು. ಜಮೀನಿಗೆ ನೀರಾವರಿಯ ಅನುಕೂಲವೇ ಸಿಗದಂತೆ ತಂತ್ರ ರೂಪಿಸಿದರು. ಕೂಲಿಗೆ ಬರುತ್ತಿದ್ದ ಕಾರ್ಮಿಕರಿಗೆ ಬೆದರಿಕೆ ಹಾಕಿ, ಅವರನ್ನೆಲ್ಲ ಹಿಂದಕ್ಕೆ ಕಳಿಸಿ ಬಿಟ್ಟರು. ಹಳೆಯ ಸಾಲದ ಮರುಪಾವತಿಗೆ ಒತ್ತಾಯಿಸುವಂತೆ ಶಶಿಕಲಾಳ ಗಂಡನಿಗೆ ಸಾಲ ಕೊಟ್ಟಿದ್ದವರಿಗೆಲ್ಲ ಹೇಳಿಕೊಟ್ಟರು. ದಿನವೂ ಇಂಥ ಕಿರಿಕಿರಿಗಳೇ ಜೊತೆಯಾದ್ದರಿಂದ ವಿಪರೀತ ನೊಂದುಕೊಂಡ ಶಶಿಕಲಾ, ತಕ್ಷಣವೇ ಹೆತ್ತವರಿಗೆ ಹೀಗೊಂದು ಪತ್ರ ಬರೆದಳು: 'ಬಂಧುಗಳ ಕಿರಿಕಿರಿ ಅತಿಯಾಗಿದೆ. ಈ ಹಿಂಸೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಕ್ರಿಮಿನಾಶಕ ಕುಡಿದು ಸಾಯಲು ನಿರ್ಧರಿಸಿದ್ದೇನೆ. ಸಾಯುವ ಮೊದಲು ನಿಮ್ಮನ್ನು ನೋಡಬೇಕು ಎಂದು ಆಸೆ. ತಕ್ಷಣ ಬಂದು ಹೋಗಿ...'
ಮಗಳ ಪತ್ರ ಕಂಡಾಕ್ಷಣ ಶಶಿಕಲಾಳ ಹೆತ್ತವರು ಧಾವಿಸಿ ಬಂದರು. ಸಮಾಧಾನ ಹೇಳಿ ಎದ್ದು ಹೋಗುವ ಮುನ್ನ, ರಾಮಕೃಷ್ಣ ಪರಮಹಂಸರ ವಿಚಾರಗಳಿದ್ದ ಪುಸ್ತಕವನ್ನು ಕೊಟ್ಟು, ಶಶಿಕಲಾಳ ಅಣ್ಣ ಹೇಳಿದನಂತೆ: 'ಈ ಪುಸ್ತಕವನ್ನು ಪೂರ್ತಿ ಓದು. ಆನಂತರವೂ ಸಾಯಬೇಕು ಅನ್ನಿಸಿದರೆ ಹಾಗೇ ಮಾಡು...' ರಾಮಕೃಷ್ಣರ ವಿಚಾರಗಳನ್ನು ಓದುತ್ತಾ ಹೋದಂತೆಲ್ಲ ಈಕೆ ಮಾನಸಿಕವಾಗಿ ಗಟ್ಟಿಯಾದಳು. ಮಗನಿಗೆ ಭವಿಷ್ಯ ರೂಪಿಸುವುಕ್ಕಾದರೂ ನಾನು ಬದುಕಲೇಬೇಕು ಎಂದು ನಿರ್ಧರಿಸಿದಳು. ಕೃಷಿ ಕೆಲಸವನ್ನು ಏಕಾಂಗಿಯಾಗಿ ಮಾಡಲು ಮುಂದಾದಳು. ಇದೆಲ್ಲಾ 2005ರ ಮಾತು. ಆಗ ಜಮೀನಿನಲ್ಲಿ ಜನರೇಟರ್ ಇತ್ತು. ಅದನ್ನು ಸ್ಟಾರ್ಟ್ ಮಾಡಲು ಒಂದು ಬಿಂದಿಗೆ ನೀರು ಹಾಕಬೇಕಿತ್ತು. ಆ ನೀರನ್ನು ಪಕ್ಕದಲ್ಲಿದ್ದ ಕಲ್ಲುಕಟ್ಟಡದ ಬಾವಿಯಿಂದ ತರಬೇಕಿತ್ತು. ಅದನ್ನು ನೆನಪಿಸಿಕೊಂಡು ಶಶಿಕಲಾ ಹೇಳುತ್ತಾರೆ: 'ಬಾವಿಯಲ್ಲಿ ನೀರು ತುಂಬಾ ಆಳದಲ್ಲಿತ್ತು. ನೀರು ತುಂಬಿಸಿಕೊಂಡು ಒಂದೊಂದೇ ಮೆಟ್ಟಿಲೇರುವಾಗ ಸ್ವಲ್ಪ ಆಯ ತಪ್ಪಿದರೂ ಬಾವಿಗೆ ಬಿದ್ದು ಹೋಗುತ್ತಿದ್ದೆ. ನನಗೆ ಈಜೂ ಬರುತ್ತಿರಲಿಲ್ಲ. ಇಂಥ ಇಕ್ಕಟ್ಟಿನ ಸ್ಥಿತಿಯಲ್ಲೇ ಆರೇಳು ತಿಂಗಳು ಕೆಲಸ ಮಾಡಿದೆ. ಆ ವೇಳೆಗೆ, ಉಳುಮೆಯ ಕೆಲಸ ಬಹಳ ಕಷ್ಟದ್ದು ಅನ್ನಿಸಿತು. ಆಗ, ಕೆಲವರ ಸಲಹೆಯಂತೆ ಸಾಲ ಮಾಡಿ ಹತ್ತು ಹಸುಗಳನ್ನು ಖರೀದಿಸಿ, ಡೈರಿಗೆ ಹಾಲು ಮಾರಲು ಆರಂಭಿಸಿದೆ.
ಇದೇ ಸಂದರ್ಭದಲ್ಲಿ ಆಂಧ್ರದಾದ್ಯಂತ ಸಾವಯವ ಕೃಷಿಯ ಪ್ರಯೋಗಗಳು ಹೆಚ್ಚಿದ್ದವು. ಅದೊಮ್ಮೆ ನಮ್ಮ ಊರಿಗೂ ಬಂದ ಸಾವಯವ ಕೃಷಿ ಆಂದೋಲನದ ಮುಖಂಡರು, ಹಸುವಿನ ಸೆಗಣಿ ಹಾಗೂ ಕೊಟ್ಟಿಗೆಯ ಕಸದಿಂದ ಎರೆಗೊಬ್ಬರ ತಯಾರಿಸಬಹುದು. ಅದರಿಂದ ದೊಡ್ಡ ಪ್ರಮಾಣದ ಲಾಭ ಪಡೆಯಬಹುದು ಎಂದರು. ಜೊತೆಗೆ, ಹೈದರಾಬಾದ್‌ನ ಒಂದು ವಿಳಾಸ ನೀಡಿ, ಅಲ್ಲಿಗೆ ಹೋಗಿ ಎರೆಗೊಬ್ಬರ ತಯಾರಿಸುವ ರೀತಿಯನ್ನು ಕಲಿಯಬೇಕೆಂದೂ ಸಲಹೆ ಮಾಡಿದರು. ಹೈದರಾಬಾದ್‌ನಲ್ಲಿ ತರಬೇತಿ ಪಡೆದ ನಂತರ, ನನ್ನ ಆದಾಯದ ಮೊತ್ತ ದುಪ್ಪಟ್ಟಾಯಿತು. ಐದು ಹಸುಗಳಿಂದ ಸಂಗ್ರಹವಾದ ಸಗಣಿ ಹಾಗೂ ಕೊಟ್ಟಿಗೆಯ ಕಸದಿಂದ ಕೆಲವೇ ತಿಂಗಳುಗಳಲ್ಲಿ 2000 ಟನ್ ಎರೆಗೊಬ್ಬರ ತಯಾರಿಸಲು ಸಾಧ್ಯವಾಯಿತು. ಎರೆಗೊಬ್ಬರ ಮಾರಾಟದಿಂದ ಕನಸಿನಲ್ಲೂ ನಿರೀಕ್ಷಿಸದಷ್ಟು ಲಾಭ ಬಂತು.
ಸಾವಯವ ಗೊಬ್ಬರ ತಯಾರಿಕೆಯಿಂದಲೂ ಭಾರಿ ಲಾಭವಿದೆ ಅನ್ನಿಸಿದಾಗ, ಮತ್ತಷ್ಟು ಹಸುಗಳನ್ನು ಖರೀದಿಸುವ, ಈ ಹಸುಗಳಿಗೆ ಮೇವು ಬೆಳೆಯಲೆಂದೇ ಜಮೀನು ಖರೀದಿಸುವ ಯೋಚನೆ ಬಂತು. ತಕ್ಷಣವೇ ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಿದೆ. ಗಂಡನ ಹೆಸರಿನಲ್ಲಿದ್ದ ಜಮೀನನ್ನು ಆಧಾರವಾಗಿಟ್ಟು, 10 ಲಕ್ಷ ರೂ. ಸಾಲ ಪಡೆದೆ. ಅಷ್ಟೂ ಹಣ ಕೈ ಸೇರಿದ ತಕ್ಷಣ, ಗಂಡ ಮಾಡಿದ್ದ 4.50 ಲಕ್ಷ ರೂ. ಮತ್ತು ಹಸುಗಳನ್ನು ಖರೀದಿಸಲು ಮಾಡಿದ್ದ ಸಾಲ ತೀರಿಸಿದೆ. 2 ಲಕ್ಷ ರು.ಗಳಲ್ಲಿ ಎರಡೆಕರೆ ಜಮೀನು ಹಾಗೂ ಉಳಿದ ಹಣದಲ್ಲಿ ಮತ್ತಷ್ಟು ಹಸುಗಳನ್ನು ಖರೀದಿಸಿದೆ. ಈ ಸಂದರ್ಭದಲ್ಲಿ, ಮಧ್ಯವರ್ತಿಗಳಂತೆ ಬಂದ ಕೆಲವರು ಮೋಸ ಮಾಡಿದರು. ವಯಸ್ಸಾಗಿದ್ದ, ಹಾಲು ಕೊಡದಿದ್ದ ಹಸುಗಳನ್ನು ಸುಳ್ಳು ಮಾಹಿತಿ ನೀಡಿ ಮಾರಿಬಿಟ್ಟರು. ಪರಿಣಾಮ ಏನಾಯಿತೆಂದರೆ, ವಾರಕ್ಕೊಂದು ಹಸು ಅನಾರೋಗ್ಯದಿಂದ ಮಲಗುತ್ತಿತ್ತು. ಅಥವಾ ಸತ್ತು ಹೋಗುತ್ತಿತ್ತು. ಹೀಗೇ, ಸಾಲುಸಾಲಾಗಿ ಆರು ಹಸುಗಳು ಸತ್ತಾಗ ಗಾಬರಿಯಾಯಿತು. ತಕ್ಷಣವೇ, ವಯಸ್ಸಾದ ಹಸುಗಳನ್ನು ಗೋ ಶಾಲೆಗೆ ಕಳಿಸಿಬಿಟ್ಟೆ. ಈ ವ್ಯವಹಾರದಲ್ಲಿ 3 ಲಕ್ಷ ರೂ. ನಷ್ಟವಾಯಿತು.
ಈ ವಿಷಯ ಗೊತ್ತಾಗುತ್ತಿದ್ದಂತೆಯೇ 'ಬಂಧುಗಳು' ಮತ್ತೆ ಎದ್ದು ಬಂದರು. ಕೃಷಿ ಹಾಗೂ ವ್ಯವಹಾರ ಹೆಂಗಸರಿಗಲ್ಲ. ತಕ್ಷಣವೇ ಎಲ್ಲವನ್ನೂ ಮಾರಿಬಿಡು. ಖರೀದಿಸಲು ನಾವು ಸಿದ್ಧರಿದ್ದೇವೆ ಎಂದರು. ಆದರೆ ಈ ಹೊತ್ತಿಗಾಗಲೇ, ಶ್ರಮದ ದುಡಿಮೆ ಎಂದೂ ನಮ್ಮ ಕೈ ಬಿಡುವುದಿಲ್ಲ ಎಂಬ ಸತ್ಯ ನನಗೆ ಅರ್ಥವಾಗಿತ್ತು. ಎಷ್ಟೇ ಲಾಸ್ ಆದ್ರೂ ಸರಿ, ನಾನು ಏಕಾಂಗಿಯಾಗಿ ಕೆಲಸ ಮಾಡ್ತೇನೆ ಎಂದೆ. ಆನಂತರದಲ್ಲಿ ಬ್ಯಾಂಕ್ ಸಾಲದ ಸಹಾಯದಿಂದ ಮತ್ತೆ 40 ಹಸುಗಳನ್ನು ಖರೀದಿಸಿದೆ.
ಈ ವೇಳೆಗೆ ಸಾವಯವ ಕೃಷಿ ಪದ್ಧತಿಯಲ್ಲೂ ಸಾಕಷ್ಟು ಆವಿಷ್ಕಾರಗಳಾಗಿದ್ದವು. ಸಗಣಿ ಹಾಗೂ ಕಸದಿಂದ ಎರೆಹುಳು ಗೊಬ್ಬರವನ್ನು ತಯಾರಿಸುವುದಷ್ಟೇ ಅಲ್ಲ, ಜೈವಿಕ ಕ್ರಿಯಾ ಘಟಕ ಆರಂಭಿಸಿ, ಅದರಿಂದ ಜೈವಿಕ ಅನಿಲ ತಯಾರಿಸಬಹುದು. ಈ ಜೈವಿಕ ಅನಿಲದಿಂದ ವಿದ್ಯುತ್ ಉತ್ಪಾದಿಸಬಹುದು ಎಂಬಲ್ಲಿಗೆ ಸಾವಯವ ಕೃಷಿಯ ಕ್ರಾಂತಿ ಮುನ್ನಡೆದಿತ್ತು. ಈ ಹಿಂದೆ ಎರೆಹುಳು ಗೊಬ್ಬರ ತಯಾರಿಸಿ ವಿಪರೀತ ಲಾಭ ಕಂಡಿದ್ದೆನಲ್ಲ; ಅದೇ ನಂಬಿಕೆಯಿಂದ ಜೈವಿಕ ಕ್ರಿಯಾ ಘಟಕ ಆರಂಭಿಸುವ ಧೈರ್ಯ ಮಾಡಿದೆ. ಹೀಗೆ ಉತ್ಪತ್ತಿಯಾದ ಗೊಬ್ಬರವನ್ನೇ ನಮ್ಮ ಜಮೀನಿನಲ್ಲಿ ಬಳಸಿದೆ. ಪರಿಣಾಮವಾಗಿ, ದುಪ್ಪಟ್ಟು ಪ್ರಮಾಣದ ಬೆಳೆ ಬಂತು. ಮನೆ ಹಾಗೂ ಕೃಷಿ ಭೂಮಿಯ ಎಲ್ಲ ಅಗತ್ಯಗಳಿಗೂ ಸಾಕಾಗುವಷ್ಟು ವಿದ್ಯುತ್ತನ್ನು, ಜೈವಿಕ ಅನಿಲ ಘಟಕ ದಿಂದಲೇ ಉತ್ಪಾದಿಸಲು ಸಾಧ್ಯವಾಯಿತು. ಹೀಗೆ, ಬದುಕಲ್ಲಿ ನಾನು ಒಂದೊಂದೇ ಗೆಲುವು ದಕ್ಕಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ನನ್ನ ಮಗ ಸಾಯಿರಾಂ ರೆಡ್ಡಿ, ಶ್ರದ್ಧೆಯಿಂದ ಓದಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿಬಿಟ್ಟ.
ಹಾಲು ಮಾರಾಟ, ಎರೆಗೊಬ್ಬರ ತಯಾರಿಸುವುದು ಸುಲಭವಲ್ಲ. ಅಲ್ಲಿಮುಂಜಾನೆ 3 ಗಂಟೆಯಿಂದಲೇ ಕೆಲಸ ಶುರುವಾಗುತ್ತದೆ. ಮೈ-ಕೈಗೆ ಹಸುವಿನ ಸೆಗಣಿ, ಗಂಜಲ, ಗೊಬ್ಬರದ ವಾಸನೆ ಮೆತ್ತಿಕೊಳ್ಳುತ್ತದೆ. ಅದನ್ನೆಲ್ಲ ಕಂಡ ಬಂಧುಗಳು-ಥೂ, ಇವಳು ಕೊಳಕಿ ಅಂದರು. ದುಡ್ಡಿನಾಸೆಯಿಂದ ಹೀಗೆಲ್ಲ ದುಡೀತಾಳೆ ಎಂದು ಹಂಗಿಸಿದರು. ಆದರೆ, ನನ್ನ ಯಶೋಗಾಥೆಯನ್ನು ಆಂಧ್ರದ ಸರ್ಕಾರ ಹಾಗೂ ಸ್ಯಾವೀ ಪತ್ರಿಕೆ ಗುರುತಿಸಿದವು. ಐದಾರು ಕಡೆ ಸನ್ಮಾನಿಸಿದವು. ಅಬಲೆಯರಿಗೆಲ್ಲಾ ಶಶಿಕಲಾರ ಬದುಕು ಸ್ಫೂರ್ತಿಯಾಗಲಿ' ಎಂದು ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾದವು. ಈಗ ಏನಾಗಿದೆಯೆಂದರೆ, ಆಂಧ್ರದಲ್ಲಿ ನನ್ನ ಯಶಸ್ಸನ್ನೇ ಮಾದರಿಯಾಗಿಟ್ಟುಕೊಂಡು 50ಕ್ಕೂ ಹೆಚ್ಚು ಕೃಷಿಕರು ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಆರಂಭಿಸಿದ್ದಾರೆ. ಅಂಥ ಬೆಳವಣಿಗೆಗೆ ಕಾರಣಳಾದೆ ಎನ್ನಲು ನನಗಂತೂ ಖುಷಿ' ಎನ್ನುತ್ತಾ ತಮ್ಮ ಯಶೋಗಾಥೆಯ ವಿವರಣೆಗೆ ಫುಲ್‌ಸ್ಟಾಪ್ ಹಾಕುತ್ತಾರೆ ಶಶಿಕಲಾ.
ಬದುಕಲ್ಲಿ ಒಂಟಿಯಾದ ನಂತರವೂ, ಎಲ್ಲ ಸವಾಲುಗಳಿಗೂ ಎದೆಯೊಡ್ಡಿ ಗೆದ್ದ ಈ ದಿಟ್ಟೆಯ ಬದುಕು ಎಲ್ಲರಿಗೂ ಪಾಠವಾಗುವಂಥದು, ಅಲ್ಲವೇ?
(ಚಿತ್ರ-ಮಾಹಿತಿ ಕೃಪೆ: ಸ್ಯಾವೀ)

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com