ಆ ದಂಪತಿ ತುಂಬ ವಿಶ್ವಾಸದಿಂದ ಹೇಳಿದರು: 'ನಮ್ಮ ಮಗಳು ಎಂಟನೇ ತರಗತಿಯಲ್ಲಿ ಫೇಲ್ ಆಗುವಷ್ಟು ದಡ್ಡಿಯಲ್ಲ. ಶಾಲೆಯ ಶಿಕ್ಷಕರು ಮತ್ತು ಆಡಳಿತ ವರ್ಗದವರು, ಬೇಕೆಂದೇ ನಮ್ಮ ಮಗಳನ್ನು ಫೇಲ್ ಮಾಡಿದ್ದಾರೆ...'
ಹೀಗೆ ಆರೋಪ ಮಾಡುತ್ತಿದ್ದ ದಂಪತಿಯ ಮನೆ ನಮ್ಮ ಪಿ.ಜಿ.ಯಿಂದ ಎರಡು ಕ್ರಾಸ್ ಆಚೆಗಿತ್ತು. ಅವರ ಮಗಳು ದಿನಾಲೂ ಬೆಳಿಗ್ಗೆ ಮತ್ತು ಸಂಜೆ ಷಟಲ್ ಕಾಕ್ ಆಡಲು ಬರುತ್ತಿದ್ದ ಕಾರಣ ಪರಿಚಯವಾಗಿದ್ದಳು. ಅವಳ ಸ್ಕೂಲ್ ವ್ಯಾನ್, ನಮ್ಮ ಪಿ.ಜಿ. ಇದ್ದ ರಸ್ತೆಯ ಮೂಲಕವೇ ಹೋಗುತ್ತಿತ್ತು. ಹಾಗಾಗಿ, ವಾರದಲ್ಲಿ ಮೂರು ಬಾರಿಯಾದರೂ ವ್ಯಾನ್‌ನ ಕಿಟಕಿಯಿಂದ ಇಣುಕಿ-ಅಕ್ಕಾ, ಬೈ ಎಂದು ಚೀರುತ್ತಿದ್ದಳು. ತುಂಬ ಚೂಟಿಯಾಗಿದ್ದ ಅವಳು, ಎಂಟನೇ ಕ್ಲಾಸಿನಲ್ಲಿಯೇ ಫೇಲ್ ಆಗಿದ್ದಾಳೆ ಎಂದಾಗ ನನಗಂತೂ ತುಂಬಾನೇ ಶಾಕ್ ಆಯಿತು. ಆ ಮುದ್ದು ಹುಡುಗಿಯನ್ನು ಫೇಲ್ ಮಾಡಲು ಕಾರಣವಾದ್ರೂ ಏನು ಎಂದು ಕೇಳಿದ್ದಕ್ಕೆ, ಆ ದಂಪತಿ ನೀಡಿದ ವಿವರಣೆ ಹೀಗಿತ್ತು: ಶಾಲೆಯಲ್ಲಿ ಒಂದಿಬ್ಬರು ಟೀಚರ್ಸ್ ಸರಿಯಾಗಿ ಪಾಠ ಮಾಡುತ್ತಿರಲಿಲ್ಲವಂತೆ. ನೀವೇ ಓದಿಕೊಳ್ಳಿ. ಮನೇಲಿ ಸೀನಿಯರ್ಸ್ ಹತ್ರ ಅಥವಾ ಅಪ್ಪ-ಅಮ್ಮನ ಬಳಿ ಪಾಠ ಹೇಳಿಸಿಕೊಳ್ಳಿ ಎಂದು ಹೇಳ್ತಾ ಇದ್ದರಂತೆ. ಹೀಗೆ ಹೇಳುತ್ತಿದ್ದ ಟೀಚರ್‌ಗಳ ಭಾಷಾ ಪ್ರಯೋಗ ಕೂಡ ಅಷ್ಟೇನೂ ಚೆನ್ನಾಗಿರಲಿಲ್ಲವಂತೆ. ಅವರು ಒಂದೆರಡು ಬಾರಿ ತಪ್ಪು ತಪ್ಪಾಗಿ ಮಾತಾಡಿದಾಗ, ಈ ಹುಡುಗಿ ತಕ್ಷಣವೇ ಎದ್ದು ನಿಂತು-ಮಾಮ್, ನೀವು ಹೇಳ್ತಿರೋದು ತಪ್ಪು ಅಂದುಬಿಟ್ಟಿದ್ದಾಳೆ. ಆನಂತರವೂ ಆ ಶಿಕ್ಷಕಿಯರ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿರಲಿಲ್ಲ. ಆಗ ಈ ಹುಡುಗಿ, ಉಳಿದ ವಿದ್ಯಾರ್ಥಿಗಳೊಂದಿಗೆ ಪ್ರಾಚಾರ್ಯರ ಬಳಿ ಹೋಗಿ ದೂರು ಕೊಟ್ಟಳಂತೆ. ಇದನ್ನೇ ಮನದಲ್ಲಿಟ್ಟುಕೊಂಡ ಆ ಶಿಕ್ಷಕಿಯರು, ಈ ಹುಡುಗಿಯನ್ನು ಫೇಲ್ ಮಾಡಿ ಸೇಡು ತೀರಿಸಿಕೊಂಡಿದ್ದರು. ಸ್ಕೂಲ್ ಮೆನೇಜ್‌ಮೆಂಟ್‌ಗೆ ಆ ಶಿಕ್ಷಕಿಯರು ತುಂಬಾ ಆಪ್ತರಾಗಿದ್ದುದರಿಂದ, ಶಾಲೆಯವರು, ನಾವು ಮಾಡಿರುವುದೇ ಸರಿ, ನೀವು ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂಬರ್ಥದ ಮಾತಾಡಿದರಂತೆ...
ಇದಿಷ್ಟನ್ನೂ ವಿವರಿಸಿ ಹೇಳಿದ ಆ ದಂಪತಿ-ಆ ಮೇಡಂಗಳೇನೋ ನಮ್ಮ ಮಗುವಿನ ಮೇಲೆ ಸೇಡು ತೀರಿಸಿಕೊಂಡ್ರು. ಈಗ ಮಗುವಿನ ಭವಿಷ್ಯದ ಗತಿ ಏನು? ಎಂಟನೇ ತರಗತಿಯಲ್ಲೇ ಫೇಲ್ ಆಗಿದೀನಿ ಅನ್ನಿಸಿದಾಗ ಆ ಮಗುವಿನ ಎಳೆಯ ಮನಸ್ಸಿಗೆ ಆಗುವ ಸಂಕಟ ಎಂಥಾದ್ದು ಎಂದು ಈ ಟೀಚರ್ಸ್‌ಗೆ ಯಾಕೆ ಅರ್ಥವಾಗೋದಿಲ್ಲ? ಅವರೇನೂ ಉಚಿತವಾಗಿ ಪಾಠ ಹೇಳಿಲ್ಲ. ಸಾವಿರಗಟ್ಟಲೆ ಡೊನೇಷನ್ ಕೊಟ್ಟಿದ್ದೇವೆ. ಅಷ್ಟೆಲ್ಲ ಹಣ ಪಡೆದ ಮೇಲೆ, ಚೆನ್ನಾಗಿ ಪಾಠ ಹೇಳುವುದು, ಪಾಸ್ ಆಗುವಂತೆ ಮಕ್ಕಳ ಮನಸ್ಸನ್ನು ಪರಿವರ್ತಿಸುವುದು ಶಿಕ್ಷಕರ ಕರ್ತವ್ಯವಾಗಬೇಕು ತಾನೆ ಅಂದರು.
ಅವರು ಹೇಳಿದ್ದನ್ನೆಲ್ಲ ಕೇಳಿದಾಗ, ಬೇಜವಾಬ್ದಾರಿಯಿಂದ ವರ್ತಿಸಿದ ಶಿಕ್ಷಕಿಯರ ಬಗ್ಗೆ ಕೋಪ ಬಂತು. ತನ್ನ ತಪ್ಪಿಲ್ಲದಿದ್ದರೂ ಅನಗತ್ಯವಾಗಿ ಒಂದು ವರ್ಷ ಮನೆಯಲ್ಲಿ ಕೂರಬೇಕಾಗಿ ಬಂದ ಆ ಮಗುವನ್ನು ನೆನೆದು ಸಂಕಟವೂ ಆಯಿತು. ಮತ್ತು ಅದೇ ಸಂದರ್ಭದಲ್ಲಿ ನನ್ನ ಹೈಸ್ಕೂಲ್ ದಿನಗಳ ನೆನಪೂ ಆಗಿ, ನಮ್ಮ ಬಾಲ್ಯ ಎಷ್ಟೊಂದು ಸುಂದರವಾಗಿತಲ್ವ ಅನ್ನಿಸಿತು.
ಹೆಚ್ಚೇನಿಲ್ಲ, ಬರೀ 15 ವರ್ಷಗಳ ಹಿಂದಿನ ಮಾತು. ನಾನಾಗ ಹೈಸ್ಕೂಲು ವಿದ್ಯಾರ್ಥಿನಿ. ಒಮ್ಮೆ ಏನಾಯಿತೆಂದರೆ, ನಮ್ಮ ಸಹಪಾಠಿಯೊಬ್ಬ, ಗಣಿತದ ಮೇಷ್ಟ್ರು ಲೆಕ್ಕ ಬರೆಯುತ್ತಿದ್ದಂತೆಯೇ, ಅವರಿಗಿಂತ ಮೊದಲೇ ಲೆಕ್ಕ ಬಿಡಿಸಿಬಿಟ್ಟಿದ್ದ. ಉಳಿದವರೆಲ್ಲ ಲೆಕ್ಕ ಬರೆದುಕೊಳ್ಳುತ್ತಿದ್ದರೆ, ಈತ ಆರಾಮಾಗಿ ಕೂತಿದ್ದುದನ್ನು ಕಂಡು-'ಲೆಕ್ಕ ಬರ್ಕೊಳಯ್ಯಾ, ಯಾಕೆ ಸುಮ್ನೆ ಕೂತಿದ್ದೀಯಾ?' ಎಂದು ಮೇಸ್ಟ್ರು ರೇಗಿದರು. ನಮ್ಮ ಸಹಪಾಠಿ, ನೀವು ಬರೆದ ತಕ್ಷಣ ನಾನು ಲೆಕ್ಕ ಬಿಡಿಸಿಬಿಟ್ಟೆ ಸರ್ ಅಂದ. ಈ ಮಾತಿಂದ ಮೇಷ್ಟ್ರಿಗೆ ಶಾಕ್ ಆಯಿತು. ತಕ್ಷಣ ಹೊಸದೊಂದು ಲೆಕ್ಕ ಬರೆದು, ಅವನನ್ನೇ ಸ್ಟೇಜ್‌ಗೆ ಕರೆದು, ಈ ಲೆಕ್ಕ ಬಿಡಿಸು ನೋಡೋಣ ಅಂದರು. ನಾವೆಲ್ಲಾ ಬೆರಗಾಗುವಂತೆ ನಮ್ಮ ಗೆಳೆಯ ಲೆಕ್ಕ ಬಿಡಿಸಿದ. ಶಿಷ್ಯನ ಬುದ್ಧಿವಂತಿಕೆ ಕಂಡು ಮೇಷ್ಟ್ರು ಖುಷಿಯಾದರು. ಹೆಡ್‌ಮಾಸ್ಟರ್‌ಗೆ ಎಲ್ಲವನ್ನೂ ವಿವರಿಸಿ, ಮುಂದಿನ ತರಗತಿಗೆ ಈ ಹುಡುಗನಿಗೆ ಪ್ರಮೋಷನ್ ಕೊಡೋಣ ಸಾರ್. ಇವನಿಗೆ ಒಳ್ಳೆಯ ಭವಿಷ್ಯ ಇದೆ. ಈ ಹುಡುಗ ನಮ್ಮ ಸ್ಕೂಲ್‌ಗೆ ಹೆಸರು ತರ್ತಾನೆ ಎಂದರು. ಅವರ ಮಾತು ಸುಳ್ಳಾಗಲಿಲ್ಲ. ಆ ಹುಡುಗ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೇ ಮೊದಲಿಗನಾದ.
ತರಗತಿಯ ಒಳಗಿನ ವಾತಾವರಣ ಹೀಗಿದ್ದರೆ, ವಾರಕ್ಕೆ ಎರಡು ಬಾರಿ ಇರುತ್ತಿದ್ದ ಪಿ.ಟಿ. ಪೀರಿಯಡ್‌ನ ಮಜವೇ ಬೇರೆಯಿರುತ್ತಿತ್ತು. ಥ್ರೋಬಾಲ್ ಹುಡುಗಿಯರಿಗೆ ಮೀಸಲಾಗಿದ್ದರೆ, ಇಲ್ಲವಾದರೆ, ಹುಡುಗ- ಹುಡುಗಿಯರಿಬ್ಬರನ್ನು ಸೋರಿಸಿ, ಖೋ-ಖೋ ಆಡಿಸಲಾಗುತ್ತಿತ್ತು. ಇಲ್ಲವಾದರೆ, ಹುಡುಗರು ಆಡುತ್ತಿದ್ದ ಕಬಡ್ಡಿ ಹಾಗೂ ವಾಲಿಬಾಲ್ ಕಡೆಗೆ ಎಲ್ಲರ ಕಣ್ಣು ನೆಟ್ಟಿರುತ್ತಿತ್ತು. ಆಟಗಳು ಶುರುವಾದ ತಕ್ಷಣ ಇಬ್ಬಿಬ್ಬರು ಮೇಷ್ಟ್ರುಗಳು ಕೂಡಾ ಆಟಕ್ಕೆ ಸೇರಿಕೊಂಡು ಆ ಸಂದರ್ಭದ ಸೊಗಸು ಹೆಚ್ಚಿಸುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಸಮೂಹ ಗೀತೆಯಲ್ಲಿ ನಮ್ಮೊಂದಿಗೆ ದನಿ ಸೇರಿಸುತ್ತಿದ್ದ ಟೀಚರ್‌ಗಳು, ಆ ಕ್ಷಣವನ್ನು ಎಂದೆಂದೂ ಮರೆಯದಂತೆ ಮಾಡಿಬಿಡುತ್ತಿದ್ದರು.
ಊಹುಂ, ಈಗ ಅಂಥ ಸಂದರ್ಭ ಇಲ್ಲವೇ ಇಲ್ಲ. ವಿದ್ಯಾರ್ಥಿಗಳು ತಮಗಿಂತ ಬುದ್ಧಿವಂತರು ಎಂದು ಒಪ್ಪಲು ಶಿಕ್ಷಕರು ಸಿದ್ಧರಿಲ್ಲ. ಟೀಚರ್ ನಮ್ಮ ಬೆಸ್ಟ್ ಫ್ರೆಂಡ್ ಎಂದು ಹೆಚ್ಚಿನ ಮಕ್ಕಳು ಹೇಳುವುದಿಲ್ಲ. ಪೇರೆಂಟ್- ಟೀಚರ್ ಮೀಟಿಂಗ್‌ನಲ್ಲಿ ದೂರು ನೀಡಿದ ಕಾರಣಕ್ಕೇ ಮಕ್ಕಳನ್ನು ಫೇಲ್ ಮಾಡುವ, ಕೆಳ ಮಟ್ಟದ ಗ್ರೇಡ್ ನೀಡಿ ಎಳೆಯ ಮನಸ್ಸುಗಳ ಮೇಲೆ ಅಳಿಸಲಾಗದಂಥ ಬರೆ ಹಾಕುವ ಮಂದಿ ನಮ್ಮ ಸುತ್ತಲೂ ಇದ್ದಾರೆ. ಅದನ್ನೆಲ್ಲ ನೆನಪಿಸಿಕೊಂಡಾಗ ಕಾಲವೆಂಬುದು ಗಿರ್ರನೆ ಹಿಂದಿರುಗಿ ಹೋಗಬಾರದೆ? ನಮಗೆ ದಕ್ಕಿದಂಥ ಮಧುರ, ಸುಮಧುರ ಬಾಲ್ಯವೇ ಈಗಿನ ಕಾಲದ ಎಲ್ಲ ಮಕ್ಕಳಿಗೂ ದಕ್ಕಬಾರದೆ ಅನ್ನಿಸಿತು. ಆನಂತರವೂ ನನ್ನೊಳಗೆ ಉಳಿದ ಪ್ರಶ್ನೆಯೆಂದರೆ- ತನ್ನದಲ್ಲದ ತಪ್ಪಿಗೆ ಫೇಲ್ ಆಗಿರುವ ಆ ಎಳೆಯ ಮನಸ್ಸಿಗೆ ಸಮಾಧಾನ ಹೇಳುವುದು ಹೇಗೆ?
- ನಾನು ಪ್ರಣತಿ
Advertisement