ನಿಮ್ಮ ಹೆಂಡತಿ ಹೇಳಿದಂತೆ ಕೇಳಿ ಸಾಕು!

ಸುದೀರ್ಘ ದಾಂಪತ್ಯದ ಗುಟ್ಟೇನು? ಈ ಪ್ರಶ್ನೆಗೆ ಹಲವರು ಈಗಾಗಲೇ ಉತ್ತರಿಸಿದ್ದಾರೆ...
ನಿಮ್ಮ ಹೆಂಡತಿ ಹೇಳಿದಂತೆ ಕೇಳಿ ಸಾಕು!

ಸುದೀರ್ಘ ದಾಂಪತ್ಯದ ಗುಟ್ಟೇನು?
ಈ ಪ್ರಶ್ನೆಗೆ ಹಲವರು ಈಗಾಗಲೇ ಉತ್ತರಿಸಿದ್ದಾರೆ, ವಿಶ್ಲೇಷಿಸಿದ್ದಾರೆ. ಇದೇ ವಿಷಯವನ್ನು ಆಧರಿಸಿ ಪುಸ್ತಕಗಳೂ ಪ್ರಕಟವಾಗಿವೆ. ಆದರೆ ಯಾರಿಗೂ ಈ ಪ್ರಶ್ನೆಗೆ ಸಿಕ್ಕ ಉತ್ತರದಿಂದ ಸಮಾಧಾನವಾದಂತಿಲ್ಲ. ಎಂಭತ್ತೊಂದು ವರ್ಷಗಳ ಕಾಲ ಸತಿ-ಪತಿಯಾಗಿರುವ ಜಾನ್ ಮತ್ತು ಆ್ಯನ್ ಅವರನ್ನು ಕೇಳಿದರೆ, ಅವರು ಏನಂತಾರೆ ಕೇಳೋಣ.
1932ರ ನವೆಂಬರ್ 25ರಂದು ಜಾನ್ ಹಾಗೂ ಆ್ಯನ್ ನಡುವೆ ಪ್ರೇಮಾಂಕುರವಾಯಿತು. ಆ್ಯನ್‌ಳ ತಂದೆಗೆ ಜಾನ್ ಬದಲು ತನ್ನ ಮಗಳಿಗಿಂತ ಇಪ್ಪತ್ತು ವರ್ಷ ಹಿರಿಯನಾದ, ಆದರೆ ಧನಿಕನಿಗೆ ಕೊಟ್ಟು ಮದುವೆ ಮಾಡಬೇಕೆಂದು ಬಯಸಿದ್ದ. ಆದರೆ ಆ ಹೊತ್ತಿಗೆ ಆ್ಯನ್ ಪಕ್ಕದ ಬೀದಿಯಲ್ಲಿರುವ ತನ್ನ ವಾರಿಗೆಯವನಾದ ಜಾನ್‌ನನ್ನು ಪ್ರೀತಿಸುತ್ತಿದ್ದಳು.
ಇತ್ತೀಚೆಗೆ ಜಾನ್-ಆ್ಯನ್ ದಂಪತಿ ತಮ್ಮ ಮದುವೆಯ ಎಂಬತ್ತೊಂದನೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಆಗಲೇ ಗೊತ್ತಾಗಿದ್ದು ಇವರು ಅಮೆರಿಕದ ಅತಿ ಸುದೀರ್ಘ ಅವಧಿಯ ದಂಪತಿಯೆಂದು, ಅವರು ಮದುವೆಯಾದಾಗ ಅಮೆರಿಕ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿತ್ತು. ಭಾವಿ ಅಧ್ಯಕ್ಷ, ಜಾನ್ ಎಫ್. ಕೆನಡಿ ಹೈಸ್ಕೂಲ್‌ನಲ್ಲಿ ಓದುತ್ತಿದ್ದರು. ಈ ದಂಪತಿಯಲ್ಲಿ ಅದೆಂಥ ಅನ್ಯೋನ್ಯ ಸಂಬಂಧವಿದೆಯೆಂದರೆ ಒಬ್ಬರನ್ನೊಬ್ಬರು ಒಂದು ದಿನ ಸಹ ಬಿಟ್ಟಿರಲಾರರು. ಈ ದಂಪತಿಗೆ ಹದಿನಾಲ್ಕು ಮೊಮ್ಮಕ್ಕಳಿದ್ದಾರೆ ಹಾಗೂ ಹದಿನಾರು ಮರಿ ಮೊಮ್ಮಕ್ಕಳಿದ್ದಾರೆ. ತುಂಬು ಸಂಸಾರ, ನೆಮ್ಮದಿಯ ಜೀವನ, ಸಂತೃಪ್ತ ದಾಂಪತ್ಯ.
ಜಾನ್‌ನನ್ನು ಯಾರೋ ಕೇಳಿದರು-'ಅದೆಲ್ಲ ಸರಿ, ಎಂಬತ್ತೊಂದು ವರ್ಷಗಳಿಂದ ಗಂಡ-ಹೆಂಡಿರಾಗಿ ಇಷ್ಟೊಂದು ಪ್ರೀತಿ, ಅನ್ಯೋನ್ಯತೆಯಿಂದ ಇದ್ದೀರಲ್ಲ, ನಿಮ್ಮ ಸುದೀರ್ಘ ದಾಂಪತ್ಯದ ಗುಟ್ಟೇನು?'
ಒಂದು ನಿಮಿಷ ಸಾವರಿಸಿಕೊಂಡು ಹೆಂಡತಿಯ ಕಡೆಗೆ ನೋಡಿ ಜಾನ್ ಹೇಳಿದ-'ಅದರಲ್ಲಿ ಗುಟ್ಟೇನು ಬಂತು? ನನ್ನದೆಲ್ಲ ಖುಲ್ಲಂಖುಲ್ಲ. ಹೆಂಡತಿ ಹೇಳಿದಂತೆ ಕೇಳುವುದು. ಹೆಂಡತಿ ಮಾತಿನ ಪ್ರಕಾರ, ನಡೆದರೆ ಎಷ್ಟು ವರ್ಷ ಬೇಕಾದರೂ ಅನ್ಯೋನ್ಯವಾಗಿ ಬಾಳಬಹುದು. ಎಲ್ಲ ಗಂಡಸರೂ ನಾನು ಹೇಳಿದಂತೆ ಮಾಡಲಿ. ಎಲ್ಲರೂ ನನ್ನ ಜತೆ ಸ್ಪರ್ಧೆಯೊಡ್ಡಬಹುದು. ಅನೇಕರು ನನ್ನ ದಾಖಲೆಯನ್ನು ಮುರಿಯಲೂ ಬಹುದು. ಹೆಂಡತಿ ಹೇಳಿದಂತೆ ಕೇಳಿದರೆ ಸಾಕು. ಅನೇಕರು ಬೇರೆಯವರ ಹೆಂಡತಿ ಹೇಳಿದ್ದನ್ನು ಕೇಳಿ ತೊಂದರೆಗೆ ಸಿಲುಕುತ್ತಾರೆ. ನಿಮ್ಮ ಹೆಂಡತಿ ಮಾತಿನಂತೆ ನಡೆಯಿರಿ, ಅದು ಸುಖ ಹಾಗೂ ಸುದೀರ್ಘ ದಾಂಪತ್ಯಕ್ಕೆ ನಾಂದಿಯಾಗಲಿದೆ.'  
ಜಾನ್ ಹೇಳೋದೇನು ಬಂತು. ವಕ್ರತುಂಡೋಕ್ತಿಯಲ್ಲಿ ಹೇಳೋದೂ ಇದೇ ಅಲ್ಲವೇ?

ಗಂಡಸರ ಬುದ್ಧಿ, ಹೆಂಗಸರ ಬುದ್ಧಿ
ಪ್ರಾಯಶಃ ಇದು ಜೋಕಿದ್ದಿರಬಹುದು. ನಿಜ ಘಟನೆ ಇದ್ದಿರಲಿಕ್ಕಿಲ್ಲ.
ನ್ಯೂಯಾರ್ಕಿನಲ್ಲಿ 'ನ್ಯೂ ಹಸ್ಬಂಡ್ಸ್‌' ಎಂಬ ಹೆಸರಿನ ಗಂಡಂದಿರ ಅಂಗಡಿಯೊಂದಿದೆ. ಹೆಂಗಸರು ಅಲ್ಲಿಗೆ ಹೋಗಿ ತಮಗೆ ಇಷ್ಟವಾಗುವ ಹುಡುಗರನ್ನೋ, ಗಂಡಸರನ್ನೋ ತಮ್ಮ ಗಂಡ ಎಂದು ಸ್ವೀಕರಿಸಬಹುದು. ಈ ಅಂಗಡಿಗೆ ಆರು ಮಹಡಿಗಳಿವೆ. ಒಂದೊಂದೇ ಮಹಡಿ ಏರುತ್ತಾ ಹೋದಂತೆ ಗಂಡಂದಿರ ಮಹತ್ವ ಜಾಸ್ತಿಯಾಗುತ್ತಾ ಹೋಗುತ್ತದೆ. ಹೆಂಗಸೊಬ್ಬಳು ಹೊಸ ಗಂಡನನ್ನು ಖರೀದಿಸಲೆಂದು ಆ ಅಂಗಡಿಗೆ ಹೋದಳು.
ಮೊದಲ ಮಹಡಿಯಲ್ಲಿ ನೌಕರಿಯಲ್ಲಿದ್ದ ಗಂಡಂದಿರು ಮಾತ್ರ ಇದ್ದರು. ಆಕೆ ಎರಡನೆ ಮಹಡಿಗೆ ಹೋದಳು. ಅಲ್ಲಿ ನೌಕರಿಯಲ್ಲಿದ್ದವರು, ಮಕ್ಕಳನ್ನು ಪ್ರೀತಿಸುವ ಗಂಡಂದಿರು ಇದ್ದರು. ಆಕೆ ಮೂರನೆ ಮಹಡಿಗೆ ಹೋದಾಗ, ಸಹಾಯಕನೊಬ್ಬ ಬಂದು 'ಮೇಡಂ, ಈ ಮಹಡಿಯಲ್ಲಿ ನೌಕರಿಯಲ್ಲಿರುವವರು, ಮಕ್ಕಳನ್ನು ಪ್ರೀತಿಸುವವರು ಹಾಗೂ ಸುಂದರವಾದ ಗಂಡಂದಿರು ಇದ್ದಾರೆ' ಎಂದ. 'ಹೌದಾ?! ವೆರಿಗುಡ್‌' ಎಂದಳು.
ಆಕೆ ನಾಲ್ಕನೆ ಮಹಡಿಗೆ ಬಂದಾಗ, ಅಲ್ಲಿದ್ದ ಸಹಾಯಕ, 'ಬನ್ನಿ ಮೇಡಂ, ಈ ಮಹಡಿಯಲ್ಲಿ ನೌಕರಿಯಲ್ಲಿರುವವರು, ಮಕ್ಕಳನ್ನು ಪ್ರೀತಿಸುವವರು, ಸುಂದರವಾಗಿರುವವರು ಹಾಗೂ ಮನೆಗೆಲಸ ಮಾಡುವ ಗಂಡಂದಿರಿದ್ದಾರೆ' ಎಂದ. 'ಫೆಂಟಾಸ್ಟಿಕ್! ನನಗೆ ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಆಕೆ ಆನಂದತುಂದಿಲಳಾಗಿ ಉದ್ಗರಿಸಿದಳು.
ಆಕೆ ಐದನೆ ಮಹಡಿಗೆ ಬಂದಳು. ಅಲ್ಲಿದ್ದ ಸಹಾಯಕ 'ಮೇಡಂ, ಈ ಮಹಡಿಯಲ್ಲಿ ನೌಕರಿಯಲ್ಲಿರುವವರು, ಮಕ್ಕಳನ್ನು ಪ್ರೀತಿಸುವವರು, ಸುಂದರವಾಗಿರುವವರು, ಮನೆಗೆಲಸದವರು ಹಾಗೂ ರೊಮ್ಯಾಂಟಿಕ್ ಸ್ವಭಾವದ ಗಂಡಂದಿರು ಇದ್ದಾರೆ' ಎಂದ.
ಆಕೆಯ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ಆಕೆಗೆ ಆರನೆ ಮಹಡಿಯಲ್ಲಿ ಯಾರಿರಬಹುದು ಎಂಬ ಕಾತರ. ಆರನೆ ಮಹಡಿಗೆ ಬಂದಳು. ಬರುತ್ತಿದ್ದಂತೆ ಅವಳಿಗೆ ಒಂದು ಬೋರ್ಡ್ ಕಾಣಿಸಿತು.
'ಈ  ಮಹಡಿಗೆ ಬಂದಿರುವ ವಿಸಿಟರ್‌ಗಳ ಪೈಕಿ ನೀವು  42,668,18ನೆ ಯವರು. ಈ ಮಹಡಿಯಲ್ಲಿ ಒಬ್ಬೇ ಒಬ್ಬ ಗಂಡ ಇಲ್ಲ. ಹೆಂಗಸರಿಗೆ ಎಷ್ಟೇ ಗಂಡಸರನ್ನು ತೋರಿಸಿದರೂ ಸಮಾಧಾನ ಇಲ್ಲ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ಈ ಮಹಡಿಯನ್ನು ಇಡಲಾಗಿದೆ.
***
'ನ್ಯೂ ಹಸ್ಬಂಡ್ಸ್‌' ಮಳಿಗೆ ಅತಿ ಶೀಘ್ರದಲ್ಲಿ ಪ್ರಸಿದ್ಧವಾಯಿತು. ಮಹಿಳೆಯರನ್ನು ನಿಯಂತ್ರಿಸುವುದೇ ಅಂಗಡಿ ಮಾಲೀಕನಿಗೆ ಕಷ್ಟವಾಯಿತು. ಈ ಬಿಜಿನೆಸ್ ಯಶಸ್ಸಿನಿಂದ ಉತ್ತೇಜಿತನಾದ ಅಂಗಡಿ ಮಾಲೀಕ ಗಂಡಸರಿಗಾಗಿ 'ನ್ಯೂ ವೈವ್ಸ್‌' ಎಂಬ ಹೆಸರಿನಲ್ಲಿ 'ಹೊಸ ಹೆಂಡತಿಯರು' ಎಂಬ ಮಳಿಗೆಯನ್ನು ತೆರೆದ. ಮೊದಲ ಮಹಡಿಯಲ್ಲಿ ಗಂಡ ಹೇಳಿದಂತೆ ಕೇಳುವ ಹೆಂಡತಿಯರೇ ತುಂಬಿದ್ದರು. ಆ ಮಳಿಗೆಗೆ ಭೇಟಿ ನೀಡಿದ ಯಾವುದೇ ಗಂಡಂದಿರು ಎರಡು, ಮೂರು, ನಾಲ್ಕು, ಐದು ಹಾಗೂ ಆರನೆ ಮಹಡಿಗೆ ಭೇಟಿಯನ್ನೇ ಕೊಡುತ್ತಿರಲಿಲ್ಲ!
ಹೀಗಿದ್ದರೆ ಹೀಗೇ ಎಂದರ್ಥ
ಮಠಾಧೀಶರಿಗೆ, ಸ್ವಾಮೀಜಿಗಳಿಗೆ ಹಣ್ಣು, ಕಾಯಿ, ಶಾಲು, ಪಂಚೆ ಕೊಡುವಂತೆ ಕೆಲವು ಓದುಗರು ಪುಸ್ತಕಗಳನ್ನೂ, ಪತ್ರಿಕೆಗಳನ್ನು ಕಳಿಸಿಕೊಡುತ್ತಾರೆ. 'ಔಟ್‌ಲುಕ್‌' ಸಂಪಾದಕ ಕೃಷ್ಣಪ್ರಸಾದ್ ತಾವು ಓದಿದ ವಿದೇಶಿ ಪತ್ರಿಕೆಗಳನ್ನು ಕಳಿಸಿಕೊಡುತ್ತಾರೆ. ಪ್ರತಿವಾರ ತರಗುಪೇಟೆಯ ಐತಾಳರು ಹಳೇ ಪತ್ರಿಕೆಗಳನ್ನು ಎತ್ತಿಟ್ಟು ಕಾಳಜಿಯಿಂದ ತಲುಪಿಸುತ್ತಾರೆ. ತಿಂಗಳಲ್ಲಿ ಕನಿಷ್ಠ ನೂರು ಗಂಟೆಗಳನ್ನು ವಿಮಾನದಲ್ಲಿಯೇ ಕಳೆಯುವ ಚೇತನ್‌ಕುಮಾರ್, ವಿಮಾನ ನಿಲ್ದಾಣಗಳ ಪುಸ್ತಕದಂಗಡಿಯಲ್ಲಿ ಖರೀದಿಸಿದ ಪುಸ್ತಕಗಳನ್ನು ಓದಿದ ಬಳಿಕ ನನಗೆ ರವಾನಿಸುತ್ತಾರೆ. ಅವರು ಸುತ್ತಿದಷ್ಟೂ ನನ್ನ ಪುಸ್ತಕ ಸಂಗ್ರಹ ಹಿರಿದಾಗುತ್ತದೆ.
ಮೊನ್ನೆ ಚೇತನ್‌ಕುಮಾರ್ ಒಂದು ಪುಸ್ತಕ ಕಳಿಸಿಕೊಟ್ಟಿದ್ದರು. ರೆಡ್ ಗ್ರೀನ್ ಎಂಬಾತ ಬರೆದ H‌ow t‌o d‌o ev​e‌r​yt‌h‌in‌g f‌r‌om t‌he man w‌h‌o s‌h‌o‌uld ‌kn‌ow:​ A c‌omp​l​e​t​e​ly e‌x‌ha‌u​s​t‌i​ve ‌g‌u‌ide t‌o d‌o-​‌it y‌o‌u‌rs​e​lf and se​lf ‌help ಎಂಬ ಮಾರುದ್ದ ಶೀರ್ಷಿಕೆಯುಳ್ಳ ಕೃತಿ. ಇಂಥ ಕೃತಿಗಳು ವಿಮಾನ ನಿಲ್ದಾಣದ ಪುಸ್ತಕದಂಗಡಿಗಳಲ್ಲಿ ಕಾಣಿಸಿಕೊಳ್ಳುವುದು ಗಮನಾರ್ಹ.
ಈ ಕೃತಿಯಲ್ಲೊಂದು ಅಧ್ಯಾಯವಿದೆ. App​e​a‌r​en‌ce ‌can be ‌rev​e​al‌in‌g ಅಂತ ಹೆಸರು. ಒಬ್ಬ ವ್ಯಕ್ತಿಯನ್ನು ಸುಮ್ಮನೆ ಮೇಲಿಂದ ಕೆಳಗೆ ಸೂಕ್ಷ್ಮವಾಗಿ ಗಮನಿಸಿದರೆ ಸಾಕು. ಆತ ಹೀಗೇ ಎಂದು ಹೇಳಬಹುದು ಎಂಬುದು ಈ ಅಧ್ಯಾಯದ ಸಾರಾಂಶ. ಲೇಖಕ ಗಮನಿಸಿದ ಕೆಲವು ಸಂಗತಿಗಳು.
*    ಒಬ್ಬ ವ್ಯಕ್ತಿಗೆ ಹುಬ್ಬುಗಳು ಇಲ್ಲ ಎಂದಾದರೆ, ಆತ ಅವನ್ನು ಕೀಳುವ ಪ್ಲಕ್ಕರ್‌ನ್ನು ಒಂದೆರಡು ದಿನಗಳ ಹಿಂದೆ ಖರೀದಿಸಿದ್ದಾನೆ ಎಂದರ್ಥ.
*    ಒಬ್ಬ ವ್ಯಕ್ತಿಯ ಬಲಗೈ ಮೇಲೆ ಯಾವುದೇ ಗಾಯ ಅಥವಾ ಕಲೆಗಳಿವೆ ಅಂದ್ರೆ ಆತ ಲೆಫ್ಟ್ ಹ್ಯಾಂಡರ್ ಎಂದು ಭಾವಿಸಬಹುದು.
*    ಒಬ್ಬ ವ್ಯಕ್ತಿಯ ಹಣೆ ಮೇಲೆ ತರಚಿದ ಗಾಯ ಸೇರಿದಂತೆ, ಒಂದೆರಡು ಗಾಯದ ಕಲೆಗಳಾಗಿದ್ದರೆ, ಆತ ಬೇಸ್‌ಮೆಂಟ್‌ನಲ್ಲಿ ವಾಸಿಸುತ್ತಾನೆ ಎಂದು ತಿಳಿಯಬಹುದು.
*    ಯಾರಾದರೂ ವಿಪರೀತವಾಗಿ ಬೆನ್ನು ತುರಿಸಿಕೊಳ್ಳುತ್ತಿದ್ದರೆ, ಅವರ ಹತ್ತಿರ ಚಮಚ ಅಥವಾ ಫೋರ್ಕ್‌ಗಳನ್ನು ಇಡಬಾರದೆಂದರ್ಥ.
*    ಒಬ್ಬ ವ್ಯಕ್ತಿಯ ಹಲ್ಲು ದೊಡ್ಡದಾಗಿದ್ದರೆ, ಬಾಯಿಯೂ ದೊಡ್ಡದಾಗಿದೆಯೆಂದು ತಿಳಿಯಬಹುದು. ಬೆರಳು ದಪ್ಪವಾಗಿದ್ದರೆ, ಮೂಗು ಅಗಲವಾಗಿದೆಯೆಂದು ನಿರ್ಧರಿಸಬಹುದು.
*    ವ್ಯಕ್ತಿಯೊಬ್ಬ ಕಾರಿನ ಕೀ ಹಿಡಿದು ಬೇಸರದಿಂದ, ಅನ್ಯಮನಸ್ಕನಾಗಿ ಅದರೊಂದಿಗೆ ಆಡುತ್ತಿದ್ದರೆ, ಆತನ ಹೆಂಡತಿ ಶಾಪಿಂಗ್‌ಗೆ ಹೋಗೋಣ ಎಂದು ಒತ್ತಾಯಿಸುತ್ತಿರಬಹುದು ಎಂದು ತಿಳಿಯುವುದು.
*    ನೀವು ಹೇಳುವ ಮಾತುಗಳನ್ನು ಕೇಳದಿದ್ದರೆ, ಎದುರಿಗಿದ್ದವ ಟಿವಿ ಆ್ಯಂಕರ್ ಎಂದು ಭಾವಿಸಬಹುದು.
*    ಒಬ್ಬನ ಅಂಗಿಯ ಬಟನ್ ಉದುರಿ ಹೋದರೂ ಆತ ಧರಿಸಿದ್ದಾನೆಂದರೆ ಆತ ಏಕಾಂಗಿ ಅಥವಾ ಹೆಂಡತಿ ಜಗಳಗಂಟಿ ಎಂದು ನಿರ್ಧರಿಸಬಹುದು.
*    ನೀರಸ ವ್ಯಕ್ತಿ ಎದುರಾದರೆ, ಆತ ma‌r‌r‌ied ಎಂದು ತೀರ್ಮಾನಿಸಬಹುದು.

ಸಲಹೆ ಕೇಳಿದರೆ...
ಕಳೆದ ವಾರದ ಅಂಕಣದಲ್ಲಿ ಯೋಗಿ ದುರ್ಲಭಜೀ ಅವರ ಕಿವಿ ಮಾತುಗಳನ್ನು ಪ್ರಸ್ತಾಪಿಸಲಾಗಿತ್ತಷ್ಟೆ. ನಮ್ಮ ಓದುಗರಿಗಾಗಿ ಕೆಲವು ಆಪ್ತ ಸಲಹೆ, ಕಿವಿ ಮಾತುಗಳನ್ನು ಹೇಳಿ ಎಂದಾಗ ಯೋಗಿಜೀ ಹೇಳಿದ ಏಳೆಂಟು ಸಲಹೆಗಳ ಪೈಕಿ ಒಂದು ಹೀಗಿತ್ತು-'ಬೇರೆಯವರಿಂದ ಬರೆಯಲು ಪೆನ್ ತೆಗೆದುಕೊಂಡಾಗ ವಾಪಸ್ ಮಾಡಿ. ನಿಮ್ಮದು ಮರೆಗುಳಿ ಸ್ವಭಾವವಾಗಿದ್ದರೆ ಪೆನ್ ತೆಗೆದುಕೊಳ್ಳುವಾಗ ಮುಚ್ಚಳ ಅವರಿಗೇ ಕೊಟ್ಟು ಬಳಸಿ ಹಿಂದಿರುಗಿಸಿ. ನಿಮ್ಮ ಹತ್ತಿರ ಬೇರೆಯವರು ಪೆನ್ ಕೇಳಿದಾಗ ಮುಚ್ಚಳ ತೆಗೆದುಕೊಡಿ.'   ಈ ಸಲಹೆಯನ್ನು ಓದಿದ ಸ್ನೇಹಿತರಾದ ಉದ್ಯಮಿ ಎಸ್. ಷಡಕ್ಷರಿ ಅವರು ಹೇಳಿದ್ದು-'ಸಾರ್, ನನ್ನ ಬಳಿ ನೂರಕ್ಕೂ ಹೆಚ್ಚು ಪೆನ್ ಮುಚ್ಚಳಗಳಿವೆ. ನಾನೇನು ಮಾಡಲಿ?'


-ವಿಶ್ವೇಶ್ವರ ಭಟ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com