
ದೀರ್ಘ ಅವಧಿಗೆ ಪ್ರಧಾನ ಸಂಪಾದಕರಾಗಿದ್ದರೆ, ಓದುಗರೊಂದಿಗೆ ಒಂದು ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ. ತನಗೆ ಗೊತ್ತಿಲ್ಲದಂತೆ ಸಂಪಾದಕ ಓದುಗರೊಂದಿಗೆ ಸಂವೇದಿಸುತ್ತಿರುತ್ತಾನೆ. ಅವರೊಂದಿಗೆ ಸದಾ connect ಆಗುತ್ತಿರುತ್ತಾನೆ. ಓದುಗರೂ ಸಹ ತಮ್ಮ ತಲೆಯಲ್ಲಿ ಹಾಗೂ ಹೃದಯದಲ್ಲಿ ಸಂಪಾದಕನಿಗೊಂದು ಥರ್ಟಿ ಫಾರ್ಟಿ ಸೈಟಿನಷ್ಟು ಜಾಗವನ್ನು ಕೊಟ್ಟಿರುತ್ತಾರೆ. ಬರಬರುತ್ತಾ ಸಂಪಾದಕ-ಓದುಗರ ಮಧ್ಯೆ ಎಂಥಾ ಬಂಧ-ಅನುಬಂಧ- ಸಂಬಂಧ ಮೂಡುತ್ತದೆಯೆಂದರೆ, ಓದುಗರು ಸಂಪಾದಕನನ್ನು ನಿರ್ದೇಶಿಸಲಾರಂಭಿಸುತ್ತಾರೆ.
ಇದು ವಿಪರ್ಯಾಸ ಅಥವಾ ವಿಚಿತ್ರವಾದರೂ ಸತ್ಯ. ಕೆಲವು ಸಂಪಾದಕರು ಪತ್ರಿಕೆಯನ್ನು ತೊರೆದರೆ ಸುದ್ದಿಯಾಗುತ್ತದೆ. ಇನ್ನೂ ಕೆಲವು ಸಂಪಾದಕರು ಪತ್ರಿಕೆಯೇನು, ಇಹಲೋಕ ತೊರೆದರೂ ಸುದ್ದಿಯಾಗುವುದಿಲ್ಲ. ಭಾರತವೊಂದೇ ಅಲ್ಲ, ಜಗತ್ತಿನಲ್ಲಿ ಅತ್ಯಧಿಕ ಪ್ರಸಾರ ಹೊಂದಿರುವ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯನ್ನು ಕಳೆದ ಹತ್ತು ವರ್ಷಗಳಿಂದ ತಪ್ಪದೇ ಓದುತ್ತಿರುವ ಕಟ್ಟಾ ಓದುಗ ಅಭಿಮಾನಿಯನ್ನು 'ನೀನು ಓದುತ್ತಿರುವ ಪತ್ರಿಕೆಯ ಸಂಪಾದಕನ ಹೆಸರೇನು? ಆತ ಯಾರು?' ಅಂತ ಕೇಳಿ. ಸಂದೇಹವಿದೆ, ಆದರೂ ಸಾವಿರಕ್ಕೆ ಒಬ್ಬಿಬ್ಬ ಓದುಗರು ಸರಿ ಉತ್ತರ ಹೇಳಿಯಾರು. ಇನ್ನು ಆ ಸಂಪಾದಕ ಪತ್ರಿಕೆಯನ್ನು ತೊರೆದರೆ ಯಾರಿಗೆ ಗೊತ್ತಾದೀತು? 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಸಂಪಾದಕರಾದ... ಇವರು ಕೆಲಸ ಬಿಟ್ಟರಂತೆ ಹೌದಾ ಅಂತ ಕೇಳಿದರೆ, 'ಹೌದಾ?! ಅವರು ಆ ಪತ್ರಿಕೆಯಲ್ಲಿ ಸಂಪಾದಕರಾಗಿ ಇದ್ದರಾ?' ಎಂದು ಕೇಳದಿದ್ದರೆ ಸಾಕು. ತಕರಾರಿಲ್ಲ, ಅದು ಆ ಪತ್ರಿಕೆಯ ಧೋರಣೆ ಬಿಡಿ. ನೀವು ಪ್ರಯಾಣಿಸುವ ವಿಮಾನದ ಪೈಲಟ್ ಹೆಸರನ್ನು ನೀವು ಕೇಳಿದ್ದೀರಾ? ಅವನ ಹೆಸರನ್ನು ಕಟ್ಟಿಕೊಂಡು ಪ್ರಯಾಣಿಕರಿಗೇನು ಲಾಭ? ವಿಮಾನ ಸುರಕ್ಷಿತವಾಗಿ ಊರು ತಲುಪಿದರೆ ಸಾಕು. ಹೀಗಾಗಿ ಆ ಪತ್ರಿಕೆಯಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಸಂಪಾದಕರ ಹೆಸರು ಯಾವ ಪುಟದಲ್ಲಿ ಅಚ್ಚಾಗಿದೆಯೆಂಬುದೂ ಗೊತ್ತಾಗುವುದಿಲ್ಲ. ತಮಾಷೆಯ ಆದರೆ ವಾಸ್ತವ ಸಂಗತಿಯೇನೆಂದರೆ, ಸಂಪಾದಕ ಅಜ್ಞಾತನಾಗಿದ್ದಷ್ಟೂ, ಮುಖೇಡಿಯಾಗಿದ್ದಷ್ಟೂ ಅಲ್ಲಿ ಸುರಕ್ಷಿತವಾಗಿರುತ್ತಾನೆ. ಹೀಗಾಗಿ ಆತ ಪತ್ರಿಕೆಯಲ್ಲಿ ಏನನ್ನೂ ಬರೆಯುವುದಿಲ್ಲ. ಆತನ ಫೋಟೋ ಅಚ್ಚಾಗುವುದಿಲ್ಲ. ಆತ ಸಾರ್ವಜನಿಕವಾಗಿಯೂ ಕಾಣಿಸಿಕೊಳ್ಳುವುದಿಲ್ಲ. ವಿಸಿಟಿಂಗ್ ಕಾರ್ಡಿನಲ್ಲಿ ಮಾತ್ರ ಸಂಪಾದಕನ ಹೆಸರು ಅಚ್ಚಾಗಿರುತ್ತದೆ! ಪತ್ರಿಕೆಯ ಮಾಲೀಕರೂ ಇದನ್ನೇ ಬಯಸುತ್ತಾರೆ. ಹೀಗಾಗಿ ಇಂಥ ಸಂಪಾದಕರು ಬಿಲದಲ್ಲಿರುವ ಮೂಷಕಗಳಂತೆ ಆರಾಮವಾಗಿ ಇದ್ದು ಬಿಡುತ್ತಾರೆ. ಇರಲಿ ಬಿಡಿ.
ಇತ್ತೀಚೆಗೆ 'ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ಪ್ರಧಾನ ಸಂಪಾದಕರಾದ ಶೇಖರ ಗುಪ್ತ ರಾಜಿನಾಮೆ ಕೊಟ್ಟು, 'ಇಂಡಿಯಾ ಟುಡೇ' ಗ್ರುಪ್‌ನ್ನು ಸೇರಿದ್ದು ಬಹಳ ದೊಡ್ಡ ಸುದ್ದಿಯಾಯಿತು. ಅವರು ನಿರ್ಗಮಿಸುವಾಗ ಬರೆದ farewell note ದೇಶಾದ್ಯಂತ ಅಂತರ್ಜಾಲದಲ್ಲಿ ಹರಿದಾಡಿತು. ಅವರು ತಮ್ಮ ಹುದ್ದೆಗೆ ರಾಜಿನಾಮೆ ಘೋಷಿಸಿದ ಒಂದು ತಿಂಗಳ ನಂತರವೂ ತಮ್ಮ ಕಚೇರಿಗೆ ಬರುತ್ತಿದ್ದರು. ಅಷ್ಟರಮಟ್ಟಿಗೆ ಅವರ ನಿರ್ಗಮನ ಸುಖಾಂತ್ಯವಾಗಿತ್ತು ಎಂದು ಭಾವಿಸಬಹುದು ಅಥವಾ ಮೇಲ್ನೋಟಕ್ಕೆ ಹಾಗಿದ್ದಿರಬಹುದೆಂದು ಊಹಿಸಬಹುದು. ಯಾಕೆಂದರೆ ವಿವಾಹ ವಿಚ್ಛೇದನವಾಗಲಿ, ಸಂಪಾದಕರ ನಿರ್ಗಮನವಾಗಲಿ ಸಾಮಾನ್ಯವಾಗಿ ಸುಖಾಂತ್ಯವಾಗಿ ಇರುವುದಿಲ್ಲ. ಶೇಖರಗುಪ್ತ ಆ ಪತ್ರಿಕೆಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ಪ್ರಧಾನ ಸಂಪಾದಕರಾಗಿದ್ದರು. ಪ್ರತಿ ಶನಿವಾರದ ತಮ್ಮ ಅಂಕಣದಿಂದ ಜನಪ್ರಿಯರಾಗಿದ್ದರು. ಪ್ರಸಕ್ತ ವಿದ್ಯಮಾನಗಳ ಕುರಿತು ಅವರ ಕಾಮೆಂಟ್‌ಗಳು ಗಮನ ಸೆಳೆಯುವಂತಿರುತ್ತಿದ್ದವು. ಪ್ರಸಾರ ಸಂಖ್ಯೆ ಕಡಿಮೆಯಿದ್ದರೇನಂತೆ, ಅವರು ತಮ್ಮ ಪತ್ರಿಕೆಯನ್ನು ದೇಶದ ರಾಜಧಾನಿಯ 'ಗಟ್ಟಿಧ್ವನಿ'ಯಾಗಿಸಿದ್ದರು. ಅವರು ಯಾವುದೇ ಕ್ಯಾಂಪೇನ್ ಎತ್ತಿಕೊಂಡರೂ ಅದು ಅಧಿಕಾರದಲ್ಲಿದ್ದವರನ್ನು ತಟ್ಟದೇ ಹೋಗುತ್ತಿರಲಿಲ್ಲ. ಆ ಮೂಲಕ ಪತ್ರಿಕೆಗೆ ಅದರ ಜೀವಾಳವಾಗಿರುವ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿದ್ದರು.
ಅಷ್ಟೊಂದು ದೀರ್ಘ ಅವಧಿಗೆ ಪ್ರಧಾನ ಸಂಪಾದಕರಾಗಿದ್ದರೆ, ಓದುಗರೊಂದಿಗೆ ಒಂದು ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ. ತನಗೆ ಗೊತ್ತಿಲ್ಲದಂತೆ ಸಂಪಾದಕ ಓದುಗರೊಂದಿಗೆ ಸಂವೇದಿಸುತ್ತಿರುತ್ತಾನೆ. ಅವರೊಂದಿಗೆ ಸದಾ connect ಆಗುತ್ತಿರುತ್ತಾನೆ. ಓದುಗರೂ ಸಹ ತಮ್ಮ ತಲೆಯಲ್ಲಿ ಹಾಗೂ ಹೃದಯದಲ್ಲಿ ಸಂಪಾದಕನಿಗೊಂದು ಥರ್ಟಿ ಫಾರ್ಟಿ ಸೈಟಿನಷ್ಟು ಜಾಗವನ್ನು ಕೊಟ್ಟಿರುತ್ತಾರೆ. ಬರಬರುತ್ತಾ ಸಂಪಾದಕ-ಓದುಗರ ಮಧ್ಯೆ ಎಂಥಾ ಬಂಧ-ಅನುಬಂಧ- ಸಂಬಂಧ ಮೂಡುತ್ತದೆಯೆಂದರೆ, ಓದುಗರು ಸಂಪಾದಕನನ್ನು ನಿರ್ದೇಶಿಸಲಾರಂಭಿಸುತ್ತಾರೆ. ಡಿಮಾಂಡ್ ಮಾಡಲು ಶುರು ಮಾಡುತ್ತಾರೆ. ಪತ್ರಿಕೆ ಅವರಿಗೆ ಸ್ಪಂದಿಸಲಾರಂಭಿಸುತ್ತದೆ. ಹೆಚ್ಚು ಹೆಚ್ಚು ಓದುಗ ಸ್ನೇಹಿಯಾಗುತ್ತದೆ. ಓದುಗರು ಪತ್ರಿಕೆಯ ನೀತಿ ನಿರೂಪಣೆಯಲ್ಲಿ ಅಗೋಚರವಾಗಿ ಭಾಗಿಧಾರಿಗಳಾಗುತ್ತಾರೆ. ಸಂಪಾದಕ ಓದುಗರ ನೆರಳಿನಂತೆ ಕೆಲಸ ಮಾಡುತ್ತಾನೆ. ಅದು ಓದುಗರು drive ಮಾಡುವ ಪತ್ರಿಕೆ ಎಂದೆನಿಸಿಕೊಳ್ಳುತ್ತದೆ.
ಒಂದು ಸಣ್ಣ ಉದಾಹರಣೆ ಕೊಡುವುದಾದರೆ, ಜಗತ್ತಿನಲ್ಲಿ ಯಾವುದೇ ಮಹತ್ತರ ಘಟನೆಗಳಾಗಲಿ, ನನ್ನ ಮೊಬೈಲ್‌ನಲ್ಲಿ ಎಸ್ಸೆಮ್ಮೆಸ್, ಇಮೇಲ್, ವಾಟ್ಸಪ್, ಟ್ವಿಟರ್, ಫೇಸ್‌ಬುಕ್‌ನಲ್ಲಿ ಮೆಸೇಜ್‌ಗಳು ಒಂದೇ ಸಮನೆ ಕಿರುಚಿಕೊಳ್ಳಲಾರಂಭಿಸುತ್ತವೆ. ನಾಳೆ ಯಾವ ಸುದ್ದಿ ಲೀಡ್ ಮಾಡ್ತೀರಾ, ಯಾವ ಹೆಡ್ಡಿಂಗ್ ಕೊಡ್ತೀರಾ, ಮುಖಪುಟ ವಿನ್ಯಾಸ ಹೀಗಿರಲಿ, ಈ ಹೆಡ್‌ಲೈನ್ ಕೊಡಿ, ಸಾಧ್ಯವಾದರೆ ನೀವು ಬರೆಯಿರಿ, ಇಂಥವರಿಂದ ಬರೆಯಿಸಿ, ಹೀಗೆ ಬರೆದರೆ ಚೆನ್ನಾಗಿರುತ್ತದೆ... ಎಂದು ಓದುಗರೇ ರಿಮೋಟ್ ಕಂಟ್ರೋಲ್‌ನಂತೆ ನಮ್ಮನ್ನು ನಿರ್ದೇಶಿಸಲಾರಂಭಿಸುತ್ತಾರೆ. ನಾವು ಬರೆದ ಎಷ್ಟೋ ಚೆಂದದ ಹೆಡ್‌ಲೈನ್‌ಗಳು ಓದುಗರೇ ಸೂಚಿಸಿದವು! ಕೆಲವರಂತೂ ಲೇಔಟ್ ಹಾಕಿ ಮುಖಪುಟ ಹೀಗಿರಲಿ ಎಂದು 'ಬಣ್ಣಿಸು'ತ್ತಾರೆ. ಅವರು ಹೇಳಿದಂತೆ, ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಮುಖಪುಟ ರೂಪಿಸಿದ ಅನೇಕ ನಿದರ್ಶನಗಳಿವೆ. ಓದುಗರು ಸೂಚಿಸಿದ ಶೀರ್ಷಿಕೆಗಳನ್ನು ಬಳಸಿಕೊಂಡಾಗ, ಅದಕ್ಕೆ ಅವರಿಗೆ ಕ್ರೆಡಿಟ್ ಕೊಟ್ಟಾಗ ಆಗುವ ಆನಂದವೇ ಬೇರೆ. ಇದರಿಂದ ಅವರೊಂದೇ ಅಲ್ಲ, ಅವರಂತೆ ಅಸಂಖ್ಯ ಓದುಗರೂ ದೈನಂದಿನ ಪತ್ರಿಕೆಯ ರೂಪು ತಾಳುವಲ್ಲಿ ಕೈ ಜೋಡಿಸುತ್ತಾರೆ. ಇದೊಂದೇ ಅಲ್ಲ, ಪತ್ರಿಕೆ ಕೈಗೆತ್ತಿಕೊಂಡ ಕೆಲವು ಪರಿಣಾಮಕಾರಿ 'ಅಭಿಯಾನ'ದ ಹಿಂದೆ ಅಜ್ಞಾತರಾಗಿರಲು ಬಯಸುವ ಹಲವು ಓದುಗರಿದ್ದಾರೆ. 'ಗೋಡೆ ಬರಹ' ಹಾಗೂ 'ತಪ್ಪಾಯ್ತು ತಿದ್ಕೋತೀವಿ' ಅಂಕಣ ಆರಂಭಿಸಿದ ನಂತರವಂತೂ ನಮ್ಮ ನಡೆ, ನುಡಿ, ಬರಹ, ಅಕ್ಷರ ಅಕ್ಷರವನ್ನೂ ಓದುಗರು ಸೋಸಿ, ಅದ್ದಿ, ಹಿಂಡಿ, ಅಮುಕಿ, ಜರಡಿ ಹಿಡಿದು, ಶೋಧಿಸಿ, ಅಳೆದು ತೂಗುತ್ತಿದ್ದಾರೆ. ಎಲ್ಲೆಡೆಯೂ ಓದುಗರ ಕಣ್ಗಾವಲು! 'ಇತ್ತೀಚೆಗೆ ನಿಮ್ಮ ಬರಹ ಸೊರಗುತ್ತಿದೆ, ನೀವು ಹೆಚ್ಚು ಓದುತ್ತಿಲ್ಲ, ಸಂತೆಯಲ್ಲಿ ಮೂರು ಮೊಳ ನೇಯ್ದಿದ್ದೀರಿ, ಮೋದಿ ಪ್ರಧಾನಿಯಾಗಿ ಆಯ್ತು, ಇನ್ನಾದರೂ ಅವರ ಬೆನ್ನು ಬಿಡಿ, ತಪ್ಪು ಮಾಡಿದಾಗ ಟೀಕಿಸಿ', ಎಂದೆಲ್ಲಾ ನೇರಾ ನೇರಾ ಬರೆಯುತ್ತಾರೆ. ಇವುಗಳನ್ನು ನಾವು ಯಥಾವತ್ತು 'ಗೋಡೆ ಬರಹ'ದಲ್ಲಿ ಪ್ರಕಟಿಸಿದ್ದನ್ನು ನೀವು ಓದಿರಲೂಬಹುದು.
ಓದುಗರು ಅದೆಂಥ ಸೂಕ್ಷ್ಮಗ್ರಾಹಿಗಳು, ಶಾಣ್ಯಾಗಳು ಅಂದ್ರೆ ಬರಬರುತ್ತಾ ನಮ್ಮ ಆಸೆ, ಆಕಾಂಕ್ಷೆ, ಗುಣ-ದೋಷ, ಹವ್ಯಾಸ, ಓದಿನ ಜಾಡು, ಅಭಿರುಚಿ, ಕುಬಿ, ಡೌಲುಗಳನ್ನೆಲ್ಲ ಕಂಡು ಹಿಡಿದು ವ್ಯಕ್ತಿತ್ವ ಮಾಪಕಗಳಂತೆ ಕೆಲಸ ಮಾಡುತ್ತಿರುತ್ತಾರೆ. ಈ ಕಾರಣಕ್ಕೆ ಹಿರಿಯ ಪತ್ರಕರ್ತ ಹಾಗೂ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ಸಂಪಾದಕೀಯ ಸಲಹೆಗಾರ ಟಿ.ಜೆ.ಎಸ್. ಜಾರ್ಜ್ ಅವರು ತಮ್ಮ ಅಂಕಣದ ಜತೆ ತಮ್ಮ ಫೋಟೋ ಪ್ರಕಟವಾಗುವುದನ್ನು ಇಷ್ಟಪಡುವುದಿಲ್ಲ. 'ಬರಹಗಾರನಿಗೆ privacy ಬೇಕು. ಸಾರ್ವಜನಿಕವಾಗಿ ಓದುಗರು ನನ್ನನ್ನು ಗುರುತಿಸುವುದನ್ನು, ಆಟೋಗ್ರಾಫ್ ಬಯಸುವುದನ್ನು ನಾನು ಇಷ್ಟಪಡುವುದಿಲ್ಲ' ಎಂದಿದ್ದರು. ನಾನು 'ಕನ್ನಡಪ್ರಭ'ಕ್ಕೆ ಪ್ರಧಾನ ಸಂಪಾದಕನಾಗಿ ಬಂದಾಗ ಅವರ ಒಂದು ಲೇಖನವನ್ನು ಮುಖಪುಟದಲ್ಲಿ ಪ್ರಕಟಿಸಿದ್ದೆ. ಜತೆಯಲ್ಲಿ ಫೋಟೋ ಹಾಕಲು ಬಯಸಿದಾಗ ಅವರು ಒಪ್ಪಿರಲಿಲ್ಲ. ಕೊನೆಗೆ ಅವರನ್ನು ಒಪ್ಪಿಸುವಾಗ ಸಾಕೋಸಾಕಾಗಿತ್ತು. ಒಂದು ರೀತಿ ಜಾರ್ಜ್ ನಿಲುವು ಸರಿ. ಯಾಕೆಂದರೆ ಕೆಲ ತಿಂಗಳುಗಳ ಹಿಂದೆ ಪ್ಯಾರಿಸ್‌ನಲ್ಲಿರುವ ಓದುಗರೊಬ್ಬರು 'ಸಾರ್, ನೀವು ಮಾಂಟ್ ಬ್ಲಾ (ಮೌಂಟ್ ಬ್ಲಾಂಕ್ ಅಂತ ಹಲವರು ಉಚ್ಚರಿಸುತ್ತಾರೆ) ಕನ್ನಡಕ ಹಾಕ್ತೀರಾ ಅಂತ ನಿಮ್ಮ ಫೋಟೋ ನೋಡಿ ಗೊತ್ತಾಯ್ತು. ನಿಮಗಾಗಿ ಪ್ರೀತಿಯ ಉಡುಗೊರೆ ಇದು' ಎಂದು ಅದೇ ಕನ್ನಡಕವನ್ನು ತಂದಿದ್ದರು.
ಒಮ್ಮೆ ಬೆಂಗಳೂರಿನಿಂದ ಲಂಡನ್‌ಗೆ ಹೋಗುವಾಗ ಬಿಜಿನೆಸ್ ಕ್ಲಾಸ್‌ನಲ್ಲಿದ್ದ ಓದುಗ ಅಭಿಮಾನಿಯೊಬ್ಬರು ಎಕಾನಮಿ ಕ್ಲಾಸಿನಲ್ಲಿದ್ದ ನನಗೆ ತಮ್ಮ ಸೀಟು ಬಿಟ್ಟುಕೊಟ್ಟಿದ್ದರು. ಇನ್ನು ಮಹಿಳಾ ಓದುಗರ ಬೇಡಿಕೆಗಳಂತೂ ಬಹಳ ವಿಚಿತ್ರ. 'ನನ್ನ ಮಗಳು ಮಾತು ಕೇಳ್ತಿಲ್ಲ. ಫೇಸ್‌ಬುಕ್ ಮುಂದೆ ಕೂತಿರ್ತಾಳೆ, ಮೊಬೈಲ್‌ನಲ್ಲಿ ವಿಪರೀತ ಮಾತಾಡ್ತಾಳೆ, ಮಗ ಪೋರ್ನ್ ಸೈಟ್ಸ್ ನೋಡ್ತಾನೆ, ಮಗಳಿಗೆ -ಮಗನಿಗೆ ವಸಿ ಬುದ್ಧಿ ಹೇಳಿ' ಎಂದು ಕೆಲವು ತಾಯಂದಿರು ವರಾತ ಮಾಡುವುದುಂಟು. ಈ ಬೇಡಿಕೆಗಳನ್ನು ತಿರಸ್ಕರಿಸುವಂತಿಲ್ಲ. ತೀರಾ ವೈಯಕ್ತಿಕ ಎಂದು ಅಲ್ಲಗಳೆಯುವಂತಿಲ್ಲ.
ಸಂಪಾದಕ-ಓದುಗನ ಸಂಬಂಧವೇ ಅಂಥದ್ದು. ಮೊದಮೊದಲು ಅಕ್ಷರವಾಗಿ, ಅನಂತರ ಅಕ್ಷರ-ಅಕ್ಕರೆಯಾಗಿ, ಬಳಿಕ ಅದು ಅಕ್ಷರಗಳ ಬೇಲಿಯಾಚೆ ಹಬ್ಬುವ ಹೂಗಳ ತೋರಣ!
ಒಂದು ದಿನ ನೆಚ್ಚಿನ ಪತ್ರಿಕೆ ಬರದಿದ್ದರೆ, ರಜಾ ನಿಮಿತ್ತ ಪತ್ರಿಕೆ ಪ್ರಕಟವಾಗದಿದ್ದರೆ, ಈ ಪತ್ರಿಕೆ ಬದಲು ಆ ಪತ್ರಿಕೆ ಹಾಕಿದರೆ ಆಗುವ ಚಡಪಡಿಕೆ ಹಿಂದಿನ ಮನಸ್ಥಿತಿಯಿದೆಯಲ್ಲ, ಅದು ಇದೇ ಭಾವದ ಮುಂದುವರಿದ ಭಾಗ.
ಹೀಗಿರುವಾಗ ಸಂಪಾದಕನಾದವನು ಏಕಾಏಕಿ ಪತ್ರಿಕೆಯನ್ನು ತೊರೆದರೆ, ಓದುಗರು ಒಂದು ಕ್ಷಣ ವಿಚಲಿತರಾಗುವುದು ಸಹಜ. ಅಕ್ಷರ ಮೈತ್ರಿ ಹಠಾತ್ತನೆ ಕಡಿದುಕೊಳ್ಳುವಂಥದ್ದಲ್ಲ. ಭೈರಪ್ಪನವರೋ, ಎಚ್.ಎಸ್. ವೆಂಕಟೇಶಮೂರ್ತಿಯವರೋ, ಜಯಂತ ಕಾಯ್ಕಿಣಿಯೋ ನಾಳೆಯಿಂದ ನಾನು ಬರೆಯುವುದಿಲ್ಲ ಎಂದು ಘೋಷಿಸಿದರೆ ಯಾರೂ ಅವರ ಮನೆ ಮುಂದೆ ಕುಳಿತು 'ನಿಮ್ಮ ನಿಲುವು ಬದಲಿಸಿ' ಎಂದು ಆಮರಣಾಂತ ಉಪವಾಸ ಕುಳಿತುಕೊಳ್ಳದಿರಬಹುದು. ಆದರೆ ಅದಕ್ಕಿಂತ ಸೂಕ್ಷ್ಮವಾಗಿ ಅಕ್ಷರ ಪ್ರೀತಿಸುವ ಮನಸ್ಸುಗಳು ಘಾಸಿಯಾಗುತ್ತವೆ, ಚಡಪಡಿಸುತ್ತವೆ. ಮುಖದ ಮೇಲಿನ ಕಲೆಯಂತೆ ಬಿಟ್ಟೂ ಬಿಡದೇ ನೆನಪಾಗುತ್ತವೆ. ಅಕ್ಷರ ಲೋಕದ ತವಕ-ತಲ್ಲಣಗಳಾಗಿ ಬಾಧಿಸುತ್ತಿರುತ್ತದೆ. ಸಂಪಾದಕನ ನಿರ್ಗಮನದ ಹಿಂದೆಯೂ ಇಂಥದೇ ತಲ್ಲಣಗಳು ದಟಪಟಿಸುತ್ತಿರುತ್ತದೆ. ಶೇಖರ ಗುಪ್ತ ಅವರನ್ನು ಇಲ್ಲಿತನಕ 'ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ ಓದುತ್ತಿದ್ದವರು ಕ್ರಮೇಣ ಅವರು ಮುಂದೆ ಸೇರುವ ಪತ್ರಿಕೆಗೆ ಅವರನ್ನು ಹಿಂಬಾಲಿಸಿ ಹೋಗಬಹುದು, ಹೋಗುತ್ತಾರೆ. ಅವರಂತೆ ಓದುಗರಿಗೂ settle ಆಗಲು ಸಮಯ ಬೇಕಾಗುತ್ತದೆ.
ನೀವು ಪೊತೆನ್ ಜೋಸೆಫ್ ಎಂಬ ಧೀಮಂತ ಪತ್ರಕರ್ತನ ಹೆಸರನ್ನು ಕೇಳಿದ್ದಿರಬಹುದು. ಅವರು 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ಸೇರಿದಂತೆ ದೇಶದ ಇಪ್ಪತ್ತೆಂಟು ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಜವಾಹರಲಾಲ ನೆಹರು ಒಡೆತನದ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆ ಸಂಪಾದಕ ಹುದ್ದೆ ತೊರೆದು, ಮಹಮ್ಮದ್ ಆಲಿ ಜಿನ್ನಾ ನೇತೃತ್ವದ dawn ಪತ್ರಿಕೆ ಸೇರಿದ ಅಗ್ಗಳಿಕೆ ಅವರದು.
ಅವರು 'ಡೆಕ್ಕನ್ ಹೆರಾಲ್ಡ್'ನ ಮೊದಲ ಸಂಪಾದಕರು. ಪತ್ರಿಕೆಯ ಉದ್ಘಾಟನೆಯ ದಿನವೇ ಅವರ ಪತ್ನಿ ತೀರಿ ಹೋದರೂ ಹೆಂಡತಿಯ ಅಂತ್ಯಸಂಸ್ಕಾರವನ್ನು ಬಂಧುಗಳಿಗೆ ವಹಿಸಿ, ಪತ್ರಿಕೆಯ ಆರಂಭಿಕ ಸಂಸ್ಕಾರದಲ್ಲಿ ಉಳಿದವರು. ಅವರು ಯಾವುದೇ ಪತ್ರಿಕೆಯಲ್ಲಿರಲಿ, ಪ್ರತಿ ದಿನ 'over a cup of tea' ಎಂಬ ಅಂಕಣವನ್ನು ಬರೆಯುತ್ತಿದ್ದರು. ಅವರ ಈ ಬರಹವನ್ನು ಓದುವುದಕ್ಕಾಗಿಯೇ ಜನ ಪತ್ರಿಕೆ ಖರೀದಿಸುತ್ತಿದ್ದರು. ಅವರು ಪತ್ರಿಕೆ ಬದಲಿಸಿದಂತೆ, ಓದುಗರೂ ಪತ್ರಿಕೆ ಬದಲಿಸಿದರು. ಅವರು ಪದೇ ಪದೆ ಪತ್ರಿಕೆ ಬದಲಿಸಿದಾಗ, 'ನೀವು ಎಷ್ಟೇ ಪತ್ರಿಕೆಯನ್ನಾದರೂ ಬದಲಿಸಿ, ಪರವಾಗಿಲ್ಲ. ಆದರೆ ನಿಮ್ಮ ಅಂಕಣದಲ್ಲಿ ಮುಂದೆ ಯಾವ ಪತ್ರಿಕೆ ಸೇರುತ್ತೀರಿ ಎಂಬುದನ್ನು ತಿಳಿಸಿ' ಎಂದು ಓದುಗರೊಬ್ಬರು ಬರೆದಿದ್ದನ್ನು ತಮ್ಮ ಅಂಕಣದಲ್ಲಿಯೇ ಪ್ರಕಟಿಸಿದ್ದರು. 'ನನ್ನ ನಿಧನ ವಾರ್ತೆಯನ್ನು ಪ್ರಕಟಿಸದಿದ್ದರೂ ಪರವಾಗಿಲ್ಲ, ಆದರೆ ನಾನು ಪತ್ರಿಕೆಯನ್ನು ಬದಲಿಸಿದಾಗ, ಮುಂದೆ ಸೇರಲಿರುವ ಪತ್ರಿಕೆ ಬಗ್ಗೆ ನನ್ನ ಅಂಕಣದಲ್ಲಿ ಪ್ರಸ್ತಾಪಿಸಿದರೆ, ಆ ಬಗ್ಗೆ ಆಕ್ಷೇಪ ಬೇಡ' ಎಂಬ ಕರಾರಿನೊಂದಿಗೇ ಅವರು ಹೊಸ ಪತ್ರಿಕೆ ಸೇರುತ್ತಿದ್ದರು. ಇಲ್ಲಿ ಅವರ ಮನಸ್ಸಿನಲ್ಲಿ ಕಾಡುತ್ತಿದ್ದುದೂ ಓದುಗರು ಚಡಪಡಿಸಿಕೊಳ್ಳುತ್ತಾರಲ್ಲ ಎಂಬ ತಲ್ಲಣ! ಪೊತೆನ್ ಜೋಸೆಫ್ ಐದು ದಶಕಗಳ ಕಾಲ ಬರೆದರು. ಪತ್ರಿಕೆಯಲ್ಲಿದ್ದ ದಿನವೆಲ್ಲ ಬರೆದರು. ಪೂತೆನ್ ಜೋಸೆಫ್ ಒಂದು ಸಂಸ್ಥೆಯಂತೆ ಓದುಗರಲ್ಲಿ ಚಿರಸ್ಥಾಯಿಯಾಗಿ ನಿಂತರು.
ಪೊತೆನ್ ಜೋಸೆಫ್ ಯಾವ ಪತ್ರಿಕೆ ಸೇರಿದರೂ ಅಲ್ಲಿಗೆ ತಮ್ಮ ಓದುಗರನ್ನೂ ಕರೆದುಕೊಂಡು ಹೋದರು. ಪತ್ರಿಕೆ ತೊರೆದರೂ ಓದುಗರನ್ನು ಬಿಡಲಿಲ್ಲ.
ಕೆಲವು ಸಲ ಸಂಪಾದಕನಾದವನು ಎಷ್ಟು ನಿರ್ದಯವಾಗಿ ಹುದ್ದೆ ತೊರೆದು ಬರಬೇಕಾದ ಪರಿಸ್ಥಿತಿ ಬರುತ್ತದೆಂದರೆ ಓದುಗರಿಗೆ ಒಂದು ಪುಟ್ಟ ವಿದಾಯವನ್ನು ಸಹ ಹೇಳಲು ಆಗುವುದಿಲ್ಲ. ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ಕನ್ನಡದ ಪ್ರಮುಖ ಪತ್ರಿಕೆಯ ಸಂಪಾದಕರೊಬ್ಬರು ಹುದ್ದೆಯಿಂದ ನಿರ್ಗಮಿಸಿದಾಗ, ಪತ್ರಿಕೆಯ ಮುಖಪುಟದಲ್ಲಿ ಒಂದು ಪ್ರಕಟಣೆ ನೀಡಲಾಗಿತ್ತು. 'ಈ ವ್ಯಕ್ತಿ ನಮ್ಮ ಸಂಸ್ಥೆಯ ಸಂಪಾದಕ ಹುದ್ದೆಯಲ್ಲಿ ಇಲ್ಲ. ಅವರೊಂದಿಗೆ ನಮ್ಮ ಪತ್ರಿಕೆಗೆ ಸಂಬಂಧಿಸಿದಂತೆ ಯಾರೂ ವ್ಯವಹರಿಸತಕ್ಕದ್ದಲ್ಲ. ಅಷ್ಟರ ಮೇಲೆ ಯಾರಾದರೂ ವ್ಯವಹರಿಸಿ ನಷ್ಟ ಅನುಭವಿಸಿದರೆ, ಮೋಸ ಹೋದರೆ ಅದಕ್ಕೆ ಪತ್ರಿಕಾ ಸಂಸ್ಥೆ ಹೊಣೆ ಅಲ್ಲ' ಎಂದು ಆ ಪ್ರಕಟಣೆಯಲ್ಲಿ ಬರೆಯಲಾಗಿತ್ತು. ಮೂರು ದಶಕಗಳಿಗೂ ಹೆಚ್ಚು ಕಾಲ ಆ ಪತ್ರಿಕೆಯಲ್ಲಿ ದುಡಿದ ಹಿರಿಯ ಪತ್ರಕರ್ತರಿಗೆ ಹೇಗಾಗಿರಬೇಡ?
ಖ್ಯಾತ ಪತ್ರಕರ್ತ ಎಂ.ಜೆ. ಅಕ್ಬರ್ ಅವರು 'ದಿ ಏಷಿಯನ್ ಏಜ್' ಪತ್ರಿಕೆ ಸಂಪಾದಕರಾಗಿದ್ದಾಗ ಅವರನ್ನು 'ಫೈರ್' (ವಜಾ) ಮಾಡಿದ್ದು ಅವರಿಗೆ ಗೊತ್ತಿರಲೇ ಇಲ್ಲ. ಎಂದಿನಂತೆ ಅಕ್ಬರ್ ಅವರು ಕಾರಿನಲ್ಲಿ ಬೆಳಗ್ಗೆ ಪತ್ರಿಕಾಲಯಕ್ಕೆ ಕಾರಿನಲ್ಲಿ ಹೊರಟಿದ್ದರು. ಸ್ನೇಹಿತರೊಬ್ಬರು 'ಏನ್ಸಾರ್, ನೀವು ಏಷಿಯನ್ ಏಜ್ ಸಂಪಾದಕ ಹುದ್ದೆಗೆ ರಾಜಿನಾಮೆ ಕೊಟ್ಟಿದ್ದೀರಾ?' ಎಂದು ಕೇಳಿದರು. ಅದಕ್ಕೆ ಅಕ್ಬರ್, 'ಹಾಗೇನಿಲ್ಲವಲ್ಲ, ನಾನು ಆಫೀಸಿಗೆ ಹೋಗುತ್ತಿದ್ದೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ಆಫೀಸಿನಲ್ಲಿರುತ್ತೇನೆ. ನಿಮಗೆ ಯಾರೋ ಸುಳ್ಳು ಮಾಹಿತಿ ಕೊಟ್ಟಿರಬೇಕು, ಫೂಲ್ ಮಾಡಿರಬೇಕು' ಎಂದರು.
ಆ ಸ್ನೇಹಿತರು, 'ಹೌದಾ? ಹಾಗಿರಲಿಕ್ಕಿಲ್ಲ. ನೀವು ರಾಜಿನಾಮೆ ಕೊಟ್ಟಿದ್ದೀರಿ ಎಂಬ ಮಾಹಿತಿಯನ್ನು ನನಗೆ ಯಾರೂ ಕೊಟ್ಟಿಲ್ಲ. ಹಾಗೆಂದು ಗಾಳಿ ಸುದ್ದಿಯನ್ನು ಕೇಳಿ ನಾನು ನಿಮ್ಮೊಂದಿಗೆ ಈ ವಿಷಯ ಚರ್ಚಿಸುತ್ತಿಲ್ಲ. ಬೆಳಗ್ಗೆ ನಿಮ್ಮ ಪತ್ರಿಕೆ ಓದುತ್ತಿದ್ದೆ. ಆಕಸ್ಮಿಕವಾಗಿ ಇಂಪ್ರಿಂಟ್ (ಪ್ರಕಾಶಕ, ಸಂಪಾದಕ ಹಾಗೂ ಮುದ್ರಕರ ಹೆಸರು ಬರೆದಿರುವ ಜಾಗ)ನ್ನು ನೋಡಿದೆ. ಅಲ್ಲಿ ನಿಮ್ಮ ಹೆಸರು ಇರಲಿಲ್ಲ. ಅದಕ್ಕೆ ಕೇಳಿದೆ' ಎಂದರು.
ಒಂದು ಕ್ಷಣ ಅಕ್ಬರ್ ಅವಾಕ್ಕಾದರು. ಇಂಪ್ರಿಂಟ್‌ನಿಂದ ತಮ್ಮ ಹೆಸರನ್ನು ಕಿತ್ತು ಹಾಕಬಹುದೆಂಬ ಸಣ್ಣ ಸುಳಿವು ಸಹ ಅವರಿಗಿರಲಿಲ್ಲ. ಅಕ್ಬರ್ ಔಟ್ ಆಗಿದ್ದರು!
ಓದುಗರೊಂದಿಗೆ ಅಕ್ಬರ್ ಕಟ್ಟಿದ್ದ ಅಕ್ಷರಮಾಲೆ ಮುದುಡಿಬಿದ್ದಿತ್ತು!
ಶೇಖರಗುಪ್ತ ರಾಜಿನಾಮೆ ಪತ್ರ, ಅವರ ವಿದಾಯ ನುಡಿಯನ್ನು ಓದಿದ ಬಳಿಕ ಇವೆಲ್ಲ ಹೇಳಬೇಕೆನಿಸಿತು. ಒಳ್ಳೆಯ ಸಂಪಾದಕನಿಗೆ ಯಾವತ್ತು ಒಂದು ಪತ್ರಿಕೆ ದಾರಿಕಾಯುತ್ತಿರುತ್ತದೆ.
- ವಿಶ್ವೇಶ್ವರ ಭಟ್
vbhat@me.com
Advertisement