ಖುಷಿ ಪಡಲು ಕಾರಣವಿರಲು, ಅಸಮಾಧಾನವೇಕೆ?

Updated on

ಹದಿನೈದು ದಿನಗಳ ಹಿಂದಿನ ಮಾತು. ಅವತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿತ್ತು. ನಮ್ಮ ಪಿ.ಜಿ.ಯ ಎದುರಿಗೇ ಇರುವ ಮನೆಯ ಹುಡುಗ ಸುಜಿತ್ ಪಾಸಾಗಿದ್ದಾನೆ ಎಂಬ ಸುದ್ದಿ ಅವರಿವರಿಂದ ಗೊತ್ತಾಗಿತ್ತು. ಪರೀಕ್ಷೆಗೆ ಇನ್ನೂ ಎರಡು ತಿಂಗಳು ಬಾಕಿಯಿದೆ ಅನ್ನುವಾಗಲೇ ಅವನಿಗೆ ಇಂಗ್ಲಿಷ್ ಹಾಗೂ ಒಂದೆರಡು ಛಾಪ್ಟರ್ ಗಣಿತದ ಲೆಕ್ಕಗಳನ್ನು ಹೇಳಿಕೊಟ್ಟಿದ್ದೆ. ಆ ಪರೀಕ್ಷೆಗಳು ಮುಗಿದ ದಿನವೇ, ಅಕ್ಕಾ ನೀನು ಹೇಳಿಕೊಟ್ಟಿದ್ಯಲ್ಲ, ಅದೇ ಲೆಕ್ಕ ಬಂದಿತ್ತು. ತುಂಬಾ ಚೆನ್ನಾಗಿ ಬರೆದಿದ್ದೀನಿ ಎಂದು ಸಂಭ್ರಮಿಸಿದ್ದ. ಅಂಥ ಹುಡುಗ, ರಿಸಲ್ಟ್ ಹೇಳುವ ನೆಪದಲ್ಲಿ ಸ್ವೀಟ್ ಬಾಕ್ಸ್ ಹಿಡಿದುಕೊಂಡೇ ಬರುತ್ತಾನೆ ಎಂದು ಊಹಿಸಿದ್ದೆ. ಬಲಗೈ ಮುಷ್ಟಿಯನ್ನು ಬಿಗಿ ಮಾಡಿಕೊಂಡು, ಹೆಬ್ಬೆರಳನ್ನು ಕುಣಿಸುತ್ತಾ ಆ ಮೂಲಕ ಗೆದ್ದೆ, ಗೆದ್ದು ಬಿಟ್ಟೆ ಎಂದು ಹೇಳುತ್ತಾ ಆತ ಸಂಭ್ರಮಿಸುವ ರೀತಿಯನ್ನು ನೋಡಬೇಕು. ಸಾಧ್ಯವಾದರೆ, ಆ ಸಂದರ್ಭದಲ್ಲಿ ಫೋಟೋ ತೆಗೆದು ಪಾಸ್‌ಬುಕ್‌ಗೆ ಹಾಕಿಬಿಡಬೇಕು ಎಂದೆಲ್ಲಾ ಯೋಚಿಸುತ್ತಿದ್ದೆ. ಆದರೆ, ಫಲಿತಾಂಶ ಪ್ರಕಟವಾಗಿ ಎರಡು ದಿನ ಕಳೆದರೂ ಸುಜಿತ್ ಕಾಣಿಸಲಿಲ್ಲ. ಮೂರನೇ ದಿನ, ಬೆಳಗ್ಗೆ ಬೆಳಗ್ಗೆಯೇ ಅವನ ತಾಯಿ ಸಿಕ್ಕಿದರು. 'ಆಂಟೀ, ರಿಸಲ್ಟ್ ಬಂತಲ್ಲ, ಸ್ವೀಟ್ ಕೊಡಲ್ವಾ?' ಅಂದೆ.
'ಅಯ್ಯೋ ಬಿಡಮ್ಮ. ಅದ್ಯಾವ ಮಹಾ ಪರ್ಸೆಂಟೇಜ್ ಬಂದಿದೆ ಸ್ವೀಟ್ ಕೊಡಲಿಕ್ಕೆ? ಬರೀ ಅರವತ್ತೈದು ಪರ್ಸೆಂಟ್ ಬಂದಿದೆ. ಈ ಪರ್ಸೆಂಟ್‌ಗೆ ಏನೂ ಬೆಲೆ ಇಲ್ಲ. ಯಾವ ಕಾಲೇಜಲ್ಲೂ ಸೀಟ್ ಸಿಗುವುದಿಲ್ಲ. ಅವನನ್ನು ಟ್ಯೂಷನ್‌ಗೆ ಕಳಿಸಿದ್ವಿ. ಗೈಡ್‌ಗಳನ್ನು ತಂದು ಕೊಟ್ವಿ. ನಾವೂ ಪಾಠ ಹೇಳಿಕೊಟ್ವಿ. ಸೈಕಾಲಜಿಸ್ಟ್‌ಗಳ ಹೇಳಿಕೆಯಂತೆ, ಮೆಮೋರಿ ಪವರ್‌ನ ಹೆಚ್ಚಿಸಲಿಕ್ಕೆ ಕೆಲವು ಮಾತ್ರೆಗಳನ್ನು ಕೊಟ್ವಿ. ಇಷ್ಟೆಲ್ಲಾ ಆದ್ರೂ ಅವನಿಗೆ ಜಸ್ಟ್ ಅರವತ್ತೈದು ಪರ್ಸೆಂಟ್ ಬಂದಿದೆ. ಅವನ ಫ್ರೆಂಡ್ಸ್‌ಗೆಲ್ಲಾ 80 ಪರ್ಸೆಂಟ್‌ಗಿಂತ ಜಾಸ್ತಿ ಬಂದಿದೆಯಂತೆ. ಅದನ್ನೆಲ್ಲಾ ಕೇಳ್ತಾ ಇದ್ರೆ ಕಸಿವಿಸಿ ಆಗುತ್ತೆ. ಮಗನ ರಿಸಲ್ಟ್ ತಿಳಿದು ಎಂಜಾಯ್ ಮಾಡುವ ಸ್ಥಿತೀಲಿ ನಾವೀಗ ಇಲ್ಲಮ್ಮಾ. ಬರ್ತೀನಿ...' ಹೀಗೆಂದವರೇ, ಸುಜಿತ್‌ನ ಅಮ್ಮ, ಸರಸರನೆ ಹೋಗಿಯೇ ಬಿಟ್ಟರು.
 ಅವರ ಮಾತುಗಳನ್ನು ಕೇಳಿದಾಗ-ಛೆ, ಏನಾಗಿದೆ ಈ ಜನರಿಗೆ ಅನ್ನಿಸಿತು. ಕಾರಣ, ಸುಜಿತ್ ಪರೀಕ್ಷೆಯಲ್ಲಿ ಫೇಲಾಗಿರಲಿಲ್ಲ. ಜಸ್ಟ್ ಪಾಸ್ ಆಗಿರಲಿಲ್ಲ. ಸೆಕೆಂಡ್ ಕ್ಲಾಸ್ ಎಂಬ ಹಂತವನ್ನೂ ದಾಟಿ, ಆತ ಫಸ್ಟ್ ಕ್ಲಾಸ್ ಬಂದಿದ್ದ! ಫೇಲಾದರೆ ಶೇ.35ರಷ್ಟು ಅಂಕಗಳನ್ನು ಪಡೆದು ಪಾಸ್ ಆದರೆ ಅದಕ್ಕಾಗಿ ಮರಗುವುದರಲ್ಲಿ ಅರ್ಥವಿರುತ್ತಿತ್ತು. ಆದರೆ, ಮಗ ಫಸ್ಟ್ ಕ್ಲಾಸ್ ಬಂದರೂ ಅದಕ್ಕಾಗಿ ಖುಷಿ ಪಡದೆ, ಬೇರೆ ಮಕ್ಕಳ ಪರ್ಸೆಂಟೇಜ್‌ನೊಂದಿಗೆ ಮಗನ ಫಲಿತಾಂಶವನ್ನು ತಾಳೆ ಹಾಕಿ ನೋಡುವ ಅಮ್ಮನನ್ನು ಕಂಡು ಅಯ್ಯೋ ಎನಿಸಿತು. ಆ ಸಂದರ್ಭದಲ್ಲಿಯೇ, ಹಿಂದೊಮ್ಮೆ ಓದಿಕೊಂಡ ಸಾಲುಗಳು ನೆನಪಿಗೆ ಬಂದವು. ಅವುಗಳನ್ನು ಪಟ್ಟಿ ಮಾಡುವುದಾದರೆ-
    ಎಷ್ಟೋ ಸಂದರ್ಭಗಳಲ್ಲಿ ನಮಗೆ, ಹಾಕಿಕೊಂಡಿರುವ ಚಪ್ಪಲಿ, ಶೂಗಳ ಮೇಲೆಯೇ ಜಿಗುಪ್ಸೆ ಬಂದಿರುತ್ತದೆ. ಅದೇ ಕಾಲಕ್ಕೆ, ನಮ್ಮ ಗೆಳೆಯನೋ, ಸಹೋದ್ಯೋಗಿಯೋ ಹಾಕಿಕೊಂಡಿರುವ ಶೂ, ಚಪ್ಪಲಿಗಳ ಮೇಲೆ ಕಣ್ಣು ಬಿದ್ದಿರುತ್ತದೆ. ಅವನ ಬಳಿ ಇರುವಂಥದ್ದು ನನ್ನಲ್ಲಿ ಇಲ್ಲವಲ್ಲ ಎಂಬ ಸಂಕಟ, ಒಳಮನಸ್ಸನ್ನು ಮುಳ್ಳಿನಂತೆ ಚುಚ್ಚುತ್ತಿರುತ್ತದೆ. ಅಂಥ ಸಂದರ್ಭದಲ್ಲಿ ಏನು ಮಾಡಬೇಕೆಂದರೆ, ಒಂದೇ ಒಂದು ಕ್ಷಣದ ಮಟ್ಟಿಗೆ ಕಾಲಿಲ್ಲದೆಯೂ, ಉರಿಬಿಸಿಲಿನಲ್ಲಿ ತೆವಳುತ್ತಾ ಸಾಗುವ ಹೆಳವನನ್ನು, ಬರಿಗಾಲಿನಲ್ಲಿಯೇ ನಡೆಯುವವರನ್ನು ಗಮನಿಸಬೇಕು!
    ಕೆಲವರಿರುತ್ತಾರೆ: ಅವರು, ಬೆಳಿಗ್ಗೆ-ಬೆಳಗ್ಗೆಯೇ ಕೇಳುತ್ತಾರೆ: "ಇವತ್ತು ಏನ್ ತಿಂಡಿ? ಉಪ್ಪಿಟ್ಟಾ? ಚಿತ್ರಾನ್ನವಾ? ನಿನ್ನೆ ಉಳಿದಿದ್ದ ದೋಸೆ ಹಿಟ್ಟಿನಲ್ಲಿ ಮಾಡಿದ ಇಡ್ಲಿಯಾ? ಆ ದರಿದ್ರದ ತಿಂಡಿ ನನಗೆ ಬೇಡ!" ಅಂಥವರನ್ನು ಉಪಾಯದಿಂದ ಕರೆದುಕೊಂಡು ಹೋಗಿ, ಇಡೀ ದಿನ ಆಹಾರ ಸಿಕ್ಕದೆ ನರಳುವವರ ಮುಂದೆ ನಿಲ್ಲಿಸಿ, ಬೆಳಗ್ಗೆ ಹೇಳಿದ ಮಾತುಗಳನ್ನು ಈಗ ಮತ್ತೊಮ್ಮೆ ರಿಪೀಟ್ ಮಾಡಿ ಸಾರ್ ಅನ್ನಬೇಕು.
    ಅದೇ ಸಣ್ಣ ಸಂಬಳ, ಅದೇ ಬಾಡಿಗೆ ಮನೆ, ಅದೇ ಸಿಟಿ ಬಸ್ಸು, ಕೈಗೆಟಕುದಂಥ ತರಕಾರಿ ಬೆಲೆ, ದಿನವೂ ಹೆಚ್ಚುತ್ತಲೇ ಇರುವ ಚಿನ್ನದ ರೇಟು-ಏನು ಉಳಿದಿದೆ ಸ್ವಾಮಿ ಈ ಬದುಕಲ್ಲಿ ಸ್ವಾರಸ್ಯ? ಎಂದು ಕೆಲವರು ಗೊಣಗುವುದುಂಟು. ಅಂಥವರಿಗೆ- ಚಿಕ್ಕ ವಯಸ್ಸಿನಲ್ಲೇ ಆಕಸ್ಮಿಕವಾಗಿ ಸತ್ತು ಹೋದವರ ಭಾವಚಿತ್ರ ತೋರಿಸಿ!
    ನಂಗೆ ಜಾಬ್‌ಸ್ಯಾಟಿಸ್‌ಫ್ಯಾಕ್ಷನ್ ಇಲ್ಲ. ಜೇಬ್‌ಸ್ಯಾಟಿಸ್‌ಫ್ಯಾಕ್ಷನ್ ಕೂಡ ಇಲ್ಲ ಎಂದು ಹಲವರು ಕೊರಗುವುದುಂಟು. ಅಂಥ ಪುಣ್ಯಾತ್ಮರ ಮುಂದೆ -ನಿರುದ್ಯೋಗದಿಂದ ಕಂಗಾಲಾಗಿ ನೂರೆಂಟು ಕಷ್ಟದ ಸುಳಿಗೆ ಸಿಕ್ಕಿಕೊಂಡವರನ್ನು ತಂದು ನಿಲ್ಲಿಸಬೇಕು.
    ಇವಳಿ(ನಿಂ)ದ ನನ್ನ ಬದುಕಿನ ನೆಮ್ಮದಿಯೇ ಹಾಳಾಗಿ ಹೋಯ್ತು. ಈ ಪೀಡೆ ನನಗೆ ಯಾಕಾದ್ರೂ ಗಂಟು ಬಿತ್ತು ಎಂದು ಹಲವು ದಂಪತಿಗಳು ಆಗಾಗ್ಗೆ ಹೇಳುತ್ತಿರುತ್ತಾರೆ. ಅಂಥವರಿಗೆ-ಅಯ್ಯೋ, ಆಗಲೇ 36 ವರ್ಷ ಆಗಿಹೋಯ್ತು. ಇನ್ನೂ ಮದುವೆ ಆಗಲಿಲ್ಲ. ನನ್ನ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲಿಕ್ಕೆ ಒಂದು ಹುಡುಗ (ಗಿ)ನ್ನ ಕರುಣಿಸು ದೇವರೇ ಎಂದು ದೇವರ ಮುಂದೆ ಪ್ರಾರ್ಥನೆಗೆ ಕೂತ ಒಂಟಿ ಜೀವಿಗಳನ್ನು ತೋರಿಸಬೇಕು.
    ಕೆಲವರಿಗೆ, ತಾವು ವಾಸವಿರುವ ಮನೆ ಚೆನ್ನಾಗಿಲ್ಲ ಎಂಬ ಹಳಹಳಿ: ಮತ್ತೆ ಕೆಲವರಿಗೆ ಎರಡೂ ಹೆಣ್ಣು ಮಕ್ಕಳೇ ಹುಟ್ಟಿವೆ. ಗಂಡು ಮಗು ಇಲ್ವಲ್ಲ ಎಂಬ ಸಂಕಟ. ಮತ್ತೆ 'ಕೆಲವರಿಗೆ ಹನ್ನೆರಡು ಕಿಲೋಮೀಟರ್ ದೂರವಿರುವ ಆಫೀಸಿಗೆ ಸಿಟಿ ಬಸ್‌ನಲ್ಲಿ ನಿಂತುಕೊಂಡೇ ಹೋಗಬೇಕಲ್ಲ ಎಂಬ ಅಸಮಾಧಾನ! ಅಂಥವರಿಗೆ, ಕ್ರಮವಾಗಿ, ಫ್ಲೈ ಓವರ್‌ಗಳ ಕೆಳಗೆ ಮಲಗಿ ದಿನ ತಳ್ಳುವವರನ್ನು, ಮಕ್ಕಳೇ ಇಲ್ಲ ಎನ್ನುತ್ತಾ ಪೇಚಾಡುವವರನ್ನು ಬದುಕು ಪೂರ್ತಾ ಕಾಲ್ನಡಿಗೆಯಲ್ಲೇ ನೌಕರಿಗೆ ಹೋಗಿ ಬರುವವರನ್ನು ತೋರಿಸಬೇಕು. ನಂತರ, ಅವರಿಗೆ ಹೋಲಿಸಿದರೆ ನೀವು ಸುಖ ಪುರುಷರು ತಾನೆ? ಅದಕ್ಕಾಗಿ ಸಂತೋಷ ಪಡಿ ಅನ್ನಬೇಕು...
-----
ಮಗ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾನೆ ಎಂದು ತಿಳಿದ ನಂತರವೂ ಖುಷಿ ಪಡುವ ಮನಸ್ಸಿಲ್ಲದ ಸುಜಿತ್‌ನ ಅಮ್ಮನಿಗೆ ಈ ಪ್ರಸಂಗಗಳೆಲ್ಲ ಹೇಳಬೇಕು ಅನ್ನಿಸಿತು. ಆದರೆ ಹೇಳಲಾಗಲಿಲ್ಲ...


- ನಾನು ಪ್ರಣತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com