
ಮೊನ್ನೆ ದಿಲ್ಲಿಗೆ ಹೋಗಿದ್ದಾಗ ಕರ್ನಾಟಕ ಮೂಲದ, ಗುಜರಾತ್ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಿಕ್ಕಿದ್ದರು. ಸ್ವಾಭಾವಿಕವಾಗಿ ನಮ್ಮ ಮಾತು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ, ಅವರ focussed ಕಾರ್ಯಶೈಲಿ, ನಿರ್ಧಾರ ತೆಗೆದುಕೊಳ್ಳುವ ರೀತಿ ಮುಂತಾದ ವಿಷಯಗಳ ಬಗ್ಗೆ ಹೊರಳಿತು. ಹಿಂದಿನ ದಿನ ಮೋದಿಯವರು (ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರಲಿಲ್ಲ) ಗೃಹಖಾತೆ ಕಾರ್ಯದರ್ಶಿ ಗೋಸ್ವಾಮಿಯವರ ಜತೆ ನಡೆಸಿದ ಮಾತುಕತೆ ದಿಲ್ಲಿ ಪತ್ರಿಕೆಗಳಲ್ಲಿ ಪ್ರಮುಖವಾಗಿ ವರದಿಯಾಗಿತ್ತು. ಗೋಸ್ವಾಮಿಯವರು ನಿಯೋಜಿತ ಪ್ರಧಾನಿ ಮುಂದೆ ತಮ್ಮ ಪರಿಚಯ ಮಾಡಿಕೊಳ್ಳಲು ಆರಂಭಿಸುತ್ತಿದ್ದಂತೆ, ಅವರನ್ನು ಅಲ್ಲಿಗೆ ತಡೆದು ಮೋದಿಯವರೇ ಅವರ (ಗೋಸ್ವಾಮಿ) ಬಗ್ಗೆ ತಮಗೆ ಗೊತ್ತಿರುವ ಸಂಗತಿಗಳನ್ನೆಲ್ಲ ಹೇಳಿದಾಗ ಗೃಹ ಕಾರ್ಯದರ್ಶಿ ಸಂತಸದಿಂದ ಉಬ್ಬಿಹೋಗಿದ್ದರಂತೆ. ಅದಾದ ಬಳಿಕ ಗೋಸ್ವಾಮಿ ಜತೆ ನಡೆಸಿದ ಮಾತುಕತೆಯಲ್ಲಿ ಮೋದಿ ಕೇಳಿದ ಪ್ರಶ್ನೆಗಳಿಗೆ ಗೃಹ ಕಾರ್ಯದರ್ಶಿ ತಡವರಿಸಿದರಂತೆ. ಕೊನೆಯಲ್ಲಿ ಮೋದಿಯವರು ಗೋಸ್ವಾಮಿಯವರಿಗೆ 'ನನ್ನನ್ನು ಇಂಪ್ರೆಸ್ ಮಾಡುವುದಕ್ಕಿಂತ, ಸಮಸ್ಯೆಗೆ ಪರಿಹಾರವನ್ನು ಸೂಚಿಸುವ ಮಾರ್ಗವನ್ನು ಹೇಳಿದರೆ ನಾನು ಇಂಪ್ರೆಸ್ ಆಗುತ್ತೇನೆ' ಎಂಬುದನ್ನು ಹೇಳಿದರಂತೆ.
ಈ ಪ್ರಸಂಗವನ್ನು ಪ್ರಸ್ತಾಪಿಸಿದ ಸ್ನೇಹಿತರಾದ ಆ ಐಎಎಸ್ ಅಧಿಕಾರಿ, 'ಮೋದಿಯವರ ಕಾರ್ಯಶೈಲಿ ಇದು. ಅವರು ಮೂಲತಃ ರಾಜಕಾರಣಿಯೇ ಆದರೂ, ಮಾಮೂಲಿ ರಾಜಕಾರಣಿ ರೀತಿ ವರ್ತಿಸುವುದೂ ಇಲ್ಲ. ಯೋಚಿಸುವುದೂ ಇಲ್ಲ, ಅವರು ಬಹುರಾಷ್ಟ್ರೀಯ ಕಂಪನಿಯ ಸಿಇಒ (ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ) ರೀತಿ ವರ್ತಿಸುತ್ತಾರೆ. ಹೀಗಾಗಿ ಎಲ್ಲವೂ ಪಕ್ಕಾ ಆಗಿರುವಂತೆ, ಕರಾರುವಾಕ್ ಆಗಿ ಇರುವಂತೆ ಅಪೇಕ್ಷಿಸುತ್ತಾರೆ. ಅವರು ನಿಮಗೆ ಟೈಮ್ ಕೊಟ್ಟರೆ, ಸರಿಯಾದ ಸಮಯಕ್ಕೆ ನಿಮ್ಮ ಎದುರು ನೋಡುತ್ತಿರುತ್ತಾರೆ. ಯಾರನ್ನೂ ಕಾಯಿಸುವುದಿಲ್ಲ. ರಾಜ್ಯಕ್ಕೆ, ಜನತೆಗೆ ಹಿತವಾಗುತ್ತದೆಂಬುದು ಮನವರಿಕೆಯಾದರೆ ಅವರು ಸ್ಥಳದಲ್ಲಿಯೇ ಅನುಮತಿ ಕೊಡುತ್ತಾರೆ. ಗುಜರಾತ್‌ನಲ್ಲಿ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಮೋದಿಯವರ ಬಲ, ತಾಕತ್ತು.' ಎಂದು ತಮ್ಮ ಅನುಭವದ ಧಾರೆಯನ್ನು ಹಂಚಿಕೊಳ್ಳುತ್ತಿದ್ದರು. ನಮ್ಮೊಂದಿಗೆ ಇದ್ದ ಮೋದಿಯವರಿಗೆ ಆಪ್ತರಾದ, ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಮಧ್ಯ ವಯಸ್ಸಿನ ಮಾಜಿ ತರುಣರೊಬ್ಬರು ಮುಂದುವರಿದ ಭಾಗ ಎಂಬಂತೆ, 'ಇನ್ನು ಮುಂದೆ ನೋಡ್ತಾ ಇರಿ. ದಿಲ್ಲಿ ರಾಜಕಾರಣ ಮೊದಲಿನಂತೆ ಇರುವುದಿಲ್ಲ. ರಾಜಕಾರಣ ಹಾಗೂ ಆಡಳಿತದ ಪರಿಭಾಷೆ ಅಮೂಲಾಗ್ರವಾಗಿ ಬದಲಾಗುತ್ತದೆ. ಕ್ರಮೇಣ ರಾಜಕಾರಣ ಎಂಬುದು ಹಿಂದಿನ ಸೀಟಿಗೆ ಹೋಗಿ ಕುಳಿತುಕೊಳ್ಳುತ್ತದೆ. ಡ್ರೈವರ್ ಸೀಟಿನಲ್ಲಿ ಆಡಳಿತ ಬಂದು ಕುಳಿತುಕೊಳ್ಳುತ್ತದೆ. ಮೋದಿಯವರು ಗುಜರಾತ್‌ನಲ್ಲಿ ಮಾಡಿರುವುದು ಇದನ್ನೇ. ನನ್ನ ಮಾತಿನಲ್ಲಿ ನಿಮಗೆ ನಂಬಿಕೆ ಬರಬೇಕೆಂದರೆ ನೀವು ಹೆಚ್ಚೆಂದರೆ ಒಂದು ವರ್ಷ ಕಾಯಬೇಕು' ಎಂದರು.
ಪ್ರಧಾನಿಯಾಗಿ ಮೋದಿಯವರು ಅಧಿಕಾರ ಸ್ವೀಕರಿಸಿದ ಮೊದಲ ದಿನ ಕೆಲಸ ಮಾಡಿದ ರೀತಿ, ತೆಗೆದುಕೊಂಡ ನಿರ್ಧಾರಗಳನ್ನು ಗಮನಿಸಿದಾಗ, ಮೋದಿಯವರ ನಿಕಟವರ್ತಿ ಹೇಳಿದ ಮಾತುಗಳು ನೆನಪಾದವು. ಅವರು ಆ ದಿನ ಹೇಳಿದ ಮತ್ತೊಂದು ಮಾತು ಸಹ ಮನಸ್ಸಿನಲ್ಲಿ ಹಾದು ಹೋಯಿತು- 'ಎಂಥ ಪ್ರತಿಕೂಲ ಪರಿಸ್ಥಿತಿಯನ್ನಾದರೂ ತಮ್ಮ ಪರವಾಗಿ ಪರಿವರ್ತಿತಗೊಳಿಸಿಕೊಳ್ಳುವುದು ಮೋದಿಯವರ ಸ್ವಭಾವ. ವಾಜಪೇಯಿ ಅವರಂತೆ ಮೋದಿಯವರಿಗೆ ಕಿಚಡಿ ಸರ್ಕಾರದ ನೇತೃತ್ವ ವಹಿಸಿಕೊಳ್ಳುವುದು ಆಗದ ಕೆಲಸ. ಅಂಥ ಸಂದರ್ಭವೇನಾದರೂ ಬಂದರೆ ಅವರು ಕಿಚಡಿ ಸರ್ಕಾರದ ಎಲ್ಲ ಪಕ್ಷಗಳನ್ನು ಆಪೋಷಣೆ ತೆಗೆದುಕೊಳ್ಳಬಲ್ಲರು. ಅವೆಲ್ಲವನ್ನೂ ತಮ್ಮ ಪಕ್ಷದೊಳಗೆ ಲೀನ ಮಾಡಿಕೊಳ್ಳಬಲ್ಲರು ಹೊರತು ಯಾರಿಗೂ ಜೀ, ಹುಜೂರ್ ಎಂದು ಸೊಂಟ ನೋವು ಮಾಡಿಕೊಂಡು ಸರ್ಕಾರ ನಡೆಸಲಾರರು.'
ಮೋದಿ ಮಹಾ ಸೊಣಕ. ಇಂಥವರು ಎಂದಿಗೂ ಯಾರ ಹಿಂಬಾಲಕರಾಗಲಾರರು. ಅವರು ಯಾವತ್ತೂ ನಾಯಕರೇ. ಅವರ ಹಿಂದೆ ಜನ ಬರಬೇಕೆಂದು ಅಪೇಕ್ಷಿಸುತ್ತಾರೆಯೇ ಶಿವಾಯ್ ಅವರು ಮಾತ್ರ ಯಾರ ಹಿಂದೂ ಹೋಗಲಾರರು. ಕಳೆದ ಹದಿಮೂರು ವರ್ಷಗಳ ಅವರ ನಡೆಯನ್ನು ನೋಡಿದ ಯಾರಿಗಾದರೂ ಈ ಸಂಗತಿ ಮನವರಿಕೆಯಾಗದೇ ಹೋಗದಿರದು. ಮೋದಿಯವರು ಕ್ರಿಕೆಟ್ಟೋ, ಫುಟ್ಬಾಲೋ ಟೀಮಿನ ನಾಯಕನಾಗಲಾರರು. ಕಾರಣ ಮೂಲತಃ ಅವರು ಬಾಕ್ಸರ್. ಆದರೆ ಅವರು ಕ್ರಿಕೆಟ್ ಟೀಮಿನ ನಾಯಕರಾಗಿಯೂ ಹೇಗೆ ನಿಭಾಯಿಸಬಲ್ಲರೆಂದರೆ ಬಾಕ್ಸಿಂಗ್‌ನ ನಿಯಮಗಳನ್ನು ಕ್ರಿಕೆಟ್‌ಗೆ ಅನ್ವಯಿಸಬಲ್ಲರು. ಆಟ ಕ್ರಿಕೆಟ್ಟು, ರೂಲುಗಳೆಲ್ಲ ಬಾಕ್ಸಿಂಗ್‌ನವು. ಹೀಗಾಗಿ ಅವರೇ ಗೆಲ್ಲೋದು.
ಮೋದಿ ದಿಲ್ಲಿ ರಾಜಕಾರಣದಲ್ಲಿ ಜಾಗ ಪಡೆದಿದ್ದೆಯಲ್ಲ, ಅದೇ ಇದಕ್ಕೆ ಸಾಕ್ಷಿ. ಬಿಜೆಪಿಯ ಯಾವ ರಾಷ್ಟ್ರೀಯ ನಾಯಕರಿಗೂ ಅವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಲು ಮನಸ್ಸಿರಲಿಲ್ಲ. ಎಲ್ಲರೂ ಅವರವರ ಶಕ್ತಿ, ಸಾಮರ್ಥ್ಯಕ್ಕನುಸಾರ ಅಡ್ಡಕಟಿದವರೇ. ಅಡ್ವಾಣಿ, ಜೋಶಿ, ಸುಷ್ಮಾ ಅವರಂಥ ಹಿರಿಯ ನಾಯಕರಿಗೆ ತಮ್ಮ ಆಕ್ರೋಶ, ಅಸಮಾಧಾನ, ಸಂಕಟ, ಹುಳಿಯನ್ನು ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಆದರೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗುವುದನ್ನು ತಾವಾಗಿ ತಡೆಯಲು ಆಗಲಿಲ್ಲವೋ, ಹೆಜ್ಜೆ ಹೆಜ್ಜೆಗೆ ಮೋದಿಯವರಿಗೆ ಮಗ್ಗುಲಮುಳ್ಳಾದರು. ಇಷ್ಟು ವರ್ಷ ಗುಜರಾತಿನ ಗಾಂಧಿನಗರದಿಂದ ಸ್ಪರ್ಧಿಸುತ್ತಿದ್ದ ಅಡ್ವಾಣಿಯವರು ಅಲ್ಲಿಂದ ಸ್ಪರ್ಧಿಸುವುದಿಲ್ಲ, ಭೋಪಾಲದಿಂದ ಸ್ಪರ್ಧಿಸುತ್ತೇನೆಂದು ಹೇಳಿ ಮೋದಿಯವರಿಗೆ ಇರುಸು ಮುರುಸು ಉಂಟು ಮಾಡಿದರು. ನಾಲ್ಕೈದು ದಿನ ಇದೇ ಪ್ರಮುಖ ಚರ್ಚೆಯಾಯಿತು. ಇಡೀ ದೇಶ ಚುನಾವಣೆಯಲ್ಲಿ ಮುಳುಗಿದ್ದರೆ, ಪ್ರತಿಸ್ಪರ್ಧಿಗಳನ್ನು ಎದುರಿಸುವುದನ್ನು ಬಿಟ್ಟು ಸ್ವಪಕ್ಷದ ಹಿರಿಯ ನಾಯಕರನ್ನು ಸಮಾಧಾನಪಡಿಸುವುದೇ ಹರಸಾಹಸವಾಗಿ ಪರಿಣಮಿಸಿತು. ವಾರಾಣಸಿಯ ನಿಮ್ಮ ಸೀಟನ್ನು ನನಗೆ ಬಿಟ್ಟು ಕೊಡಿ ಎಂದು ಮೋದಿ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಶಿಯವರನ್ನು ಅಂಗಲಾಚುವ ಹಂತಕ್ಕೆ ಪರಿಸ್ಥಿತಿಯನ್ನು ತಂದಿಟ್ಟರು. ಉತ್ತರ ಪ್ರದೇಶ ಅಥವಾ ಬಿಹಾರದಲ್ಲಿ ಮೋದಿಯವರಿಗೆ ಇದಕ್ಕಿಂತ ಸುರಕ್ಷಿತವಾದ ಕ್ಷೇತ್ರಗಳಿದ್ದವು. ಆದರೆ ರಾಜಕೀಯ ತಂತ್ರಗಾರಿಕೆ, ಭಾವನಾತ್ಮಕತೆ ಹಾಗೂ ಚಾಣಾಕ್ಷ ಪಟ್ಟುಗಳ ಕಾರಣದಿಂದ ಮೋದಿಯವರಿಗೆ ವಾರಾಣಸಿ ಅತ್ಯಂತ ಮಹತ್ವದ ಕ್ಷೇತ್ರವಾಗಿತ್ತು. ಆದರೆ ಅದನ್ನು ಬಿಟ್ಟುಕೊಡಲು ಜೋಶಿ ಎಷ್ಟು ರಂಪ, ರಚ್ಚೆ ಮಾಡಿದರೆಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕೊನೆಗೂ ಜೋಶಿ ಅವರಿಗೆ ಏನೂ ಮಾಡಲಾಗಲಿಲ್ಲ. ಬೇರೆ ದಾರಿಯಿಲ್ಲದೇ ಬಿಟ್ಟುಕೊಡಬೇಕಾಯಿತು.
ಈ ಎಲ್ಲ ನಾಯಕರಿಗಿದ್ದಿದ್ದು ಸ್ವಪ್ರತಿಷ್ಠೆ, ಅಹಂಕಾರ, ಸಣ್ಣತನವೇ ಹೊರತು ಪಕ್ಷದ ಹಿತ ಅಲ್ಲ. ಇವರೆಲ್ಲರ ಮಟ್ಟಿಗೆ ಮೋದಿಯೇ ವಿರೋಧಿ ಹೊರತು ಕಾಂಗ್ರೆಸ್ ಅಥವಾ ಇನ್ನಿತರ ಪ್ರತಿಪಕ್ಷಗಳಲ್ಲ. ಮೋದಿಯವರನ್ನು ಹೇಗಾದರೂ ಮಾಡಿ ಕಟ್ಟಿ ಹಾಕುವುದು ಹೇಗೆ ಎಂಬ ಯೋಚನೆಯಲ್ಲಿಯೇ ಕಳೆದರು. ಮೊನ್ನೆ ಮೊನ್ನೆ ಫಲಿತಾಂಶ ಬರುವವರೆಗೆ ಮೋದಿ ಅಲೆಯ ರಭಸ ಎಷ್ಟು ಜೋರಾಗಿತ್ತು ಎಂಬುದು ಅವರ್ಯಾರಿಗೂ ಗೊತ್ತಿರಲಿಲ್ಲ. ಮೋದಿ ಅವರ ಗೆಲವಿನ ಹೊಡೆತಕ್ಕೆ ಕಾಂಗ್ರೆಸ್ ಮಕಾಡೆ ಮಲಗಿದಷ್ಟೇ ಮರ್ಮಾಘಾತ ಈ ನಾಯಕರಿಗೂ ಆಗಿದೆ. ಆದರೆ ತೋರಿಸಿಕೊಳ್ಳದೇ ಉಗುಳು ನುಂಗಿಕೊಳ್ಳುತ್ತಿದ್ದಾರೆ.
ಇನ್ನು ಶುರುವಾಗಲಿದೆ ಬಾಕ್ಸಿಂಗ್ ಎಂಬ ಕ್ರಿಕೆಟ್ ಆಟ!
ಯಾವುದೇ ಪಕ್ಷ ಗೆಲವು ಸಾಧಿಸುತ್ತಿದ್ದಂತೆ ಶುರುವಾಗುವ ತಲೆನೋವೆಂದರೆ ಸಚಿವ ಸಂಪುಟ ರಚನೆಯ ಕಸರತ್ತು. ಬಹುತೇಕ ಸಂದರ್ಭಗಳಲ್ಲಿ ಚುನಾವಣೆ ಸೆಣಸುವುದಕ್ಕಿಂತ ಸಂಪುಟ ರಚನೆಯ ಕಸರತ್ತೇ ಹೆಚ್ಚು ಜೋರಾಗಿರುತ್ತದೆ. ಕಾರಣ ಚುನಾವಣೆಯಲ್ಲಿ ರಾಜಕೀಯ ವಿರೋಧಿಗಳ ಜತೆ ಸೆಣೆಸಬೇಕು. ಅದು ಸುಲಭ. ಸಂಪುಟ ರಚನೆ ಕಸರತ್ತಿನಲ್ಲಿ ಸ್ವಪಕ್ಷೀಯರೊಂದಿಗೆ ಬಡಿದಾಡಬೇಕು. ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಭರವಸೆ ಸಿಕ್ಕ ಬಳಿಕ ಪ್ರಮುಖ ಖಾತೆ ಹೊಡೆದುಕೊಳ್ಳಲು ಮತ್ತೆ ಸೆಣೆಸಬೇಕು. ರಾಜ್ಯದಲ್ಲಾಗಲಿ, ಕೇಂದ್ರದಲ್ಲಾಗಲಿ ಸಂಪುಟ ರಚನೆ ಸಂದರ್ಭದಲ್ಲಿ ಬರೆದು ಬರೆದು ಚರ್ವಿತಚರ್ವಣವಾದರೂ 'ಖಾತೆಗಾಗಿ ಕ್ಯಾತೆ' ಎಂಬ ಪದ ಪ್ರಯೋಗ ಮಾಡಿ ಮಾಡಿ ನಾವು ಸಹ ರೋಸಿಹೋಗಿದ್ದೆವು.
ಆದರೆ ಮೊನ್ನೆ ಮೋದಿ ಸಂಪುಟ ರಚನೆ ಸಂದರ್ಭದಲ್ಲಿ ಇವ್ಯಾವುದಕ್ಕೂ ಆಸ್ಪದವೇ ಇರಲಿಲ್ಲ. ಮೋದಿ ಕ್ಯಾಬಿನೆಟ್ ಸೇರಲು ಉತ್ಸುಕರಾಗಿ ದಿಲ್ಲಿಗೆ ಲಾಬಿ ಮಾಡಲು ಹೋದ ಕರ್ನಾಟಕದ ನಾಯಕರು ಸೇರಿದಂತೆ ಎಲ್ಲರಿಗೂ 'ಇರಕೂಡದು, ಹೊರಡಿ' ಎಂಬ ಆದೇಶ ಬಂತು. ಲಾಬಿ ಮಾಡಿದರೇ ಮುಳುವಾಗಬಹುದೆಂಬ ಸಂದೇಶ ಸಿಕ್ಕ ಬಳಿಕ ಎಲ್ಲರೂ ಜಾಗ ಖಾಲಿ ಮಾಡಿದರು. ಮೇ 26ಕ್ಕೆ ಪ್ರಮಾಣ ವಚನ ನಿಗದಿ ಎಂದು ಐದು ದಿನಗಳ ಹಿಂದೆ ಗೊತ್ತಾಗಿದ್ದರೂ ಸಂಪುಟಕ್ಕೆ ಯಾರು ಸೇರುತ್ತಾರೆಂಬುದು ಹಿಂದಿನ ದಿನದವರೆಗೆ ಗೊತ್ತಿರಲಿಲ್ಲ. ಬಿಜೆಪಿ ಹಿರಿಯ ನಾಯಕರೆಲ್ಲ ಸಭೆ ಸೇರಿ ಹೆಸರುಗಳನ್ನು ಅಖೈರುಗೊಳಿಸುವುದು, ಅದನ್ನು ಪಕ್ಷದ ಸಂಸದೀಯ ಮಂಡಳಿ ಅನುಮೋದಿಸುವುದು ಸಂಪ್ರದಾಯ. ಈ ಸಲ ಮೋದಿ ಅವುಗಳಿಗೆಲ್ಲ ಸೊಪ್ಪು ಹಾಕಲಿಲ್ಲ. ಫಲಿತಾಂಶ ಬಂದು ಪ್ರಮಾಣ ವಚನ ಸ್ವೀಕರಿಸುವ ಹತ್ತು ದಿನಗಳವರೆಗೆ ದೇಶದ ಎಲ್ಲ ಪತ್ರಿಕೆ, ಟಿವಿ ಚಾನೆಲ್‌ಗಳು ಅಡ್ವಾಣಿ, ಜೋಶಿ, ರಾಜನಾಥಸಿಂಗ್, ಸುಷ್ಮಾ ಸ್ವರಾಜ್, ಜೇಟ್ಲಿ ಇವರಿಗೆಲ್ಲ ಯಾವ ಖಾತೆ ಸಿಗಬಹುದು ಎಂದು ಊಹಿಸಿ, ಲೆಕ್ಕಾಚಾರ ಹಾಕಿದವು.
ಈ ಪೈಕಿ ಅಡ್ವಾಣಿ ಹಾಗೂ ಜೋಶಿಯವರಿಗೆ ಅವರ ಸ್ಥಾನವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ನಾಳೆ ಯಾವುದಾದರೂ ಸ್ಥಾನ ಸಿಗಬಹುದು. ಆದರೆ ಇಂದು ಅತಂತ್ರ. ಇನ್ನುಳಿದ ನಾಯಕರು ಸಂಪುಟ ಸೇರಲು ಎಷ್ಟು ಹರಸಾಹಸ ಮಾಡಬೇಕಾಯಿತು. ಯಾರ್ಯಾರ ಪಾದಗಳಿಗೆ ಹಣೆ ಹಚ್ಚಬೇಕಾಯಿತು ಎಂಬುದು ರೋಚಕವಾದರೂ ಕರುಣಾಜನಕ ಕತೆ ಬಿಡಿ.
ಒಂದು ಕಲ್ಲಿಗೆ ಒಂದು, ಎರಡು ಹಕ್ಕಿ ಹೊಡೆಯುವುದು ಗೊತ್ತು. ಆದರೆ ಮೋದಿಯವರು ಒಂದೇ ಹೊಡೆತಕ್ಕೆ ಹತ್ತಾರು ಹಕ್ಕಿ, ಉಷ್ಟ್ರಪಕ್ಷಿ, ಭಕಪಕ್ಷಿ, ಸೀಳುನಾಯಿ, ಶಿಳ್ಳೆಕ್ಯಾತ, ಓತಿಕ್ಯಾತ, ಊಸರವಳ್ಳಿ, ಗೂಬೆ, ಗೊರವಂಕ, ಕತ್ತೆ ಕಿರುಬಗಳನ್ನು ಹೊಡೆದು ಹಾಕಿದ್ದಾರೆ! ಅಲ್ಲಿ ಕತ್ತಿ ಮಸೆದು, ಇಲ್ಲಿ ಬಂದು ಹಲ್ಕಿರಿಯುವವರಿಗೆ ತಮ್ಮ ಸ್ಥಾನ ಯಾವುದು ಎಂಬುದನ್ನು ತೋರಿಸಿದ್ದಾರೆ. ಸಚಿವರನ್ನಾಗಿ ಮಾಡಿಯೂ ಅದರ ಆನಂದ ಅನುಭವಿಸದಂತೆ ಡೌಲು ಮೆರೆಯದಂತೆ ಸದೆಬಡಿದಿದ್ದಾರೆ. ಹಾಗಂತ ಯಾರೂ ಕಮಕ್ ಖಿಮಕ್ ಎನ್ನುವಂತಿಲ್ಲ. ಬಾಲಬಿಚ್ಚುವಂತಿಲ್ಲ. ಯಾರ ಮುಂದೆಯೂ ತಮ್ಮ ಗೋಳು, ಗೊಣಗಾಟ ತೋಡಿಕೊಳ್ಳುವಂತಿಲ್ಲ. ಇನ್ನು ಬಂಡಾಯದ ಬಾವುಟವನ್ನಂತೂ ಹಾರಿಸುವಂತೆಯೇ ಇಲ್ಲ. ಇಷ್ಟವಿರಲಿ, ಕಷ್ಟವಿರಲಿ ಸುಮ್ಮನೆ ಸ್ವೀಕರಿಸಬೇಕು.
ಮೋದಿಯವರಿಗೆ ಅಭೂತಪೂರ್ವ ವಿಜಯ ಸಿಕ್ಕಿರುವುದರಿಂದ ಅವರಿಗೆ ಮಿತ್ರ ಪಕ್ಷಗಳ ಹಂಗು ಬೇಕಾಗಿಲ್ಲ. ಅವರ ಎಂಜಲು ಬಾಳೆಯ ಮೇಲೆ ಊಟ ಮಾಡಬೇಕಿಲ್ಲ. ಹಾಗೆ ನೋಡಿದರೆ ಅವರಿಗೆ ಕೇಂದ್ರ ಸಂಪುಟ ಸೇರಲು ನೈತಿಕ ಹಕ್ಕಿಲ್ಲ. ಆದರೆ ಔದಾರ್ಯವೊಂದೇ ಅವರ ನೆರವಿಗೆ ಬಂದಿದೆ.
ಒಂದು ವೇಳೆ ಜಯಲಲಿತಾ ನೆರವನ್ನು ಪಡೆದು ಸರ್ಕಾರ ರಚಿಸುವ ಪ್ರಸಂಗ ಬಂದಿದ್ದರೆ ಆಯಮ್ಮಾ, ಶ್ರೀಲಂಕಾ ಅಧ್ಯಕ್ಷ ಮಹೇಂದ್ರ ರಾಜಪಕ್ಸೆಯವರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲು ಬಿಡುತ್ತಿದ್ದರಾ? ಶಿವಸೇನೆಯ ಹಂಗಿನಿಂದ ಸರ್ಕಾರ ರಚಿಸಿದ್ದರೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಆಹ್ವಾನಿಸಿದ್ದೇಕೆ ಎಂದು ಮೋದಿಯವರನ್ನು ಹಣ್ಣುಗಾಯಿ, ನೀರುಗಾಯಿ ಮಾಡದೇ ಬಿಡುತ್ತಿದ್ದರಾ? ಆಹ್ವಾನಿಸಿದ ತಪ್ಪಿಗೆ ಮಿತ್ರಪಕ್ಷಗಳ ಮುಂದೆ ಮಂಡಿಯೂರಿ ಶರಣಾಗತರಾಗಿ ಮರ್ಯಾದೆ ಕಳೆದುಕೊಳ್ಳಬೇಕಾಗುತ್ತಿತ್ತು. ಈಗ ಅಂಥ ಸನ್ನಿವೇಶವೇ ಇಲ್ಲ. ಮೊದಲಾಗಿದ್ದರೆ ಮಿತ್ರ ಪಕ್ಷಗಳೆಂಬ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿತ್ತು. ಈಗ ಹಾಗಲ್ಲ, ಆಡಳಿತಪಕ್ಷ ಬಾಲವೇ ಇಲ್ಲದ 'ಮುಧೋಳ ನಾಯಿ'ಯಂತಾಗಿ ಬಿಟ್ಟಿದೆ.
ಇನ್ನು ಲೋಕಸಭೆಯಲ್ಲಿ ಪ್ರತಿಪಕ್ಷಗಳನ್ನು ಅದರಲ್ಲೂ ಕಾಂಗ್ರೆಸ್ಸನ್ನು ದುರ್ಬೀನು ಹಾಕಿ ಹುಡುಕಬೇಕು. ಆಡಳಿತ ಪಕ್ಷ ಯಾವುದೇ ಮಸೂದೆಯನ್ನಾದರೂ ಮಂಡಿಸಿ ಕಾನೂನು ಮಾಡಿ ಜಾರಿಗೆ ತರಬಹುದು. ಮಿತ್ರ ಪಕ್ಷಗಳನ್ನು ಒಲೈಸುವ, ಅದಕ್ಕಾಗಿ ರಾಜಿ ಮಾಡಿಕೊಳ್ಳುವ, ಪ್ರಾದೇಶಿಕ ಕಾರಣಗಳಿಗಾಗಿ ನಿಲುವು ಸಡಿಲಿಸುವ, ಯಾವ ಗೊಡ್ಡು ಬೆದರಿಕೆಗಳಿಗೂ ಹೆದರುವ ಪ್ರಮೇಯವೇ ಇಲ್ಲ.
ಸಂಪುಟ ರಚನೆ, ಖಾತೆ ಹಂಚಿಕೆಯಲ್ಲೂ ಮೋದಿಯವರ ಪಾರಮ್ಯವೊಂದೇ ವಿಜೃಂಭಿಸಿದೆ. ಪ್ರಧಾನಿಯವರನ್ನು ಬ್ಲ್ಯಾಕ್‌ಮೇಲ್ ಮಾಡಿ ಖಾತೆ ಗಿಟ್ಟಿಸಿಕೊಳ್ಳುವುದಕ್ಕೆ ಪೂರ್ಣ ವಿರಾಮ ಬಿದ್ದಿದೆ. ಮೋದಿಯವರು ಹೈಕಮಾಂಡ್ ಎಂಬ ಬೆದರುಗೊಂಬೆ ಮುಂದೆ ಶಿರ ಸಾಷ್ಟಾಂಗ ಹಾಕಬೇಕಿಲ್ಲ. ಮಿತ್ರ ಪಕ್ಷಗಳಿಗೂ ಮಣೆ ಹಾಕಬೇಕಿಲ್ಲ. ಸ್ವಪಕ್ಷೀಯರಿಗೂ ಬೆನ್ನು ಸವರಬೇಕಿಲ್ಲ. ಮೂವತ್ತು ವರ್ಷಗಳ ನಂತರ ಈ ದೇಶದಲ್ಲಿ ಪ್ರಧಾನಮಂತ್ರಿ ಗಟ್ಟಿಯಾಗಿರುವ, ಗಟ್ಟಿ ವ್ಯಕ್ತಿ ಪ್ರಧಾನಿಯಾಗಿರುವ ಸರ್ಕಾರ ಪ್ರತಿಷ್ಠಾಪನೆಯಾಗಿದೆ.
ದಿಲ್ಲಿ ರಾಜಕಾರಣ, ಅಧಿಕಾರದ ಪರಿಭಾಷೆ, ಆಡಳಿತ ವೈಖರಿ, ರೀತಿ-ರಿವಾಜು ಇನ್ನು ಮುಂದೆ ಬದಲಾಗಲಿದೆ. ಕಳೆದ ಮೂವತ್ತು ವರ್ಷಗಳಿಂದ ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಕಿಮ್ಮತ್ತೇ ಇರಲಿಲ್ಲ. ಯಾರು ಬೇಕಾದರೂ ಪ್ರಧಾನಿಯ ಮೇಲೆ ಸವಾರಿ ಮಾಡುವಷ್ಟು ಆ ಹುದ್ದೆ ಹಾಗೂ ಅಲ್ಲಿ ಕುಳಿತವರು ದುರ್ಬಲರಾಗಿದ್ದರು. ಈ ದೇಶವನ್ನು ಈ ಅವಧಿಯಲ್ಲಿ ಪ್ರಧಾನಿ ಆಳಿದ್ದಕ್ಕಿಂತ, ಅವರನ್ನು ಇಟ್ಟುಕೊಂಡು ಬೇರೆಯವರೇ ಆಳಿದರು. ಅದರಲ್ಲೂ ಡಾ. ಮನಮೋಹನಸಿಂಗ್ ಅವರ ಎರಡು ಅವಧಿಯಲ್ಲಿ ಪ್ರಧಾನಿ ಹುದ್ದೆಯ ಘನತೆ ಮೂರಾಬಟ್ಟೆಯಾಯಿತು. ಅವರು ನಾಮಕೇವಾಸ್ತೇ ಪ್ರಧಾನಿಯಾಗಿದ್ದರು. ಅವರ ಹೆಸರಿನಲ್ಲಿ ಬೇರೆಯವರೇ ಆಳಿದರು. ಸರ್ಕಾರದ ಮೇಲೆ ಅವರಿಗೆ ಯಾವ ಹಿಡಿತವೂ ಇರಲಿಲ್ಲ.
ಆದರೆ ಇನ್ನು ಮುಂದೆ ಪ್ರಧಾನಿ ಸ್ವರೂಪವೇ ಬದಲಾಗಿದೆ. ಅವರನ್ನು ಕಟ್ಟಿ ಹಾಕುವ ಕೈಗಳಿಲ್ಲ. ಅವರನ್ನು ಯಾರೂ ಬ್ಲ್ಯಾಕ್‌ಮೇಲ್ ಮಾಡಲಾರರು. ಇವೆಲ್ಲಕ್ಕಿಂತ ಪುಟವಿಟ್ಟಂತೆ ಮೋದಿಯವರಿಗೆ ಭರ್ಜರಿ ಜನಾದೇಶ ಸಿಕ್ಕಿದೆ. ಮೂರು ಅವಧಿಗೆ ಗುಜರಾತಿನಲ್ಲಿ ಆಡಳಿತ ನಡೆಸಿದ ಅನುಭವವಿದೆ. ಗುಜರಾತ್‌ನಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ನೀಲನಕ್ಷೆಯ ಮಾದರಿ ಸಿದ್ಧವಿದೆ. ಇದನ್ನು ಅವರು ದಿಲ್ಲಿಯಲ್ಲಿ ಪ್ರತಿಷ್ಠಾಪಿಸಿ ದೇಶದ ಇತರ ರಾಜ್ಯಗಳಿಗೂ ವಿಸ್ತರಿಸಬೇಕಿದೆ. ಮೋದಿಯವರ ಆಡಳಿತ ಚಾಣಾಕ್ಷತನವಿರುವುದು ಅವರು ಆಡಳಿತಶಾಹಿಯನ್ನು ದುಡಿಸಿಕೊಳ್ಳುವುದರಲ್ಲಿ. ಈಗಾಗಲೇ ಅವರು ದೇಶದೆಲ್ಲೆಡೆ ಇರುವ ಇನ್ನೂರಕ್ಕೂ ಹೆಚ್ಚು ಸಮರ್ಥ, ಪ್ರಾಮಾಣಿಕ, ದಕ್ಷ ಅಧಿಕಾರಿಗಳ ತಂಡವನ್ನು ರಚಿಸಿ ಅವರಿಗೆ ಬೇರೆ ಬೇರೆ ಜವಾ ಬ್ದಾರಿಗಳನ್ನು ನೀಡಿ, ಇನ್ನು 3 ತಿಂಗಳ ಒಳಗೆ ತಮ್ಮ ಅಧಿಕಾರ ರಥದ ದಿಕ್ಕನ್ನು ಜಗತ್ತಿನ ಮುಂದಿಡುವ ಹಂಬಲವನ್ನು ವ್ಯಕ್ತಪಡಿಸುವ ಸಿದ್ಧತೆಯಲ್ಲಿದ್ದಾರೆ.
ಹಾಗೆಂದು ಮೋದಿಯವರ ಮುಂದೆ ಹೂವಿನ ಹಾಸಿಕೆ ಇಲ್ಲ. ಯುಪಿಎ ಸರ್ಕಾರದ ಎಲ್ಲ ಅಪಸವ್ಯಗಳನ್ನು ಹೊಡೆದುಹಾಕಿ ಆಡಳಿತವನ್ನು ಒಂದು ಹಂತಕ್ಕೆ ತರುವುದು ನಿಜಕ್ಕೂ ಸವಾಲು. ಅಲ್ಲಿತನಕ ಮೋದಿಯವರು ಇಡುವ ಪ್ರತಿ ಹೆಜ್ಜೆಯೂ ಬಹಳ ಮುಖ್ಯ. ಅವರ ಮುಂದೆ ಬೆಟ್ಟದಷ್ಟು ಸಮಸ್ಯೆ ಸವಾಲುಗಳಿವೆ. ಆದರೆ ಪರ್ವತದ ಎತ್ತರದಷ್ಟು ನಿರೀಕ್ಷೆಗಳಿವೆ. ಅವರ ಆಡಳಿತ ಆರಂಭವಾದ ಕ್ಷಣದಿಂದಲೇ ಆಡಳಿತ ವಿರೋಧಿ ಭಾವನೆಗಳೂ ಜಾಗೃತಿಗೊಳ್ಳಲು ಅವಕಾಶ ಸಿಕ್ಕಂತಾಗಿದೆ.
ಇವೆಲ್ಲವನ್ನು ಗಮನಿಸಿದರೂ ಒಂದು ಸಂಗತಿಯಂತೂ ಸ್ಪಷ್ಟ. ಈ ದೇಶ ಬದಲಾವಣೆಗೆ ಮಗ್ಗುಲು ಬದಲಿಸಿದೆ. ಹೊಸ ಮನ್ವಂತರಕ್ಕೆ ತೆರೆದುಕೊಂಡಿದೆ. ಇದರ ಫಲ ಈ ದೇಶಕ್ಕೆ ಸಿಗಲಿ.
-ವಿಶ್ವೇಶ್ವರ ಭಟ್
vbhat@me.com
Advertisement