ಸಹವಾಸ ದೋಷದಿಂದ...

Updated on

'ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬುದು ಹಳೆಯ ಗಾದೆ. ಸಹವಾಸ ದೋಷದಿಂದ ಆಗಿರುವ ಅನಾಹುತಗಳು ಒಂದೆರಡಲ್ಲ. ಕೆಟ್ಟವರ ಸಹವಾಸದ ಕಾರಣದಿಂದಲೇ ಎಷ್ಟೋ ಮಂದಿಯ ಹೆಸರು ಹಾಳಾಗಿದೆ. ಬದುಕು ಹಾಳಾಗಿದೆ. ಮರ್ಯಾದೆ ಬೀದಿ ಪಾಲಾಗಿದೆ ಮತ್ತು ಸಹವಾಸ ದೋಷದ ಕಾರಣದಿಂದಲೇ ಸಂಸಾರಗಳೂ ಒಡೆದು ಹೋಗಿವೆ...' ಮೊನ್ನೆ ಇದ್ದಕ್ಕಿದ್ದಂತೆಯೇ ಫೋನ್ ಮಾಡಿದ ಅಮ್ಮ, ಹೀಗೆ ವೇದಾಂತಿಯ ಥರಾ ಮಾತಾಡುತ್ತಿದ್ದಳು. ಅಮ್ಮ ಯಾವ ವಿಷಯ ಹೇಳಬೇಕೆಂದು ಹೀಗೆ ಪೀಠಿಕೆ ಹಾಕ್ತಾ ಇದ್ದಾಳೆ ಎಂಬುದೇ ಅರ್ಥವಾಗಲಿಲ್ಲ. ಅಲ್ಲಮ್ಮಾ, ನೀನು ಏನು ಹೇಳಲಿಕ್ಕೆ ಹೊರಟಿದ್ದೀಯ ಎಂದು ನೇರವಾಗಿ ಕೇಳಲು ಮನಸ್ಸಾಗಲಿಲ್ಲ. ಆರಂಭದಲ್ಲಿ ಅಮ್ಮನ ಪ್ರತಿಯೊಂದು ಮಾತಿಗೂ ಹೂಂ ಹೂಂ ಅನ್ನುತ್ತಿದ್ದವಳು, ನಂತರ ಗಪ್‌ಚುಪ್ ಆಗಿಬಿಟ್ಟೆ. ಅದನ್ನು ಗಮನಿಸಿದಳೇನೋ: ಅಮ್ಮ ಕೇಳಿದಳು- ನಾನು ಹೇಳ್ತಾ ಇರೋದು ಕೇಳಿಸ್ತಾ ಇದೆಯಾ?'
ಈಗ ತಿರುಗಿ ಪ್ರಶ್ನಿಸದೆ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ ಕೇಳಿಬಿಟ್ಟೆ: ಅಮ್ಮಾ, ಎಲ್ಲ ಮಾತೂ ಕೇಳಿಸಿದೆ. ಆದ್ರೆ ನೀನು ಯಾವ ಮತ್ತು ಯಾರ ವಿಷಯ ಹೇಳೋಕೆ ಟ್ರೈ ಮಾಡ್ತಿದೀಯ ಎಂದು ಗೊತ್ತೇ ಆಗಲಿಲ್ಲ ಅಂದೆ. ಅಮ್ಮ ಈಗ ತುಸು ಬೇಸರದ ದನಿಯಲ್ಲಿ ಹೇಳಿದರು: 'ಮನೋರಮಾಳ ಕುಟುಂಬ ಒಡೆದು ಹೋಗ್ತಿದೆ ಕಣೇ. ಅವಳ ಗಂಡ ಡೈವೋರ್ಸ್‌ಗೆ ಅರ್ಜಿ ಹಾಕಿದ್ದಾರಂತೆ...'
ಅಮ್ಮನ ಮಾತು ಕೇಳಿ ಕ್ಷಣಕಾಲ ಕಂಪಿಸಿದೆ. ಇಂಥದೊಂದು ಸುದ್ದಿಯನ್ನು ನಂಬಲು ನಾನಂತೂ ಸಿದ್ಧಳಿರಲಿಲ್ಲ. ಮನೋರಮಾ, ನಮ್ಮ ಚಿಕ್ಕಪ್ಪನ ಮಗಳು. ಅವಳ ಗಂಡನ ಹೆಸರು ನಾಗಭೂಷಣ. ಆತ ವೃತ್ತಿಯಿಂದ ಶಿಕ್ಷಕ. ತುಂಬಾ ಸಂಭಾವಿತ, ಮಿತಭಾಷಿ. ಬಂಧುಗಳೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು. ಅವನನ್ನು ಈ ಹುಡುಗಿ ಮನೋರಮಾ ಪ್ರೀತಿಸಿ ಮದುವೆಯಾಗಿದ್ದಳು. ಹೆಂಡತಿಯ ಜೊತೆಗಲ್ಲದೆ ಮತ್ಯಾರ ಜೊತೆಗೂ ನಾಗಭೂಷಣ ಮಾತೇ ಆಡುತ್ತಿರಲಿಲ್ಲ. ಆದರೆ, ಕುಟುಂಬದ ಯಾವುದೇ ಕಾರ್ಯಕ್ರಮವಿರಲಿ, ಉಳಿದವರಿಗಿಂತ ಹೆಚ್ಚಾಗಿ ಅದರಲ್ಲಿ ತೊಡಗಿಕೊಳ್ಳುತ್ತಿದ್ದ. ಅತಿಥಿ ಸತ್ಕಾರದಲ್ಲಿ ಅವನದ್ದು ಎತ್ತಿದ ಕೈ. ಸಾಕಷ್ಟು ಓದಿಕೊಂಡಿದ್ದ. ಮನೋರಮಾಳನ್ನು ವಿಪರೀತ ಇಷ್ಟಪಡುತ್ತಿದ್ದ. ಈ ಜೋಡಿಯನ್ನು ಬಂಧುಗಳೆಲ್ಲ ಮುದ್ದಣ್ಣ- ಮನೋರಮೆ ಎಂದೇ ಕರೆಯುತ್ತಿದ್ದರು. ಗಂಡ-ಹೆಂಡ್ತಿ ಅಂದರೆ ಅವರ ಥರಾ ಇರಬೇಕು ನೋಡಿ. ಮನೋರಮಾಳ ಗಂಡನಂತೂ ದೇವರಂಥಾ ಮನುಷ್ಯ. ಈ ದಂಪತಿಯ ಬಳಿ ಭಾರೀ ಹಣವಿಲ್ಲ ನಿಜ. ಆದರೆ ಆತ್ಮಸಂತೋಷ ಎಂಬುದು ಅವರಲ್ಲಿ ತುಂಬಿ ತುಳುಕ್ತಾ ಇದೆ ಎನ್ನುತ್ತಿದ್ದರು. ಇಂಥ ಹಿನ್ನೆಲೆಯ ದಾಂಪತ್ಯದಲ್ಲಿ ಅಪಸ್ವರ ಹೊರಟಿದೆ ಎಂದು ಹೇಳುತ್ತಿದ್ದಳು ಅಮ್ಮ. ಬೇರೆ ಯಾರಾದರೂ ಈ ಸುದ್ದಿ ಹೇಳಿದ್ದರೆ, ನಾನು ಖಂಡಿತ ನಂಬುತ್ತಿರಲಿಲ್ಲ. ಆದರೀಗ ನಂಬದೆ ಬೇರೆ ದಾರಿಯೇ ಇರಲಿಲ್ಲ.
'ಅಮ್ಮಾ, ಮನೋರಮಾ ಅಕ್ಕನಿಗೆ ಯಾಕೆ ಹೀಗಾಯ್ತು? ಭಾವ, ತುಂಬಾ ಸಾಫ್ಟ್ ಮನುಷ್ಯ ಅಲ್ವ? ಅವರು ಡೈವೋರ್ಸ್ ಬಗ್ಗೆ ಯೋಚನೆ ಮಾಡಿದ್ರು ಅನ್ನೋದನ್ನು ನಂಬುವುದು ಹೇಗೆ? ನಿನಗೆ ಅನ್ನಿಸಿದ ಹಾಗೆ ಇಲ್ಲಿ ತಪ್ಪು ಯಾರದು ಅಮ್ಮಾ?' 'ತಪ್ಪು ನಿಮ್ಮ ಅಕ್ಕನ ಕಡೆಯೇ ಇದೆಯಮ್ಮಾ. ಹಾಗಾಗಿ ನಾವು ಏನೂ ಮಾಡಲು ಸಾಧ್ಯವಾಗ್ತಿಲ್ಲ. ಇವಳ ಹಠಮಾರಿತನದಿಂದ ಬೇಸತ್ತು ಆ ಹುಡುಗ ಡೈವೋರ್ಸ್‌ಗೆ ಅರ್ಜಿ ಹಾಕಿಬಿಟ್ಟಿದ್ದಾನೆ. ಎಲ್ಲಕ್ಕೂ ಸಹವಾಸ ದೋಷವೇ ಕಾರಣ...' ಎಂದು ನಿಟ್ಟುಸಿರು ಬಿಟ್ಟಳು ಅಮ್ಮ. ತಕ್ಷಣವೇ ಫೋನ್ ಕಟ್ ಮಾಡಿದೆ. ಆನಂತರದಲ್ಲಿ ಯಾಕೋ ಮನಸ್ಸು ತಡೆಯಲಿಲ್ಲ. ಅರ್ಧ ಗಂಟೆಯ ನಂತರ ಮತ್ತೆ ಫೋನ್ ಮಾಡಿದಾಗ, ಅಮ್ಮ ಎಲ್ಲವನ್ನೂ ಐದೇ ನಿಮಿಷದಲ್ಲಿ ಹೇಳಿಬಿಟ್ಟಳು. ಆ ವಿವರಣೆ ಹೀಗಿದೆ:
ಹೇಳಿ ಕೇಳಿ ಸ್ಕೂಲ್ ಟೀಚರ್ ತಾನೆ? ಆ ಕಾರಣದಿಂದ ಮನೋರಮಾಳ ಗಂಡನಿಗೆ ಸಂಬಳ ಕಡಿಮೆಯಿತ್ತು. ತನಗಿರುವ ಇತಿ-ಮಿತಿಯ ಬಗ್ಗೆ ಹತ್ತು ಬಾರಿ ವಿವರಿಸಿದ ನಂತರವೇ ಆತ ಮನೋರಮಾಳ ಕೈ ಹಿಡಿದಿದ್ದ. ಶ್ರೀಮಂತಿಕೆ ನಮಗಿಲ್ಲ ನಿಜ. ಆದರೆ ಹೊಟ್ಟೆ- ಬಟ್ಟೆಗೆ ಆಗುವಷ್ಟು ಸಂಪಾದನೆಗಂತೂ ತೊಂದರೆಯಿಲ್ಲ ಎಂದು ಮನೋರಮಾನೇ ಎಲ್ಲರೊಂದಿಗೂ ಹೇಳಿಕೊಂಡಿದ್ದಳು.
ಆನಂತರದಲ್ಲಿ ಏನಾಗಿದೆಯೆಂದರೆ- ಮನೋರಮಾಗೆ ನೆರೆಹೊರೆಯ ಹೆಂಗಸರ ಪರಿಚಯವಾಗಿದೆ. ಅವರು, ಅದೊಮ್ಮೆ-ಕಡಿಮೆ ಬೆಲೆಗೆ ರೇಷ್ಮೆ ಸೀರೆ ಸಿಗುತ್ತೆ ತಗೊಳ್ಳೋಣ ಬನ್ರೀ ಎಂದು ಕರೆದಿದ್ದಾರೆ. ನಮ್ಮಲ್ಲಿ ಅಷ್ಟೊಂದು ಹಣವಿಲ್ಲ. ನನಗೆ ಸೀರೆ ಬೇಡ. ನಾನು ಬರಲ್ಲ ಅಂದಿದ್ದಾಳೆ ಮನೋರಮಾ. ಒಂದು ವಾರದ ನಂತರ ಅದೇ ಹೆಂಗಸರು- ತಿಂಗಳಿಗೆ ಐದು ಸಾವಿರದ ಚೀಟಿ ಹಾಕ್ರೀ. ಮೂರು ವರ್ಷ ಕಟ್ಟಿದ್ರೆ 2 ಲಕ್ಷ ಸಿಗುತ್ತೆ ಅಂದಿದ್ದಾರೆ. ಅದರ ಹಿಂದೆಯೇ, ಒಂದು ಆಭರಣದ ಅಂಗಡಿಗೆ ಮೆಂಬರ್ ಮಾಡಿಸಿ, ಇಲ್ಲಿ ಚಿನ್ನದ ಚೀಟಿ ಕಟ್ಟಿ. ಎರಡು ವರ್ಷ ಕಟ್ಟಿದ್ರೆ, ನಂತರ ನಿಮಗೆ ಇಷ್ಟವಾಗುವ ಡಿಸೈನ್‌ನ ಒಡವೆ ಮಾಡಿಸ್ಕೋಬಹುದು ಅಂದಿದ್ದಾರೆ. ಆಗಲೂ ಈ ಮನೋರಮೆ, ಇಲ್ಲಾರೀ, ನಾವು ಬಡವರು. ಇದಕ್ಕೆಲ್ಲಾ ಸಾಕಾಗುವಷ್ಟು ದುಡಿಮೆ ನಮಗಿಲ್ಲ ಅಂದಳಂತೆ. ಈ ಮಾತು ಕೇಳಿದ ಆ ಹೆಂಗಸರು-ಮನೋರಮಾ, ನೀನು ಬಹಳ ಪೆದ್ದಿ ಕಣೇ. ಗಂಡಸರಿಗೆ ಸಂಪಾದನೆಗೆ ನೂರು ದಾರಿ ಇವೆ. ಅವರಿಂದ ಹೇಗೆ ಹಣ ಬಿಚ್ಚಿಸಬೇಕು ಅಂತಾನೇ ನಿನಗೆ ಗೊತ್ತಿಲ್ಲ. ಒಂದು ಕೆಲ್ಸ ಮಾಡು: ಸೀರೆಗೆ, ಚಿನ್ನ ಖರೀದಿಗೆ ಮತ್ತು ಹಣ ಕೊಡಿಸಲಿಕ್ಕೆ ಮೂರು ಚೀಟಿ ಹಾಕುವಾ ಅಂತ ನಿನ್ನ ಯಜಮಾನರಿಗೆ ಹೇಳು. ಅವರು ಒಪ್ಪದೇ ಹೋದ್ರೆ ರಾತ್ರಿ ಹೊತ್ತು ಬೇರೆ ರೂಂನಲ್ಲಿ ಮಲ್ಕೋಬಿಡು. ಅವರು ಕಾಸು ಕೊಡುವ ತನಕ ರಾಜಿ ಆಗಬೇಡ. ನಮ್ಮ ಗಂಡಂದಿರನ್ನು ನಾವೆಲ್ಲಾ ಕಂಟ್ರೋಲ್ ಮಾಡ್ತಾ ಇರೋದೇ ಹೀಗೆ. ಅದಕ್ಕೇ ನೋಡು ಹೀಗಿದೀವಿ ಅನ್ನುತ್ತಾ ತಮ್ಮ ಶ್ರೀಮಂತಿಕೆ ಹಾಗೂ ಒಡವೆಗಳ ಪ್ರದರ್ಶನ ಮಾಡಿದರಂತೆ.
ಪರಿಣಾಮ ಏನಾಯಿತೆಂದರೆ, ಮನೋರಮಾಳ ಮನೆಯಲ್ಲಿ ಮರುದಿನದಿಂದಲೇ ಹೊಸ ಪ್ರಯೋಗ ಶುರುವಾಯಿತು. ಹೆಂಡತಿಯ ಮಾತು ಕೇಳಿ ನಾಗಭೂಷಣ ಹೌಹಾರಿದ. ತನ್ನ ಸ್ಥಿತಿಯ ಬಗ್ಗೆ, ಕಡಿಮೆ ಸಂಬಳದ ಬಗ್ಗೆ, ಕಷ್ಟದ ಬಗ್ಗೆ ಹೇಳಿಕೊಂಡ. ಸಹವಾಸ ದೋಷದ ಕಾರಣ, ಮನೋರಮಾ ತನ್ನ ಪಟ್ಟು ಸಡಿಲಿಸಲಿಲ್ಲ. ಪರಿಣಾಮವಾಗಿ, ಅವರ ಮನೆಯಲ್ಲಿ ಜಗಳವೆಂಬುದು ನಿತ್ಯದ ಮಾತಾಯಿತು. ಗಂಡನಿಗೆ ತಾನಿಲ್ಲದೆ ಗತಿಯಿಲ್ಲ. ಆತ ಇವತ್ತಲ್ಲ  ನಾಳೆ ತನ್ನ ಮುಂದೆ ಮಂಡಿಯೂರಿ ಕೂರುತ್ತಾನೆ ಎಂದೇ ಈ ಹುಡುಗಿ ಕಾದಿದ್ದಳು. ಹೆಂಡತಿಯ ಹಠಮಾರಿತನ ಹಾಗೂ ಮುನಿಸು ಒಂದು ವರ್ಷದವರೆಗೂ ಮುಂದುವರಿದಾಗ, ರೋಸಿ ಹೋದ ಪತಿರಾಯ ಡೈವೋರ್ಸ್‌ಗೆ ಅರ್ಜಿ ಹಾಕಿದ್ದ...
-
ಇದನ್ನೆಲ್ಲ ಬರೆದು ಮುಗಿಸಿದ ನಂತರ ಮನೋರಮಾ ಬಿಟ್ಟೂ ಬಿಡದೆ ನೆನಪಾಗುತ್ತಿದ್ದಾಳೆ. ಹಿಂದೆಯೇ, ಸಹವಾಸ ದೋಷದಿಂದ ತಮ್ಮ ಹಾಲಿನಂಥ ಸಂಸಾರದೊಳಕ್ಕೆ ಜಗಳ ಎಂಬ 'ಜ್ವಾಲೆ'ಯನ್ನು ತಂದಿಟ್ಟುಕೊಂಡ ಅದೆಷ್ಟೋ ಹೆಣ್ಣು ಮಕ್ಕಳೂ...

-ನಾನು ಪ್ರಣತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com