ವಿದ್ಯಾರ್ಥಿಗಳೊಂದಿಗೆ ಎಪಿಜೆ ಅಬ್ದುಲ್ ಕಲಾಂ (ಸಂಗ್ರಹ ಚಿತ್ರ)
ವಿದ್ಯಾರ್ಥಿಗಳೊಂದಿಗೆ ಎಪಿಜೆ ಅಬ್ದುಲ್ ಕಲಾಂ (ಸಂಗ್ರಹ ಚಿತ್ರ)

ನನ್ನನ್ನು ಶಿಕ್ಷಕ ಎಂದೇ ಜನ ಯಾವಾಗಲೂ ನೆನೆಪಿಟ್ಟುಕೊಳ್ಳಬೇಕು!

ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಮೇಲೆ ತಮ್ಮ ಮುಂದಿನ ನಡೆಯೇನು? ಎಂದು ಪ್ರಶ್ನಿಸಿದಾಗ " ನಾನು ಮೊದಲು ಶಿಕ್ಷಕನಾಗಿದ್ದೆ. ಈ ನಂತರವೂ ಶಿಕ್ಷಕನಾಗಿ...

ಡಾ. ಕಲಾಂ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ವತಿಯಿಂದ ಕೊಡಬಹುದಾದ ಕೊಡುಗೆ ನೀಡಲು ಯಾವತ್ತೂ ಹಿಂಜರಿದಿಲ್ಲ. ವಿಜ್ಞಾನಿಯಾಗುವ ಮುಂಚೆ ಶಿಕ್ಷಕರಾಗಿದ್ದವರು. ಎಂತಹ ಹುದ್ದೆಗೆ ಹೋದರೂ ಗೌರವ ಶಿಕ್ಷಕರಾಗಿ ವಿಶ್ವದ ಅನೇಕ ಯುನಿವರ್ಸಿಟಿಗಳಲ್ಲಿ ಬೋಧಿಸುತ್ತಿದ್ದರು. ಪ್ರಧಾನ ಮಂತ್ರಿಗಳ ರಕ್ಷಣಾ ಸಲಹೆಗಾರರಾಗಿದ್ದ ಸಂದರ್ಭದಲ್ಲಿ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿಗಳ ಫೋನ್ ಕರೆ ಬಂತು. ತರಗತಿಯಲ್ಲಿದ್ದ ಕಾರಣ ಆ ಕರೆಯನ್ನು ಕಲಾಂ ಸ್ವೀಕರಿಸಲಿಲ್ಲ. ತರಗತಿಯ ನಂತರ ವಾಜಪೇಯಿಯವರ ಜೊತೆ ಮಾತನಾಡಿದಾಗ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲು ಆಹ್ವಾನ ಬಂತು. "ಒಂದು ಗಂಟೆ ಸಮಯ ಕೊಡಿ ಯೋಚಿಸಿ ಹೇಳುತ್ತೇನೆ" ಎಂದವರು ದೇಶದಾದ್ಯಂತ ತಮ್ಮ ಗೆಳೆಯರೊಡನೆ ಟೆಲಿಫೋನ್ ಮುಖಾಂತರ ಚರ್ಚಿಸಿದರು. ಕೆಲವರು ಆಗು ಎಂದರೆ ಇನ್ನು ಕೆಲವರು ಬೇಡ ಎಂದರು. ಎಲ್ಲರ ಅಭಿಪ್ರಾಯಗಳನ್ನು ತೂಗಿ ಅಳೆದ ಮೇಲೆ ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಮುನ್ನೋಟದಂತೆ ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳಿವೆ ಎಂಬ ಸತ್ಯವನ್ನು ಕಂಡುಕೊಂಡು ರಾಷ್ಟ್ರಪತಿ ಹುದ್ದೆಯನ್ನು ಅಂಗೀಕರಿಸಿದೆ ಎನ್ನುತ್ತಾರೆ ಕಲಾಂ.

 ರಾಷ್ಟ್ರಪತಿಯಾಗಿದ್ದಾಗಲೂ ತಮ್ಮ ನೆಚ್ಚಿನ ಶಿಕ್ಷಣ ವೃತ್ತಿಯನ್ನು ಬಿಡಲಿಲ್ಲ. ಎಜುಸ್ಯಾಟ್ ಮುಖಾಂತರ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದರು. ಸಿಂಗಪುರದ ಗ್ಲೋಬಲ್ ಸ್ಕೂಲ್ ಫೌಂಡೇಶನ್ ಮುಖಾಂತರ ಮಹಾತ್ಮ ಗಾಂಧಿ ಗ್ಲೋಬಲ್ ಇಂಡಿಯನ್ ಏಕಲವ್ಯ ಶಾಲೆಯನ್ನು ಗುಜರಾತದ ತಿಲಕವಾಡಿಯಲ್ಲಿ ಆದಿವಾಸಿ ಮಕ್ಕಳಿಗೋಸ್ಕರ ಸ್ಥಾಪಿಸಿದರು. ಈಗ ಈ ಶಾಲೆಯು ಸಾವಿರಾರು ಆದಿವಾಸಿ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುತ್ತಿದೆ. ದೇಶದ ಕೊನೆಯ ಹಳ್ಳಿಯವರೆಗೂ ತಂತ್ರಜ್ಞಾನದ ಮೂಲಕ ಶಿಕ್ಷಣವನ್ನು ಪಸರಿಸಲು ಕಲಾಂ ಪ್ರಯತ್ನಿಸುತ್ತಿದ್ದರು.

 ತಮ್ಮ ರಾಷ್ಟ್ರಪತಿ ಹುದ್ದೆಯ ಕೊನೆಯ ವರ್ಷದಲ್ಲಿ ಆಫ್ರಿಕಾದ ಐವತ್ತು ದೇಶಗಳ ಸಭೆಯಲ್ಲಿ ಕಲಾಂ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ತಮ್ಮ ಭಾಷಣ ಮುಗಿದ ಮೇಲೆ ಆ ದೇಶಗಳಿಗೆ ಏನಾದರೂ ಕಾಣಿಕೆ ಕೊಡಬೇಕೆಂದು ಕಲಾಂ ಮನಸ್ಸಿನಲ್ಲಿ ಬಂತು. ತಕ್ಷಣವೇ ಅಂದಿನ ಪ್ರಧಾನ ಮಂತ್ರಿಗಳಾದ ಮನಮೋಹನ ಸಿಂಗ್ ರನ್ನು ಸಂಪರ್ಕಿಸಿದರು. ಆಫ್ರಿಕಾದ ಹಳ್ಳಿಗಳಲ್ಲಿ ಎಜುಸ್ಯಾಟ್ ಮುಖಾಂತರ ಶಿಕ್ಷಣಕ್ಕೆ ಕೊಡುಗೆ ನೀಡಲು ಸಾಧ್ಯವೇ ಎಂದು ಕೇಳಿದರು. ಮನಮೋಹನ್ ಸಿಂಗ್ ತಕ್ಷಣವೇ ಒಪ್ಪಿಗೆಯಿತ್ತರು. ಅದಕ್ಕೆ ತಕ್ಕುದಾದ ಸರಕಾರಿ ಔಪಚಾರಿಕತೆಗಳನ್ನು ಸರಸರನೆ ಪೂರ್ಣಗೊಳಿಸಿದರು. ಕಲಾಂ ಮೇಷ್ಟ್ರು ಭಾರತಕ್ಕೆ ವಾಪಸು ಬರುವ ಹೊತ್ತಿಗೆ ಆಫ್ರಿಕಾ ದೇಶದಲ್ಲಿ ಎಜುಸ್ಯಾಟ್ ಕಾರ್ಯಾರಂಭ ಮಾಡಿತ್ತು!

 ಶಿಕ್ಷರ ವೃತ್ತಿ ಬಹಳ ಪವಿತ್ರವಾದುದು, ಶಿಕ್ಷಕರು ಯಾವತ್ತಿಗೂ ಕ್ರಿಯಾತ್ಮಕವಾಗಿರಬೇಕು, ಯಾವಾಗಲೂ ಕಲಿಯುತ್ತಿರಬೇಕು, ವಿದ್ಯಾರ್ಥಿಗಳ ಸ್ವಂತ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಕಲಾಂ ಹೇಳುತ್ತಿದ್ದರು. ಕಲಿಕೆಯಲ್ಲಿ ಶಿಕ್ಷಕರಿಗಿಂತ ವಿದ್ಯಾರ್ಥಿಗಳ ಪಾತ್ರ ಹೆಚ್ಚಾಗಿರುತ್ತದೆ. ಪ್ರಶ್ನೆಗಳನ್ನು ಕೇಳಿ ಶಿಕ್ಷಕರಿಂದ ತಿಳಿದುಕೊಂಡಷ್ಟು ಹೆಚ್ಚು ಕಲಿಕೆ ಸಾಧ್ಯ. ವಿದ್ಯಾರ್ಥಿಯ ತನ್ನನ್ನು ತಾನು ತೊಡಗಿಸಿಕೊಳ್ಳದೇ ಶಿಕ್ಷಕರು ಕಲಿಸಲು ಸಾಧ್ಯವೇ ಇಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ತಮ್ಮ ವಿಜ್ಞಾನ ಶಿಕ್ಷಕರು ಸಮುದ್ರದಂಡೆಗೆ ಕರೆದುಕೊಂಡು ಹೋದರು. ಅಲ್ಲಿ ಹಾರುವ ಕಡಲ ಹಕ್ಕಿಗಳನ್ನು ತೋರಿಸಿದರು. ಅವುಗಳ ರೆಕ್ಕೆ ಬಡಿತ, ಬಾಲದ ಮೂಲಕ ಹಾರುವ ದಿಕ್ಕನ್ನು ನಿಯಂತ್ರಿಸುವ ಪರಿ. ಹಕ್ಕಿಗಳ ಗುಂಪು ಹಾರುತ್ತಾ ಮಾಡಿಕೊಳ್ಳುವ ಚಿತ್ತಾರಗಳೆಲ್ಲವನ್ನು ತೋರಿಸಿ ಶಿಕ್ಷಕರು ಅದರ ಹಿಂದಿನ ವಿಜ್ಞಾನವನ್ನು ವಿವರಿಸಿದರು. ಕೇವಲ ಹದಿನೈದು ನಿಮಿಷಗಳಲ್ಲಿ ಹಕ್ಕಿಲೋಕದ ಆಮೂಲಾಗ್ರ ಪರಿಚಯ ದೊರೆತು ಹೋಗಿತ್ತು. ಆ ಪಾಠ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ತಾನು ಬೆಳೆದ ಮೇಲೆ ಹಾರುವ ಲೋಕದಲ್ಲೇ ಸಾಧನೆ ಮಾಡಬೇಕು ಎಂದು ತಕ್ಷಣವೇ ನಿರ್ಧರಿಸಿದೆ ಎಂದು ಕಲಾಂ ನೆನಪಿಸಿಕೊಳ್ಳುತ್ತಾರೆ.

 ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಮೇಲೆ ತಮ್ಮ ಮುಂದಿನ ನಡೆಯೇನು? ಎಂದು ಪ್ರಶ್ನಿಸಿದಾಗ " ನಾನು ಮೊದಲು ಶಿಕ್ಷಕನಾಗಿದ್ದೆ. ಈ ನಂತರವೂ ಶಿಕ್ಷಕನಾಗಿ ಮುಂದುವರಿಯುತ್ತೇನೆ" ಎಂದರು. ಜನರು ತಮ್ಮನ್ನು  ವಿಜ್ಞಾನಿ ಎಂದು ನೆನಪಿಟ್ಟುಕೊಳ್ಳುವುದಕ್ಕಿಂತ ಶಿಕ್ಷಕ ಎಂದು ನೆನಪಿಟ್ಟುಕೊಳ್ಳಬೇಕು ಎಂದು ಬಯಸುತ್ತೇನೆ ಎಂದು ಸಂದರ್ಶನದಲ್ಲಿ ತಿಳಿಸಿದ್ದರು. ಶಿಕ್ಷಣ ಕ್ಷೇತ್ರದ ಘನತೆಯನ್ನು ರಾಷ್ಟ್ರಪತಿ ಹುದ್ದೆಯಲ್ಲೂ ಎತ್ತಿ ಹಿಡಿದ ಡಾ. ರಾಧಾಕೃಷ್ಣನ್ ಅವರಿಗೆ ಸಮನಾದ ವ್ಯಕ್ತಿತ್ವ ಕಲಾಂ ಮೇಷ್ಟ್ರದು. ಅವರಿಗೆ ಶಿಕ್ಷಕರೆಲ್ಲರ ವತಿಯಿಂದ ಅಶ್ರುತರ್ಪಣಗಳು.

Related Stories

No stories found.

Advertisement

X

Advertisement

X
Kannada Prabha
www.kannadaprabha.com