ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು

ಓದು ಮತ್ತು ಪರೀಕ್ಷೆಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಹಲವು. ಅಗಾಧವಾದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಓದು ಮತ್ತು ಪರೀಕ್ಷೆಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಹಲವು. ಅಗಾಧವಾದ ಪಠ್ಯಕ್ರಮವನ್ನು ಎದುರಿಸುವುದು ಒಂದು ಸವಾಲಾದರೆ ಆ ಪಠ್ಯಕ್ರಮಕ್ಕೆ ತಕ್ಕಂತೆ ಪರೀಕ್ಷೆಗೆ ಸಮಯ ಮತ್ತು ಜ್ಞಾನಮೂಲಗಳನ್ನು ಹೊಂದಿಸಿಕೊಳ್ಳುವುದು ಇನ್ನೊಂದು ದೊಡ್ಡ ಸವಾಲು.ಮುಂದಿನ ಓದಿಗಾಗಿ ಅಂದರೆ ಉನ್ನತ ಶಿಕ್ಷಣಕ್ಕಾಗಿ ತಯಾರಾಗುವಾಗ ಕೆಲ ವಿಷಯಗಳ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿ ಓದುವುದು ವಿದ್ಯಾರ್ಥಿಗಳು ಮಾಡುವ ಅತಿ ದೊಡ್ಡ ತಪ್ಪು. ಪಿಯುಸಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಓದುವ ಆಕಾಂಕ್ಷೆ ಹೊಂದಿದ್ದರೆ ಕೇವಲ ಭೌತಶಾಸ್ತ್ರ,ಗಣಿತ ,ರಸಾಯನ ಶಾಸ್ರ್ತವನ್ನು ಮಾತ್ರ ಓದುತ್ತಾರೆ. ಪ್ರಥಮ, ದ್ವಿತೀಯ ಭಾಷೆ ಮತ್ತು ಜೀವಶಾಸ್ತ್ರವನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ. ವೈದ್ಯಕೀಯವನ್ನು ಓದುವ ಇಚ್ಛೆಯುಳ್ಳ ವಿದ್ಯಾರ್ಥಿಗಳು ಭೌತಶಾಸ್ತ್ರ,ಗಣಿತ ಮತ್ತು ಜೀವಶಾಸ್ತ್ರಗಳನ್ನು ಮಾತ್ರ ಓದಿ ಉಳಿದ ವಿಷಯಗಳನ್ನು ಕಡೆಗಣಿಸುತ್ತಾರೆ. ಅನೇಕ ಪ್ರತಿಷ್ಟಿತ ಅಂತರ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಯ ಭಾಷೆಯೂ ಸೇರಿದಂತೆ ಸಮಗ್ರ ಸಾಧನೆಯನ್ನು ಪರಿಗಣಿಸಲಾಗುತ್ತದೆ. ವಿಜ್ಞಾನದ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೂ ಭಾಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದರಿಂದ ಸ್ಥಾನ ಕಳೆದುಕೊಂಡ ಅನೇಕ ವಿದ್ಯಾರ್ಥಿಗಳಿದ್ದಾರೆ.

 ಖಾಸಗಿ ಟ್ಯೂಷನ್ ಕೇಂದ್ರಗಳು ಹೆಚ್ಚುತ್ತಿದ್ದಂತೆ ಐಐಟಿ ಮತ್ತು ಸಿಇಟಿ ಕೇಂದ್ರಿತವಾಗಿ ಪಠ್ಯವನ್ನು ಓದುವುದು ಸಾಮಾನ್ಯ ಹವ್ಯಾಸವಾಗಿಬಿಟ್ಟಿದೆ. ಇದು ಪರೀಕ್ಷೆಗಳಲ್ಲಿ ಅದೆಂತಹ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆಯಂದರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೌಶಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಉತ್ತರಗಳನ್ನು ಪ್ರಸ್ತುತ ಪಡಿಸಬೇಕಾದ ಭಾಷೆಯ ಗುಣಮಟ್ಟ ಅತ್ಯಂತ ಕಳಪೆಯಾಗುತ್ತಿದೆ. ಸಿಇಟಿಯಂತಹ ವಸ್ತುನಿಷ್ಠ ಪತ್ರಿಕೆಗಳಲ್ಲಿ ಕೇವಲ ಸರಿಯಾದ ಉತ್ತರಕ್ಕೆ ಮಾತ್ರ ಮಹತ್ವವಿರುತ್ತದೆ. ವಾರ್ಷಿಕ ಪರೀಕ್ಷೆಯಲ್ಲಿ ವಿವರವಾದ ಉತ್ತರಗಳನ್ನು ಬರೆಯಬೇಕಾದ ಸಂದರ್ಭದಲ್ಲಿ ಸೂತ್ರಗಳನ್ನೆ ಎಗರಿಸಿ ಬರೆಯುವುದು, ಲೆಕ್ಕ ಮಾಡುವಾಗ ಲೆಕ್ಕದ ಹಂತವನ್ನು ತಪ್ಪಿಸಿ ನೇರ ಉತ್ತರ ಬರೆಯುವುದನ್ನು ಮಾಡುತ್ತಾರೆ. ಎಷ್ಟೋ ಕಡೆ ಐದು ಅಥವಾ ಹೆಚ್ಚು ಅಂಕಗಳ ಉತ್ತರ ಬರೆಯುವಾಗ ನೇರವಾಗಿ ಕಡೆಯ ಉತ್ತರ ಬರೆದು ಬಿಡುತ್ತಾರೆ. ಉತ್ತರ ಸರಿಯಾಗಿದ್ದರೂ ಸಂಪೂರ್ಣ ಅಂಕಗಳು ದೊರೆಯುವುದಿಲ್ಲ. ಪರೀಕ್ಷೆಗಳಲ್ಲಿ ಪ್ರತಿ ಹಂತಕ್ಕೂ, ಸೂತ್ರಕ್ಕೂ, ಬರೆಯಬೇಕಾದ ಪ್ರತೀ ವಾಕ್ಯಕ್ಕೂ,ಸೂತ್ರಕ್ಕೂ ಬೇರೆಬೇರೆಯಾಗಿಯೇ ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಇವುಗಳನ್ನು ಬರೆಯದೇ ಬಿಟ್ಟಾಗ ಅಂಕಗಳಲ್ಲಿ ಅನಿವಾರ್ಯವಾಗಿ ಕಡಿತಗೊಳಿಸಬೇಕಾಗುತ್ತದೆ. ಇದು ಕಡೆಯ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

  ಪರೀಕ್ಷೆ ಬರೆಯುವಾಗ “ಸಿಲ್ಲಿ ಮಿಸ್ಟೇಕ್” ಗಳು ಎಂದು ಕರೆಯಲ್ಪಡುವ ಕೆಲ ತಪ್ಪುಗಳನ್ನು ಮಾಡುತ್ತಾರೆ. ಉತ್ತರಕ್ಕೆ ತಕ್ಕುದಾದಂತಹ ಮಾಪಕವನ್ನು ಪರೆಯುವುದಿಲ್ಲ. ಮಾಪಕವನ್ನು ಬರೆದರೂ ಅದನ್ನು ತಪ್ಪಾಗಿ ಬರೆಯುತ್ತಾರೆ. ಉದಾಹರಣೆಗೆ ಸೆಕೆಂಡ್ ಗೆ s ಎಂದು ಬರೆಯುವುದರ ಬದಲು sec ಎಂದು ಬರೆಯುವುದು, hours ಗೆ h ಬದಲು hrs ಎಂದು ಬರೆಯುವುದು ಇತ್ಯಾದಿ. ಇಂತಹ ಚಿಕ್ಕ ತಪ್ಪುಗಳಿಗಾಗಿ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಈ ತರಹದ ಕೆಲ ತಪ್ಪುಗಳಿಂದಾಗಿ ನಾಲ್ಕರಿಂದ ಐದು ಅಂಕಗಳನ್ನು ಅನವಶ್ಯಕವಾಗಿ ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಾರೆ. ಈ ನಾಲ್ಕೈದು ಅಂಕಗಳೇ ರ್ಯಾಂಕಿಂಗ್ ನಲ್ಲಿ ವಿದ್ಯಾರ್ಥಿಯನ್ನು ಐನೂರು ಆರುನೂರು ರ್ಯಾಂಕ್ ಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ಒಳ್ಳೆಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಅವಕಾಶ ಈ ರೀತಿ ತಪ್ಪಿಹೋಗುತ್ತದೆ. ಮರು ಮೌಲ್ಯಮಾಪನಕ್ಕೆ ಹಾಕಿದರೂ ಆರಕ್ಕಿಂತ ಹೆಚ್ಚು ಅಂಕ ಬಂದರೆ ಮಾತ್ರ ಅಂಕಗಳನ್ನು ಹೆಚ್ಚು ಮಾಡುವ ಆದೇಶವಿರುವುದರಿಂದ ಮರುಮೌಲ್ಯಮಾಪನದಲ್ಲೂ ಪ್ರಯೋಜನವಾಗುವುದಿಲ್ಲ. ಇದರಿಂದ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ.

 ಪ್ರಶ್ನೆಪತ್ರಿಕೆಯನ್ನು ತಯಾರಿಸುವಾಗ ಪತ್ರಿಕೆ ತಯಾರಕರು ಎಲ್ಲರೂ ಪಾಸ್ ಆಗುವಂತೆ ಮತ್ತು ಯಾರೂ ನೂರಕ್ಕೆ ನೂರು ತೆಗೆಯದಂತೆ ಜಾಗ್ರತೆ ವಹಿಸಿ ಪತ್ರಿಕೆಯನ್ನು ಸಿದ್ಧಪಡಿಸುತ್ತಾರೆ. ಅತ್ಯಂತ ಹೆಚ್ಚಿನ ಚಾಣಾಕ್ಷತನದಿಂದ ಉತ್ತರಗಳನ್ನು ಬರೆದ ವಿದ್ಯಾರ್ಥಿಗಳು ಮಾತ್ರ ನೂರು ಅಥವಾ ಅದಕ್ಕೆ ಹತ್ತಿರದ ಅಂಕಗಳನ್ನು ಪಡೆಯುತ್ತಾರೆ. ಹಾಗಾಗಿ ಕಷ್ಟ ಪಟ್ಟು ಓದುವುದು ಮಾತ್ರ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಾಯ ಮಾಡುವುದಿಲ್ಲ. ಉತ್ತರಗಳನ್ನು ಪರೀಕ್ಷೆಗಳಲ್ಲಿ ಹೇಗೆ ಬರೆಯಬೇಕೆಂಬ ಸರಿಯಾದ ತಿಳುವಳಿಕೆ ಮಾತ್ರ ಹೆಚ್ಚಿನ ಅಂಕಗಳನ್ನು ಗಳಿಸಿಕೊಡಬಲ್ಲದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com