ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು ತೊಡಕಿಲ್ಲದ ಏಳು ಹೆಜ್ಜೆಗಳು

ಓದಿನ ಸಮಯದಲ್ಲಿ ಮನಸ್ಸನ್ನು ಮಗ್ನವಾಗಿಸುವುದು ಬಹುದೊಡ್ಡ ಸಮಸ್ಯೆ...
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಸಮಸ್ಯೆ
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಸಮಸ್ಯೆ

ಓದಿನ ಸಮಯದಲ್ಲಿ ಮನಸ್ಸನ್ನು ಮಗ್ನವಾಗಿಸುವುದು ಬಹುದೊಡ್ಡ ಸಮಸ್ಯೆ. ಚಿಕ್ಕ ಚಿಕ್ಕ ವಿಷಯಗಳಿಗೂ ಓದಿನಿಂದ ಆಚೆಗೆ ಪದೇ ಪದೆ ಮನಸ್ಸು ಓಡಿಹೋಗುವುದು. ಒಂದು ಬಾರಿ ಓಡಿ ಹೋದ ಮನಸ್ಸು ವಾಪಸು ಬಂದು ಪುಸ್ತಕದಲ್ಲಿ ಕೂರುವುದೂ ಕಷ್ಟ. ಕೆಲವರಿಗೆ ಏಕಾಗ್ರತೆ ಹುಟ್ಟಿನಿಂದ ಸಹಜವಾಗಿ ಬಂದರೆ ಇನ್ನು ಕೆಲವರು ಅದನ್ನು ವಿಕಸನಗೊಳಸಿಕೊಳ್ಳಬೇಕಾಗುತ್ತದೆ. ಹಾಗೆ ಏಕಾಗ್ರತೆಯನ್ನು ಪಡೆಯಲು ಅಥವಾ ಹೆಚ್ಚಿಸಿಕೊಳ್ಳಲು ಕೆಲ ಸರಳೋಪಾಯಗಳು ಇಲ್ಲಿವೆ.

ಒಂದು: ಲೆಕ್ಕ ಹಾಕಿಕೊಳ್ಳಿ.
ದಿನಕ್ಕೆ ಒಂದು ಎಂಬಂತೆ ಕಾರ್ಡ್ ಗಳನ್ನು ತಯಾರು ಮಾಡಿಕೊಳ್ಳಿ. ದಿನಂಪ್ರತಿ ಓದುವ ಸಮಯದಲ್ಲಿ ಕಾರ್ಡ್ ಅನ್ನು ಪಕ್ಕದಲ್ಲಿಟ್ಟುಕೊಳ್ಳಿ. ಪ್ರತೀ ಬಾರಿ ಮನಸ್ಸು ಬೇರೆಡೆ ಹರಿದಾಗ ಕಾರ್ಡ್ ನಲ್ಲಿ ಗುರುತು ಮಾಡಿಕೊಳ್ಳಿ.  ದಿನದ ಕೊನೆಯಲ್ಲಿ ಒಮ್ಮೆ ಯಾವಾಗೆಲ್ಲ ಮನಸ್ಸು ಜಾರಿದೆ ಎಂಬುದನ್ನು ಲೆಕ್ಕ ಹಾಕಿಡಿ. ಒಂದೆರಡು ದಿನ ಈ ರೀತಿ ಅಭ್ಯಾಸ ಮಾಡುತ್ತಿದ್ದಂತೆ ಕಾರ್ಡ್ ನಲ್ಲಿ ಗುರುತುಗಳು ತಾವೇ ತಾವಾಗಿ ಕಡಿಮೆ ಆಗತೊಡಗುತ್ತವೆ. ಮನಸ್ಸು ಸ್ಥಿರವಾಗತೊಡಗುತ್ತವೆ. ಕೇವಲ ಲೆಕ್ಕ ಇಡುವ ಏಕೈಕ ಅಭ್ಯಾಸ ಇಷ್ಟೊಂದು ಕೆಲಸ ಮಾಡುತ್ತದೆ!

ಎರಡು: ಮನಸ್ಸಿನ ವಿಹಾರಕ್ಕಾಗಿಯೇ ಸಮಯ ಮೀಸಲಿಡಿ.
ಮನಸ್ಸು ಕೊಂಚ ವಿಹಾರ ಬಯಸುತ್ತದೆ. ಕನಸ್ಸನ್ನು ಕಾಣಲು ಅದಕ್ಕೂ ಸ್ವಲ್ಪ ಇಂಬು ಬೇಕು. ಸಂಜೆ ಶಾಲೆಯಿಂದ ಬಂದ ನಂತರ ಅಥವಾ ಮಲಗುವ ಮುಂಚೆ ಹಗಲುಗನಸುಗಳಿಗಾಗಿ ಕೊಂಚ ಸಮಯ ಇಟ್ಟರೆ ಓದಿನ ಸಮಯದಲ್ಲಿ ವಿಹಾರ ಮಾಡಲು ಮನಸ್ಸು ಹೆಚ್ಚು ಹಠ ಮಾಡುವುದಿಲ್ಲ.

ಮೂರು: ಡಿಜಿಟಲ್ ಸೆಳೆತಗಳಿಂದ ದೂರ ಇರಿ.
ಮೊಬೈಲ್, ವಾಟ್ಸಪ್, ಫೇಡ್ ಬುಕ್ ಇತ್ಯಾದಿಗಳು ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಇವನ್ನು ದೂರ ಇಟ್ಟಷ್ಟು  ಎಲ್ಲಾ ರೀತಿಯಿಂದಲೂ ಒಳ್ಳೆಯದು. ಸಾಮಾಜಿಕ ತಾಣಗಳಿಂದಾಗಿ ಮಕ್ಕಳ ಮೆದುಳಿನ ಮೇಲೆ ಮ್ತು ಚಿಂತನಾಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗಿರುವುದನ್ನು ಅನೇಕ ಅಧ್ಯಯನಗಳು ಧೃಢಪಡಿಸಿವೆ. ಈ ತಾಣಗಳಿಂದಾಗಿ ಮಕ್ಕಳು ಹೆಚ್ಚು ಸಂಯಮರಹಿತರಾಗಿಯೂ, ಸ್ವಯಂ ಪ್ರತಿಷ್ಟೆಯುಳ್ಳವರಾಗಿಯೂ ವರ್ತಿಸುತ್ತಾರೆ ಎಂದು ಅನೇಕ ಮನಃಶಾಸ್ತ್ರಜ್ಞರು ಹೇಳುತ್ತಾರೆ. ಇವೆರಡೂ ಸಹ ಏಕಾಗ್ರತೆಗೆ ಮಾರಕ!

ನಾಲ್ಕು: ಮೆದುಳಿಗೆ ಹೆಚ್ಚು ಆಮ್ಲಜನಕ ಒದಗಿಸಿ.
ಮೆದುಳು ಚುರುಕಾಗಿ ಕೆಲಸ ಮಾಡಲು ಹೆಚ್ಚಿನ ಆಮ್ಲಜನಕ ಅವಶ್ಯಕ. ಮೆದುಳಿಗೆ ಹೆಚ್ಚಿನ ಆಮ್ಲಜನಕ ಒದಗಿಸಲು ಸಾಕಷ್ಟು ಆಟಗಳಲ್ಲಿ ತೊಡಗುವುದು, ವ್ಯಾಯಾಮ ಮಾಡುವುದು, ಮತ್ಯಾವುದೇ ದೈಹಿಕ ಶ್ರಮದ ಚಟುವಟಿಕೆಗಳಲ್ಲಿ ತೊಡಗಬಹುದು.ಧ್ಯಾನ ಮಾಡುವುದೂ ಸಹ ಏಕಾಗ್ರತೆ ಹೆಚ್ಚಿಸುತ್ತದೆ. ಧ್ಯಾನಕ್ಕಾಗಿ ಸೂಕ್ತ ಸ್ಥಳ ಮತ್ತು ಗುರುವನ್ನು ಆಯ್ಕೆ ಮಾಡಿಕೊಂಡು ಧ್ಯಾನದ ಅಭ್ಯಾಸದಲ್ಲಿ ತೊಡಗಬಹುದು. ದಿನಕ್ಕೆ ಹದಿನೈದು ನಿಮಿಷಗಳ ಧ್ಯಾನ ಬೇಕಾದಷ್ಟಾಗುತ್ತದೆ.
 
ಐದು: ಜೇಡದ ತಂತ್ರ ಬಳಸಿ.
ಒಂದು ಸಣ್ಣ ತಂತಿಯಿಂದಲೋ ಅಥವಾ ಶೃತಿಕವೆಯಿಂದಲೋ ಸದ್ದು ಮಾಡಿ ಜೇಡರ ಬಲೆಯ ಬಳಿ ಇಡಿ. ಮೊದಲನೆಯ ಬಾರಿಗೆ ಜೇಡವು ಸದ್ದೇನೆಂದು ನೋಡಲು ಬರುತ್ತದೆ. ಪದೇ ಪದೇ ಇದೇ ರೀತಿಯ ಸದ್ದು ಮಾಡಿದಾಗ ಜೇಡವು ಹೊರಬಂದು ನೋಡುವುದನ್ನು ನಿಲ್ಲಿಸುತ್ತದೆ. ಈ ರೀತಿಯ ಸದ್ದು ಬಂದಾಗ ಅದು ಕಡೆಗಣಿಸಬೇಕಾದದ್ದು ಎಂದು ಅದಕ್ಕೆ ಗೊತ್ತಾಗಿಹೋಗಿರುತ್ತದೆ. ಇದನ್ನೇ ರೀತಿಯ ತರಬೇತಿಯನ್ನು ನಮ್ಮ ಮೆದುಳಿಗೂ ಕೊಡಬೇಕು. ನಿರಪಾಯಕಾರಿಯಾದ ಸದ್ದುಗಳಾದ ಬಾಗಿಲು ಮುಚ್ಚುವ ಸದ್ದು, ವಾಹನಗಳ ಸದ್ದು, ಅಡುಗೆ ಮನೆ ಸದ್ದು ಇವುಗಳನ್ನೆಲ್ಲ ಕಡೆಗಣಿಸಿ ಓದಬೇಕು. ಸದ್ದು ಬಂದ ಕಡೆ ಮನಸ್ಸನ್ನು ತಿರುಗಿಸುವುದಾಗಲೀ, ತಿರುಗಿ ನೋಡುವುದಾಗಲೀ ಮಾಡಬಾರದು. ಒಂದೆರಡು ದಿನ ಕಷ್ಟವಾಗುತ್ತಾದರೂ ತದನಂತರ ಇದು ಸುಲಭ ಸಾಧ್ಯವಾಗುತ್ತದೆ.

ಆರು: ಹಾಸಿಗೆಯ ಮೇಲೆ ಓದಬೇಡಿ.
ಮೇಜಿರುವುದು ಓದಲು, ಹಾಸಿಗೆಯಿರುವುದು ಮಲಗಲು. ಇದನ್ನು ಅದಲು ಬದಲು ಮಾಡುವುದು ಸಲ್ಲದು. ಹಾಸಿಗೆಯ ಮೆಲಿನ ಓದು ಓದಿನಿಂದ ಮನಸ್ಸನ್ನುದೂರ ಓಡಿಸಲು ಅತ್ಯಂತ ಸಹಾಯಕಾರಿ.

ಏಳು: ಹಿಡಿದದ್ದನ್ನು ಬಿಡಬೇಡಿ.
ಒಂದೇ ಸಮಯದಲ್ಲಿ ಅನೇಕ ಕೆಲಸ ಮಾಡುವುದು ಏಕಾಗ್ರತೆಗೆ ಭಂಗ ತರುತ್ತದೆ. ಒಂದು ಸಮಯಲ್ಲಿ ಒಂದೇ ಕೆಲಸ ಅಥವಾ ಒಂದೇ ವಿಷಯಕ್ಕೆ ಅಂಟಿಕೊಂಡಿರಬೇಕು, ಆ ಕೆಲಸ ಮುಗಿಯುವವರೆ ಗೆ ಬೇಋಎ ವಿಷಯದ ಕಡೆ ಗಮನ ಕೊಡುವುದಾಗಲಿ ಬೇರೆ ಕೆಲಸಕ್ಕೆ ಎದ್ದೇಳುವುದಾಗಲೀ ಮಾಡಬಾರದು. ಆಗ ಅಭ್ಯಾಸ ಮಾಡುತ್ತಿರುವ ವಿಷಯ ಗಟ್ಟಿಯಾಗಿ ತಲೆಯಲ್ಲಿ ಕೂರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com