ನಮ್ಮನ್ನು ಗುಲಾಮಗಿರಿಗೆ ನೂಕಲಿರುವ ಡಿಜಿಟಲ್ ಇಂಡಿಯಾದ ದಡ್ಡತನ ಮತ್ತು ಟೆಲಿಕಾಂ ದೈತ್ಯರ ಹಣದಾಹ

ನೆಟ್ ನ್ಯೂಟ್ರಾಲಿಟಿ ಎಂದರೆ ಪ್ರತಿಯೊಬ್ಬರಿಗೂ ಪ್ರತೀ ಜಾಲತಾಣವೂ ಉಚಿತವಾಗಿ ದೊರಕಬೇಕು. ಸೇವಾದಾತರು ಕೇವಲ ಇಂಟರ್ ನೆಟ್ ಗೆ ಮಾತ್ರ ಹಣ ತೆಗೆದುಕೊಳ್ಳಬೇಕೇ ಹೊರತು...
ನಮ್ಮನ್ನು ಗುಲಾಮಗಿರಿಗೆ ನೂಕಲಿರುವ ಡಿಜಿಟಲ್ ಇಂಡಿಯಾದ ದಡ್ಡತನ ಮತ್ತು ಟೆಲಿಕಾಂ ದೈತ್ಯರ ಹಣದಾಹ
Updated on

ಮಕ್ಕಳೊಡನೆ ಒಂದು ಪಾರ್ಕ್ ಗೆ ಹೋಗುತ್ತೀರಿ. ಅದಕ್ಕೆ ಪ್ರವೇಶ ಶುಲ್ಕ ನೂರು ರೂಪಾಯಿ ಇರುತ್ತದೆ. ಒಳಗೆ ಹೋಗಿ ಜೋಕಾಲಿ ಆಡಲು ಬಯಸಿದರೆ ವಾಚ್ ಮನ್ ಬಂದು ಉಯ್ಯಾಲೆಗೆ ಬೇರೆಯಾಗಿಯೇ ಇಪ್ಪತ್ತು  ರೂಪಾಯಿ ಕೊಡಬೇಕೆಂದು ಕೇಳುತ್ತಾನೆ. ಸರಿ ಹಣ ಕೊಟ್ಟು ಉಯ್ಯಾಲೆ ಆಡತೊಡಗುತ್ತೀರಿ. ಉಯ್ಯಾಲೆ ನಿಧಾನವಾಗಿ ಜೀಕತೊಡಗುತ್ತದೆ. ಜೋರಾಗಿ ಜೀಕಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಜೋರಾಗಿ ಜೀಕಲು ಮತ್ತೆ ಬೇರೆಯಾಗಿ ಹತ್ತು ರೂಪಾಯಿ ತೆರಬೇಕೆಂದು ಪಾರ್ಕ್ ನ ವಾಚ್ ಮನ್ ಹೇಳುತ್ತಾನೆ. ಇದೊಂದು ವಿಚಿತ್ರ ಸುಳಿಗೆ ಸಿಕ್ಕಿಕೊಂಡೆವು ಎನಿಸುವುದಿಲ್ಲವೇ? ಪಾರ್ಕ್ ಒಳಗೆ ಹೋದರೆ ಎಲ್ಲ ಆಟಗಳನ್ನೂ ಆಡಬಹುದು ಎಂದುಕೊಂಡವರಿಗೆ ಇದ್ದಕ್ಕಿದ್ದಂತೆ ಪ್ರತಿ ಹೆಜ್ಜೆಗೂ ಮತ್ತೆ ಮತ್ತೆ ಹಣ ತೆರಬೇಕಾಗಿ ಬಂದಾಗ ಈ ರೀತಿಯ ವ್ಯವಸ್ಥೆ ಶೋಷಣೆಗೊಳಗಾಗುವಂತೆ ಮಾಡುತ್ತದೆ.
  ಇದನ್ನೇ ಇಂಟರ್ ನೆಟ್ ವಿಷಯದಲ್ಲಿ ನೋಡೋಣ. ನಿಮಗೆ ಅತ್ಯಂತ ವಿಶ್ವಾಸಾರ್ಹ ಸುದ್ದಿಯನ್ನು ಕೊಡುವ ಪತ್ರಿಕೆಯನ್ನೋದಲು ಇಷ್ಟ. ಇಂಟರ್ ನೆಟ್ ನಲ್ಲಿ ಈಗ ಲಾಗಿನ್ ಆಗಿ ನಿಮ್ಮಿಷ್ಟದ ಪತ್ರಿಕೆಯನ್ನು ಓದುತ್ತಿದ್ದೀರಿ. ಇನ್ನೊಂದು ಆರ್ಥಿಕವಾಗಿ ಬಲಾಢ್ಯವಾದ ಅಂತರರಾಷ್ಟ್ರೀಯ ಪತ್ರಿಕೆಯೊಂದು ನಿಮ್ಮ ಇಂಟರ್ ನೆಟ್ ಸೇವಾದಾರರಿಗೆ ಹಣ ನೀಡಿ ತಮ್ಮ ಪತ್ರಿಕೆಯನ್ನು ಮಾತ್ರ ತೋರಿಸಬೇಕೆಂದು ಬೇರೆ ಪತ್ರಿಕೆಗಳನ್ನು ತೋರಿಸಬಾರದೆಂದೂ ಅಥವಾ ನಿಧಾನವಾಗಿ ಲೋಡ್ ಆಗುವಂತೆ ಮಾಡಬೇಕೆಂದೂ ಒಪ್ಪಂದ ಮಾಡಿಕೊಳ್ಳುತ್ತವೆ. ಆಗ ನಿಮ್ಮಿಷ್ಟದ ಪತ್ರಿಕೆಯನ್ನು ಓದಲು ನಿಮಗೆ ತೊಂದರೆಯಾಗುತ್ತದೆ. ವೇಗವಾಗಿ ಲೋಡ್ ಆಗುವ ಪತ್ತಿಕೆಯನ್ನೇ ಓದತೊಡಗುತ್ತೀರಿ. ಆಗ ನಿಧಾನವಾಗಿ ಚಿಕ್ಕ ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗಿ ಆ ಪತ್ರಿಕೆಗಳೆಲ್ಲ ಮುಚ್ಚಿಹೋಗುತ್ತವೆ. ಪತ್ರಿಕೆ ಒಂದು ಉದಾಹರಣೆಯಷ್ಟೇ! ಎಲ್ಲ ರೀತಿಯ ವೆಬ್ ಸೈಟ್ ಗಳನ್ನು ಈ ರೀತಿ ಬಲಾಢ್ಯ ಕಂಪನಿಗಳು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.  
  ಇದರ ಇನ್ನೊಂದು ಮುಖವನ್ನು ನೋಡುವುದಾದರೆ ಫೇಸ್ ಬುಕ್ ನ ಮಾಲಿಕ ಮಾರ್ಕ್ ಜುಕೆಂಬರ್ಗ್ ಭಾರತದಲ್ಲಿ ಪ್ರತಿ ವಿದ್ಯಾರ್ಥಿಯು ಇಂಟರ್ ನೆಟ್ ಮೂಲಕ ಜ್ಞಾನಾರ್ಜನೆ ಮಾಡಲು ಅನುಕೂಲವಾಗುವಂತೆ ಪ್ರಧಾನ ಮಂತ್ರಿಗಳ ಜೊತೆ ಒಪ್ಪಂದ ಮಾಡಿಕೊಂಡು internet.org ಎಂಬ ವೆಬ್ ಸೈಟ್ ಅನ್ನು ತೆರೆದಿದ್ದಾರೆ. ಈ internet.org ತಾಣವನ್ನು ತೆರೆಯಲು ಪ್ರಯತ್ನಿಸಿದ್ದೇ ಆದರೆ "ಇದು ರಿಲಯನ್ಸ್ ಇಂಟರ್ ನೆಟ್ ಅನ್ನು ಬಳಸುತ್ತಿರುವವರಿಗೆ ಮಾತ್ರ ಲಭ್ಯವಿದೆ" ಎಂಬ ಸಂದೇಶ ಬರುತ್ತದೆ. ಅಂದರೆ ಈ ಅಧಿಕೃತ ಜಾಲತಾಣದ ಮೂಲಕ ಜ್ಞಾನಾರ್ಜನೆ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಯೂ ರಿಲಯನ್ ಸಂಸ್ಥೆಯ ಮೊರೆ ಹೋಗಬೇಕು! ಇದು ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ತೊಡೆದು ಹಾಕಿ ರಿಲಯನ್ಸ್ ನಂತಹ ದೈತ್ಯರ ಏಕಸ್ವಾಮ್ಯವನ್ನು ಸ್ಥಾಪಿಸುತ್ತದೆ. ಆಮೇಲೆ ಅವರು ಕೊಟ್ಟಿದ್ದನ್ನೇ ನಾವು ಕೈಯೊಡ್ಡಿ ತೆಗೆದುಕೊಳ್ಳಬೇಕು. ಅವರು ಯಾವ ಯಾವ ಜಾಲತಾಣಕ್ಕೆ ಎಷ್ಟು ಹಣ ಕೇಳುತ್ತಾರೋ ಅಷ್ಟು ಹಣ ತೆತ್ತು ತೆಪ್ಪಗಿರಬೇಕು!
ನೆಟ್ ನ್ಯೂಟ್ರಾಲಿಟಿಯು ವಿಶ್ವದ ತಾಂತ್ರಿಕ ಲೋಕದೆದುರಿಗೆ ತಲೆದೋರಿ ನಿಂತಿರುವ ಅತಿ ದೊಡ್ಡ ಸಮಸ್ಯೆ.
 "ನೆಟ್ ನ್ಯೂಟ್ರಾಲಿಟಿ" ಎಂದರೆ ಪ್ರತಿಯೊಬ್ಬರಿಗೂ ಪ್ರತೀ ಜಾಲತಾಣವೂ ಉಚಿತವಾಗಿ ದೊರಕಬೇಕು. ಸೇವಾದಾತರು ಕೇವಲ ಇಂಟರ್ ನೆಟ್ ಗೆ ಮಾತ್ರ ಹಣ ತೆಗೆದುಕೊಳ್ಳಬೇಕೇ ಹೊರತು ಪ್ರತೀ ಜಾಲತಾಣಕ್ಕಲ್ಲ. ಈ ರೀತಿಯ  ನೀತಿಯನ್ನು ಅಮೇರಿಕ ನೆದರ್ಲೆಂಡ್ ನಂತಹ ಅನೇಕ ದೇಶಗಳು ಈಗಾಗಲೇ ಅಳವಡಿಸಿಕೊಂಡಿವೆ. ಡಿಜಿಟಲ್ ಇಂಡಿಯಾ ಜಪ ಮಾಡುತ್ತಿರುವ ಕೇಂದ್ರ ಸರಕಾರವು ಇದಾಗಲೇ ದೈತ್ಯ ಕಂಪನಿಗಳ ಎದುರಿಗೆ ತಲೆಬಾಗುವ ಲಕ್ಷಣಗಳು ಕಾಣುತ್ತಿವೆ. ಮೊದಲು ಈ ಮೇಲ್ ಮುಖಾಂತರ ಜನರ ಅಭಿಪ್ರಾಯಗಳನ್ನು ಆಲಿಸುತ್ತಿದ್ದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಈಗ ನೊಂದಾಯಿತರಿಗೆ ಮಾತ್ರ ಅಭಿಪ್ರಾಯ ದಾಕಲಿಸುವ ಸೌಲಭ್ಯ ಒದಗಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಹೀಗೇಯೇ ಮುಂದುವರಿದಲ್ಲಿ ಪ್ರತೀ ಪ್ರಜೆಯು ಹಣದಾಹಿ ಕಾರ್ಪೊರೇಟ್ ಕಂಪನಿಗಳ ಇಂಟರ್ನೆಟ್ ಗುಲಾಮಗಿರಿಗೆ ಒಳಪಡುವುದರಲ್ಲಿ ಸಂಶಯವಿಲ್ಲ.
 ಈಗಾಗಲೇ ಪ್ರಜೆಗಳ ಅಭಿಪ್ರಾಯವನ್ನು ತೆಗೆದುಕೊಳ್ಳುವುದನ್ನು ಸರಕಾರವು ನಿಲ್ಲಿಸಿದೆಯಾದರೂ ಪ್ರಜೆಗಳ ಹಕ್ಕೊತ್ತಾ ಯದ ಮುಂದೆ ಯಾವ ಸರಕಾರವಾದರೂ ತಲೆಬಾಗಲೇ ಬೇಕು. ಈಗ ನಮ್ಮ ಇಂಟರ್ ನೆಟ್ ಸ್ವಾತಂತ್ರವನ್ನು ಉಳಿಸಿಕೊಳ್ಳಲು ನಾವು ಮಾಡಬೇಕಾದುದೆಂದರೆ mygov.in ಎಂಬ ಕೇಂದ್ರ ಸರಕಾರದ ಜಾಲತಾಣಕ್ಕೆ ಹೋಗಿ ನೊಂದಾಯಿಸಿಕೊಂಡು ಇಂಟರ್ ನೆಟ್ ಸ್ವಾತಂತ್ರದ ಬಗ್ಗೆ ನಮ್ಮ ಅಭಿಪ್ರಾಯ ದಾಖಲಿಸುವುದು. ಪ್ರಧಾನಿಗಳಿಗೆ ಟ್ವೀಟ್ ಮತ್ತು ಇ ಮೇಲ್ ಗಳ ಮುಖಾಂತರ ನಮಗೆ ಇಂಟರ್ ನೆಟ್ ಸ್ವಾತಂತ್ರ ಬೇಕೆಂದು ಒತ್ತಾಯ ಮಾಡಿ ಪತ್ರ ಬರೆಯುವುದು.
 ಸರಕಾರಕ್ಕೆ ಹಕ್ಕೊತ್ತಾಯ ಮಾಡುವಾಗ ಸ್ಪಷ್ಟವಾಗಿ "ನಮಗೆ ಇಂಟರ್ ನೆಟ್ ಎಲ್ಲಾ ರೀತಿಯಲ್ಲೂ ಎಲ್ಲಾ ಮಾದರಿಯಲ್ಲೂ ಉಚಿತವಾಗಿ ಬೇಕು. ಇಂಟರ್ ನೆಟ್ ಸಂಪರ್ಕ ತೆಗೆದುಕೊಂಡವರಿಗೆ ಮತ್ತೆ ಯಾವುದೇ ಕಾರಣಕ್ಕೂ ಪ್ರತ್ಯೇಕ ದರ ವಿಧಿಸುವಂತಿಲ್ಲ. ಇದು ಇಂಟರ್ ನೆಟ್ ನ ಮುಖಾಂತರ ಉಚಿತವಾಗಿ ಕರೆ ಮಾಡಲೂ ಅನ್ವಯಿಸಬೇಕು" ಎಂದು ವಿವರವಾಗಿ ಬರೆಯೋಣ. ಈ ವಿಷಯವನ್ನು ಸಾಧ್ಯವಾದಷ್ಟು ಹೆಚ್ಚು ಬಳಕೆದಾರರಿಗೆ, ಸಹೋದ್ಯೋಗಿಗಳಿಗೆ, ಗೆಳೆಯರಿಗೆ, ಬಂಧುಗಳಿಗೆ ತಿಳಿಸಿ ಹೆಚ್ಚು ಹಕ್ಕೊತ್ತಾಯದ ಪತ್ರಗಳು ಸರಕಾರವನ್ನು ತಲುಪುವಂತೆ ಮಾಡೋಣ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com