ಎಲ್ಲರ ಮೆಚ್ಚಿನ ಬ್ಲೂಟೂತ್ ಬಗ್ಗೆ ಒಂದಿಷ್ಟು!

ಮೊಬೈಲ್ ಬಳಕೆದಾರರಿಗೆ ಬ್ಲೂಟೂತ್ ಚಿರಪರಿಚಿತ. ವೈರ್ ಮುಖಾಂತರ ಸ್ಪೀಕರ್ ಗಳನ್ನು ಕಿವಿಗೆ ಸಿಕ್ಕಿಸಿಕೊಳ್ಳುವುದರಿಂದ ಮುಕ್ತಿ ದೊರಕಿಸಿಕೊಟ್ಟ ತಂತ್ರಜ್ಞಾನ...
ಬ್ಲೂಟೂತ್
ಬ್ಲೂಟೂತ್
ಮೊಬೈಲ್ ಬಳಕೆದಾರರಿಗೆ ಬ್ಲೂಟೂತ್ ಚಿರಪರಿಚಿತ. ವೈರ್ ಮುಖಾಂತರ ಸ್ಪೀಕರ್  ಗಳನ್ನು ಕಿವಿಗೆ ಸಿಕ್ಕಿಸಿಕೊಳ್ಳುವುದರಿಂದ ಮುಕ್ತಿ ದೊರಕಿಸಿಕೊಟ್ಟ ತಂತ್ರಜ್ಞಾನ. ಬ್ಲೂಟೂತ್ ಕೇವಲ ಕಿವಿಗೆ ಹಾಕುವ ಸ್ಪೀಕರ್ ಗಳಿಗೆ ಮಾತ್ರ ಸೀಮಿತವಾಗಿಲ್ಲ, ಕೀಬೋರ್ಡ್, ಮೌಸ್, ಲ್ಯಾಪ್ ಟಾಪ್ ಗಳೆಲ್ಲ ಬ್ಲೂಟೂತ್ ಸನ್ನದ್ಧವಾಗಿ ಬರುತ್ತಿವೆ. ನಮ್ಮ ಗ್ಯಾಜೆಟ್ ಗಳ ಅತ್ಯಂತ ಅನಿವಾರ್ಯ ಅಂಗವಾಗಿ ಹೋಗಿದೆ ಬ್ಲೂಟೂತ್!
 ಬ್ಲೂಟೂತ್ ಅನ್ನು ಮೊದಲು ಅಭಿವೃದ್ಧಿ ಪಡಿಸಿದ್ದು ಸ್ವೀಡಿಷ್ ಕಂಪನಿಯಾದ ಎರಿಕ್ಸನ್. ಭಾರತದಲ್ಲಿ ಇದು ಜಪಾನಿನ ಸೋನಿ ಕಂಪನಿಯ ಜೊತೆ ಸೇರಿಕೊಂಡು ಸೋನಿ ಎರಿಕ್ಸನ್ ಹೆಸರಿನಲ್ಲಿ ಮೊಬೈಲ್ ಅನ್ನು ಮಾರಾಟ ಮಾಡುತ್ತಿದೆ. ಬ್ಲೂಟೂತ್ ಎಂಬ ಹೆಸರನ್ನು ಡ್ಯಾನಿಶ್ ರಾಜ ಹೆರಾಲ್ಡ್ ಬ್ಲಾಟೆಂಡ್ ನ ಗೌರವಾರ್ಥ ಇಡಲಾಗಿದೆ. ಹತ್ತನೆಯ ಶತಮಾನದ ಈ ಡ್ಯಾನಿಶ್ ರಾಜ ನಾರ್ವೆ ಮತ್ತು ಡೆನ್ಮಾರ್ಕ್ ಅನ್ನು ಒಂದುಗೂಡಿಸಿ ಆಳಿದವನು. ಐತಿಹಾಸಿಕ ಕಥೆಗಳ ಪ್ರಕಾರ ಈತ ಅತ್ಯುತ್ತಮ ಮುತ್ಸದಿಯಾಗಿದ್ದ. ಜಗತ್ತಿನ ಯಾರನ್ನೇ ಆದರೂ ತನ್ನೆದುರಿಗೆ ಕೂರಿಸಿ ಒಂದು ಒಪ್ಪಂದಕ್ಕೆ ಬರುವಂತೆ ಮಾಡುವ ಸಾಮರ್ಥ್ಯ ಮತ್ತು ಜಾಣತನ ಈತನಿಗಿತ್ತು. ಹಾಗಾಗಿಯೇ ಈತ ತನ್ನ ಆಳ್ವಿಕೆಯಲ್ಲಿ ವಿವಿಧ ಭೌಗೋಳಿಕ ವ್ಯಾಪ್ತಿಯ ಜನರನ್ನು ಮತ್ತು ನೆಲವನ್ನು ತನ್ನ ನಾಡಿನಲ್ಲಿ ಕೂಡಿಸಿಕೊಂಡ. ಡ್ಯಾನಿಶ್ ನುಡಿಯಲ್ಲಿ "ಬ್ಲಾಟೆಂಡ್" ಅಂದರೆ ನೀಲಿ ಹಲ್ಲು ಎಂದರ್ಥ! ನಮ್ಮಲ್ಲಿ ಮೆಣಸಿನಕಾಯಿ, ಹಿತ್ತಲಮನಿ ಎಂದು ಹೆಸರಿಟ್ಟುಕೊಳ್ಳುವಂತೆ ಡೆನ್ಮಾರ್ಕಿನ ಜನ ನೀಲಿ ಹಲ್ಲು, ಕೆಂಪು ಕೆನ್ನೆ ಎಂದೆಲ್ಲ ಹೆಸರಿಟ್ಟುಕೊಳ್ಳುತ್ತಾರೇನೋ! ಹಾಗೆಯೇ ರಾಜ ಬ್ಲಾಟೆಂಟ್ ನ ಹೆಸರನ್ನು ಇಂಗ್ಲೀಷೀಕರಿಸಿ 'ಬ್ಲೂಟೂತ್' ಎಂದು ಹೆಸರಿಸಲಾಯಿತು.
 ಹಾಗೂ ಬ್ಲೂಟೂತ್ ಮಾಡುವುದೂ ಸಹ ಬ್ಲಾಟೆಂಟ್ ನ ಕೆಲಸವನ್ನೇ! ಇದು ಅನೇಕ ಬೇರೆ ಬೇರೆ ರೀತಿಯ ಸಲಕರಣೆಗಳನ್ನು ಜೋಡಿಸುತ್ತದೆ. ಬೇರೆ ಬೇರೆ ರೀತಿಯ ಕೆಲಸವನ್ನು ಮಾಡುವ ಈ ಸಲಕರಣೆಗಳು ಬ್ಲೂಟೂತ್ ನ ಮಧ್ಯಸ್ತಿಕೆಯಲ್ಲಿ ಒಂದು ಗೂಡುತ್ತವೆ. ಸಮಾನ ಗುರಿಗಳಿಗಾಗಿ ಕೆಲಸ ಮಾಡುತ್ತವೆ. ಬ್ಲೂಟೂತ್ ಎಂಬುದು ಒಂದು ಪ್ರೊಟೋಕಾಲ್ ಅಂದರೆ ವೈರ್ ಲೆಸ್ ಸಂಪರ್ಕವನ್ನು ಏರ್ಪಡಿಸುವ ನಿಯಮಾವಳಿ.  ಸಲಕರಣೆ ಯಾವುದೇ ಕೆಲಸಕ್ಕಾಗಿ ರೂಪಿತಗೊಂಡಿದ್ದರೂ ಬೇರೆ ಸಲಕರಣೆಯನ್ನು ಒಂದಲ್ಲ ಒಂದು ಕಾರಣಕ್ಕಾಗಿ ಸಂಪರ್ಕಿಸಲೇಬೇಕು. ಸಂಪರ್ಕಿಸುವಾಗ ಬ್ಲೂಟೂತ್ ನಲ್ಲಿ ಮಾಡಿಟ್ಟ ನಿಯಮಾವಳಿಗಳನ್ನು ಎಲ್ಲ ಸಲಕರಣೆಗಳು ಪಾಲಿಸುತ್ತವೆ. 
 ಬ್ಲೂಟೂತ್ ಒಂದು ಸಲಕರಣೆಗಳ ನಡುವಿನ ಮಾತುಕತೆಗಾಗಿ ವರ್ ಲೆಸ್ ಸಂಪರ್ಕ ಭಾಷೆ ಅಥವಾ ನಿಯಮಾವಳಿ. ಬ್ಲೂಟೂತ್ ನಲ್ಲಿ ಎರಡು ಬಗೆಯ ಸಂವಹನ ಸಾಧ್ಯವಿದೆ. ಒಮ್ಮುಖ ಸಂಭಾಷಣೆ, ದ್ವಿಮುಖ ಸಂಭಾಷಣೆ (Half Duplex and Full Duplex Communication). ಒಮ್ಮುಖ ಸಂಭಾಷಣೆಯಲ್ಲಿ ಸಲಕರಣೆಯು ಒಂದೋ ಸಂದೇಶವನ್ನು ಸ್ವೀಕರಿಸುತ್ತದೆ ಅಥವಾ ಕಳಿಸುತ್ತದೆ. ದ್ವಿಮುಖ ಸಂಭಾಷಣೆಯ ಸಾಮರ್ಥ್ಯ ಪಡೆದ ಸಲಕರಣೆಗಳು ಕಳಿಸುವುದು ಮತ್ತು ಸ್ವೀಕರಿಸುವುದು ಎರಡನ್ನೂ ಮಾಡಬಲ್ಲವು. 
 ಬ್ಲೂಟೂತ್ ಮೂಲಕ ಕಳಿಸುವ ಸಂದೇಶಗಳು ಬೇರೆ ವೈರ್ ಲೆಸ್ ಸಂದೇಶಗಳಂತೆ ನಡುನಡುವೆ ಭಂಗಗೊಳ್ಳುವುದಾಗಲೀ ವಿರೂಪಗೊಳ್ಳುವುದಾಗಲೀ ಆಗುವುದಿಲ್ಲ. ಬ್ಲೂಟೂತ್ ವೈರ್ ಲೆಸ್ ನ ಸದ್ದು ಬಹುತೇಕ ಸ್ಪಷ್ಟವಾಗಿರುತ್ತವೆ. ಇದಕ್ಕೆ ಕಾರಣ ಬ್ಲೂಟೂತ್ ನಲ್ಲಿ ಸ್ಪ್ರೆಡ್ ಸ್ಪೆಕ್ಟ್ರಮ್ ಫ್ರೀಕ್ವೆನ್ಸಿ ಹಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅಂದರೆ ಬ್ಲೂಟೂತ್ 2.4 ರಿಂದ 2.85 ಗಿಗಾಹರ್ಟ್ಸ್ ಗಳ  ತರಂಗಾಂತರ (frequency) ಯಲ್ಲಿ ಕೆಲಸ ಮಾಡುತ್ತದೆ. ಒಂದು ಉದಾಹರಣೆ ನೋಡುವ. ಸಂದೇಶವು ಆಡಿಯೋ,ವಿಡಿಯೋ, ಚಿತ್ರ ಇನ್ನಾವುದೇ ರೂಪದಲ್ಲಿರಬಹುದು. ಸಂದೇಶ ಕಳಿಸುವ ಮುಂಚೆ ಸಂದೇಶವನ್ನು ಸಾವಿರಾರು ಭಾಗಗಳಾಗಿ ವಿಭಜಿಸಲಾಗುತ್ತದೆ. ಮೊದಲನೆಯ ಭಾಗವನ್ನು 2.4 ಗಿಗಾಹರ್ಟ್ಸ್ ಗಳ ತರಂಗಾಂತರದಲ್ಲಿ ಕಳಿಸಲಾದರೆ ಎರಡನೆಯ ಭಾಗವನ್ನು 2.432 ಗಿಗಾಹರ್ಟ್ಸ್ ಗಳ ತರಂಗಾಂತರದಲ್ಲಿ, ಮೂರನೆಯ ಭಾಗವನ್ನು 2.543 ಗಿಗಾಹರ್ಟ್ಸ್ ಗಳ ತರಂಗಾಂತರದಲ್ಲಿ ಹೀಗೆ ಸಾವಿರಾರು ತರಂಗಾಂತರಗಳಲ್ಲಿ ಕಳಿಸಲಾಗುತ್ತದೆ. ಹೀಗೆ ತರಂಗಾಂತರವನ್ನು ಬದಲಿಸಿ ಕಳಿಸುವ ತಂತ್ರಜ್ಞಾನವನ್ನು ಫ್ರೀಕ್ವೆನ್ಸಿ ಹಾಪಿಂಗ್ ಎನ್ನುತ್ತಾರೆ. ಕನ್ನಡದಲ್ಲಿ ಅಲೆಜಿಗಿತ ಎನ್ನಬಹುದು. ಬಹುತೇಕ ಸಮಯದಲ್ಲಿ ನಮ್ಮ ಸಂದೇಶವನ್ನು ವಿರೂಪಗೊಳಿಸುವ ಕಲ್ಮಷವು (noise) ಯಾವುದೋ ಒಂದು ತರಂಗಾಂತರಕ್ಕೆ ಮಾತ್ರ ಹಾನಿಮಾಡುತ್ತದೆ. ಕಳಿಸುವ ಸಂದೇಶದ ಸಾವಿರ ಭಾಗಗಳಲ್ಲಿ ಒಂದೋ ಅಥವಾ ಎರಡೋ ಭಾಗಕ್ಕೆ ಹಾನಿಯಾದರೆ ಸಂದೇಶದ ಮೂಲ ರೂಪದಲ್ಲಿ ಯಾವುದೇ ವ್ಯತ್ಯಾಸವುಂಟಾಗುವುದಿಲ್ಲ. ಮತ್ತೆ ಸರಿಯಾಗಿ ಸಂದೇಶವನ್ನು ಪುನರ್ನಿರ್ಮಿಸುವ ಕೆಲಸವನ್ನು ಸಂದೇಶ ಪಡೆದ ಸಲಕರಣೆಗಳು ಮಾಡಿಕೊಳ್ಳುತ್ತವೆ. ಹಾಗಾಗಿ ಬ್ಲೂಟೂತ್ ಮೂಲಕ ಕಳಿಸುವ ಸಂದೇಶಗಳು ಅತ್ಯಂತ ಸ್ಪಷ್ಟವಾಗಿರುತ್ತವೆ.
 ಇದಲ್ಲದೇ ಬ್ಲೂಟೂತ್ ಅತೀ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ. ಹಾಗೂ ಇದು ಅತಿ ಸಣ್ಣ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತವೆ. ದೊಡ್ಡದೊಡ್ಡ ಕೈಗಾರಿಕೆಗಳಲ್ಲೂ ಬ್ಲೂಟೂತ್ ಬಳಕೆಯ ವ್ಯಾಪ್ತಿ ಮುನ್ನೂರು ಅಡಿಗಳನ್ನು ದಾಟುವುದಿಲ್ಲ! ಬ್ಲೂಟೂತ್ ಎಲ್ಲ ವೈರ್ ಲೆಸ್ ಪ್ರೋಟೋಕಾಲ್ ಗಳ ಪೈಕಿ ಅತ್ಯಂತ ಸಂಕೀರ್ಣವಾದುದು. ಆದರೆ ಇದರ ಸಾಮರ್ಥ್ಯ ಅತ್ಯಧಿಕ. ಸಂದೇಶವನ್ನು ಕಳಿಸುವ ವೇಗ ಮತ್ತು ಪ್ರಮಾಣ ಹೆಚ್ಚು. ದತ್ತಾಂಶಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಕಡಿಮೆ ಶಕ್ತಿಯನ್ನು ಬಳಸುತ್ತದೆ. ಹಾಗಾಗಿಯೇ ಬ್ಲೂಟೂತ್ ಎಂಬುದು ಡಿಜಿಟಲ್ ಲೋಕದ ಮೆಚ್ಚಿನ ವೈರ್ ಲೆಸ್ ಪ್ರೋಟೋಕಾಲ್! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com