ಆರ್ ಟಿ ಇ
ಆರ್ ಟಿ ಇ

ಪಾಳು ಬೀಳುತ್ತಿರುವ ಸರಕಾರಿ ಶಾಲೆಗಳೂ, ಶಾಪವಾಗುತ್ತಿರುವ RTE ಎಂಬ ವರದಾನವೂ..!

ಶಿಕ್ಷಣ ಕ್ಷೇತ್ರವು ಮಾಫಿಯಾ ಆಗಿ ಬದಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ! ಗಲ್ಲಿಗೊಂದು ಬೀದಿಗೊಂದರಂತೆಂಬಂತೆ ಶಾಲೆಗಳು...
Published on
 ಶಿಕ್ಷಣ ಕ್ಷೇತ್ರವು ಮಾಫಿಯಾ ಆಗಿ ಬದಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ!  ಗಲ್ಲಿಗೊಂದು ಬೀದಿಗೊಂದರಂತೆಂಬಂತೆ ಶಾಲೆಗಳು,ಇಂಟರ್ ನ್ಯಾಷನಲ್ ಶಾಲೆಗಳು, ಸಿ ಬಿ ಎಸ್ ಸಿ ಶಾಲೆಗಳು ತಲೆ ಎತ್ತುತ್ತಿವೆ. ಹೆಚ್ಚಿನ ಪ್ರತಿಷ್ಟೆಗೆ ತಕ್ಕಂತೆ ಶಾಲೆಗಳಿಗೆ ಮಕ್ಕಳನ್ನು ಸೇರಿಸಲಾಗುತ್ತಿದೆ.
 ಆದರೆ ಕಣ್ಣಿಗೆ ಕಾಣುವ ಸತ್ಯವೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲು ಶೇ.11 ರಷ್ಟು ಮಾತ್ರ! ಉಳಿದ ಹೊಣೆಗಾರಿಕೆಯೆಲ್ಲ ಇನ್ನೂ ಸರಕಾರಿ ವಲಯದಲ್ಲೇ ಇದೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಸರಕಾರದ ಜವಾಬ್ದಾರಿ ತೀರಾ ಹೆಚ್ಚಿನದ್ದು. ಆದರೆ ಈ ಹೊಣೆಗಾರಿಕೆಯನ್ನು ನಿಭಾಯಿಸಲು ಸರಕಾರ ಸಾಕಷ್ಟು ಕಾರಣಗಳಿಂದಾಗಿ ವಿಫಲವಾಗುತ್ತಿದೆ. ಶಿಕ್ಷಣ ಕ್ಷೇತ್ರವು ಒಂದು ವಿಶೇಷವಾಗಿ ಗಮನ ನೀಡಬೇಕಾದ ಕ್ಷೇತ್ರ ಎಂದು ಸರಕಾರಕ್ಕೆ ಅನಿಸುತ್ತಲೇ ಇಲ್ಲ. ಕೇಂದ್ರ ಸರಕಾರಗಳಿಗೆ ಶಿಕ್ಷಣವು ತಮ್ಮ ಪಕ್ಷಗಳ ತತ್ವಗಳನ್ನು ಮುಟ್ಟಿಸುವ ಮಾಧ್ಯಮವಾಗಿ ಶಿಕ್ಷಣ ಕ್ಷೇತ್ರವು ಬಳಕೆಯಾಗುತ್ತಿದೆ. ಕೇಂದ್ರ ಸರಕಾರವು ಇನ್ನೂ ಶಿಕ್ಷಣ ಕ್ಷೇತ್ರವನ್ನು ಮಾನವ ಸಂಪನ್ಮೂಲ ಇಲಾಖೆಯ ಒಂದು ಭಾಗವನ್ನಾಗಿ ಇರಿಸಿದೆ. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಡುವ ದೇಶಗಳು ಒಳ್ಳೆಯ ಅಭಿವೃದ್ಧಿ ಪಥದಲ್ಲಿ ಚಲಿಸಿವೆ ಎಂಬುದು ತಿಳಿಯದ್ದೇನಲ್ಲ. ಭಾರತದಲ್ಲಿ ಇನ್ನೂ ಶೇ.40 ರಷ್ಟು ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಅಂದಾಜಿದೆ.
 ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ತಕ್ಕಂತೆ ಶಿಕ್ಷಣಕ್ಕೆ ಬೇಡಿಕೆಗಳನ್ನು ಪೂರೈಸುವಲ್ಲಿ ಸರಕಾರ ವಿಫಲವಾಗುತ್ತಿದೆ. ಪ್ರಾಥಮಿಕ ಶಿಕ್ಷಣಕ್ಕೆ ಮೀಸಲಾಗಿಡುವ ಹಣ ತೀರಾ ಕಡಿಮೆ. ಸರಕಾರಿ ಶಾಲೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ಶೇ.60 ರಷ್ಟು ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ ಮತ್ತು ಆಟದ ಮೈದಾನಗಳಿಲ್ಲ. 
ಶೌಚಾಲಯಗಳಿಲ್ಲದಿರುವುದು ಹೆಣ್ಣುಮಕ್ಕಳು ಶಾಲೆ ತೊರೆಯುವ ಪ್ರಮುಖ ಕಾರಣಗಳಲ್ಲೊಂದು ಎಂಬುದು ಇತ್ತಿಚಿನ ಸಮೀಕ್ಷೆಗಳಲ್ಲಿ ತಿಳಿದು ಬಂದಿದೆ. ಶಿಕ್ಷಣ ಇಲಾಖೆಯು ಹೊರಡಿಸಿರುವ ಕಾಯಿದೆಯ ಪ್ರಕಾರ ಕಡ್ಡಾಯವಾಗಿ ಶಾಲೆಗಳು ಹೊಂದಿರಲೇ ಬೇಕಾದ ಒಂಬತ್ತು ಸೌಲಭ್ಯಗಳನ್ನು ಹೊಂದಿರುವ ಶಾಲೆಗಳು ಶೇ.5 ಕ್ಕಿಂತ ಕಡಿಮೆ. ಇವುಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೂ ಸೇರಿವೆ.  ಬಹುತೇಕ ಶಿಕ್ಷಕರಿಗೆ ಸರಿಯಾದ ತರಬೇತಿ ಇರುವುದಿಲ್ಲ. ಶಾಲೆಗಳಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆಯ ಕೊರತೆ, ಶೌಚಾಲಯ, ಮಕ್ಕಳಿಗೆ ಪುಸ್ತಕದ ಕೊರತೆಗಳು ಶಿಕ್ಷಣಕ್ಕೆ ಅತಿ ದೊಡ್ಡ ಹೊಡೆತವನ್ನು ನೀಡುತ್ತಿವೆ. 
 ಖಾಸಗಿ ವಲಯವನ್ನು ಬಳಸಿಕೊಂಡು ಎಲ್ಲರಿಗೂ ಶಿಕ್ಷಣವನ್ನು ತಲುಪಿಸುವ RTE ಅನ್ನು ಜಾರಿಗೆ ತಂದಿತು.  ಈ RTE ಇಂದಾಗಿ ಎಲ್ಲರಿಗೂ ಶಿಕ್ಷಣ ಪಡೆಯಲು ಸಮಾನ ವೇದಿಕೆ ಕಲ್ಪಿಸಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅದು ಪಡೆದ ತಿರುವೇ ಬೇರೆ. ಸರಕಾರಿ ಶಾಲೆಗಳಿಗೆ ಪರ್ಯಾಯವಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿದ್ದವು. ಇವು ವರ್ಷಕ್ಕೆ ಇನ್ನೂರು ರೂಪಾಯಿಯಿಂದ ಐನೂರು ರೂಪಾಯಿಗಳ ಕಡಿಮೆ ಶುಲ್ಕದಲ್ಲಿ ಶಿಕ್ಷಣವನ್ನು ನೀಡುತ್ತಿದ್ದವು. ಸರಕಾರಿ ಶಾಲೆಗಳಿಲ್ಲದ ಊರುಗಳಲ್ಲಿ ಇವು ಬಡಮಕ್ಕಳಿಗೆ ವರದಾನವಾಗಿ ಪರಿಣಮಿಸಿದ್ದವು. ಆರ್ ಟಿ ಇ ಬಂದ ನಂತರ ಈ ರೀತಿಯ ಸುಮಾರು ಐದು ಸಾವಿರ ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ಹೇಳಲಾಗಿದೆ. ಅನೇಕ ಕಡೆಗಳಲ್ಲಿ ದೂರದ ಊರಿಗೆ ಪ್ರಯಾಣ ಮಾಡಿ ಮತ್ತೆ ಸರಕಾರಿ ಶಾಲೆಗಳಲ್ಲೇ ದಾಖಲು ಪಡೆಯಬೇಕಿದೆ. ಖಾಸಗಿ ಶಾಲೆಗಳಲ್ಲಿ RTE ಸೌಲಭ್ಯ ಪಡೆದು ದಾಖಲು ಮಾಡಬೇಕೆಂದರೆ ವಿದ್ಯಾರ್ಥಿಯ ಮನೆ ಮೂರು ಕಿಮೀ ಒಳಗೆ ಇರಬೇಕು ಮತ್ತು ಎಲ್ ಕೆ ಜಿ ಯಿಂದ ಮಾತ್ರ ದಾಖಲು ಪಡೆಯಬೇಕು ಎಂಬ ನಿಯಮ ಬೇರೆ ಇರುವುದರಿಂದ ಈ ದಾಖಲಾತಿ ಖಾಸಗಿ ಶಾಲೆಗಳಲ್ಲಿ ತೀರಾ ಕಡಿಮೆಯಿದೆ ಮತ್ತು ಅವಶ್ಯಕತೆ ಇರುವವರಿಗೆ ಈ ಸೌಲಭ್ಯ ಮುಟ್ಟುತ್ತಿಲ್ಲ.
  ಅನೇಕ ಕಡೆ ಖಾಸಗಿ ಶಾಲೆಗಳಲ್ಲಿ ಈ ಪ್ರಕಾರ ದಾಖಲಾತಿ ಸಿಗುತ್ತಿರುವುದರಿಂದ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಕೊರತೆಯುಂಟಾಗಿ ಸರಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. RTE ಪ್ರಕಾರ ದಾಖಲಾತಿ ತಗೆದುಕೊಳ್ಲುತ್ತಿರುವ ಬಹುತೇಕ ಸಾಲೆಗಳಲ್ಲಿ ತರಬೇತಿ ಪಡೆದ ನುರಿತ ಶಿಕ್ಷಕರುಗಳಿಲ್ಲ ಹಾಗೂ ಸೂಕ್ತ ಕಲಿಕೆಯ ಸೌಲಭ್ಯಗಳಿಲ್ಲದಿರುವುದರಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
  ಒಂದು ದೇಶದ ಪ್ರಗತಿ ಶಿಕ್ಷಣದ ಮೇಲೆಯೇ ಅವಲಂಬಿತವಾಗಿ ನಿಂತಿದೆ ಎಂಬುದರ ಬಗ್ಗೆ ಎರಡು ಮಾತಿಲ್ಲ ಪ್ರಾಥಮಿಕ ಶಿಕ್ಷಣಕ್ಕೆ ಅತಿಯಾದ ಪ್ರಾಮುಖ್ಯತೆ ಕೊಟ್ಟು ಯಶಸ್ವಿಯಾಗಿರುವ ಸ್ವೀಡನ್ ನಂತಹ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿ ಆಳವಾಗಿ ಯೋಚಿಸಬೇಕಿದೆ.RTE ಎಂಬ ವರದಾನವನ್ನು ಎಲ್ಲರಿಗೂ ತಲುಪಿಸುವ ಮರು ವ್ಯವಸ್ಥೆ ಆಗಬೇಕಿದೆ! 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com