ಮಕ್ಕಳನ್ನು ಮಕ್ಕಳಾಗಿರಲು ಬಿಡಿ..!

ಇತ್ತೀಚಿನ ದಿನಪತ್ರಿಕೆಯೊಂದರಲ್ಲಿ ಶಿಕ್ಷಣ ಮಾಫಿಯಾವನ್ನು ನಿಯಂತ್ರಿಸಲು ಪ್ರಜೆಗಳೇ ಮುಂದಾಗಬೇಕು ಎಂದು...
ಮಕ್ಕಳನ್ನು ಮಕ್ಕಳಾಗಿರಲು ಬಿಡಿ..!

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಕಲಿಕೆಯ ದೃಷ್ಟಿಗಿಂತ ಹೆಚ್ಚಾಗಿ ತಮ್ಮ ಪ್ರತಿಷ್ಟೆಯ ದೃಷ್ಟಿಯಿಂದ ಸೇರಿಸುತ್ತಾರೆ ಎನಿಸುತ್ತದೆ. ಅತಿ ಪ್ರತಿಷ್ಠಿತ ಶಾಲೆಗಳಲ್ಲಿ ಓದುವ ಮಕ್ಕಳ ತಂದೆತಾಯಂದಿರ ಗೋಳುಗಳು ಎಂದೂ ಸಹ ಮುಗಿಯದವು. ಮಕ್ಕಳ ಬೆಳವಣಿಗೆಗಾಗಿ ಅವರು ಹೆಚ್ಚು ಖರ್ಚು ಮಾಡಲು ಹೆಚ್ಚು ದುಡಿಯುತ್ತಾರೆ. ದುಡಿಮೆಗಾಗಿ ಹೆಚ್ಚು ಸಮಯವನ್ನು ಮನೆಯಿಂದ ಹೊರಗೆ ಕಳೆಯುತ್ತಾರೆ. ಅತಿಯಾದ ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಪೋಷಕರು ಎಷ್ಟು ಒತ್ತಡಕ್ಕೆ ಒಳಗಾಗುತ್ತಾರೋ ತಂದೆತಾಯಿಯರ ಪ್ರತಿಷ್ಟೆಗಾಗಿ ಮಕ್ಕಳೂ ಅದಕ್ಕಿಂತ ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

ಇತ್ತೀಚಿನ ದಿನಪತ್ರಿಕೆಯೊಂದರಲ್ಲಿ ಶಿಕ್ಷಣ ಮಾಫಿಯಾವನ್ನು ನಿಯಂತ್ರಿಸಲು ಪ್ರಜೆಗಳೇ ಮುಂದಾಗಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಕರೆ ನೀಡಿದ್ದ ವರದಿಯನ್ನು ಪ್ರಕಟಿಸಲಾಗಿತ್ತು. ಅಂದರೆ ಶಿಕ್ಷಣ ಮಾಫಿಯಾ ಎಂಬುದು ಕಾನೂನಿನಿಂದಲೂ ಅಧಿಕಾರಸ್ಥರಿಂದಲೂ ನಿಯಂತ್ರಣಕ್ಕೆ ತಾರದಷ್ಟು ಅಸಡ್ಡಾಳವಾಗಿ ಬೆಳೆದಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿತ್ತು. ಒಂದು ಮಟ್ಟಿಗೆ ಅದು ನಿಜವೂ ಹೌದು. ಪೋಷಕರುಗಳೇ ತಮ್ಮ ಪ್ರತಿಷ್ಟೆಗಾಗಿ ಶಿಕ್ಷಣ ಸಂಸ್ಥೆಗಳ ಮುಂದೆ ಬೇಡಿಕೆಗಳನ್ನು ಇಡುತ್ತಿರುವಾಗ, ಮಕ್ಕಳನ್ನು ಕೇಳಿದ ಶುಲ್ಕವನ್ನು ತೆತ್ತು ಓದಿಸಲು ಸಿದ್ಧವಾಗಿರುವಾಗ ಈ ಬೇಡಿಕೆಯನ್ನು ನಗದೀಕರಿಸಲು ಶಿಕ್ಷಣ ಸಂಸ್ಥೆಗಳು ಕಾಯುತ್ತಲೇ ಇರುತ್ತವೆ.

 ಮಕ್ಕಳಿಗೆ ಅತೀ ಹೆಚ್ಚು ಒತ್ತಡವನ್ನು ನಿರ್ಮಿಸಿದಷ್ಟು ಪೋಷಕರ ಕಡೆಯಿಂದ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಹಾಗಾಗಿ ಮಕ್ಕಳಿಗೆ ಹೆಚ್ಚು ಕೆಲಸ ನೀಡುವುದು, ಅವರ ವಯಸ್ಸಿಗೆ ಮೀರಿ ಕಲಿಯುವಂತೆ ಪಠ್ಯಗಳನ್ನು ಇಡುವುದು, ವಯಸ್ಸಿಗೆ ಒಪ್ಪುವ ಕಲಿಕೆಗಿಂತ ಹೆಚ್ಚಾಗಿ ನಿರೀಕ್ಷಿಸುವುದು ನಡೆಯುತ್ತವೆ. ಇವು ಮಕ್ಕಳಿಂದ ಅಮೂಲ್ಯವಾದ ಬಾಲ್ಯವನ್ನು ಕಸಿಯುತ್ತವೆ. ಮುಗ್ಧತೆಯನ್ನು ಕಸಿಯುತ್ತವೆ.  ಶಿಕ್ಷಣ ಸಂಸ್ಥೆಗಳ ಹಣದಾಹ ಮತ್ತು ಪೋಷಕರ ಪ್ರತಿಷ್ಟೆಯ ಆಸೆಗೆ ಮಕ್ಕಳ ಕಲಿಕೆ ಬಲಿಯಾಗುತ್ತಿರುವುದು ದೊಡ್ಡ ದುರಂತವೇ ಸರಿ.

  ಹಿಂದೆಲ್ಲ ಮಗ್ಗಿಗಳ ಕಲಿಕೆ ಮಕ್ಕಳಿಗೆ ಶುರುವಾಗುತ್ತಿದ್ದುದೆ ಏಳು ಅಥವಾ ಎಂಟನೆಯ ವರ್ಷದಿಂದ. ಸ್ವಂತ ವಾಕ್ಯಗಳನ್ನು ಬರೆಯುವುದನ್ನು ಕಲಿಸುತ್ತಿದ್ದುದು ಮೂರನೆಯ ತರಗತಿಯಿಂದ. ಕೂಡುವ ಕಳೆಯುವ ಲೆಕ್ಕಗಳು ಸಾಕಷ್ಟು ಮೆದುಳಿನ ಬೆಳವಣಿಗೆಯ ನಂತರ ಶುರುವಾಗುತ್ತಿದ್ದವು. ನಿಧಾನಕ್ಕೆ ಮಕ್ಕಳಲ್ಲಿ ಪದಸಂಪತ್ತನ್ನು ಬೆಳೆಸಲಾಗುತ್ತಿತ್ತು. ಒಂದರಿಂದ ನೂರರ ವರೆಗಿನ ಅಂಕಿಗಳನ್ನು ಒಂದು ವರ್ಷದಷ್ಟು ಸಮಯ ತೆಗೆದುಕೊಂಡು ಕಲಿಸಲಾಗುತ್ತಿತ್ತು. ಈಗ ಇನ್ನೂ ನಾಲ್ಕು ವರ್ಷದ ಮಕ್ಕಳಿಗೆ ಕೂಡುವ ಕಳೆಯುವ ಲೆಕ್ಕಗಳನ್ನು ಕಲಿಸಲಾಗುತ್ತದೆ. ದಿನಕ್ಕೆ ಆರರಿಂದ ಎಂಟು ಹೊಸ ಪದಗಳನ್ನು ಕಲಿಯಲು ಹೇಳಲಾಗುತ್ತದೆ. ಮಗ್ಗಿಗಳು ಒಂದನೆಯ ತರಗತಿಗಿಂತ ಮುಂಚೆಯೇ ಶುರುವಾಗುತ್ತವೆ. ಒಂದನೆಯ ತರಗತಿಯ ಕೊನೆಗೆ ಮಗುವು ಸ್ವತಂತ್ರವಾಗಿ ವಾಕ್ಯರಚನೆ ಮಾಡುವಷ್ಟು ಬೆಳೆದಿರಬೇಕು ಎಂದು ಶಿಕ್ಷಕರು ಬಯಸುತ್ತಾರೆ ಅದೂ ತಾಯಿನುಡಿಯಲ್ಲಲ್ಲ ಇಂಗ್ಲೀಷಿನಲ್ಲಿ!  ನಾವು ಆರಾಮಾಗಿ ಪದ್ಯಗಳನ್ನು ಹೇಳಿಕೊಂಡು ಆಟವಾಡುತ್ತಾ ಕಾಲ ಕಳೆಯುತ್ತಿದ್ದ ವಯಸ್ಸಿನಲ್ಲಿ ಈಗಿನ ಮಕ್ಕಳು ವಯಸ್ಸಿಗೆ ಮೀರಿದ ಒತ್ತಡದಿಂದ ಬಳಲುತ್ತಿವೆ.

 ಪ್ರತಿ ವಾರ ಕರೆಯುವ ಪೋಷಕರ ಸಭೆಗಳಲ್ಲಿ ಮಗು ಪ್ರೌಢವಾಗಿ ವ್ಯವಹರಿಸುವುದಿಲ್ಲ ಎಂಬ ದೂರನ್ನು ಶಿಕ್ಷಕರು ಹೇಳುತ್ತಾರೆ. ಮಕ್ಕಳು ದೊಡ್ಡವತಂತೆ ಪ್ರೌಢವಾಗಿ ವರ್ತಿಸುವುದನ್ನು ನಿರೀಕ್ಷಿಸುವುದು ಅದೆಂತಹ ಮೂರ್ಖತನ ಎಂಬುದು ಪೋಷಕರಿಗೂ ಶಿಕ್ಷಕರಿಗೂ ಅರ್ಥವಾಗುವುದಿಲ್ಲ. ಇದೊಂದು ವಿಷವರ್ತುಲದಲ್ಲಿ ಸಿಕ್ಕಿ ನರಳುತ್ತಿರುವ ಮಕ್ಕಳಿಗೆ ಮುಂದೆ ಅದೆಂತಹ ಮಾನಸಿಕ ಮತ್ತು ದೈಹಿಕ ರೋಗಗಳು ಕಾಡುತ್ತವೋ ಎಂಬುದನ್ನು ನೆನೆಸಿಕೊಂಡರೆ ಆತಂಕವಾಗುತ್ತವೆ. ದೇಹದ ಆರೋಗ್ಯವೇ ಏರುಪೇರಾದರೆ ಎಂತಹ ಭವಿಷ್ಯವಿದ್ದರೂ ಏನು ಪ್ರಯೋಜನ? ಈ ವಿಷಯವಾಗಿ ಪೋಷಕರು ಅತ್ಯಂತ ಗಂಭೀರವಾಗಿ ಚಿಂತಿಸುವ ಕಾಲ ಬಂದಿದೆ. ಪರಿಸ್ಥಿತಿ ಕೈಜಾರಿ ಹೋಗುವ ಮುನ್ನ ಈ ಬಗ್ಗೆ ನಿಗಾವಹಿಸಿ ಮಕ್ಕಳನ್ನು ಮಕ್ಕಳಾಗಿಯೇ ಉಳಿಸಿಕೊಳ್ಳುವುದು ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಒಳ್ಳೆಯದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com