ಮಕ್ಕಳು ಕೈತಪ್ಪಿ ಹೋಗುವಲ್ಲಿ ಪೋಷಕರ ಪಾಲೂ ಸಹ ಇದೆ

ವಿದ್ಯಾರ್ಥಿಗಳ ಅನೇಕ ತೊಂದರೆಗಳಿಗೆ ಅನೇಕ ಬಾರಿ ಪೋಷಕರೂ ಸಹ ಕಾರಣರಾಗಿರುತ್ತಾರೆ. ಅತಿಯಾದ ಒತ್ತಡ ಹೇರುವುದು, ಕೇಳಿದ್ದನ್ನೆಲ್ಲ ಕೊಡಿಸಿಬಿಡುವುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿದ್ಯಾರ್ಥಿಗಳ ಅನೇಕ ತೊಂದರೆಗಳಿಗೆ ಅನೇಕ ಬಾರಿ ಪೋಷಕರೂ ಸಹ ಕಾರಣರಾಗಿರುತ್ತಾರೆ. ಅತಿಯಾದ ಒತ್ತಡ ಹೇರುವುದು, ಕೇಳಿದ್ದನ್ನೆಲ್ಲ ಕೊಡಿಸಿಬಿಡುವುದು, ಸಾಕಷ್ಟು ಹಣ ಖರ್ಚು ಮಾಡುವುದರಿಂದ ತಾವು ತಮ್ಮ ಮಕ್ಕಳಿಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದ್ದೇವೆಂದೂ ಭ್ರಮೆ ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಇದೊಂದು ಮಕ್ಕಳನ್ನು ಮತ್ತೊಂದು ಒಳಸುಳಿಗೆ ತಳ್ಳುತ್ತದೆ ಎಂಬ ಪರಿಜ್ಞಾನ ಅವರಿಗಿರುವುದಿಲ್ಲ.
 ಪೋಷಕರ ಸಭೆಗಳಲ್ಲಿ ಅನೇಕ ಬಾರಿ ಇಂತಹ ಪೋಷಕರನ್ನು ಭೇಟಿ ಮಾಡುತ್ತೇವೆ. ಕೆಲ ಪೋಷಕರು ಮಕ್ಕಳ ಅಂಕಗಳನ್ನು ನೋಡಿ ಆಕಾಶವೇ ಮೇಲೆ ಬಿದ್ದಂತೆ ಆಡುತ್ತಾರೆ. ಪೋಷಕರ ಸಭೆಗಳಲ್ಲಿ ಪೋಷಕರನ್ನು ಭೇಟಿ ಮಾಡಿ ಅವರ ಮಕ್ಕಳ ಬೆಳವಣಿಗೆಯ ಬಗ್ಗೆ ವಿವರಿಸಬೇಕಾಗಿರುವುದು ಶಿಕ್ಷಕರ ಕರ್ತವ್ಯವಾಗಿರುತ್ತದೆ. ಕೆಲವೊಮ್ಮೆ ಅವರ ಉತ್ತರ ಪತ್ರಿಕೆಯನ್ನು ತಂದೆ ತಾಯಂದಿರಿಗೆ ತೋರಿಸಲಾಗುತ್ತದೆ. ಹೀಗೆಯೇ ಒಂದು ಪ್ರಸಂಗದಲ್ಲಿ ತಾಯಿಯೊಬ್ಬರು ತಮ್ಮ ಮಗಳ ಪ್ರಗತಿ ಕುಂಠಿತವಾಗಿರುವುದನ್ನು ಕಂಡು ಅಲ್ಲೇ ಕಣ್ಣಲ್ಲಿ ನೀರು ತುಂಬಿಕೊಂಡು ಇವಳಿಗಾಗಿ ನಾನು ಎಷ್ಟು ಕಷ್ಟ ಪಟ್ಟಿದ್ದೇನೆ. ನನ್ನ ಸರ್ವಸ್ವವನ್ನು ತ್ಯಾಗ ಮಾಡಿದ್ದೇನೆ. ಇವಳು ಫೇಲಾದರೆ ನಾನು ನೇಣು ಹಾಕಿಕೊಂಡು ಸಾಯುತ್ತೇನೆ ಎಂದೆಲ್ಲ ಬಡಬಡಿಸತೊಡಗಿದರು! ಮಕ್ಕಳೆದುರಿಗೆ ಈ ರೀತಿಯೆಲ್ಲ ಸಾಯುವ ಮಾತಾಡಿ ಅವರ ಮನೊಸ್ಥೈರ್ಯ ಕುಗ್ಗಿಸಬಾರದು ಎಂದು ಎಷ್ಟು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಮಕ್ಕಳೆದುರಿಗೆ ಅದೂ ಅಂತಹ ಕಿಶೋರಾವಸ್ಥೆಯಲ್ಲಿ ಈ ರೀತಿಯ ಋಣಾತ್ಮಕ ಮಾತುಗಳನ್ನಾಡುವುದು ಎಂತಹ ಅಪಾಯ ಎಂಬುದರ ಕನಿಷ್ಟ ಪ್ರಜ್ಞೆಯೂ ಆಕೆಗಿರಲಿಲ್ಲ.
 ಮತ್ತೊಬ್ಬರು ನಾನು ಇವಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕೊಟ್ಟಿದ್ದೇವೆ. ಇವಳ ಯಾವುದೇ ವಯಕ್ತಿಕ ವಿಷಯದಲ್ಲಿ ನಾವು ತಲೆ ಹಾಕುವುದಿಲ್ಲ. ಅವಳಿಗೆ ಕಿರಿಕಿರಿಯಾಗಬಾರದೆಂದು ಅವಳ ಕೋಣೆಗೂ ಕಾಲಿಡುವುದಿಲ್ಲ. ಸಂಗೀತಕ್ಕಾಗಿ ವಿಶೇಷ ಕೊಠಡಿ ಕಟ್ಟಿಸಿಕೊಟ್ಟಿದ್ದೇವೆ. ಅವಳನ್ನು ನಾವು ಯಾವ ವಿಷಯಕ್ಕೂ ಪ್ರಶ್ನೆ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದೇವೆ. ಆದರೆ ಆಕೆ ನಮ್ಮನ್ನು ಎಷ್ಟು ಬೇಕಾದರೂ ಪ್ರಶ್ನಿಸುವ ಸ್ವಾತಂತ್ರ ಕೊಟ್ಟಿದ್ದೇವೆ ಎಂದು ಹೇಳತೊಡಗಿದರು. ಇದೊಂದು ತೀರಾ ವಿಚಿತ್ರ ಮತ್ತು ಅಸಂಬದ್ಧ ನಿರ್ಧಾರಗಳು ಎಂದು ನಮಗೆ ಅನಿಸತೊಡಗಿತು. ಅನೇಕ ಸಮಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಂದಿರಿಗಿಂತ ಗೆಳೆಯರ ಜೊತೆಗೆ ತಮ್ಮ ಮನಸ್ಸನ್ನು ಹಂಚಿಕೊಳ್ಳಲು ಬಯಸುತ್ತಾರೆ. ಅದು ಅತ್ಯಂತ ಸಹಜ. ಆದರೆ ತಂದೆ ತಾಯಂದಿರು ಯಾವುದೇ ಕಾರಣಕ್ಕೂ ಮಕ್ಕಳಿಂದ ದೂರವನ್ನು ಕಾಪಾಡಿಕೊಳ್ಳಬಾರದು. ತಿರುಗಿ ಬೀಳುತ್ತಾರೆಂಬ ಭಯದಿಂದಲೋ, ಕೈತಪ್ಪಿ ಹೋಗುತ್ತಾರೆ ಎಂಬ ಆತಂಕದಿಂದಲೋ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ನಮ್ಮನ್ನು ನಿರೀಕ್ಷಿಸದ ಅನಾಹುತಕ್ಕೆ ತಳ್ಳುವ ಸಾಧ್ಯತೆಗಳಿವೆ.
 ಇನ್ನೊಂದು ಪ್ರಸಂಗದಲ್ಲಿ ತಂದೆಯೊಬ್ಬರು ಮಗನ ಉತ್ತರ ಪತ್ರಿಕಯನ್ನು ಕೈಯಲ್ಲಿ ಹಿಡಿದು ಆತನನ್ನು ಪ್ರಶ್ನಿಸತೊಡಗಿದರು. ಅವನ ಎಲ್ಲ ಗೆಳೆಯರ ಮತ್ತವರ ತಂದೆತಾಯಂದಿರ ಎದುರಿಗೆ ಅವನ ಮೇಲೆ ಕೂಗಾಡತೊಡಗಿದರು. ಹಾಗಂತ ಆ ಹುಡುಗನೇನೂ ತೀರಾ ಕಡಿಮೆ ಅಂಕಗಳನ್ನು ತೆಗೆದಿರಲಿಲ್ಲ. ಪ್ರತೀ ಪ್ರಶ್ನೆಯನ್ನು ತೋರಿಸಿ "ಈ ಪ್ರಶ್ನೆಗೆ ಉತ್ತರ ಹೇಳು ಯಾಕೆ ತಪ್ಪಾಗಿದೆ ಎಂದು ಹೇಳು" ಎಂದು ಪೀಡಿಸತೊಡಗಿದರು. ಆ ರೀತಿ ಎಲ್ಲರ ಮುಂದೆ ಬೈಯುವುದು ಒಳ್ಳೆಯದಲ್ಲ ಎಂದು ಅದೆಷ್ಟು ಹೇಳಿದರೂ ಕೇಳದೇ ತಮ್ಮ ವರಾತ ಮುಂದುವರಿಸಿದರು. ಪೋಷಕ ಸಭೆಯ ಉದ್ದೇಶ ಮಕ್ಕಳ ಬಗ್ಗೆ ದೂರುಗಳನ್ನು ಕೊಡುವುದಲ್ಲ. ಅದು ಮಕ್ಕಳ ಪ್ರಗತಿಯ ಬಗ್ಗೆ ತಿಳಿಹೇಳಿ ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ಈ ಬಗ್ಗೆ ಪೋಷಕರು ಸರಿಯಾದ ಹಿನ್ನುಣಿಕೆಯನ್ನು ಪಡೆದು ಸೂಕ್ತ ಹೆಜ್ಜೆ ಇಡಬೇಕು.
 ಇನ್ನೂ ಕೆಲ ಪೋಷಕರು ಅದೆಷ್ಟು ಬೇಜವಾಬ್ದಾರಿಯಿಂದಿರುತ್ತಾರೆಂದರೆ ಅವರ ಮಕ್ಕಳ ಬಗ್ಗೆ ವಿವರಿಸಲು ಅದೆಷ್ಟು ಹೇಳಿ ಕಳಿಸಿದರೂ ಶಾಲೆಗೆ ಬರುವುದೇ ಇಲ್ಲ. ತಮ್ಮ ಮಕ್ಕಳ ಬಗ್ಗೆ ಶಿಕ್ಷಕರೇ ಪೂರ್ವಾಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ ಎಂದೇ ಬಗೆಯುತ್ತಾರೆ. ಹುಡುಗನೊಬ್ಬ ಹೀಗೆಯೇ ಮುಂದುವರೆದು ಡ್ರಗ್ ಸೇವಿಸುವ ಚಟವನ್ನು ಹತ್ತಿಸಿಕೊಂಡಿದ್ದ. ಆ ಹುಡುಗನ ಹಾವಳಿ ಅದೆಷ್ಟು ಮುಂದುವರಿಯಿತೆಂದರೆ ಕಡೆಗೆ ಪೋಲೀಸರು ಕಾಲೇಜಿಗೆ ಬಂದು ಅವನನ್ನು ಕೂರಿಸಿಕೊಂಡು ತಂದೆ ತಾಯಿಗಳಿಗೆ ಹೇಳಿಕಳಿಸಬೇಕಾಯಿತು. ನಂತರ  ಶಿಕ್ಷಕರ ಬದಲು ಅವನ ಕೇಸನ್ನು ಪೋಲೀಸರೇ ನಿರ್ವಹಿಸಬೇಕಾಯಿತು. ಈ ಬಾರಿ ಶಿಕ್ಷಕರು ಸೂಕ್ತ ಕ್ರಮ ಕೈಗೊಳ್ಳುವಂತೆ ಅವನ ತಂದೆ ತಾಯಂದಿರು ಎಷ್ಟೇ ಕೇಳಿಕೊಂಡರೂ ಪರಿಸ್ಥಿತಿ ನಮ್ಮ ಕೈಮೀರಿ ಹೋಗಿತ್ತು. ಉಳಿದ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾಲೇಜಿನಿಂದ ಅನಿವಾರ್ಯವಾಗಿ ಅವನನ್ನು ಹೊರ ಹಾಕಬೇಕಾಯಿತು. 
 ಹೀಗೆ ಅತಿಯಾದ ಕಾಳಜಿ ಅತಿಯಾದ ಬೇಜವಾಬ್ದಾರಿ ಮಕ್ಕಳನ್ನು ಕೈತಪ್ಪಿಹೋಗುವಂತೆ  ಮಾಡುತ್ತವೆ.  ಅದರಲ್ಲೂ ಕಿಶೋರಾವಸ್ಥೆಯ ಮಕ್ಕಳು ಅಂಗೈನಲ್ಲಿ ಹಿಡಿದಿಟ್ಟುಕೊಂಡ ಮರಳಿನಂತೆ. ಅತಿಯಾದ ಬಿಗಿ ಹಿಡಿತ ಅಥವಾ ಅತಿಯಾದ ಸಡಿಲತೆ ನಮ್ಮ ಕೈಯಿಂದ ಎಲ್ಲವನ್ನೂ ಜಾರಿಹೋಗುವಂತೆ ಮಾಡುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com