ಕವಿಮನಸ್ಸಿನ ಮೊದಲ ಸಾಫ್ಟ್ ವೇರ್ ಇಂಜಿನಿಯರ್ - ಅಡಾ ಲೊವೆನ್ಸ್

ಕಂಪ್ಯೂಟರ್ ಅನ್ನು ಮೊದಲು ವಿನ್ಯಾಸಗೊಳಿಸಿದವನು ಚಾರ್ಲ್ಸ್ ಬಾಬೇಜ್. ಆದರೆ ಚಾರ್ಲ್ಸ್ ಬಾಬೇಜ್ ಮೊದಲ ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ! ಮೊದಲ ಸಾಫ್ಟ್ ವೇರ್ ...
ಅಡಾ ಲೊವೆನ್ಸ್
ಅಡಾ ಲೊವೆನ್ಸ್
Updated on
ಬುದ್ಧಿಯ ವಿಷಯಗಳಲ್ಲಿ ಹೆಣ್ಣುಮಕ್ಕಳನ್ನು ಹಿಯಾಳಿಸುವುದು. ಪುರುಷರಿಗಿಂತ ಬುದ್ಧಿ ಶಕ್ತಿ ಕಡಿಮೆ ಎಂದು ಅಪಹಾಸ್ಯ ಮಾಡುವದು, ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ ಎಂಬ ಗಾದೆ ಮಾತುಗಳನ್ನು ತೇಲಿಬಿಡುವುದು ಗೊತ್ತಿದ್ದದ್ದೇ. ಎಲ್ಲಾ ವಿಷಯಗಳಲ್ಲೂ ಮಹಿಳೆಯರು ಪುರುಷರಿಗಿಂತ ಹೆಚ್ಚು ಶಕ್ತರು ಎಂದು ಪದೇ ಪದೇ ನಿರೂಪಿತವಾಗಿದ್ದರೂ ಈ ಪೂರ್ವಾಗ್ರಹ ನೈಪಥ್ಯಕ್ಕೆ ಸರಿದಿಲ್ಲ. ತಂತ್ರಜ್ಞಾನದ ವಿಷಯ ಬಂದರಂತೂ ಹೆಣ್ಣುಮಕ್ಕಳ ತಿಳುವಳಿಕೆಯ ಬಗ್ಗೆ ಅತಿಯಾದ ಊಹಾಪೋಹಗಳಿವೆ.
 ಕಂಪ್ಯೂಟರ್ ಅನ್ನು ಮೊದಲು ವಿನ್ಯಾಸಗೊಳಿಸಿದವನು ಚಾರ್ಲ್ಸ್ ಬಾಬೇಜ್. ಆದರೆ ಚಾರ್ಲ್ಸ್ ಬಾಬೇಜ್ ಮೊದಲ ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ! ಮೊದಲ ಸಾಫ್ಟ್ ವೇರ್ ಇಂಜಿನಿಯರ್ ಆತನ ಶಿಷ್ಯೆ ಅಡಾ ಲೋವೆಲೆನ್ಸ್! ಅಡಾ ಖ್ಯಾತ ಬ್ರಿಟಿಷ್ ಸಾಹಿತಿ ಲಾರ್ಡ್ ಜಾರ್ಜ ಬೈರಾನ್ ನ ಮಗಳು. ನಿಜವೆಂದರೆ ಅಡಾ ಜಾರ್ಜ್ ಬೈರಾನ್ ನ ಅನೇಕ ಮಕ್ಕಳಲ್ಲಿ ಏಕೈಕ ಧರ್ಮಸಂತಾನ! ಆತ ಅದೆಂತಹ ರಸಿಕನಾಗಿದ್ದನೆಂದರೆ ಅನೇಕ ಪ್ರೇಯಸಿಯರಿಂದ ಆತನಿಗೆ ಅನೇಕ ಮಕ್ಕಳಿದ್ದರು. ತನ್ನ ಪತಿಯ ರಸಿಕತೆಯಿಂದ ಬೇಸತ್ತು ಹೋಗಿದ್ದ ಅಡಾಳ ತಾಯಿ ಮಗಳನ್ನು ಸಾಧ್ಯವಾದಷ್ಟು ಕವಿತೆ ಗ್ರಂಥಗಳಿಂದ ದೂರವಿಟ್ಟು ಗಣಿತ ವಿಜ್ಞಾನದ ಕಡೆಗೆ ಆಸಕ್ತಿ ಇರುವಂತೆ ಶಿಕ್ಷಣ ಕೊಡಿಸಿ ಬೆಳೆಸಿದಳು. ಅಡಾ ಚುರುಕು ಬುದ್ಧಿಯಿಂದಾಗಿ ಗಣಿತದಲ್ಲಿ ಒಳ್ಳೆಯ ಪರಿಣಿತಿ ಗಳಿಸಿದಳು. ಚಿಕ್ಕ ವಯಸ್ಸಿನಲ್ಲಿಯೇ ಸ್ಟೀಮ್ ಇಂಜಿನ್, ಕಡಲ ನಾವೆಯ ಡಿಸೈನ್ ಗಳನ್ನು ಅಭ್ಯಾಸ ಮಾಡುತ್ತಿದ್ದಳು.
  ಮದುವೆಯಾಗಿ ಲೇಡಿ ಲೋವೆನ್ಸ್ ಆದ ಅಡಾಳಿಗೆ ಖ್ಯಾತ ವಿಜ್ಞಾನಿಗಳ ಮತ್ತು ಗಣಿತಜ್ಞರ ಪರಿಚಯವಾಯಿತು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದಳು. ಮೂರನೆಯ ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ತೀರಿಹೋದ. ಹೀಗೆ ಅನೇಕ ಏಳು ಬೀಳುಗಳನ್ನು ಕಂಡ ಅಡಾ ಮಕ್ಕಳನ್ನು ತಾಯಿಯ ಬಳಿ ಓದಲು ಬಿಟ್ಟು ಚಾರ್ಲ್ಸ್ ಬಾಬೇಜ್ ಬಳಿ ಸಹಾಯಕಿಯಾಗಿ ಸೇರಿದಳು. ಚಾರ್ಲ್ಸ್ ಬಾಬೇಜ್ ನನ್ನು ಕಂಪ್ಯೂಟರ್ ಜನಕ ಎಂದೆ ಕರೆಯುತ್ತಾರೆ. ಅಡಾ ಸಹಾಯಕಿಯಾಗಿ ಸೇರಿಕೊಂಡ ಸಮಯದಲ್ಲಿ ಬಾಬೇಜ್ ಗಣಿತದ ಲೆಕ್ಕಾಚಾರವನ್ನು ಹಾಕಲು ಯಂತ್ರವೊಂದನ್ನು ತಯಾರಿಸುತ್ತಿದ್ದ. ಬಾಬೇಜ್ ನ ಎಲ್ಲ ಕೆಲಸಗಳಲ್ಲೂ ಅಡಾ ಸಹಾಯಕಿಯಾಗಿದ್ದಳು. ಬಾಬೇಜ್ ಮಾಡುತ್ತಿದ್ದ ಭಾಷಣಗಳಿಗೆಲ್ಲ ನೋಟ್ಸ್ ಮಾಡಿಕೊಡುವುದೂ, ಇಂಗ್ಲೀಷ್ ಗೆ ಭಾಷಾಂತರಿಸುವುದೂ ಸಹ ಅಡಾಳ ಕೆಲಸವಾಗಿತ್ತು.  ಇಂತಹ ಒಂದು ಸಮಯದಲ್ಲಿ ಅಡಾ ಬಾಬೇಜ್ ನ ಕಂಪ್ಯೂಟರ್ ನ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ಸಹಾಯಕವಾಗುವ ಕೆಲ ಅಂಕಿಗಳ ಸರಣಿಯ ಲೆಕ್ಕಾಚಾರ ಮಾಡಲು ಒಂದಿಷ್ಟು ಅಲ್ಗಾರಿದಮ್ ಗಳನ್ನು ಬರೆದಳು. ಇದೇ ಮೊಟ್ಟ ಮೊದಲ ಕಂಪ್ಯೂಟರ್ ಪ್ರೋಗ್ರಾಮ್! ಮೊಟ್ಟ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಅಡಾ ಇತಿಹಾಸದಲ್ಲಿ ದಾಖಲಾದಳು. 
 ಕವಿಯ ಮಗಳಾಗಿದ್ದ ಅಡಾಳಿಗೆ ತನ್ನ ತಂದೆಯ ಸೊಬಗಿನ ಚಿಂತನೆಗಳು ಅತ್ಯಂತ ಸಹಜವಾಗಿಯೇ ಬಂದಿದ್ದವು. ತನ್ನ ಎಂಟನೆಯ ವಯಸ್ಸಿನಲ್ಲೇ ತಂದೆಯಿಂದ ದೂರವಾಗಿದ್ದರೂ ಆಕೆಗೆ ತನ್ನ ತಂದೆಯ ಬಗ್ಗೆ ಅತ್ಯಂತ ಗೌರವ ಮತ್ತು ಪ್ರೀತಿ ಇತ್ತು. ತನ್ನ ಹಿರಿಯ ಮಗನಿಗೆ ತನ್ನ ತಂದೆಯ ಹೆಸರನ್ನೇ ಇಟ್ಟಿದ್ದಳು. ಆಕೆಯ ಸಾವಿನ ನಂತರ ಆಕೆಯ ಬಯಕೆಯಂತೆ ತಂದೆಯ ಗೋರಿಯ ಪಕ್ಕದಲ್ಲೇ ಅಡಾಳ ಗೋರಿಯನ್ನು ನಿರ್ಮಿಸಲಾಯಿತು. ಅಡಾ ತನ್ನ ಸಂಶೋಧನೆಗಳಲ್ಲೆಲ್ಲ ತನ್ನ ಕವಿತ್ವವನ್ನು ಸಾಮಾಜಿಕ ಚಿಮತನೆಯನ್ನು ತೋರ್ಪಡಿಸುತ್ತಿದ್ದಳು. ಹಾಗಾಗಿ ಆಕೆಯ ಬರಹಗಳನ್ನು ಪೊಯೆಟಿಕಲ್ ಸೈನ್ಸ್ (ಕಾವ್ಯಾತ್ಮಕ ವಿಜ್ಞಾನ) ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಗಳು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗಿರುವುದಿಲ್ಲ. ಅವು ವಿಶ್ವದ ಮನಸ್ಸುಗಳನ್ನು ಜೋಡಿಸುವ ಸೇತುವಾಗಬಲ್ಲವು ಎಂದು ಹೇಳಿದ್ದಳು. ಬರಿಯ ಲೆಕ್ಕಗಳಷ್ಟೇ ಅಲ್ಲದೇ ಸಂಗೀತ, ಚಿತ್ರಗಳನ್ನು ಕಂಪ್ಯೂಟರ್ ಗಳಲ್ಲಿ ಅಳವಡಿಸಬಹುದು ಎಂದು ಹೇಳಿದ್ದಳು. ಅಂದರೆ ತನ್ನ ಕಾಲಕ್ಕಿಂತ ನೂರುವರ್ಷ ಮುಂದಿದ್ದಳು ಅಡಾ! ಅಲ್ಲಿಯ ವರೆಗೆ ಗಣಿತದ ಲೆಕ್ಕಗಳನ್ನು ಮಾಡುತ್ತಿದ್ದ ಯಂತ್ರಗಳು ಅಡಾಳ ಸಂಶೋಧನೆಗಳಿಂದಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಶಕ್ತವಾಯಿತು. ಒಂದೆ ಕಂಪ್ಯೂಟರನ್ನು ಪಳಗಿಸಿ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯವಾಯಿತು!
 ಅಡಾ ತನ್ನ ತನ್ನ 36 ನೆಯ ವಯಸ್ಸಿನಲ್ಲಿ 1852 ರಲ್ಲಿ ತೀರಿಕೊಂಡಳು. ಅತಿ ಚಿಕ್ಕ ವಯಸ್ಸಿನಲ್ಲೇ ಅತಿ ದೊಡ್ಡ ಸಾಧನೆ ಮಾಡಿ ತೆರಳಿದಳು. ಆಕೆಯ ಗೌರವಾರ್ಥ ಅತ್ಯುನ್ನತ ಮಿಲಿಟರಿ ಕಂಪ್ಯೂಟರ್ ಗಳಲ್ಲಿ ಬಳಸುವ ಪ್ರೋಗ್ರಾಮಿಂಗ್ ಭಾಷೆಗೆ "ಅಡಾ" ಎಂದು ಹೆಸರಿಸಲಾಗಿದೆ. ಭಾರತದ ಪೈಲಟ್ ರಹಿತ ವಿಮಾನ ತೇಜಸ್, ಹೆಲಿಕಾಪ್ಟರ್ ಇತ್ಯಾದಿಗಳನ್ನು ಈ ಅಡಾ ಭಾಷೆಯನ್ನು ಬಳಸಿಯೇ ಅಭಿವೃದ್ಧಿಪಡಿಸಲಾಗಿದೆ. ಕವಿಯ ಮಗಳಾಗಿ ಹುಟ್ಟಿ ರಾಜನ ಹೆಂಡತಿಯಾಗಿ ಮೆರೆದು, ಪತಿಯ ಸಾವಿನ ನಂತರ ತನ್ನೆಲ್ಲವನ್ನು ಕಳೆದುಕೊಂಡು ವಿಜ್ಞಾನಿಯ ಸಹಾಯಕಿಯಾಗಿ ಸಾಧನೆಗೈದ ಅಡಾ ಕಂಪ್ಯೂಟರ್ ನಷ್ಟೇ ವೇಗವಾಗಿ ಬದುಕಿದವಳು ಮತ್ತು ಸಾಧನೆಗೈದವಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com