ತಂತ್ರಜ್ಞಾನ ಲೋಕದ ಹಿರಿಬಿದಿರು ಟೆಲಿಫೋನ್...!

ಯಾವುದೇ ಹೊಸ ವೈಜ್ಞಾನಿಕ ಸಂಶೋಧನೆಗಳು ಮಾರುಕಟ್ಟೆಗೆ ಬಂದು ಜನಸಾಮಾನ್ಯರಿಗೆ ದೊರಕಲು ಒಂದೆರಡು ದಶಕಗಳನ್ನು ತೆಗೆದುಕೊಳ್ಳುತ್ತವೆ...
ಟೆಲಿಫೋನ್
ಟೆಲಿಫೋನ್

ಯಾವುದೇ ಹೊಸ ವೈಜ್ಞಾನಿಕ ಸಂಶೋಧನೆಗಳು ಮಾರುಕಟ್ಟೆಗೆ ಬಂದು ಜನಸಾಮಾನ್ಯರಿಗೆ ದೊರಕಲು ಒಂದೆರಡು ದಶಕಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಅತ್ಯಂತ ವೇಗವಾಗಿ ಜನರ ಕೈಗೆ ನಿಲುಕಿದ ಸಂಶೋಧನೆ ಗ್ರಹಾಂಬೆಲ್ ನ ಟೆಲಿಫೋನ್!  ಮಾರ್ಚ್ 10 1876 ರಲ್ಲಿ ಗ್ರಹಾಂಬೆಲ್ ತನ್ನ ಸಂಗಾತಿ ವಾಟ್ಸನ್ ಗೆ  "Mr. Watson, come here! I want to see you!"  ಎಂದು ಟೆಲಿಫೋನ್ ಮೂಲಕ ಮೊತ್ತ ಮೊದಲ ಸಂದೇಶ ಕಳುಹಿಸಿ ಟೆಲಿಫೋನ್ ಅನ್ನು ಕಂಡು ಹಿಡಿಯಲಾಗಿದೆ ಎಂದು ಜಗತ್ತಿಗೆ ಸಾರಿದ. ಇದಾಗಿ ಸರಿಯಾಗಿ ಒಂದು ವರ್ಷಕ್ಕೆ ಅಂದರೆ ಏಪ್ರಿಲ್ 1877 ರ ಹೊತ್ತಿಗೆ ಬೋಸ್ಟನ್ ನಲ್ಲಿ ಪ್ರಾಯೋಗಿಕವಾಗಿ ಟೆಲಿಫೋನ್ ಎಕ್ಸ್ ಚೆಂಜ್ ಕಾರ್ಯಾರಂಭ ಮಾಡಿತು! ಮನುಷ್ಯನಿಗೆ ಪರಸ್ಪರ ಸಂಪರ್ಕ ಸಾಧಿಸುವ ಅವಶ್ಯಕತೆ ಅದೆಷ್ಟು ತೀವ್ರವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ. ಬಹುಷಃ ಟೆಲಿಫೋನ್ ಬೆಳೆದಷ್ಟು ವೇಗವಾಗಿ ಬೇರೆ ಯಾವ ತಂತ್ರಜ್ಞಾನವೂ ಬೆಳೆಯಲಿಲ್ಲ.
 ಹೆಚ್ಚೇನೂ ಅಲ್ಲ ಕೇವಲ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಪಕ್ಕದ ಊರಿಗೆ ಕರೆ ಮಾಡಲು ಅದೆಷ್ಟು ತಿಣುಕಬೇಕಿತ್ತು. ಊರಿಗೊಂದು ಅಥವಾ ಎರಡು ಟೆಲಿಫೋನ್ ಗಳಿದ್ದ ಸಮಯವದು. ದೂರದ ಕರೆ ಮಾಡಬೇಕೆಂದರೆ ಎಸ್.ಟಿ.ಡಿ ಮಾಡಬೇಕಿತ್ತು. ಎಸ್ ಟಿ ಡಿ ಮಾಡಿದರೆ ಅದೆಷ್ಟು ವೇಗವಾಗಿ ಬಿಲ್ ಚಕ್ರ ತಿರುಗುತ್ತಿತ್ತೆಂದರೆ ಮಾತನಾಡುವವರು "ಆರಾಮಾಗಿದ್ದೀರಾ, ಊಟವಾಯಿತೇ..?" ಇತ್ಯಾದಿ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ  
 ನೇರವಾಗಿ ವಿಷಯಕ್ಕೇ ಬಂದುಬಿಡುತ್ತಿದ್ದರು! ಪಟ ಪಟನೆ ಮಾತನಾಡಿ "ಇದು ಎಸ್ ಟಿ ಡಿ ಕಾಲು. ಬೇಗ ಬೇಗ.. " ಎಂದು ಎದುರಿನವರಿಗೂ ಅವಸರಿಸಿ ವಿಷಯ ಮುಗಿಯುತ್ತಿದ್ದಂತೆ ಟಕ್ಕನೆ ರಿಸೀವರ್ ಕುಕ್ಕುತ್ತಿದ್ದರು. ಮಾತನಾಡುವ ಸಮಯ ಪೂರ್ತಿ ಫೋನ್ ಮಾಡಿದವರ ಒಂದು ಬೆರಳು ಕರೆ ಕಟ್ ಮಾಡುವ ಹುಕ್ ನ ಮೇಲೆಯೇ ಇರುತ್ತಿತ್ತು. ಮಾತು ಮುಗಿದು ನಿಟ್ಟುಸಿರು ಬಿಡುತ್ತಿದ್ದರು.ನಂತರ ಸಮಯವನ್ನು ನೋಡಿಕೊಂಡು ಬಿಲ್ ಎಷ್ಟು ಬರಬಹುದೆಂದು ಲಕ್ಕ ಹಾಕುತ್ತಿದ್ದರು.  ಇದಕ್ಕಿಂತ ಕಡಿಮೆ ಬೆಲೆಯ ಆಯ್ಕೆ ಎಂದರೆ ಟ್ರಂಕ್ ಕಾಲ್.. ನಿಮಿಷಕ್ಕೆ ಐದು ರೂಪಾಯಿ ಮಾತ್ರ! ಮೊದಲು ಕರೆ 'ಬುಕ್' ಮಾಡಬೇಕಿತ್ತು. ನಂತರ ದೂರವಾಣಿ ವಿನಿಮಯ ಕೇಂದ್ರದವರು ವಾಪಸು ಕರೆ ಮಾಡುವವರೆಗೆ ಕಾದು ಕೂತುಕೊಳ್ಳಬೇಕು.ಟೆಲಿಫೋನ್ ಇದ್ದವರ ಮನೆಯಾದರೆ ಅವರ ಮನೆಯಲ್ಲಿ ಕರೆ ಬುಕ್ ಮಾಡಿದವರ ಜಾತ್ರೆಯೇ ನೆರೆದಿರುತ್ತಿತ್ತು. ಅಕಸ್ಮಾತ್ ನಡುವೆ ಕರೆ ತುಂಡಾದರೆ ಮತ್ತೆ ಮರುದಿನ ಬುಕ್ ಮಾಡಿ ಕಾದು ಕೂತುಕೊಳ್ಳಬೇಕು! ಹಾಗಾಗಿ ಅದೊಂದು ಕಾಲದಲ್ಲಿ ಮನೆಯಲ್ಲಿ ದೂರವಾಣಿ ಇರುವುದು ಹೇಗೆ ಪ್ರತಿಷ್ಟೆಯ ವಿಷಯವಾಗಿತ್ತೋ ಅಷ್ಟೇ ಕಿರಿಕಿರಿಯ ವಿಷಯವೂ ಆಗಿತ್ತು. ಆಗ ದೂರವಾಣಿಯ ಸಂಪರ್ಕ ಪಡೆಯುವುದೇ ದೊಡ್ಡ ತೊಂದರೆಯಾಗಿತ್ತು. ಅದೆಷ್ಟೋ ಜನರಿಗೆ ಸಂಪರ್ಕ ಸಿಗುತ್ತಲೇ ಇರಲಿಲ್ಲ. ಚುನಾವಣೆಗೆ ಸ್ಪರ್ಧಿಸುವವರಿಗೆ ತಕ್ಷಣ ದೂರವಾಣಿ ಸಂಪರ್ಕ ಕೊಡುತ್ತಿದ್ದುದರಿಂದ ಅದಕ್ಕಾಗಿಯೇ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಉದಾಹರಣೆಗಳಿವೆ!
 ಅದಾಗಿ ಕಣ್ಣ ಎದುರಿಗೇ ಅದೆಷ್ಟು ವೇಗವಾಗಿ ಬೆಳವಣಿಗೆಗಳು ನಡೆದುಬಿಟ್ಟವೆಂದರೆ ದೂರವಾಣಿ ಊಟ ಸೂರುಗಳಷ್ಟೇ ಅನಿವಾರ್ಯವಾಗಿಹೋಗಿದೆ. ಒಂದೇ ಮನೆಯಲ್ಲಿ ಪ್ರತಿಯೊಬ್ಬರ ಹೆಸರಿನಲ್ಲೂ ಒಂದೊಂದು ಮೊಬೈಲ್ ಸಂಪರ್ಕ ಇದೆ! ಈಗ ಮೊಬೈಲ್ ಎಂದರೆ ಕೇವಲ ಕರೆ ಮಾತ್ರವಲ್ಲ ಬರಹ, ಛಾಯಾಚಿತ್ರ, ವಿಡಿಯೋ ಸಂದೇಶ ಕಳಿಸುವುದೂ ಕೂಡ ಸೇರಿದೆ. ತಂತ್ರಜ್ಞಾನ ಲೋಕದ ಅದ್ಭುತ ಎಂದರೆ ವಿಡಿಯೋ, ಕಂಪ್ಯೂಟರ್, ಇಂಟರ್ ನೆಟ್, ಕೃತಕ ಉಪಗ್ರಹ ಇತ್ಯಾದಿ ವಿವಿಧ ಕ್ಷೇತ್ರದ ತಂತ್ರಜ್ಞಾನಗಳು ತಮ್ಮದೇ ಜಾಡಿನಲ್ಲಿ, ತಮ್ಮದೇ ಕ್ಷೇತ್ರಗಳಲ್ಲಿ ಬೇರೆ ಬೇರೆ ಯಾಗಿ ಬೆಳೆದು ಕಡೆಗೆ ಒಂದಕ್ಕೊಂದು ಅನಿವಾರ್ಯವೆಂಬಂತೆ ಹೆಣೆದುಕೊಂಡು ಈಗ ಪೂರಕವಾಗಿ ಒಟ್ಟಿಗೇ ಬೆಳೆಯುತ್ತಿವೆ. ಒಂದು ಉದಾಹರಣೆ ಹೇಳಬೇಕೆಂದರೆ ವಾಹನ ಕ್ಷೇತ್ರದ ಬೆಳವಣಿಗೆಗೆ ತಕ್ಕಂತೆ ಅದಕ್ಕೂ ಮೊದಲು ರಬ್ಬರ್ ಉದ್ಯಮ ಬೆಳೆಯಿತು, ಅದರಿಂದ ಟೈರ್ ಉದ್ಯಮ ಬೆಳೆಯಿತು, ಹಾಗೆಯೇ ವಿವಿಧ ಲೋಹಗಳ ಉದ್ಯಮ ಬೆಳೆದವು, ಇಂಜಿನ್ ಗಳ ತಂತ್ರಜ್ಞಾನ ಬೆಳೆಯಿತು, ಪೆಟ್ರೋಲಿಯಮ್ ಸಂಶೋಧನೆಗಳು ಬೆಳೆದವು. ಇವೆಲ್ಲ ಬೇರೆ ಬೇರೆ ಯಾಗಿ ತಮ್ಮದೇ ಜಾಡಿನಲ್ಲಿ ಬೆಳೆದವು. ನಂತರ ಒಟ್ಟಿಗೆ ಸೇರಿಕೊಂಡು ನಮಗಾಗಿ ಕಾರ್ ಗಳು ಬಸ್ ಗಳು ತಯಾರಾದವು. ಇಂತಹದೊಂದು ವಿವಿಧ ಕ್ಷೇತ್ರಗಳ ಸಾಮಾಜಿಕ ಲೆಕ್ಕಾಚಾರಗಳು ಒಂದಾಗಿ ಸಮಾಜವನ್ನು ಮುನ್ನಡೆಸತೊಡಗಿದವು.
     ಹಾಗೆಯೇ ಮೊಬೈಲ್ ಫೋನ್ ಗಳು ಬಂದಾಗ SMS ಎಂಬ ಹೊಸ ಸೇವೆಯೂ ಹುಟ್ಟಿಕೊಂಡಿತು. ತಮ್ಮ ದೂರವಾಣಿಯ ಮೂಲಕ ಓದಬಲ್ಲ ಸಂದೇಶವನ್ನೂ ಕಳಿಸುವ ವ್ಯವಸ್ಥೆಯದು. ಕಳಿಸಿದ ಸಂದೇಶಗಳು ನಮ್ಮ ಫೋನ್ ನಲ್ಲಿಯೇ ಸಂಗ್ರಹವಾಗಿರುವುದರಿಂದ ಮತ್ತೆ ಮತ್ತೆ ತೆರೆದು ಸಂದೇಶಗಳನ್ನು ಓದಿಕೊಳ್ಳಬಹುದು. ಈ ಎಸ್ ಎಮ್ ಎಸ್ ಸಹ ಟೆಲಿಫೊನ್ ನಷ್ಟೇ ವೇಗವಾಗಿ ಮಾರುಕಟ್ಟೆಗೆ ಬಂದಿತು. 1992 ರ ಡಿಸೆಂಬರ್ ಛಳಿಯಲ್ಲಿ ನೀಲ್ ಪಾಪ್ ವರ್ತ್ ಎಂಬ ಇಂಜಿನಿಯರ್ ನ ಕಂಪ್ಯೂಟರ್ ನಿಂದ ರಿಚರ್ಡ್ ಜಾರ್ವಿಸ್ ಎಂಬ ವಿಜ್ಞಾನಿಯ ಮೊಬೈಲ್ ಗೆ ಮೊದಲ ಸಂದೇಶ ಹೋಯಿತು. ಈ ಸಂದೇಶ "ಮೇರಿ ಕ್ರಿಸ್ ಮಸ್" ಎಂಬೆರಡು ಶಬ್ದಗಳನ್ನು ಮಾತ್ರ ಒಳಗೊಂಡಿತ್ತು. ಇದಾಗಿ ಒಂದು ವರ್ಷದೊಳಗೆ ನೋಕಿಯಾ ತನ್ನ ಫೋನ್ ನಲ್ಲಿ ಎಸ್ ಎಮ್ ಎಸ್ ಸೇವೆಯನ್ನು ಶುರುಮಾಡಿತ್ತು!
 ಮೊಟ್ಟಮೊದಲು SMS ನ ಪರಿಕಲ್ಪನೆಯನ್ನು ಜಗತ್ತಿನ ಮುಂದಿಟ್ಟವರು ಫಿನ್ ಲ್ಯಾಂಡ್ ಮೂಲದ ಇಂಜಿನಿಯರ್ ಮಾಟ್ಟಿ ಮಾಕ್ಕಿನನ್. ಮಾಕ್ಕಿನನ್ ನೋಕಿಯಾ ಸಂಸ್ಥೆಯ ಮಾಜಿ ನಿರ್ದೇಶಕರೂ ಹೌದು. ಇಳಿವಯಸ್ಸಿನ ಅನಾರೋಗ್ಯದಿಂದಾಗಿ ಕಳೆದ ವಾರ ಈ ಜಗತ್ತನ್ನು ಅಗಲಿದರು. ಸಾವಿರ ಮೈಲಿಯ ಪ್ರಯಾಣವಾದರೂ ಮೊದಲ ಹೆಜ್ಜೆಯಿಂದಲೇ ಆರಂಭವಾಗಬೇಕು. ಸಾವಿರಾರು ವರ್ಷಗಳ ಹಿಂದೆ ಕಂಡು ಹಿಡಿದ ಚಕ್ರ ನಮ್ಮ ವಿಜ್ಞಾನವನ್ನು ಇಷ್ಟು ಮುಂದೆ ತಂದಿದೆ. ಹಾಗೆಯೇ ನಮ್ಮ ಬಳಕೆಯ  ವಾಟ್ಸಾಪ್, ಟೆಲಿಗ್ರಾಫ್, ವಿ ಚಾಟ್ ಗಳ ಮೂಲ SMS ಎಂಬುದನ್ನು  ಮರೆಯುವಂತಿಲ್ಲ. ಈ ಸಂದೇಶ ಜಗತ್ತಿನ ತಾಂತ್ರಿಕ ಪಯಣಕ್ಕೆ ಮುನ್ನುಡಿ ಬರೆದ ಮಾಕ್ಕಿಗೆ ನಮ್ಮ ಶ್ರದ್ಧಾಂಜಲಿ!

- ಶ್ರೀಹರ್ಷ ಸಾಲಿಮಠ
ನಿರ್ದೇಶಕರು, ಪ್ರೊ ಎಕ್ಸ್ ಕನ್ಸಲ್ಟೆನ್ಸಿ ಪ್ರೈ ಲಿ ಕಂಪನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com