ಮೋಡಿ ಮಾಡಿದ ಮಿಸೈಲ್ ಮನುಷ್ಯನ ಕಡಿಮೆ ವೆಚ್ಚದ 'ಸ್ಟೆಂಟ್' ಗಳು!

ಥೈಲಾಂಡ್ ನ ಆ ಹೂ ಮಾರುವ ಹುಡುಗಿಗೆ ಪೋಲಿಯೋ ತಗುಲಿ ನಡೆಯಲಾಗದಷ್ಟು ಕಾಲುಗಳು ಬಲಹೀನವಾಗಿದ್ದವು. ಹದಿಮೂರು...
ಎಪಿಜೆ ಅಬ್ದುಲ್ ಕಲಾಂ
ಎಪಿಜೆ ಅಬ್ದುಲ್ ಕಲಾಂ
Updated on

ಥೈಲಾಂಡ್ ನ ಆ ಹೂ ಮಾರುವ ಹುಡುಗಿಗೆ ಪೋಲಿಯೋ ತಗುಲಿ ನಡೆಯಲಾಗದಷ್ಟು ಕಾಲುಗಳು ಬಲಹೀನವಾಗಿದ್ದವು. ಹದಿಮೂರು ಸಾವಿರ ರೂಪಾಯಿ ವೆಚ್ಚದಲ್ಲಿ ಆಕೆಗೆ ಕೃತಕ ಕಾಲುಗಳನ್ನು ಜೋಡಿಸಲಾಗಿತ್ತು. ಒಂದೊಂದೂ ನಾಲ್ಕು ಕೆ.ಜಿಯಷ್ಟು ಭಾರವಾಗಿದ್ದ ಆ ಕಾಲುಗಳನ್ನು ಹೆಚ್ಚು ಶಕ್ತಿ ಬಳಸಿ ನೆಲದ ಮೇಲೆ ಎಳೆದೆಳೆದುಕೊಂಡು ನಡೆಯಬೇಕಿತ್ತು. ಹೆಚ್ಚು ನಡೆಯಲಾರದೇ ಆ ಹುಡುಗಿ ದಿನಪೂರ್ತಿ ಕುರ್ಚಿಯ ಮೇಲೆಯೇ ಕೂತುಕೊಂಡಿರಬೇಕಿತ್ತು. ಇತ್ತೀಚೆಗೆ ಇಂಡಿಯಾದ ವೈದ್ಯಕೀಯ ತಂಡದ ಥೈಲಾಂಡ್ ಸರಕಾರದ ಜೊತೆಗಿನ ಉನ್ನತ ಭೇಟಿಯ ಸಮಯದಲ್ಲಿ ಆಕೆಗೆ ಇಂಡಿಯಾದಿಂದ ತಂದ ಕೃತಕ ಕಾಲುಗಳನ್ನು ಕಾಲುಗಳನ್ನು ಜೋಡಿಸಲಾಯಿತು. ಆ ಕಾಲುಗಳು ಕೇವಲ ಅರ್ಧ ಕೆಜಿ ತೂಗುತ್ತಿದ್ದವು. ಬೆಲೆಯೂ ತೀರಾ ಕಮ್ಮಿ. ಈಗ ಆ ಹೂ ಹುಡುಗಿ ಸರಸರನೆ ಓಡಾಡುತ್ತಾಳೆ. ವ್ಯಾಪಾರ ಜೋರಾಗಿ ನಡೆದಿದೆ!


ಈ ಕಾಲುಗಳನ್ನು ಡಿ ಆರ್ ಡಿ ಓ ಮತ್ತು ಹೈದರಾಬಾದ್ ನ ನಿಜಾಮುದ್ದೀನ್ ವೈದ್ಯಕೀಯ ಸಂಸ್ಥೆಯ ಸಹಯೋಗದೊಂದಿಗೆ 1994 -95 ರಲ್ಲಿ ಅಭಿವೃದ್ಧಿ ಪಡಿಸಲಾಯಿತು. ಆಗ ಡಿ ಆರ್ ಡಿ ಓ ದ ಮುಖ್ಯಸ್ಥರಾಗಿದ್ದವರು ಡಾ. ಅಬ್ದುಲ್ ಕಲಾಂ! ಮಕ್ಕಳೊಡನೆ ಮಾತಾಡಲೆಂದು ಅಂಗವಿಕಲ ಶಾಲೆಗೆ ತೆರಳಿದ್ದ ಕಲಾಂ ಮಕ್ಕಳು ಭಾರವಾದ ಕೃತಕ ಕಾಲುಗಳನ್ನು ಹೊತ್ತುಕೊಂಡು ನಡೆಯಲಾರದೇ ಒದ್ದಾಡುತ್ತಿದ್ದುದನ್ನು ನೋಡಿದ ಕಲಾಂ ತಮ್ಮ ವಿಜ್ಞಾನಿಗಳನ್ನು ಕರೆದು "ನಮ್ಮ ರಾಕೆಟ್ ಗಳ ದೇಹವನ್ನು ತಯಾರಿಸುವ ಸರಕುಗಳಿಂದ ಈ ಮಕ್ಕಳಿಗೆ ಕಾಲುಗಳನ್ನು ತಯಾರಿಸಬಹುದು. ಈ ಬಗ್ಗೆ ಕೆಲಸ ಶುರು ಮಾಡಿ" ಎಂದು ಆದೇಶಿಸಿದರು. ನಂತರ ಸುಮಾರು ಆರು ತಿಂಗಳ ಕಾಲ ಹಗಲು ರಾತ್ರಿ ಕೆಲಸ ಮಾಡಿ ನಿಜಾಮುದ್ದೀನ್ ವೈದ್ಯಕೀಯ ಸಂಸ್ಥೆಯ ವೈದ್ಯರು ಮತ್ತು ಡಿಆರ್ ಡಿಓ ವಿಜ್ಞಾನಿಗಳು ಹಗುರವಾದ ಕಾಲುಗಳನ್ನು ತಯಾರು ಮಾಡಿಯೇ ಬಿಟ್ಟರು. ಪೋಲಿಯೋ ಪೀಡಿತ ಮಕ್ಕಳು ಕುಣಿ ಕುಣಿದು ಓಡುವುದನ್ನು ನೋಡಿ ಕಲಾಂ ಮತ್ತವರ ವಿಜ್ಞಾನಿಗಳೂ ಕೂಡ ಕುಣಿದಾಡಿದರು. ತಂತ್ರಜ್ಞಾನ ಎಂದರೆ ಕೇವಲ ಬಾಹ್ಯಾಕಾಶ ಸಂಶೋಧನೆಯಲ್ಲ. ಜನ ಸಾಮಾನ್ಯನಿಗೂ ತಲುಪಬೇಕಾದುದು ವಿಜ್ಞಾನದ ಧರ್ಮ ಎಂದುಕೊಂಡವರು ಕಲಾಂ. ಕಾರ್ಬನ್ ಮತ್ತು ಅಲ್ಯುಮಿನಿಯಮ್ ಸಮ್ಮಿಶ್ರಣದ ಗಟ್ಟಿಯಾದ ಎಂಥ ಒತ್ತಡವನ್ನಾದರೂ ತಡೆದು ಬಾಳಬಲ್ಲ ರಾಕೆಟ್ ತಂತ್ರಜ್ಞಾನದಲ್ಲಿ ಬಳಸುವ ಸರಕನ್ನು ಮಕ್ಕಳ ಕಾಲುಗಳಿಗೆ ಬಳಸುವ ಚಿಂತನೆ ಬಹುಷಃ ವಿಶ್ವದಲ್ಲೇ ಮೊದಲು!

  ಹೃದಯದ ಖಾಯಿಲೆ ಸಿರಿವಂತರಿಗೆ ಮಾತ್ರ ಬರುವುದು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ಹೊಲದಲ್ಲಿ ಮೈ ಬಗ್ಗಿಸಿ ಕೆಲಸ ಮಾಡುವವರಿಗೂ ಕಾಡಬಹುದಾದ ಖಾಯಿಲೆ. ಹೃದಯಕ್ಕೆ ರಕ್ತವನ್ನು ಒಯ್ಯುವ ರಕ್ತನಾಳಗಳು ಕಟ್ಟಿಕೊಂಡು ರಕ್ತ ಸಂಚಾರಕ್ಕೆ ತೊಂದರೆ ಆದಾಗ ಮೊದಲ ಹಂತದಲ್ಲಿ ಒಂದು ಚಿಕ್ಕ ಸ್ಪ್ರಿಂಗ್ ಅನ್ನು ರಕ್ತನಾಳದೊಳಗೆ ಸೇರಿಸಿ ಹಿಗ್ಗಿಸಿ ರಕ್ತವು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತದೆ. ಈ ಸ್ಪ್ರಿಂಗ್ ಅನ್ನು "ಸ್ಟೆಂಟ್" ಎಂದು ಕರೆಯಲಾಗುತ್ತದೆ. ಈ ಸ್ಟೆಂಟ್ ನ ಆಗಿನ ಬೆಲೆ ಸುಮಾರು ಎಪ್ಪತೈದು ಸಾವಿರ ರೂಪಾಯಿಗಳು! ಈ ಸ್ಟೆಂಟ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಭಾರತದ ಮಾರುಕಟ್ಟೆಯಲ್ಲಿ ಈ ಸ್ಟೆಂಟ್ ಗಿದ್ದ ಬೇಡಿಕೆಯನ್ನು ನಗದೀಕರಿಸಿಕೊಳ್ಳಲು ವಿದೇಶಿ ಕಂಪನಿಗಳು ದುಬಾರಿ ಬೆಲೆಗೆ ಈ ಸ್ಟೆಂಟ್ ಗಳನ್ನು ಮಾರುತ್ತಿದ್ದವು. ಇದಕ್ಕೆ ಪರಿಹಾರವಾಗಿ ಕಲಾಂ ಕೇರ್ ಫೌಂಡೇಶನ್ ನ ಮುಖ್ಯಸ್ಥ ಸೋಮರಾಜು ಜೊತೆ ಒಂದು ಯೋಜನೆ ರೂಪಿಸಿಕೊಂಡು ಅಗ್ಗದ ಮತ್ತು ಉತ್ತಮ ಗುಣಮಟ್ಟದ ಸ್ಟೆಂಟ್ ಗಳನ್ನು ಕಲಾಂ ತಯಾರಿಸಿಯೇ ಬಿಟ್ಟರು. ಈ ಸ್ಟೆಂಟ್ ಗಳ ಬೆಲೆ ಕೇವಲ ಹದಿನೈದು ಸಾವಿರ ರೂಪಾಯಿಗಳು. ಮತ್ತೆ ಇವುಗಳ ಬೆಲೆಯನ್ನು ಹತ್ತು ಸಾವಿರ ರೂಪಾಯಿಗಳಿಗೆ ಇಳಿಸಲಾಯಿತು. ಈಗ ಸಾವಿರಾರು ಹೃದಯಗಳಲ್ಲಿ ಈ ಕಲಾಂ-ರಾಜು ಸ್ಟೆಂಟ್ ಗಳು ಭದ್ರವಾಗಿ ಕೂತಿವೆ!

  ಹಳ್ಳಿಯಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರಿಗೆ ಬಳಸಲು ಅನುಕೂಲವಾಗುವಂತಹ ಅಗ್ಗದ ಟ್ಯಾಬ್ಲೆಟ್ ಅನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಹಳ್ಳಿಗಳ ಸಮಸ್ತ ರೋಗಿಗಳ ಆರೋಗ್ಯ ಮತ್ತು ರೋಗಗಳ ವಿವರಗಳನ್ನು ಮತ್ತು ಹಿನ್ನೆಲೆಗಳನ್ನು ಸಂಗ್ರಹಿಸಿಡಬಹುದು. ಇವುಗಳನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಸಂಪರ್ಕದಲ್ಲಿರುವಂತೆ ವಿನ್ಯಾಸಗೊಳಿಸಲಾಗುತ್ತದೆ. ಯಾವುದೇ ಚಿಕಿತ್ಸೆಯನ್ನು ನೀಡಬೇಕಾದರೂ ಈ ಟ್ಯಾಬ್ಲೆಟ್ ಮುಖಾಂತರ ರೋಗಿಗಳನ್ನು ಶೀಘ್ರವಾಗಿ ತಲುಪಬಹುದು. ವೈದ್ಯರುಗಳು ಮತ್ತು ಆರೋಗ್ಯ ಕೇಂದ್ರಗಳಿಲ್ಲದ ಹಳ್ಳಿಗಳಲ್ಲಿ ಇದೊಂದು ಕೃತಕವಾದ ಆಸ್ಪತ್ರೆಯಿದ್ದಂತೆ! ಈ ಟ್ಯಾಬ್ಲೆಟ್ ಗೆ ಕಲಾಂ- ರಾಜು ಟ್ಯಾಬ್ಲೆಟ್ ಎಂದು ಹೆಸರಿಸಲಾಗಿದೆ. ಇದೊಂದು ಟ್ಯಾಬ್ಲೆಟ್ ಬಳಕೆಗೆ ಬರುವ ಮೊದಲೇ ಜನರ ವಿಜ್ಞಾನಿ ಕಲಾಂ ತಮ್ಮ ದೈಹಿಕ ಇರುವಿಕೆಯನ್ನು ಕೊನೆಗೊಳಿಸಿದ್ದಾರೆ.

 ಸ್ವಾತಂತ್ರ ಬಂದ ಮೊದಲ ಕೆಲವು ದಶಕಗಳಲ್ಲಿ ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿತ್ತು. ಪ್ರಜೆಗಳ ಅನ್ನ ಮತ್ತು ಸೂರಿಗೇ ಖರ್ಚು ಮಾಡಲು ಹಣವಿಲ್ಲದ ಸಮಯದಲ್ಲಿ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಗೆ ತೀರಾ ಕಡಿಮೆ ಹಣ ದೊರೆಯುತ್ತಿತ್ತು. ತಮಗೆ ಸಿಕ್ಕಿದ ಕಡಿಮೆ ಹಣದಲ್ಲೇ ಕಡಿಮೆ ವೆಚ್ಚದಲ್ಲಿ ಸಂಶೋಧನೆಗಳನ್ನು ನಡೆಸಲಾಯಿತು. ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂಬ ಬಗ್ಗೆ ಭಾರತದ ವಿಜ್ಞಾನಿಗಳು ಪರಿಣಿತರಾದರು. ಇದೇ ಕಾರಣದಿಂದ ಆಟೋ ಬಾಡಿಗೆಗಿಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಕೈಗೊಳ್ಳಲು ಭಾರತಕ್ಕೆ ಸಾಧ್ಯವಾಯಿತು. ಇದಕ್ಕೆಲ್ಲ ಕಾರಣಕರ್ತರು ಸತೀಶ್ ಧವನ್, ಮೆಘನಾದ ಸಹಾ, ಕಲಾಂ ರಂತಹ ವಿಜ್ಞಾನಿಗಳು. ಕಲಾಂರಂತವರು ಸಾಯುವುದಿಲ್ಲ ಅವರು ದೇಹ ಬಿಟ್ಟು ಇರುತ್ತಾರೆ ಅಷ್ಟೇ ತಮ್ಮ ಸಾಧನೆಗಳ ರೂಪದಲ್ಲಿ!  

ಇನ್ನೊಂದು ಮಾತು: ಕಲಾಂ ತಾಯಿನುಡಿಯಲ್ಲಿ ಓದಿದವರು. ಜೀವನಪೂರ್ತಿ ತಾಯಿನುಡಿಯಲ್ಲೇ ಕಲಿಕೆಯ ಬಗ್ಗೆ ಪ್ರತಿಪಾದನೆ ಮಾಡಿದವರು. ತಾಯ್ನುಡಿಯ ಕಲಿಕೆಯ ಬಗ್ಗೆ ನಮ್ಮ ಕೀಳರಿಮೆಯನ್ನು ತೊರೆಯೋಣ. ವಿಜ್ಞಾನದ ಕಲಿಕೆಯನ್ನು ಮತ್ತು ಅಭಿವೃದ್ಧಿಯನ್ನು ನಮ್ಮ ತಾಯ್ನುಡಿಯಲ್ಲೇ ಮಾಡೋಣ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com