ಮಕ್ಕಳ ಓದಿಗೆ ಮನೆಯ ವಾತಾವರಣ ಹೇಗಿರಬೇಕು? ಭಾಗ - 2

ಶಾಲೆಗಳು ಶುರುವಾಗಿ ಇನ್ನೂ ಹದಿನೈದು ದಿನಗಳಾಗಿವೆ. ಮಕ್ಕಳನ್ನು ಓದಿಗೆ ಹದಗೊಳಿಸಲು ಇದು ಸರಿಯಾದ ಸಮಯ. ಇದೊಂದು...
ಓದುತ್ತಿರುವ ಮಕ್ಕಳು (ಸಾಂದರ್ಭಿಕ ಚಿತ್ರ)
ಓದುತ್ತಿರುವ ಮಕ್ಕಳು (ಸಾಂದರ್ಭಿಕ ಚಿತ್ರ)
Updated on

ಶಾಲೆಗಳು ಶುರುವಾಗಿ ಇನ್ನೂ ಹದಿನೈದು ದಿನಗಳಾಗಿವೆ. ಮಕ್ಕಳನ್ನು ಓದಿಗೆ ಹದಗೊಳಿಸಲು ಇದು ಸರಿಯಾದ ಸಮಯ. ಇದೊಂದು ಸಮಯದಲ್ಲಿ ಸರಿಯಾದ ಶಿಸ್ತನ್ನು ಮಕ್ಕಳಿಗೆ ರೂಢಿಸಿಬಿಟ್ಟರೆ ಕೆಲಸದ ಒತ್ತಡದಲ್ಲಿರುವ ತಾಯ್ತಂದೆಯರಿಗೆ ಯಾವುದೇ ತೊಂದರೆ ಕೊಡದೆ ಮಕ್ಕಳು ತಮ್ಮ ಓದಿನಲ್ಲಿ ಮುಂದುವರಿಯುತ್ತವೆ.  
 ಮಕ್ಕಳು ಮದ್ಯಾಹ್ನ ಮೂರು ಗಂಟೆಗೆಲ್ಲ ಶಾಲೆಯನ್ನು ಮುಗಿಸಿಕೊಂಡು ಮನೆಗೆ ಬಂದಿರುತ್ತವೆ. ಬರುತ್ತಿದ್ದಂತೆ ಓದಿಗೋ ಟಿವಿಯ ಮುಂದೋ ಕೂರಿಸಬಾರದು. ಮೊದಲು ಪೌಷ್ಟಿಕವಾದ ಆಹಾರ,ಹಾಲು ಕೊಟ್ಟು ಕೊಂಚ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬೇಕು. ಒಂದು ಅರ್ಧ ಗಂಟೆ ನಿದ್ದೆ ಮಾಡಿದರೂ ಸರಿಯೆ! ಪೌಷ್ಟಿಕ ಆಹಾರದಲ್ಲಿ ಮೆಕ್ ಡೊನಾಲ್ಡ್, ಪಿಜ್ಜಾ ಸಮೋಸಗಳು ಕಡಿಮೆ ಇದ್ದಷ್ಟೂ ಒಳ್ಳೆಯದು. ನಿದ್ದೆಯಾದ ಮೇಲೆ ಇಳಿಸಂಜೆಯಲ್ಲಿ ಈ ಹಿಂದಿನ ಲೇಖನದಲ್ಲಿ ಹೇಳಿದಂತೆ ಒಂದೆರಡು ತಾಸು ದೇಹವನ್ನು ತಣಿಸುವ ಆಟಗಳು. ಆಟಕ್ಕೆ ಅಕ್ಕಪಕ್ಕದ ಮನೆಯ ಮಕ್ಕಳಿದ್ದರೂ ಸರಿ. ಇತ್ತೀಚಿನ ದಿನಗಳಲ್ಲಿ ಅಕ್ಕಪಕ್ಕದ ಮಕ್ಕಳು ಆಟಕ್ಕೆ ಸಿಗುವುದು ಅಪರೂಪವಾದ ಕಾರಣ ಪಾರ್ಕಿಗೋ ಆಟದ ಮೈದಾನಕ್ಕೋ ಕರೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಮಗುವನ್ನು ಆಡಲು ಬಿಟ್ಟು ಒಂದಿಷ್ಟು ಹೊತ್ತು ಹಿರಿಯರು ವಾಕಿಂಗ್ ಹೋಗಿ ತಮ್ಮ ಮನಸ್ಸನ್ನೂ ದೇಹವನ್ನೂ ಪ್ರಫುಲ್ಲಿತಗೊಳಿಸಿಕೊಳ್ಳಬಹುದು. ಒಂದಿಷ್ಟು ದೊಡ್ಡ ಹುಡುಗರಾದರೆ ತಾವೇ ಹೋಗಿ ಆಟ ಆಡಿಕೊಂಡು ಬರುತ್ತವೆ. ಆಟದಿಂದ ಮನೆಗೆ ಬರುವ ಸಮಯವನ್ನು ಸರಿಯಾಗಿ ಪಾಲಿಸುವಂತೆ ಪೋಷಕರು ನೋಡಿಕೊಳ್ಳಬೇಕು.
 ಮನೆಯಲ್ಲಿ ಓದಲು ಕೂತಾಗ ಟಿವಿ ಆಫ್ ಆಗಿರಲಿ. ಓದುವುದಕ್ಕಾಗಿ ಯಾವುದೇ ಕಾರ್ಟೂನನ್ನು ತೋರಿಸುವ ಆಮಿಷ ಬೇಡ ಅಥವಾ ತಿಂಡಿ ಚಾಕಲೇಟುಗಳ ಆಮಿಷವೂ ಸಲ್ಲದು! ಮಕ್ಕಳು ಓದುವಾಗ ನಿಮಗ ಅರ್ಥವಾಗಲಿ ಬಿಡಲಿ ಪಕ್ಕಕ್ಕೆ ಕೂರಬೇಕು. ಅರ್ಥವಾಗುವಂತಿದ್ದರೆ  ಸಾಧ್ಯವಾದಷ್ಟು ಹೇಳಿಕೊಡಬೇಕು. ಎಷ್ಟೋ ಬಾರಿ ತಾಯ್ತಂದೆಯರಿಗೆ ಮಕ್ಕಳ ಪಾಟಗಳು ಅರ್ಥವಾಗುವುದಿಲ್ಲ. ಆಗ ನುರಿತ ಶಿಕ್ಷಕರ ಬಳಿ ವಾರಕ್ಕೆ ಒಂದೆರಡು ದಿನ ಮನೆ ಪಾಠಕ್ಕೆ ಕಳುಹಿಸಬಹುದು. ಮನೆಪಾಠ ಕಡಿಮೆ ಇದ್ದಷ್ಟೂ ಒಳ್ಲೆಯದು. ಮಗುವಿಗೆ ಹೇಳಿಕೊಡಲು ಸಾಧ್ಯವಾದಗ ವಿಷಯಗಳಿಗಷ್ಟೇ ಮನೆಪಾಠಕ್ಕೆ ವ್ಯವಸ್ಥೆ ಮಾಡಬೇಕು. ಏಕೆಂದರೆ ಎಷ್ಟೇ ಒಳ್ಳೆಯ ಶಾಲೆಯಾಗಲಿ, ಮನೆಪಾಠವಾಗಲಿ ಹಲವಾರು ಮಕ್ಕಳಿರುವುದರಿಂದ ಒಂದು ಮಗುವಿಗೆ ಗಮನ ನೀಡಿ ಹೇಳಿಕೊಡಲು ಸಾಧ್ಯವಾಗುವುದಿಲ್ಲ. ತಮ್ಮ ಮಗುವಿನ ದೌರ್ಬಲ್ಯಗಳನ್ನು ಅರಿಯುವುದು ಮತ್ತದಕ್ಕೆ   ಮದ್ದು ನೀಡುವುದು ತಂದೆತಾಯಂದಿರಿಂದ ಮಾತ್ರ ಸಾಧ್ಯ.

 ಮಕ್ಕಳು ಮೊದಮೊದಲು ಜೋರಾಗಿ ಓದುವಂತೆ ಪ್ರೇರೇಪಿಸಬೇಕು, ನಂತರ ಮನಸ್ಸಲ್ಲೇ ಓದಿಕೊಳ್ಳುವ ಅಭ್ಯಾಸ ಮಾಡಿಸಬೇಕು. ತಂದೆ ತಾಯಿಗಳಿಗೆ ಇಂತಹ ವಿಷಯ ಗೊತ್ತಿಲ್ಲ ಎಂಬುದು ಮಕ್ಕಳಿಗೆ ಗೊತ್ತಾಗುವ ಹಾಗೆ ನಡೆದುಕೊಳ್ಳಬಾರದು. ಮಕ್ಕಳು ತಮ್ಮ ಬಳಿ ಶಾಲೆಯ ಮತ್ತು ಮನೆಪಾಠದ ವಿಷಯಗಳನ್ನು ಸಾಧ್ಯವಾದಷ್ಟು ಹಂಚಿಕೊಳ್ಳುವಂತೆ ಹೇಳಬೇಕು. ಇದರಿಂದ ಮಕ್ಕಳು ಯಾವ ಕ್ಷೇತ್ರದಲ್ಲಿ ಹಿನ್ನಡೆಯನ್ನನುಭವಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಅಲ್ಲದೇ ಮಕ್ಕಳೊಡನೆ ಯಾವುದಾದರೂ ಅಹಿತಕರ ಘಟನೆ ನಡೆದರೆ ಸೂಕ್ತ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ.  ಹಾಗೆಯೇ ಮಕ್ಕಳಿಗೆ ತಮ್ಮ ಕಷ್ಟ ಕೇಳುವವರು ಈ ಜಗತ್ತಿನಲ್ಲಿ ಇದ್ದಾರೆ ಎಂಬ ಸುರಕ್ಷಿತ ಭಾವನೆಯೂ ಮೂಡುತ್ತದೆ. ಎಲ್ಲಾ ಮಕ್ಕಳೂ ಒಂದೇ ವೇಗದಲ್ಲಿ ಕಲಿಯುವುದಿಲ್ಲ. ಕಡಿಮೆ ವೇಗದಲ್ಲಿ ಕಲಿಯುವ ಮಕ್ಕಳ ತಂದೆತಾಯಿಗಳಿಗೆ ಹೆಚ್ಚು ತಾಳ್ಮೆ ಇರಬೇಕಾಗುತ್ತದೆ. ಅವರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಮಕ್ಕಳು ಹಿಂದಿರುವ ವಿಷಯದ ಬಗ್ಗೆ ಶಿಕ್ಷಕರೊಡನೆ ಚರ್ಚಿಸಿ ಆ ವಿಷಯವಾಗಿ ಮನೆಯಲ್ಲಿ ಹೇಗೆ ಹೆಚ್ಚು ಗಮನ ನೀಡಬೇಕೆಂಬುದನ್ನು ತಿಳಿದುಕೊಂಡು ಅದನ್ನು ಅನುಸರಿಸಬೇಕು. ಮಕ್ಕಳು ತಾವೇ ಓದಿಕೊಳ್ಳುವಷ್ಟು ದೊಡ್ಡವರಾದ ಮೇಲೆ ಪಕ್ಕದಲ್ಲಿ ಮನೆ ಹಿರಿಯರೂ ತಾವೂ ಯಾವುದೋ ಒಂದು ಒಳ್ಳೆಯ ಪುಸ್ತಕವನ್ನೋ, ಪತ್ರಿಕೆಯನ್ನೋ ಓದುತ್ತಾ ಕುಳಿತು ಮಕ್ಕಳಿಗೆ ಓದುವುದರಲ್ಲಿ ಕಂಪನಿ ಕೊಡಬೇಕು. ತಾವು ಟಿ ವಿ ನೋಡುತ್ತಾ ಮಕ್ಕಳಿಗೆ ಓದುವಂತೆ ಬೈಯುವುದು ಅತ್ಯಂತ ಅಪಾಯಕಾರಿ. ಇದು ಮಕ್ಕಳಿಗೆ ಏಕಾಗ್ರತೆ ಕೆಡಲು ಮತ್ತು ತಾಯ್ತಂದೆಯರ ಬಗ್ಗೆ ಅಸಡ್ಡೆ ಮೂಡಲೂ ಕಾರಣವಾಗುತ್ತದೆ.  ಪರೀಕ್ಷೆಗಾಗಿ ಶಿಕ್ಷಕರು ಬರೆಸುವ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಿಸಬಾರದು. ಪಾಠದಲ್ಲಿರುವ ಮುಖ್ಯವಾದ ಅಂಶಗಳನ್ನು ಗುರುತಿಸುವುದನ್ನು ಹೇಳಿಕೊಡಬೇಕು. ಅವುಗಳನ್ನು ಪೆನ್ಸಿಲ್ ಮೂಲಕ ಗುರುತಿಸಿ ಪರೀಕ್ಷೆಯ ಸಮಯದಲ್ಲಿ ಹೆಚ್ಚು ಗಮನ ನೀಡಿ ಓದುವಂತೆ ಹೇಳಬೇಕು.
 ಪಠ್ಯದಲ್ಲಿರುವ ವಿಷಯವಲ್ಲದೇ ಪಠ್ಯಕ್ಕೆ ಪೂರಕವಾದ ಇತರ ಮಾಹಿತಿಯನ್ನು ಇಂಟರೆ ನೆಟ್ ಮೂಲಕ ಅಥವಾ ಪತ್ರಿಕೆಗಳ ಮೂಲಕ ತಿಳಿದುಕೊಂಡು ಮಕ್ಕಳಿಗೆ ವಿವರಿಸಬೇಕು. ಆಗ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚುತ್ತದೆ. ಈ ವಿಷಯವಾಗಿ ಎಲ್ಲರೊಡನೆ ಚರ್ಚಿಸುವ ಅವಕಾಶ ಕೊಡಬೇಕು. ಮಕ್ಕಳಿಗೆ ಇಂಟರ್ ನೆಟ್ ಬ್ರೌಸಿಂಗ್ ಮಾಡುವ ಅಭ್ಯಾಸವಿದ್ದರೆ ಅವರು ಬಳಸುವ ಕಂಪ್ಯೂಟರನ್ನು ಅವರ ಕೋಣೆಯಲ್ಲಿ ಇರಿಸದೇ ಯಾವಾಗಲೂ ಎಲ್ಲರಿಗೂ ಕಾಣುವಂತೆ ನಡುಮನೆಯಲ್ಲಿ ಇಟ್ಟಿರಬೇಕು. ಇದರಿಂದ ಅನೈತಿಕ ಯೋಚನೆಗಳನ್ನು ಬಿತ್ತುವ ಜಾಲತಾಣಗಳನ್ನು ಮಕ್ಕಳಿಂದ ದೂರ ಇಡಲು ಸಹಾಯವಾಗುತ್ತದೆ.   ಈಗ ಮಕ್ಕಳ ಜಗತ್ತು ದೊಡ್ಡದಾಗುತ್ತಿದೆ. ದಶಕಗಳ ಹಿಂದಿನ ಮಕ್ಕಳು ಜಗತ್ತಿಗೆ ತೆರೆದುಕೊಳ್ಳುವುದಕ್ಕಿಂತ ಬಹಳ ಚಿಕ್ಕ ವಯಸ್ಸಿನಲ್ಲಿ ಈಗಿನ ಮಕ್ಕಳು ಜಗತ್ತಿಗೆ ತೆರೆದುಕೊಳ್ಳುತ್ತಾರೆ. ಜೀವನದ ವೇಗ ಹೆಚ್ಚಿದೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ತಾಯ್ತಂದೆಯರು ಮಾಡಿಕೊಳ್ಳಬೇಕು ಹಾಗೂ ಮಕ್ಕಳನ್ನು ಅಣಿಗೊಳಿಸಬೇಕು!


-ಸಿಂಧು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com