'ದರ್ಪ'ದಿಂದ ಶುರುವಾದ ಇಂಟರ್ ನೆಟ್ ಈಗ ಜಗದಗಲ ಮುಗಿಲಗಲ ..!

ಇಂಟರ್ ನೆಟ್ ನ ಯೋಚನೆಯ ಮೊದಲ ಬೀಜ ಮೊಳಕೆಯೊಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದ ರಕ್ಷಣಾದಳದ ಸಂಶೋಧನಾ ಸಂಸ್ಥೆ 'ದರ್ಪ' ದಲ್ಲಿ...
ಅಂತರ್ಜಾಲ (ಸಾಂಕೇತಿಕ ಚಿತ್ರ)
ಅಂತರ್ಜಾಲ (ಸಾಂಕೇತಿಕ ಚಿತ್ರ)
Updated on

ಇಂದಿನ ದಿನಗಳಲ್ಲಿ ಕಂಪ್ಯೂಟರ್ ಗೊತ್ತಿಲ್ಲದಿರುವುದು ಅನಕ್ಷರತೆ, ಇಂಟರ್ ನೆಟ್ ಬಳಸದಿರುವುದೇ ಬಡತನ! ವಿಶ್ವದ ಎಲ್ಲ ಮೂಲೆಗೆ ಆಹಾರ  ಮುಟ್ಟುತ್ತದೋ ಇಲ್ಲವೂ ಇಂಟರ್ ನೆಟ್ ಅಂತೂ ಮುಟ್ಟಿದೆ. ವಿಶ್ವವನ್ನು ನಿಜವಾದ ಅರ್ಥದಲ್ಲಿ ಹಳ್ಳಿಯನ್ನಾಗಿ ಮಾಡಿರುವುದು ಇಂಟರ್ ನೆಟ್.
 ಇಂಟರ್ ನೆಟ್ ನ ಯೋಚನೆಯ ಮೊದಲ ಬೀಜ ಮೊಳಕೆಯೊಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದ ರಕ್ಷಣಾದಳದ ಸಂಶೋಧನಾ ಸಂಸ್ಥೆ 'ದರ್ಪ' ದಲ್ಲಿ (DARPA - Department of Advance Research Project Agency). ವಿಶ್ವದ ಎಲ್ಲ ಕಂಪ್ಯೂಟರ್ ಗಳನ್ನು ಒಂದಕ್ಕೊಂದು ಜೋಡಿಸಿ ಯಾವುದೇ ಮಾಹಿತಿಯನ್ನು ಯಾವುದೇ ಮೂಲೆಯಲ್ಲಿ ಕುಳಿತು ಪಡೆಯುವಂತಹ ಒಂದು ವ್ಯವಸ್ಥೆಯನ್ನು ಜಾರಿಗೆ ತರಲು ಈ ವಿಜ್ಞಾನಿಗಳು ಯೋಚಿಸಿದ್ದರು. 1968 ರ ಇಸವಿಯಲ್ಲಿ  ಬಾಬ್ ಟೇಲರ್ ಎಂಬ ವಿಜ್ಞಾನಿಯು ತಮ್ಮ ತಂಡದೊಂದಿಗೆ ಒಂದು ಇದಕ್ಕಾಗಿ ವಿವರವಾದ ಯೋಜನೆಯನ್ನು ರೂಪಿಸಿದರು. ಯೋಜನೆಯಲ್ಲಿ ಕಂಪ್ಯೂಟರ್ ಗಳನ್ನು ಹೇಗೆ ಜೋಡಿಸುವುದು, ಒಂದಕ್ಕೊಂದರ ನಡುವೆ ಸಂಪರ್ಕ ಹೇಗೆ ಸಾಧಿಸುವುದು, ಸಂವಹನ ಯಾವ ರೀತಿಯಲ್ಲಿ ಇರಬೇಕು ಎಂಬಿತ್ಯಾದಿ ವಿವರಗಳಿದ್ದವು.  ಟೇಲರ್ ರ ತಂಡ ರಕ್ಷಣಾ ಸಂಶೋದನಾಲಯದ ಅನೇಕ ವಿಜ್ಞಾನಿಗಳನ್ನು ಹಾಗೂ MIT ಕಾಲೇಜಿನ ಅನೇಕ ಸಂಶೋಧಕರನ್ನು ಒಳಗೊಂಡಿತ್ತು. ಅವರ ಯೋಜನೆಯಂತೆ ಕಂಪ್ಯೂಟರ್ ಗಳನ್ನು ಜೋಡಿಸಲು ತಕ್ಕ ತಂತ್ರಜ್ಞಾನವನ್ನು ಬೆಳೆಸಲು ಸುಮಾರು 140 ಕಂಪನಿಗಳಿಗೆ ಆಹ್ವಾನ ಕಳಿಸಲಾಯಿತು. ಬಹುತೇಕ ಎಲ್ಲ ಕಂಪನಿಗಳು ಇದೊಂದು ಮುಠ್ಠಾಳತನದ ಯೋಜನೆ ಎಂದು ಹಿಂಜರಿದವು. ಕಡೆಗೆ BBN ಟೆಕ್ನಾಲಜೀಸ್ ಎಂಬ ಸಂಸ್ಥೆಯು ಕೊಂಚ 'ರಿಸ್ಕ್' ತೆಗೆದುಕೊಂಡು ಈ ಯೋಜನೆಯನ್ನು ಕೈಗೆತ್ತಿಕೊಂಡಿತು. ಈ ಜೋಡಣೆಯ ಯೋಜನೆಯನ್ನು ಅರ್ಪಾನೆಟ್ (ARPANET -  Advance Research Project  Networking) ಎಂದು ಕರೆಯಲಾಯಿತು. ಮೊದಲು ಅರ್ಪಾನೆಟ್ ಬಗ್ಗೆ ಸಾಕಷ್ಟು ಗುಲ್ಲುಗಳೆದ್ದವು. ಇದೊಂದು ಅಮೇರಿಕದ ರಹಸ್ಯ ಅಣು ಯುದ್ಧಕ್ಕೆ ಸಂಬಂಧಿಸಿದ ಸಂಶೋಧನೆ ಎಂದು ಸುದ್ದಿ ಹರಡಲಾಯಿತು. ಸಾಕಷ್ಟು ಪರ ವಿರೋಧ ಗಲಾಟೆಗಳು ನಡೆದವು. ಕಡೆಗೆ ವಿಜ್ಞಾನಿಗಳೇ ಜಗತ್ತಿನ ಮುಂದೆ ಬಂದು ಇದೊಂದು ಕಂಪ್ಯೂಟರ್ ತಂತ್ರಜ್ಞಾನ ಕುರಿತ ಸಂಶೋಧನೆ ಎಂದು ಸ್ಪಷ್ಟಪಡಿಸಬೇಕಾಯಿತು
.


(ಚಿತ್ರದಲ್ಲಿ - ಅರ್ಪಾನೆಟ್ ಮೊದಲ ಸಂದೇಶದ ಲಾಗ್ ವಿವರ)

 1969 ಅಕ್ಟೋಬರ್ 29 ಇಂಟರ್ ನೆಟ್ ನ ಐತಿಹಾಸಿಕ ದಿನ. ಅದು ಇಂಟರ್ ನೆಟ್ ಹುಟ್ಟಿದ ದಿನ! ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಸ್ಟಾನ್ ಫೋರ್ಡ್ ಸಂಶೋಧನಾಲಯಕ್ಕೆ ಮೊದಲ ಸಂದೇಶ ಕಳಿಸಿದ! ಆತ ಕಳಿಸಿದ ಮೊದಲ ಸಂದೇಶ "login" ಎಂಬುದಾಗಿತ್ತು. ಆದರೆ l ಕಳುಹಿಸಿ o ಕಳಿಸುವ ಹೊತ್ತಿಗೆ ಕಂಪ್ಯೂಟರ್ ಜೋಡಣೆಯ ವ್ಯವಸ್ಥೆ ಕುಸಿದು (crash) ಹೋಯಿತು. ತದನಂತರ ವಿಜ್ಞಾನಿಗಳು ವ್ಯವಸ್ಥೆಯು ಕುಸಿದು ಬಿದ್ದ ಕಾರಣವನ್ನು ಹುಡುಕಿ ರಿಪೇರಿ ಮಾಡಿ  ಮತ್ತೊಮ್ಮೆ ಸಂದೇಶವನ್ನು ಕಳಿಸುವ ವ್ಯವಸ್ಥೆ ಮಾಡಿದರು. ಈ ಬಾರಿ ಸಂಪೂರ್ಣವಾಗಿ login ಪದ ಸಂಶೋಧನಾಲಯಲಕ್ಕೆ ದೊರಕಿತು. ಹಾಗಾಗಿ ಇಂಟರ್ ನೆಟ್ ನ ಇತಿಹಾಸದಲ್ಲಿ ಮೊದಲು ಪ್ರಸಾರವಾದ ಪದ "lo" ಮಾತ್ರ ಎಂದು ದಾಖಲಾಯಿತು!
 ಮುಂದಿನ ಒಂದು ವರ್ಷದ ಹೊತ್ತಿಗೆ ಅರ್ಪಾನೆಟ್ 57 ಕಂಪ್ಯೂಟರ್ ಗಳನ್ನು ಅಮೇರಿಕಾದಾದ್ಯಂತ ಜೋಡಿಸಿತು. 1981 ರ ಹೊತ್ತಿಗೆ 213 ಕಂಪ್ಯೂಟರ್ ಗಳು ಅಧಿಕೃತವಾಗಿ ಅರ್ಪಾನೆಟ್ ಗೆ ಅರ್ಪಣೆಯಾಗಿದ್ದವು. 1984 ರಲ್ಲಿ ಅರ್ಪಾನೆಟ್ ಅನ್ನು ನವೀಕರಣಗೊಳಿಸಿ  ಸಂಯುಕ್ತ ಸಂಸ್ಥಾನದ ರಕ್ಷಣಾ ದಳಕ್ಕೆ ಅಧಿಕೃತವಾಗಿ ವಹಿಸಿಕೊಡಲಾಯಿತು. ಅಲ್ಲಿಂದ ಇಂಟರ್ ನೆಟ್ ಶಿಶುವು ವಿಶ್ವವನ್ನು ಬದಲಿಸಬಲ್ಲ ಶಕ್ತಿಯಾಗಿ ರೂಪುಗೊಳ್ಳುತ್ತಾ ಸಾಗಿತು. ಮುಂದೆ ಸಾವಿರ ಕೈಗಳ ಕಿರಾತಾರ್ಜುನನಾಗಿ ರೂಪುಗೊಂಡು ತ್ರಿವಿಕ್ರಮನಂತೆ ಬೆಳೆಯಿತು!

-ಶ್ರೀಹರ್ಷ ಸಾಲಿಮಠ
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com