ಡಿಜಿಟಲ್ ಸುಖಗಳ ಸಂಶೋಧಕಿ ಹೆಡಿ ಲಾಮರ್!

ಹೆಡಿ ಲಾಮರ್ ಬಹುಮುಖ ಪ್ರತಿಭೆಯ ಹೆಣ್ಣುಮಗಳು. ನಟಿ,ವಿಜ್ಞಾನಿ, ಯುದ್ಧ ತಂತ್ರ ತಜ್ಞೆ.
ಹೆಡಿ ಲಾಮರ್
ಹೆಡಿ ಲಾಮರ್

ಮೊನ್ನೆ ಗೂಗಲ್ ತನ್ನ ಹುಡುಕಾಟದ ಇಂಜಿನ್ ನ ಆಡುಚಿತ್ರದಲ್ಲಿ (ಡೂಡಲ್) ಹೆಡಿ ಲಾಮರ್ ರನ್ನು ನೆನಪಿಸಿಕೊಂಡಿತು. ಯಾರಿದು ಹೆಡಿ ಲಾಮರ್? ಹೆಡಿ ಲಾಮರ್ ಬಹುಮುಖ ಪ್ರತಿಭೆಯ ಹೆಣ್ಣುಮಗಳು. ನಟಿ,ವಿಜ್ಞಾನಿ, ಯುದ್ಧ ತಂತ್ರ ತಜ್ಞೆ. 1914 ರಲ್ಲಿ ಹುಟ್ಟಿದ ಆಸ್ಟ್ರೇಲಿಯಾ ಮೂಲದವಳು. ಆಕೆಯ ಗಂಡ ಆಗಿನ ಕಾಲದಲ್ಲಿ ಆಸ್ಟ್ರೇಲಿಯಾದ ಮೂರನೆಯ ಅತಿ ದೊಡ್ಡ ಶ್ರೀಮಂತ. ಯುದ್ಧ ಪರಿಕರಗಳ ವ್ಯಾಪಾರಿ. ಹೆಡಿ ಲಾಮರ್ ತನ್ನ 19ನೆಯ ವಯಸ್ಸಿನಲ್ಲಿ "ಎಕ್ಸ್ಟಸಿ" ಎಂಬ ಚಿತ್ರದಲ್ಲಿ ನಟಿಸಿದಳು. ಇದು ಸಿನಿಮಾ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ನಗ್ನತೆ ಮತ್ತು ಲೈಂಗಿಕತೆಯನ್ನು ಒಳಗೊಂಡ ಮುಖ್ಯವಾಹಿನಿಯ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಒಳಗಾಯಿತು. ಈ ಚಿತ್ರದ ನಾಯಕಿಯಾಗಿ ಇವೆಲ್ಲದರಲ್ಲೂ ಭಾಗವಹಿಸಿದ್ದಳು ಹೆಡಿ! ಕೋಪಗೊಂಡ ಗಂಡ ಆಕೆಯನ್ನು ಮನೆಯಲ್ಲಿ ಕೂಡಿಹಾಕಿದ. ಹೇಗೋ ಗಂಡನಿಂದ ತಪ್ಪಿಸಿಕೊಂಡು ಪ್ಯಾರಿಸ್ ತಲುಪಿದವಳಿಗೆ ಖ್ಯಾತ MGM ಸಿನಿಮಾಗಳ ನಿರ್ಮಾಪಕ ಲೂಯಿಸ್ ಮಯರ್ ನ ಪರಿಚಯವಾಯಿತು. ಅಲ್ಲಿಂದ ಆಕೆ ಹಿಂದಿರುಗಿ ನೋಡಲಿಲ್ಲ. ಕೆಲವೇ ಸಮಯದಲ್ಲಿ ಹಾಲಿವುಡ್ ನ ಬೇಡಿಕೆಯ ಸ್ಟಾರ್ ಆದಳು! 

 ಹತ್ತು ವರ್ಷಗಳ ನಂತರ ನಟನೆಯ ವೃತ್ತಿಯಿಂದ ಬೇಸತ್ತು ಸಂಶೋಧನೆಯಲ್ಲಿ ತೊಡಗಿಕೊಂಡಳು.  ಎರಡನೆಯ ಮಹಾಯುದ್ಧ ಪ್ರಾರಂಭವಾದ ಕಾಲ ಅದು. ಸುಧಾರಿಸಿದ ಟ್ರಾಫಿಕ್ ಸಿಗ್ನಲ್ ಗಳು ಈಕೆಯ ಮೊದಲ ಸಂಶೋಧನೆ. ನಂತರ ಸಂಗೀತಗಾರ ಜಾರ್ಜ್ ಆಂಥೇಲ್ ಜೊತೆಗೆ ಸೇರಿ ಯುದ್ಧ ಸಂಬಂಧಿ ಸಂಶೋಧನೆಗಳಿಗೆ ಕೈಹಾಕಿದಳು. ಇದರ ಫಲವಾಗಿ ಸಂಶೋಧಿಸಿದ್ದೇ ಸ್ಪ್ರೆಡ್ ಸ್ಪೆಕ್ಟ್ರಮ್, ಫ್ರೀಕ್ವೆನ್ಸಿ ಹಾಪಿಂಗ್ ತಂತ್ರಜ್ಞಾನಗಳು. ಇವೇ ಈಗಿನ ಎಲ್ಲಾ ತಂತಿರಹಿತ ತಂತ್ರಜ್ಞಾನಗಳಾದ ಮೊಬೈಲ್, ವೈಫೈ, ಸಿಡಿಎಮ್ ಎ ತಂತ್ರಜ್ಞಾನಗಳ ಮೂಲ!  

 ರಾಡಾರ್ ಗಳ ಕಣ್ಣಿಗೆ ಸುಲಭವಾಗಿ ಕಾಣದಂತೆ ಮತ್ತು ಜಾಮರ್ ಗಳ ಕೈಗೆ ಸಿಕ್ಕದಂತೆ ಸಿಗ್ನಲ್ ಗಳನ್ನುಮತ್ತು ಸಂದೇಶಗಳನ್ನು ಕಳಿಸುವ ಅವಶ್ಯಕತೆಯಿತ್ತು. ಆಗ ಜಾಮರ್ ಗಳು ಸಂಕೇತ ಬರುತ್ತಿದ್ದ ಚಾನೆಲ್ ಗಳನ್ನು ಮಾತ್ರ ಹುಡುಕಿ ಸಂದೇಶಗಳನ್ನು ಕಟ್ಟಿಹಾಕುತ್ತಿದ್ದವು. ಜಾಮರ್ ಗಳ ದಿಕ್ಕು ತಪ್ಪಿಸಲು ಮತ್ತು ಸಂದೇಶಗಳ ರಹಸ್ಯವನ್ನು ಕಾಪಾಡಲು ಸ್ಪ್ರೆಡ್ ಸ್ಪೆಕ್ಟ್ರಮ್ ಅಂದರೆ ಹರಡಿದ ಅಲೆಗೊಂಚಲನ್ನು ಕಳಿಸುವ ತಂತ್ರಜ್ಞಾನವನ್ನು ಶೋಧಿಸಲಾಯಿತು. ನಮ್ಮ ಸಂದೇಶವನ್ನು ಒಂದೇ ಕಾಲುವೆಯ ಮುಖಾಂತರ ಕಳಿಸುವ ಬದಲು ಸಂದೇಶವನ್ನು ಹರಿದು-ಮುರಿದು ಬೇರೆ ಬೇರೆ ಕಾಲುವೆಗಳ ಮುಖಾಂತರ ಬೇರೆ ತರಂಗಾಂತರಗಳಲ್ಲಿ ಕಳುಹಿಸಲಾಗುತ್ತದೆ. ರಿಸೀವರ್ ಗಳು ಈ ಮುರಿದ ಸಂದೇಶವನ್ನು ಒಟ್ಟಿಗೆ ಜೋಡಿಸಿ ನಮಗೆ ತಲುಪಿಸುತ್ತವೆ. ಈ ಬೇರೆ ಬೇರೆ ತರಂಗಾಂತರಗಳಲ್ಲಿ ಕಳಿಸುವ ವ್ಯವಸ್ಥೆಯನ್ನು ಫ್ರಿಕ್ವೆನ್ಸಿ ಹಾಪಿಂಗ್ ಅಂದರೆ ಅಲೆಗಳ ಜಿಗಿತ ಎಂದು ಕರೆಯಲಾಗುತ್ತದೆ.

 ನಮ್ಮ  ಇಂಟರ್ ನೆಟ್ ಮತ್ತು ವೈಫೈಗಳಲ್ಲಿ ಬಳಸುವ ತಂತ್ರಜ್ಞಾನಕ್ಕೆ ಮೂಲ ತಂತ್ರಜ್ಞಾನ ಇದೇ! ಈಗ ಸಾಕಷ್ಟು ಮುಂದುವರಿದಿದೆ. ಸುರಕ್ಷತೆಯ ವಿಷಯದಲ್ಲಿ ಇದಕ್ಕೆ ಸಮನಾದ ತಂತ್ರಜ್ಞಾನ ಇನ್ನೊಂದಿಲ್ಲ. ಈ ತಂತ್ರಜ್ಞಾನದ ಸಂಶೋಧನೆಗೆ 1942ರಲ್ಲಿ ಪೇಟೆಂಟ್ ದೊರೆಯಿತು. ಇದನ್ನು ಬಳಸಲು ಅಮೇರಿಕ ಮಿಲಿಟರಿ ಇಪ್ಪತ್ತು ವರ್ಷಗಳನ್ನೇ ತೆಗೆದುಕೊಂಡಿತು. ಆದರೆ ನಂತರದ ದಿನಗಳಲ್ಲಿ ದೂರ ಸಂಪರ್ಕದ ಕ್ಷೇತ್ರದಲ್ಲಿ ಈ ಸಂಶೋಧನೆ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿತು! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com