ಪರೀಕ್ಷೆಗಾಗಿ ಓದಲು ಅಲ್ಲ ಬರೆಯಲು ಈಗಲೇ ಪ್ರಾರಂಭಿಸಿ

ಬರೆಯುವುದರಿಂದ ನಮ್ಮ ಉತ್ತರ ಬರವಣಿಗೆ ಮತ್ತು ನಿಜವಾದ ಉತ್ತರದಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳು ನಮಗೆ ಗೊತ್ತಾಗುತ್ತವೆ. ಅನೇಕ ಬಾರಿ ನಾವು ಬರೆಯಬೇಕಾದ ಮ್ರಮುಖ ಅಂಶಗಳನ್ನು ಬರೆಯುವುದನ್ನೇ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜನವರಿಯಿಂದ ಪರೀಕ್ಷೆಗಳಿಗಾಗಿ ಓದಲು ರಜೆ ಶುರುವಾಗುತ್ತದೆ. ಜನವರಿಯ ಕೊನೆಯ ಹೊತ್ತಿಗೆ ಪ್ರಾಕ್ಟಿಕಲ್ ಅಂದರೆ ಪ್ರಾಯೋಗಿಕ ಪರೀಕ್ಷೆಗಳು ಶುರುವಾಗುತ್ತವೆ.

ಫೆಬ್ರವರಿ ಕೊನೆಯ ಹೊತ್ತಿಗೆ ಥಿಯರಿ ಅಂದರೆ ಸೈದ್ಧಾಂತಿಕ ಪರೀಕ್ಷೆಗಳು ಶುರುವಾಗುತ್ತವೆ. ಪರೀಕ್ಷೆಗೆ ತಯಾರಿ ಶುರುಮಾಡಲು ಈಗ ಇನ್ನೂ ಸಮಯು ಮೀರಿಲ್ಲ ಹಾಗೂ ಉಳಿದಿರುವ ಕಡಿಮೆ ಸಮಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಮಾರ್ಗ ಹೇಗೆ ಎಂಬುದನ್ನು ಹಿಂದಿನ ಎರಡು ಅಂಕಣಗಳಲ್ಲಿ ತಿಳಿಸಿದ್ದೆವು. ಈಗಾಗಲೇ ಅದರಂತೆ ತಯಾರಿಗಳು ಶುರುವಾಗಿರುತ್ತವೆ ಎಂದುಕೊಂಡಿರುತ್ತೇನೆ. ಕೈಪಿಡಿ ಪುಸ್ತಕ ಈಗಾಗಲೇ ನಿಮ್ಮ ಸಹಾಯಕ್ಕೆ ತೊಡಗಿದೆ ಎಂದು ಭಾವಿಸುತ್ತೇನೆ.

 ಈ ಸಮಯದಲ್ಲಿ ಓದುವುದು ಮಾತ್ರವಲ್ಲ ಬರೆಯುವುದೂ ಮುಖ್ಯ! ಬರೆಯುವುದರಿಂದ ನಮ್ಮ ಉತ್ತರ ಬರವಣಿಗೆ ಮತ್ತು ನಿಜವಾದ ಉತ್ತರದಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳು ನಮಗೆ ಗೊತ್ತಾಗುತ್ತವೆ. ಅನೇಕ ಬಾರಿ ನಾವು ಬರೆಯಬೇಕಾದ ಮ್ರಮುಖ ಅಂಶಗಳನ್ನು ಬರೆಯುವುದನ್ನೇ ಬಿಟ್ಟುಬಿಟ್ಟಿರುತ್ತೇವೆ. ಅವಶ್ಯಕವಲ್ಲದ ವಿಷಯಗಳನ್ನು ಎಷ್ಟು ಬರೆದರೂ ಅಂಕಗಳು ದೊರಕುವುದಿಲ್ಲ. ಎರಡು ಅಂಕಗಳಿಗೆ ಎಷ್ಟು ಉತ್ತರ ಬರೆಯಬೇಕು ಮತ್ತು ಐದು ಅಂಕಗಳಿಗೆ ಎಷ್ಟು ಉದ್ದದ ಉತ್ತರಗಳನ್ನು ಬರೆಯಬೇಕು ಎಂಬುದು ಗೊತ್ತಾಗಬೇಕಾದರೆ ಬರೆದು ಅಭ್ಯಾಸ ಮಾಡುವುದು ಅತ್ಯಂತ ಅವಶ್ಯಕ.

 ಕೈಪಿಡಿಯಲ್ಲಿ ಮಾದರಿ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳು ದೊರೆಯುತ್ತವೆ. ಉತ್ತರಗಳನ್ನು ಬರೆಯಬೇಕಾದ ವಿಧಾನಗಳ ಬಗ್ಗೆಯೂ ಒಂದು ಪರಿಕಲ್ಪನೆ ಅವನ್ನು ಓದಿದಾಗ ಬರುತ್ತದೆ. ಈಗಿಂದೀಗಲೇ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿ ಅಭ್ಯಾಸ ಮಾಡುವುದು ಕಷ್ಟ. ಪಠ್ಯದ ಪ್ರಕಾರ ಪಾಠಗಳನ್ನು ಓದಿಕೊಂಡು ಹೋದಂತೆ ನಮಗೆ ನಾವೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿಕೊಂಡು ಉತ್ತರಿಸುತ್ತಾ ಹೋಗಬೇಕು.

ಮೊದಲೆರಡು ಅಥವಾ ಮೂರು ಪಾಠಗಳನ್ನು ಓದಿಕೊಂಡು ಅದರಲ್ಲೆ ಒಂದು ಅಂಕ ಎರಡು ಮೂರು ಅಂಕಗಳು ಮತ್ತು ಐದು ಅಂಕಗಳ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಇದಕ್ಕಾಗಿ ಹಳೆಯ ಪ್ರಶ್ನೆಪತ್ರಿಕೆಗಳು ಗೈಡ್ ಗಳು ಪಠ್ಯಪುಸ್ತಕದ ಅಭ್ಯಾಸ ಪುಟಗಳ ಸಹಾಯ ಪಡೆಯಬಹುದು. ನಂತರ ಪ್ರಶ್ನೆಪತ್ರಿಕೆಯಲ್ಲಿ ಕೇಳುವಂತೆ ಹತ್ತು ಒಂದು ಅಂಕ, ಐದು ಎರಡು ಅಂಕ ಈ ರೀತಿಯ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಪ್ರಶ್ನೆ ಪತ್ರಿಕೆ ಸಿದ್ಧ ಮಾಡಿಕೊಳ್ಳಬೇಕು. ಒಂದು ಸಂಜೆ ಕೋಣೆಯಲ್ಲಿ ಕುಳಿತುಕೊಂಡು ಈ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸಬೇಕು. ಮರುದಿನ ನಿಮ್ಮ ಉತ್ತರ ಪತ್ರಿಕೆಯನ್ನು ನೀವೇ ಮೌಲ್ಯಮಾಪನ ಮಾಡಿಕೊಳ್ಳಬೇಕು. ಯಾವ ಯಾವ ಉತ್ತರಗಳು ತಪ್ಪಾಗಿವೆ? ಏಕೆ ತಪ್ಪಾಗಿವೆ? ಯಾವ ರೀತಿ ಬರೆದಿದ್ದರೆ ಚೆನ್ನಾಗಿರುತ್ತಿತ್ತು? ಅಂಕಗಳು ಕಳೆದುಹೋಗುವ ಕಾರಣಗಳು ಯಾವವು ? ಎಂಬುದೆಲ್ಲ ನಿಮ್ಮ ಗಮನಕ್ಕೆ ಈ ಮೌಲ್ಯಮಾಪನದ ಸಮಯದಲ್ಲಿ ಬರುತ್ತದೆ.

ನಿಮ್ಮನ್ನೇ ಮೌಲ್ಯಮಾಪನ ಮಾಡಿಕೊಳ್ಳುವುದು ನಿಮಗೆ ಕಷ್ಟವಾದರೆ ಮೌಲ್ಯಮಾಪನಕ್ಕೆ ಸ್ನೇಹಿತರ ಅಥವಾ ಶಿಕ್ಷಕರ ಸಹಾಯ ಪಡೆದುಕೊಳ್ಳಬಹುದು. ನಿಮ್ಮ ಗೆಳೆಯರೂ ಇದೇ ರೀತಿಯ ಕ್ರಮ ಅನುಸರಿಸುತ್ತಿದ್ದರೆ ಪರಸ್ಪರ ಉತ್ತರಪತ್ರಿಕೆಗಳನ್ನು ವಿನಿಮಯ ಮಾಡಿಕೊಂಸು ಮೌಲ್ಯಮಾಪನ ಮಾಡಿಕೊಳ್ಳಬಹುದು. ಚಿತ್ರಗಳನ್ನು ಹೇಗೆ ನೀಟಾಗಿ ಬರೆಯಬೇಕು ಮತ್ತು ಅಂಗಗಳನ್ನು ಹೇಗೆ ಗುರುತಿಸಬೇಕು, ಅವಶ್ಯಕವಾದ ಚಿತ್ರಗಳನ್ನು, ಗ್ರಾಫ್ ಗಳನ್ನು ಎಲ್ಲೆಲ್ಲಿ ಬರೆಯಬೇಕು ಎಂಬುದೆಲ್ಲದರ ತಿಳುವಳಿಕೆ ಇದರಿಂದ ಬರುತ್ತದೆ.
ಈ ರೀತಿ ವಾರಕ್ಕೆ ಎರಡು ದಿನ ಮಾಡಬೇಕು. ಇದರಿಂದ ವಾರಕ್ಕೆ ಎರಡು ವಿಷಯಗಳನ್ನು ಅಭ್ಯಾಸ ಮಾಡಬಹುದು. ಅಂದರೆ ತಿಂಗಳಿಗೆ ಒಂದು ವಿಷಯದ ಪ್ರಶ್ನೆಪತ್ರಿಕೆನ್ನು ಎರಡು ಬಾರಿ ಬರೆದಂತಾಗುತ್ತದೆ. ಇನ್ನು ಮೂರು ತಿಂಗಳಲ್ಲಿ ಒಂದೊಂದು ವಿಷಯದ ಆರು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ ಅನುಭವ ನಿಮ್ಮದಾಗುತ್ತದೆ!

  ಈ ರೀತಿ ಮಾಡುವುದರಿಂದ ಪರೀಕ್ಷೆಗಳಲ್ಲಿ ಸಮಯ ಪಾಲನೆ ಚೆನ್ನಾಗಿ ಆಗುತ್ತದೆ. ಯಾವ ಪ್ರಶ್ನೆಗೆ ಎಷ್ಟು ಸಮಯ ಮೀಸಲಿಡಬೇಕೆಂಬುದು ಚೆನ್ನಾಗಿ ಗೊತ್ತಾಗುತ್ತದೆ. ಲೆಕ್ಕಗಳನ್ನು ವೇಗವಾಗಿ ಉತ್ತರಿಸಬಹುದು. ಮೊದಮೊದಲು ನೀಟಾದ ಅಕ್ಷರಗಳಲ್ಲಿ ಬರೆದು ಕಡೆಯ ಸಮಯದಲ್ಲಿ ವೇಗವಾಗಿ ಬರೆಯಲು ಹೋಗಿ ಕೆಟ್ಟ ಅಕ್ಷರಗಳಲ್ಲಿ ಬರೆದು ಸಮಯ ಕಳೆದುಕೊಳ್ಳುವುದು ತಪ್ಪುತ್ತದೆ. ಅಲ್ಲದೇ ಪ್ರಾಯೋಗಿಕ ಪರೀಕ್ಷೆಯ ಮೈಖಿಕ ಪ್ರಶ್ನೋತ್ರಗಳಿಗಾಗಿ ವಿಶೇಷವಾಗಿ ಓದುವ ಅಗತ್ಯ ಬೀಳುವುದಿಲ್ಲ.  ಆದ್ದರಿಂದ ಪರೀಕ್ಷೆಗಾಗಿ ಓದಲು ಅಲ್ಲ ಬರೆಯಲು ಈಗಲೇ ಪ್ರಾರಂಭಿಸಿ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com