ಇಂದ್ರ ಗೆದ್ದಿದ್ದ ಎರಡನೆಯ ಬಾರಿ!

ಎರಡೂ ಸಂದರ್ಭಗಳಲ್ಲಿ ಇಂದ್ರ ಗೆದ್ದ. ಬಹಳ ಕಷ್ಟ ಜಿತೇಂದ್ರಿಯತ್ವ; ಅಂತೇ ಬ್ರಹ್ಮರ್ಷಿತ್ವ. ಈ ಬಾರಿಯ ಸೋಲಿಗೂ ಕಾರಣ ನೀನೇ.
ರಂಭೆಯಿಂದ ತಪೋಭಂಗಕ್ಕೆ ಯತ್ನ (ಸಾಂಕೇತಿಕ ಚಿತ್ರ)
ರಂಭೆಯಿಂದ ತಪೋಭಂಗಕ್ಕೆ ಯತ್ನ (ಸಾಂಕೇತಿಕ ಚಿತ್ರ)
ಮಹಾ ನಿರಾಶೆಯಾಯಿತು ಮಹರ್ಷಿಗೆ. ಹಠ ಹುಟ್ಟಿತು. ಏನು ಮಾಡುವುದು? ನಚಿಕೇತರು ಹಠಯೋಗ ಬೇಡವೆಂದರು. ಈ ಸಾತ್ವಿಕ ತಪ ತನ್ನನ್ನು ಗುರಿ ಮುಟ್ಟಿಸುತ್ತಿಲ್ಲ. ರಾಜಸ, ಸಾತ್ವಿಕ ಎರಡನ್ನೂ ಬೆರೆಸೋಣ. ಪ್ರಯೋಗ ಮಾಡಿ ನೋಡೋಣ ಎಷ್ಟೇ ಆಗಲಿ ಕ್ಷತ್ರಿಯ ಮೂಲ.  ತಕ್ಷಣವೇ ಈ ಯೋಜನೆ ಪ್ರಿಯವಾಯಿತು ಅವರಿಗೆ. ಸಾತ್ವಿಕರಾಗುವುದು ಬಹು ಕಷ್ಟ. ಹುಟ್ಟಾ ಸಾತ್ವಿಕರಾಗಿರುವವರಿಗೇ ಒಮ್ಮೊಮ್ಮೆ, ಏನು ಎಷ್ಟೋ ಬಾರಿ ಕ್ರೋಧ ಹುಟ್ಟುವುದುಂಟು. ಕ್ಷಾತ್ರ ಬೀಜರಾದ ವಿಶ್ವಮಿತ್ರರು ಜಾರು ಬಂಡೆ ಹತ್ತಿಬಿಟ್ಟರು. ಬೇಸಗೆಯಲ್ಲಿ ಪಂಚಾಗ್ನಿಗಳ ಮಧ್ಯೆ ನಿಂತರು. ಮಾಗಿಯಲ್ಲಿ ಹಿಮ ಮಧ್ಯೆ ಕುಳಿತರು. ಆಹಾರ ಬಿಟ್ಟರು. ಕೇವಲ ಗಾಳಿ ಕುಡಿದರು. ಹಗುರಾದರು, ನೆಲದಿಂದ ಮೇಲೆದ್ದರು, ಕೈಗಳನ್ನು ಗಗನಕ್ಕೆ ಚಾಚಿದರು. 
(ಊರ್ಧ್ವಬಾಹುಃ ನಿರಾಲಂಬಃ ವಾಯು ಭಕ್ಷಃ ತಪಶ್ಚರನ್
ಘರ್ಮೇ ಪಂಚತಪಾಭೂತ್ವ ವರ್ಷಾಸ್ವಾಕಾಶ ಸಂಶ್ರಯಃ
ಶಿಶಿರೇ ಸಲಿಲಸ್ಥಾಯೀ ರಾತ್ರಹಾನಿ ತಪೋ ಧನಃ)
********
ರಾಜಸ ತಪ ರಾಜಾಧಿರಾಜ ಸುರೇಂದ್ರನಿಗೆ ಭಯ ಹುಟ್ಟಿಸಿತು. ಸಾಧಾರಣ ಬಿಸಿಯಲ್ಲ ಅದು, ಮಹರ್ಷಿಯ ಮಹತ್ವದ ಸುಡುವಿಕೆ. ಅದು ಮಹರ್ಷಿ ತಪಸ್ಸು. 'ಹೀಗಿದು ಮುಂದುವರೆದುಬಿಟ್ಟರೆ, ಬ್ರಹ್ಮ ಬಂದೇ ಬಿಟ್ಟರೆ, ಬ್ರಹ್ಮರ್ಷಿತ್ವ ಕೊಟ್ಟೇ ಬಿಟ್ಟರೆ... ಏನಾದರೂ ಮಾಡಿ ವಿಶ್ವಮಿತ್ರರ ತಪೋ ಭಂಗ ಮಾಡಬೇಕು. ಹಿಂದೆ ಮೇನಕೆಯನ್ನು ಕಳಿಸಿ ಅವನ ತಪಃಶಕ್ತಿಯನ್ನೆಲ್ಲ ಬರಿದು ಮಾಡಿಬಿಟ್ಟೆ. ಈಗ ? ಈಗ ಮತ್ತೆ ಮೇನಕೆ ಸರಿಹೋಗಳು. ಯಾರನ್ನು ಕಳಿಸೋಣ? ರಂಭೆ! ರಂಭೆ ಸ್ವರ್ಗ ಗಣಿಕೆಯರ ಅಧ್ಯಕ್ಷಿಣಿ. ಅವಳನ್ನೇ ಕಳಿಸೋಣ. ಅವಳಿಗೆ, ಅವಳ ವೈಯ್ಯಾರಕ್ಕೆ, ಅವಳ ಅಂದಕ್ಕೆ, ಅವಳ ಮಾರ್ದವತೆಗೆ ಒಳಗಾಗದವರಾರು? ಯೋಚನೆಯನ್ನು ಕಾರ್ಯರೂಪಕ್ಕೆ ತಂದೇ ಬಿಟ್ಟ. ರಂಭೆ ಬಂದಳು. ಅವಳಿಗೆ ಸೂಚಿಸಿದ ಇಂದ್ರ, " ರಂಭೆ, ಏನಾದರೂ ಮಾಡಿ ವಿಶ್ವಮಿತ್ರರಿಗೆ ಕಾಮ ವಿಕಾರ ಉಂಟಾಗುವಂತೆ ಮಾಡಬೇಕು. "
(ಲೋಘನಂ ಕೌಶಿಕಸ್ಯ ಇಹ ಕಾಮ ಸಮ್ಮೋಹ ಸಮನ್ವಿತಂ )
ಇಂದ್ರನ ಮಾತು ಕೇಳಿ ರೋಮಾಂಚನದ ಬದಲು ನಡುಗಿಬಿಟ್ಟಳು ರಂಭೆ! " ಸುರೇಶ್ವರ, ಇವರ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ಮೂಗಿನ ತುದಿ ಕೋಪದ ಮಹರ್ಷಿ ಎಂದು  ಎಲ್ಲರೂ ಮಾತನಾಡಿಕೊಳ್ಳುತ್ತಾರೆ". ತನ್ನ ನಿಲುವನ್ನು ಸ್ಪಷ್ಟ ಪಡಿಸುತ್ತ ಹೇಳಿದಳು ರಂಭೆ, " ದೇವತೆಗಳ ರಾಜ ದೇವೇಂದ್ರ, ಈತನ ಸಿಟ್ಟು ಅತಿ ಹೆಚ್ಚು. ಘೋರ. ತಡೆಯಲಸಾಧ್ಯ. ನನ್ನ ಮೇಲೆ ಅದು ತಿರುಗುವುದರಲ್ಲಿ ಸಂಶಯವೇ ಇಲ್ಲ. ಅವನ ಬಳಿ ಹೋಗಲು ನನಗೆ ತುಂಬ ಭಯ. ದಯವಿಟ್ಟು ಈ ಕಾರ್ಯ ಮಾಡಲಾಗದ್ದಕ್ಕೆ ಕ್ಷಮಿಸು, ಕರುಣಿಸು.
( ಕ್ರೋಧಂ ಉತ್ಸ್ರಕ್ಷ್ಯತೇ ಘೋರಂ ಮೈ ದೇವ ನ ಸಂಶಯಃ
ತತೋ ಹಿ ಮೇ ಭಯಂ ದೇವಂ ಪ್ರಸಾದಂ ಕರ್ತುಂ ಅರ್ಹಸಿ )
ಬಿಟ್ಟಾನೆಯೇ ಇಂದ್ರ? ಇಂತಹ ಎಷ್ಟು ಸಂದರ್ಭಗಳನ್ನು ಅವನು ಕಂಡಿಲ್ಲ? ರಂಭೆಯನ್ನು ಪ್ರೋತ್ಸಾಹಿಸಿದ. ತಾನೂ, ಮನ್ಮಥನೂ ಜೊತೆಗಿರುವ ಭರವಸೆ ಕೊಟ್ಟ, ಅಕಸ್ಮಾತ್ ವಿಶ್ವಮಿತ್ರರೇನಾದರೂ ಸಿಟ್ಟುಗೊಂಡರೆ ತಾನು ತಡೆಯುವುದಾಗಿ ಧೈರ್ಯ ತುಂಬಿದ! ಒಟ್ಟಿನಲ್ಲಿ ಹೊರಡಿಸಿದ. ಮೂವರೂ ಮುನಿಯ ತಪೋಭೂಮಿಗೆ ಬಂದರು. ಧ್ಯಾನದಿಂದ ಮನಸ್ಸನ್ನು ವಿಚಲಿತ ಮಾಡುವ ಕರ್ತವ್ಯ ಇಂದ್ರನದೆಂದೂ, ಅನಂತರ ಅವನನ್ನು ಸೆಳೆದು ಬಾಹುಗಳಲ್ಲಿ ಬಂಧಿಸಬೇಕಾದ್ದು ರಂಭೆಯೆಂದು ತೀರ್ಮಾನವಾಯಿತು. 
*****************
ತನ್ನ ಮನಸ್ಸು ಏಕಾಗ್ರದಲ್ಲಿ ಲಯವಾಗಿದೆ. ಮನಸ್ಸಿನ ತುಂಬ ಬ್ರಹ್ಮ ತುಂಬಿದ್ದಾನೆ. ತನ್ನೆಲ್ಲ ಇಂದ್ರಿಯಗಳೂ ಮನಸ್ಸಿನಲ್ಲೇ ಮಲಗಿಬಿಟ್ಟಿವೆ. ಆದರೇಕೋ ನಿಮಿಷದಿಂದ ಏನೋ ತನ್ನನ್ನು ಕರೆಯುತ್ತಿದೆ. ತೀವ್ರವಾಗಿ, ಮಧುರವಾಗಿ ಒಂದೇ ಸಮನೆ ಸೆಳೆಯುತ್ತಿದೆ. ಮಲಗಿದ್ದ ಶ್ರವಣೇಂದ್ರಿಯ ಜಾಗೃತವಾಯಿತು. ಅಪ್ರಯತ್ನವಾಗಿ ಮಹರ್ಷಿ ಕಣ್ಣು ಬಿಟ್ಟರು. ಎದುರಲ್ಲಿ ಅದೇನದು; ಸೌಂದರ್ಯ ರಾಶಿಯೇ ನಿಂತಿದೆ! ಹೆಸರಿಗೆ ಉಟ್ಟಿರುವ ದುಕೂಲ ನೀರಿನ ಪೊರೆಯಂತೆ!! ನಗ್ನ ದೇಹ ಅಲ್ಲ ಎನ್ನಲು ನೆಪ ಮಾತ್ರಕ್ಕೆ ಆ ಪಾರದರ್ಶಕ ಪರದೆ. ತಾನು ಜಾರುತ್ತಿದ್ದೇನೆನಿಸಿತು. ಆ ಕಣ್ಣುಗಳು ತಮ್ಮನ್ನು ಸೆಳೆಯುತ್ತಿದೆ. ಆಕೆಯ ಮೇಲಿಂದ ಬಂದ ಸುಗಂಧ ಮೂಗಿನ ನಾಳಗಳನ್ನು ಅಲ್ಲಾಡಿಸಿಬಿಟ್ಟಿತು. ಅವಳ ದೇಹದ ಸೆಳೆತ ವಿಶ್ವಮಿತ್ರರನ್ನು ಉದ್ರೇಕಿಸಿತು. ಸಿದ್ಧಾಸನ ಸಡಿಲವಾಯಿತು, ಸುತ್ತಲಿದ್ದ ಪಂಚಾಗ್ನಿಗಳು ತಣ್ಣಗಾದವು. ನೆಲದ ತುಂಬ ಪುಷ್ಪ ಶಯ್ಯೆ ಹಾಸಿತು. ಮೇಲಿದ್ದ ಕೈಗಳು ಕೆಳಗಿಳಿಯಿತು. ಆಕಾಶದಲ್ಲಿ ತೇಲುತ್ತಿದ್ದ ದೇಹಕ್ಕೆ ಭೂಸ್ಪರ್ಶವಾಯಿತು. ಎಷ್ಟೋ ಕಾಲದಿಂದ ಆಗದಿದ್ದ ಹಶಿವು ಕಾಣಿಸಿತು. ಮನಸ್ಸು ಬಯಸುತ್ತಿದ್ದಂತೆಯೇ ಪಾಯಸದ ಬಟ್ಟಲು ಮುಂದೆ ಬಂದಿತು. ಹೊಟ್ಟೆ ತುಂಬುವ ತನಕ ಕುಡಿದರು. ರಂಭೆ ಎಡೆ ತಿರುಗಿದರು. ಹೆಜ್ಜೆ ಎತ್ತಿಟ್ಟರು.
ತಕ್ಷಣ ಮೇನಕೆ ನೆನಪಾದಳು . ಅವಳು ಬಂದಾಗ ಹೇಳಿದ್ದಳು ; ತನ್ನನ್ನು ದೇವೇಂದ್ರ ಕಳಿಸಿದ್ದನೆಂದು . ಈಗಲೂ ಹೀಗೆಯೇ ಇಂದ್ರನ ಕೆಟ್ಟ ಕೆಲಸವೋ ಇದು ? ಕಣ್ಮುಚ್ಚಿ ಙ್ಞಾನ ನಯನ ತೆಗೆದರೆ , ಮುಂದಿನ ಮರದಲ್ಲಿ ಇಂದ್ರ ಕೋಗಿಲೆಯಾಗಿ ಕೂಗುತ್ತಿದ್ದಾನೆ. ಆ ಧ್ವನಿಯೇ ತನ್ನ ತಪೋ ಭಂಗ ಮಾಡಿದ್ದು. ಮುಂದೆ ಇವಳು. ಕ್ಷಣಮಾತ್ರದಲ್ಲಿ ಅರ್ಥವಾಯಿತು; ರಂಭೆ ತನ್ನನ್ನು ಬಯಸಿ ಬರಲಿಲ್ಲ; ಕೆಡಿಸ ಬಂದಿದ್ದಾಳೆ. ಕಮಂಡುಲ ಜಲವೆತ್ತಿ ಅವಳೆಡೆಗೆ ತೂರಿ ಶಪಿಸಿದರು, " ರಂಭೆ, ದುಷ್ಟೆ, ಕಾಮ ಕ್ರೋಧಗಳನ್ನು ಜಯಿಸಲು ಇಲ್ಲಿ ನಾನು ತಪಸ್ಸು ಮಾಡುತ್ತಿದ್ದರೆ ನನ್ನನ್ನು ಕೆಡಿಸುವೆಯಾ ? ಮನಸ್ಸನ್ನು ಕಲುಷಿತಗೊಳಿಸುವೆಯಾ ? ಕಲ್ಲಾಗಿ ಹೋಗು ನೀನು ಹತ್ತು ಸಾವಿರ ವರ್ಷ! "
(ಯನ್ಮಾಂ ಲೋಭಯಸೇ ರಂಭೇ ಕಾಮ ಕ್ರೋಧ ಜಯೈಷಿಣಂ /
ದಶವರ್ಷ ಸಹಸ್ರಾಣಿ ಶೈಲೀ ಸ್ಥಾಸ್ಯತಿ ದುರ್ಭಗೇ|| )
ಇಂದ್ರನನ್ನು ಶಪಿಸೋಣವೆಂದು ಸಂಕಲ್ಪಿಸಿದರೆ, ಮಂತ್ರಗಳೇ ಹೊರಡುತ್ತಿಲ್ಲ! ಜಲವೇ ಬರುತ್ತಿಲ್ಲ!! ಅತ್ತ ನೋಡುತ್ತಿದ್ದಂತೆಯೇ ಹಾರಿ ಹೋಗಿದ್ದಾನೆ; ರಂಭಾ ಶಿಲೆಯ ಮೇಲೆ ಹಿಕ್ಕೆ ಹಾಕಿ. ಏಕೆ ? ಏಕೆ ? ಮತ್ತೆ ವಿಶ್ವಮಿತ್ರರ ತಪಃಶಕ್ತಿ ಖಾಲಿ !!!! 
***************
ಮುಚ್ಚಿದ ಕಣ್ಣ ಮುಂದೆ ಬಂದ ನಚಿಕೇತರು ಶಿಷ್ಯನನ್ನು ಸಮಾಧಾನ ಪಡಿಸುತ್ತ ಹೇಳಿದರು, " ವಿಶ್ವಮಿತ್ರ, ಇಂದ್ರಿಯ ಜಯವೆಂದರೆ ಕೇವಲ ಕಾಮ ದಮನವಷ್ಟೇ ಅಲ್ಲ, ಕ್ರೋಧ ಶಮನವೂ ಹೌದು. ಮೇನಕಾ ಸಂಗ ಕಾಮ ಮೂಲದಿಂದ ಖಾಲಿ ಮಾಡಿದರೆ, ರಂಭೆಗಿತ್ತ ಶಾಪ ನಿನ್ನ ತಪಃಶಕ್ತಿಯನ್ನು ದಿವಾಳಿ ಮಾಡಿತು. ಎರಡೂ ಸಂದರ್ಭಗಳಲ್ಲಿ ಇಂದ್ರ ಗೆದ್ದ. ಬಹಳ ಕಷ್ಟ ಜಿತೇಂದ್ರಿಯತ್ವ; ಅಂತೇ ಬ್ರಹ್ಮರ್ಷಿತ್ವ. ಈ ಬಾರಿಯ ಸೋಲಿಗೂ ಕಾರಣ ನೀನೇ. ರಾಜಸವನ್ನು ಆಶ್ರಯಿಸಿದೆ. ಬ್ರಹ್ಮರ್ಷಿಯಾಗಬೇಕಿದ್ದರೆ ಪರಮ ಶಾಂತಿ ಇರಬೇಕು. ಹಿಂದಾಗಲೇ ಹೇಳಿದ್ದೆ; ಬಿಡು ರಾಜಸ ಪಥ. ಕೇವಲ ಸಾತ್ವಿಕ ದಾರಿಯಲ್ಲಿ ನಡೆ. ಗುರಿ ತಲುಪುವವರೆಗೂ ನಿನ್ನ ತಪಸ್ಸನ್ನು ನಿಲ್ಲಿಸಬೇಡ. ಕಣ್ಣು ಬಿಡುತ್ತ ವಿಶ್ವಮಿತ್ರರು ಸಂಕಲ್ಪ ಮಾಡಿದರು; " ಇನ್ನು ನಾನೆಂದೂ ಸಿಟ್ಟು ಗೊಳ್ಳುವುದೇ ಇಲ್ಲ. ಮಾತಾಡುವುದನ್ನೇ ನಿಲ್ಲಿಸಿಬಿಡುವೆ. "
( ನೈವ ಕ್ರೋಧಂ ಗಮಿಶ್ಯಾಮಿ ನಚ ವಕ್ಷ್ಯೇ ಕಥಂಚನ )
ಆದರೆ ಈ ಇಂದ್ರನೇಕೆ ಇಷ್ಟು ಅಲ್ಪ? ಏಕೆ ಇಷ್ಟು ವಿಘ್ನಕಾರಿ? ಏಕೆ ಯಾರೂ ಈ ದೇವರಾಜನಿಗೆ ಬುದ್ಧಿ ಹೇಳುವುದಿಲ್ಲ? ತಡೆಯಲಾರದೆ ಮತ್ತೊಮ್ಮೆ ಗುರುಗಳನ್ನು ಮನೋಮಂದಿರಕ್ಕೆ ಸ್ವಾಗತಿಸಿ ತಮ್ಮ ಪ್ರಶ್ನೆಯನ್ನು ಕೇಳಿದರು. " ನೀನು ಹೇಳುವುದು ನಿಜ, ಇಂದ್ರನೇನೋ ಅಂತಹವನೇ. ಅವನು ಹಾಗೆ ಗತಿ ಕೆಡಿಸುವವನೇ. ಅಸೂಯಾಪರನೇ. ಮೇಲೇಳುವವರ ಕಾಲನ್ನು ಎಳೆಯುವವನೇ. ಆದರೆ ಇದರಲ್ಲಿ ಒಂದು ರಹಸ್ಯವೂ ಅಡಗಿದೆ. ಇಂದ್ರ ಹಾಗೆ ಮಾಡುವುದನ್ನೆಲ್ಲ ಪರೀಕ್ಷೆಯೆಂದೇಕೆ ನೋಡಬಾರದು? ಅವನ ಪರೀಕ್ಷೆಗಳಲ್ಲಿ ಜೊಳ್ಳು ಹಾರಿ ಹೋಗುತ್ತದೆ. ಗಟ್ಟಿ ಮಾತ್ರ ಉಳಿಯುತ್ತದೆ. ಪರೀಕ್ಷೆ ಕಠಿಣವಾಗಿಲ್ಲದಿದ್ದರೆ ಎಲ್ಲರೂ ಬ್ರಹ್ಮರ್ಷಿಗಳೇ ಆಗಿಬಿಡುತ್ತಿದ್ದರು. ನೀನೀಗ ಒದ್ದಾಡುತ್ತಿದ್ದೀ, ಸೋತೆನೆಂದು. ಆದರೆ ಮುಂದೊಮ್ಮೆ ನೀನು ಗೆದ್ದುಬಿಟ್ಟರೆ, ಇದೇ ಇಂದ್ರ ನಿನ್ನನ್ನು ಪ್ರಶಂಸಿಸುತ್ತಾನೆ; ನಿನ್ನನ್ನು ಗೌರವಿಸುತ್ತಾನೆ; ನೀನು ಬಂದರೆ ಒಂದು ಹೆಜ್ಜೆ ಹಿಂದೆ ಸರಿಯುತ್ತಾನೆ!! ಇದೀಗ ಸಮಾಧಾನವಾಯಿತು ಮಹರ್ಷಿಗಳಿಗೆ.
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com