ಇಂದ್ರನಿಂದ ಮತ್ತೆ ಮತ್ತೆ ಸೋಲಿಸುವ ಪ್ರಯತ್ನ

ತಮ್ಮ ಅಪಜಯವನ್ನು ನೆನಪಿಸುವ ಹಿಮಾಲಯ ಬಿಟ್ಟು ಪೂರ್ವ ದಿಕ್ಕಿಗೆ ನೆಡೆದರು ಮಹರ್ಷಿಗಳು.
ಬ್ರಹ್ಮಚಿಂತನೆಯಲ್ಲಿ ತಪೋನಿರತರಾಗಿರುವ ವಿಶ್ವಾಮಿತ್ರ ಮಹರ್ಷಿಗಳು (ಸಾಂಕೇತಿಕ ಚಿತ್ರ)
ಬ್ರಹ್ಮಚಿಂತನೆಯಲ್ಲಿ ತಪೋನಿರತರಾಗಿರುವ ವಿಶ್ವಾಮಿತ್ರ ಮಹರ್ಷಿಗಳು (ಸಾಂಕೇತಿಕ ಚಿತ್ರ)
ತಮ್ಮ ಅಪಜಯವನ್ನು ನೆನಪಿಸುವ ಹಿಮಾಲಯ ಬಿಟ್ಟು ಪೂರ್ವ ದಿಕ್ಕಿಗೆ ನೆಡೆದರು ಮಹರ್ಷಿಗಳು.
**************
ಇದೀಗ ಮಹರ್ಷಿಗಳು ನಿಶ್ಚಯಿಸಿಬಿಟ್ಟಿದ್ದಾರೆ, ತಪದಲ್ಲಿದ್ದಾಗ ಯಾವುದೇ ಅಡ್ಡಿ ಬಂದರೂ ಅದಕ್ಕೆ ಕಲ್ಲಾಗುವೆ. ಏನೇ ಬರಲಿ, ಯಾವುದೇ ಬರಲಿ , ಯಾರೇ ಬರಲಿ , ನಾನು ಅವಿಚಲಿತ. ಬ್ರಹ್ಮರ್ಷಿಯಾಗಬೇಕು , ಮೌನ ಮುರಿಯಬೇಕು . ಅಲ್ಲಿಯವರೆಗೆ ನನ್ನೆಲ್ಲ ಇಂದ್ರಿಯಗಳೂ ಸ್ತಬ್ಧ; ಪ್ರತಿಕ್ರಿಯಾರಹಿತ.
ಈಗವರ ತಪಸ್ಸು ಅತ್ಯಂತ ಸಾತ್ವಿಕ . ಯಾವುದೇ ಹಠ ತೊಡಕುಗಳಿಲ್ಲ . ಕೇವಲ ಬ್ರಹ್ಮಾಕರ್ಷಣೆ ; ಅದಕ್ಕಾಗಿ ತಪ . ಸದಾ ಬ್ರಹ್ಮ , ಅವನ ಭಂಗಿ , ಅವನ ಮಾತು , ಅವನ ನಗು , ಅವನ ಸಾಂತ್ವನ ... ಹೌದು , ಈ ಬ್ರಹ್ಮಾ ಎಂದೂ ಮುಖ ಗಂಟು ಹಾಕಿದ್ದೇ ಇಲ್ಲ , ಸಿಟ್ಟುಗೊಂಡಿದ್ದೇ ಇಲ್ಲ . ಬ್ರಹ್ಮರ್ಷಿಗಳೇ ಸಾತ್ವಿಕ ಶ್ರೇಷ್ಠರಾಗಿರಬೇಕಾದರೆ , ಬ್ರಹ್ಮಇನ್ನೆಂತಿರಬೇಕು ? ಬ್ರಹ್ಮನೇ ಹೀಗಿರಬೇಕಾದರೆ ಇವನ ಅಪ್ಪ ವಿಷ್ಣು ಅವನೆಂತಿರಬೇಕು ? ಇಷ್ಟೇ ಅಲ್ಲದೇ, ತನ್ನದೇ ಸೃಷ್ಟಿಯನ್ನು , ತನ್ನದೇ ಮಕ್ಕಳನ್ನು ಈ ಜೀವಕೋಟಿಯನ್ನೆಲ್ಲ ಈ ಸಮಸ್ತ ಸಸ್ಯ ಸಂಪತ್ತನ್ನೆಲ್ಲ ಪ್ರಳಯದಲ್ಲಿ ನುಂಗಿ ಹಾಕುವ ಆ ರುದ್ರ , ಪ್ರಳಯ ರುದ್ರ ಇನ್ನೆಷ್ಟು ಸ್ಥಿತಪ್ರಙ್ಞನಿರಬೇಕು ? ಈ ಮೂವರನ್ನೂ ಒಡಲಲ್ಲಿ ಹೊತ್ತ ಆ ಪರಬ್ರಹ್ಮ ಎಂತಿರಬೇಕು , ಹೇಗಿರಬೇಕು , ಎಲ್ಲಿರಬೇಕು ? ಆ ಪರಬ್ರಮ್ಹ ತತ್ವವನ್ನು ಕುರಿತು ಮಾತನಾಡುವಾಗೆಲ್ಲ ನಚಿಕೇತರಾಗಲಿ , ಯಾಙ್ಞವಲ್ಕ್ಯರಾಗಲಿ , ವಸಿಷ್ಠರಾಗಲಿ , ವಾಮದೇವರಾಗಲಿ , ಅತ್ರಿಗಳಾಗಲಿ ಕಣ್ಮುಚ್ಚಿ ಕೈ ಮುಗಿದು ಸುಮ್ಮನಾಗಿಬಿಡುವರಾಗಲಿ , ಏನನ್ನೂ ಹೇಳುವುದಿಲ್ಲ . ವಿವರಿಸಲು ಕೇಳಿದರೆ , ಅದು ಅಗಮ್ಯ , ಅವರ್ಣನೀಯ , ಉಪಮಾತೀತ , ಅದೃಷ್ಟ , ಅಗ್ರಾಹ್ಯ , ಕೇವಲ ಅನುಭವಸಿದ್ಧ ಎನ್ನುತ್ತಿದ್ದರು . ತಕ್ಷಣವೇ ತಮ್ಮ ವಾಕ್ಯ ಪೂರ್ತಿ ಮಾಡುವಂತೆ , " ... ಹಾಗಾಗುವ ಅನುಭವ , ಸ್ವಾನುಭವ , ನಿಮಿಷದಷ್ಟಾದರೆ ಅದು ನಮ್ಮ ಪುಣ್ಯ " ಎಂದು ಕೈ ಜೋಡಿಸುತ್ತಿದ್ದರು . ಅಂತಹ ದೊಡ್ಡ ದೊಡ್ಡವರೇ ಆ ಪರಬ್ರಮ್ಹದ ಬಗ್ಗೆ ಅಂತಹ ದೊಡ್ಡ ಮಾತಾಡಿದಾಗ ನನ್ನಂತಹ ಸಣ್ಣವರಿಗೆ ; ಇನ್ನೂ ಈ ಬ್ರಮ್ಹಾ ಗ್ರಾಮದಲ್ಲಿ ಈಗ ತಾನೆ ಪ್ರವೇಶ ಮಾಡುತ್ತಿರುವ ನನ್ನಂತಹವರಿಗೆ ಅದೆಲ್ಲಿ ಅರ್ಥವಾದಾತು ? ನಮಗೆ ಸದ್ಯಕ್ಕೆ ಈ ಬ್ರಹ್ಮನೇ ಸಾಕು . ಚಲಿಸುತ್ತಿದ್ದ ಚಿತ್ತವನ್ನು ಕೇಂದ್ರೀಕರಿಸಿ ಮತ್ತೆ ತಮಗೀಗಾಗಲೇ ಕಂಡಿದ್ದ ಬ್ರಹ್ಮನನ್ನು ಮನಸ್ಸಿನ ಕಣ್ಣಲ್ಲಿ ಕೂಡಿಸುತ್ತಿದ್ದರು .
*********
ಈಗವರದು ಪದ್ಮಾಸನ . ಸರಳ ಜೀವ , ಅತ್ಯಂತ ಸರಳ . ಸ್ನಾನ , ತಪ , ದಿನಕ್ಕೆಲ್ಲೋ ಒಂದೆರಡು ಘಂಟೆ ವಿಶ್ರಾಂತಿ . ದೇಹ ಧಾರಣೆಗಾಗಿ ಒಂದೆರಡು ಹಣ್ಣುಗಳು , ಉಳಿದಂತೆ ಬ್ರಮ್ಹಾತಪ . ಒಮ್ಮೊಮ್ಮೆ ದಿನ ವಿಸ್ತರಿಸಿ ಎರಡು ದಿನಗಳಿಗೊಮ್ಮೆ ಕಣ್ಣು ತೆರೆದರೂ ತೆರೆದರೇ . ಈಗವರು ಉಸಿರಾಡುವುದೇ ಎರಡು ಮೂರು ಘಂಟೆಗಳಿಗೆ ಒಮ್ಮೆ . ಸದಾ ತಾವು ಬ್ರಹ್ಮನಲ್ಲಿ ವಿಲೀನ . ಬ್ರಹ್ಮನಲ್ಲೋ , ಅಥವಾ ತಮ್ಮಲೇ ತಾವು ಲಯವಾಗುತ್ತಾರೋ ಗೊತ್ತಿಲ್ಲ . ಬ್ರಮ್ಹಾನ ಪ್ರತಿಮೆ ಕರಗಿ ಹೋಗಿ ತಾವೇ ಅಲ್ಲಿರುವಂತಾಗಿ , ಅದೂ ಹೋಗಿ , ಕೇವಲ ಏನೂ ಇಲ್ಲದ ಶೂನ್ಯ ಸ್ಥಿತಿ . ಅಲ್ಲ , ಅದು ಶೂನ್ಯವಲ್ಲ . ತಮ್ಮ ಮನಸ್ಸಿನ ತುಂಬ ಸಂತಸ , ಉಲ್ಲಾಸ , ಸಮಾಧಾನ , ನೆಮ್ಮದಿ , ಸಂಪೂರ್ಣ ತಾಟಸ್ಥ್ಯ ... ಇದೇ ಆನಂದ ಬ್ರಮ್ಹವೋ ? ಏನೋ ಗೊತ್ತಿಲ್ಲ . ಹೀಗೆಲ್ಲಾ ಆಲೋಚನೆ ಹಾದು ಹೋಗುವಷ್ಟರಲ್ಲಿ ದಿನಗಳೆರಡು ಹಾದುಹೋಗಿಬಿಡುತ್ತಿತ್ತು. 
ಒಮ್ಮೆ ಒಬ್ಬ ತರುಣ ಬಂದ , ವಿನಮ್ರನಾಗಿ ನಿಂತ , ಕ್ಷಣ ಬಿಟ್ಟು ಸಾಷ್ಟಾಂಗ ಮಾಡಿದ , ನಂತರ ಎದ್ದು ಕೈ ಜೋಡಿಸಿದ , ವಿನೀತ ಕಂಠದಿಂದ ಪ್ರಾರ್ಥಿಸಿದ , " ಭಗವನ್ , ನಾನು ಶುನಶ್ಶೇಫ , ತಾವು ಸ್ವೀಕರಿಸಿದ ಮಗ . ತಮ್ಮ ಗೋತ್ರವನ್ನು ನನಗಿತ್ತು ನನ್ನನ್ನು ಬದುಕಿಸಿದ ಮಹಾತ್ಮರು ತಾವು . ಅನುಗ್ರಹಿಸಿ , ನನ್ನನ್ನೀಗ ಶಿಷ್ಯನನ್ನಾಗಿ ಸ್ವೀಕರಿಸಿ ಉದ್ಧಾರ ಮಾಡಿ . ಮುಚ್ಚಿದ ಕಣ್ಣಿನ ಹಿಂದೆ ಇದೆಲ್ಲವನ್ನು ನೋಡುತ್ತಿದ್ದ ವಿಶ್ವಮಿತ್ರರೆಂದುಕೊಂಡರು ; " ನಾನೇ ಇನ್ನೂ ಶಿಷ್ಯ ! ನಿನ್ನನ್ನೆಲ್ಲಿ ವಿದ್ಯಾರ್ಥಿಯನ್ನಾಗಿ ಮಾಡಿಕೊಳ್ಳಲಿ ? ಒಮ್ಮೆ ನನ್ನ ಅಭ್ಯಾಸ ಮುಗಿಯಲಿ , ಆಮೇಲೆ ಯೋಚಿಸೋಣ . ಈಗ ವಾಪಸಾಗು . " ಹಾಗೆಂದುಕೊಳ್ಳುತ್ತಿದ್ದಂತೆಯೇ ಆತ ಹಿಂದೆ ಹೋದ . ಸೋತು ಬಂದ ಶುನಶ್ಶೇಫನನ್ನು ಕಂಡ ಇಂದ್ರ ಮುಗುಳ್ನಕ್ಕ .
                                              *******
ಇದ್ದಕ್ಕಿದ್ದಂತೆಯೇ ಕಾಳ್ಗಿಚ್ಚು . ತನ್ನ ಸುತ್ತಲ ಮರ - ಗಿಡಗಳನ್ನೆಲ್ಲ ಸುಟ್ಟುಬಿಡುತ್ತಿದೆ ಆ ಅರಣ್ಯ ಅಗ್ನಿ . ಪದ್ಮಾಸನದಲ್ಲಿದ್ದ ವಿಶ್ವಮಿತ್ರರು ಆಗತಾನೇ ಬಹಿರ್ಮುಖರಾಗುತ್ತಿದ್ದರು . ಸುಟ್ಟ ಹಕ್ಕಿ - ಪ್ರಾಣಿಗಳ ಕಟು - ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತಿದೆ , ಬೆಂಕಿಯ ಅಗಾಧ ಬಿಸಿ ಶರೀರಕ್ಕೆ ತಟ್ಟುತ್ತಿದೆ , ಮತ್ತೆ ಆಸನಬದ್ಧರಾದರು , ಕಣ್ಣು ಮುಚ್ಚಿದರು . " ಮಂತ್ರಜಲ ಪ್ರೋಕ್ಷಿಸಿ ಬೆಂಕಿಯನ್ನು ತಣ್ಣಗಾಗಿಸಲೇ ? " ಎಂದು ಕ್ಷಣ ಯೋಚನೆ ಬಂದಿತು . " ಬೇಡ , ಬೇಡ . ಏನು ಮಾಡೀತು ಈ ಜ್ವಾಲೆ ತನ್ನನ್ನು ? ಸುಟ್ಟೀತೋ ? ಏನನ್ನು ಸುಟ್ಟೀತು ? ಈ ಮೂಳೆಯೇ ಹೆಚ್ಚಿರುವ ದೇಹವನ್ನೇ ? ಸುಡಲಿ . ನನ್ನನ್ನು , ನನ್ನ ಆತ್ಮವನ್ನೂ ಸುಡಲು ಸಾಧ್ಯವೇ ? ಅಸಲು ಆತ್ಮವೇ ಅಸ್ಪರ್ಶವಾದಾಗ , ಪಂಚಭೂತಗಳಲ್ಲೊಂದಾದ ಭೂಮಿ ತತ್ವವೇ ಆತ್ಮದಲ್ಲಿ ಇಲ್ಲದಾಗ , ಅದನ್ನು ಈ ಅಗ್ನಿ ಏನು ಮಾಡಾತು , ಹೇಗೆ ಸುಟ್ಟಾತು ? ಈ ಯೋಚನೆ ಒಂದು ಹಂತಕ್ಕೆ ಬರುವ ಹೊತ್ತಿಗೆ ಸೋತ ಅಗ್ನಿ ಇಂದ್ರನಿಗೂ ಸೋಲು ತಂದಿತ್ತ . 
                                         *********
ಕೆಲವು ತಿಂಗಳುಗಳೇ ಕಳೆದವು , ಒಂದು ಹಗಲು ಸ್ನಾನ ಮುಗಿಸಿ ಪದ್ಮಾಸನ ಹಾಕಿದ್ದಾರೆ . ಇನ್ನೇನು ಬ್ರಹ್ಮಾನುಸಂಧಾನವಾಗಬೇಕು . ಹೆಣ್ಣೊಬ್ಬಳು , ಅತಿಪರಿಚಿತ ಹೆಣ್ಣೊಬ್ಬಳು , ರಾಜ ಮಹಿಳೆಯೊಬ್ಬಳು , ದೀನ ವದನೆಯೊಬ್ಬಳು , ವೃದ್ಧೆಯೊಬ್ಬಳು ಬಂದಿದ್ದಾಳೆ . ತನ್ನ ಪರಿವಾರವನ್ನು ಹಿಂದೆ ನಿಲ್ಲಿಸಿ ಬಂದು ವಿಶ್ವಮಿತ್ರರ ಮುಂದೆ ಬಾಗಿ , ಕರುಣೆಯ ಕಂಠದಿಂದ ಬೇಡಿದ್ದಾಳೆ , " ಸ್ವಾಮಿ , ಎಷ್ಟು ವರ್ಷಗಳಾಯಿತು ನಮ್ಮನ್ನಗಲಿ ತಾವು ? ವಸಿಷ್ಠಾಶ್ರಮದಲ್ಲಿ ಸೋತು ರಾಜ್ಯಕ್ಕೆ ವಾಪಸಾಗಿ , ಮಗನಿಗೆ ಪಟ್ಟ ಕಟ್ಟಿ , ತಪಸ್ಸಿಗೆ ಹೋಗುವುದಾಗಿ ಹೇಳಿ ಬಂದಿರಿ , ಇಲ್ಲಿವರೆಗೆ ತಮ್ಮ ಸುದ್ದಿಯೇ ಇಲ್ಲ . ನಿಮ್ಮ ಬಗ್ಗೆ ಏನೇನೋ ಕೇಳುತ್ತಿದ್ದೆವು . ಈಗ ಇಲ್ಲೇ , ಹತ್ತಿರದಲ್ಲೇ ಇದ್ದೀರೆಂದು ತಿಳಿದು ಒಮ್ಮೆ ಕುಶಲ ವಿಚಾರಿಸಿ ಹೋಗೋಣವೆಂದು ಬಂದೆ . ಒಮ್ಮೆ ಮಾತಾಡಿಸಿ , ಒಂದೇ ಒಂದು ಸಲ ರಾಜ್ಯಕ್ಕೆ ಬನ್ನಿ . ರಾಜ್ಯ ಆಳುತ್ತಿರುವ ನಿಮ್ಮ ಮಗನನ್ನು ಕಂಡು ಆಶೀರ್ವದಿಸಿ . " 
-ಡಾ || ಪಾವಗಡ ಪ್ರಕಾಶ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com