ವಿಶ್ವಾಮಿತ್ರರ ತಪೋಭಂಗಕ್ಕೆ ಕೊನೆಯ ಅಸ್ತ್ರ 'ತಿಲೋತ್ತಮೆ'

ವಿಶ್ವಾಮಿತ್ರರ ತಪೋಭಂಗಕ್ಕೆ ಕೊನೆಯ ಅಸ್ತ್ರ 'ತಿಲೋತ್ತಮೆ'

ಉಫ಼್! ತನ್ನಲ್ಲಿದ್ದ ಕಾಮವೇ ಬತ್ತಿ ಹೋಯಿತೋ? ಬಾಯಿ ತೆರೆಯಲೇ ಆಗದ ಸ್ಥಿತಿ!! ಜಾರಿದ್ದ ಸೆರಗು ಹೊದ್ದು ಹೊರಬಂದರೆ ವಿಶ್ವಮಿತ್ರರ ಸುತ್ತ ಅಗ್ನಿಜ್ವಾಲೆಯೊಂದು ಏರ್ಪಟ್ಟಿತ್ತು.
Published on
ವಿಶ್ವಮಿತ್ರರ ಮನಸ್ಸು ಕರಗಿತು. ತಾನಿನ್ನೂ ಯುವಕನಂತಿದ್ದೇನೆ. ಆದರೆ ಧರ್ಮಪತ್ನಿ, ಮರ್ತ್ಯಪತ್ನಿ ಮುದುಕಿಯಾಗಿದ್ದಾಳೆ. ಯೋಗ, ತಪಸ್ಸುಗಳ ಪ್ರಭಾವ ತನ್ನನ್ನು ಅಜರನನ್ನಾಗಿಸಿವೆ. ಮುಚ್ಚಿದ ಕಣ್ಣಲ್ಲಿಯೇ ದಿಟ್ಟಿಸಿದರು ತಮ್ಮ ಪತ್ನಿಯನ್ನು. " ಯೌವ್ವನವನ್ನಾಕೆಗೆ ಕೊಡೋಣವೇ?" ಎಂದುಕೊಂಡರು. " ಬೇಡ, ಬೇಡ. ಬ್ರಹ್ಮರ್ಷಿ ಮೊದಲಾಗಲಿ; ಆನಂತರ ಆಕೆಗೆ ದಾರ್ಢ್ಯತೆ ಕರುಣಿಸೋಣ". ಮುಂದಾಗಿದ್ದ ಮನಸ್ಸು ಹಿಂಜರಿಯಿತು. ಧ್ವನಿ ಮಾತ್ರ ಆಕೆಗೆ ಕೇಳಿಸಿತು. " ಈಗ ಹಿಂದಿರುಗು. ಈ ತಪಸ್ಸು ಮುಗಿದ ಮೇಲೆ ಒಮ್ಮೆ ಬರುವೆ". ಏನೂ ಹೇಳಲಿಕ್ಕೆ ಬಾಯಿ ಬರದೇ, ಯಾವುದೋ ಪ್ರಭಾವಕ್ಕೆ ಒಳಗಾದಂತೆ ರಾಣಿ ವಾಪಸಾದಳು. ರಥ ಹತ್ತುವಾಗ ಇಂದ್ರ ಹೇಳಿದ; " ನಾನೇ ನಿನ್ನನ್ನು ಹಿಂದಕ್ಕೆ ಎಳೆದೆ. ಏಕೆಂದರೆ, ಹಾಗೆ ಹೇಳಿ ವಿಶ್ವಮಿತ್ರ ಪಂಚೇಂದ್ರಿಯಗಳನ್ನೂ ಸ್ತಬ್ಧ ಮಾಡಿದ್ದ. ಇನ್ನೆರಡು ದಿನಗಳು ನೀನು ನಿಂತಿದ್ದರೂ ಅವನಿಗದು ಗೊತ್ತೇ ಆಗುತ್ತಿರಲಿಲ್ಲ. 
****************
ಇಂತಹ ಎಷ್ಟೇಷ್ಟೋ ಅಡಚಣೆಗಳು. ಕರಗಿಸುವ, ಉದ್ರೇಕಿಸುವ ಏನೇನೋ ಅಡ್ಡಿಗಳು. ಆದರೂ ವಿಶ್ವಮಿತ್ರರದು ಅಲುಗದ ತಪ. ಕಟ್ಟಿಗೆಯಂತೆ ನಿಶ್ಚಲ. ಅವರ ಖಾತೆಯ ಪುಣ್ಯ ಯಾವ ಕಾರಣಕ್ಕೂ ಅಣು ಮಾತ್ರವೂ ಕಡಿಮೆಯಾಗಲಿಲ್ಲ.
( ಕಾಷ್ಟ ಭೂತಂ ಮಹಾ ಮುನಿಂ ವಿಘ್ನೈರ್ ಬಹುಭಿರಾಧೂತಂ ಕ್ರೋಧೋ ನ ಅಂತರಮಾವಿರತ್ )
*****************
ಕೊನೆಯ ಅಸ್ತ್ರ. ಹಿಂದೆಂದೋ ಸೃಷ್ಟಿಯಾಗಿದ್ದ ತಿಲೋತ್ತಮೆ. ವಿಶ್ವದ ಎಲ್ಲ ಜೀವಿಗಳ ತಿಲ ಮಾತ್ರ ಸೌಂದರ್ಯವನ್ನೂ ಕ್ರೋಡೀಕರಿಸಿದ್ದ ಸೌಂದರ್ಯ ಸಾಮ್ರಾಙ್ಞಿ. ಅಂದದ ಅಧ್ಯಕ್ಷಿಣಿ, ಸೊಬಗಿನ ಸುರನಾರಿ, ಮಾರ್ದವತೆಯ ಮೋಹಿನಿ, ಮಂಜುಲ ಧ್ವನಿಯೊಡತಿ, ಆಕರ್ಷಣೆಯ ಅನುಪಮ ಲಾವಣ್ಯವತಿ. ಆಕೆಯನ್ನು ಬಳಸುವುದೇ ಇಲ್ಲವೆಂದರೂ ಸರಿ. ಇದೀಗ ತಿಲೋತ್ತಮೆಯನ್ನು ಕರೆಕಳಿಸಿದ್ದ ಸುರೇಂದ್ರ. ಆಕೆ ಬರುತ್ತಿದ್ದಂತೆಯೇ ಸುತ್ತಲ ದೇವತೆಗಳೆಲ್ಲ ಕಾಮ ವಿಕಾರಕ್ಕೆ ಒಳಗಾದರು. ಧೇನು ವೃಷಭವನ್ನು ಬಯಸಿತು. ದಿಕ್ಪಾಲರಿಗೇ ಕಾಮವಾಂಛನೆ. ಇಂದ್ರನಿಗೇ ಉದ್ರೇಕ. ಎದ್ದು ಅವಳನ್ನು ಅಪ್ಪೋಣವೇ ಎನ್ನಿಸಿತು. ಬೇಡ ಬೇಡ. ಆಗವಳ ಕಾಂತಿ ಕುಗ್ಗುವುದು. ಈಗಿವಳು ತೊಳೆದ ಮಾಣಿಕ್ಯ ; ಶುಭ್ರ ಬೆಳಕು ; ಮೊಗ್ಗು ಬಿಚ್ಚುತ್ತಿರುವ ಮಲ್ಲಿಗೆ. ಮೊದಲು ವಿಶ್ವಮಿತ್ರ ಅನುಭವಿಸಲಿ. ಅವನು ಬೀಳಲಿ ಕೆಳಕ್ಕೆ ! ಆಮೇಲೆ ಇದ್ದದ್ದೇ !!
***************
ತಿಲೋತ್ತಮೆ ಬರುತ್ತಿದ್ದಂತೆಯೇ ಅಕಾಲದಲ್ಲಿ ಮರ ಗಿಡಗಳಲ್ಲಿ ಹೂ ಬಿಟ್ಟು ಪರಾಗ ಸ್ಪರ್ಶಕ್ಕೆ ಕಾಯತೊಡಗಿದುವು. ಸಿಂಹ, ಹುಲಿ, ಆನೆಗಳೆಲ್ಲ ಜೊತೆಗಾತಿಯನ್ನು ಸಾರಿದವು. ಹಕ್ಕಿ ಪಕ್ಷಿಗಳೆಲ್ಲ ಸಂಯೋಗದಲ್ಲಿ ಲೀನ. ಆದರೆ ಮುನಿಗಳ ಸ್ಥಿತಿ ಬೇರೆಯದೇ ಆಗಿತ್ತು. ಅವರೀಗ ಸಿದ್ಧಿಯ ಬಳಿ ಸಾರುತ್ತಿದ್ದಾರೆ. ಅವಿರತ ತಪದಿಂದ ಮನೋವಿಕಾರಗಳನ್ನೆಲ್ಲ ಗೆದ್ದಿದ್ದಾರೆ. ಇಂದ್ರಿಯಗಳೆಲ್ಲ ಆತ್ಮದ ವಶದಲ್ಲಿವೆ. ಆತ್ಮ ಸದಾ ಬ್ರಮ್ಹಾನುಸಂಧಾನದಲ್ಲಿದೆ. 
ಹಾಗೆ ನೋಡಿದರೆ ತಿಲೋತ್ತಮೆ ಬಂದಾಗ ವಿಶ್ವಮಿತ್ರರು ಬಹಿರ್ಮುಖರಾಗಿಯೇ ಇದ್ದರು. ಆಗ ತಾನೇ ಸ್ನಾನ ಮುಗಿಸಿ ಬಂದಿದ್ದರು, ವಿಭೂತಿ ಧರಿಸುತ್ತಿದ್ದಾಗ ತಿಲೋತ್ತಮೆಯ ಗೆಜ್ಜೆ ಕೇಳಿಸಿತು. ತಲೆಯೆತ್ತಿ ನೋಡಿದರು. ಅದೆಂತಹ ಸೌಂದರ್ಯ! ತಾಯಿ ಜಗನ್ಮಾತೆಯನ್ನು ಕಂಡಂತೆ! ನಮಸ್ಕಾರ ಮಾಡಿ ಸ್ವಾಗತಿಸಿದರು. " ಬನ್ನಿ, ಬನ್ನಿ. ಮಹೇಂದ್ರ ನಿಮ್ಮನ್ನು ಏಕಾದರೂ ಕಳಿಸಿರಲಿ, ನನಗೆ ನೀವೀಗ ತಾಯಿ ಬಂದಂತಾಗಿದೆ. ಅವಧ್ಯರಾಗಿದ್ದ ಸುಂದೋಪಸುಂದರು ನಿಮ್ಮನ್ನು ಕಂಡೊಡನೆ ಕಾದಾಡಿ ಸತ್ತರು!! ಅಂತಹ ಪ್ರಭಾವಿ ತಾವು. ಕರುಣಿಸಿ. ಇಲ್ಲಿರುವ ಫಲಗಳನ್ನು ಸ್ವೀಕರಿಸಿ. ನಾನು ತಪಕ್ಕೆ ಕೂಡುವ ಹೊತ್ತಾಯಿತು. ಹೋಗಿ ಬರಲೇ? " ಉಫ಼್! ತನ್ನಲ್ಲಿದ್ದ ಕಾಮವೇ ಬತ್ತಿ ಹೋಯಿತೋ? ಬಾಯಿ ತೆರೆಯಲೇ ಆಗದ ಸ್ಥಿತಿ!! ಜಾರಿದ್ದ ಸೆರಗು ಹೊದ್ದು ಹೊರಬಂದರೆ ವಿಶ್ವಮಿತ್ರರ ಸುತ್ತ ಅಗ್ನಿಜ್ವಾಲೆಯೊಂದು ಏರ್ಪಟ್ಟಿತ್ತು. ಅದರ ಮಧ್ಯದಲ್ಲಿ ಅಗ್ನಿಯನ್ನು ಮೊಂಕು ಮಾಡುವ ತೇಜೋನಿಧಿಯಾಗಿ ವಿಶ್ವಮಿತ್ರರು ಜ್ವಲಿಸುತ್ತಿದ್ದಾರೆ. ತಿಲೋತ್ತಮೆಗೆ ಜೀವಮಾನದ ಸೋಲಾಗಿಹೋಯಿತು!!! ದೇವೇಂದ್ರ ಪೂರಾ ಕುಗ್ಗಿ ಹೋದ.
                                        ***************
ಅಂದು ವಿಶ್ವಮಿತ್ರರು ಕಣ್ಣು ಬಿಟ್ಟಾಗ ಋಷಿ ಸಂಘವೊಂದು ತಾವು ಬಹಿರ್ಮುಖರಾಗುವುದನ್ನೇ ಎದುರು ನೋಡುತ್ತ ನಿಂತಿದ್ದರು. ಎಲ್ಲರೂ ಬಗ್ಗಿ ಎದ್ದರು. ವೃದ್ಧ ಮುಖಂಡನೊಬ್ಬ ಹೇಳಿದ, " ಭಗವಾನರೇ, ನಮ್ಮ ಪುಣ್ಯದಿಂದ ನೀವು ಈ ಪ್ರಾಂತ್ಯಕ್ಕೆ ಬಂದಿದ್ದೀರಿ. ನಮ್ಮೊಡನೆ ನೀವಿರುವುದೇ ಒಂದು ಗೌರವ. ನಾವೊಂದು ದೊಡ್ಡ ಯಙ್ಞಾರಂಭ ಮಾಡಿ ಇಂದಿಗೆ 48 ದಿನಗಳಾದವು. ಇಂದು ಪೂರ್ಣಾಹುತಿ. ತಾವು ಬಂದರೆ ನಮ್ಮ ಭಾಗ್ಯ. ನಮ್ಮೊಡನೆ ಭೋಜನ ಸ್ವೀಕರಿಸಿದರೆ ನಮ್ಮ ಪುಣ್ಯ" . ವಿಶ್ವಮಿತ್ರರು ಯೋಚಿಸಿದರು, " ಹೌದು , ನಾನು ಊಟ ಮಾಡಿ ಎಷ್ಟು ಕಾಲ ಆಗಿರಬಹುದು? ’ ತಾವು ಹಿಂದೊಮ್ಮೆ ಬಯಸಿದಾಗ ಏನೇನೋ ಭಕ್ಷ್ಯಗಳು ಬಂದಿದ್ದವು. ಅದೇ ಅದೇ, ಹಾಗೆ ಉಂಡು ಎಷ್ಟು ಕಾಲ? ಇರಬಹುದು ಒಂದು ವರ್ಷ? ಅಥವ ಅದಕ್ಕೂ ಹೆಚ್ಚು? ಹಾಗೆ ಆಸೆಯಿಂದ ಸೃಷ್ಟಿಸಿದ್ದಕ್ಕೆ ತನ್ನ ಖಾತೆಯಲ್ಲಿ ಕೊಂಚ ಕಡಿಮೆಯಾಗಿತ್ತು. ’ ಬೇಡ ಬೇಡ! ತನ್ನ ಗುರಿ ಮುಟ್ಟುವವರೆವಿಗೆ ನನ್ನ ಸಂಚಿತ ಪುಣ್ಯವನ್ನು ಖರ್ಚು ಮಾಡುವುದೇ ಬೇಡ" , ಎಂದು ಅಂದಿನಿಂದ ಅವರು ಹೊಟ್ಟೆ ತುಂಬ ಊಟ ಮಾಡೇ ಇರಲಿಲ್ಲ. ಹೊಟ್ಟೆ ತುಂಬ ಏನು, ಊಟವನ್ನೇ ಮಾಡಿರಲಿಲ್ಲ! ನಿತ್ಯವೂ ಒಂದೆರಡು ಪ್ರಕೃತಿ ದತ್ತ ಹಣ್ಣುಗಳು; ಅಷ್ಟೇ. ಇದೀಗ ಇವರು ಬಂದಿದ್ದಾರೆ. ಅಪ್ರಾರ್ಥಿತವಾಗಿ ಔತಣ. ಆಯಾಚಿತವಾಗಿ ಯಙ್ಞ ಸಂತರ್ಪಣೆ. ಈ ನಾಲಗೆಯೂ ಬಯಸುತ್ತಿದೆ, ಒಪ್ಪಿಗೆ ಸೂಚಿಸುವಂತೆ ತಲೆಯಾಡಿಸಿದರು. ಬಂದ ಕೆಲಸವಾಯಿತೆಂಬ ಸಂಭ್ರಮದಿಂದ ಮುನಿಗಳು " ಜೈ ಗುರುದೇವ " ಎನ್ನುತ್ತ ಹೊರಟರು.
-ಡಾ.ಪಾವಗಡ ಪ್ರಕಾಶ್ ರಾವ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com