ಭಗೀರಥನ ಬೆನ್ನು ಬಿದ್ದ ಭಾಗೀರಥಿ

ಇದ್ದಕ್ಕಿದ್ದಂತೆಯೇ ಭಗೀರಥನಿಗೆ ಅರಿವಾಯಿತು; ನೀರಿನ ಸದ್ದು ಕೇಳಿಸುತ್ತಿಲ್ಲ! ತಂಗಾಳಿಯೂ ತಟ್ಟುತ್ತಿಲ್ಲ! ಹಿಂತಿರುಗಿ ನೋಡಿದ! ಅನುಸರಿಸುತ್ತಿದ್ದ ಗಂಗೆ ಈಗ ಕಾಣುತ್ತಲೇ ಇಲ್ಲ! ಅಯ್ಯೋ ಎಲ್ಲಿಗೆ ಹೋದಳು ಈ ಗಂಗೆ?!
ಭಗೀರಥ-ಗಂಗೆ (ಸಾಂಕೇತಿಕ ಚಿತ್ರ)
ಭಗೀರಥ-ಗಂಗೆ (ಸಾಂಕೇತಿಕ ಚಿತ್ರ)
ಏನಾಯಿತು? ಏನಾಗಬೇಕಿತ್ತು? ಏನಾಗಿಹೋಯಿತು? ಕಕ್ಕಾವಿಕ್ಕಿಯಾಗಿ ಭಗೀರಥನಿಗೆ ತಲೆ ಕೆಟ್ಟು ಹೋಯಿತು. ಗಂಗೆ ಧುಮುಕಿದ್ದೇನೋ ನಿಜ. ಸಿಟ್ಟುಗೊಂಡ ರುದ್ರ ಆಕೆಯನ್ನು ಜಟೆಯಲ್ಲಿ ಬಂಧಿಸಿದ್ದೂ ನಿಜ. ಆನಂತರ? ಮಾಯವಾಗಿಯೇ ಬಿಟ್ಟ! ಗಂಗಾಧರನಾಗಿ, ಈಶ್ವರ ಹೋಗಿಬಿಟ್ಟ. ತನಗೆ ಬೇಕಿದ್ದ ಗಂಗೆಯ ಕೈ ಹಿಡಿದು ಹೋಗಿಯೇ ಬಿಟ್ಟ ಈ ಈಶ್ವರ! ಎಷ್ಟು ಬಾರಿ ಪ್ರಯತ್ನ, ಎಷ್ಟು ಅಡಚಣೆಗಳು, ಏನು ನನ್ನ ಅಯೋಧ್ಯೆಗೆ ಈ ಗಂಗೆ ಬರುವುದೇ ಇಲ್ಲವೋ? ಕಿಂಕರ್ತವ್ಯ ಮೂಢನಂತೆ ಕುಳಿತುಬಿಟ್ಟ ಭಗೀರಥ. 
ಆದರೆ ಅವ ಭಗೀರಥ. ಹಿಡಿದ ಕೆಲಸ ಬಿಡುವನೇ? ಮತ್ತೆ ಮುಕ್ಕಣ್ಣನನ್ನು ಕುರಿತೇ ತಪ. ಎಷ್ಟೋ ಕಾಲದ ಮೇಲೆ ಮತ್ತೆ ಪ್ರತ್ಯಕ್ಷನಾದ ಈಶ್ವರ ಹೇಳಿದ; " ನಿನ್ನ ಉತ್ಸಾಹಕ್ಕೆ ಭಂಗ ಇಲ್ಲ; ನಿನ್ನ ಪ್ರಯತ್ನಕ್ಕೆ ವಿರಾಮವೇ ಇಲ್ಲ. ಇಗೋ, ನಾನು ಜಟೆಯ ಒಂದು ಕೂದಲನ್ನು ಸಡಿಲಿಸಿದ್ದೇನೆ. ಅಲ್ಲಿಂದ ಬಿಂದು ಗಂಗೆ ಬರುತ್ತಾಳೆ, ಅವಳು ನಿನ್ನನ್ನು ಅನುಸರಿಸುತ್ತಾಳೆ. ಎಚ್ಚರಿಕೆ, ಅವಳಿಗೆ ಮಹಾ ಗರ್ವ. ಯಾರನ್ನೂ ಎಣಿಸುವುದಿಲ್ಲ. ಅಡ್ಡ ಬಂದದ್ದನ್ನೆಲ್ಲ ಕೊಚ್ಚಿ ಹಾಕುತ್ತಾಳೆ. ನೀನು ಹೋದ ದಾರಿಯಲ್ಲಿ ಬರಲು ಅವಳಿಗೆ ಹೇಳಿದ್ದೇನೆ. ಮತ್ತೊಮ್ಮೆ ಹೇಳುತ್ತಿದ್ದೇನೆ, ಎಚ್ಚರಿಕೆಯಿಂದ ಕರೆದೊಯ್ಯಿ. ದಾರಿಯಲ್ಲಿ ಎಡವಟ್ಟು ಮಾಡಿಕೊಳ್ಳಬೇಡ. ಶುಭವಾಗಲಿ! " 
ಬಿಂದು. ಬಿಂದುವಿನ ಹಿಂದೊಂದು ಬಿಂದು. ಅದರ ಹಿಂದೆ ಮತ್ತೊಂದು ಬಿಂದು. ಅದರ ಹಿಂದೆ ಮಗದೊಂದು ಬಿಂದು.... ಹೀಗೆ ಧಾರಾಕಾರವಾಗಿ ಹಿಮವತ್ ಪರ್ವತಕ್ಕೆ ಬೀಳುವ ಹೊತ್ತಿಗೆ ಅದೊಂದು ದೊಡ್ಡ ಮಳೆಯೇ ಅಗಿಬಿಟ್ಟಿತ್ತು. ಮಳೆಯಷ್ಟೇ ಅಲ್ಲ, ಸತತವಾಗಿ ವರ್ಷದ ಮುನ್ನೂರ ಅರುವತ್ತೈದೂ ದಿನಗಳು, ಪ್ರತಿ ದಿನದ ಇಪ್ಪತ್ತನಾಲಕ್ಕೂ ಘಂಟೆಗಳು ಸತತ ಗಂಗಾ ಪ್ರವಾಹ. ವಿರಾಮವೂ ಇಲ್ಲ; ವಿಛ್ಛಿತ್ತಿಯೂ ಇಲ್ಲ. ಸುಗಂಧಪೂರ್ಣ. ಶಿವ ಶಿರ ಸ್ಪರ್ಶದಿಂದ ಪುನೀತ ದ್ರವ. ಸ್ವರ್ಗಮೂಲದಿಂದಾಗಿ ಸುಖಾವಹ. ದೇವತೆಗಳು, ಯಕ್ಷರು, ಕಿನ್ನರರು, ಕಿಂಪುರುಷರು, ನಾಗರು, ಎಲ್ಲರೂ..... ಎಲ್ಲ ವರ್ಗದ ಸುರಗಣಗಳೂ, ಅಸುರ ವೃಂದಗಳೂ, ಎಲ್ಲರೂ, ಎಲ್ಲರೂ ಬಂದಿಳಿದು ಗಂಗೆಯಲ್ಲಿ ಮುಳುಗೆದ್ದರು. ಅವರ ಪಾಪವೆಲ್ಲ ಜಾಲಾಡಿಹೋಯಿತು. ಶಪ್ತ ದೇವತೆಗಳು, ಭೂಮಿಯಲ್ಲಿ ಆವತರಿಸಿದವರು ಈ ಪವಿತ್ರ ಗಂಗೆಯಲ್ಲಿ ಮಿಂದು ಪುನೀತರಾದರು. 
(ತತ್ರ ದೇವರ್ಷಿ ಗಂಧರ್ವಾ ವಸುಧಾತಲ ವಾಸಿನಃ
ಭವಾಂಗ ಪತಿತಂ ತೋಯಂ ಪವಿತ್ರ ಮಿತಿ ಪಸ್ಪೃಷುಃ
ಶಾಪಾತ್ ಪ್ರಪಿತಾಯೇಚ ಗಗನಾದ್ ವಸುಧಾತಲಂ
ಕೃತ್ವಾ ತತ್ರಾಭಿಷೇಕಂ ತೇ ಬಭೂರ್ಗತಕಲ್ಮಷಾಃ)
ಭಗೀರಥನೂ ಕೊರೆವ ನೀರಲ್ಲಿಳಿದು ನಡುಗಿ ಹೊರ ಬಂದ. ಎಷ್ಟೇ ಕೊರೆದಿದ್ದರೂ ಏನೋ ಒಂದು ಉಲ್ಲಾಸ. ಬಿದ್ದ ಜಾಗದ ಹಳ್ಳ ತುಂಬಿತು. ಬಿಂದು ಸರೋವರವೆಂಬ ಹೆಸರು ಬಂದಿತು ಆ ಜಾಗಕ್ಕೆ. ಹೊರ ಹರಿಯ ತೊಡಗಿತು ಗಂಗಾಜಲ. ಅಶರೀರವಾಣಿ ಈಗ. " ಭಗೀರಥ, ನೀನು ಮುಂದೆ ಹೊರಡು. ನಿನ್ನನ್ನು ಅನುಸರಿಸುತ್ತಾಳೆ ಈಕೆ. ಇನ್ನು ಮುಂದೆ ನಿನ್ನ ಹೆಸರಿನಿಂದ ಪ್ರಸಿದ್ಧವಾಗಲಿ ಈ ಗಂಗೆ. ಕರೆದುಕೊಂಡು ಹೋಗು ಅಯೋಧ್ಯೆಗೆ ಭಾಗೀರಥಿಯನ್ನು! "
ಕಾಲ ಕಾಲಕ್ಕೆ ಅಯೋಧ್ಯೆಯ ವರ್ತಮಾನ ರಾಜನಿಗೆ ತಲುಪಿಸಲು ಅಶ್ವಾರೋಹಿಗಳ ತಂಡ ಒಂದಿತ್ತು. ಗಂಗೆ ಬಂದೇ ಬಿಟ್ಟರೆ, ಆಕೆಯನ್ನು ಮಾರ್ಗದರ್ಶಿಸಲು ಹೊರಡುವ ರಾಜರಿಗೆ ಕೈಗೆ ಇರಲೆಂದು ಒಂದು ರಥವೂ ಸಿದ್ಧವಿತ್ತು. ಭಗೀರಥ ರಥವೇರಿ ಹೊರಟಿದ್ದಾನೆ ; ಗಂಗೆ ರಭಸವಾಗಿ ಅನುಸರಿಸುತ್ತಿದ್ದಾಳೆ.
( ಭಗೀರಥೋಪಿ ರಾಜರ್ಷಿರ್ದಿವ್ಯಂ ಸ್ಯಂದನ ಮಾಸ್ಥಿತಃ
ಪ್ರಾಯಾದಗ್ರೇ ಮಹಾ ತೇಜಾಸ್ತಾಂ ಗಂಗಾ ಪೃಷ್ಠತಃ ಅನ್ವಗಾತ್ )
*****************
ತುಂಬ ಸಂತೋಷ, ತೃಪ್ತಿ, ಸಾರ್ಥಕತೆಯಿಂದ ಹೊರಟ ಭಗೀರಥ. ಹಿಂದೆ ಜುಳು-ಜುಳು ಸದ್ದು ಮಾಡುತ್ತ, ಗಾಳಿಗೆ ತಂಪು ತುಂಬುತ್ತ, ಮುಟ್ಟಿದ ನಲವನ್ನೆಲ್ಲ ಪುಣ್ಯ ಭೂಮಿಯನ್ನಾಗಿ ಮಾಡುತ್ತ ಗಂಗಾಪ್ರವಾಹ ಭಗೀರಥನನ್ನು ಅನುಸರಿಸುತ್ತಿದೆ. ರಥ ವೇಗವಾಗಿ ಸಾಗುತ್ತಿದೆ; ಓಡುತ್ತಿದೆ; ನಾಗಾಲೋಟ. 
ಈಗ ಯೋಚನೆ ರಾಜನಿಗೆ. ಹೇಗಿರಬಹುದು ಅಯೋಧ್ಯೆ? ಕೇವಲ ಒಣಕಲು ಭೂಮಿ. ಸೀದು ಹೋದ ಕೊರಕಲು ಭೂಮಿ. ಮರುಭೂಮಿಯಲ್ಲದಿದ್ದರೂ ಏನೂ ಬೆಳೆಯದ ಭೂಮಿ. ದೂತರು ಹೇಳಿದ್ದರು, "ಈಗ ಅಯೋಧ್ಯೆಗೆ ಕ್ಷಾಮ ಬೇರೆ ಬಂದಿದೆಯಂತೆ. ಎಂದರೆ ಐದಾರು ವರ್ಷಗಳಿಂದ ಮಳೆಯೇ ಇಲ್ಲವಂತೆ! ಬಾವಿಗಳೆಲ್ಲ ಒಣಗಿಹೋಗಿವೆಯಂತೆ!! ಗದ್ದೆಗಳೆಲ್ಲ ಪಾಳು ಬಿದ್ದಿದೆಯಂತೆ! ಪ್ರತಿ ದಿನ ಸಾವಿರಾರು ಜನರು ಅಯೋಧ್ಯೆಯನ್ನು ಬಿಟ್ಟು ಗುಳೆ ಹೋಗುತ್ತಿದ್ದಾರಂತೆ. ದೂರ ದೂರದೂರುಗಳಿಗೆ ನದೀ ಪ್ರದೇಶಗಳಿಗೆ ಹೋಗುತ್ತಿದ್ದಾರಂತೆ. ಕಾಡುಗಳೆಲ್ಲ ಒಣಗಿ ಹೋಗಿವೆಯಂತೆ. ಬೆಟ್ಟಗಳಲ್ಲೆಲ್ಲ ಬರಿ ಬಂಡೆಗಳೇ ತುಂಬಿದೆಯಂತೆ. 200- 250 ಮೈಲಿಗಳ ದೂರದಿಂದ ಕುಡಿಯುವ ನೀರನ್ನು ಸರ್ಕಾರ ಸರಬರಾಜು ಮಾಡುತ್ತಿದೆಯಂತೆ; ಅತ್ಯಂತ ಕಷ್ಟದಿಂದ. ನಾಲ್ಕು ಜನರ ಕುಟುಂಬಕ್ಕೆ ಒಂದು ಬಿಂದಿಗೆ ನೀರನ್ನು ಕೊಡುತ್ತಿದ್ದಾರಂತೆ. ಅತ್ಯಂತ ದಾರುಣ ಸ್ಥಿತಿ. ಅಳಿದುಳಿದ ಜನರೆಲ್ಲ ಹತಾಶರಾಗಿದ್ದರೂ, ಯಾವುದೋ ಒಂದು ಎಳೆಯ ಆಸೆಯಿಂದ ರಾಜನಿಗಾಗಿ ಕಾಯುತ್ತಿದ್ದಾರಂತೆ. 
ಇದೀಗ ಭಗೀರಥನಿಗೆ ತುಂಬ ಸಂತೋಷವಾಗುತ್ತಿದೆ. ತಾನು ಹಿಡಿದ ಕೆಲಸ ಸಾಧಿಸಿದ್ದಾನೆ. ತನ್ನನ್ನು ನೋಡಿ ಜನರಿಗೆ ಅದೆಷ್ಟು ಸಂತೋಷವಾಗುವುದೋ! ಹೌದು. ಬ್ರಹ್ಮ ಬೇರೆ ಹೇಳಿದ್ದಾನೆ. ತನಗೆ ವಂಶೋದ್ಧಾರಕ ಹುಟ್ಟುವನೆಂದು. ಮೊದಲು ಸುಂದರಿಯೊಬ್ಬಳನ್ನು ವಿವಾಹವಾಗಬೇಕು. ಭಗೀರಥನ ಕಲ್ಪನೆ ಈಗ ಭವಿಷ್ಯದ ತನ್ನ ಸಂಸಾರವನ್ನು ಕುರಿತು ಚಿಂತಿಸತೊಡಗಿತು. ಹೇಗೆ ತಾನು ಆದರ್ಶ ರಾಜನಾದೆನೋ, ಹಾಗೆ ಆದರ್ಶ ಪತಿಯೂ ಆಗಬೇಕು, ಆದರ್ಶ ತಂದೆಯೂ ಆಗಬೇಕು. ರಾಜ್ಯದ ಜನರಿಗೆ ವಿದ್ಯಾಭ್ಯಾಸದ ಮಟ್ಟ ಹೆಚ್ಚಿಸಬೇಕು, ಆರೋಗ್ಯಶಾಲಿಗಳನ್ನಾಗಿಸಬೇಕು, ಕ್ರೀಡಾಪಟುಗಳನ್ನಾಗಿಸಬೇಕು.... ಹೀಗೆ ಮನಸ್ಸು ತಡೆಯಿಲ್ಲದೇ ಯೋಚಿಸುತ್ತಿದೆ. ಇದ್ದಕ್ಕಿದ್ದಂತೆಯೇ ಭಗೀರಥನಿಗೆ ಅರಿವಾಯಿತು; ನೀರಿನ ಸದ್ದು ಕೇಳಿಸುತ್ತಿಲ್ಲ! ತಂಗಾಳಿಯೂ ತಟ್ಟುತ್ತಿಲ್ಲ!! ಹಿಂತಿರುಗಿ ನೋಡಿದ!!! ಅನುಸರಿಸುತ್ತಿದ್ದ ಗಂಗೆ ಈಗ ಕಾಣುತ್ತಲೇ ಇಲ್ಲ! ಬದಲು ದಾರಿ ಮಾತ್ರ. ಒಣಗಿದ ದಾರಿ ಮಾತ್ರ. ಶೂನ್ಯ ಪಥ ಮಾತ್ರ! ಅಯ್ಯೋ ಎಲ್ಲಿಗೆ ಹೋದಳು ಈ ಗಂಗೆ?! (ಮುಂದುವರೆಯುವುದು...)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com