ಕೊನೆಗೂ ಅಯೋಧ್ಯೆಗೆ ಗಂಗೆ ಬರಲೇ ಇಲ್ಲ . ಬಂದವಳು ಸರಯೂ !!

ನಂಬಲಾರದ ದಶ್ಯ !! ಮುನಿಯೊಬ್ಬರ ಆಶ್ರಮ . ಪಕ್ಕದಲ್ಲಿ ಗಂಗೆಯನ್ನು ಬಂಧಿಸಿಬಿಟ್ಟಿದ್ದಾರೆ . ಇನ್ನೂ ಹತ್ತಿರ ನಡೆದರೆ ಅವರ ಆಶ್ರಮವೆಲ್ಲ ಧ್ವಂಸವಾಗಿದೆ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಅಯ್ಯೋ! ತನ್ನ ರಥ ಎಬ್ಬಿಸಿದ ಧೂಳು ಬಿಟ್ಟರೆ ಇನ್ನೇನೂ ಕಾಣುತ್ತಿಲ್ಲ. ಕುಗ್ಗಿ ಹೋದ ಭಗೀರಥ. ರಥವನ್ನು ಹಿಂತಿರುಗಿಸಿದ. ಈಗ ಙ್ಞಾನೋದಯವಾಯಿತು!! ಕೆಲಸ ಪೂರ್ತಿ ಮಾಡದೆ ಸಂಭ್ರಮಿಸಬಾರದು. ತಾನು ಕಲ್ಪನಾ ಸುಖದಲ್ಲಿ ಮೈ ಮರೆತಿದ್ದ. ಈಶ್ವರ ಕೊಟ್ಟಿದ್ದ ಎಚ್ಚರಿಕೆಯನ್ನು ಮರೆತೇ ಬಿಟ್ಟಿದ್ದ. ಏನು ಮಾಡುವುದು? ತಾನು ಬಂದ ದಾರಿಯಲ್ಲೇ ಹುಡುಕಬೇಕು. ಅಷ್ಟು ರಭಸದಿಂದ ಬರುತ್ತಿದ್ದ ಗಂಗೆ ಅದೆಂತು ಮಾಯವಾದಳು? ಈಗೆಲ್ಲೋ ಸಣ್ಣದಾಗಿ ನೀರಿನ ಸದ್ದು ಕೇಳುತ್ತಿದೆ. ಮುಂದುವರಿಯುತ್ತಿದ್ದಂತೆಯೇ ಅಂತೂ ಕಂಡೇ ಬಿಟ್ಟ. ನಂಬಲಾರದ ದಶ್ಯ!! ಮುನಿಯೊಬ್ಬರ ಆಶ್ರಮ. ಪಕ್ಕದಲ್ಲಿ ಗಂಗೆಯನ್ನು ಬಂಧಿಸಿಬಿಟ್ಟಿದ್ದಾರೆ.

ಇನ್ನೂ ಹತ್ತಿರ ನಡೆದರೆ ಅವರ ಆಶ್ರಮವೆಲ್ಲ ಧ್ವಂಸವಾಗಿದೆ. ನೀರು ತುಂಬಿದೆ. ಅವರು ಸಿಟ್ಟಾಗಿದ್ದಾರೆ. ಓಹ್ ! ಅವರು ಜನ್ಹು ಮಹರ್ಷಿಗಳು!! ಪದ್ಮಾಸನದಲ್ಲಿ ಕುಳಿತ ಅವರ ಪಕ್ಕದಲ್ಲಿ ಪಾರದರ್ಶಕ ಉದ್ದ ಗಗನದೆತ್ತರದ ಕೊಳವೆಯಲ್ಲಿರುವಂತೆ ನೀರು ತುಂಬಿ ಗಂಗೆ ಒದ್ದಾಡುತ್ತಿದ್ದಾಳೆ!! ಭಗೀರಥ ಹೋಗಿ ಅವರ ಕಾಲಿಗೆ ಬಿದ್ದ. ಎಲ್ಲ ಬಲ್ಲವರಂತೆ ಗುಡುಗಿದರು;  ರಾಜ, ಈ ಗಂಗೆ ಮಹಾ ದರ್ಪಿಷ್ಠೆ! ನೋಡು, ನನ್ನ ಈ ಕುಟೀರವನ್ನು ಕೊಚ್ಚಿ ಹಾಕಿಬಿಟ್ಟಿದ್ದಾಳೆ. ನಾವು ಋಷಿಗಳು; ಊರು ತೊರೆದು ಕಾಡಿಗೆ ಬಂದವರು. ಕೇವಲ ತಪಸ್ವಿಗಳು. ನಮಗೆ ಜನರ ಸಹವಾಸವೇ ಬೇಡವೆಂದು ಮೂರು ಹೊತ್ತೂ ಮೂಗು ಹಿಡಿದು ಕುಳ್ಳಿರುವವರು. ನಾವು ಯಾರಿಗೂ ತೊಂದರೆ ಕೊಡದಿದ್ದರೂ, ನೋಡು ಹೇಗೆ ನಮ್ಮನ್ನು ಈ ದುರಹಂಕಾರಿಗಳು ನೋಯಿಸುತ್ತಾರೆ!! ನಮ್ಮಲ್ಲಿ ಏನಿರದಿದ್ದರೂ ಮಂತ್ರ ಶಕ್ತಿ ಇದೆ. ಅದರಿಂದ ಯಾರನ್ನಾದರೂ ಅಡಗಿಸಬಲ್ಲೆವು. ಈ ಗಂಗೆಯನ್ನು ದಿಗ್ಬಂಧನದಲ್ಲಿ ಸೆರೆ ಹಿಡಿದಿದ್ದೇನೆ. ಅವರ ಮಾತಿನಲ್ಲಿನೋವಿತ್ತು. ಗಂಗೆಯನ್ನು ಶಿಕ್ಷಿಸಿದ ಖುಷಿಯೂ ಕೊಂಚ ಇತ್ತು. 

ಭಗೀರಥ ಅಂಗಲಾಚಿದ. ತನ್ನ ತಪಸ್ಸು, ಅದರ ಗುರಿ, ಅಯೋಧ್ಯೆಯಲ್ಲಿ ಕಾಯುತ್ತಿರುವ ತನ್ನ ಪ್ರಜೆಗಳು. ಎಲ್ಲರ ಮನೆಯ ಹೊರಗಿರುವ ಅಸ್ಥಿ ಕುಂಡಗಳು. ಗಂಗೆಯ ಅನಿವಾರ್ಯತೆ........ ಎಲ್ಲವನ್ನೂ ಎದೆ ಕರಗಿಸುವಂತೆ ವಿವರಿಸಿ ಹೇಳಿದ;  ತಾವು ಈಕೆಯನ್ನು ಬಂಧಿಸಿಬಿಟ್ಟರೆ ನನ್ನ, ನನ್ನ ಪ್ರಜೆಗಳ ಗತಿ ಏನು? ದಯವಿಟ್ಟು ಅನುಗ್ರಹಿಸಿ. ಆಕೆಯನ್ನು ಬಿಡಿ. ಮಹರ್ಷಿಗಳಿಗೆ ಅರ್ಥವಾಯಿತು.  ಆಯ್ತು. ನನ್ನಿಂದ ಬಂಧಿಸಲ್ಪಟ್ಟ ನೆನಪಿಗೆ,  ಈ ಗಂಗೆಯ ಹೆಸರೇ ಬದಲಾಗಲಿ. ಈಕೆ ಇನ್ನು ಮುಂದೆ ನನ್ನ ಹೆಸರಿನಿಂದ ಪ್ರಸಿದ್ಧವಾಗಲಿ. ಜಾನ್ಹವಿಯಾಗಲಿ !!
ಸೆರೆಯ ಕಟ್ಟು ಬಿಚ್ಚುತ್ತಿದ್ದಂತೆಯೇ ಶೇಖರಿಸಿದ್ದ ಗಂಗೆ ಒಮ್ಮೆಗೇ ಧುಮ್ಮಿಕ್ಕಿದಳು! ಒಮ್ಮೆಗೇ ಭೋರ್ಗರೆದಳು!! ಒಮ್ಮೆಗೇ ನುಗ್ಗಿ ನುಗ್ಗಿ ನುಗ್ಗಿ ಎದುರಿದ್ದುದನ್ನೆಲ್ಲ ಕೊಚ್ಚಿಕೊಂಡು ಹೋದಳು !!! ಆ ರಭಸಕ್ಕೆ ಆಕೆಯ ಪಥ ಬದಲಾಯಿತು?!! ಬದಲಾಗುತ್ತಿದ್ದಂತೆಯೇ ನೇರವಾಗಿ ಹೋಗುತ್ತಿದ್ದವಳು ಕೆಳಗೆ ಹರಿದುಬಿಟ್ಟಳು !! ಜನ್ಹು ಮಹರ್ಷಿಗಳಿಗೆ ವಂದಿಸಿ, ಉಪಚಾರದ ಮಾತಾಡಿ ಭಗೀರಥ ಹೊರಬರುವ ಹೊತ್ತಿಗೆ, ಗಂಗೆ ಹತ್ತೆಂಟು ಮೈಲುಗಳಷ್ಟು ದೂರ ಹರಿದು ಹೋಗಿದ್ದಾಳೆ !! ಇಲ್ಲಿವರೆಗೆ ಗಂಗೆ ಭಗೀರಥನನ್ನು ಅನುಸರಿಸುತ್ತಿದ್ದಳು. ಇದೀಗ ಭಗೀರಥ ರಥವನ್ನೇರಿ ಹೋಗುತ್ತಿದ್ದಾನೆ; ಗಂಗೆ ಪಕ್ಕದಲ್ಲಿ !! ಇವನೆಷ್ಟೇ ಓಡಿಸಿದರೂ ರಥವನ್ನು , ಆರ್ಭಟಿಸುತ್ತಿರುವ ಗಂಗೆಯನ್ನು ಹಿಂದೆ ಹಾಕಲು ಸಾಧ್ಯವೆ ? ಓಹ್ ! ಆಗಲೇ ಇಲ್ಲ . ವಿಶ್ರಾಂತಿ , ಆಹಾರ, ನಿದ್ದೆ.... ಭಗೀರಥನ ನಡೆಗೆ ಅಡ್ಡಿ!! ಆದರೆ ಭಾಗೀರಥಿಗಾವ ಅಡ್ದಗೋಡೆ? ಹರಿದು ಹೋಗುತ್ತಲೇ ಇದ್ದಾಳೆ. ಅವಳನ್ನು ಅನುಸರಿಸಿ , ಅನುಸರಿಸಿ , ಎದ್ದೆನೋ ಬಿದ್ದೆನೋ  ಎಂದು ಭಗೀರಥ ಬಸವಳಿದು ನಾಲ್ಕೈದು ದಿನಗಳಿಗೆ , ಅಂತೂ ಕೊನೆಗೂ ಗಂಗೆಯ ತುದಿಯನ್ನು ಕಂಡೇ ಬಿಟ್ಟೆನೆಂದು ಬಂದರೆ ಕಂಡದ್ದೇನು ? ಭಾರೀ ಹರವಿನ ಗಂಗೆ ಸಮುದ್ರದಲ್ಲಿ ಸೇರಿ ಹೋಗುತ್ತಿದ್ದಾಳೆ ! ಸರಿ . ಕೊನೆಗೆ ಯಾವ ನದಿಯಾದರೂ ಸಮುದ್ರಕ್ಕೇ ಸೇರಲೇಬೇಕು . ಆದರೆ ಈ ಗಂಗೆ ತನ್ನ ಅಯೋಧ್ಯೆಯ ಮೇಲೆ ಹರಿದು ಬರಬೇಕಿತ್ತು ! ಈಗೆಲ್ಲಿ ಬಂದಿದ್ದಾಳೆ ? ತನ್ನ ರಾಜ್ಯ ಇಲ್ಲಿಂದ ಎಷ್ಟು ದೂರದಲ್ಲಿದೆಯೋ ? ಒಂದೂ ಅರಿವಾಗದೇ ಮಹಾ ದುಃಖಿತನಾಗಿ ಕುಳಿತುಬಿಟ್ಟ . ಹೊಟ್ಟೆ ತೊಳಸಿ ಬಂದಂತೆ ; ಇಷ್ಟೇನಾ ನಮ್ಮ ಪ್ರಯತ್ನ ? ಕಷ್ಟ ಪಟ್ಟಿದ್ದೆಲ್ಲ ಸಾಗರದ ಪಾಲಾಯಿತು . ಈ ಗಂಗೆ ಏಕೆ ಇಷ್ಟು  ನಿಷ್ಕರುಣಿ ? ತನಗೇಕೆ ಇಂತಹ ಪರಾಭವ ? ತನ್ನಲ್ಲೇನೂ ತಪ್ಪಿಲ್ಲ . ಎಷ್ಟು ಬಾರಿ ತಪಿಸಿದ್ದೇನೆ . ಇನ್ನೇನು ಎಲ್ಲವೂ ಸಿಕ್ಕಿತು , ಎಲ್ಲವೂ ಮುಗಿಯಿತು ಎನ್ನುವಾಗ , ಏನೂ ಸಿಗದಂತೆ ; ಗೆದ್ದೆನೆಂದಾಗ ಆಟವೇ ಆರಂಭವಾಗಿಲ್ಲವೇನೋ ಎಂಬಂತೆ.
 
ಯಾರೋ ತನ್ನ ಬಳಿ ಬರುತ್ತಿದ್ದಾರೆ . ಯಾರದು ? ಅವರು ಯಾರೋ ಋಷಿಯಂತೆ ಕಾಣುತ್ತಿದ್ದಾರೆ . ಈ ಋಷಿಗಳೋ ಎಲ್ಲವನ್ನೂ ಬಿಟ್ಟೆವೆನ್ನುತ್ತಾರೆ ; ಊರನ್ನೇ ತ್ಯಜಿಸಿದ್ದೇವೆನ್ನು ತ್ತಾರೆ ; ಆದರೆ ತಮ್ಮ ಮನಸ್ಸನ್ನೇ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ . ಮೂಗಿನ ತುದಿಯಲ್ಲೇ ಸಿಟ್ಟು !! ಜನ್ಹು ಸಿಟ್ಟುಗೊಂಡು ಗಂಗೆಯನ್ನು ಬಂಧಿಸದೇ ಇದ್ದಿದ್ದರೆ , ತನಗಿಂತಹ ದುರವಸ್ಥೆ ಬರುತ್ತಲೇ ಇರಲಿಲ್ಲ . ಹೀಗೆ ಆಲೋಚನೆಯಲ್ಲಿದ್ದಾಗ ಆ ಋಷಿ ಹತ್ತಿರ ಬಂದರು . " ನನ್ನನ್ನು ನೀನು ಮರೆತೇ ಬಿಟ್ಟಿರುವೆ . ನಾನೇ ನಿನಗೆ ಗಂಗಾವತರಣ ಮಾಡಿಸಲು ಹೇಳಿದ್ದು . ನೀನೀಗ ಸೋತಿರಬಹುದು . ನಿನ್ನೂರಿಗೆ ಗಂಗೆ ಬಾರದಿರಬಹುದು , ಆದರೆ ಗಂಗಾಗಮನದಿಂದಾಗಿ ಭಾರತ ಪುಣ್ಯ ಭೂಮಿಯಾಯಿತು . ಉತ್ತರ ಭಾರತವೆಲ್ಲ ಹಸುರಾಯಿತು . ನಿನ್ನ ಹೆಸರು ಭಾರತ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ಗಳಿಸಿತು . ಈ ಗಂಗೆ ಅಯೋಧ್ಯೆಗೆ ೨೫೦ ಮೈಲಿ ದೂರದಲ್ಲಿ ಹರಿದು ಬರುತ್ತಿದ್ದಾಳೆ . ಮತ್ತವಳನ್ನು ಹಿಂದಕ್ಕೆ ತಿರುಗಿಸಿ ಅಯೋಧ್ಯೆಗೆ ಕರೆದೊಯ್ಯುವುದು ಸಾಧ್ಯವೇ ಇಲ್ಲದ ಮಾತು . ಇಷ್ಟು ಕಷ್ಟ ಪಟ್ಟಿರುವೆ , ಇನ್ನಷ್ಟು ತಪ ಮಾಡಿಬಿಡು , ಬ್ರಮ್ಹನನ್ನೊಲಿಸಿಕೊಂಡು ನಿನ್ನ ದುಸ್ಥಿತಿಯನ್ನು ವಿವರಿಸು . ಬ್ರಮ್ಹಾ ಬೇಗ ಒಲಿಯಬೇಕಾದರೆ ಅವನೇ ಸೃಷ್ಟಿಸಿದ ಬ್ರಹ್ಮಮಾನಸ ಸರೋವರಕ್ಕೆ ಹೋಗು .
*************

ವರ್ಷದ ಹಿಂದೆ ಬ್ರಹ್ಮಮಾನಸ ಸರೋವರಕ್ಕೆ ಬಂದದ್ದೂ ಆಯಿತು ; ಮಿಂದು ಮಡಿಯುಟ್ಟು ಪ್ರತಿದಿನ ತಪಸ್ಸು ಮಾಡುತ್ತಿರುವುದೇ ತನ್ನ ದಿನಚರಿಯೂ ಆಯಿತು . ಇನ್ನೆಂದು ಬ್ರಹ್ಮ ಬರುವನೋ ; ಎಂದು ಗಂಗೆ ನನಗೆ ಸಿಗುವಳೋ ; ತನ್ನ ಕಾಲದಲ್ಲಿ ಅಯೋಧ್ಯೆಗೆ ಗಂಗಾದರ್ಶನವಾಗುವದೋ ಇಲ್ಲವೋ !! ನಿರಾಶೆ - ಹತಾಶೆಗಳ ನಡುವೆ ಭಗೀರಥ ಹೇಗೋ ಬ್ರಹ್ಮನನ್ನು ಪ್ರಾರ್ಥಿಸುತ್ತಲೇ ಇದ್ದ . ಅಂತೂ ಕೊನೆಗೊಮ್ಮೆ ಬ್ರಹ್ಮ ಬಂದೇ ಬಿಟ್ಟ . ದಡಬಡಿಸಿ ಎದ್ದ ಭಗೀರಥ ಒಂದೇ ಉಸಿರಿನಲ್ಲಿ ತನ್ನ ಪರಾಭವವನ್ನು ಹೇಳಿ , ಈಗ ತನಗೇನು ಗತಿ ಎಂದ . ಸಮಾಧಾನದ ಧ್ವನಿಯಲ್ಲಿ ಬ್ರಮ್ಹಾ ನುಡಿದ ; " ಭಗೀರಥ , ವಿಶ್ವದಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೂ ಕಾರಣ ಕಾಣದಿರಬಹುದು . ಎಲ್ಲಕ್ಕೂ ಉತ್ತರ ಸಿಗದಿರಬಹುದು . ಅದೇ ಸೃಷ್ಟಿ ರಹಸ್ಯ . ನಿನ್ನಿಂದಾಗಿ ಗಂಗೆ ಬರಬೇಕಾಯಿತು . ಆದರೆ ನಿನಗೇ ಸಿಗದೇ ಹೋಗುವಂತೆಯೂ ಆಯಿತು . ಇದು ಜೀವನದಲ್ಲಿ ಸಹಜ . ಯಾರೋ ಪ್ರಯತ್ನ ಪಟ್ಟು ಗಳಿಸಿದ್ದನ್ನು , ಮತ್ತಾರೋ ಅನುಭವಿಸುತ್ತಾರೆ . ಇದಕ್ಕೆಲ್ಲ ವಿವರಣೆ ಸಿಗುವುದೂ ಇಲ್ಲ ; ಈಗದು ಬೇಡವೂ ಬೇಡ . ನಿನ್ನ ರಾಜ್ಯಕ್ಕೆ ಗಂಗೆ ಬೇಕು . ಅನುಗ್ರಹಿಸಿದ್ದೇನೆ . ನನ್ನೀ ಸರೋವರ ಪ್ರಾಂತದಿಂದ ಗಂಗೆಗಿನ್ನ ವಿಶಾಲ ಹರವಿನ ಸರಯೂ ಹರಿಯುತ್ತಾಳೆ . ಅವಳು ಅಯೋಧ್ಯೆಯನ್ನು ಸ್ಪರ್ಶಿಸಿಯೇ ಸಮುದ್ರಕ್ಕೆ ಹೋಗುತ್ತಾಳೆ. ಇಂದಿನಿಂದ ಅಯೋಧ್ಯೆಯ ಎಲ್ಲೆ ಸರಯೂ ಆಗಲಿ . ಹೋಗು , ನಿನ್ನ ರಾಜ್ಯಕ್ಕೆ ಹಿಂದಿರುಗು , ಸರಯೂವನ್ನು ಸ್ವಾಗತಿಸು . ಹೋಗು . ಸರಯೂ ಗಂಗೆಯಂತೆಯೇ ಜೀವನದಿಯಾಗಿ , ಅಯೋಧ್ಯೆಗೆ ಎಂದೂ ಕ್ಷಾಮದ  ಹೆಸರೇ ಸುಳಿಯದೇ ಹೋಗಲಿ . ನಿನ್ನ ಹೆಸರೂ ಆಚಂದ್ರಾರ್ಕವಾಗಿ ಪ್ರಸಿದ್ಧವಾಗಲಿ. ಕಷ್ಟಕ್ಕೆ , ಪ್ರಯತ್ನಕ್ಕೆ , ಸತತ ಪ್ರಯತ್ನಕ್ಕೆ , ಹಠ ಹಿಡಿದು ಸಾಧಿಸಿದ ಪ್ರಯತ್ನಕ್ಕೆ ನಿನ್ನ ಹೆಸರೇ ಉದಾಹರಣೆಯಾಗಲಿ .  ಭಗೀರಥ ಪ್ರಯತ್ನ  ಎಂಬುದು ಗಾದೆ ಮಾತಾಗಿ ಜನ ಮಾನಸದಲ್ಲಿ ಸದಾ ನೆಲೆಸಲಿ .

-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com