ಗಂಗಾವತರಣ - ಓದುಗರಲ್ಲಿ ಒಂದಿಷ್ಟು ಮನವಿ

ರೋಮಾಂಚಿತ ರಾಮರು ಕೇಳಿದರು; ಮೂರು ದಾರಿಯ ದೇವಿ ಎಂದು ಕರೆಯುತ್ತಾರಲ್ಲ ಜನ, ಏಕೆ? " ವಿಶ್ವಮಿತ್ರರು ಅದಕ್ಕೆ ಎರಡು ಕಾರಣಗಳನ್ನು ಹೇಳುತ್ತಾರೆ. " ಒಂದು, ಆಕೆ ಭಗೀರಥನ ಹಿಂದೆ ಬಂದಂತೆಯೇ...
ಗಂಗಾ ನದಿ (ಸಂಗ್ರಹ ಚಿತ್ರ)
ಗಂಗಾ ನದಿ (ಸಂಗ್ರಹ ಚಿತ್ರ)
"ಅಯೋಧ್ಯೆಗೆ ಬರದಿದ್ದರೇನು, ಭಾರತಕ್ಕೆ ಒಳಿತಾಯಿತಲ್ಲ?! ನೆರೆಹೊರೆಯ ರಾಜ್ಯಗಳಲ್ಲಿ ಗಂಗೆ ಹರಿದು ಜನರಿಗೆ ಸುಖ ಸಿಕ್ಕಿತಲ್ಲ? ಅವರು ಗಂಗೆ ಕಂಡಾಗಲೆಲ್ಲ ನಮ್ಮ ವಂಶದ ಭಗೀರಥನನ್ನು ನೆನೆಸಿಕೊಳ್ಳುವರಲ್ಲ, ಅಷ್ಟು ಸಾಕು. ಭಾರತೀಯರಿಗೆ ಉಪಕಾರವಾಯಿತಲ್ಲ; ನಮ್ಮ ಜನಕ್ಕೆ ಊಟ ಕೊಟ್ಟಳಲ್ಲ ಆ ತಾಯಿ, ಆಕೆಗೆ ನಾವು ಎಂದಿಗೂ ಋಣಿಯಾಗಿರಬೇಕು. " ಹೀಗೆ ನುಡಿದ ರೋಮಾಂಚಿತ ರಾಮರು ಕೇಳಿದರು; " ಮೂರು ದಾರಿಯ ದೇವಿ ಎಂದು ಕರೆಯುತ್ತಾರಲ್ಲ ಜನ, ಏಕೆ? " ವಿಶ್ವಮಿತ್ರರು ಅದಕ್ಕೆ ಎರಡು ಕಾರಣಗಳನ್ನು ಹೇಳುತ್ತಾರೆ.  " ಒಂದು, ಆಕೆ ಭಗೀರಥನ ಹಿಂದೆ ಬಂದಂತೆಯೇ ಪೂರ್ವಕ್ಕೆ ಮೂರು, ಪಶ್ಚಿಮಕ್ಕೆ ಮೂರು ಶಾಖೆಗಳಾಗಿ ಹರಿದಳು. ಎಂದರೆ, ಪೂರ್ವಕ್ಕೆ ಹ್ಲಾದಿನಿ, ಪಾವನಿ, ಮತ್ತು ನಲಿನಿ ಎಂಬ ಮೂರು ಗಂಗಾನದಿಗಳು 
(ಹ್ಲಾದಿನಿ ಪಾವನೀ ಚೈವ ನಲಿನೀ ಚ ತಥಾ ಪರ
ತಿಸ್ರಃ ಪ್ರಾಚೀದಿಶಂ ಜಗ್ಮುರ್ಗಂಗಾಃ ಶಿವಜಲಾಃ ಶುಭಾಃ)
 
ಹಾಗೆಯೇ ಪಶ್ಚಿಮಕ್ಕೆ ಹರಿದ ಮೂರು ನದಿಗಳೆಂದರೆ ಸೀತಾ, ಸುಚಕ್ಷು, ಮತ್ತು ಸಿಂಧು 
(ಸುಚಕ್ಷುಶ್ಚೈವ ಸೀತಾಚ ಸಿಂಧುಶ್ಚೈವ ಮಹಾನದೀ
ತ್ರಿಸ್ರಸ್ತ್ವೇತಾ ದಿಶಂ ಜಗ್ಮುಃ ಪ್ರತೀಚೀಂತು ಶುಭೋದಕಾಃ)
ಅಂತೆಯೇ ಭಗೀರಥನನ್ನು ಅನುಸರಿಸಿ ಬಂದದ್ದು ಭಾಗೀರಥಿ . ಅವಳಿಗೆ ಮತ್ತೊಂದು ಹೆಸರೇ ಅಲಕನಂದೆ.
(ತಥೈವ ಅಲಕನಂದಾಚ ವಿಶ್ರುತಾ ಲೋಕಪಾವನಿ 
ಸಪ್ತಮೀಚ ಅನ್ವಗತ್ತಾಸಾಂ ಭಗೀರಥಮಥೋ ನೃಪಂ)
 
ಇದು ಕಾರಣ ಮೂರು ದಿಕ್ಕಿಗೆ ಆಕೆ ಹರಿದದ್ದರಿಂದ ಜನರು ಆಕೆಯನ್ನು ಮೂರು ದಾರಿಯ ದೇವಿ ಎಂದರು. ಎರಡನೆಯ ಕಾರಣವೆಂದರೆ, ಆಕೆ ಇದ್ದದ್ದು ಸ್ವರ್ಗದಲ್ಲಿ, ಬಂದದ್ದು ಮರ್ತ್ಯಕ್ಕೆ, ಕೊನೆಗೆ ಇಳಿದದ್ದು ಪಾತಾಳಕ್ಕೆ. ಎಂದರೆ ಈ ಮೂರು ಸ್ಥಳಗಳಲ್ಲೂ ಆಕೆ ಸಂಚಾರ ಮಾಡಿದ್ದರಿಂದ ಆಕೆಯನ್ನು ತ್ರಿಪಥಗಾ ಎಂದು ಕರೆದರು. "ವಿಶ್ವಮಿತ್ರರು ಕಥೆ ಮುಗಿಸಿ ಮೇಲೆದ್ದರು, ಎಲ್ಲರೂ ವಿಶ್ರಮಿಸಲು ತಮ್ಮ ತಮ್ಮ ಕುಟೀರಗಳಿಗೆ ತೆರಳಿದರು. ಈ ಗಂಗಾವತರಣದ ಫಲಶ್ರುತಿಯನ್ನು ಹೇಳಿ ಈ ಪ್ರಕರಣ ಮುಗಿಸೋಣವೇ?
 
" ಗಂಗಾವತರಣದ ಕಥೆಯನ್ನು ಯಾರು ಕೇಳುತ್ತಾರೋ, ಅವರು ಪುಣ್ಯವಂತರು. ಅವರೇ ಧನ್ಯರು. ಅವರೇ ಕೀರ್ತಿಶಾಲಿಗಳು. ಅವರಿಗೇ ದೀರ್ಘಾಯುಷ್ಯ. ಅವರಿಗೆ ಸಂತಾನ ಪ್ರಾಪ್ತಿಯಾಗಿ, ನಾಲ್ಕು ವರ್ಣದವರಿಗೂ ಮುಂದೆ ಸ್ವರ್ಗ ಸಿಗುತ್ತದೆ. ಗಂಗಾವತರಣ ಪಾರಾಯಣ ಮಾಡಿಸಿದರೆ, ಪಿತೃ ದೇವತೆಗಳಿಗೆ ಆನಂದವಾಗುತ್ತದೆ. ದೇವತೆಗಳಿಗೂ ಸಂತಸವಾಗುತ್ತದೆ. ಅಂತಹ ಪಾಪಹಾರಿಣಿಯಾದ ಗಂಗಾವತರಣದ ಶ್ರವಣ ಶುಭಕರವಾದುದು". 
(ಧನ್ಯಂ ಯಶಸ್ಯ ಮಾಯುಷ್ಯಂ ಪುತ್ರ್ಯಂ ಸ್ವರ್ಗ್ಯ ಮತೀವಚ 
ಯಃ ಶ್ರಾವಯತಿ ವಿಪ್ರೇಷು ಕ್ಷತ್ರಿಯೇಷ್ವಿತರೇಷು ಚ 
ಪ್ರೀಯಂತೇ ಪಿತರಸ್ತಸ್ಯ ಪ್ರೀಯಂತೇ ದೈವತಾನಿ ಚ
ಇದಮಾಖ್ಯಾನಮವ್ಯಗ್ರೋ ಗಂಗಾವತರಣಂ ಶುಭಂ)
 
ಭಾರತೀಯರಿಗೆ ಭಾಗ್ಯ ವಿಧಾತೆಯಾದ ಗಂಗಾ ನದಿ ಈಗ ಜೀವ ನದಿಯಾಗಿ, ವರ್ಷ ಪೂರ ಹರಿಯುತ್ತಿದ್ದು, ಉತ್ತರ ಭಾರತವನ್ನೆಲ್ಲ ಕ್ಷಾಮ ರಹಿತವನ್ನಾಗಿ, ನಿತ್ಯ ಹರಿದ್ವರ್ಣದ ನಗರಿಯನ್ನಾಗಿ ಮಾಡಿಬಿಟ್ಟಿದ್ದಾಳೆ. ಜನರಿಗೆ ಗಂಗೆಯೆಂದರೆ ತಾಯಿಯಿದ್ದಂತೆ! ಅದು ಕಾರಣವೇ ಹರಿದ್ವಾರವನ್ನು ಗಂಗಾದ್ವಾರವೆಂದು ಕರೆದು ಪ್ರತಿ ಸಂಜೆ ಆಕೆಗೆ ಗಂಗಾರತಿಯೆಂಬ ಒಂದು ಆಕರ್ಷಕ ಕಾರ್ಯಕ್ರಮವನ್ನೇರ್ಪಡಿಸುತ್ತಾರೆ.

ಈ ಗಂಗಾರತಿಯನ್ನು ನೋಡಲೇ, ಆ ಗಂಗಾತಟಕ್ಕೆ ಪ್ರತಿ ನಿತ್ಯ ಲಕ್ಷ-ಲಕ್ಷ ಜನ ಆಗಮಿಸುತ್ತಾರೆಂಬುದೇ, ನಮ್ಮಲ್ಲಿ ಗಂಗಾ ಶ್ರದ್ಧೆ - ಗೌರವಗಳು ಎಷ್ಟಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ. ಸಾಯುವ ಮುನ್ನ ಗಂಗಾಜಲವನ್ನು ಕುಡಿದು ಸಾಯಲು ಬಯಸುತ್ತಾರೆ ಹಿಂದೂಗಳು. ಆಕೆಯಲ್ಲಿ ಮುಳುಗೆದ್ದರೆ ನಮ್ಮ ಪಾಪವೆಲ್ಲ ಕೊಚ್ಚಿ ಹೋಗುವುದೆಂದು ನಂಬುತ್ತೇವೆ ನಾವು. ಸತ್ತ ಮನುಷ್ಯನ ಅಸ್ಥಿಗಳನ್ನು ಆಕೆಯಲ್ಲಿ ವಿಸರ್ಜಿಸಿದರೆ ಮುಕ್ತಿ ದೊರೆಯುವುದೆಂಬುದನ್ನು ಅಪಾರ್ಥವಾಗಿ ಭಾವಿಸಿ, ಸತ್ತ ಹೆಣಗಳನ್ನೇ ಆಕೆಯಲ್ಲಿ ವಿಸರ್ಜಿಸಿ ಗಂಗೆಯನ್ನು ಹೊಲಸು ಮಾಡುತ್ತಿದ್ದೇವೆ !! ಎಂತಹ ಅನಾಹುತವೆಂದರೆ, ಪುಣ್ಯಶಾಲಿಯಾದ ಗಂಗೆಯನ್ನು ನಾವು ನಮ್ಮೆಲ್ಲ ಧರ್ಮಶ್ರದ್ಧೆಗಳಿಂದ ಅರೆಬೆಂದ ಹೆಣಗಳಿಂದ ಪುಣ್ಯನಾಶಿನಿಯನ್ನಾಗಿ ಮಾಡುತ್ತಿದ್ದೇವೆ. ಅಂತೆಯೇ ಕಾರ್ಖಾನೆಗಳ ಹೊಲಸನ್ನೆಲ್ಲ ತುಂಬಿ ಕೊಚ್ಚೆ ಗಂಗೆಯನ್ನಾಗಿ ಮಾಡುತ್ತಿದ್ದೇವೆ. 
(ಆತ್ಮೀಯರೆ, ಒಂದು ವಿನಂತಿ. ಈ ಗಂಗಾವತರಣ ಪ್ರಕರಣದಲ್ಲಿ ಒಂದು ಅಂಶವನ್ನು ಬಿಟ್ಟಿದ್ದೇನೆ, ಮತ್ತು ಒಂದು ಅಂಶವನ್ನು ಬದಲಿಸಿದ್ದೇನೆ. ಮೂಲದಲ್ಲಿ ಸಗರನ ಯಙ್ಞ, ಆ ಯಙ್ಞ ಪ್ರತಿನಿಧಿಯಾದ ಯಙ್ಞಾಶ್ವ, ಅದನ್ನು ಇಂದ್ರ ಅಪಹರಿಸುವುದು, ಆ ಅಶ್ವವನ್ನು ಹುಡುಕಲು ಸಗರ ಪುತ್ರರು ನೆಲವನ್ನು ಅಗೆದು ಪಾತಾಳಕ್ಕೆ ಹೋಗುವುದು, ಅಲ್ಲಿ ಅದು ಕಪಿಲ ಮಹರ್ಷಿಯ ಬಳಿ ಇರುವುದನ್ನು ಕಂಡು ಆ ಋಷಿಯ ಮೇಲೆ ಆಕ್ರಮಣ ಮಾಡಲು ನುಗ್ಗಿದಾಗ ಕಪಿಲರ ಹೂಂಕಾರ ಮಾತ್ರದಿಂದ ಅವರೆಲ್ಲ ಸುಟ್ಟು ಬೀಳುವುದು, ಕೊನೆಗೆ ಅಂಶುಮಂತ ಬಂದು, ಅವರ ನಾಶವನ್ನು ಕಂಡು, ಅವರಿಗೆ ತರ್ಪಣ ಕೊಡಲು ಹೋದಾಗ ಗರುತ್ಮಂತ ಬಂದು" ದೇವಲೋಕದ ಗಂಗೆ ಇವರ ಮೇಲೆ ಹರಿದರೆ ಮಾತ್ರ ಇವರಿಗೆ ಸದ್ಗತಿ" ಎಂಬುದು, ಈ ವಿಭಾವದಿಂದಾಗಿ ಅಂಶುಮಂತ, ದಿಲೀಪ, ಭಗೀರಥರು ಗಂಗೆಗಾಗಿ ತಪಸ್ಸು ಮಾಡುವುದು... ಇವೆಲ್ಲ ವಿವರವಾಗಿ ಬಂದಿದೆ.

ಆದರೆ ಸಗರ ಪುತ್ರರು ತೋಡಿದ ತಗ್ಗಿನಲ್ಲಿ (ಅದೆಷ್ಟೇ ದೊಡ್ಡದಿರಲಿ!!!!! ) ಮುಂದೆ ಗಂಗೆ ತುಂಬಿದ್ದರಿಂದ ಅದಕ್ಕೆ ಸಾಗರ ಎಂಬ ಹೆಸರು ಬಂದಿತು ಎಂಬುದು ಸಾಗರದ ವಿಸ್ತಾರದ ಕಲ್ಪನೆ ಇಲ್ಲದೇ, ಸಮುದ್ರಕ್ಕೆ ಮಾಡಿದ ಅವಮಾನವಾಗುತ್ತದೆ. ಸಗರ ಪುತ್ರರು ಪಾತಾಳಕ್ಕೆ ಹೋಗುವ ದಾರಿಯಲ್ಲಿ ಈ ಭೂಮಿಯನ್ನು ಹೊತ್ತಿರುವ ಆನೆಗಳು, ಹಾಗೂ ಅವುಗಳ ತಲೆ ಕೊಡಹುವುದರಿಂದ ಉಂಟಾಗುವ ಭೂಕಂಪ ಕಾರಣಗಳು, ಭೂಮಿ ದುಂಡಗಿದೆಯೆಂದು ಗೊತ್ತಿಲ್ಲದಾಗ ಮತ್ತು ಈ ಭೂಮಿಯನ್ನು ಅಷ್ಟ ದಿಗ್ಗಜಗಳು ಹೊತ್ತಿವೆ ಎಂಬ ಅಙ್ಞಾನದಿಂದ ಮಾತ್ರವೇ ಒಪ್ಪುವ ಪೌರಾಣಿಕ ವಿವರಣೆಯನ್ನು ನಂಬುವವರಿಗೆ ಮಾತ್ರ ಸರಿ ಕಾಣುತ್ತದೆ. ಅದು ಕಾರಣ ಈ ಸಗರೋಪಾಖ್ಯಾನವನ್ನು ಪೂರ್ಣ ಬಿಟ್ಟಿರುವೆ. 
ಇನ್ನು ಅಗಸ್ತ್ಯರು ಸಮುದ್ರವನ್ನು ಕುಡಿದರೆಂಬ ಪ್ರಕರಣ. ನಿಜಕ್ಕೂ ಇದು ಸಾಧ್ಯವೇ ಇಲ್ಲದ ಕಲ್ಪನೆ. ಅಕಸ್ಮಾತ್ ಹಾಗೊಮ್ಮೆ ಆ ಉಪ್ಪು ನೀರನ್ನೆಲ್ಲ, ಎಂದರೆ ಭೂಮಿಯ ಮೇಲಿರುವ ನೀರನ್ನೆಲ್ಲ ಒಬ್ಬ ವ್ಯಕ್ತಿ, ಮಹಾತ್ಮ, ಮಹಾನ್ ಋಷಿ, ಏನೆಲ್ಲ ಶಕ್ತಿಗಳನ್ನು ಅನ್ವಯಿಸಿದರೂ ಅವನಿಗೆ ಸಾಧ್ಯವೇ ಆಗದ ಆ ನೀರು ಕುಡಿವ ಸಾಮರ್ಥ್ಯವನ್ನು ಅಕಸ್ಮಾತ್ ಒಪ್ಪಿದರೂ, (!!!) ಭೂಮಿಯ ಮೇಲಿನ ನೀರೆಲ್ಲ ಮಾಯವಾದರೆ ಮಾರನೇಯ ದಿನದಿಂದಲೇ ನೀರಿಗೇನು ಗತಿ? ಕುಡಿವ, ಬಳಸುವ, ನೀರಿಗೇನು ಮಾಡಬೇಕು? ಇಡೀ ಭೂಮಿಯಲ್ಲಿ ನೀರೇ ಇಲ್ಲದೇ ಕೆಲವೇ ದಿನಗಳಲ್ಲಿ ಮನು ಕುಲವೇ ಸತ್ತು ಬೀಳಬೇಕು.

ಅಗಸ್ತ್ಯರ ಸಮುದ್ರ ಪ್ರಾಶನಾ ನಂತರ ಅಂಶುಮಂತ ಹಾಗೂ ದಿಲೀಪ, ಎಂದರೆ ಎರಡು ತಲೆಮಾರುಗಳು ಬಹು ಕಡಿಮೆ ಎಂದರೂ ನಮ್ಮ ಪುಟ್ಟ ಆಯುಃಪ್ರಮಾಣದ ಲೆಕ್ಕಾಚಾರ ಹಾಕಿದರೂ ಐವತ್ತು ವರ್ಷಗಳು. ಮತ್ತು ಭಗೀರಥನ ಅರ್ಧ ಆಯುಃಕಾಲ ಹನ್ನೆರಡು ಹದಿಮೂರು, ಒಟ್ಟು ಅರುವತ್ತೆರಡು ಅರುವತ್ಮೂರು ವರ್ಷಗಳ ಕಾಲ ಈ ಭೂಮಿಯ ಮೇಲೆ ನೀರೇ ಇರುವುದಿಲ್ಲ!!! ಬೇರೆ ಬೇರೆಯ ನದಿಗಳು ಇದ್ದವಲ್ಲಾ ಎಂಬ ಸಮಾಧಾನ ಪಡಲೂ ಸಾಧ್ಯವಿಲ್ಲ. ಏಕೆಂದರೆ ಸಮುದ್ರವೇ ಇಲ್ಲದಾಗ, ಯಾವ ನೀರು ಆವಿಯಾದಾತು; ಯಾವ ಮೋಡಗಳು ಹುಟ್ಟಾತು; ಯಾವ ನದೀ ಪಾತ್ರಗಳಲ್ಲಿ ಸುರಿದು ನದಿಗಳು ಹರಿದಾತು? ಹೀಗಾಗಿ ಭಾರತದಲ್ಲಿ (ಪ್ರಪಂಚಕ್ಕೇ ಅನ್ವಯಿಸಬಹುದು!!!) ಅಷ್ಟು ದೀರ್ಘ ಕಾಲ ನಿರ್ಜಲ ಸ್ಥಿತಿ ಇತ್ತೆಂಬುದು ಅವಾಸ್ತವ ಹಾಗೂ ಅನೂಹ್ಯ. ಈ ಕಾರಣಗಳಿಂದಾಗಿ, ಸಮುದ್ರ ಕುಡಿಯುವುದನ್ನು ಸಂಪೂರ್ಣವಾಗಿ ಬದಲಿಸಿಕೊಂಡಿರುವುದನ್ನು ಓದುಗರು ಒಪ್ಪುವರೆಂದು ಭಾವಿಸುವೆ- ಲೇ)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com