ಮಿಥಿಲೆಯ ಜನಕ ಮಹಾರಾಜನ ಸಂದರ್ಶನ ; ಧನುರ್ದರ್ಶನಾಪೇಕ್ಷೆ

ಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಮಿಥಿಲೆಗೆ ಬಂದಿದೆ ವಿಶ್ವಮಿತ್ರ ಮುನಿಸಂಘ. ಮುಂಚೆಯೇ ಮುನಿಗಳು ಹೇಳಿ ಕಳಿಸಿದ್ದರು; ತಾವು ಬರುತ್ತಿರುವ ವಿಷಯವನ್ನು. ಪುರದ್ವಾರದಲ್ಲಿಯೇ ಜನಕ ಬಂದು ನಿಂತಿದ್ದಾನೆ....
ಜನಕ ಮಹಾರಾಜನ ಆಸ್ಥಾನದಲ್ಲಿ ವಿಶ್ವಾಮಿತ್ರರು, ರಾಮ-ಲಕ್ಷ್ಮಣರು (ಸಾಂಕೇತಿಕ ಚಿತ್ರ)
ಜನಕ ಮಹಾರಾಜನ ಆಸ್ಥಾನದಲ್ಲಿ ವಿಶ್ವಾಮಿತ್ರರು, ರಾಮ-ಲಕ್ಷ್ಮಣರು (ಸಾಂಕೇತಿಕ ಚಿತ್ರ)
ಅಕಸ್ಮಾತ್ ರಾಮರೇನಾದರೂ ಧನುಸ್ಸಿಗೆ ಹೆದೆ ಏರಿಸಿದರೆ, ಅಯೋನಿಜಳಾದ ಸೀತೆಯನ್ನು ದಾಶರಥಿಗೆ ಕೊಡುವೆ. ಕೊಟ್ಟು, ಮದುವೆ ಮಾಡುವೆ. 
(ಯದ್ಯಸ್ಯ ಧನುಷೋ ರಾಮಃ ಕುರ್ಯಾತ್ ಆರೋಪಣಂ ಮುನೇ 
ಸುತಾಂ ಅಯೋನಿಜಾ ಸೀತಾಂ ದದ್ಯಾಂ ದಾಶರಥೇ ಅಹಂ ) 
ಜನಕ ಮಹಾರಾಜ ಹೇಳಿ ಮುಗಿಸಿದ ತನ್ನ ಪ್ರಸ್ತಾವನೆಯನ್ನು. 
***************
ಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಮಿಥಿಲೆಗೆ ಬಂದಿದೆ ವಿಶ್ವಮಿತ್ರ ಮುನಿಸಂಘ. ಮುಂಚೆಯೇ ಮುನಿಗಳು ಹೇಳಿ ಕಳಿಸಿದ್ದರು; ತಾವು ಬರುತ್ತಿರುವ ವಿಷಯವನ್ನು. ಪುರದ್ವಾರದಲ್ಲಿಯೇ ಜನಕ ಬಂದು ನಿಂತಿದ್ದಾನೆ. ಒಂದು ದೊಡ್ಡ ಮಣೆ, ಪಕ್ಕದಲ್ಲಿ ಪುಟ್ಟ ಎರಡು ಮಣೆಗಳು. ವಂದಿಸಿ ವಿಶ್ವಮಿತ್ರರನ್ನು ಕೈ ಹಿಡಿದು ಕರೆತಂದು ದೊಡ್ಡ ಮಣೆಯ ಮೇಲೆ ನಿಲ್ಲಿಸಿದ. ಸುಖೋಷ್ಣವಾದ ನೀರಿನಲ್ಲಿ ಪಾದ ತೊಳೆದು ಗಂಧ, ಅಕ್ಷತೆ, ಕುಂಕುಮ, ಅರಿಶಿನ, ಪುಷ್ಪಗಳಿಂದ ಪೂಜಿಸಿದ. 
ಇಳಿಯುವ ಮುನ್ನ ಅವರ ಪಾದುಕೆಗಳನ್ನು ತಂದಿಡುತ್ತಿದ್ದ ಅಂತೇ ವಾಸಿಗೆ, " ನೀವು ಮುಂದೆ ಹೋಗಿ, ಈ ಪುಷ್ಪ ಪಥದ ಮೇಲೆ ಮುನಿಗಳು ಅಡಿಯಿಟ್ಟು ಬರಲಿದ್ದಾರೆ" ಎಂದ. ಋಷಿಗಳೆಡೆ ತುಸು ಬಾಗಿ ಕೇಳಿದ ಜನಕ; " ಸಣ್ಣ ಮಣೆಗಳೆರಡನ್ನು ತರಲು ತಾವು ಹೇಳಿಕಳಿಸಿದ್ದಿರಿ, ಯಾರಿಗಾಗಿ?". ಹಿಂದಿದ್ದ ರಾಮ-ಲಕ್ಷ್ಮಣರನ್ನು ಕರೆದರು ಋಷಿಗಳು. "ಈತ ಜನಕ ಮಹಾರಾಜ. ಈತನ ಹಿಂದಿನ ಮೂಲ ಪುರುಷನ ಹೆಸರು ವಿದೇಹಜನಕ. ಹೆಸರು ಬಂದಿದ್ದಕ್ಕೆ ಕಾರಣವನ್ನು ನಮ್ಮ ಕುಟೀರಕ್ಕೆ ಹೋದಮೇಲೆ ಹೇಳುವೆವು. ಆತ ಮಹಾ ತಪಸ್ವಿ, ರಾಜರ್ಷಿ. ವೇದ-ವೇದಾಂತಗಳನ್ನು ಅರೆದು ಕುಡಿದಾತ. ಸಿಂಹಾಸನದಲ್ಲಿದ್ದರೂ ಸಾಮಾನ್ಯರಂತೆ. ಅಂಟಿಯೂ ಅಂಟದಂತಹ ಮಹಾ ಸ್ಥಿತಪ್ರಙ್ಞ; ಮಹಾ ಙ್ಞಾನಿ; ಮಹಾ ವೇದಾಂತಿ. ಆ ಗುಣಗಳೆಲ್ಲ ಈ ಜನಕ ಮಹಾರಾಜನಲ್ಲೂ ಇವೆ. ನಿಮ್ಮ ತಂದೆಯ ಸಮಾನ ವೃದ್ಧರೂ ಹೌದು; ಙ್ಞಾನ ವೃದ್ಧರೂ ಹೌದು. ಧಾರ್ಮಿಕ ಸಮಸ್ಯೆಗಳನ್ನು-ಮುನಿಗಳಿಗೂ ಬಗೆಹರಿಸಲಾಗದ್ದನ್ನು ಬಗೆಹರಿಸಬಲ್ಲ ಶಕ್ತಿ ಇವರಿಗಿದೆ". " ಛೆ ಛೆ ! ಗುರುಗಳು ನನ್ನ ಬಗ್ಗೆ ತುಂಬ ಹೊಗಳುತ್ತಿದ್ದಾರೆ". ಸಂಕೋಚ ಪಡುತ್ತ ಹೇಳಿದರು ಜನಕ ಮಹಾರಾಜರು. ಇಷ್ಟು ಹೊತ್ತಿಗಾಗಲೇ ರಾಮ ಲಕ್ಷ್ಮಣರು ಜನಕನಿಗೆ ನಮಸ್ಕರಿಸಿದ್ದರು, ಜನಕ ಆಶೀರ್ವದಿಸಿಯೂ ಇದ್ದ.
ಇನ್ನು ಮುಂದೆ ಹೊರಡಬೇಕು, ಮತ್ತೆ ಜನಕ ಕೇಳಿದ, " ಋಷಿಗಳೆ, ಮತ್ತೆ ಎರಡು ಮಣೆಗಳನ್ನು ತರಸಿದ್ದೀರಿ" . "ಓಹ್ ! ರಾಮ ಲಕ್ಷ್ಮಣರೇ, ಆ ಮಣೆಗಳ ಮೇಲೆ ನಿಲ್ಲಿ" .ಗುರುಗಳ ಆದೇಶದಂತೆ ಅಣ್ಣ-ತಮ್ಮಂದಿರು ನಿಂತರು. ಜನಕನಿಗೆ ಹೇಳಿದರು; " ಮಹಾರಾಜ, ಇವರನ್ನು ಉಪಚರಿಸು" .ಕ್ಷಣಕಾಲ ರಾಜರಿಗೆ ಗೊಂದಲವಾಯಿತು. ತನಗಿನ್ನ ಬಹುಪಾಲು ಅರುವತ್ತು ವರ್ಷಗಳು ಚಿಕ್ಕವರಿರುವವರಿಗೆ ತಾನು ಕಾಲು ತೊಳೆಯುವುದೇ? ಆದರೂ ಋಷಿಗಳು ಹೇಳಿದ್ದಾರೆಂದರೆ ಅದಕ್ಕೆ ಅರ್ಥ ಇರಲೇ ಬೇಕು. ನಾವು ಪ್ರಶ್ನಿಸಬೇಕಿಲ್ಲ. ಯೋಚನೆ ಮುಗಿದ ಮರುಕ್ಷಣ ಜನಕ ಮಹಾರಾಜ ಬಿಸಿನೀರು ತುಂಬಿದ ತಂಬಿಗೆ ಹಿಡಿದು ಬಾಗಿದ. ಸರಕ್ಕನೆ ರಾಮರು ಹಿಂಜರಿದರು. ಮಣೆಯಿಂದ ಇಳಿದುಬಿಟ್ಟರು. "ಏನು ಗುರುಗಳೇ ಇದು? ನಮ್ಮ ತಂದೆಯಂತಿರುವವರು ಕಾಲು ತೊಳೆಯಬೇಕೆಂದು ತಾವು ಹೇಳುತ್ತಿದ್ದೀರಿ?". ಇತ್ತ ಜನಕನಿಗೆ ದಿಗ್ಭ್ರಮೆ. "ಈ ಶ್ರೀರಾಮ ನಾರಾಯಣ ಸ್ವರೂಪ. ಈತನ ಕಾಲು ತೊಳೆಯುವುದು ನಿನಗೆ ಶುಭೋದಯ. "ಮತ್ತೆ ಮಧ್ಯ ಮಾತಾಡಿದ ಶ್ರೀರಾಮರು ಹೇಳಿದರು; "ಇಲ್ಲಿಲ್ಲ, ನಾನು ಯಾವ ಸ್ವರೂಪವಾದರೂ, ಈ ರೂಪಕ್ಕೆ ಹದಿನಾರೂ ಆಗಿಲ್ಲ. ಎಂಬತ್ತು ಮೀರಿದ ಮಹಾರಾಜರು ತೊಳೆಯುವುದನ್ನು ನಾನು ಒಪ್ಪುವುದಿಲ್ಲ. ಋಷಿ ಮುನಿಗಳನ್ನು ಬಿಟ್ಟರೆ ಯಾವ ಕಾರಣದಿಂದಲೂ ಹಿರಿಯರು ಕಿರಿಯರ ಕಾಲು ತೊಳೆಯಬೇಕಿಲ್ಲ". ಕ್ಷಣ ಕಾಲ ಕಣ್ಣು ಮುಚ್ಚಿ ನಿಂತ ವಿಶ್ವಮಿತ್ರರು ಹೇಳಿದರು, " ಮುಂದಾಗುವುದು ಇಂದೇ ಆಗಲಿ ಎಂದಿದ್ದೆ, ರಾಮರು ಲೋಕೋಪಾಧ್ಯಾಯರು. ಈ ಮೂಲಕ ಅವರು ಸಂಪ್ರದಾಯ ಒಂದನ್ನು ತಿದ್ದುತ್ತಿದ್ದಾರೆ. ಬಿಡಿ ಮಹಾರಾಜರೆ, ಮುಂದೆ ಹೋಗೋಣ. " .ಜನಕನಿಗಾಗಲಿ, ಲಕ್ಷ್ಮಣನಿಗಾಗಲಿ, ಪುರೋಹಿತನಿಗಾಗಲಿ ಏನೂ ಗೊತ್ತಾಗಲಿಲ್ಲ. 
ಪುರ ದ್ವಾರದಿಂದ ಅರಮನೆಯ ಬಾಗಿಲ ವರೆಗೆ ಅಡಿದಪ್ಪದ, ಎರಡಡಿ ಅಗಲದ ಪುಷ್ಪ ದಾರಿ. ಕಾಲಿಡುತ್ತಿದ್ದಂತೆಯೇ ಪಾದಕ್ಕೆ ಮೃದುವಾಗಿ, ಹದವಾಗಿ, ಹಿತವಾಗಿ, ತಂಪಾಗಿ ಮುತ್ತಿಡುತ್ತಿವೆ. ಮಲ್ಲಿಗೆಯ ಸುಗಂಧ ಇಡೀ ವಾತಾವರಣವನ್ನೇ ಮುದಗೊಳಿಸಿದೆ. ತಲೆಯ ಮೇಲೆ ಶ್ವೇತ ಛತ್ರ ಹಿಡಿದಿದ್ದಾರೆ. ಮುಂದೆ ವೈದಿಕ ವೃಂದ ತೈತ್ಯರೀಯ ಮಂತ್ರ ಹೇಳುತ್ತ ಹೊರಟಿದೆ. ಅರಮನೆಯ ಬಾಗಿಲಿಗೆ ಬರುತ್ತಿದ್ದಂತೆಯೇ ಅಲ್ಲಿನ ರಾಜಸಭಾಸದರು ವಿಶ್ವಮಿತ್ರರಿಗೆ ಮತ್ತೊಮ್ಮೆ ಪಾದ ಪೂಜೆ ಮಾಡಿದರು. ಅಲ್ಲಿಯೂ ಶ್ರೀರಾಮ-ಲಕ್ಷ್ಮಣರು ತಾವೇ ಕಾಲ್ತೊಳೆದು ಒಳಗೆ ಬಂದರು. ಅವರಿಗೆಲ್ಲ ನಿವಾಸ ಏರ್ಪಡಿಸಿ ಜನಕ ಮಹಾರಾಜರು ಮಾರನೆಯ ಬೆಳಿಗ್ಗೆ ರಾಜಸಭೆಗೆ ಬರಲು ಆಹ್ವಾನಿಸಿ ಹೊರಟರು. 
*************
ನಿರೀಕ್ಷಿಸಿದ್ದಂತೆಯೇ ಬೆಳಿಗ್ಗೆ ವಿಶ್ವಮಿತ್ರರೊಡನೆ ರಾಮ-ಲಕ್ಷ್ಮಣರು ಜನಕ ಮಹಾರಾಜನ ವೈಭವದ ರಾಜಸಭೆಗೆ ಆಗಮಿಸಿದರು. ತಾನು ಕಂಡಿದ್ದ ತಮ್ಮ ರಾಜಭವನಕ್ಕೆ ಹೋಲಿಸಿದರೆ, ತುಸು ಹೆಚ್ಚೇ ಅಲಂಕೃತವಾದ ವೈಭವದ ಸಭಾಗೃಹ. ಎರಡು ಸಾಲುಗಳಲ್ಲಿಯೂ ಸುಖಪೂರ್ಣ ಆಸನಗಳು. ಮೃದು ಕೆಂಪು ತಿವಾಸಿಯ ಮೇಲೆ ಕಾಲಿಡುತ್ತ ಬಂದರು. ತಮಗೆ ನಿರ್ದೇಶಿತವಾಗಿದ್ದ ಕುರ್ಚಿಗಳಲ್ಲಿಯೂ ಕುಳಿತರು. ಉಪಚಾರದ ಮಾತುಗಳೆಲ್ಲ ಮುಗಿದ ಮೇಲೆ ವಿಶ್ವಮಿತ್ರರು ಹೇಳಿದರು; " ಮಹಾರಾಜ ಜನಕ, ನಿನ್ನ ಬಳಿ ಇರುವ ವಿಖ್ಯಾತ ಧನುಸ್ಸನ್ನು ಈ ರಾಮ ಲಕ್ಷ್ಮಣರಿಗೆ ತೋರಿಸು. "
( ಪುತ್ರೌ ದಶರಥಸ್ಯ ಇಮೌ ಕ್ಷತ್ರಿಯೌ ಲೋಕ ವಿಶೃತೌ
ದ್ರಷ್ಟು ರಾಮೌ ಧನುಶ್ರೇಷ್ಠಂ ಯದೇ ತತ್ವೈ ತಿಷ್ಠತಿ )
ಜನಕ ಮಹಾರಾಜರು ತಮ್ಮ ಸೇವಕರಿಗೆ ಆದೇಶಿಸಿದರು ಅದನ್ನು ತರಲು. " ಅದು ಬರುವ ತನಕ ಕಥೆ ಹೇಳುವೆ; ಅದು ನನ್ನ ಬಳಿಗೆ ಹೇಗೆ ಬಂದಿತು ಎಂದು. ಹಿಂದೊಮ್ಮೆ ದಕ್ಷ ಪ್ರಜಾಪತಿಗೆ ಯಙ್ಝ ಮಾಡಬೇಕು ಎನ್ನುವ ತೀವ್ರವಾದ ಇಛ್ಛೆಯಾಯಿತು......."

-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com