'ಅಗ್ನಿ ನುಗ್ಗಿ ಬಂದು ನಾಲ್ವರನ್ನೂ ಸುತ್ತಿ ಸುಟ್ಟುಬಿಟ್ಟಿತು'

ಇದೀಗ ಯಜಮಾನರ ಮಾತು ನಿಜವಾಗಿದೆ. ಬಿಸಿ-ಬಿಸಿಯಾಗೇನು, ಸುಡುತ್ತಿರುವ ಉಗ್ರ ಮಗು ಹುಟ್ಟಿದೆ ನನಗೆ. ಯಜಮಾನರು ಬಂದರು, ಮಗುವನ್ನು ಕಂಡರು, ತಾನು ಎದೆಗೊತ್ತಿಕೊಂಡ ನಿಮಿಷಕ್ಕೇ ಅದರ....
ಪರಶುರಾಮ-ಜಮದಗ್ನಿ
ಪರಶುರಾಮ-ಜಮದಗ್ನಿ
ಅಂದು ಅವರು ಹೇಳಿದ್ದು ಇಂದು ಈಗ ನಿಜವಾಗಿಬಿಟ್ಟಿತು. ಅವರು ಹೇಳಿದ್ದರು, "ನಿನಗೆ ತ್ರಿಮೂರ್ತಿಗಳು ನೆಲೆ ನಿಂತಿರುವ ಅಶ್ವತ್ಥ ವೃಕ್ಷದಿಂದ ಚರು ತಯಾರು ಮಾಡಿದ್ದೆ. ನಿನ್ನ ತಾಯಿಗೆ ಮಹಾ ಬಿಸಿಯ ತೀಕ್ಷ್ಣ ಪಲಾಶದಿಂದ ತಯಾರಿಸಿದ್ದೆ. ಅದರಲ್ಲಿ ಕೇವಲ ಯುದ್ಧ, ಆಡಳಿತ, ಗಡುಸು, ದರ್ಪಗಳ ಐಂದ್ರ ಮಂತ್ರವನ್ನು ನಿಕ್ಷಿಪ್ತ ಮಾಡಿದ್ದೆ. ನಿನಗೆ ದೈವ ಪ್ರಭೆ ಹೆಚ್ಚಾಗಿ, ಸಾತ್ವಿಕ ಸುತ ಹುಟ್ಟಲಿ; ಅವ ಶಾಸ್ತ್ರಾಧ್ಯಕ್ಷನಾಗಲಿ; ವೇದ ವಿಗ್ರಹವಾಗಲಿ; ಕೊನೆಗೆ ಬ್ರಮ್ಹಙ್ಞಾನಿ ಆಗಲಿ ಎಂಬುದು ನನ್ನ ಅಪೇಕ್ಷೆ. ಹಾಗೇ ವೀರ್ಯ ಸಮೃದ್ಧನಾಗಿ, ಕ್ಷಾತ್ರ ಮೂರ್ತಿಯಾಗಿ, ಮಹಾಪುರುಷನಾಗಿ ನಿನ್ನ ತಾಯಿಗೆ ವೀರ-ಶೂರ ಮಗನೊಬ್ಬ ಜನಿಸಲಿ ಎಂಬುದು ನನ್ನ ಅಪೇಕ್ಷೆಯೂ ಆಗಿತ್ತು. ಆದರೆ ಈಗ? ಈಗತಾನೇ ಬ್ರಾಹ್ಮಣಿಯಾಗಿದ್ದ ಋಚೀಕ ಪತ್ನಿಯಲ್ಲಿ ಕ್ಷತ್ರಿಯ ಪಿಂಡ! ಹಾಗೇ ಕ್ಷಾತ್ರ ಕ್ಷೇತ್ರದಲ್ಲಿ ಬ್ರಮ್ಹಬೀಜಾವಾಪನೆ!!"
ಅಷ್ಟು ಹೊತ್ತಿಗೆ ನಾನು ಗಂಡನ ಕಾಲು ಹಿಡಿದು ಪಶ್ಚಾತಾಪದಿಂದ ನರಳುತ್ತಿದ್ದೆ. ಕೊಂಚ ಹೊತ್ತಾದಮೇಲೆ ತಲೆ ಸವರಿ ಹೇಳಿದರು; "ಆಯಿತು ಬಿಡು, ಆಗಿದ್ದು ಆಗಿ ಹೋಯಿತು. ಇತ್ತ ನಿನ್ನ ಮಗ ಪೂರ್ಣ ಬ್ರಾಹ್ಮಣನೂ ಆಗುವುದಿಲ್ಲ, ಅತ್ತ ನಿನ್ನ ತಮ್ಮನಾಗಿ ಹುಟ್ಟುವವನು ಪೂರ್ಣ ಕ್ಷತ್ರಿಯನೂ ಆಗುವುದಿಲ್ಲ. ನನ್ನ ಮಗ ಹುಟ್ಟಾ ಬ್ರಾಹ್ಮಣನಾದರೂ ಅವನೊಬ್ಬ ಅಗ್ನಿ ಗಿರಿ. ಸೋದರಳಿಯ ಕ್ಷಾತ್ರ ಸಂಜಾತನಾದರೂ ಬ್ರಾಹ್ಮಣನಾಗುವ ತಪನೆ."
***************
ಇದೀಗ ಯಜಮಾನರ ಮಾತು ನಿಜವಾಗಿದೆ. ಬಿಸಿ-ಬಿಸಿಯಾಗೇನು, ಸುಡುತ್ತಿರುವ ಉಗ್ರ ಮಗು ಹುಟ್ಟಿದೆ ನನಗೆ. ಯಜಮಾನರು ಬಂದರು, ಮಗುವನ್ನು ಕಂಡರು, ತಾನು ಎದೆಗೊತ್ತಿಕೊಂಡ ನಿಮಿಷಕ್ಕೇ ಅದರ ಸುಡುವಿಕೆಯಿಂದ ಕೆಳಗಿಟ್ಟುಬಿಟ್ಟಿದ್ದೆ! ನನಗೆ ದಿಗ್ಭ್ರಮೆಯಾಗಿಬಿಟ್ಟಿತ್ತು. ಹಾಲೂಡುವುದೆಂತು, ಆ ಮಗುವನ್ನು ಬೆಳೆಸುವುದೆಂತು, ಮುಂದೆ ದೊಡ್ಡವನಾದಾಗ ಅವನ ಹೆಂಡತಿಯ ಗತಿಯೇನು?.... ಏನೇನೋ ಯೋಚನೆಗಳು. ತನ್ನ ಮನಸ್ಸನ್ನು ಓದಿದವರಂತೆ ಹೇಳಿದರು ಯಜಮಾನರು," ಇದರ ಬಿಸಿಯನ್ನು ಅರ್ಧ ಮಾಡುತ್ತೇನೆ. ಉಳಿದ ಅರ್ಧ ಶಾಖ ಮುಂದೆ ಇವನಿಗೆ ಹುಟ್ಟಲಿರುವ ಮಗನಿಗೆ ಹೋಗಿ ಸೇರಲಿ. "ಎಂದು ಕಮಂಡಲುವಿನ ಮಂತ್ರ ಜಲವನ್ನು ಮಗುವಿಗೆ ಸಿಂಪಡಿಸಿದರು. ಕ್ಷಣದಲ್ಲಿ ಮಗುವಿನ ಕೆಂಪು ಗುಲಾಬಿಯಾಯಿತು! ಸುಡುವ ಬಿಸಿ ಹೋಗಿ, ಕಷ್ಟವಾದರೂ ಸಹಿಸಬಲ್ಲ ಶಾಖವಾಯಿತು! ಕಂಗಳ ಕ್ರೌರ್ಯ ಕಡಿಮೆಯಾಯಿತು! ಹಿಡಿದಿದ್ದ ಬಿಗಿ ಮುಷ್ಠಿ ಸಡಿಲವಾಯಿತು!!
****************
ಹೀಗೆ ನನ್ನ ಸೋದರಳಿಯನ ಹುಟ್ಟು. ಅದೊಂದು ದಿನ ಮಿಥಿಲೆಯ ದಾರಿಯಲ್ಲಿ ವಿಶ್ರಮಿಸುತ್ತಿದ್ದಾಗ ಹೇಳಿದ್ದರು ವಿಶ್ವಮಿತ್ರರು. ಕುತೂಹಲದಿಂದ ಶ್ರೀರಾಮರು ಕೇಳಿದರು, "ಮುಂದೆ? ಮುಂದೆ? ಅವರು ಇಡೀ ಜೀವನದಲ್ಲಿ ಹಾಗೇ ಇದ್ದರೆ? ಸಿಡಿ-ಸಿಡಿ ಎನ್ನುತ್ತಲೇ ಬದುಕಿದರೆ? ತಮ್ಮ ಭಾವಂದಿರು ಹೇಳಿದ್ದರಲ್ಲ, ಅರ್ಧ ಕ್ಷಾತ್ರವನ್ನು ಮೊಮ್ಮೊಗನಿಗೆ ರವಾನಿಸುತ್ತೇನೆ ಎಂದು, ಅದು ಹಾಗೇ ಆಯಿತೇ?" 
****************
ಋಚೀಕರು ಮಗನನ್ನು ಅಗ್ನಿ ಎಂದು ಕರೆದರು. ಜಮದಗ್ನಿಯೆಂದೇ ಘೋಷಿಸಿದರು. ಅವನೋ ಯಾರ ಮಾತೂ ಕೇಳದ ಏಕ ಮುಖಿ. ಚರ್ಚೆ, ಚಿಂತನೆ ಇಲ್ಲವೇ ಇಲ್ಲ. ಆದರೆ ಸಮಾಧಾನವಾಗಿದ್ದಾಗ ಯಾರು ಏನು ಕೇಳಿದರೂ ಕೊಡುವ ಧಾರಾಳಿ. " ಅಯ್ಯೋ, ಅವರ ವರವೂ ಬೇಡ, ಶಾಪವೂ ಬೇಡ" ಎಂದು ದೂರ ಉಳಿದವರೇ ಹೆಚ್ಚು. ಮಹಾ ಪ್ರಾಙ್ಞರಾದರೂ, ಮಹಾ ಸಾಧಕರಾದರೂ, ಮಹಾ ತಪಸ್ವಿಗಳಾದರೂ ಸದಾ ಕೋಪಿಷ್ಠ. ಮೂಗಿನ ತುದಿಯಲ್ಲೇ ಕೋಪ. ಯಾರಾದರೂ ಎದುರಾಡಿದರೆ ಅವರನ್ನು ಸುಟ್ಟುಬಿಡುವಷ್ಟು ಸಿಟ್ಟು ಜಮದಗ್ನಿಗಳಿಗೆ. ಅದೆಂತು ಅವರನ್ನು ಅಳಿಯನೆಂದು ಒಪ್ಪಿಕೊಂಡನೋ, ತನ್ನ ಮಗಳು ರೇಣುಕೆಯನ್ನು ಅದೆಂತು ಕೊಟ್ಟು ಮದುವೆ ಮಾಡಿದನೋ, ಪ್ರಸೇನಚಿತ್ ಎಂಬ ರಾಜ?? ಕ್ಷಾತ್ರಕ್ಕೆ ಮತ್ತೆ ಕ್ಷಾತ್ರವೇ ಕ್ಷೇತ್ರವಾಯಿತು. ಹೀಗಾಗಿ ಹುಟ್ಟುವ ಮಗು ಮತ್ತೆ ಕ್ಷಾತ್ರ ತೇಜವೇ ಆಗಬೇಕಲ್ಲ? ಆದರೆ ಆ ಸಿಡಿಲು ಕೊಂಚ ತಡೆದು ಬಂತು. ಅಂದರೆ, ಐದನೆಯ ಮಗನಾಗಿ ಬಂತು.
ರೇಣುಕೆಯ ಪತಿ ಭಕ್ತಿಯೋ, ತಪಶ್ಶಕ್ತಿಯೋ ಎಷ್ಟಿತ್ತೆಂದರೆ ದೂರದ ನದಿಯಿಂದ ಮಡಿಯುಟ್ಟು ನೀರು ತರುತ್ತಿದ್ದಾಕೆ ಆಕೆ. ಆಕೆಯ ಭಕ್ತಿಯ ತೀವ್ರತೆ ಎಂಥದ್ದೆಂದರೆ ಹಸಿ ಮರಳಲ್ಲಿ ಮಡಕೆ ಮಾಡಿ, ನೀರು ತುಂಬಿ, ಹಾವನ್ನು ಸಿಂಬೆ ಮಾಡಿ ತಲೆಗಿಟ್ಟು ಗಗನಮಾರ್ಗದಲ್ಲಿ ತೇಲಿ ಬರುವಷ್ಟು!! ಆದರದೊಂದು ದಿನ... ಚಿತ್ರರಥ ತನ್ನ ಹೆಂಡಿರೊಡನೆ ಬಂದು ಜಲ ಕ್ರೀಡೆಯಾಡುತ್ತಿದ್ದ. ಅವನು ಮೊದಲೇ ಗಂಧರ್ವ, ಸುಂದರ, ಕಾಂತಿ ಪೂರ್ಣ, ಸದೃಢ, ಆಕರ್ಷಕ... ಹೆಂಗೆಳೆಯರೊಡನೆ ಚಲ್ಲಾಟ, ಕಾಮ ಕೂಟ, ಕಾಮ ಕೇಳಿ... ಅವರನ್ನು ನೋಡಿದ್ದು ರೇಣುಕೆಯ ತಪ್ಪಲ್ಲ. ಆದರೆ ದುರ್ಬಲ ಕ್ಷಣವೇ ಅಂಥದ್ದು, ಚಿತ್ರರಥನಿಂದ ಆಕರ್ಷಿತಳಾಗಿಬಿಟ್ಟಳು. ಅದು ಒಂದೇ ಕ್ಷಣ, ಆದರೆ ಅನಾಹುತವಾಗಿಹೋಗಿತ್ತು. ಕೊಡ ಕರಗಿತು; ನೀರು ಇಳಿಯಿತು; ಕೆಳಕ್ಕಿಳಿದಳು; ಹಾವು ಹರಿದುಹೋಯಿತು. ತೊಯ್ದ ಸೀರೆಯೊಂದಿಗೆ ನೆಡೆದುಬಂದಳು ಅಗ್ನಿಗೃಹಕ್ಕೆ. " ನಿಲ್ಲು! ಒಳಗೆ ಬರಬೇಡ. "ಕನಲಿದ ಗಂಡನ ಗರ್ಜನೆ. "ಯಾರಿದ್ದೀರಿ ಮನೆಯಲ್ಲಿ? ಮಕ್ಕಳೇ, ಬೇಗ ಬನ್ನಿ. "ಓಡಿ ಬಂದರು ರುಮಣ್ವಂತ, ಸುಷೇಣ, ವಸು, ಮತ್ತು ವಿಶ್ವಾವಸು. " ಕಡಿಯಿರಿ ನಿಮ್ಮಮ್ಮನ ತಲೆ. " ಮಕ್ಕಳು ನೋಡುತ್ತಾರೆ, ಅಮ್ಮ ಅಪರಾಧಿನಿಯಂತೆ ನಡುಗುತ್ತ ನಿಂತಿದ್ದಾಳೆ. ತಲೆ ಕೆಳಗೆ, ಮೈಯೆಲ್ಲ ಒದ್ದೆ, ಮಕ್ಕಳ ಮುಂದೆ ಗಂಡ ಏನು ಹೇಳುತ್ತಾನೋ, ತನ್ನ ಮರ್ಯಾದೆ ಹೇಗೆ ಹೋಗುತ್ತದೋ, ಹೇಗೆ ಅವರನ್ನು ಎದುರಿಸುವುದೋ ಎಂದು ಒದ್ದಾಡುತ್ತಿದ್ದವಳಿಗೆ, ಗಂಡ ಹೇಳಿದ್ದು ಕೇಳಿ ಸಮಾಧಾನವಾಯಿತು. ಸತ್ತೇ ಹೋಗಿಬಿಟ್ಟರೆ ಅಲ್ಲಿಗೆ ಯಾರಿಗೂ ಏನೂ ಉತ್ತರ ಕೊಡಬೇಕಿಲ್ಲ! 
ಆದರೆ ಹಾಗೇನೂ ಆಗಲೇ ಇಲ್ಲ! ಯಾವ ಮಗ ತಾಯಿಯನ್ನು ಕೊಲ್ಲುತ್ತಾನೆ? ನಾಲ್ಕು ಮಕ್ಕಳೂ ಏನೂ ಹೇಳದೆ ತಲೆ ತಗ್ಗಿಸಿ ನಿಂತದ್ದನ್ನು ಕಂಡು ಜಮದಗ್ನಿಗಳು ಉರಿದು ಬಿದ್ದರು. ಕಣ್ಣು ಬಿಟ್ಟರು. ಅಗ್ನಿ ನುಗ್ಗಿಬಂದು ನಾಲ್ವರನ್ನೂ ಸುತ್ತಿ ಸುಟ್ಟುಬಿಟ್ಟಿತು !! ಬೂದಿಯ ಗುಡ್ಡೆಗಳಾದರು. ರೇಣುಕೆ ಮೂರ್ಛೆ ಬಿದ್ದಳು. ಆದರೂ ಜಮದಗ್ನಿಯ ಹಾಳು ಸಿಟ್ಟು ಕಡಿಮೆಯಾಗಲೇ ಇಲ್ಲ. ಮಕ್ಕಳನ್ನು ಸುಟ್ಟದ್ದಕ್ಕೆ ಏನೂ ಅನ್ನಿಸಲೇ ಇಲ್ಲ. ತನ್ನ ಮಾತು ನಡೆಯಲೇ ಇಲ್ಲ. ಆ ಸೋಲನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ. ಉರಿಯ ಶಿಖರ ಹೆಚ್ಚುತ್ತಲೇ ಹೋಯಿತು. "ಎಲ್ಲಿದ್ದೀಯ ರಾಮ? ಏನು ಮಾಡುತ್ತಿದ್ದೀ, ಬೇಗ ಬಾ! "ಕೂಗಿದರು. ಅದೆಷ್ಟು ದೊಡ್ಡ ದನಿಯಾಗಿತ್ತೆಂದರೆ ಪಕ್ಕದ ಗುಡ್ಡದ ಗವಿಯಲ್ಲಿ ತಪಸ್ಸು ಮಾಡುತ್ತಿದ್ದ ಪರುಶುರಾಮರು ಕೇಳಿ ಓಡಿ ಬಂದರು. ಗುಡಿಸಿಲ ಹೊರಗೆ ಬೆಂಕಿಯಾಗಿ ನಿಂತಿದ್ದಾರೆ ಅಪ್ಪ. ಅಮ್ಮ ಕೆಳಗೆ ಬಿದ್ದಿದ್ದಾರೆ. ಪಕ್ಕದಲ್ಲಿ ನಾಲ್ಕು ಭಸ್ಮ ರಾಶಿಗಳು. " ಪರುಶು ರಾಮ, ನಿನ್ನಣ್ಣಂದಿರಿಗೆ ಹೇಳಿದೆ; ನಿನ್ನಮ್ಮನ ತಲೆ ತರಿಯಲು. ಎಲ್ಲರೂ ಹಿಂಜರಿದರು. ಅವರನ್ನೆಲ್ಲ ಸುಟ್ಟುಬಿಟ್ಟೆ. ನೀನು ನನ್ನ ಪ್ರಿಯ ಪುತ್ರ. ನೀನಾದರೂ ನನ್ನ ಆದೇಶ ಪಾಲನೆ ಮಾಡು. "ಅಪ್ಪನ ಮಾತು ಮುಗಿಯುವ ಮುನ್ನವೇ ಪರುಶುರಾಮರ ಭುಜದ ಕೊಡಲಿ ಗಾಳಿಯಲ್ಲಿ ಹಾರಿ ತಾಯಿಯ ತಲೆ ತರಿಯಿತು! ಅಷ್ಟು ದೂರ ಹೋಗಿ ಬಿತ್ತದು!! ಕೊರಳಿಂದ ರಕ್ತ ಬಸಿಯಿತು!!!"
---೦೦೦---
-ಡಾ. ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com