ಸತ್ಯವ್ರತ ರಾಜನ ಸ್ವರ್ಗಾರೋಹಣಕ್ಕೆ ಅಡ್ಡಿಯಾದ ಶಾಪತ್ರಯ!

ರಾಜ ಸತ್ಯವ್ರತ, ಏಳು. ಗಾಳಿಯಲ್ಲಿ ತೇಲು. ಹೊರಡು, ಸ್ವರ್ಗದಾರಿಯಲ್ಲಿ ಚಲಿಸು. ಅಮರಾವತಿಯ ಮುಖ್ಯ ದ್ವಾರದ ವರೆವಿಗೆ ದಾರಿ ಸೃಷ್ಟಿ ಮಾಡಿದ್ದೇನೆ ನಾನು. ನಡೆ, ಏಕೆ ಇನ್ನೂ ಕುಳಿತಿರುವೆ? ಏಳು. " ವಿಶ್ವಮಿತ್ರರು...
ಯಙ್ಞ
ಯಙ್ಞ
ಕೌಸ್ತುಭರು ಹೇಳಿದರು:- ಈ ಚಂಡಾಲನನ್ನು ಸ್ವರ್ಗಕ್ಕೆ ಕಳಿಸಲು ನೀವೇಕೆ ನಿಮ್ಮ ತಪಃ ಶಕ್ತಿಯನ್ನು ಕಳೆದುಕೊಳ್ಳಬೇಕೋ ನನಗೆ ಗೊತ್ತಾಗುತ್ತಿಲ್ಲ. 
ನಿತ್ಯಾತ್ಮರು ಹೇಳಿದರು:- ವಶಿಷ್ಠರನ್ನು ನೀವು ಆರಾಧಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಮತ್ತೆ ಮತ್ತೆ ಏಕೆ ನೀವು ಅವರಿಗೆ ಅಸಮಾಧಾನವಾಗುವಂತೆ ವರ್ತಿಸುತ್ತಲೇ ಇದ್ದೀರಿ? ಸುಮ್ಮ ಸುಮ್ಮನೆ ವಶಿಷ್ಠರ ವಿರೋಧ ನಿಮಗೇಕೆ? 
ಭೃಗು ಮಹರ್ಷಿಗಳು ದೃಢವಾಗಿ ನುಡಿದರು:- ನೀವು ನಮ್ಮ ಬಂಧುಗಳು. ನಿಮ್ಮದು ಸಾಹಸೀ ಜೀವನ. ಕಷ್ಟಗಳನ್ನೇ ಆಹ್ವಾನಿಸುವಿರಿ. ನಿಮ್ಮ ಆಂತರ್ಯವನ್ನು ನಾನು ಗಮನಿಸುತ್ತಲೇ ಬಂದಿರುವೆ. ನಿಮ್ಮದು ತ್ಯಾಗಬುದ್ಧಿ. ಏನೋ ಒಂದು ಕಾರಣದಿಂದ ನಿಮ್ಮ ತಪಸ್ಸನ್ನೆಲ್ಲ ಯಾರಿಗೋ ಧಾರೆ ಎರೆಯುತ್ತೀರಿ. ಇದೀಗ ಈ ರಾಜನೊಂದು ವಿಭಾವ. ನಿಮ್ಮೀ ಪರೋಪಕಾರಕ್ಕೆ ನನ್ನ ಬೆಂಬಲವಿದೆ. 
ಪ್ರಿಯಾಂಕ ಋಷಿ :- ಸ್ವರ್ಗಕ್ಕೆ ಹೋಗಬೇಕಿದ್ದರೆ ವರುಣ ಪಾಶವನ್ನು ಬಿಡಿಸಬೇಕಲ್ಲವೇ? ಅದಕ್ಕೇನಾದರೂ ಯೋಚಿಸಿದ್ದೀರೋ?
ಮಹಿಮಾನಂದ:- ಚಂಡಾಲರಿಗೆ ಸ್ವರ್ಗ ಪ್ರವೇಶವಿಲ್ಲ. ಇವನ ಚಾಂಡಾಲ್ಯವನ್ನು ಹೇಗೆ ನಿವಾರಿಸುತ್ತೀರಿ ?
.... ಹೀಗೆ ಅನೇಕ ಋಷಿಗಳು ಸ್ವರ್ಗಾರೋಹಣ ಯಙ್ಞದ ಬಗ್ಗೆ ತಮ್ಮ ಸಂದೇಹಗಳನ್ನೋ, ಅಡ್ಡಿಗಳನ್ನೋ, ವಿರೋಧಗಳನ್ನೋ ಮಂಡಿಸಿದರು. ಸಹನೆ ಕಳೆದುಕೊಳ್ಳದ ಮಹರ್ಷಿಗಳು ಎಲ್ಲಕ್ಕೂ ಸಮಾಧಾನ ಕೊಡುತ್ತ ಹೋದರೂ, ಅವರಾರಿಗೂ ಬಗೆ ಹರಿಯದಿದ್ದದ್ದು ಗುರು ಶಾಪ / ಗುರು ಪುತ್ರ ಶಾಪ. " ಇರಲಿ, ಕೊನೆಗೆ ಅದರ ಬಗ್ಗೆ ಯೋಚಿಸೋಣ. ಆ ಸಂದರ್ಭ ಬಂದಾಗ ತೀರ್ಮಾನಿಸೋಣ" ಎಂದು ಸಮಸ್ಯೆಯನ್ನು ಮುಂದೆ ಹಾಕಿಬಿಟ್ಟರು. ಋಷಿ ಸಂಸತ್ತಿನಲ್ಲಿ ಆದ ಪ್ರಮಾದ ಅದು. ಅದೇ ಮುಂದೆ ಮಹಾ ಸಮಸ್ಯೆಯಾಗಬೇಕೇ? ಕಣ್ಣು - ಕಣ್ಣು ಬಿಡುತ್ತಿದ್ದ ಸತ್ಯವ್ರತನಿಗೆ ವಿಶ್ವಮಿತ್ರರು ಸಮಾಧಾನವನ್ನೂ ಮಾಡಿದರು, " ಇರಲಿ, ಗುರು ಶಾಪದಿಂದ ನಿಮಗೆ ಈ ಚಾಂಡಾಲ್ಯ ಬಂದಿದೆ. ಚಿಂತಿಲ್ಲ. ನಾನು ನಿಮ್ಮನ್ನು ಇದೇ ರೂಪದಲ್ಲೇ, ಈ ದೇಹದಲ್ಲೇ ಸ್ವರ್ಗಕ್ಕೇರಿಸುವೆ. " 
                           (ಗುರು ಶಾಪ ಕೃತಂ ರೂಪಂ ಯದಿದಂ ತ್ವೈ ವರ್ತತೇ 
                              ಅನೇನ ಸಹರೂಪೇಣ ಸಶರೀರೋ ಗಮಿಷ್ಯಸಿ)
                                            ************
ನೂರೆಂಟು ದಿನಗಳ ಕಾಮ್ಯ ಯಙ್ಞ ಮುಗಿದಿದೆ . ಸತ್ಯವ್ರತನನ್ನು ಉತ್ತರಕ್ಕೆ ಕೂಡಿಸಿ ಅವಭೃತ ಸ್ನಾನವನ್ನು ಮಾಡಿಸುತ್ತಿದ್ದಾರೆ, ಕಪ್ಪು ದೇಹದ ಸುತ್ತ ಯಾವುದೋ ಕಾಂತಿ ವಲಯ ನಿರ್ಮಾಣವಾಗಿದೆ, ದೇಹ ಹಿಂದೆಂದೂ ಭಾವಿಸದಂತೆ ಹಗುರಾಗಿದೆ; ತೂಕವೇ ಕಾಣುತ್ತಿಲ್ಲ; ಹಕ್ಕಿಯಂತೆ ಭಾಸ; ಭೂಮಿಯ ಗುರುತ್ವಾಕರ್ಷಣ ಶಕ್ತಿಯೇ ಮಾಯವಾದಂತೆ.  ಸುತ್ತಲೂ ವೃತ್ತಾಕಾರದಲ್ಲಿ ನಿಂತ ನಲವತ್ತೆಂಟು ಮುನಿಗಳೂ ಉಚ್ಛ ಸ್ವರದಲ್ಲಿ ಮಂತ್ರಘೋಷ ಮಾಡುತ್ತಿದ್ದಾರೆ . ನೂರೆಂಟು ಕಲಶಗಳ ಮಂತ್ರಜಲ ಸತ್ಯವ್ರತನನ್ನು ಆವರಿಸುತ್ತಿದ್ದಂತೆಯೇ , ಏನೋ ನೂತನ ಶಕ್ತಿ ಆತನಲ್ಲಿ ಕ್ರೋಡೀಕರಿಸುತ್ತಿದೆ. ಆದರೆ.... ಆದರೆ ವಿಶ್ವಮಿತ್ರರು ಪೂರ್ಣಾಹುತಿಯಿಂದಲೂ ಅಸ್ತವ್ಯಸ್ತರಾಗಿದ್ದಾರೆ. ಅಭ್ಯಾಸದಿಂದ ಗಳಿಸಿದ್ದ ಸಹನೆ, ಶಾಂತಿ ಕಡಿಮೆಯಾಗುತ್ತಿದೆ. ಹಿಂದೆಂದೂ ತಾವು ಮಾಡಿದ ಯಾವ ಯಙ್ಞದಲ್ಲೂ ಹೀಗಾಗಿರಲಿಲ್ಲ. ತಾವು ಹವಿರ್ಪ್ರದಾನ ಮಾಡಿದರೆ, ದೇವತೆಗಳೆಲ್ಲ ಸಾಲುಗಟ್ಟಿ ನಿಂತು ಪ್ರತ್ಯಕ್ಷವಾಗಿ ಸ್ವೀಕರಿಸುತ್ತಿದ್ದರು. ಆದರೆ ಈಗ ಎಷ್ಟು ಬಾರಿ ಆಹ್ವಾನಿಸಿದರೂ ಒಬ್ಬ ದೇವತೆಯೂ ಬರಲಿಲ್ಲ. 
                    (ಚಕಾರ ಆವಾಹನಂ ತತ್ರ ಭಾಗಾರ್ಥಂ ಸರ್ವದೇವತಾಃ 
                   ನ ಅಭ್ಯಾಗಂ ತದಾ ಹೂತಾ ಭಾಗಾರ್ಥಂ ಸರ್ವದೇವತಾಃ )
"ರಾಜ ಸತ್ಯವ್ರತ, ಏಳು. ಗಾಳಿಯಲ್ಲಿ ತೇಲು. ಹೊರಡು, ಸ್ವರ್ಗದಾರಿಯಲ್ಲಿ ಚಲಿಸು. ಅಮರಾವತಿಯ ಮುಖ್ಯ ದ್ವಾರದ ವರೆವಿಗೆ ದಾರಿ ಸೃಷ್ಟಿ ಮಾಡಿದ್ದೇನೆ ನಾನು. ನಡೆ, ಏಕೆ ಇನ್ನೂ ಕುಳಿತಿರುವೆ? ಏಳು. " ವಿಶ್ವಮಿತ್ರರು ಹೇಳುತ್ತಿದ್ದರೂ ,ರಾಜ ಯತ್ನಿಸುತ್ತಿದ್ದರೂ ಏಳಲೇ ಆಗುತ್ತಿಲ್ಲ. ತಲೆಯ ಮೇಲೆ ಏನೋ ಕೆಳಗೆ ಚುಚ್ಚಿ ನೂಕಿದಂತೆ, ಭುಜಗಳ ಮೇಲೆ ಕಲ್ಲು ಕಟ್ಟಿದಂತೆ. " ಗುರುಗಳೇ , ನೆಲಕ್ಕೆ ಅಂಟಿಕೊಂಡಂತಾಗುತ್ತಿದೆ. ಯಾರೋ ಏಳಲಿಕ್ಕೆ ಆಗದಂತೆ ಕೆಳಕ್ಕೆ ನೂಕುತ್ತಿರುವಂತಿದೆ. " ನೆಟ್ಟದೃಷ್ಟಿಯಿಂದ ನೋಡುತ್ತಿರುವ ಭೃಗು ಮಹರ್ಷಿಗಳು ಹೇಳಿದರು, " ಯಾರಿಗೂ ಕಾಣಿಸುತ್ತಾ ಇಲ್ಲವ? ರಾಜರ ತಲೆ - ಭುಜಗಳ ಮೇಲೆ ಮೂರು ಶೂಲಗಳು ಇರೋದು? " ಒಳಗಣ್ಣನ್ನು ತೆಗೆದು ನೋಡಿದ ಹರಾನಂದರು ಹೇಳಿದರು, " ಓಹ್ ! ಅವು ಮೂರು ಶಾಪಗಳು, ಅವೇ ಮೂರು ಶಂಕುಗಳು, ತ್ರಿಶಂಕು !
ಸತ್ಯವ್ರತನೀಗ ತ್ರಿಶಂಕುವಾಗಿದ್ದಾನೆ. ಮಾತಾ ಪಿತೃಗಳನ್ನು ನೋಯಿಸಿದ್ದರಿಂದ ಅದು ಶಾಪವಾಗಿ ಸ್ವರ್ಗಾರೋಹಣಕ್ಕೆ ಅಡ್ಡಿಯಾಗಿ ತಲೆಯ ಮೇಲೆ ಕುಳಿತಿದೆ. ಬಲ ಭುಜದ ಮೇಲಿರುವುದು ವಶಿಷ್ಠರದು, ಅವರು ಕೊಟ್ಟ ಶಾಪದ್ದು" . ತಕ್ಷಣ ತ್ರಿಶಂಕು ಹೇಳಿದ, " ಇಲ್ಲ ಇಲ್ಲ , ಗುರುಗಳು ಶಪಿಸಲಿಲ್ಲ. " ಈಗಲ್ಲ ತ್ರಿಶಂಕು, "ಹರಾನಂದರು ಭೂತದಲ್ಲಿ ಕಣ್ಣು ಕೀಲಿಸುತ್ತ ಹೇಳಿದರು, " ಹಿಂದೆ ನೀವು ಆಹಾರ ಸಿಗದಾಗ ವಶಿಷ್ಟರ ಗೋವನ್ನು ಕದ್ದಿರಿ. ಅಂದು ಅವರು ನೊಂದು ಹೇಳಿದ್ದರು, " ಹಸುವನ್ನು ಯಾರೇ ಕದ್ದಿದ್ದರೂ, ಅವರು ಉತ್ತಮ ಪದವಿಗೆ ಏರದೇ ಇರಲಿ. " ಎಡ ಭುಜದ ಮೇಲಿನ ಶಂಕುವಿನ ಕಾರಣವನ್ನು ವಿಶ್ವಮಿತ್ರರೇ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com