ತ್ರಿಶಂಕು ಸ್ವರ್ಗ: ಸ್ವರ್ಗಕ್ಕೆ ಸರಿಸಮನಾದ ವಿಶ್ವಮಿತ್ರ ಸೃಷ್ಟಿ!

ಬ್ರಹ್ಮಸೃಷ್ಟಿಗೆ ಬದಲಾಗಿ ವಿಶ್ವಮಿತ್ರ ಸೃಷ್ಟಿಯಲ್ಲಿ ಎಲ್ಲವೂ ಮೂಡುತ್ತದೆ. ಅಕ್ಕಿ ಬದಲು ನವಣೆ, ಹಸುವಿನ ಬದಲು ಎಮ್ಮೆ, ಜೋಳದ ಬದಲು ರಾಗಿ, ತಿಲದ ತೈಲದ ಬದಲು ಕೊಬ್ಬರಿ, ಕಡಲೆ, ಸೂರ್ಯಕಾಂತಿ, ಸಾಸಿವೆಗಳಿಂದ
ಸ್ವರ್ಗಕ್ಕೆ ಸರಿಸಮನಾದ ವಿಶ್ವಮಿತ್ರ ಸೃಷ್ಟಿ!
ಸ್ವರ್ಗಕ್ಕೆ ಸರಿಸಮನಾದ ವಿಶ್ವಮಿತ್ರ ಸೃಷ್ಟಿ!
ತಿಷ್ಠ ತಿಷ್ಠ! ಎಲ್ಲಿ ಹೋದಾತು ಹುಟ್ಟು ಗುಣ; ಕ್ಷಾತ್ರ ಗುಣ? ವಿಶ್ವಮಿತ್ರರೀಗ ಉರಿಯುತ್ತಿರುವ ಕೊಳ್ಳಿ. ಅವರು ಕಷ್ಟ ಪಟ್ಟು ಮೈಗೂಡಿಸಿದ್ದ ಸಾತ್ವಿಕತೆಯೆಲ್ಲ ಸೋರಿಹೋಯಿತು. ಅದಕ್ಕೇ ಅವರಿಗೆ ಇನ್ನೂ ಬ್ರಹ್ಮರ್ಷಿತ್ವ ಪ್ರಾಪ್ತವಾಗಿಲ್ಲ. " ನಿಲ್ಲು ನಿಲ್ಲು ! ಕೆಳಗೆ ದಬ್ಬಿದರೋ ನಿನ್ನನ್ನು, ನನ್ನ ಮಾತನ್ನು ಪುರಸ್ಕರಿಸಲಿಲ್ಲವೋ? ಎಷ್ಟು ಸೊಕ್ಕು ದೇವೇಂದ್ರನಿಗೆ!"
ತ್ರಿಶಂಕುವಿಗೆ ಏನಾಗುತ್ತಿದೆಯೆಂದು ತಿಳಿಯಲೇ ಆಗುತ್ತಿಲ್ಲ. ಕೇವಲ ಅಚ್ಚರಿ. ಸೆಳೆತಕ್ಕೆ ಸಿಕ್ಕಂತೆ ಜಾರಿ ಜಾರಿ ಬೀಳುತ್ತಿದ್ದ ತಾನು ಇದ್ದಕ್ಕಿದ್ದಂತೆಯೇ ನಿಂತ; ತಲೆ ಕೆಳಗಾಗಿದ್ದವನು ಸರಿಯಾದ; ಪಕ್ಕದಲ್ಲಿ ಒಂದು ಸಿಂಹಾಸನ; ಅದರಲ್ಲಿ ಅವ ಕುಳಿತ; ನಿರಾಧಾರದಲ್ಲಿ ಹೊಳೆವ ಹೊನ್ನಿನ ಆಸನ; ಕೆಳಗೆ ನೆಲದಂತೆ; ಸುತ್ತಲೂ ಭವನ ಏಳುತ್ತಿದೆ; ಅರೆ ! ಅಪ್ಸರೆಯರೋ, ಸಿಬ್ಬಂದಿಯೋ, ತೇಜಸ್ವಿ ದೀಪ್ತ ದೇವತೆಗಳೋ? ಏನಿದು, ತನ್ನ ಉಡುಪೇ ಬದಲಾಗಿದೆ; ಎಲ್ಲ ರೇಶಿಮೆ; ನವರತ್ನಗಳ ಆಭರಣಗಳು; ಒರಟು ಕೂದಲ ಬದಲು ಮೃದುವಾದ ಕೇಶ ಸಂಪತ್ತು; ಕೈಕಾಲುಗಳ ಕಪ್ಪು ಕಳೆದು ಗೌರವರ್ಣ; ಬಹುಶಃ ಮುಖವೂ ಮೊದಲಿನಂತೆ ಸುವರ್ಣಛಾಯೆ ಇರಬಹುದೋ? ಮನಸ್ಸಿನಲ್ಲಿ ಆ ಆಲೋಚನೆ ಬರುತ್ತಿದ್ದಂತೆಯೇ ದೇವನೊಬ್ಬ ದರ್ಪಣವನ್ನು ತಂದ. ಓಹ್ ! ಎಷ್ಟು ಕಾಲವಾಗಿತ್ತು ತನ್ನ ಪೂರ್ವ ರೂಪ ನೋಡಿ! ಹೇಗಾಯಿತು ಇದು? ಕೆಲ ದೇವತೆಗಳು ದೊಡ್ಡ ತಟ್ಟೆಯಲ್ಲಿ ವಜ್ರಾಯುಧದಂತೇನೋ; ( ಹಾಗೇ ಕಾಣಿಸುತ್ತಿದೆ ) ಅದನ್ನು ತಂದು ಇತ್ತಿದ್ದಾರೆ. ಅಪ್ರಯತ್ನವಾಗಿ ಕೈ ಮುಂದೆ ಚಾಚಿ ಅದನ್ನು ಹಿಡಿಯಿತು. ಹೌದು , ಇದೆಲ್ಲ ಹೇಗಾಗುತ್ತಿದೆ ? ಇದೆಲ್ಲ ವಿಶ್ವಮಿತ್ರರ ಮಹಿಮೆಯೇ ? ಓ, ಅವರ ಮಂತ್ರಶಕ್ತಿಯೇ ಇರಬೇಕು. ನೋಡಬೇಕಲ್ಲ ಅವರನ್ನು? ಹಾಗೆಂದುಕೊಂಡದ್ದೇ ತಡ, ತನ್ನ ಮುಂದಿನ ನೆಲದಲ್ಲಿ ವರ್ತುಲ ಒಂದು ಏರ್ಪಟ್ಟು ಅದರಲ್ಲಿ ಚಿತ್ರ ಮೂಡತೊಡಗಿತು.  
                                           ***********
ಕೆಂಪು ವಿಗ್ರಹದ ವಿಶ್ವಮಿತ್ರರು ಪಟಪಟನೆ ಮಂತ್ರ ಹೇಳುತ್ತಿದ್ದಾರೆ. ಅವರ ಮುಂದೆ ಅಣುಗಳು ಸೇರಿ ಸೇರಿ ಒಂದು ಆಕಾರ. ಕೊನೆಗದು ಪುರುಷಮೂರ್ತಿ. ಅದಕ್ಕೆ ಪ್ರಾಣಧಾರೆ! ಅದೀಗ ದೇವತೆಯಂತೆ ಜಾಜ್ವಲ್ಯ. ವಿಶ್ವಮಿತ್ರರು ಬಾಯಿಬಿಟ್ಟರು , " ನಾನು ನಿರ್ಮಿಸಿರುವ ನೂತನ ಸ್ವರ್ಗದಲ್ಲಿ ನೀನೀಗ ಈಶಾನ್ಯ ದಿಕ್ಕಿನ ದೇವ. ಹೋಗು, ಅಲ್ಲಿರುವ ದೇವೇಂದ್ರ ತ್ರಿಶಂಕುವನ್ನು ಸೇವಿಸು. " ಆ ಪ್ರಕಾಶ ಮೂರ್ತಿ ಮೇಲೇಳುತ್ತಿದೆ. ಮತ್ತೆ ಮಂತ್ರಜಲವನ್ನು ಧರಿಸಿ ಸೃಷ್ಟಿಮಂತ್ರವನ್ನು ಉಚ್ಛರಿಸುತ್ತಿದ್ದಾರೆ.
                                          ***********
ಬ್ರಹ್ಮನ ಮುಂದೆ ಕಳೆಗುಂದಿದ ದೇವೇಂದ್ರ. ನಗುತ್ತ ನಾಲ್ಮೊಗ ಕೇಳಿದ, " ಏನು ಇಂದ್ರ, ನಿನ್ನದು ಬಗೆಹರಿಯದ ಸಮಸ್ಯೆ. ಈಗ ಏನಾಯಿತು? ಯಾವ ದೈತ್ಯ ಯುದ್ಧಕ್ಕೆ ಬಂದ? ಯಾರ ತಪಸ್ಸು ನಿನಗೆ ಬಿಸಿಯಾಗಿದೆ? ಯಾವ ಪತಿವ್ರತೆ ಶಾಪ ಕೊಟ್ಟಳು? " ನಾಚಿ ನೀರಾದ ಇಂದ್ರ, ತಲೆತಗ್ಗಿಸಿ ತೊದಲುತ್ತ ನುಡಿದ: " ಸಷ್ಟಿಕರ್ತ, ಅವಾವುವೂ ಅಲ್ಲ, ಆದರೆ ನನ್ನ ಹುದ್ದೆಗೆ, ನನ್ನ ಸ್ವಾಮಿತ್ವಕ್ಕೆ, ನನ್ನ ಮಹೇಂದ್ರ ಪದವಿಗೇ ಈಗ ಸಂಚಕಾರ ಬಂದಂತಿದೆ. ನನ್ನ ಏಕಮೇವಾದ್ವಿತೀಯತ್ವಕ್ಕೇ ಕುಂದು ಬಂದಿದೆ. ಚಂಡಾಲ ತ್ರಿಶಂಕುವನ್ನು ನಾನು ಸ್ವರ್ಗಕ್ಕೆ ಸೇರಿಸಿಕೊಳ್ಳಲಿಲ್ಲ. ತಮಗೆ ಅವಮಾನವಾಯಿತೆಂದು ವಿಶ್ವಮಿತ್ರರು ಉರಿದುಬಿದ್ದು, ಮತ್ತೊಬ್ಬ ಇಂದ್ರನನ್ನೇ ಸೃಷ್ಟಿಸುತ್ತೇನೆ, ಅಥವಾ ಜಗಕ್ಕೆ ಮಹೇಂದ್ರನೇ ಇಲ್ಲದಂತೆ ಮಾಡುತ್ತೇನೆ!  
                  (ಅನ್ಯಂ ಇಂದ್ರಂ ಕರಿಷ್ಯಾಮಿ ಲೋಕೋವಾ ಅಸ್ಯಾದ್ ಅನಿಂದ್ರಕಃ )
 ಎಂದು ಗರ್ಜಿಸಿ ಇದೀಗ ನೂತನ ಸ್ವರ್ಗವನ್ನೇ ಸೃಷ್ಟಿಸುತ್ತಿದ್ದಾರೆ. ದಕ್ಷಿಣ ದಿಕ್ಕಿನಲ್ಲಿ ಅದೀಗ ರೂಪುಗೊಳ್ಳುತ್ತಿದೆ. ಆ ಸ್ವರ್ಗದ ಸುತ್ತಲೂ ನಕ್ಷತ್ರ ಪಂಕ್ತಿಯನ್ನು ಬೇರೇ ಹುಟ್ಟಿಸುತ್ತಿದ್ದಾರೆ.
                  (ದಕ್ಷಿಣಾಂ ದಿಶಮಾಸ್ಥಾಯ ಮುನಿಮಧ್ಯೇ ಮಹಾ ತಪಾಃ 
           ಸೃಷ್ಟ್ವಾಂ ನಕ್ಷತ್ರ ವಂಶಂಚ ಕ್ರೋಧೇನ ಕಲುಷೀ ಕೃತಃ)
ಇದು ಹೀಗೇ ಮುಂದುವರಿದರೆ ಜಗಕ್ಕೆ ಒಬ್ಬ ಇಂದ್ರನ ಬದಲು ಇಬ್ಬರಾಗುತ್ತಾರೆ. ಹಾಗೇ ಅವರು ಅಷ್ಟ ದಿಕ್ಪತಿಗಳನ್ನೂ ನಿರ್ಮಿಸುತ್ತಾರೆ. ಅವರ ಲೆಕ್ಕಾಚಾರದಲ್ಲಿ ಬ್ರಹ್ಮಸೃಷ್ಟಿಗೆ ಬದಲಾಗಿ ವಿಶ್ವಮಿತ್ರ ಸೃಷ್ಟಿಯಲ್ಲಿ ಎಲ್ಲವೂ ಮೂಡುತ್ತದೆ. ಅಕ್ಕಿ ಬದಲು ನವಣೆ, ಹಸುವಿನ ಬದಲು ಎಮ್ಮೆ, ಜೋಳದ ಬದಲು ರಾಗಿ, ತಿಲದ ತೈಲದ ಬದಲು ಕೊಬ್ಬರಿ, ಕಡಲೆ, ಸೂರ್ಯಕಾಂತಿ, ಸಾಸಿವೆಗಳಿಂದ ಎಣ್ಣೆ, ಕುದುರೆಯ ಬದಲು ಕತ್ತೆ, ಸಿಂಹಕ್ಕೆ ಸರಿಯಾದ ಹುಲಿ, ಹೀಗೆ ನಿಮಗೆ ಪ್ರತಿಸೃಷ್ಟಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಜನರ ಮನಸ್ಸನ್ನು ಬದಲಿಸಿ, ಪಾರ್ವತಿಯ ಬದಲು ಕಾಳಿ, ಶಿವನ ಬದಲು ವೀರಭದ್ರ, ಸಾತ್ವಿಕ ವಿಷ್ಣುವಿನ ಬದಲು ಅವನ ಮಗ ಮನ್ಮಥ.... ಇಂತಹವರು ಪೂಜ್ಯರಾಗಬೇಕೆಂದು ನಿಶ್ಚಯಿಸಿದ್ದಾರೆ. ಮಹಾಸ್ವಾಮಿ, ಅವರೆಂದುಕೊಂಡದ್ದೆಲ್ಲ ನಡೆದುಬಿಟ್ಟರೆ ನನ್ನ ಗತಿಯೇನು ? ಇಬ್ಬರು ಇಂದ್ರರಾಗುವುದು ಹೇಗೆ ಸರಿಯಾದಾತು ? " ತುಂಬ ನೊಂದು ನುಡಿದ ಇಂದ್ರ ಖಿನ್ನನಾಗಿ.
                                      *************
ತಾನೀಗ ಸೃಷ್ಟಿಸಿರುವ ಕತ್ತೆ ಕಿರುಬವನ್ನು ನೋಡಲು ಕಣ್ಣು ತೆರೆದರೆ ತನ್ನ ಮುಂದೆ ಗಗನದಲ್ಲಿ ಭಾರೀ ಕಮಲದ ಮಧ್ಯೆ ವಿರಿಂಚಿ ! ದಡಬಡಿಸಿ ಎದ್ದು ಸಷ್ಟಿಕರ್ತನಿಗೆ ಅಡ್ಡಬಿದ್ದ ವಿಶ್ವಮಿತ್ರ. " ಏನಿದು ಹುಚ್ಚು ನಿನಗೆ ವಿಶ್ವಮಿತ್ರ? ನನ್ನ ಸೃಷ್ಟಿಗೆ ಪ್ರತಿಯಾಗಿ ಹೀಗೆ ಮಾಡುತ್ತಿರುವೆಯ? ನೀನೇನು ಸೃಷ್ಟಿಕರ್ತನಾಗಿ ನನಗೇ ಪ್ರತಿಸ್ಪರ್ಧಿಯಾಗುವೆಯೋ? ಇಷ್ಟು ಹುಟ್ಟಿಸಿದ್ದು ಸಾಕು, ನಿಲ್ಲಿಸು ನಿನ್ನ ಪ್ರಯತ್ನವನ್ನು. "ನುಡಿದ ವಿಶ್ವಮಿತ್ರ, " ಛೆ ಛೆ ! ಹಾಗಲ್ಲ ದೇವ, ನಾನು ತ್ರಿಶಂಕುವನ್ನು ಸಶರೀರವಾಗಿ ಸ್ವರ್ಗಕ್ಕೆ ಕಳಿಸುವೆ ಎಂದು ಮಾತು ಕೊಟ್ಟೆ. ಹೇಗೆ ನನ್ನ ಮಾತನ್ನು ನಾನು ಕದಿಯಲಿ ? ಸಾಧ್ಯವಿಲ್ಲ . ಅದಕ್ಕೇ ಅವನಿರುವಲ್ಲಿಯೇ ಸ್ವರ್ಗ ನಿರ್ಮಿಸುತ್ತಿದ್ದೇನೆ . "
                    (ಸಶರೀರಸ್ತು ಭದ್ರಂ ವಸ್ತ್ರಿಶಂಕೋಃ ಅಸ್ಯ ಭೂಪತೇಃ
                    ಆರೋಹಣಂ ಪ್ರತಿಙ್ಞಾಯ ನ ಅನೃತಂ ಕರ್ಮೋತ್ಸಹೇ )
"ಆಯಿತಾಯಿತು, ಇಂದ್ರನಿಗೆ ಅವನ ಗುರುಭಕ್ತಿ. ಸ್ವರ್ಗಪ್ರವೇಶಕ್ಕೂ ಒಂದು ನಿಯಮವಿಲ್ಲವೇ? ದೇವತೆಯೆಂದರೆ ಶುದ್ಧಿ ಬೇಡವೇ? ಆಯಿತು, ಇಷ್ಟಾಯಿತಲ್ಲ, ಅದು ಸಾಕು. ನೀನು ಸೃಷ್ಟಿಸಿರುವುದು ಸತ್ಯವಾಗಿರುತ್ತದೆ; ನಿಲ್ಲುತ್ತದೆ. ತ್ರಿಶಂಕು ಸ್ವರ್ಗವೆಂದೇ ಪ್ರಖ್ಯಾತವಾಗಲಿ. ಭೂಮಿಯಲ್ಲಿ ನೀನೀಗ ಸೃಷ್ಟಿಸಿರುವ ವಿಶ್ವಮಿತ್ರ ಸೃಷ್ಟಿಯ ಕೆಲ ಮಾದರಿಗಳೂ ಹಾಗೇ ಉಳಿಯಲಿ. ಇನ್ನು ಹೆಚ್ಚು ಬೇಡ. "" ಆಯಿತು ಮಹಾಸ್ವಾಮಿ" , ಪಟ್ಟು ಬಿಡದ ವಿಶ್ವಮಿತ್ರರು ಬ್ರಹ್ಮನ ಸುತ್ತ ಇದ್ದ ದೇವತೆಗಳ ಕಡೆ ನೋಡುತ್ತ ಸಂದೇಹದಿಂದ ಹೇಳಿದರು . " ಅವರೇನೆನ್ನುತ್ತಾರೋ " ಎಂದು. (ಮುಂದುವರೆಯುತ್ತದೆ...) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com