ಇಂದ್ರನ ಸಭೆಯಲ್ಲಿ ವಸಿಷ್ಠರ ಹೇಳಿಕೆಗೆ ವಿಶ್ವಮಿತ್ರ ವಿರೋಧ ?

ಭೋಗಿ ಇಂದ್ರನ ಸಭೆ. ಅವನಿಗೆ ಇದ್ದಕ್ಕಿದ್ದಂತೆಯೇ ಸತ್ಯ ಶೀಲದ ಬಗ್ಗೆ ಅರಿಯುವ ಆತುರ ! ಗ್ರಹ ಮಧ್ಯದ ಸೂರ್ಯ ಚಂದ್ರರಂತೆ; ನದಿ ಮಧ್ಯದ ಗಂಗೆ - ತುಂಗೆಗಳಂತೆ, ದೇಹದ ಅಂಗೋಪಾಂಗಗಳ ನಡುವೆ ಕಣ್ಗಳೆರಡಂತೆ ಇರುವ ವಶಿಷ್ಠ - ವಿಶ್ವಮಿತ್ರರನ್ನು ಗಮನಿಸಿ, ವಶಿಷ್ಠರಲ್ಲಿ ದೃಷ್ಟಿಯಿಟ್ಟು ಕೇಳಿದ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ಭೋಗಿ ಇಂದ್ರನ ಸಭೆ. ಅವನಿಗೆ ಇದ್ದಕ್ಕಿದ್ದಂತೆಯೇ ಸತ್ಯ ಶೀಲದ ಬಗ್ಗೆ ಅರಿಯುವ ಆತುರ ! ಗ್ರಹ ಮಧ್ಯದ ಸೂರ್ಯ ಚಂದ್ರರಂತೆ; ನದಿ ಮಧ್ಯದ ಗಂಗೆ - ತುಂಗೆಗಳಂತೆ, ದೇಹದ ಅಂಗೋಪಾಂಗಗಳ ನಡುವೆ ಕಣ್ಗಳೆರಡಂತೆ ಇರುವ ವಶಿಷ್ಠ - ವಿಶ್ವಮಿತ್ರರನ್ನು ಗಮನಿಸಿ, ವಶಿಷ್ಠರಲ್ಲಿ ದೃಷ್ಟಿಯಿಟ್ಟು ಕೇಳಿದ.
(ಒಡಲನಾವರಿಸಿದ ಅಂಗ ಉಪಾಂಗ ಸಂಕುಲದ ನಡುವೆ ನಯನ ದ್ವಯಂಗಳು;  
 ಸಲೆ ನವಗ್ರಹದ ನಡುವೆ ಚಂದ್ರಾದಿತ್ಯರ್; ಉರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ ನಡುವೆ ಸುರುಚಿರ ಗಂಗೆ ತುಂಗಭದ್ರೆಗಳ ಒಪ್ಪ ವಡೆದು, ಮಹಿಮೆಯೊಳೆಸೆವ ತೆರದಿ,  ಸುರಪನ ಸಭೆಯನು ಎಡೆಗೊಂಡು ಮುನಿಕುಲದ ನಡುವೆ ಇರ್ದರು ಅಧಿಕ ವಿಶ್ವಾಮಿತ್ರ ವಾಸಿಷ್ಠರು.
"ವಸಿಷ್ಠರೇ, ನೀವೇ ಹೇಳಿ, ಇಕ್ಷ್ವಾಕು ವಂಶಾಧಪರಿಗೆಲ್ಲ ನೀವೇ ಕುಲಪುರೋಹಿತರು. ಎಲ್ಲರನ್ನೂ ಬಲ್ಲವರು ನೀವು. ಯೋಚಿಸಿ, ಎಲ್ಲ ವಂಶದರಸರಿಗಿನ್ನ ಇಕ್ಷ್ವಾಕು ವಂಶವೇ ಶ್ರೇಷ್ಠ, ಶುದ್ಧ ಎಂಬುದು ತಮಗೆ ವೇದ್ಯ. ಹೇಳಿ, ಈ ವಂಶದಲ್ಲಿ ತ್ರಿಕರಣ ಶುದ್ಧ ಸತ್ಯಶೀಲನಾರು?"
(ಮನ ವಚನ ಕಾಯದೊಳಗೊಮ್ಮೆಯುಂ ಹುಸಿ ಹೊದ್ದದಂತೆ ನಡೆವ ಕಲಿಗಳಾರಯ್ಯ?)
"ಯಾವ ಹೆಸರು ಹೇಳಲಿ?" ವಸಿಷ್ಠರು ಯಾರು ಯಾರನ್ನೋ ನೆನಪಿಸಿಕೊಳ್ಳುತ್ತಿದ್ದಾರೆ. ಸೂರ್ಯವಂಶದವರೆಲ್ಲರೂ ದಿವ್ಯ ತೇಜಗಳೇ. ಒಬ್ಬೊಬ್ಬರೂ ಒಂದೊಂದು ಕಾರಣದಿಂದ ಪ್ರಸಿದ್ಧರೇ. ಶೌರ್ಯವೋ, ಶಾಂತಿಯೋ, ನ್ಯಾಯವೋ, ದಾನವೋ, ಸಹಾಯವೋ.... ಹೀಗೆ ಯಾವುದೋ ಒಂದು ಗುಣದಿಂದ ಅವರದೆಲ್ಲ ಚಂದ್ರ ಕಾಂತಿಯೇ. ಆದರೆ ಸತ್ಯದ ನಿಕಷದಲ್ಲಿ ಅವರೆಲ್ಲ ಅಪರಂಜಿಯಾಗುತ್ತಿಲ್ಲವಲ್ಲ... ? ಚಿಂತಿಸುತ್ತಲೇ, ಇದ್ದಿದ್ದರಲ್ಲಿ ಒಂದು ಹೆಸರು ಉತ್ತಮ ಎಂದಿತು ಮನಸ್ಸು. " ಹಿಂದಿನವರಿಗೆ ಹೋಲಿಸಿದರೆ ಹರಿಶ್ಚಂದ್ರನೇ ಉತ್ತಮವೆಂದಿತು ಬುದ್ಧಿ. "ಆಯ್ತು ಮಹೇಂದ್ರ, ಎಷ್ಟೆಲ್ಲ ತಾರೆಗಳಿಲ್ಲ! ಆದರೆ ಧ್ರುವ ನಕ್ಷತ್ರಕ್ಕೆ ಸಾಟಿಯಾವುದು? ಹರಳುಗಳಲ್ಲಿ ವಜ್ರಕ್ಕೆ ಯಾವುದು ದೊರೆ? ಗಂಗೆಗೆ ಸಮಾನ ಸಲಿಲವಾವುದು? ಎಲ್ಲರೂ ತನ್ನನ್ನೇ ನೋಡುತ್ತಿರುವುದನ್ನು ಗಮನಿಸುತ್ತ, ತಾನಾರ ಹೆಸರನ್ನು ಹೇಳುವೆನೆಂದು ಕಾಯುತ್ತಿರುವರೆಂಬುದನ್ನೂ ಅರಿಯುತ್ತ, ಗುರು ವಸಿಷ್ಠರು ನುಡಿದರು; " ಸೂರ್ಯವಂಶದ ರಾಜರ ಪಟ್ಟಿಯೇ ಒಂದು ಪ್ರಕಾಶ ಪುಂಜ. ಎಲ್ಲರೂ ಸನಾಮರೇ, ಸೂರ್ಯಪ್ರಕಾಶರೇ.

ಆದರೆ ಈ ಪಟ್ಟಿಯಲ್ಲಿ ಮಿನುಗುವ ಸ್ಥಿರ ಜ್ಯೋತಿಯೆಂದರೆ ಅದು ಹರಿಶ್ಚಂದ್ರ. ಹರಿಯಂತೆ ತೀಕ್ಷ್ಣ ಪ್ರಕಾಶ; ಚಂದ್ರನಂತೆ ಶೀತಲ ಕಾಂತಿ. ಒಂದಕ್ಕೊಂದು ಸೇರಿ ಹಿತ - ಮಿತ ಮಾಗಿಯ ಬಿಸುಪಿನಂತೆ ಜನಕ್ಕೆ ಪ್ರಿಯ-ಮುನಿಗಳಿಗೆ ಮುದ; ನ್ಯಾಯಕ್ಕೆ ನೆಲೆ-ಸತ್ಯಕ್ಕೆ ಬೆಲೆ. ಹಿಂದಿನೆಲ್ಲ ರಾಜರನ್ನೂ ಹಿಂದಿಕ್ಕಿ ಅವರ ವಂಶಕ್ಕೇ ಕೀರ್ತಿಪುರುಷನಂತೆ ಇದ್ದಾನೆ ಅಯೋಧ್ಯಾಧಿಪತಿ ಹರಿಶ್ಚಂದ್ರ. ಅವನ ಧವಳ ಸತ್ಯ ಸ್ಥಿರತೆಯನ್ನು ಬಣ್ಣಿಸಲು ನನಗೆ ಮಾತುಗಳೇ ಇಲ್ಲ. ಒಟ್ಟಿನಲ್ಲಿ ಸತ್ಯವೆಂದರೆ ಅವನು, ಅವನೆಂದರೆ ಸತ್ಯ. ಬಿಟ್ಟ ಬಾಣ, ಕೊಟ್ಟ ಮಾತು, ಎರಡಕ್ಕೂ ಚ್ಯುತಿಯಿಲ್ಲ."
   (ಹಿಂದಣ ಅರಸುಗಳನು ಉದ್ಧರಿಸಲೆಂದು ಅವತರಿಸಿದ ವಸುಧಾಧಿಪತಿ ಹರಿಶ್ಚಂದ್ರ. 
                   ಆತನ ಸತ್ಯದ  ಎಸಕಮಂ ಪೊಗಳಲು ಎನ್ನಳವೇ?)
ಎಲ್ಲ ಕಡೆಯಿಂದಲೂ ಕರತಾಡನ. ವಸಿಷ್ಠರ ಸೂಚನೆಯನ್ನು ಎಲ್ಲರೂ ಅನುಮೋದಿಸಿದರು. ಎಲ್ಲರೂ ಹರಿಶ್ಚಂದ್ರನನ್ನು ಬಲ್ಲವರೇ; ಎಲ್ಲರೂ ಹರಿಶ್ಚಂದ್ರನಿಂದ ಸಮ್ಮಾನ್ಯರೇ; ಎಲ್ಲರೂ ಅವನ ಹಲವಾರು ಯಙ್ಞಗಳಲ್ಲಿ ಭಾಗವಹಿಸಿದವರೇ. ಇಂದ್ರನಿಗೂ ಹರಿಶ್ಚಂದ್ರನ ಬಗ್ಗೆ ಯಾವುದೇ ಶಂಕೆ ಹುಟ್ಟಲಿಲ್ಲ. ಯಾವ ಗರ್ಭದಲ್ಲಿ ಯಾವ ರತ್ನ? ಎಂತಹ ಅಪ್ಪ, ಎಂತಹ ಮಗ! ತಾನೇ ತಿರಸ್ಕರಿಸಿದ ಅಪ್ಪ, ಈಗ ತಾನೇ ಪುರಸ್ಕರಿಸಲಿರುವ ಮಗ. ಯೋಚಿಸುತ್ತಿದ್ದ ಇಂದ್ರನಿಗೆ, ಮುನಿ ಮಧ್ಯದಲ್ಲಿ ಏನೋ ಚಡಪಡಿಕೆ. ವಿಶ್ವಮಿತ್ರರ ಮುಖದಲ್ಲಿ ಏನೋ ಅತೃಪ್ತಿ... ಏನೋ ಅನಿಷ್ಟ ಅವನಿಗೆ ಗೋಚರಿಸುತ್ತಿದೆ. ವಿರೋಧ ಹೆಪ್ಪುಗಟ್ಟುತ್ತಿದೆ. ಅಸಮಾಧಾನ ಹೊಗೆಯಾಡುತ್ತಿದೆ, ಯಾವಾಗ ಕಿಚ್ಚು ಕಾಣುವುದೋ?  
ವಿಶ್ವಮಿತ್ರರೂ ಯೋಚಿಸುತ್ತಿದ್ದಾರೆ, " ನಾನು ಇವನಪ್ಪನನ್ನು ಸ್ವರ್ಗಕ್ಕೆ ಕಳಿಸುವೆ ಎಂದಾಗ ಇದೇ ವಸಿಷ್ಠರು ತಾನೆ ಅಡ್ಡಗಾಲಿಟ್ಟದ್ದು! ಅವರ ಮಕ್ಕಳ ಶಾಪದಿಂದ ತಾನೇ ಅವನು ಚಂಡಾಲನಾದದ್ದು? ಇದೇ ಇಂದ್ರ ತಾನೇ ತಾನು ಸಿಫಾರಸು ಮಾಡಿದ್ದ ತ್ರಿಶಂಕುವನ್ನು ಸ್ವರ್ಗದಿಂದ ಹೊರದಬ್ಬಿದ್ದು? ಹಾಗೆ ನೋಡಿದರೆ ತನಗೇನೂ ಹರಿಶ್ಚಂದ್ರನ ಬಗ್ಗೆ ವಿರೋಧವಿಲ್ಲ. ಬಹುಶಃ ತನ್ನನ್ನೇ ಮೊದಲು ಕೇಳಿದ್ದರೆ ತಾನೇ ಅವನ ಹೆಸರನ್ನು ಸೂಚಿಸುತ್ತಿದ್ದೆನೇನೊ! ಈ ವಸಿಷ್ಠರಿದ್ದಾರಲ್ಲ, ಇವರು ಕಾಲ ನೋಡಿ ಕೈಕೊಡುತ್ತಾರೆ. ನನಗವರು ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ನನ್ನ ಪ್ರಗತಿಗೆ ಅವರು ಸಾಕಷ್ಟು ಅಡ್ಡಿಯಾಗಿದ್ದಾರೆ. ಇದೀಗ ನಾನು ಅವರು ಹೇಳಿದ್ದನ್ನು ವಿರೋಧಿಸಲೇ ಬೇಕು. ಅಷ್ಟೇ ಅಲ್ಲ, ಈ ಜಗತ್ತಿನಲ್ಲಿ ಎಲ್ಲರೂ ಸೋಮಾರಿಗಳೇ; ತಪಸ್ಸೇ ಮಾಡುತ್ತಿಲ್ಲ; ಹಾಯಾಗಿದ್ದಾರೆ. ಹುಟ್ಟುತ್ತಾರೆ, ಬೆಳೆಯುತ್ತಾರೆ, ಸಾಯುತ್ತಾರೆ. ಸಾಧನೆ, ಪ್ರಯತ್ನ, ನಷ್ಟದಿಂದ ಏಳುವ ಧೃತಿ, ಗುರಿ ಸಾಧಿಸುವ ಛಲ ಕಾಣುವುದೇ ಇಲ್ಲ. ನನ್ನ ದೃಷ್ಟಿಯಲ್ಲಿ ಶಕ್ತರಾರೂ ಕಾಣುತ್ತಲೇ ಇಲ್ಲ. ಒಂದರ್ಥದಲ್ಲಿ ನಾನು ಮೆಚ್ಚುವ ಮನುಷ್ಯರೇ ಇಲ್ಲದಾಗಿದ್ದಾರೆ. " ಈ ಮೂರೂ ಕಾರಣಗಳು ಒಂದಕ್ಕೊಂದು ಪೋಷಿಸುತ್ತ , ವಿಶ್ವಮಿತ್ರರಿಗೆ ಕೋಪವೇ ಹೆಚ್ಚುವಂತಾಯಿತು .
                        (ತೀವಿದ ಒಡ್ಡೋಲಗದ ನಡುವೆ ತನ್ನಂ ಮೊದಲೊಳು
                         ಓವಿ ನುಡಿಸದ ಕೋಪ ಒಂದು.  ಆ ವಸಿಷ್ಠ ಮುನಿ
                     ಯಾವುದಂ ಪೇಳ್ದೊಡೆ ಅದನು " ಅಲ್ಲ " ಎಂಬ ಭಾಷೆ ಎರಡು .
                      ಅಖಿಲ ಜೀವಾವಳಿಯಲಿ ಕುಂದನಲ್ಲದೆ ಲೇಸ ಕಾಣದಿಹ  
                      ಭಾವ ಮುಪ್ಪುರಿಗೊಂಡು ಕುಡಿವರಿದು ಕಡುಗೋಪವಾವರಿಸೆ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com