ಹರಿಶ್ಚಂದ್ರನ ಸತ್ಯಸಂಧತೆ: ವಿಶ್ವಾಮಿತ್ರರು-ವಸಿಷ್ಠರ ನಡುವೆ ವಾದ ಪ್ರತಿವಾದ

ಬಾಣದಂತೆ ಬಂತು ವಿಶ್ವಮಿತ್ರರ ಪ್ರಶ್ನೆ, " ಹಾಗಾದರೆ ಅವನು ಸುಳ್ಳು ಹೇಳಿದರೆ ನೀವು ಸೋಲೊಪ್ಪಿಕೊಳ್ಳುವಿರ ? "ಸ್ವಲ್ಪ ಜಾಸ್ತಿ ಆಯಿತು ಎಂದು ಇಂದ್ರನಿಗೇ ಎನ್ನಿಸಿತು. ತಾನು ಮಧ್ಯೆ ಪ್ರವೇಶಿಸಬೇಕು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಥೆ ಕೇಳಿದಷ್ಟೂ ಗೋಜಲಾಗುತ್ತಿದೆ. ಶುನಶ್ಶೇಫನ ಕೊರಳು ಮುರಿಯುವುದಕ್ಕೂ, ವರುಣನ ಶಾಪಕ್ಕೂ ಏನು ಸಂಬಂಧ? ಇವನೇನು ತಪ್ಪು ಮಾಡಿದ? ಅವನೇಕೆ ಶಾಪ ಕೊಟ್ಟ? ಯಾವುದೂ ಸರಿಯಾಗಿ ಕಾಣುತ್ತಿಲ್ಲ. " ಹೌದು , ನೀನೇನು ತಪ್ಪು ಮಾಡಿದೆ? " ಸಮಜಾಯಿಷಿ ನೀಡಲು, ಹರಿಶ್ಚಂದ್ರ ನೆಟ್ಟನೆ ನಿಂತು ಕೊರಳು ಸರಿಪಡಿಸಿಕೊಂಡ. " ನಾನು ಮಾಡಿದ್ದೇನೂ ಶಿಕ್ಷೆ ನೀಡುವಷ್ಟು ದೊಡ್ಡ ತಪ್ಪಲ್ಲ ಸ್ವಾಮಿ. ಯಾವ ತಂದೆ ತಾಯಿ ತಾನೆ ತಮ್ಮ ಮಗನನ್ನ ಸಾಯಿಸೋದಕ್ಕೆ ಸಂತೋಷದಿಂದ ಒಪ್ಪಿಕೊಳ್ಳುತ್ತಾರೆ? ಹಾಗೆ ಒಂದೆರಡು ಬಾರಿ ಮುಂದಕ್ಕೆ ಹಾಕಿದ್ದಕ್ಕೇ ಸಿಟ್ಟು ಮಾಡಿಕೊಂಡು ವರುಣ ಶಪಿಸಿಬಿಟ್ಟ. ಅದರಿಂದಾಗಿ ಈ ಸಮಸ್ಯೆ.
ಹೋಗಲಿ ಮಗನನ್ನೇ ಕೊಟ್ಟುಬಿಡೋಣ ಅಂದರೆ ಅವನು ತಪ್ಪಿಸಿಕೊಂಡುಬಿಟ್ಟ. ಕಾಡಿನಲ್ಲಿ ಎಲ್ಲಿ ಬಚ್ಚಿಟ್ಟುಕೊಂಡಿದ್ದಾನೋ ಗೊತ್ತಿಲ್ಲ. ಜಲೋದರ ರೋಗದಿಂದ ಒದ್ದಾಡುತ್ತಿದ್ದವನು ನಾನು. ಇದೀಗ ನನ್ನ ಮಗನ ಬದಲು ಇವನನ್ನ ಕೊಡೋದಿಕ್ಕೆ ಸಿದ್ಧನಾಗ್ತಾ ಇದ್ದ ಹಾಗೆ ನನ್ನ ವ್ಯಾಧಿ ಹೋಗಿದೆ. " ಅಸಲು, ಮಗನನ್ನೇ ಬಲಿ ಕೇಳುವ ವರುಣನೇಕೆ ಅಷ್ಟು ಕಠಿಣನಾದ?’ ಯೋಚಿಸಿದ ವಿಶ್ವಮಿತ್ರರು, ವರುಣ ಸ್ಮರಣೆ, ಮಾಡುವ ಜಪದ ಕೊನೆಗೆ ವರುಣ ಪ್ರತ್ಯಕ್ಷನಾದ. "ಮುನಿಗಳೆ, ಇದರಲ್ಲಿ ಅನವಶ್ಯಕವಾಗಿ ನನ್ನನ್ನ ಎಳೆಯುತ್ತಿದ್ದಾನೆ ಈ ಹರಿಶ್ಚಂದ್ರ. ಅವನು ತಪಸ್ಸು ಮಾಡಿದ. ನಾನು ಕೇಳಿದೆ; " ಏನು ಬೇಕು? " ಅಂತ. ಮಗನೇ ಬೇಕು ಅಂತ ತಪಸ್ಸು ಮಾಡಿದ್ದ. ಅವನಿಗೆ ನಾನು ಹೇಳಿದೆ; " ನಿನಗೆ ಸಂತಾನ ಫಲವಿಲ್ಲ. ಆದರೂ ನಿನ್ನ ತಪಸ್ಸಿನಿಂದಾಗಿ ಒಂದು ವರ ಕೊಡುತ್ತೀನಿ. ಅಲ್ಪಾಯುವಾದಂತಹ ಮಗನನ್ನ ಕರುಣಿಸಬಹುದು. ಆದರೆ ಅವನನ್ನು ನೀನು 6 ತಿಂಗಳಗಳೊಳಗೆ ವಾಪಸ್ ಕೊಡಬೇಕು. ಇದೇ ಕರಾರು. " ಆ ಹೊತ್ತಿನ ದಿವಸ ಆಗಬಹುದು ಎಂದು ಒಪ್ಪಿಗೆ ಕೊಟ್ಟು ಅನಂತರ ಮೂರು ಬಾರಿ ವಾಯಿದೆಯನ್ನ ಕೇಳ್ತಾ, ಮುಂದಕ್ಕೆ ಹಾಕ್ತಾ ಬಂದ. ಆಗ ನಾನು ಸಿಟ್ಟು ಮಾಡಿಕೊಳ್ಳಲೇ ಇಲ್ಲ. ನಾಲ್ಕನೇ ಸಲಕ್ಕೂ ಮಾತು ಕೊಟ್ಟ ಹಾಗೆ ನಡೆಯದೇ ಇದ್ದಾಗ ಅವನನ್ನು ಶಪಿಸಿದ್ದು ನಿಜ. "ವರುಣನ ಮಾತಿನಲ್ಲಿ ತಪ್ಪಾವುದೂ ಕಾಣುತ್ತಿಲ್ಲ ಮುನಿಗಳಿಗೆ. ಹಾಗೆ ನೋಡಿದರೆ ಹರಿಶ್ಚಂದ್ರನಲ್ಲೂ ಅಂಥಾ ವಿಶೇಷ ದಂಡನೀಯ ಕಾರಣ ಕಾಣಿಸಲಿಲ್ಲ. " ಇರಲಿ, ನಾನು ಹೇಳುತ್ತಲಿದ್ದೇನೆ, ಈ ಶುನಶ್ಷೇಪನನ್ನ ನಾನು ಬಯಸಿದ್ದೇನೆ. ಅವನನ್ನು ನನಗೆ ಕೊಡು. ಅವನನ್ನ ನಾನು ನನ್ನ ಗೋತ್ರಕ್ಕೆ ಸೇರಿಸಿಕೊಳ್ಳುತ್ತೇನೆ. ಈ ಹರಿಶ್ಚಂದ್ರನನ್ನ ಕಾಡಬೇಡ . " ವಿಶ್ವಮಿತ್ರ ಮುನಿಗಳಂತಹ ಮಹರ್ಷಿಗಳೇ ಬೇಡುತ್ತಿದ್ದರೆ ಹೇಗೆ ಇಲ್ಲ ಎನ್ನುವುದಕ್ಕಾಗುತ್ತದೆ ? ವರುಣ ಒಪ್ಪಿ ನಡೆದ. 
ಕಥೆ ಮುಗಿಸಿದ ವಿಶ್ವಮಿತ್ರರು ಹೇಳಿದರು, " ಕೇಳಿ ವಸಿಷ್ಠರನ್ನ, ನಾನು ಹೇಳಿದ್ದು ಸುಳ್ಳೋ ಅಂತ! ವರುಣನಿಗೆ ಮೂರು ಬಾರಿ ಸುಳ್ಳು ಹೇಳಿದ ಹರಿಶ್ಚಂದ್ರ ಈತ. ಅಂತಹವನನ್ನ ಸತ್ಯನಿಧಿ ಅಂತ ಹೇಳ್ತಾ ಇದ್ದಾರಲ್ಲ ಇವರು! " ಅಸಹನೆಯಿಂದ ಕೂಗಿದರು ವಿಶ್ವಮಿತ್ರರು. 
ವಿಚಲಿತಗೊಳ್ಳದ ವಸಿಷ್ಠರು ಉತ್ತರಿಸಲು ಸಿದ್ಧವಿದ್ದಂತೆಯೇ ಎದ್ದು ನಿಂತರು. " ಹರಿಶ್ಚಂದ್ರನ ನಡೆ ಕ್ಷಮ್ಯ. ಸ್ವಂತ ಮಗನನ್ನೇ ಸಾಯಿಸುವ ಸಂದರ್ಭ ಬಂದಾಗ ಯಾರೂ ಹಿಂಜರಿಯತಕ್ಕದ್ದು ಬಹಳ ಸಹಜ. ಇಷ್ಟಕ್ಕೂ ಸತ್ಯ ಎಂದರೇನು? ಸತ್ಯದ ಹೆಸರಿನ ನಮ್ಮ ನಡೆ ಅನ್ಯರಿಗೆ ಧಕ್ಕೆ ಉಂಟು ಮಾಡಬಾರದು ತಾನೆ? ಆಗ ತಾನೆ ಅದು ಮಾನ್ಯ ಆಗುವುದು? ಸತ್ಯ ಹೇಳುವ  ಏಕೈಕ ಮಾತಿಗೆ ಅಂಟಿಕೊಂಡಾಗ ಉಂಟಾಗುವ ದಾರುಣಗಳಿಗೆ ಯಾರು ಹೊಣೆ? ಒಂದು ಘಟನೆಯನ್ನು ನೋಡಿ, ಧನಿಕನೊಬ್ಬ ಅಡವಿಯಲ್ಲಿ ಬರ್ತಾ ಇದ್ದ. ಅವನನ್ನು ದರೋಡೆಕೋರರು ಅಟ್ಟಿಸಿಕೊಂಡು ಬಂದರು. ಈ ಧನಿಕ ಆ ಕಡೆ ಈ ಕಡೆ ಓಡಾಡಿ ತಪ್ಪಿಸಿಕೊಂಡು ಅಂತೂ ಮರದ ಕೆಳಗೆ ಇರುವ ಮುನಿಯ ಹತ್ತಿರಕ್ಕೆ ಬಂದ. ರಕ್ಷಣೆ ಕೇಳಿದ. ತಪಸ್ವಿ ಅವನನ್ನ ತನ್ನ ಕುಟೀರದಲ್ಲಿ ಇರು ಅಂತ ಹೇಳಿದ. ನಿಮಿಷಗಳಲ್ಲೇ ಆ ಖೂಳ ದುಷ್ಟರು ಬಂದು ಇವನ ಬಗ್ಗೆ ವಿಚಾರಿಸಿದರು. ಆ ಋಷಿ ತನ್ನ ಬೆರಳನ್ನು ಯಾವುದೋ ದಿಕ್ಕಿಗೆ ತೋರಿಸಿದ. ಆ ಕಡೆಗೆ ಅವರು ದೌಡಾಯಿಸಿದರು. ಈಗ ಹೇಳಿ; ಋಷಿ ಹೇಳಿದ್ದು ಅಸತ್ಯ. ನಿಜ ತಾನೆ? ಆದರಿದು ಪ್ರಶಂಸನೀಯ ಅಲ್ಲವೆ? ಚಿಂತಿಸದೆ, ನ್ಯಾಯ - ಅನ್ಯಾಯದ ವಿಚಾರಣೆ ಮಾಡದೆ, ಸತ್ಯ ಅನ್ನುವುದು ಒಂದು ವ್ರತ ಎಂದುಕೊಂಡು ಆ ಧನಿಕನನ್ನು ದರೋಡೆ ಧಡಿಯರಿಗೆ ಒಪ್ಪಿಸಬೇಕಾಗಿತ್ತ? " ವಸಿಷ್ಠರ ಮಾತಿನಲ್ಲಿನ ನಿಜಾಯಿತಿ ಎಲ್ಲರಿಗೂ ಒಪ್ಪಿಗೆಯಾಯಿತು. 
ಮುಂದುವರೆದ ಬ್ರಹ್ಮರ್ಷಿಗಳು ಹೇಳಿದರು, " ಇಲ್ಲಿ ನಡೆದಿದ್ದೂ ಅದೇ. ಮಾತು ಕೊಟ್ಟಿರಬಹುದು, ಆದರೆ ಮಗನ ಕೊರಳ ಕಡಿಯುವುದಕ್ಕೆ ಅದು ಹೇಗೆ ಹರಿಶ್ಚಂದ್ರನ ಕೈ ಬರುತ್ತದೆ? ಮಾತು ಕೊಟ್ಟಿದ್ದಕ್ಕೆ ಅವಧಿಯನ್ನ ಕೇಳಿದನೇ ವಿನಹ, ವಚನಭ್ರಷ್ಟನಾಗಲಿಲ್ಲ ಅವನು. ಮಾನವೀಯ ಮೌಲ್ಯಗಳ ಅಡಿಯಲ್ಲಿ ಈ ಪ್ರಕರಣಗಳನ್ನ ನೋಡಬೇಕು. ಅಷ್ಟೇ ಅಲ್ಲ, ಯಾವತ್ತೋ ನೆಡೆದು ಹೋದ ಒಂದು ಹಳೆಯ ಘಟನೆ ಹಿಡಿದುಕೊಂಡು, ನಾವು ಮಾತಾಡುವುದು ಸರಿನಾ? ನಾವು ಮಾತನಾಡಬೇಕಾದದ್ದು ಈ ಹೊತ್ತು. ವರ್ತಮಾನ ಮುಖ್ಯ. ಈಗ ಹರಿಶ್ಚಂದ್ರ ಹೇಗಿದ್ದಾನೆ ಎನ್ನುವುದಷ್ಟೇ ಪ್ರಧಾನ. ಮೂರನೆಯ ಅಂಶ. ಆಗ ಇನ್ನೂ ಹರೆಯದ ಹರಿಶ್ಚಂದ್ರ. ಈಗ ಮಾಗಿದ್ದಾನೆ, ಬುದ್ಧಿ ಪಳಗಿದೆ. ಈಗ ಆಗಿನಷ್ಟು ಮೈ ಮರೆಯುವುದಿಲ್ಲ ಅವನು. ಸತ್ಯಸ್ಥಾಪನೆಗೋಸ್ಕರ ಈಗ ಸುತನನ್ನೇ ಏನು, ಹೆಂಡತಿಯ ವಿಷಯದಲ್ಲಿಯೂ ನಿರ್ಮಮಕಾರನಾಗಿ ಇರಬಲ್ಲ. ಅಷ್ಟು ದೃಢನಾಗಿದ್ದಾನೆ. ಅದು ಕಾರಣ ಹೇಳುತ್ತಾ ಇದ್ದೇನೆ, ಈಗಲೂ ಹರಿಶ್ಚಂದ್ರನೇ ಸತ್ಯಮೂರ್ತಿ. ಅವನಲ್ಲಿ ಸುಳ್ಳಿನ ಎಳೆಯೂ ಇಲ್ಲ. ಅವನಲ್ಲಿ ಹುಸಿಯ ಕಣ ತೋರಿಸೋದಿಕ್ಕೆ ಯಾರಿಗೂ ಸಾಧ್ಯ ಇಲ್ಲ. ಇದಕೆನ್ನಾಣೆ; ಶಿವನಾಣೆ.        (ಹಲವು ಮಾತೇಕೆ ಆ ಹರಿಶ್ಚಂದ್ರ ಭೂನಾಥನೊಳು
                        ಅಸತ್ಯವನು ಕಾಣಿಸಲು ಬಲ್ಲರು ಧಾತ್ರಿ
                ಯೊಳು ಮುನ್ನ ಹುಟ್ಟಿದವರಿಲ್ಲ ಇನ್ನು ಹುಟ್ಟುವರ ಕಾಣೆನು)
ಬಾಣದಂತೆ ಬಂತು ವಿಶ್ವಮಿತ್ರರ ಪ್ರಶ್ನೆ, " ಹಾಗಾದರೆ ಅವನು ಸುಳ್ಳು ಹೇಳಿದರೆ ನೀವು ಸೋಲೊಪ್ಪಿಕೊಳ್ಳುವಿರ ? "ಸ್ವಲ್ಪ ಜಾಸ್ತಿ ಆಯಿತು ಎಂದು ಇಂದ್ರನಿಗೇ ಎನ್ನಿಸಿತು. ತಾನು ಮಧ್ಯೆ ಪ್ರವೇಶಿಸಬೇಕು. ಆದರೆ ಹೇಗೆ ? ಗೊತ್ತಾಗುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com