ಶುಕ್ಲ ಪಕ್ಷದ ಸಪ್ತಮಿ ಭಾನುವಾರ. ಅಂದು ವಿಜಯಾ ಸಪ್ತಮಿ. ತಮ್ಮ ವಂಶದ ಮೂಲ ಪುರುಷನಿಗೆ ಪ್ರಿಯವಾದ ಸಪ್ತಮಿ ಕಲ್ಪ. ಚತುರ್ಥಿಯಿಂದಲೇ ವ್ರತಾರಂಭ ಮಾಡಿದ್ದಾನೆ ಹರಿಶ್ಚಂದ್ರ. ಅಂದು ಹಗಲು ಆಹಾರ ಸ್ವೀಕರಿಸಿದ ಮೇಲೆ ಪಂಚಮಿ ರಾತ್ರಿಯೇ ಊಟ ಮಾಡಿದ್ದು. ಷಷ್ಠಿ ಪೂರ್ಣ, ಸೂರ್ಯ ಸಾನ್ನಿಧ್ಯದ ಉಪವಾಸ ಮಾಡಿ ಸಪ್ತಮಿ ಸೂರ್ಯೋದಯಕ್ಕೆ ಮುನ್ನ ಶುದ್ಧನಾಗಿ ಅರಮನೆಯ ಸಿಂಹದ್ವಾರದಲಿ ನಿಂತಿದ್ದಾನೆ. ಹಂಡೆ, ತಪ್ಪಲೆ, ಗುಡಾಣ, ಬಾಣಲೆ, ಚೀಲ, ಇವುಗಳಲ್ಲೆಲ್ಲ ನಾಣ್ಯ, ಬೆಳ್ಳಿ, ಬಂಗಾರ, ರತ್ನಗಳು ತುಂಬಿ ಕಾಯುತ್ತಿವೆ. ನಾಲ್ಕು ದಿನಗಳಿಂದ ಸಾರಿರುವ ಕಾರಣ ಸಾವಿರಾರು ಮಂದಿ ಸರತಿಯಲ್ಲಿ ಕಾಯುತ್ತಿದ್ದಾರೆ, ದಾನ ಬೇಡಲು. ನಿತ್ಯ ಭಿಕ್ಷುಕರಲ್ಲದೇ ಆ ದಿನದ ಮಟ್ಟಿಗೆ ಕೈಯ್ಯೊಡ್ಡಲು ನಿಂತಿದ್ದಾರೆ ಬಡವರು, ಸಂಸಾರಸ್ಥರು, ವಿದ್ಯಾರ್ಥಿಗಳು, ರೈತರು, ವರ್ತಕರು.... ಒಬ್ಬಿಬ್ಬರೇ? ಹರಿಶ್ಚಂದ್ರ ಧಾರೆ ಎರೆಯುತ್ತಿದ್ದಾನೆ ಬೇಡಿರುವ ಕೈಗಳಲ್ಲಿ. ದಾನ ಮಂತ್ರೋಚ್ಛಾರಣೆ ಮಾಡುತ್ತಿದ್ದಾರೆ ವಸಿಷ್ಠರು. ಅವ್ಯಾಹತವಾಗಿ ಮಧ್ಯಾಹ್ನದವರೆಗೆ ನೆಡೆದಿದೆ ದಾನಕಾರ್ಯ. ಅಭಿಜಿನ್ಮುಹೂರ್ತ ಸಮೀಪಿಸುತ್ತಿದ್ದಂತೆಯೇ ವಸಿಷ್ಠರು ಹೇಳಿದರು, " ನಾನೀಗ ಹೋಗಿ ಮಾಧ್ಯಾಹ್ನಿಕೆ ಮುಗಿಸಿ ಬರುತ್ತೇನೆ. ಅಲ್ಲಿಯ ವರೆಗೆ ಶಿಷ್ಯ ಯಙ್ಞವ್ರತ ದಾನಮಂತ್ರ ಪಠಿಸುತ್ತಾನೆ." ಅವರತ್ತ ಹೋಗುತ್ತಿದ್ದಂತೆಯೇ ಇತ್ತ ಪ್ರತ್ಯಕ್ಷರಾದರು ವಿಶ್ವಮಿತ್ರರು.