ಕಾಶಿ ರಾಜನ ಆಸ್ಥಾನದಲ್ಲಿ ಹೆಡೆಮುರಿ ಕಟ್ಟಿದ ಹೆಣ್ಣನ್ನು ನಿಲ್ಲಿಸಿದ್ದಾರೆ. ಸೀರೆ ತುಂಬ ರಕ್ತ. ಮುಂದೆ ಕಾಶಿ ರಾಜಕುಮಾರನ ಶವವನ್ನು ಮಲಗಿಸಿದ್ದಾರೆ. ಅವನ ಎದೆಯನ್ನು ಚೂರಿ ಇರಿದಿದೆ." ನ್ಯಾಯದೇವತೆಯೆ, ಈ ರಕ್ಕಸಿ ರಾಜಕುಮಾರನನ್ನು ಸಾಯಿಸಿದ್ದಾಳೆ; ಒಡವೆಗಳ ಆಸೆಗೆ. ಆಭರಣಗಳೂ ಅವಳ ಬಳಿಯೇ ಇದೆ. ಕದ್ದ ಮಾಲು ಮತ್ತು ಶವದೊಂದಿಗೆ ಸಿಕ್ಕಿರುವ್ಯದರಿಂದ, ಸಂದೇಹ ಮೀರಿ ಎಲ್ಲವೂ ಪ್ರತ್ಯಕ್ಷವಾಗಿರುವುದಿಂದ ಈಕೆಗೆ ಮರಣದಂಡನೆ ವಿಧಿಸಬೇಕು. "ಸ್ವಯಂ ರಾಜನೇ ನ್ಯಾಯಾಧೀಶನಾಗಿ ಕುಳಿತಿದ್ದು, ಅವನಲ್ಲಿ ಸರಕಾರೀ ವಕೀಲರು ತಮ್ಮ ವಾದ ಮಂಡಿಸಿದರು. "ಆರೋಪಿಯ ಪರ ನ್ಯಾಯವಾದಿಗಳಿದ್ದಾರೋ?", ರಾಜ ಕೇಳಿದ. ಯಾರೂ ಏಳಲಿಲ್ಲ. ಕೊಲೆಯಾಗಿರುವವನು ತನ್ನ ಮಗನೇ. ಆ ನೋವು ಎದೆ ಸುಡುತ್ತಿದ್ದರೂ, ರಾಜ ನಿರ್ವಿಕಾರನಾಗಿ ವಿಚಾರಿಸಿದ; "ಹೇಳಮ್ಮ, ಹೆದರಿಕೊಳ್ಳದೇ ಹೇಳು. ನಿಜವಾಗಿಯೂ ನೀನು ಈ ಕೊಲೆ ಮಾಡಿದ್ದೀಯೋ? ಅಥವ ರಕ್ಷಣಾ ಇಲಾಖೆಯವರು ನಿನ್ನ ಮೇಲೆ ವೃಥಾ ಅಪವಾದವನ್ನು ಹೊರಿಸುತ್ತಿದ್ದಾರೋ? ಸರಕಾರದ ವತಿಯಿಂದ ನಿನ್ನ ಪರ ವಾದ ಮಾಡಲು ವಕೀಲರನ್ನು ನೇಮಿಸಲಾಗುತ್ತದೆ. ನಿನ್ನನ್ನು ರಕ್ಷಿಸಲು ತಕ್ಕ ಏರ್ಪಾಟು ಮಾಡುತ್ತೇವೆ.