ಲೋಹಿತಾಶ್ವನ ಗರ್ಭ !!

ಬಡಿದು ಬಡಿದು ಕಶ್ಮಲ ಸೋಸಿ ಹರಿಶ್ಚಂದ್ರನನ್ನು ಶುದ್ಧಿ ಮಾಡಿಬಿಟ್ಟರು! ಶಿವ ಸಾನ್ನಿಧ್ಯಕ್ಕೆ ಸಿದ್ಧ ಮಾಡಿಬಿಟ್ಟರು! ವಿಭೂತಿಯಂತೆ ಬಿಳಿ ಮಾಡಿಬಿಟ್ಟರು ! ಪೂಜ್ಯತೆಯನ್ನು ಕೊಟ್ಟುಬಿಟ್ಟರು!!
ಲೋಹಿತಾಶ್ವನ ಗರ್ಭ !!
ಕೊನೆಗೆ ಸಾಲ ತೀರದಾಗ, ಹರಿಶ್ಚಂದ್ರ ತನ್ನನ್ನೇ ಮಾರಿಕೊಂಡನಲ್ಲ, ಆಗಲೂ ಅಷ್ಟೇ. ಇನ್ನೇನು ಸೂರ್ಯ ಮುಳುಗುತ್ತಿದ್ದ, ಸೂರ್ಯವಂಶದ ರಾಜನೂ ಸುಳ್ಳನಾಗುತ್ತಿದ್ದ. ಹಾಗಾಗಲು ವಿಶ್ವಮಿತ್ರರು ಬಿಟ್ಟರೇ? ಅದು ಅವರ ಉದ್ದಿಶ್ಯವೇ ಅಲ್ಲ. ಮತ್ತೆ - ಮತ್ತೆ ನೆನಪಿನಲ್ಲಿ ಇಡಬೇಕಾದದ್ದು, ವಿಶ್ವಮಿತ್ರರು ಹರಿಶ್ಚಂದ್ರನ ದೃಢ ಚಿತ್ತ ನೋಡುತ್ತಿದ್ದರೇ ವಿನಃ ಅವನ ಸೋಲನ್ನಲ್ಲ. ಉಳಿಯ ಏಟು ಬೀಳುತ್ತಿತ್ತು. ಒಡೆದೇ ಹೋದರೆ, ಕಲ್ಲಿನ ಎರಡು ಚೂರು. ಪೆಟ್ಟಿನ ಮೇಲೆ ಪೆಟ್ಟು ಬಿದ್ದರೂ ಶಿಲೆ ಬಿರುಕು ಬಿಡದೇ ಇದ್ದರೆ, ಕೊನೆಗದು ಮೂರ್ತಿ; ದೇವಮೂರ್ತಿ; ಶಿವಮೂರ್ತಿ. ಅದಕ್ಕಾಗ ಅಭಿಷೇಕ.
ಹರಿಶ್ಚಂದ್ರ ಬಿಕರಿಯಾಗದೇ ಹೋದರೆ ಎಲ್ಲರಿಗಿನ್ನ ಹೆಚ್ಚು ನೋಯುವುದು ವಿಶ್ವಮಿತ್ರರೇ. ಎಷ್ಟೇ ಆಗಲಿ, ಅವ ತಮ್ಮ ಶಿಷ್ಯನ ಮಗನಲ್ಲವೇ? ಹೀಗಾಗಿ ಯಮಧರ್ಮರಾಯನನ್ನು ಕಳಿಸಿದರು ; ಅವನನ್ನು ಕೊಂಡು ಹಣ ಕೊಡಲು. 
(ಕೌಶಿಕಂ ಕಾಲನಂ ಕರೆದು ನೀಂ ಬಿಡದೆ ಅನಾಮಿಕನಾಗಿ ಧನವನು ಇತ್ತು ಅರಸನಂ ತಡೆ)
ಸಾಧಾರಣ ಸ್ಮಶಾನದ ಯಜಮಾನ ಆ ವೀರಬಾಹುಕನಾಗಿದ್ದರೆ, ಅವನಿಗೆ ಆನೆ ಹತ್ತಿ ಕವಡೆ ಎಸೆದಷ್ಟು ಎತ್ತರಕ್ಕೆ ಸುರಿದ ಹಣ ಕೊಡಲು ಸಾಧ್ಯವಿತ್ತೇ?
ಆತ್ಮೀಯರೇ, ವಿಶ್ವಮಿತ್ರರು ಬಹಳ ದೊಡ್ಡ ಮಹರ್ಷಿಗಳು. ಅವರಿಗೆ ವಸಿಷ್ಠರೆತ್ತರಕ್ಕೆ ಏರುವ ಗುರಿ. ಅದು ಲಂಬರೇಖೆಯ ಗಿರಿಯನ್ನು ಏರುವ ಸಾಹಸ. ಅದನ್ನು ಏರುವಾಗ ಮುಗ್ಗರಿಸುತ್ತಾರೆ, ನಷ್ಟಗೊಳ್ಳುತ್ತಾರೆ, ಮತ್ತೆ ಮುಂದುವರಿಯುತ್ತ, ಮತ್ತೆ ಮತ್ತೆ ತಪಸ್ಸು ಮಾಡುತ್ತಾರೆ. ಮತ್ತೆ ತಮ್ಮ ಗಳಿಕೆಯನ್ನೆಲ್ಲ ದಾನ ಮಾಡುತ್ತಾರೆ. ಆ ಪ್ರಯಾಣದ ಒಂದು ಘಟ್ಟ ಈ ಹರಿಶ್ಚಂದ್ರನ ಕಥೆ. ಈ ರಾಜನ ಕಥೆ ಇಲ್ಲಿಗೇ ಮುಗಿಯಿತು, ಆದರೆ ವಿಶ್ವಮಿತ್ರರ ಚಿತ್ರಣ? ಅದು ಕಥೆಯಲ್ಲ, ಕಾದಂಬರಿ! ಅದಿನ್ನೂ ಮುಂದುವರಿಯಬೇಕು; ಗೆಲ್ಲಬೇಕು; ವಸಿಷ್ಠರು ಅವರನ್ನು ಬ್ರಹ್ಮರ್ಷಿಯೆಂದು ಒಪ್ಪಬೇಕು. ಮುಂದೆ ಈ ಬ್ರಹ್ಮರ್ಷಿಗಳು ನಮ್ಮ ಕಥಾನಾಯಕ ರಾಮರಿಗೆ ಗುರುಗಳಾಗಬೇಕು !!! 
ಚಿತ್ರಣದ ಕೊನೆ ರೇಖೆಯನ್ನು ಎಳೆದು ಈ ಸಂಚಿಕೆ ಮುಗಿಸುವ. ಕಾಶಿ ವಿಶ್ವೇಶ್ವರ ಪ್ರತ್ಯಕ್ಷನಾಗುತ್ತಿದ್ದಂತೆಯೇ ಕವಿ ರಾಘವಾಂಕನ ಲೇಖನಿಗೆ ಸ್ಫೂರ್ತಿಯ ಸೆಲೆಯೊಡೆಯುತ್ತದೆ. ಎರಡು ಷಟ್ಪದಿಗಳಲ್ಲಿ ಬಂದ ಎಲ್ಲ ದೇವತೆಗಳ ಆಗಮನವನ್ನು ಪಟ್ಟಿ ಮಾಡಿ ಕೊನೆಗೆ ಘೋಷಿಸುತ್ತಾನೆ; " ಔಷಧದ ಗುಣ ಬಾಯಿಗೆ ಮಹಾ ಕಹಿ, ಅನಿಷ್ಟ. ಆದರೆ ಕುಡಿದ ಒಡಲಿಗೆ ಅದರಿಂದ ಗುಣ; ಇಷ್ಟ. ಅಂತೆಯೇ ವಿಶ್ವಮಿತ್ರರು. ಲೋಕದ ಕಣ್ಣಿಗೆ ಅವರ ಕೆಂಪು ಕಣ್ಣು; ಮುದುರಿದ ಮುಖ; ಬಿಸಿಯ ಬಾಯಿ; ಕಟುಕನ ಕೈ ಕಂಡಿತು. ಆದರವರು ಮಾಡಿದ್ದೇನು? ಬಡಿದು ಬಡಿದು ಕಶ್ಮಲ ಸೋಸಿ ಹರಿಶ್ಚಂದ್ರನನ್ನು ಶುದ್ಧಿ ಮಾಡಿಬಿಟ್ಟರು! ಶಿವ ಸಾನ್ನಿಧ್ಯಕ್ಕೆ ಸಿದ್ಧ ಮಾಡಿಬಿಟ್ಟರು! ವಿಭೂತಿಯಂತೆ ಬಿಳಿ ಮಾಡಿಬಿಟ್ಟರು ! ಪೂಜ್ಯತೆಯನ್ನು ಕೊಟ್ಟುಬಿಟ್ಟರು!! ಅಷ್ಟು ಸುಲಭವೇ ಶಿವನ ಆಗಮನ ? ಕೈಲಾಸದಿಂದ ಪಡೆ ಸಹಿತ ಹರ ಬಂದಿದ್ದಾನೆ ಎಂದರೆ ಯಾರಿಂದ? ಅದು ವಿಶ್ವಮಿತ್ರರಿಂದ. ಪರ ಶಿವನೊಡನೆ ವಿಶ್ವಮಿತ್ರರೂ ಬಂದರು, ಕೊನೆಗೆ ಕೈ ಹಿಡಿದು ವಸಿಷ್ಠರನ್ನೂ ಕರೆತಂದರು; ತಮ್ಮ ಸೋಲನ್ನು ಸಾರಲು!!! 
( ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ ತಾಳ್ದ ಒಡಲಿಂಗೆ ಸುಖವನು ಈವಂತೆ ಲೋಕದ ಕಣ್ಗೆ ಕಡು ಮುಳಿದರಂತೆ ತೋರಿಸಿ ಸತ್ಯ ಶುದ್ಧ ಅಪ್ಪನ್ನೆಗಂ ಕಾಡಿ ನೋಡಿ ಕಡೆಯೊಳು ಹರಿಶ್ಚಂದ್ರ ರಾಯಂಗೆ ಗಣವೆರೆಸಿ ಮೃಡನನು ಎಳೆತಂದು ಇತ್ತು ಕೀರ್ತಿಯಂ ಮೂಜಗದ ಕಡೆಗೆ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ ಬಂದನು ವಸಿಷ್ಠ ಸಹಿತ)
                                            **********
ಛೆ ಛೆ ! ಎಂತಹ ಕೆಲಸವಾಯಿತು, ಎಂತಹ ಪ್ರಮಾದವಾಯಿತು. ಭೃಗು ಮಹರ್ಷಿಗಳು ಪೇಚಾಡುತ್ತಿದ್ದಾರೆ. ಲೋಹಿತಾಶ್ವನಿಗೆ ಕೇವಲ ಗೊಂದಲ. ತಾನೇನು ತಪ್ಪು ಮಾಡಿದೆ? ಮುಂಜಾನೆಯಲ್ಲಿ ಒಂದು ಘಂಟೆ ಓಡಾಡಿದ್ದೆ. ವೈದ್ಯರು ಹೇಳಿದ್ದರು; ಬೆಳಿಗ್ಗೆ ಸೂರ್ಯೋದಯದ ಮುನ್ನ ಓಡಾಡುವುದು ಒಳ್ಳೆಯದು. ಅದು ವ್ಯಾಯಾಮವಷ್ಟೇ ಅಲ್ಲ, ಶುದ್ಧ ಆಮ್ಲಜನಕವೂ ಸಿಗುತ್ತದೆ. ಓಡಿದಾಗ ಉಸಿರಾಟ ಹೆಚ್ಚಾಗುತ್ತದೆ, ರಕ್ತ ಶುದ್ಧವಾಗುತ್ತದೆ.... ಇತ್ಯಾದಿ. ಇಂದೂ ಹಾಗೇ ಓಡಿ-ಓಡಿ ಬಂದಾಗ ವಿಪರೀತ ಬಾಯಾರಿಕೆ. ತಮಗಾಗಿ ಪುತ್ರ ಕಾಮೇಷ್ಟಿ ಯಾಗ ಮಾಡಿಸುತ್ತಿದ್ದಾರೆ ಭೃಗು ಮಹರ್ಷಿಗಳು. ಯಙ್ಞ ಮುಗಿಯುವ ತನಕ ತಾನೂ ಸೇರಿ ಯಾವ ದೀಕ್ಷಿತರೂ ಮನೆಗೆ ಹೋಗಬಾರದಂತೆ. ಯಾಗ ವೇದಿಕೆಯಲ್ಲೇ ಎಲ್ಲ. ಓಟ ಮುಗಿಸಿ ಬಂದು ನೀರಿಗಾಗಿ ಕೇಳಿದೆ, ಯಾರೂ ಜಾಗೃತರಾಗಿರಲಿಲ್ಲ. ನಾನೇ ಯಾಗಶಾಲೆಯೊಳಗೆ ಬಂದೆ, ವೇದಿಕೆಯ ಹತ್ತಿರ ಒಂದು ತಂಬಿಗೆ. ಎತ್ತಿದೆ. ನೋಡಿದೆ. ನೀರಿತ್ತು. ಕುಡಿದೆ. ಸಿಹಿಯಾಗಿತ್ತು. ಬಹುಶಃ ಪಾನಕ ಮಾಡಿರಬೇಕು ಎಂದು ಎಲ್ಲಾ ಕುಡಿದೆ. ಅಷ್ಟು ಹೊತ್ತಿಗೆ ಒಳಗೆ ಬಂದ ಭೃಗುಗಳು ಒದ್ದಾಡುತ್ತಿದ್ದಾರೆ. 
"ಎಂತಹ ಕೆಲಸ ಮಾಡಿದಿರಿ ಮಹಾರಾಜರೆ! ನೀವು ಕುಡಿದದ್ದು ನೀರಲ್ಲ, ಚರು. ಒಂದು ತರಹದ ಔಷಧಿ. ಇಂದು ಪೂರ್ಣಾಹುತಿಯಾದಮೇಲೆ, ನಿಮ್ಮ ರಾಣಿ ಕುಡಿಯಬೇಕಿತ್ತು. ಈಗ ನೀವು ಕುಡಿದಿದ್ದೀರಿ, ಹೀಗಾಗಿ.......", ಒದ್ದಾಡುತ್ತ ಭೃಗು ಮಹರ್ಷಿಗಳು ಹೇಳಿದರು, " ಆಹ್... ಹೀಗಾಗಿ ನಿಮಗೇ ಗರ್ಭ ಕಟ್ಟುತ್ತದೆ. "ತಲೆ ಕೆಡುವ ಪರಿಸ್ಥಿತಿ ಈಗ ಲೋಹಿತಾಶ್ವನಿಗೆ. 
ಲೋಹಿತಾಶ್ವ ಹುಡುಗನಾಗಿದ್ದಾಗಲೇ ಹಾವು ಕಚ್ಚಿ ಸತ್ತ. ಅಪ್ಪ - ವಿಶ್ವಮಿತ್ರರ ಘರ್ಷಣೆಯಲ್ಲಿ ನೊಂದಿದ್ದು ಈ ಪುಟ್ಟವ. ತನ್ನನ್ನು ಕೊಂಡಿದ್ದ ಕಾಲಕೌಶಿಕನನ್ನು ಮೆಚ್ಚಿಸುವ ತವಕ. ಅಡವಿಗೆ ಹೋದಾಗ ಹುತ್ತದ ಮೇಲೆ ದರ್ಭೆ ಪೊಗದಸ್ತಾಗಿ ಬೆಳದಿತ್ತು. ಅದನ್ನು ಕೊಂಡೊಯ್ದರೆ ಧಣಿಗೆ ಸಂತೋಷವಾಗಬಹುದೆಂದು ಹತ್ತಿದ್ದ. ಏನಾಯಿತೆಂದು ಗೊತ್ತಾಗುವುದರಲ್ಲಿ ಕೃಷ್ಣ ಸರ್ಪ ನುಗ್ಗಿ ಬಂದು ತನ್ನ ಕಾಲನ್ನು ಕಚ್ಚಿತ್ತು. ನಂತರ ಎಚ್ಚರ. ಶಂಕರನ ದರ್ಶನ! ಸತ್ತು, ಬದುಕಿ ಶಿವಸಾಕ್ಷಾತ್ಕಾರವಾಗಿ ಹರಿಶ್ಚಂದ್ರನ ನಂತರ ಅಯೋಧ್ಯೆ ಆಳುತ್ತಿದ್ದ ಈ ರಾಜ. ಮೂವರು ಪತ್ನಿಯರಲ್ಲೂ ಮಕ್ಕಳಾಗದಿರಲು ಭೃಗು ಮಹರ್ಷಿಗಳು ಪುತ್ರಕಾಮೇಷ್ಟಿಯನ್ನು ಮಾಡಿಸುತ್ತಿದ್ದಾರೆ. ಇದೀಗ ಈ ಎಡವಟ್ಟು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com