ದೇವಾಸುರ ಸಂಗ್ರಾಮಗಳು ನಡೆಯುತ್ತಿದ್ದ ಕಾಲವದು. ಸಾಮಾನ್ಯವಾಗಿ ನೆರವಿಗಾಗಿ ನಾವು ದೇವರಲ್ಲಿ ಪ್ರಾರ್ಥಿಸಿದರೆ, ಅಲ್ಲಿನ ಅಯೋಧ್ಯಾಧಿಪತಿಗಳನ್ನು ಯಾಚಿಸುತ್ತಿದ್ದಿತು ದೇವ ಗಡಣ ನೆರವಿಗಾಗಿ; ಅಸುರ ಸಂಹಾರಕ್ಕಾಗಿ. ಅಷ್ಟು ಪ್ರಸಿದ್ಧರು ಸೂರ್ಯವಂಶದ ರಾಜರು. ಒಮ್ಮೆ ಈ ಅಯೋಧ್ಯಾಧಿಪತಿಗೂ ಸಂದೇಶ ಬಂದಿತು ಸಹಾಯ ಬೇಡಿ. ನಿಯಮ ಒಂದನ್ನಿಟ್ಟ ರಾಜ. ಅದೆಂದರೆ, ತನ್ನ ವಾಹನವಾಗಬೇಕು ಇಂದ್ರ . ರಾಜನಿಗೆ ಅದರಿಂದ ತೃಪ್ತಿ. ಇಂದ್ರನನ್ನು ಮಣಿಸಿದ ಸಂತೋಷ. ವಿಧಿಯಿಲ್ಲ. ಇಂದ್ರ ಎತ್ತಾಗಿ ನಿಂತ ಭಾಗೀರಥನ ಮುಂದೆ. ಇವ ಇಂದ್ರನ ಹೆಗಲೇರಿಯೇ ಬಿಟ್ಟ. ಎತ್ತಿನ ಹಿಣಿಲಿಗೆ ಸಂಸ್ಕೃತದಲ್ಲಿ ’ಕಕುತ್’ ಎಂಬ ಪದ.
ಕಕುತ್ತನ್ನು ಏರಿದ್ದರಿಂದ, ಅದರ ಸ್ಮರಣಾರ್ಹವಾಗಿ ತನ್ನ ಹೆಸರನ್ನು ಕಕುತ್ಸ್ಥನೆಂದು ಜಾಹೀರು ಮಾಡಿದ. ಈತನ ವಂಶವೇ ಮುಂದ ಕಾಕುತ್ಸ್ಥ ವಂಶವಾಯಿತು. (ಮುಂದೆ ಬಂದ ಶ್ರೀರಾಮರನ್ನು ಕಾಕುತ್ಸ್ಥ ವಂಶ ಸೂರ್ಯ ಎಂದು ಈ ಕಾರಣದಿಂದಲೇ ಮಂಗಳಾಶಾಸನ ಮಾಡುವುದು).
ಈ ಕಕುತ್ಸ್ಥನ ಮಗನೇ ರಘು. ಅಪ್ಪನನ್ನು ಮೀರಿಸದ ಮಗ, ದಾನ ವೀರನೀತ (ಈತನ ಮಂದೆ ಕರ್ಣ ಯಾವ ಗಿಡದ ತೊಪ್ಪಲು?). ಬಡವರೆಲ್ಲ ಭಾಗ್ಯವಂತರಾಗಿ, ದಾನ ಬೇಡುವವರೇ ಇಲ್ಲವಾಗಿ, ಕೊಟ್ಟು ಕೊಟ್ಟು ಭಂಡಾರ ಬರಿದಾಗಿ, ದಾನ ಮಾಡಿ ಕೈಯ ಗೆರೆಗಳೆಲ್ಲ ಸವೆದು ಹೋಗಿ, ಮಹಾ ದಾನಶ್ರೀಯಾಗಿದ್ದಾಗ ಬಂದ ಕೌತ್ಸ ಕೈಯ್ಯೊಡ್ಡಿ. ಗುರುದಕ್ಷಿಣೆ ಕೊಡಲಾಗದೆ, ಕೊಡುವ ದಾನಿಯನ್ನು ರಘುವಿನಲ್ಲಿ ಕಂಡ. ಆದರೆ ಅವನು ಬಂದಾಗ ಕಂಡದ್ದು ಮಣ್ಣಿನ ಕುಡಿಕೆ ಮಡಿಕೆಗಳು. ಚಿನ್ನದ ತಟ್ಟೆಯಲ್ಲಿ ಪಾದ ತೊಳೆಯುತ್ತಿದ್ದ ರಾಜನ ಕೈಲಿ ನೀರು ತುಂಬಿದ ಮಣ್ಣಿನ ತಂಬಿಗೆ. ವಿಷಯ ತಿಳಿದ ಕೌತ್ಸ ತನ್ನ ಆಯ್ಕೆಯ ಅನೌಚಿತ್ಯಕ್ಕಾಗಿ ಒಳಗೇ ನಲುಗಿದ. ಬಂದ ವಿಷಯ ಕೇಳಿದ ರಾಜನಿಗೆ ಕೊಟ್ಟ ಉತ್ತರ ನಿಜವನ್ನು ಮರೆಮಾಡಿತ್ತು. ಏನೆಂದು ಕೇಳುವುದು; ಹೇಗೆಂದು ಕೇಳುವುದು; ಕಣ್ಣ ಮುಂದೆ ದಾರಿದ್ರ್ಯವೇ ನರ್ತಿಸುತ್ತಿರುವಾಗ? ಆದರೆ ಆ ಗುಟ್ಟಿನ ಜಾಡು ಹಿಡಿದು ರಘು ಹೇಳಿದ, " ಋಷಿಗಳೇ, ಅಳುಕದೆ, ನಮ್ಮ ಸದ್ಯ ಸ್ಥಿತಿಯನ್ನು ನೋಡಿ ನೋಯದೇ ಮನಬಿಚ್ಚಿ ಮಾತನಾಡಿ. ಏನು ಬಯಸಿ ಬಂದಿರಿ ನಮ್ಮಲ್ಲಿಗೆ? " .ರಾಜನೇ ಕೇಳುತ್ತಿದ್ದಾನೆ , ಹೇಳಲೇಕೆ ಸಂಕೋಚ? " ರಾಜನ್, ಗುರುದಕ್ಷಿಣೆಗಾಗಿ ರಾಶಿ ಹೊನ್ನು ಕೊಡಬೇಕಿದೆ. ಅದನ್ನು ಕೊಡುವ ದಾತನನ್ನರಸಿ ಬಂದೆ. ಬರುವ ಹೊತ್ತಿಗೆ ನಿನ್ನ ಖಜಾನೆ ಖಾಲಿ. ನಾನು ತಡವಾದೆ. ನೀನು ಚಿಂತಿಸಬೇಡ. ನಾನು ಅನ್ಯರಲ್ಲಿ ಯಾಚಿಸುವೆ. " ಕೇಳಿ ರಾಜನಿಗೆ ಸಿಟ್ಟು ಬಂತೋ, ಅವಮಾನವಾಯಿತೋ, " ಮಹರ್ಷಿಗಳೇ, ಅಯೋಧ್ಯಾಧೀಶರಲ್ಲಿ ಯಾಚಿಸಿ ಬರಿಗೈಲಿ ಹೋಗುವುದೇ? ಸೂರ್ಯವಂಶಕ್ಕೆ ಅವಮಾನವಲ್ಲವೇ ಇದರಿಂದ? ಬಿಡಿ, ನಿಮಗೆ ಅದರ ಚಿಂತೆ ಬೇಡ, ಇಂದು ವಿಶ್ರಮಿಸಿ. ನಾಳೆ ನೀವು ಬಯಸಿದಷ್ಟು ಹೊನ್ನು ಒಯ್ಯುವಿರಂತೆ. " .ಕೌತ್ಸನಿಗೆ ಹಿಂದೆ - ಮುಂದೆ ತಿಳಿಯದಾಯಿತು. ಹೇಗೆ ಹೊಂದಿಸುತ್ತಾನೆ ಬುಟ್ಟಿ- ಬುಟ್ಟಿ ಸ್ವರ್ಣ ವರಹಗಳನ್ನು?