ದಶ ಇಂದ್ರಿಯಗಳ ಮೇಲೂ ಹಿಡಿತ ಸಾಧಿಸಿದ್ದ ದಶರಥ ಮಹಾರಾಜ!

ಬಹು ದೊಡ್ಡ ಕೋಸಲ ರಾಜ್ಯ. ಭಾರತದ ಬಹುಭಾಗ ಆತನ ಅಂಕೆಯಲ್ಲಿ. ದಶ ಇಂದ್ರಿಯಗಳ ಮೇಲೂ ಹಿಡಿತ ಬಂತೇನು ಪ್ರಯೋಜನ, ಹನ್ನೊಂದನೆಯ ಇಂದ್ರಿಯವೇ ಸ್ವಾಧೀನವಿಲ್ಲದ ಮೇಲೆ?
ದಶ ಇಂದ್ರಿಯಗಳ ಮೇಲೂ ಹಿಡಿತ ಸಾಧಿಸಿದ್ದ ದಶರಥ ಮಹಾರಾಜ!
ಮಗನಿಂದ ಪ್ರಸಿದ್ಧಿಯಾದ ಅಪ್ಪಂದಿರ ಪಟ್ಟಿಯಲ್ಲಿನ ಮೊದಲ ಹೆಸರು ದಶರಥ. ವಾಸುದೇವನಿಂದ ವಸುದೇವ ನೆನಪಾದರೂ, ಪಾಪ ಸೆರೆಮನೆಯಲ್ಲಿ ಸವೆದಾತ! ಕ್ಷಾತ್ರ ಕಾಣದ ಸತ್ವಮೂರ್ತಿ!! ಕಂಸನ ಕರಿಮುಷ್ಠಿ ಮಧ್ಯದ ಇರುವೆ. ಅನಂತರವೂ ಆತನ ಪಾತ್ರ ಅಷ್ಟೇನೂ ಮಿಂಚಲಿಲ್ಲ. ಕನಿಷ್ಠ ರಾಜನೂ ಆಗಲಿಲ್ಲ. ಬಿಡಿ, ಅದು ಕೃಷ್ಣನ ಕಥೆ. 
ನಮ್ಮ ಕಥಾನಕಕ್ಕೆ ಮತ್ತೆ ಬರೋಣ. ದಶರಥ ಹಾಗಲ್ಲ. ಅವನದೇ ಏಳು- ಬೀಳುಗಳು. ನಮ್ಮೆಲ್ಲ ದೌರ್ಬಲ್ಯಗಳೂ ಶರೀರ ಧರಿಸಿದರೆ ಒಬ್ಬ ದಶರಥ. ನಾವು ದಶರಥನನ್ನು ಝಂಕಿಸುವುದು ಸುಲಭ. ಅಷ್ಟೇ ಸತ್ಯ ಆತನ ಜಾಗದಲ್ಲಿ ನಾವಿದ್ದರೆ ಮತ್ತೆಷ್ಟು ದುರ್ಬಲರಾಗುತ್ತಿದೆವೋ ಎಂಬುದು. 
ತನುವಿನಲ್ಲಿ ಯೌವ್ವನ; ದೊಡ್ಡ ಬಿಲ್ಲಾಳು; ಸುಂದರಾಂಗ; ಬಹು ದೊಡ್ಡ ಕೋಸಲ ರಾಜ್ಯ. ಕೌಸಲ್ಯೆಯ ಕೈ ಹಿಡಿದ ಮೇಲೆ ಆ ರಾಜ್ಯವೂ ಸೇರಿ ಬಹು ದೊಡ್ಡ ಭೂಖಂಡ. ಭಾರತ ವರ್ಷದ ಬಹುಭಾಗ ಆತನ ಅಂಕೆಯಲ್ಲಿ. ಆತನ ರಥದ ಶಕ್ತಿ ದಶ ದಿಕ್ಕುಗಳಲ್ಲೂ ಚಲಿಸುವಷ್ಟು! ದಶ ಇಂದ್ರಿಯಗಳ ಮೇಲೂ ಹಿಡಿತ ಸಾಧಿಸಿದನೆಂಬುದು ಮತ್ತೊಂದು ನಿರೂಪಣೆ. ಬಂತೇನು ಪ್ರಯೋಜನ, ಹನ್ನೊಂದನೆಯ ಇಂದ್ರಿಯವೇ ಸ್ವಾಧೀನವಿಲ್ಲದ ಮೇಲೆ? ಈತನ ಬಹು ದೊಡ್ಡ ಋಣಾಂಶವೆಂದರೆ, ತನಗೆಲ್ಲ ತಿಳಿದೆದೆಯೆಂಬ ಅಪಾರ ನಂಬಿಕೆ. ಹಲ ಬಾರಿ ಗರ್ವ ಮೂಲ ಅದು. ಸಂದಾಯವಾಗಬೇಕಾದ ಗೌರವವನ್ನು, ಸಲ್ಲಬೇಕಾದವರಿಗೆ ಕೊಡದೇ, ದಾರಿ ತುಂಬ ಕಲ್ಲು ತುಂಬಿಸಿಕೊಳ್ಳುವಾತ ಈತ.
ಹೆಚ್ಚು ಹೆಂಡತಿಯರನ್ನು ಹೊಂದುವುದು ಇಂದಿಗೂ ಧರ್ಮ ಒಂದರಲ್ಲಿ ಮಾನ್ಯವಾಗಿದ್ದಾಗ, ಕಾನೂನು ಬಲೆಗೆ ಬರದ ಬಹುವಲ್ಲಭೆಯರ ಗಂಡಂದಿರು ಈಗಲೂ ಇರುವಾಗ, ಬಹುಪತ್ನಿತ್ವವೇ ರಾಜ ಚಿನ್ಹೆ ಎಂದು ಬಿಂಬಿಸುತ್ತಿದ್ದ ಆ ಕಾಲದಲ್ಲಿ, ದಶರಥ 350 ಮಂದಿ ಮಡದಿಯರನ್ನು ಹೊಂದಿದ್ದುದು ಅಂದಿಗೆ ಅಚ್ಚರಿ ಏನಲ್ಲ. ಪ್ರಧಾನ ಪತ್ನಿಯರೆಂದು ಕರೆಸಿಕೊಂಡವರು ಮೂವರು. ಅವರೇ ಕೌಸಲ್ಯೆ, ಸುಮಿತ್ರೆ, ಕೈಕೆ. 
ದಶರಥನ ಭೋಗಕ್ಕಾಗಲಿ, ಆತನ ಹಲ ಹೆಂಡಿರ ಗಂಡನ ಪದವಿಗಾಗಲಿ, ಆಕ್ಷೇಪ ಮಾಡುವ ಹಕ್ಕು ಇಂದಿಗೆ ನಮಗೆ ಇಲ್ಲದಿದ್ದರೂ ಯಾವ ಕಾಲಕ್ಕೇ ಆಗಲಿ ಕೈ ಹಿಡಿದ ಹೆಂಡತಿಗೆ ಅನ್ಯಾಯ ಮಾಡಿದರೆ, ಅದು ಅಂದು- ಇಂದಿಗೇನು, ಎಂದಿಗೂ ಖಂಡನೀಯ. ಮಕ್ಕಳಾಗಲಿಲ್ಲವೆಂದು ಹಲವು ಹೆಂಡಿರನ್ನು ತಂದನೋ, ರಾಜ್ಯ ವಿಸ್ತರಣಕ್ಕೆ ವಿವಾಹವಾದನೋ, ಖಯಾಲಿಗಾಗಿ ದುಂಬಿಯಾದನೋ, ಬಿಡಿ; ಅಂತೂ ಅಷ್ಟೊಂದು ಮಂದಿ ರಾಣಿವಾಸ ತುಂಬಿದ್ದಾಗ ಎಲ್ಲರಿಗೂ ಕನಿಷ್ಟ ಮರ್ಯಾದೆ ಸಿಗಬೇಕಾದದ್ದು ಅನಿವಾರ್ಯ. ಅರಸನಿಗೆ ಅದು ಕಷ್ಟವೂ ಅಲ್ಲ. ಆದರೆ ದಶರಥನಲ್ಲಿರುವ ದೌರ್ಬಲ್ಯ, ಸಬಲವಾದದ್ದು ಆತ ಕಿರಿ ಹೆಂಡತಿಯ ಬುಗುರಿಯಾದಾಗ! ಫಲಿತವಾಗಿ ಬೇರೆಯವರ ಮಾತು ಬಿಡಿ; ಪಟ್ಟರಾಣಿಗೇ ಹೆಸರಿನ ವೈಭವ ಮಾತ್ರ! ಕೌಸಲ್ಯೆ ಕಿರಿದಾಗಿದ್ದು, ಅವಳ ಬಾಳು ಶೂನ್ಯವಾಗಿದ್ದು ಈ ತಾತ್ಸಾರದಿಂದಲೇ. ಮಧ್ಯಮ ಮಡದಿ ಸುಮಿತ್ರೆ, ಮೊದಲಿನಿಂದಲೂ ಯಾವುದನ್ನೂ ಮುಟ್ಟಿಸಿಕೊಳ್ಳದ, ಎಲ್ಲರಲ್ಲೂ ವಿಶ್ವಾಸ ಉಳಿಸಿಕೊಂಡಿದ್ದ, ಆರಕ್ಕೇರದ, ಮೂರಕ್ಕಿಳಿಯದ ಹೆಣ್ಣು. 
ಈ ಯಾವ ದೌರ್ಬಲ್ಯವೂ ಮುಖ್ಯವಾಗಿರಲಿಲ್ಲವೇಕೆಂದರೆ, ಮಹಾ ಧೀರನಾಗಿ ದೇವದಾನವ ಕಾಳಗದಲ್ಲಿ ಸುರರ ಪರ ಯುದ್ಧ ಮಾಡಲು ಆಮಂತ್ರಿತನಾಗುತ್ತಿದ್ದನಾಗಿ. ಅಂತಹ ಪರಾಕ್ರಮಿ. ಗಗನಗಾಮಿಯಾಗಿದ್ದಾಗ ಶನೈಶ್ಚರನ ಸಂದರ್ಶನವಾಗಿ, ಆತನನ್ನು ಸ್ತುತಿಸಿದ ದಶರಥ ನುತಿಯೂ ಪ್ರಾರ್ಥನಾ ಸಾಹಿತ್ಯದಲ್ಲಿ ದೊರಕುತ್ತದೆ. ಆದರೆ ಅವನೆಂತಹ ವೀರನೇ ಇರಲಿ, ದೈವ ಸಾನ್ನಿಧ್ಯವೇ ಇರಲಿ... ಇವಾವುವೂ ಆತನಿಗೆ "ತಂದೆಯ" ಪಟ್ಟ ಕೊಡುವ ಸಾಮರ್ಥ್ಯ ಹೊಂದಿರಲಿಲ್ಲ. ವೈದ್ಯರ ಮೂಟೆ ಮಾತ್ರೆಗಳು, ತಂಬಿಗೆ ಕಷಾಯಗಳು.... ಅಂದಿನ ಏನೇನೋ ಚಿಕಿತ್ಸೆಗಳು, ಯಾವುವೂ ದಶರಥನಿಗೆ ಮಗನನ್ನು ಕೊಡಲಿಲ್ಲ.
( ಸೃಷ್ಟಿಯ ರಹಸ್ಯವೇ ಅದು. ದರಿದ್ರರಿಗೆ ಹೆಚ್ಚು ಮಕ್ಕಳು; ಧನಿಕರಿಗೆ ಮಕ್ಕಳೇ ಇಲ್ಲದ್ದು. ಹೆಣ್ಣು ಬೇಕೆಂದು ಬಾಯ್ಬಿಟ್ಟ ಅಪ್ಪ-ಅಮ್ಮಂದಿರಿಗೆ ಸಾಲಾಗಿ ಗಂಡುಗಳೇ ಹುಟ್ಟುವುದು! ಸಾಕೆಂದು ಹರಕೆ ಹೊತ್ತರೂ, ಲಂಗ - ಸೀರೆಗಳೇ ಮನೆ ತುಂಬುವುದು. ಒಂದರ ಹಿಂದೊಂದು ಹುಟ್ಟುವ ಮುನ್ನವೇ ಮರಣಿಸುವುದು. ವೃದ್ಧನ ಯುವಪುತ್ರ ಅಪಘಾತದಲ್ಲಿ ಪ್ರಾಣ ತೊರೆಯುವುದು. ಎದ್ದರೆ ಕೂಡಲಾಗದೇ, ಮಲಗಿದರೆ ನಿಲ್ಲಲಾಗದೇ, ಕಣ್ಣು ಕಾಣದೇ, ಕಿವಿ ಕೇಳದೇ, ಉಂಡರೆ ಅರಗದೇ, ಬದುಕಿರಲು ಕಾರಣವೇ ಇರದಿದ್ದರೂ ಸಾಯದೇ ಇರುವುದು... ಅಸಲು ಹುಟ್ಟುವುದೇಕೆಂದು ಗೊತ್ತಿಲ್ಲದೇ ಹುಟ್ಟಿ, ಏನೇನೋ ಸಾಧಿಸುತ್ತಿದ್ದೇನೆಂದು ಹಾರಾಡಿ-ಹೋರಾಡಿ ತಣ್ಣಗಾಗುವುದು. ನಮ್ಮೆಲ್ಲ ಗೆಲುವುಗಳು ಮುಂದಿನ ಪೀಳಿಗೆಗೆ ಮಾನ್ಯವೇ ಆಗದೇ, ಅವರೇನೋ ಸಾಧಿಸುತ್ತೇವೆಂದು ಹೋರಾಡುವುದು. ಇವೆಲ್ಲ ನಿಷ್ಪ್ರಯೋಜಕ, ಸಾವು ಎಲ್ಲವನ್ನೂ ನುಂಗುತ್ತದೆ, ನಮ್ಮೆಲ್ಲ ಸಿದ್ಧಿಗಳು, ನಮ್ಮೆಲ್ಲ ಸೃಷ್ಟಿಗಳು, ನಮ್ಮೆಲ್ಲ ಸಾಹಸಗಳು, ನಮ್ಮೆಲ್ಲ ವಿಕ್ರಮಗಳು ಕಾಲ ರಾಯನ ಕಬಂಧ ಬಾಹುಗಳಲ್ಲಿ ಅಣಗಿಹೋಗುತ್ತದೆ, ಎಂದು ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಮತ್ತೆ ಜೀವನೋತ್ಸಾಹದಿಂದ ಕುಣಿಯುವುದು. ಅರ್ಥವೇ ಗೊತ್ತಾಗದೇ, ನಾವೂ ಕೋಟಿಯಲ್ಲಿ ಒಬ್ಬರಾಗುವುದು...  ಏನೆನ್ನೋಣ ಈ ಜೀವನ ಚಕ್ರಕ್ಕೆ? ಈ ನಿರಾಶಾ ಬದುಕಿಗೆ ಕಾರಣವೆಲ್ಲಿದೆ?)
ಏನಾದರಾಗಲಿ, ಮಗನನ್ನು ಪಡೆದೇ ಪಡೆಯುವೆನೆಂಬ ಪೂರ್ಣ ವಿಶ್ವಾಸ ದಶರಥನಿಗೆ. ಹಾಗೆ ಆ ಪರಮ ನಂಬುಗೆ ಬರಲು ಕಾರಣವಾದದ್ದೂ ಒಂದು ದುರಂತವೇ. ಅದು ದಶರಥನ ಯೌವ್ವನದ ಕಾಲ. ಹಿರಿಯರ ಮಾತು ತಲೆಯೊಳಗೆ ಹೋಗದ ಹುರುಪು. ಹಿಡಿದ ಹಠ ಸಾಧಿಸುವೆನೆಂಬ ಪೌರುಷ. ಬೇಟೆಯೆಂಬುದು ಪ್ರಾಣಿಹಿಂಸೆ, ನಿಜ. ಆದರದು ಕ್ಷತ್ರಿಯರಿಗೆ ಕರ್ತವ್ಯವಂತೆ! ತಮ್ಮ ದೃಷ್ಟಿಯ ನಿಖರತೆಗಾಗಿ ಚಪಲ ಮೃಗದಲ್ಲಿಯೂ ಬೆನ್ನಟ್ಟಿ ಬಾಣ ಹೊಡೆದು ಸಾಯಿಸುವ ಮೃತ್ಯು ಸಂತೋಷ !! ಪ್ರಾಣಿಗಳಿಗೆ ಅದು ಆಹಾರ ವ್ಯವಸ್ಥೆ. ಅದು ಪ್ರಕೃತಿಯ ಆದೇಶ. ಉಲ್ಲಂಘಿಸಿ ಹುಲಿಗೆ ಹುಲ್ಲು ತಿನ್ನಿಸಲು ಸಾಧ್ಯವಿಲ್ಲ. 
ಆದರೆ ಮನುಷ್ಯ ಮೋಜಿಗಾಗಿ ಪ್ರಾಣಿಗಳನ್ನು ಕೊಲ್ಲುವ, ಎದುರಿಸಲಾಗದೆ ಓಡುವ ಜಿಂಕೆಯನ್ನು ಕೊಂದೋ, ಮೈಮರೆತು ನಿಂತ ಹುಲಿಗೆ ಗುಂಡು ಹೊಡೆದೋ, ಗುಣಿ ತೋಡಿ ಆನೆಯನ್ನು ಉರುಳಿಸಿಯೋ.... ಏನೇನೋ ಕೃತ್ರಿಮಗಳನ್ನು ಮಾಡಿ ಮೃಗಗಳನ್ನು ಮುಗಿಸುವ ಈ ಕೊಲೆಗಳಿಗೆ ಈಗ ಶಿಕ್ಷೆ ಇದೆಯಂತೆ! ( ಕುರಿ, ಕೋಳಿ, ಕೋಣ, ಹಸು, ಮೀನು, ತಿಮಿಂಗಿಲಗಳು ಇಂದಿಗೂ ವಧಾ ಯೋಗ್ಯವೇ !! ). ಆದರೆ ಅಂದು ತ್ರೇತಾಯುಗದಲ್ಲಿ ಅದು ರಾಜವ್ಯಸನವಾಗಿತ್ತು; ಮಾನ್ಯವೂ ಆಗಿತ್ತು. ಅಂತಹ ಮಾನನೀಯ ವ್ಯಸನವೇ, ಹವ್ಯಾಸವೇ ದೌರ್ಬಲ್ಯವಾಗಿ, ಆ ದುರ್ಬಲ ಕ್ಷಣವೇ ಆತುರಗಾರ ದಶರಥನ ಮುಂದಿನ ಜೀವನದ ಕರಾಳ ಭವಿಷ್ಯವನ್ನು ಬರೆಯಿತು. ಆ ಕಪ್ಪು ಶಾಪದಲ್ಲೂ ಒಂದು ಬಿಳಿಯ ಮಿಂಚಿತ್ತು. 
-ಡಾ.ಪಾವಗಡ ಪ್ರಕಾಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com