ಪುತ್ರಕಾಮೇಷ್ಠಿ ಪ್ರಸ್ತಾವ

ಈಗ ದಶರಥನಿಗೆ, ಕೇವಲ ಸಂತಾನವಲ್ಲ, ಮಗನೇ ಆಗಬೇಕಾದ್ದರಿಂದ ಅದು ಪುತ್ರ ಕಾಮೇಷ್ಠಿ. ಸರಿ ಮಾಡಿಸುವವರಾರು? ವಸಿಷ್ಠರು," ಅದನ್ನು ಮಾಡಿಸುವ ಕ್ರಮ ನನಗೆ ಗೊತ್ತಿಲ್ಲ" ಎಂದುಬಿಟ್ಟರು.
ಪುತ್ರಕಾಮೇಷ್ಠಿ ಪ್ರಸ್ತಾವ
ಪುತ್ರಕಾಮೇಷ್ಠಿ ಪ್ರಸ್ತಾವ
ಇಡೀ ಅರಮನೆಯ ಚಹರೆಯೇ ಬದಲಾಗಿದ್ದು, ಗುಂಪುಗಳಾಗಿದ್ದು, ಬೇರೆ ಬೇರೆ ರಾಣಿಯರಿಗೆ ಬೇರೆ ಬೇರೆ ದಾಸಿಯರಾಗಿದ್ದು, ಅಸೂಯೆ ಆರಂಭವಾಗಿದ್ದು, ಕೈಕೆಯ ಆಗಮನಾನಂತರ. ಕೈಕೆಯ ಕೈ ಹಿಡಿದಮೇಲೆ ದಶರಥ ಸಂಪೂರ್ಣವಾಗಿ ಅವಳಲ್ಲೇ ಮೈಮರೆತ. ಉಳಿದವರನ್ನು ಕಡೆಗಣಿಸಿದ. ತಿಂಗಳಿಗೊಮ್ಮೆಯೂ ಕೌಸಲ್ಯೆ-ಸುಮಿತ್ರೆಯರನ್ನು ಮಾತನಾಡಿಸುತ್ತಿರಲಿಲ್ಲವೇನೋ. 
ಪ್ರಧಾನ ಪತ್ನಿಯರಲ್ಲದೇ ಉಳಿದ ಉಪಪತ್ನಿಯರು 250. ರಾಮ ರಾಮ! ಯಾವ ಯಾವ ಕಾರಣಕ್ಕೆ ಅವರು ರಾಣಿವಾಸಕ್ಕೆ ಬಂದರೋ, ಯಾರಿಗೆ ಯಾವ ಸುಖ ಸಿಕ್ಕಿತೋ, ಎಷ್ಟು ಅತೃಪ್ತರೋ ಅವರೆಲ್ಲ. ಶ್ರೀರಾಮರು ಇವರನ್ನೆಲ್ಲ, ಇವರೆಲ್ಲರ ಅವಸ್ಥೆಗಳನ್ನೆಲ್ಲ; ಅವ್ಯವಸ್ಥೆಗಳನ್ನೆಲ್ಲ; ದುರವಸ್ಥೆಗಳನ್ನೆಲ್ಲ ಅತಿ ಹತ್ತಿರದಿಂದ ನೋಡಿದ್ದರಿಂದಲೇ ಒಂದು ಗಂಡಿಗೆ ಒಂದೇ ಹೆಣ್ಣು ಎಂಬ ಶಾಸನ ಮಾಡಲು ಬಯಸಿರಬೇಕು. ಅದು ಜನರಿಂದ ಆರಂಭವಾಗುವುದಲ್ಲ, ತನ್ನಿಂದ ಶುರುವಾಗಲೆಂಬ ನಿರ್ಣಯವಿದ್ದಾತು ಅವರಲ್ಲಿ.
ಎಷ್ಟೇ ಪ್ರಯತ್ನಿಸಿದರೂ ಯಾರಿಗೂ ಮಕ್ಕಳಾಗದಾಗ ದಶರಥ ವಿಚಾರಿಸ ತೊಡಗಿದ. ಋಷಿ ಶಾಪದಲ್ಲಿನ ಬೆಳಕೆಂದರೆ ತನಗೆ ಪುತ್ರ ಸಂತಾನವಾಗುವುದು. ಮಗ ಹುಟ್ಟಿದರೆ ತಾನೇ ವಿಯೋಗವಾಗುವುದು? ಆದ್ದರಿಂದ ವಂಶೋದ್ಧಾರಕ ಹುಟ್ಟಲೇ ಬೇಕು. ಹಾಗಾದರೆ ಏಕೆ ಆಗುತ್ತಿಲ್ಲ? ತನ್ನಲ್ಲಿ ಯಾವ ಊನವೂ ಇಲ್ಲ ಎಂದು ವೈದ್ಯರೇ ಹೇಳಿದ್ದಾರೆ. ಪತ್ನಿಯರು ಒಬ್ಬರಲ್ಲ, ಮೂರು ಮಂದಿ, ಎಲ್ಲರೂ ಯೋಗ್ಯರೇ. ಆದರೂ ಮಕ್ಕಳಾಗುತ್ತಿಲ್ಲವೆಂದ ಮೇಲೆ ಅದಕ್ಕೆ ದೈವದಲ್ಲಿ ಮೊರೆ ಹೋಗುವುದಷ್ಟೇ ಉಳಿದಿರುವ ಕರ್ತವ್ಯ. ಯಙ್ಞ ಮಾಡಿ ಪ್ರಾರ್ಥಿಸೋಣ ದೈವವನ್ನು. 
ನಿಶ್ಚಯಿಸಿದ್ದು ಸರಿ, ಆದರೆ ಸರಿಯಲ್ಲದ್ದು, ಯಾರೊಂದಿಗೂ ಮಾತನಾಡದೆ, ಕನಿಷ್ಠ ಕುಲ ಗುರುಗಳಲ್ಲಿಯಾದರೂ ಆಲೋಚಿಸದೇ ಆದೇಶಿಸಿದ್ದು. ಅಶ್ವಮೇಧ ಯಾಗ ಮಾಡೋಣ-ಇದು ರಾಜಾಙ್ಞೆ. ಮೇಲೆ ಬಿದ್ದು ಪುತ್ರ ಸಂತಾನಕ್ಕೂ- ಅಶ್ವಮೇಧಕ್ಕೂ ಏನು ಸಂಬಂಧವೆಂದು ಅವರು ಕೇಳಲಿಲ್ಲ. ಆದರೆ ಆ ಹಯಮೇಧ ಮುಗಿದ ಮೇಲೆಯೇ ದಶರಥನಿಗೆ ಙ್ಞಾನೋದಯವಾದದ್ದು. " ಹೌದಲ್ಲ, ನನಗೆ ಬೇಕಾದದ್ದು ಪುತ್ರ ಸಂತಾನ. ಇದೇಕೆ ಮಾಡಿದೆ? ಏನು ಮಾಡಬೇಕೀಗ?"
ಮಂತ್ರಿ ಸುಮಂತ್ರ ದಶರಥನ ಆಪ್ತ, ಸಾರಥಿ, ಸ್ನೇಹಿತ. ಆತನಲ್ಲಿ ಎಂದೋ ಮಾಡಬೇಕಿದ್ದ ಸಮಾಲೋಚನೆಯನ್ನು ಈಗ ಮಾಡಿದ. ಸುಮಂತ್ರನೆಂದ, "ಪುತ್ರ ಬೇಕಿದ್ದರೆ ಪುತ್ರ ಕಾಮೇಷ್ಠಿ ಮಾಡಬೇಕು" (ಇಷ್ಠಿ, ಎಂದರೆ ಇಷ್ಟವನ್ನು, ಬಯಕೆಯನ್ನು ಪೂರೈಸಲು ಮಾಡುವ ಅಗ್ನಿ ಪೂಜೆ. ಯಾವ ಆಸೆಯೋ, ಅದರ ಕಾಮ, ಇಷ್ಠಿ ಆಗುತ್ತದೆ. ವಿದ್ಯೆಯನ್ನು ಕಲಿಯುವ ಆಸೆಯಿದ್ದರೆ ಅದು ಙ್ಞಾನ ಕಾಮ ಇಷ್ಟಿ. ಹಣ ಗುರಿಯಾಗಿದ್ದರೆ ಆಗದು ಧನ ಕಾಮೇಷ್ಠಿ... ಹೀಗೆ. ಈಗ ದಶರಥನಿಗೆ, ಕೇವಲ ಸಂತಾನವಲ್ಲ, ಮಗನೇ ಆಗಬೇಕಾದ್ದರಿಂದ ಅದು ಪುತ್ರ ಕಾಮೇಷ್ಠಿ. 
ಸರಿ ಮಾಡಿಸುವವರಾರು? ವಸಿಷ್ಠರು," ಅದನ್ನು ಮಾಡಿಸುವ ಕ್ರಮ ನನಗೆ ಗೊತ್ತಿಲ್ಲ" ಎಂದುಬಿಟ್ಟರು. ಹಾಗಾದರೆ ? ಸುಮಂತ್ರ ಹೇಳಿದ, " ಇದನ್ನು ಮಾಡಿಸುವಾತನಿಗೆ ಅಥರ್ವದಲ್ಲಿ ಅಧಿಕಾರವಿರಬೇಕು. ಸಪತ್ನಿಕನೂ ಆಗಿರಬೇಕು. ಪುತ್ರವಂತನೂ ಆಗಿರಬೇಕು. ಉತ್ತಮ ವಂಶ ಚರಿತ್ರೆಯುಳ್ಳವನೂ ಆಗಿರಬೇಕು. ಹಾಗಿರುವಾತನೇ ಋಷ್ಯಶೃಂಗ. ಅವರೀಗ ತಮ್ಮ ಗೆಳೆಯ ರೋಮಪಾದರ ಆಸ್ಥಾನದಲ್ಲಿದ್ದಾರೆ. ಅವರಲ್ಲಿಗೆ ತಾವು ಪ್ರಾರ್ಥನೆಯನ್ನು ಕಳಿಸಬೇಕು. " ಮಾತು ಮುಗಿಯುತ್ತಿದ್ದಂತೆಯೇ ದಶರಥ ಕೇಳಿದ, " ಯಾರು ಈ ಋಷ್ಯಶೃಂಗ? " 
                                           ***********
ಜಿಂಕೆ ವೇಷ ತೊಟ್ಟ ಒಬ್ಬ ಅಪ್ಸರಸಿ. ಅವಳಿಗೆ ಬ್ರಹ್ಮ ಇತ್ತಿದ್ದ ಶಾಪವೆಂದರೆ, " ಬ್ರಹ್ಮರ್ಷಿ ಪುತ್ರನಿಗೆ ಜನ್ಮ ನೀಡಿ ಸ್ವರ್ಗಕ್ಕೆ ವಾಪಸಾಗು. " ತನಗೆ ಈ ಭೂಲೋಕದ ಸೆರೆ ಬಿಡುಗಡೆಯಾಗುವುದು ಎಂದು, ಎಂದು ಕಾಯುತ್ತಿದ್ದ ದೇವತೆಯಾಕೆ. ಒಮ್ಮೆ ಕೊಳ ಒಂದರ ಬಳಿಗೆ ನೀರು ಕುಡಿಯಲು ಬಂದಾಗ ಅದರಲ್ಲಿ ತೇಲಿ ಬಂದ ರೇತಸ್ಸನ್ನು ಕಂಡಳು. ಅದರ ಮೂಲ ಕಂಡೊಡನೆ ಅದನ್ನು ಸ್ವೀಕರಿಸಿದಳು.
                                           **********
ಶೃಂಗೇರಿ ಗಿರಿಗಳಿಗೆ ಶೃಂಗವೂ ಹೌದು, ತೀರ್ಥಗಳಿಗೆ ಶೃಂಗವೂ ಹೌದು. ಮುಕ್ತಿ ಶೃಂಗವೂ ಹೌದು, ಕಾಷಾಯ ಶೃಂಗವೂ ಹೌದು. ಅಂತೆಯೇ ಶಾರದೆಯು ಗಿರಿ ಶೃಂಗವೂ ಹೌದು. ಇವೆಲ್ಲಾ ಇಂದಿನ ಮಾತು. ಇಂದಿಗಷ್ಟೇ ಅಲ್ಲ, ಅಂದಿಗೂ , ರಾಮಾಯಣದ ಕಾಲಕ್ಕೂ ಇದು ಪ್ರಸಿದ್ಧವೇ, ಪವಿತ್ರವೇ. ಕಾರಣ, ಅಲ್ಲಿದ್ದ ಬ್ರಹ್ಮರ್ಷಿ ವಿಭಾಂಡಕರು. ಅವರ ಆಶ್ರಮ ಇದ್ದದ್ದು ಇದೇ ಶೃಂಗೇರಿಯಲ್ಲೇ. ಇಂದಿಗೂ ಆ ವಿಭಾಂಡಕರು ಪೂಜಿಸುತ್ತಿದ್ದ ಮಲ್ಲಿಕಾರ್ಜುನ ಲಿಂಗವನ್ನು ನಾವು ವೀಕ್ಷಿಸಬಹುದು. ಈ ಶಿವಲಿಂಗಕ್ಕೆ ಮಲಹಾನಿಕರೇಶ್ವರನೆಂಬ ಹೆಸರೆಂದು ಅಲ್ಲಿನ ಅರ್ಚಕರು ಹೇಳುತ್ತಾರೆ. ಹಾಗೂ, ರಾಮಾಯಣದ ಮುಂದಿನ ಕಥೆಯನ್ನು ಗೋಡೆಯಲ್ಲಿ ಕೆತ್ತಿಸಿದ್ದಾರೆ. 
ವಿಭಾಂಡಕರು ಕಂಠಮಟ್ಟ ನೀರಲ್ಲಿ ನಿಂತು ಸವಿತೃ ಜಪಮಾಡಿ ಕಣ್ಣು ಬಿಟ್ಟಾಗ ಅರೆನಗ್ನ ಹೆಣ್ಣು ಜಳಕ ಮಾಡುತ್ತಿದ್ದಳು ತಮ್ಮ ಮುಂದೆ. ಯಾರೀಕೆ? ಎಂದೂ ಸಡಿಲವಾಗದ ತಮ್ಮ ಬ್ರಹ್ಮಚರ್ಯ ಇಂದೇಕೆ ಜಾರಿತು ? ಗೋಚರಿಸಿತು ದಿವ್ಯದೃಷ್ಟಿಗೆ ಆಕೆ ಊರ್ವಶಿಯೆಂದು. ಚಿಂತಿಲ್ಲ, ಎಂತೆಂತಹವರೋ ಈಕೆಯ ಮುಂದೆ ದುರ್ಬಲರಾಗಿದ್ದಾಗ ತಮ್ಮದು ಅಷ್ಟೊಂದು ಚಿಂತಿಸಬೇಕಾದ ದೌರ್ಬಲ್ಯವಲ್ಲ ! ಕೆಲ ತಿಂಗಳುಗಳು ಸಂದಿವೆ, ಬ್ರಾಹ್ಮೀ ಮುಹೂರ್ತದಲ್ಲೆದ್ದು ಸ್ನಾನಕ್ಕೆ ಹೊರಡಲಿದ್ದಾಗ ಆಶ್ರಮದ ಮುಂದೊಂದು ಜಿಂಕೆ. ಗರ್ಭವತಿ. ಮರಿಯೊಂದು ಪ್ರಸವಿಸುತ್ತಿರುವ ಜಿಂಕೆ. ಅದೇನು ? ಜಿಂಕೆಮರಿಯ ಬದಲು ಮಗುವಿನ ದನಿ? ಹೌದು, ನವಜಾತ ಶಿಶು. ಈಗ ಆ ಜಿಂಕೆಯ ಚರ್ಮದಿಂದೆದ್ದು ಬಂದ ಗಂಧರ್ವಿ. ಅಚ್ಚರಿಯಿಂದ ನಿಂತಿದ್ದ ತಮಗೆ ಆಗತಾನೆ ಹುಟ್ಟಿದ ಮಗುವನ್ನು ನೀಡುತ್ತಿದ್ದಾಳೆ. ಅಪ್ರಯತ್ನವಾಗಿ ಕೈ ಚಾಚಿದರು ಋಷಿಗಳು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com