ಬೇಸಗೆಯಲ್ಲಿ ನೆಲ ಬಿರುಕಾಗಿ, ಎಲೆಗಳೆಲ್ಲ ಉದುರಿ, ಬಾವಿಗಳೆಲ್ಲ ಆಳಕ್ಕಿಳಿದು, ಕೊಳಗಳೆಲ್ಲ ಒಣಗುತ್ತ, ನದಿಗಳು ಬತ್ತುತ್ತ... ಇನ್ನೇನು ಒಂದೆರಡು ತಿಂಗಳುಗಳು ಕಳೆದರೆ ಕುಡಿಯಲೂ ನೀರಿಲ್ಲದೇ ಸಾಯಬೇಕು. ಸುರರಾಜನಿಗೆ ವಿಘ್ನ ಸಂತೋಷ. ರಾಜ ಸಭೆ ಮತ್ತೆ ಮತ್ತೆ ಸೇರಿ ಚಿಂತಿಸಿದರು. ಮಳೆ ತರುವುದೆಂತೆಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿಯಿತು. ಒಂದು ದಿನ ಅರಮನೆಯ ಮುಂದೆ ಸುಳಿದ ಸನ್ಯಾಸಿಯನ್ನು ಸತ್ಕರಿಸಿ ಕೇಳಿದ ರಾಜ; " ಸ್ವಾಮಿ, ಈ ಕ್ಷಾಮದಿಂದ ಸುಟ್ಟುಹೋಗುತ್ತಿದೆ ರಾಜ್ಯ. ಹೀಗೇ ಆಗಿಬಿಟ್ಟರೆ ಕೆಲ ತಿಂಗಳುಗಳಲ್ಲೇ ಹಾಳು ಬೀಳುತ್ತದೆ. ನನ್ನ ಬಲಿಯಾದರೂ ಚಿಂತಿಲ್ಲ; ನನ್ನ ನಗರ ಉಳಿಯಬೇಕು. ದಾರಿ ತೋರಿ. " ಕಣ್ಮುಚ್ಚಿ ಕುಳಿತ ಋಷಿ ಕಣ್ಬಿಟ್ಟು ಹೇಳಿದ " ,ತಿಂಗಳೊಳಗೆ ಮಳೆ ಬೀಳುತ್ತದೆ. ಹಾಗೆ ಮಳೆ ಬರಬೇಕಾದರೆ ಶುದ್ಧ ಬ್ರಹ್ಮಚಾರಿಯ ಆಗಮನ ಆಗಬೇಕು. ಭೋಗಿ ಇಂದ್ರನ ದರ್ಪ ಅಳಿಯಬೇಕಾದರೆ, ಭೋಗದ ಅರ್ಥವೇ ಗೊತ್ತಿಲ್ಲದ ಯೋಗಿ ಬರಬೇಕು. ಆತ ಹೆಜ್ಜೆ ಇಡುತ್ತಿದ್ದಂತೆಯೇ ಇಂದ್ರನ ಮಾತಿಗೆ ಕಟ್ಟು ಬಿದ್ದ ಮೋಡಗಳ ಬಿಡುಗಡೆಯಾಗಿ ವರ್ಷ ಸುರಿಯುತ್ತದೆ. ಅಂತಹ ಮಹಾತ್ಮ, ಅಂತಹ ಹುಟ್ಟಾ ಬ್ರಹ್ಮಚಾರಿ ಇಲ್ಲಿಗೆ ಬರಬೇಕು. "ಯಾರಾತ? ". ರಾಜನ ಪ್ರಶ್ನೆಗೆ ಮತ್ತೆ ಕಣ್ಮುಚ್ಚಿ ಕುಳಿತು ಕೊಂಚ ಹೊತ್ತಾದಮೇಲೆ ಬಾಯಿ ಬಿಟ್ಟ, "ಋಷ್ಯಶೃಂಗ".