ಬಾಹುಬಲೆಯಲ್ಲಿ ಋಷ್ಯಶೃಂಗ !!

ಕ್ಷಿಪ್ರದಲ್ಲೇ ಸತ್ಕಾರಕ್ಕೆ ಅಣಿಯಾದ. ದ್ವಾರಕ್ಕೆ ಬರುತ್ತಿದ್ದಂತೆಯೇ ನಸು ಬಿಸು ನೀರಿನಲ್ಲಿ ಋಷ್ಯಶೃಂಗನ ಪಾದ ತೊಳೆದ. ತೊಳೆದೇ ಬಿಟ್ಟ ಅಳಿಯನಾಗುವನ ಪಾದವನ್ನು!
ಬಾಹುಬಲೆಯಲ್ಲಿ ಋಷ್ಯಶೃಂಗ !!
Updated on
ಗಂಧ ಬರುತ್ತಿದೆ. ಹಿತವಾಗಿದೆ. ಬಹುಶಃ ಇವರೂ ನನ್ನ ಹಾಗೇ ಋಷಿಗಳಿರಬೇಕು! ಆದರೆ ನನಗೇಕೆ ಒಂದು ತರಹದ ಸಂತಸವಾಗುತ್ತಿದೆ? ಅವರ ವಿಷಯದಲ್ಲಿ ಆಸಕ್ತಿ ಬರುತ್ತಿದೆ? ಹೃದಯದಲ್ಲಿ ಏನೋ ಪ್ರೀತಿ ಮೂಡುತ್ತಿದೆ? ತನ್ನ ಅಪ್ಪನ ಬಗ್ಗೆ, ತನ್ನ ಬಗ್ಗೆ ಎಲ್ಲ ಹೇಳಿಬಿಡೋಣ. 
(ಅದೃಷ್ಟ ರೂಪಾಸ್ತಾಸ್ತೇನ ಕಾಮ್ಯ ರೂಪಾವನೇ ಸ್ತ್ರಿಯಃ
ಹಾರ್ದಾಃ ತಸ್ಯ ಮತಿಹಿ ಜಾತಾ ಅಖ್ಯಾತುಂ ಪಿತರಂ ಸ್ವತಂ)
ಅವರನ್ನು ಆಶ್ರಮಕ್ಕೆ ಕರೆತಂದ. ಹಣ್ಣು ಹಾಲು ಕೊಟ್ಟು ಸತ್ಕರಿಸಿದ. ಅವರಿಗೋ ಹೆದರಿಕೆ. ಅವರಿದ್ದಾಗ ಎಲ್ಲಿ ವಿಭಾಂಡಕರು ಬರುವರೋ ಎಂದು.  (ಋಷೇರ್ಭೀತಾಸ್ತು) ಬೇಗ ಬೇಗ ಅವನ ಉಪಚಾರವನ್ನೆಲ್ಲ ಸ್ವೀಕರಿಸಿ ತಮ್ಮ ಆಶ್ರಮದ ಹಣ್ಣುಗಳನ್ನು ಕೊಟ್ಟರು. ಅವರಿತ್ತ ಬಾಳೆಹಣ್ಣು (ಕಡುಬು!) ತನ್ನ ಆಶ್ರಮದ ಹಣ್ಣಿಗಿನ್ನ ತುಂಬಾ ಋಚಿ. ಅವರಿತ್ತ ಸಿಪ್ಪೆಯೇ ಇಲ್ಲದ ಕಿತ್ತೀಳೆ ( ಲಡ್ಡು! ) ತನ್ನ ತೋಟದ ಕಿತ್ತಿಳೆಗಿನ್ನ ನೂರು ಪಟ್ಟು ಸಿಹಿ. ಇನ್ನೇನೇನಿದೆಯೋ ಅವರ ಆಶ್ರಮದಲ್ಲಿ!! ತಮ್ಮ ಆಶ್ರಮಕ್ಕೆ ಬರಲು ಸ್ವಾಗತಿಸಿ ಆ ಋಷಿಕುಮಾರರು ಹೋದರು. ಅವರು ಹೋದ ಮೇಲೆ ಅವರದೇ ಧ್ಯಾನ ಋಷ್ಯಶೃಂಗನಿಗೆ. ಹೊರಡುವ ಮುನ್ನ ಅವರು ಅವನಿಗೆ ಮಾಡಿದ ನಮಸ್ಕಾರದ ರೀತಿ ಅವನನ್ನು ಅಲ್ಲಾಡಿಸಿ ಬಿಟ್ಟಿತು. ತಮ್ಮ ರೀತಿಯಂತೆ ಹೊರಡುವ ಮುನ್ನ ಅವನನ್ನು ಅಪ್ಪಿಕೊಂಡುಬಿಟ್ಟರು. ಸರ್ವಾಂಗವೂ ಪುಲಕಗೊಂಡಿತು. ಅನಿರ್ವಚನೀಯ ಹರ್ಷ. 
                 (ತತಸ್ತಾಸ್ತಂ ಸಮಾಲಿಂಗ್ಯ ಸರ್ವಾ ಹರ್ಷ ಸಮನ್ವಿತಾಃ)
ತನ್ನ ತಲೆಯ ಮೇಲಿನ ಕೊಂಬಿನಂತೆ ಅವರ ಎದೆಯ ಮೇಲೆ ಉಬ್ಬಿರುವ ಎರಡು ಕೊಂಬುಗಳು. ತನ್ನದೋ ಗಡಸು, ಅವರದೋ ಮೃದು, ಎದೆಗೆ ಒತ್ತಿಕೊಂಡಾಗ ಒಳಗೆ ನುಗ್ಗಿ ಏನೋ ಹಿತ ಸ್ಪರ್ಶ. ಪಾಪ ! ಋಷ್ಯಶೃಂಗನಿಗೆ ಸುಕುಮಾರಿಯರ ಪ್ರಥಮಾಲಿಂಗನ. ಪಾದದಿಂದ ತಲೆ ತನಕ ರೋಮಾಂಚಿತಗಾತ್ರನಾಗಿಬಿಟ್ಟ. ಅವರು ಹೋದಮೇಲೆ ತಲೆಕೆಟ್ಟು ಹೋಯಿತು. ಸದಾ ಅವರದೇ ದೃಶ್ಯ, ಅವರದೇ ಮಾತು, ಅವರದೇ ಮುಖ, ಅವರದೇ ನಗು, ಅವರದೇ ಅಪ್ಪುಗೆ. ಕಾಲು ಸುಟ್ಟ ಬೆಕ್ಕಿನಂತೆ ಸುಳಿದಾಡಿದ. ನಿಂತ ಕಡೆ ನಿಲ್ಲಲಾಗುತ್ತಿಲ್ಲ. ಒದ್ದಾಡಿಬಿಟ್ಟ. 
                       (ಅಸ್ವಸ್ಥ ಹೃದಯಾಶ್ಚಾಸೀದ್ ದುಃಖಾಚ್ಚ ಪರಿವರ್ತತೇ
ತತೋ ಉಪರೇದ್ಯುಸ್ತಂ ದೇಶಮಾ ಜಗಾಮ ಸ ವೀರ್ಯವಾನ್)
ರಾತ್ರಿ ಎಲ್ಲ ನಿದ್ದೆಯಿಲ್ಲ, ಹೊರಳಾಡಿದ. ಕಣ್ಮುಚ್ಚಿದರೆ ಅವರೇ. ನಿದ್ದೆಯಲ್ಲೆಲ್ಲ ಅವರ ಆಲಿಂಗನವೇ. ಬೆಳಗಾದೊಡನೆ ಅವರಿದ್ದ ಎಡೆಗೇ ಹೋಗಬೇಕೆಂದು ನಿಶ್ಚಯಿಸಿದಮೇಲೆ ಹಾಗೂ ಹೀಗೂ ಅರೆಬರೆ ನಿದ್ದೆ.
                                            *************
ಮಣ್ಣಿನ ಗಂಧ, ತಂಪು ಹವೆ, ಹೂಗಳ ವಾಸನೆ, ಏನಿದು? ಎಂದು ಕಿಟಕಿ ತಗೆದರೆ ಮಳೆ, ಮಳೆ ಮಳೆ! ವರ್ಷ ಕಾಣದೆ ವರ್ಷವಾಗಿತ್ತು. ರಾಜನಿಗೆ ನಂಬಲೇ ಆಗುತ್ತಿಲ್ಲ. ಅಷ್ಟರಲ್ಲಿ ಪ್ರತೀಹಾರಿಬಂದು ಹೇಳಿದ; " ಯಾರೋ ಋಷಿಗಳನ್ನು ಕರೆತರುತ್ತಿದ್ದಾರೆ ಅರಮನೆ ನರ್ತಕಿಯರು". ಕ್ಷಣಮಾತ್ರದಲ್ಲಿ ರಾಜನಿಗೆ ಎಲ್ಲಾ ಅರ್ಥವಾಯಿತು. ಕ್ಷಿಪ್ರದಲ್ಲೇ ಸತ್ಕಾರಕ್ಕೆ ಅಣಿಯಾದ. ದ್ವಾರಕ್ಕೆ ಬರುತ್ತಿದ್ದಂತೆಯೇ ನಸು ಬಿಸು ನೀರಿನಲ್ಲಿ ಋಷ್ಯಶೃಂಗನ ಪಾದ ತೊಳೆದ. ತೊಳೆದೇ ಬಿಟ್ಟ ಅಳಿಯನಾಗುವನ ಪಾದವನ್ನು! 
ರಾಜನ ಅರಮನೆ, ಅಲ್ಲಿನ ವೈಭವ, ಅಲ್ಲಿನ ಆ ಸಿರಿವಂತಿಕೆ, ಅಲ್ಲಿನ ಆ ದಾಸ ದಾಸಿಯರು, " ಅಪ್ಪಿ ತಪ್ಪಿ ಇಂದ್ರನ ಅರಮನೆಗೆ ಬಂದೆನೋ? " ಎಂಬ ಸಂದೇಹ. ಆಶ್ರಮಕ್ಕೆ ಕರೆತರುತ್ತೇನೆ ಎಂದು ಈ ಸಿರಿಮನೆಗೇಕೆ ತಂದರು ಆ ಋಷಿಗಳು? ಯೋಚನೆಯ ಮೇಲೆ ಯೋಚನೆ. ಓಹ್ ! ಯಾರೋ ಆ ಎಲ್ಲ ಋಷಿಗಳನ್ನೂ ಮೀರಿಸಿದ ಸುಂದರವಾದ, ತೇಜಸ್ವಿಯಾದ, ಮನಮೋಹಕವಾದ, ಮೃದು ಮಧುರವಾದ, ವಿನಾಕಾರಣ ತನ್ನನ್ನು ಸೆಳೆಯುತ್ತಿರುವ ಋಷಿಕುಮಾರ ಯಾರು? ಬಂದು ತನ್ನ ಪಾದ ಮುಟ್ಟುತ್ತಿದ್ದಂತೆಯೇ ತನಗೆ ಇಡೀ ದೇಹ ಒಮ್ಮೆ ಅದುರಿಬಿಟ್ಟಿತು! ಬಿಸಿ ಉಸಿರು. ಕ್ಷಣ ಕಾಲ ಉಸಿರೇ ಕಟ್ಟಿದಂತಾಯಿತು. " ನನ್ನ ಒಬ್ಬಳೇ ಮಗಳು ಶಾಂತ " ಪರಿಚಯ ಮಾಡಿಸಿದ ರೋಮಪಾದ.
                                                  ********
ಕಥೆ ಮುಗಿಸುತ್ತ ಸುಮಂತ್ರ ಹೇಳಿದ; ಋಷ್ಯಶೃಂಗನಿಗೆ ಶಾಂತೆಯೊಡನೆ ವಿವಾಹವೂ ಆಯಿತು; ಆಕೆ ನಿಧಾನವಾಗಿ ಅನಂಗಶಾಸ್ತ್ರವನ್ನೂ ಪರಿಚಯ ಮಾಡಿಕೊಟ್ಟಳು. ಇದೀಗ ಋಷಿ ಸಂಸಾರಿ, ಮನೆ ಅಳಿಯ, ಶಾಂತಾ ವಲ್ಲಭ, ಮಗ ಬೇರೆ ಹುಟ್ಟಿಬಿಟ್ಟ ". ದಶರಥ ಕೇಳಿದ, " ವಿಭಾಂಡಕ? ". ಸುಮಂತ್ರ ಅಖಚಿತವಾಗಿ ಹೇಳಿದ, " ಆನಂತರ ಸಿಟ್ಟುಕೊಂಡು ಬಂದರಂತೆ, ರೋಮಪಾದರನ್ನು ಕಂಡು ಗುಡುಗಿದರಂತೆ, ಆದರೆ ತುಂಬ ಸುಖವಾಗಿ, ಶಾಂತವಾಗಿರುವ ಶಾಂತಾನುರಕ್ತನನ್ನು ಕಂಡು, ಮಗನ ಸಂತೋಷವೇ ತಮ್ಮ ಸಂತೋಷವೆಂದು ಹೋಗಿಬಿಟ್ಟರಂತೆ. 
                                              ********
(ಒಂದು ವಾಸ್ತವಾಂಶ:- ಬಹಳ ಮಂದಿ ಕೇಳುತ್ತಾರೆ; " ಶಾಂತಾ ದಶರಥನ ಮಗಳಂತೆ ? ಆಕೆಯನ್ನು ಗೆಳೆಯ ರೋಮಪಾದನಿಗೆ ಸಾಕಲು ಕೊಟ್ಟನಂತೆ ! ಹೌದೆ ? " ಹೌದಾದರೆ , ಮಕ್ಕಳೇ ಇಲ್ಲದ ದಶರಥ , ಇದ್ದೊಬ್ಬ ಮಗಳನ್ನು ಎಲ್ಲಾದರೂ ದತ್ತು ಕೊಡಲುಂಟೆ ? ಹಾಗೊಮ್ಮೆ ಕೊಟ್ಟಿದ್ದರೂ , ಆ ನಂಟು ಕತ್ತರಿಸಿ ಹೋಗುತ್ತದೆಯೇ ? ಮಗಳ ಯೋಗಕ್ಷೇಮವನ್ನಾದರೂ ಆಗಾಗ ತಿಳಿದುಕೊಳ್ಳುತ್ತಿರಲಿಲ್ಲವೆ ? ಶಾಂತೆಗೆ ಮದುವೆಯಾದಾಗ ರೋಮಪಾದ ನಿಜ ತಂದೆಯನ್ನು ಆಹ್ವಾನಿಸುತ್ತಿರಲಿಲ್ಲವೆ ? ಇದೆಲ್ಲಕ್ಕಿನ್ನ ಮುಖ್ಯವಾಗಿ ಋಷ್ಯಶೃಂಗನ ಬಗ್ಗೆ ಸುಮಂತ್ರ ವಿವರಣೆ ಕೊಟ್ಟಾಗ ಕಿವಿಕಿತ್ತುಕೊಂಡು ದಶರಥ ಕೇಳುತ್ತಿದ್ದನೆ ? ಈ ಎಲ್ಲ ಅಸಂಭಾವ್ಯತೆಗಳಿಗೆ ಒಂದೇ ಉತ್ತರವೆಂದರೆ , ಶಾಂತೆಯನ್ನು ಧಶರಥಪುತ್ರಿಯೆಂದು ಶ್ರೀಮದ್ರಾಮಾಯಣದಲ್ಲಿ ಹೇಳಿಲ್ಲ !!! --ಲೇ.)       

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com