ರಾಮಾಯಣದ ಕುರಿತ ಜಿಜ್ಞಾಸೆ, ಪ್ರಶ್ನೆಗಳಿಗೆ 'ರಾಮಾಯಣ ಅವಲೋಕನ'ದ ಮೂಲಕ ಉತ್ತರ

ಡಾ.ಪಾವಗಡ ಪ್ರಕಾಶ್ ರಾವ್ ಅವರ ರಾಮಾಯಣ ಅವಲೋಕನ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ...
ರಾಮಾಯಣದ ಕುರಿತ ಜಿಜ್ಞಾಸೆ, ಪ್ರಶ್ನೆಗಳಿಗೆ 'ರಾಮಾಯಣ ಅವಲೋಕನ'ದ ಮೂಲಕ ಉತ್ತರ
ಧರ್ಮ ನಿಷ್ಠರಾಗಿ ಹೇಗಿರಬೇಕೆಂಬುದನ್ನು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ. ರಾಮಾಯಣ ಸ್ವೀಕಾರಕ್ಕೆ ಮೂರು ತೆರನ ಅಧಿಕಾರಿಗಳಿದ್ದಾರೆ. ಜನಸಾಮಾನ್ಯರು, ರಸಾನುಭವಿಗಳು, ರಾಮವಿರೋಧಿಗಳು.

ಜನಸಾಮಾನ್ಯರು: ಕೋಟಿ ಕೋಟಿ ಸಂಖ್ಯೆಯಲ್ಲಿರುವ ರಾಮಭಕ್ತರು. ಬಹುಪಾಲು ಮುಗ್ಧರು. ರಾಮನನ್ನು ದೇವರೆಂದು ನಂಬಿ ಬಾಗುವವರು. ಕಷ್ಟ ಸುಖಗಳನ್ನು ಆತನಲ್ಲಿ ನಿವೇದಿಸಿಕೊಂಡು ವರಬೇಡುವವರು. ಆದರ್ಶವಾಗಿಟ್ಟುಕೊಂಡು ಬಾಗುವವರು. ಅವರ ಅನುಭವಗಳು ರಾಮ ರಕ್ಷೆಯನ್ನು ಹೇಳುತ್ತವೆ , ವರ ಪ್ರಸಾದವನ್ನು ವರ್ಣಿಸುತ್ತವೆ , ಸಮಸ್ಯಾ ಪರಿಹಾರದ ಕಥೆಗಳನ್ನು ಬರೆಯುತ್ತವೆ. ಮಕ್ಕಳಿಗೆ ರಾಮನ ಹೆಸರಿಡುತ್ತಾರೆ. ರಾಮ ಕೋಟಿಗಳನ್ನು ಲಿಖಿಸುತ್ತಾರೆ. ಜಪಿಸುತ್ತಾರೆ. ಗುಡಿ ಕಟ್ಟಿ, ಮೂರ್ತಿ ನಿಲ್ಲಿಸಿ, ಮಂಗಳಾರತಿ ಕೊಂಡು, ಹಾಡು ಹಾಡಿ, ಪ್ರಸಾದ ಸ್ವೀಕರಿಸಿ, ಆನಂದದಿಂದ ಜೀವಿಸುತ್ತಾರೆ. ರಾಮರೇ ಸರ್ವಸ್ವವೆಂದು ನಂಬಿ, ಬಾಳಿ ಧನ್ಯರಾಗುತ್ತಾರೆ. ನಿರ್ಗುಣ ಬ್ರಹ್ಮೋಪಾಸಕರೂ ಪರಬ್ರಹ್ಮವೇ ಶ್ರೀರಾಮರಾಗಿ ಅವತರಿಸಿದರೆಂದು ತಾದಾತ್ಮ್ಯ ಹೊಂದಿ ಶುದ್ಧ ಬ್ರಹ್ಮ ಪರಾತ್ಪರ ರಾಮರಲ್ಲಿ ಕರಗಿ ಹೋಗುವುದು ಒಂದು ಸತ್ಯ; ಸೋಜಿಗ 

ರಸಾನುಭವಿಗಳು: ವಾಲ್ಮೀಕಿ ಕವಿಯ ಕಂಠಪತ್ರ ಮೂಡಿಸಿದ ಆದಿಕಾವ್ಯಕ್ಕೆ ಭಾರತವಷ್ಟೇ ಏಕೆ, ವಿಶ್ವದ ರಸಿಕರೆಲ್ಲಾ ಶರಣು! ಆದರ್ಶ ರಾಮನೋ; ಯೋಗಿ ಭರತನೋ; ಜ್ವಾಲಾಮುಖಿ ಲಕ್ಷ್ಮಣನೋ; ಸಾಧ್ವಿ ಸೀತೆಯೋ; ಸಂತ ಹನುಮಂತನೋ; ರಾಜ್ಯಾಕಾಂಕ್ಷಿ ಧಾರ್ಮಿಕ ವಿಭೀಷಣನೋ; ವೃದ್ಧ ಜಾಂಬವನೋ; ದುಷ್ಟ ದಶಕಂಠನೋ; ಮಂದ ಕುಂಭಕರ್ಣನೋ; ಮದಿಸಿದ ಮೇಘನಾದನೋ... ಯಾರನ್ನು... ಯಾರನ್ನು ಆಸ್ವಾದಿಸದೆ ಬಿಟ್ಟಾರು? 

ರಾಮನನ್ನು ಪ್ರಶ್ನಿಸುವವರು: ಮೂಲತಃ ಇವರು ದೈವವನ್ನು ಪ್ರಶ್ನಿಸುವವರು. ದೈವ ವಿರೋಧಿಗಳು. ಯಜ್ಞ ವಿರೋಧಿಗಳೂ ಹೌದು, ಒಂದರ್ಥದಲ್ಲಿ ನಾಸ್ತಿಕರು. ಚಾರುವಾಕರೆಂದು ಹೇಳಿಕೊಳ್ಳುವವರು. ನಮಗೆ ನಾಸ್ತಿಕತೆ ಬಗ್ಗೆ ವಿರೋಧವಿಲ್ಲ. ಚಾರುವಾಕರ ಬಗ್ಗೆ ತಕರಾರಿಲ್ಲ. ಅವರೆಲ್ಲಾ ಶುದ್ಧಾಂಗವಾಗಿ ಸಾಕ್ಷ್ಯ್ಕೆ ಸಿಗದ್ದನ್ನು ತಿರಸ್ಕರಿಸುವ ವೈಜ್ಞಾನಿಕ ಕಣ್ಣವರು. ಅವರು ಮಾನ್ಯರೇ. ನಮ್ಮ ಸಂಸ್ಕೃತಿಯಲ್ಲಿ ಅವರಿಗೆ ಪ್ರತ್ಯೇಕ ಆಸನ ಉಂಟು. ಆದರೀಗಿನವರು ರಾಮಾಯಣವನ್ನು ಕೈಲಿ ಹಿಡಿದು ಸುಡಲು ಯತ್ನಿಸುವವರು. ರಾಮಾಯಣವನ್ನು ಕಣ್ಣ ಮುಂದಿಟ್ಟುಕೊಂಡ ಮೇಲೆ ಅದನ್ನು ಸಾಕ್ಷ್ಯೆಂದು ಪರಿಗಣಿಸುವುದಾದರೆ, ಸಂಪೂರ್ಣ ದರ್ಶನವಾಗಬೇಕು. ಅಣುಮಾತ್ರದ ಆಂಶಿಕ ಉದ್ಧರಣೆಯಿಂದ ನ್ಯಾಯಾಧೀಶರಾಗಬಾರದು. ರಾಮಾಯಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡದೇ ರಾಮಾಯಣದ ಬಗ್ಗೆ ಹಿರಿಯ ತಾತ್ವಿಕರೋ, ಮನೀಷಿಗಳೋ ಬರೆದಿರುವುದನ್ನು ಅರಗಿಸಿಕೊಳ್ಳದೇ ರಾಮರನ್ನು ವಿರೋಧಿಸುವವರನ್ನು ಆಲಿಸುವ ಮೇಲಿನ ಎರಡು ಗುಂಪಿನಲ್ಲಿ ಪ್ರಶ್ನೆಗಳೋ ಪ್ರಶ್ನೆಗಳು. ರಾಮಾಯಣದ ಬಗೆಗಿನ ಪ್ರಶ್ನೆಗಳ ವ್ಯಾಪ್ತಿ ಮುಗ್ಧನಿಂದ ಹಿಡಿದು ಮನೀಷಿಯವರೆಗೂ; ಸಾಮಾನ್ಯ ಓದುಗನಿಂದ ವೈಚಾರಿಕನವರೆಗೂ; ಚಾರಿತ್ರಿಕನಿಂದ ಭೌಗೋಳಿಯವರೆಗೂ. ಈ ಎಲ್ಲರೂ ಗಂಭೀರರೇ, ಚಿಂತಕರೇ.... ಆದರೆ ಚಿಂತನೆಯ ಸೋಗಿನಲ್ಲಿ ಜಗಮೆಚ್ಚಿದ ಗಜವನ್ನು ಅಜವೆನ್ನುವವರಿದ್ದಾರೆ. ಒಟ್ಟಿನಲ್ಲಿ ಪ್ರಶ್ನೆಗಳನ್ನು ಮೂರು ಗುಂಪು ಮಾಡಬಹುದು; ತಿಳುವಳಿಕೆಗಾಗಿ, ಚಿಂತನಕ್ಕಾಗಿ, ಖಂಡಿಸಲಿಕ್ಕಾಗಿ. ಜನಸಾಮಾನ್ಯರು ಹಲವು ಮೂಲಗಳಿಂದ ಏನನ್ನೋ ಕೇಳಿರುತ್ತಾರೆ. ಕೆಲ ಬಾರಿ ಸಂದೇಹ ಹುಟ್ಟಿ ಪರಿಹಾರಕ್ಕಾಗಿ ತವಕಿಸುತ್ತಾರೆ... ಉದಾಹರಣೆಗೆ ಶಾಂತ ದಶರಥನ ಮಗಳಂತೆ? ಅಂಗರಾಜನಿಗೆ ದತ್ತು ಕೊಟ್ಟಿದ್ದನಂತೆ ಹೌದೇ?; ಸೀತೆ ರಾವಣನ ಮಗಳಂತೆ? ನಿಜವಾದ ಸೀತೆಯ ಬದಲು ರಾವಣನೊಟ್ಟಿಗೆ ಹೋಗಿದ್ದು ವೇದವತಿಯಂತೆ?; ದಶರಥನನ್ನು ಶಪಿಸಿದ್ದು ಶ್ರವಣ ಕುಮಾರನ ತಂದೆ ತಾನೆ?; ರಾವಣನ ಸಿಂಹಾಸನಕ್ಕೆ ಅಷ್ಟ ದಿಕ್ಪಾಲಕರೇ ಮೆಟ್ಟುಲುಗಳಾ? ಯುದ್ಧಾರಂಭಕ್ಕಿಂತ ಮುನ್ನ ರಾವಣನೇ ಪುರೋಹಿತನಾಗಿ ರಾಮರನ್ನು ಹರಸಿದ್ದು ನಿಜವೇ? ಲಕ್ಷ್ಮಣ 14 ವರ್ಷಗಳೂ ಊಟ ಮಾಡದೇ ನಿದ್ದೆಗೆಟ್ಟಿದ್ದರಿಂದಲೇ ಇಂದ್ರಜಿತನ ವಧೆ ಸಾಧ್ಯವಾಯಿತಂತೆ? ಇತ್ಯಾದಿ...

ಇವುಗಳೆಲ್ಲಾ ಸಾಮಾನ್ಯ ಜನರ ಪ್ರಶ್ನೆಗಳಾದರೆ ಮನಮಂಥನಕ್ಕೆ ಮತ್ತೊಂದಷ್ಟು ಪ್ರಶ್ನೆಗಳಿವೆ. ಇವರು ರಾಮಾಯಣವನ್ನು ತಿರುವಿಹಾಕಿರುತ್ತಾರೆ. ಒಟ್ಟಿಗೇ ಅನುವಾದಗಳನ್ನೂ ಕಂಡಿರುತ್ತಾರೆ. ಆ ಬುನಾದಿಯಲ್ಲಿ ನಿಂತು ಪ್ರಶ್ನೆ ರೂಪದ ತಮ್ಮ ಅನಿಸಿಕೆಗಳನ್ನು ಮುಂದಿಡುತ್ತಾರೆ. 

ಉದಾಹರಣೆಗೆ; ರಾಮರು ದೇವರೇ ಅಲ್ಲ. ಆತ ಒಬ್ಬ ಮನುಷ್ಯ. ಎಲ್ಲರಲ್ಲಿರುವಂತೆಯೇ ಒಂದು ದೋಷ ರಾವಣನಲ್ಲಿ ಇತ್ತು. ಹಾಗೆಂದ ಮಾತ್ರಕ್ಕೆ ಅವನನ್ನು ತಿರಸ್ಕರಿಸುವುದೇ? ಅವನೆಂತಹ ಭಕ್ತ? ಸ್ವರ್ಣ ಲಂಕೆ ನಿರ್ಮಿಸಿದ ಅದ್ಭುತ ಕಲಾವಿದ. ಆತ ಎಷ್ಟು ಸುಸಂಸ್ಕೃತನೆಂದರೆ ಅಶೋಕವನದಲ್ಲಿ ಸೀತೆ ಒಂಟಿಯಾಗಿದ್ದರೂ ಸೀತೆಯನ್ನು ಬಲಾತ್ಕಾರ ಮಾಡಲಿಲ್ಲ!. ರಾವಣನ ಪ್ರಾಣ ಹೋಗುವುದಕ್ಕೂ ಮುನ್ನ ರಾಮರು ಲಕ್ಷ್ಮಣನಿಗೆ "ಈ ರಾವಣ ಕ್ಷಾತ್ರ ಧರ್ಮದ ಪ್ರತಿರೂಪ. ನೀತಿಯಲ್ಲಿ ಬೃಹಸ್ಪತಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ. ಹೋಗು ಅವನ ಪಾದ ಬುಡದಲ್ಲಿ ಕುಳಿತು ಶಾಸ್ತ್ರೋಪದೇಶಕ್ಕಾಗಿ ಪ್ರಾರ್ಥಿಸು ಎಂದಿದ್ದರಂತೆ. ಎಂದಮೇಲೆ ರಾವಣನೆಂತಹ ವಿದ್ವಾಂಸ ; ಎಂತಹ ಶಾಸ್ತ್ರವೇತ್ತ ; ಎಂತಹ ಪಂಡಿತ !?? ಕೈಕೆ ಉದಾತ್ತ ಹೆಣ್ಣು, ಜನರ ತೆಗಳಿಕೆಗೂ ಹೆದರದೇ ದುಷ್ಟ ಸಂಹಾರಕ್ಕಾಗಿ ರಾಮನನ್ನು ದಂಡಕಾರಣ್ಯಕ್ಕೆ ಕಳಿಸಿದಳು. ಇಲ್ಲದಿದ್ದರೆ ರಾವಣನ ಸಂಹಾರವೆಂತು ? ರಾಮ ಪ್ರಶಸ್ತಿ ಹೇಗೆ ? ರಾಮರು ವಾಲಿಗೆ ಮರೆಯಲ್ಲಿ ನಿಂತು ಬಾಣ ಬಿಟ್ಟಿದ್ದು ಅವರ ವ್ಯಕ್ತಿತ್ವಕ್ಕೆ ಶೋಭೆ ತರದು...ನಾವೂ ರಾಮಪಕ್ಷಪಾತಿಗಳೇ... ನಮ್ಮನ್ನು ತಪ್ಪು ತಿಳಿಯಬೇಡಿ.... 

ಹನುಮಂತನಿಗೆ ಮದುವೆಯಾಗಿದೆಯಂತೆ? ಸಮುದ್ರ ಹಾರಿದಾಗ ಬೆವರಿನ ಹನಿಯೊಂದು ಬಿತ್ತು. ಕೆಳಗೆ ಮೀನೊಂದು ನುಂಗಿತು. ಮತ್ಸ್ಯಾಂಜನೇಯ ಹುಟ್ಟಿದ. ಅವನೇ ಅಹಿರಾವಣನ ಅರಮನೆಯ ದ್ವಾರಪಾಲಕ. ಅಲ್ಲೇ ಅಪ್ಪ-ಮಕ್ಕಳ ಭೇಟಿ. ಅಲ್ಲಲ್ಲ ಸರಿಯಾದದ್ದು ಏನೆಂದರೆ ಸೂರ್ಯ ಪುತ್ರಿ ಸುವರ್ಚಲೆ-ಹನುಮನ ನಡುವೆ ಪ್ರಣಯ!! ಸಮರ್ಥನೊಬ್ಬ ಅಳಿಯನಾದರೆ ಸೂರ್ಯನೇಕೆ ಬೇಡೆಂದಾನು? ಒಂಟೆಯೊಂದನ್ನು ಬಹುಮಾನಿಸಿ ಅವರಿಬ್ಬರ ಮದುವೆ ಮಾಡಿಸಿದ ಆ ಆದಿತ್ಯ. ಆದ್ದರಿಂದಲೇ ಆಂಧ್ರ ಪ್ರದೇಶದ ದೇಗುಲಗಳಲ್ಲಿ ಪತ್ನಿ ಸಹಿತ ಆಂಜನೇಯನ ಮುಂದೆ ಒಂಟೆಯ ಪ್ರತಿಮೆ ಇರುತ್ತದೆ. ಹನುಮಂತ ಲಂಕೆ ಸುಟ್ಟಿದ್ದರ ಬಗ್ಗೆ ನಮಗೇಕೋ ಬಲವಾದ ಸಂದೇಹ. ಲಂಕೆಯನ್ನೆಲ್ಲಾ ಸುಟ್ಟಮೇಲೆ ಆತನಿಗೆ ಚಿಂತೆಯಾಯಿತಂತೆ. "ಅಶೋಕವನವೂ ಇದರಲ್ಲಿ ಸುಟ್ಟುಹೋಗಿದ್ದರೆ ಎಂತಹ ಅಚಾತುರ್ಯ" ಎಂದು. ನಮ್ಮ ತಕರಾರು ಅದಲ್ಲ. ನಿಜವಾಗಿಯೂ ಉರಿದಿದ್ದರೆ ರಾಕ್ಷಸರು ಸತ್ತಿದ್ದರೆ ಯುದ್ಧ ಮಾಡಲು ಎಲ್ಲಿತ್ತು ದೈತ್ಯಪಡೆ? ಲಂಕೆ ಎಲ್ಲಿರಲು ಸಾಧ್ಯವಿತ್ತು? ರಾವಣನೇನು ರಾಮ ಬರುವ ಒಳಗೇ ಪುನರ್ನಿರ್ಮಾಣ ಮಾಡಿದನೇ ? ರಾಕ್ಷಸರನ್ನು ಅನ್ಯ ತಾಣಗಳಿಂದ ಯುದ್ಧಕ್ಕೆ ಎರವಲು ತರಿಸಿದನೇ? ಇದೆಲ್ಲಾ ನೋಡಿದರೆ ಆಂಜನೇಯ ಲಂಕೆಯನ್ನು ಸುಡಲೇ ಇಲ್ಲ..? ಇಂತಹವೇ ಹಲವಾರು ಪ್ರಶ್ನೆಗಳು... 
ಇಂತಹ ಅನೇಕ ಬಗೆಯ ಪ್ರಶ್ನೆಗಳಿಗೆ ಸತ್ಯದರ್ಶನ ಖ್ಯಾತಿಯ ಡಾ.ಪಾವಗಡ ಪ್ರಕಾಶ್ ರಾವ್ ಅವರು ಪ್ರತಿ ಬುಧವಾರ ರಾಮಾಯಣ ಅವಲೋಕನ ಅಂಕಣದ ಮೂಲಕ ಉತ್ತರಿಸಲಿದ್ದಾರೆ. ರಾಮನ ಪೂರ್ವಜರು ರಾಮನ ಅವತಾರಕ್ಕೂ ಹಿಂದಿನ ಘಟನೆಗಳ ಪೂರ್ವ ಪೀಠಿಕೆಯ ಲೇಖನಗಳು ಮುಂದುವರೆಯಲಿವೆ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com