ಶೂದ್ರ ತಪಸ್ವಿಯ ದಾರುಣ ಹತ್ಯೆ : ರಾಷ್ಟ್ರ ಕವಿ ಕುವೆಂಪುರವರ "ಶೂದ್ರ ತಪಸ್ವಿ” ಓದದವರಾರು? ರಾಮರ ಈ ಶೂದ್ರ ವಿರೊಧೀ ನಿಲುವನ್ನು ಅವರು ಬಣ್ಣಿಸಿದರಾಗಿ ನಮಗೆ ಈ ರಾಮರ ಗುಪ್ತ ದುರ್ಗುಣ ಕಂಡಿತು . ಹೀಗಾಗಿ ನಾವು ಅವರಿಗೆ ಋಣಿ . ಶಂಬೂಕನನ್ನು ಸಂಹರಿಸಲು ಬಿಟ್ಟ ಬಾಣ , ಹಿಂದೆಂದೂ ರಾಮಾದೇಶವನ್ನು ಮೀರದ ಆ ರಾಮಾಸ್ತ್ರ , ಶಂಬೂಕನನ್ನು ಮುಟ್ಟಲೂ ಅಂಜಿ , ಹಿಂದಿರುಗಿ ರಾಮರ ಬಳಿಗೇ ಬಂದು ನಿಂತಿತು. ಇಷ್ಟಕ್ಕೂ ಶಂಬೂಕ ಮಾಡಿದ ತಪ್ಪೇನು ? ಸ್ವರ್ಗ ಬಯಸಿ ತಪಸ್ಸಿಗೆ ಕುಳಿತಿದ್ದೇ ? ಶೂದ್ರ ಆ ರೀತಿ ಸ್ವಾರ್ಥಿಯಾಗಬಾರದಿತ್ತು ಎಂಬುವುದಾದರೆ ತ್ರಿಶಂಕು ಮಾಡಿದ್ದೇನು ? ಈ ರಾಮರ ಗುರುಗಳೇ ಅವನನ್ನು ಸ್ವರ್ಗಕ್ಕೆ ಕಳಿಸಿದರಲ್ಲ ! ಅದು ಸರಿಯಾದರೆ ಶಂಬೂಕ ಬಯಸಿದ್ದರಲ್ಲಿ ತಪ್ಪೇನಿದೆ ? ಶೂದ್ರನೊಬ್ಬ ತಪಸ್ಸು ಮಾಡಕೂಡದೆಂಬುದು ರಾಮಾಭಿಪ್ರಾಯವಾದರೆ, ಇದೆಂತಹ ಜಾತಿ ವಿರೋಧೀ ನೀತಿ ? ಕ್ಷತ್ರಿಯರಿಗೊಂದು ಕಾನೂನು , ಶೂದ್ರರಿಗೊಂದು ನೀತಿಯೆ ? ಇದು ರಾಮ ರಾಜ್ಯವೇ ? ಓದುಗರೆ, ಮೇಲ್ನೋಟಕ್ಕೇ ಇವರ ಮಾತುಗಳು ಎಲ್ಲೋ ನಿಜವೇನೋ ಎಂದೆನ್ನಿಸಿಬಿಡುತ್ತದಲ್ಲವೆ ? ಹಾಗಾದರೆ ಭಾರತದುದ್ದಗಲಕ್ಕೂ ಇರುವ ರಾಮ ಭಕ್ತರು ಅಙ್ಞಾನಿಗಳೆ ? ರಾಮ ಕಾವ್ಯಗಳು " ಮಿಥ್ಯಾ - ಮಾಯಾ ಮೋಹಾವೇಶವೆ ? ರಾಮ ವಿರೋಧ ನಿನ್ನೆ ಮೊನ್ನಿನದಲ್ಲ. ಎಂದು ವಾಲಿ ತನ್ನ ವಿರೋಧವನ್ನು ದಾಖಲಿಸಿದನೋ ಅಂದಿನಿಂದ ಈ ದೋಷಾರೋಪಣೆ ಅವ್ಯಾಹತವಾಗಿ ಆಗಾಗ್ಗೆ ಕಾಲಕಾಲಕ್ಕೆ ವಿಜೃಂಭಿಸುತ್ತಲೇ ಇದೆ. ಉತ್ತರ ಭಾರತದಲ್ಲಿನ ರಾವಣ ಲೀಲಾಗಳು ನರ್ತಿಸುತ್ತಲೇ ಇವೆ . ಸಿಂಹಳದಲ್ಲಿ ರಾವಣನ ಗುಡಿಯಲ್ಲೂ ಘಂಟೆ ಬಾರಿಸುತ್ತದೆ . ತೆಲುಗಿನಲ್ಲಿ " ರಾಮಾಯಣ ವಿಷ ವೃಕ್ಷಮು ” ವಿಷದ ಹಣ್ಣುಗಳನ್ನು ತುಂಬಿಕೊಂಡಿದೆ . ನಾವೇನು ಕಡಿಮೆಯೆಂದು ಮೈಸೂರಿನ ಪ್ರಾಧ್ಯಾಪಕರುಗಳು ದಶಮಾನಗಳಿಂದ ತಮ್ಮ ಸೇವೆಯನ್ನೂ ಸಲ್ಲಿಸುತ್ತಲೇ ಬಂದಿದ್ದಾರೆ. ( "ವಾಲ್ಮೀಕಿ ತೂಕಡಿಸಿದಾಗ”, " ಸೀತಾಯಣ",)