ಸೃಷ್ಟಿಗೊಂದು ಸುಂದರ ಭೂಮಿಕೆ: 16 ಗುಣಗಳ ಗಣಿಯ ಪುರುಷೋತ್ತಮನ ಬಗ್ಗೆ ನಾರದರನ್ನು ಕೇಳಿದ ವಾಲ್ಮೀಕಿ ಮಹರ್ಷಿ

ಎಲ್ಲಿಂದ ತರೋಣ ಈ ಹದಿನಾರು ಗುಣಗಳ ಗಣಿಯನ್ನು? ತಲೆಯಲ್ಲಿ ನೆನಪುಗಳು ಒಂದರ ಹಿಂದೆ ಒಂದರಂತೆ ಯಾವು ಯಾವುದೋ ಹೆಸರುಗಳನ್ನು , ಆಕೃತಿಗಳನ್ನು , ಸಂದರ್ಭಗಳನ್ನು ಚಿತ್ರಿಸುತ್ತಿವೆ , ಸರಿಸುತ್ತಿವೆ....
ನಾರದ ಮಹರ್ಷಿ- ವಾಲ್ಮೀಕಿಗಳ ಸಂಭಾಷಣೆ( ಸಾಂಕೇತಿಕ ಚಿತ್ರ)
ನಾರದ ಮಹರ್ಷಿ- ವಾಲ್ಮೀಕಿಗಳ ಸಂಭಾಷಣೆ( ಸಾಂಕೇತಿಕ ಚಿತ್ರ)
ಭುವನಮೋಹನ ಕಾವ್ಯ ; ನರ ಸುರನಾಗಬಲ್ಲ ಸಾಧನಾಕಾವ್ಯ ; ಕರ್ತವ್ಯಪಠಣವಷ್ಟೇ ಅಲ್ಲದೇ ಚಾಚೂ ತಪ್ಪದೆ ನಡೆದ ವೀರಕಾವ್ಯ ; ಆದರ್ಶ ಪಾರಾಯಣತೆಯನ್ನು ಸಾಕ್ಷಾತ್ಕರಿಸಿದ ಕಾವ್ಯ ; ದೈತ್ಯ ದರ್ಪಿಷ್ಠ ದುಷ್ಟ ದಂಡಧಾರಿಯನ್ನು ದಂಡಿಸಿದ ನ್ಯಾಯಕಾವ್ಯ ; "ಧರ್ಮವೆ ಜಯ"ವೆಂಬ ದಿವ್ಯಮಂತ್ರವನ್ನು ಧರಿಸಿದ ಧರ್ಮಕಾವ್ಯ ; ಈ ರಾಮಕಾವ್ಯ . ಇಂತಹುದೊಂದು ಅಸಾಮಾನ್ಯ ಕಾವ್ಯ ಹುಟ್ಟಬೇಕಿದ್ದರೆ ಸಾಧಾರಣ ಸನ್ನಿವೇಶ ಸಾಕೆ ? ರಾಮಾಯಣದ ಆರಂಭವೇ ಎಂತಹ ಸುಂದರ ಸಂದರ್ಭಕ್ಕೆ ನಾಂದಿಹಾಡುತ್ತದೆ ನೋಡಿ.  
ಸಾತ್ವಿಕತೆಯೇ ಮೈವೆತ್ತ ತಪೋಭೂಮಿ . ಕುಲಪತಿಗಳ ಅಡಿಯಲ್ಲಿ ಅಧ್ಯಯನ ಮಾಡುವ ಅನೇಕ ವಿದ್ಯಾರ್ಥಿಗಳು , ಸಾಧಕರು , ಋಷಿಗಳು . ಆಶ್ರಮದ ಅಂಚಿನಲ್ಲಿ ತಮಸಾ ನದಿ , ಪ್ರಕೃತಿಯ ಮಧ್ಯದ ಮಂದಾಕಿನಿ , ಮೂದಲಿಕೆ , ಈರ್ಷ್ಯೆ , ದ್ವೇಷಗಳಿರದ ಶಾಂತ ಕಾನನ . ಮಧ್ಯದಲ್ಲೊಂದು ಎಲೆಮನೆ . ಅಸಾಧಾರಣ ತೇಜಸ್ವಿ ; ಸತತ ತಪಸ್ವಿ ; ಕವಿಹೃದಯದ ಮುನಿ . ವೃದ್ಧರಾದರೂ , ಬದುಕು ಹಣ್ಣು ಮಾಡಿದ್ದರೂ ಬಾಗದ ಬಗ್ಗದ ಕಾಯ . ಅವರೇ , ಅವರೇ ವಾಲ್ಮೀಕಿ !
ಆವರಿಗೆ ಅಂದು ಶುಭ ದಿನ. ಅವರ ಬದುಕಿನ ಮಂಗಳ ಮುಹೂರ್ತ. ಮುಖದಲ್ಲಿ ಮರೆ ಮಾಡಲಾಗದ ರೋಮಾಂಚಿತ ಮುಗುಳ್ನಗೆ . ಸಂಭ್ರಮ , ಸಡಗರ . ತುಸು ನಡುಗುವ ನುಡಿ . ಕಾರಣ ಮುಂದಿರುವ ಮಹಾಮುನಿ . ಬ್ರಮ್ಹಚರ್ಯವೇ ಮೂರ್ತಿವೆತ್ತ ಋಷಿ ; ದೇವರ್ಷಿ . ಯಾರು ಈ ಅತಿಥಿ ? ಯಾರು ಈ ಪ್ರಕಾಶ ಪುತ್ಥಳಿ ? ಯಾರು ಈ ಹಸನ್ಮುಖಿ ? ಯಾರು ಈ ಜಾರದ ಜವ್ವನಿಗ ? ಅದೇನು ಸುಂದರ ವದನ ! ಅದೆಂತಹ ಕಾಂತಿಕಾಯ ! ಬಾಡದ ಹೂಹಾರ ಎದೆಯ ಮೇಲೆ . ಕೊರಳಿಂದ ಕೆಳಗಿಳಿದ ತುಳಸೀಮಾಲೆ , ಪಕ್ಕದಲ್ಲಿ ತೆಗೆದಿಟ್ಟಿರುವ ದಿವ್ಯ ವೀಣೆ . ಎಲ್ಲ ಕಾಲಗಳಲ್ಲೂ ; ಎಲ್ಲ ಸಂದಿಗ್ಧ ಸಮಯಗಳಲ್ಲೂ ಸಂದರ್ಶನವಿತ್ತು ,  ಸಮಸ್ಯೆಯನ್ನು ಪರಿಹರಿಸುವ ದೇವರ್ಷಿ ಬ್ರಮ್ಹಪುತ್ರ . ತಾಯಿಯಂತೆ ಸದಾ ವೀಣಾವಾದನ ಚತುರ . ದೇವ - ದಾನವ , ಮುನಿ - ಮಾನವರಿಂದ ನಮಸ್ಕೃತ . ಈ ಎಲ್ಲ ಅಂಶಗಳಿಗಿನ್ನ ಭವ್ಯವೆಂದರೆ ಅವರ ಹೆಸರೇ . ಅದೇ ಒಂದು ಸಂದೇಶ , ಅದೇ ಒಂದು ಸಂಕೇತ , ಅದೇ ಒಂದು ಮಾರ್ಗದರ್ಶಕ ! "ನಾರಂ ದದಾತಿ" ಎಂಬುದರಿಂದ ಬಂದದ್ದು ಆತನ ಹೆಸರು . ಎಂದರೆ ಮೋಕ್ಷ ಪ್ರದಾತ ! ಅದೇ ನಾರದ . ಅವರೇ ದೇವರ್ಷಿ ನಾರದ .
ಕುಶಲೋಪರಿಯಾಗಿ ಉಪಚಾರ ಮುಗಿದ ಮೇಲೆ ವಾಲ್ಮೀಕಿಗಳ ತಲೆ ತಿನ್ನುತ್ತಿದ್ದ ; ಬುದ್ಧಿ ಹುಡುಕುತ್ತಿದ್ದ ; ಬಹುಕಾಲದಿಂದ ಯಾರನ್ನಾದರೂ ಕೇಳಬೇಕೆಂದಿದ್ದ ಪ್ರಶ್ನೆಯನ್ನು ನಾರದರ ಮುಂದಿಟ್ಟರು . " ಸ್ವಾಮಿನ್ , ಮಾನವರಿಗೆ ಆದರ್ಶವಾಗುವ , ಮಾನವನಲ್ಲಿರಬೇಕಾದ ಗುಣಗಳನ್ನು ಹೊಂದಿರುವ ಪೂರ್ಣ ಪುರುಷನನ್ನೊಬ್ಬನನ್ನು ಕಾಣುವ , ಆತನ ಕೀರ್ತಿಯನ್ನು ಕೇಳುವ ಕುತೂಹಲ ಕೆಲ ಕಾಲದಿಂದ ನನ್ನ ಮನದಲ್ಲಿ ಮೂಡಿದೆ . ಈ ಪ್ರಶ್ನೆಗೆ ಉತ್ತರ ಕೊಡುವ ಧೀಮಂತ , ಸರ್ವಶ್ರುತ ಯಾರೆಂದು ಕಾಯುತ್ತಿದ್ದೆ , ಹುಡುಕುತ್ತಿದ್ದೆ . ತಾವೀಗ ಆಗಮಿಸಿದ್ದೀರಿ . ಸದಾ ಸುತ್ತುತ್ತಿರುವ , ಸರ್ವ ವರ್ತಮಾನಗಳಿಗೂ ಸಾಕ್ಷಿಯಾಗಿರುವ , ಸರ್ವ ಲೋಕಗಳಲ್ಲೂ ಸಂಚರಿಸುವ ತಾವೇ ಈ ಪ್ರಶ್ನೆಗೆ ಉತ್ತರಿಸಲು ಸಮರ್ಥರು ."
(ಮಹರ್ಷೇ ತ್ವಂ ಸಮರ್ಥೋಸಿ ಙ್ಞಾತುಮೇವಂ ಇದಂ ನರಂ) 
ಗುಣಗಣಿ , ವೀರ , ಧಾರ್ಮಿಕ , ಕೃತಙ್ಞ , ಸತ್ಯವ್ರತ , ದೃಢ , ಚಾರಿತ್ರಶುದ್ಧ , ಸರ್ವಹಿತಾಸಕ್ತ , ವಿದ್ವಾನ್ , ಸಮರ್ಥ , ಸರ್ವಸುಂದರ , ಆತ್ಮಙ್ಞಾನಿ , ಅಕೋಪಿಷ್ಠ , ಕಾಂತಿಯುಕ್ತ , ಅಸೂಯಾರಹಿತ , ಹಾಗೂ ಯುದ್ಧದಲ್ಲಿ ದೇವತೆಗಳನ್ನು ಮಣಿಸಬಲ್ಲ ಮನುಷ್ಯರಾರಾದರೂ ಒಬ್ಬರಿದ್ದಾರೆಯೇ ? ಇದ್ದರೆ ಅವರಾರು ? ಅವರೆಲ್ಲಿದ್ದಾರೆ ? ಅವರ ಚರಿತ್ರೆ ಏನು ? ದಯವಿಟ್ಟು ಆ ಮಹಾತ್ಮನ ಬಗ್ಗೆ ತಿಳಿಸಿಕೊಡುವಿರಾ ? 
           (ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್
                   ಧಮರ್ಙ್ಜಶ್ಚ ಕೃತಙ್ಞಶ್ಚ ಸತ್ಯ ವಾಕ್ಯೋ ದೃಢವ್ರತಃ
                 ಚಾರಿತ್ರೇಣ ಚ ಕೋಯುಕ್ತಃ ಸರ್ವ ಭೂತೇಷು ಕೋ ಹಿತಃ
                 ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಚೈಕಪ್ರಿಯದರ್ಶನಃs
           ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋ ಅನಸೂಯಕಃ
               ಕಸ್ಯ ಬಿಭ್ಯತಿ ದೇವಾಶ್ಚ ಜಾತ ರೋಷಸ್ಯ ಸಂಯುಗೇ )
ದೀರ್ಘ ಪ್ರಶ್ನೆ ಕೇಳಿದ್ದು ವಾಲ್ಮೀಕಿ . ಸುಸ್ತಾದದ್ದು ನಾರದರು . ಎಲ್ಲಿಂದ ತರೋಣ ಈ ಹದಿನಾರು ಗುಣಗಳ ಗಣಿಯನ್ನು ? ತಲೆಯಲ್ಲಿ  ನೆನಪುಗಳು ಒಂದರ ಹಿಂದೆ ಒಂದರಂತೆ ಯಾವು ಯಾವುದೋ ಹೆಸರುಗಳನ್ನು , ಆಕೃತಿಗಳನ್ನು , ಸಂದರ್ಭಗಳನ್ನು ಚಿತ್ರಿಸುತ್ತಿವೆ , ಸರಿಸುತ್ತಿವೆ . " ವಾಲ್ಮೀಕಿ ಬಹಳ ಕಷ್ಟ ಕಣಪ್ಪ ನಿನ್ನ ಪ್ರಶ್ನೆಗೆ ಉತ್ತರಿಸುವುದು . ಯಾವುದಾದರೂ ಒಂದು ಗುಣವೆಂದರೆ ನೂರು ಮಂದಿ ಹೆಸರು ಹೇಳೇನು . ಆದರೆ ಹದಿನಾರೂ ಒಬ್ಬನಲ್ಲಿರಬೇಕೆಂದರೆ ಯಾವ ಮನುಷ್ಯನನ್ನು ಹೆಸರಿಸಲಿ ? " 
(ಬಹವೋ ದುರ್ಲಭಾಶ್ಚೈವ ಏ ತ್ವಯಾ ಕೀರ್ತಿತಾ ಗುಣಾಃ )

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com