ಆದರೆ ಏನಿದು ? ಏನನ್ನೂ ಅವರು ಕೇಳುತ್ತಿಲ್ಲ ! ಸಮಾಧಾನ ಮಾಡುತ್ತಿದ್ದಾರೆ . ಅರೆ ! ನನ್ನ ವಿಷಯ ಇವರಿಗೆ ಎಂತು ಗೊತ್ತು ? ಓಹ್ . ತನ್ನ ಬಗ್ಗೆ , ತನ್ನ ಗಂಡನ ಬಗ್ಗೆ , ಅಪ್ಪನ ಬಗ್ಗೆ , ಮಾವನ ಬಗ್ಗೆ ಅವರೇ ಹೇಳುತ್ತಿದ್ದಾರೆ ! ಇವರಿಗಿದೆಲ್ಲ ಹೇಗೆ ಗೊತ್ತಾಯಿತು ? ಯಾರೋ ಮಹಾನುಭಾವರು . ಯಾರಪ್ಪಾ ಈ ಪುಣ್ಯಾತ್ಮ ? ಅನಾಥ ಬಂಧು , ಅನಾಥ ರಕ್ಷಕ . ತಲೆ ನೇವರಿಸುತ್ತಿದ್ದಾರೆ . ಶಿಷ್ಯೆಯರಿಗೆ ಆದೇಶಿಸುತ್ತಿದ್ದಾರೆ . ತನ್ನನ್ನು ಅಹ್ವಾನಿಸುತ್ತಿದ್ದಾರೆ . ಕರುಣೆಯೇ ಮೂರ್ತಿವೆತ್ತ ಋಷಿವಾಣಿ ಮೃದುವಾಗಿ ಸವರಿತು ಸೀತೆಯ ಕಿವಿಗಳನ್ನು . " ಮಗಳೇ , ನಾನು ವಾಲ್ಮೀಕಿ . ನಿನ್ನ ಮಾವನ ಮಿತ್ರ . ದಶರಥನೊಡನೆ ಹಲ ಶತಮಾನಗಳ ಸ್ನೇಹ . ನಿನ್ನ ತಂದೆಯನ್ನೂ ನಾನು ಬಲ್ಲೆ . ನಿನ್ನ ಗಂಡನೂ ನನಗೆ ಗೊತ್ತು . ಆತನ ಪಿತೃವಾಕ್ಯ ಪರಿಪಾಲನೆ , ಅದಕ್ಕಾಗಿ ಅಡವಿಪಾಲದದ್ದು , ಅಲ್ಲಿ ನಡೆದ ಎಲ್ಲ ವಿಷಯಗಳನ್ನೂ ನಾನು ತಿಳಿದಿರುವೆ . ಅಡವಿಯಲ್ಲಿದ್ದಾಗ ನಿಮ್ಮನ್ನು ನೋಡಿದ್ದೆ . ಸನಿಹವಿದ್ದರೂ ನಮ್ಮ ಭೇಟಿಯಾಗಿರಲಿಲ್ಲ . ನಿನಗೆ ಮರೆತು ಹೋಗಿದೆಯೆಂದು ಕಾಣುತ್ತದೆ . ನೀನಿಲ್ಲಿಗೇಕೆ ಬಂದೆ , ನೀನೆಂತಹ ಪತಿವ್ರತೆ , ನಿನ್ನ ಗಂಡ ಏಕಾಗಿ ನಿನ್ನನ್ನು ಕಳಿಸಿದ , ಅವನ ಅವಸ್ಥೆ ಏನು , ಅವನೆಂತಹ ಇಕ್ಕಟ್ಟಿನ ಇಕ್ಕಳದಲ್ಲಿ ಸಿಲುಕಿದ್ದಾನೆ , ಅವನೆಷ್ಟು ನೋಯುತ್ತಿದ್ದಾನೆ , ರಾಜ ಧರ್ಮ ಪರಿಪಾಲನೆಗಾಗಿ ಸ್ವಸುಖ ತ್ಯಾಜ್ಯ ಮಾಡಿದ್ದಲ್ಲದೆ , ನಿಷ್ಕಳಂಕಳಾದ ನಿನ್ನನ್ನು ಬಿಟ್ಟು ಮನೋವ್ಯಥೆಯಲ್ಲಿ ನಿದ್ರಾಹಾರವಿಲ್ಲದೆ ಎರಡು ದಿನಗಳಿಂದ ಶೋಕಗೃಹದಲ್ಲಿ ಅವನೆಂತು ಒದ್ದಾಡುತ್ತಿದ್ದಾನೆ , ನಿನ್ನನ್ನು ನನ್ನ ಬಳಿಗೆ ಕಳಿಸಿದ ಕಾರಣ.... ಎಲ್ಲವನ್ನೂ ನಾನು ಬಲ್ಲೆ . ಸಮಾಧಿ ಸ್ಥಿತಿಯಲ್ಲಿ ನಾನೆಲ್ಲವನ್ನೂ ಅರಿಯಬಲ್ಲೆ . ಏಳು . ನೀನು ಪಟ್ಟಮಹಿಷಿ . ನಿನ್ನ ಸ್ಥಾನದಲ್ಲಿ ಇನ್ನಾರೂ ಕೂರಲು ಸಾಧ್ಯವಿಲ್ಲ , ಕೂಡುವುದೂ ಇಲ್ಲ , ಅದು ನಿನ್ನ ಗಂಡನ ಸತ್ಯ ಸಂಕಲ್ಪ . ಚಿಂತಿಸಬೇಡ , ಇದೆಲ್ಲ ವಿಧಿಯ ಲೀಲೆ . ನೀನು ನಿನ್ನ ತೌರಿಗೆ ಬಂದಿದ್ದೀಯೆ ಎಂದು ತಿಳಿ ; ನಿಶ್ಶಂಕೆಯಿಂದ ಇರು . ನಡೆ , ನಮ್ಮ ಆಶ್ರಮಕ್ಕೆ ಹೋಗೋಣ . "