ಮುರಿದ ದರ್ಭೆಯ ಮೇಲ್ಭಾಗದಿಂದ ದೃಷ್ಟಿ ತೆಗೆದವನಿಗೆ 'ಕುಶ', ಕೆಳಭಾಗದಿಂದ ದೃಷ್ಟಿ ತೆಗೆದವನಿಗೆ 'ಲವ' ಎಂದು ನಾಮಕರಣ

ದರ್ಭೆಯ ಕಟ್ಟನ್ನು ಮಧ್ಯಕ್ಕೆ ಮುರಿದು ಮೇಲಿನ ಭಾಗವನ್ನ ಕೊಟ್ಟು ಹೇಳಿದರು, " ಮೊದಲು ಹೊರಬಂದ ಮಗುವಿಗೆ ಈ ಕುಶವನ್ನು ನಿವಾಳಿಸು". ದರ್ಭೆಯ ಕಟ್ಟಿನ ಕೆಳಭಾಗವನ್ನಿತ್ತು , " ಈ ಲವದಿಂದ ಎರಡನೆಯ....
ಸೀತಾ ದೇವಿಯೊಂದಿಗೆ ಲವ-ಕುಶರು
ಸೀತಾ ದೇವಿಯೊಂದಿಗೆ ಲವ-ಕುಶರು
ಸೀತೆಯನ್ನು ಕರೆತಂದದ್ದೂ , ಆಕೆಯನ್ನು ಋಷಿಪತ್ನಿಯರ ಆರೈಕೆಗೆ ಬಿಟ್ಟದ್ದೂ , ಕೆಲ ತಿಂಗಳುಗಳನ್ನು ಆಕೆ ಕಳೆದದ್ದೂ... ಎಲ್ಲ ಸಂಗತಿಗಳೂ ನೆನಪಾಗುತ್ತಿವೆ . ಅಂದು ವೃದ್ಧ ತಾಪಸಿ ಹೇಳಿದ್ದಳು ; ಸೀತೆಗೆ ಹೆರಿಗೆ ನೋವೆಂದು . ತಾವು ರಾಕ್ಷೋಘ್ನ ಮಂತ್ರ ಪಠಿಸಿ ಯಂತ್ರ ಕಳಿಸಿದ್ದರು . ಸಮಯ ಸರಿಯಿತು . ಗುಡಿಸಿಲೊಳಗಿಂದ ಪುಟ್ಟ ಮಗುವಿನ ಮೆಲುದನಿ . "ಅಳು" ಎಂದು ಹೆಸುರಿಟ್ಟಿದ್ದೇವೆ ಆ ಸದ್ದಿಗೆ . ಏನಿದು ! ಒಂದು ಧ್ವನಿ ಕೇಳುತ್ತಿಲ್ಲ , ಎರಡೆರಡು ?! ಓಡಿ ಬಂದು ತಾಪಸಿ ಹೇಳಿದಳು , " ಅವಳಿ-ಜವಳಿ ".
ಕೈಲಿದ್ದ ದರ್ಭೆಯ ಕಟ್ಟನ್ನು ಮಧ್ಯಕ್ಕೆ ಮುರಿದು ಮೇಲಿನ ಭಾಗವನ್ನವಳಿಗೆ ಕೊಟ್ಟು ಹೇಳಿದರು , "ಮೊದಲು ಹೊರಬಂದ ಮಗುವಿಗೆ ಈ ಕುಶವನ್ನು ನಿವಾಳಿಸು". ಎಡಗೈಲಿದ್ದ ದರ್ಭೆಯ ಕಟ್ಟಿನ ಕೆಳಭಾಗವನ್ನಿತ್ತು, "ಈ ಲವದಿಂದ ಎರಡನೆಯ ಮಗುವಿಗೆ ದೃಷ್ಟಿ ತೆಗೆ".
ಮಕ್ಕಳಿಗೆ ನಾಮಕರಣವೂ ಆಗಿ ಹೋಯಿತು. ಅದೇ ದೊಡ್ಡವ ಕುಶ, ಅವನ ತಮ್ಮ ಲವ. ಈಗಾಗಲೇ ಆ ಮೊಮ್ಮಕ್ಕಳ ಸುಖವನ್ನೂ ಅನುಭವಿಸುತ್ತಿದ್ದಾರೆ ಋಷಿಗಳು. ’ಎಲ್ಲಿಯ ತಾನು ? ಎಲ್ಲಿಯ ಈ ರಾಮಪತ್ನಿ ? ಎಲ್ಲಿಯ ಈ ಮಕ್ಕಳು ? ಎಲ್ಲಿಗೆಲ್ಲಿಗೆ ಸಂಬಂಧ ?
ಅರಮನೆಯಲ್ಲಿರಬೇಕಾದವರು ಕಾಡುಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ ಭೋಗಗಳನ್ನು ಅನುಭವಿಸಬೇಕಿದ್ದ ಮಹಾರಾಣಿ ಅಡವಿ ಹೆಣ್ಣಾಗಿದ್ದಾಳೆ. ಅವಿವಾಹಿತನಾದ ತಾನು ಈಗ ಅಜ್ಜನಾಗಿಬಿಟ್ಟಿದ್ದೇನೆ. ಏನಿದೀ ವೈಚಿತ್ರ್ಯ? ಏನಿದೀ ಸೃಷ್ಟಿಯ ಗುಟ್ಟು?’
ಈ ಎಲ್ಲ ಗತ ಸ್ಮೃತಿಗಳ ಮೆರವಣಿಗೆ ಒಂದರ ಹಿಂದೊಂದು ಬರುತ್ತಿರಲು ಕಾರಣ , ಇಂದು ಬೆಳಿಗ್ಗೆಯ ನಾರದಾಗಮನ. ಅವರಲ್ಲಿ ತಾನಿಟ್ಟ ಪ್ರಶ್ನೆಗೆ ಅವರು ಈ ಮಕ್ಕಳ ತಂದೆಯ ಕಥೆಯನ್ನೇ ಹೇಳಬೇಕೆ ? ಓಹ್ ಅದೆಷ್ಟು ಪ್ರಭಾವಿಯಾಗಿದೆ ಆತನ ಚರಿತ್ರೆ ! ತಾವೂ ಅಲ್ಲಲ್ಲಿ ತುಂಡು - ತುಂಡು ಸುದ್ದಿಗಳನ್ನು ಕೇಳಿದ್ದರು. ಆದರೆ ಇಷ್ಟು ವಿವರವಾಗಿ ತಮಗೆ ತಿಳಿದಿರಲಿಲ್ಲ . 
ಕೇಳಿದ ನಂತರ ರಾಮಗೌರವ ಹೆಚ್ಚಾಯಿತು. ಅಂತಹ ಧರ್ಮಪ್ರಭು ತನ್ನಲ್ಲಿ ವಿಶ್ವಾಸವಿಟ್ಟು ಪತ್ನಿಯ ರಕ್ಷಣೆಯ ಭಾರವನ್ನು ಒಪ್ಪಿಸಿದ್ದು ತಮ್ಮ ಗೌರವವನ್ನು ಇಮ್ಮಡಿಸಿದಂತೆನಿಸಿತು . 
ಈ ಕಥೆ ಕೇಳುವ ಮುನ್ನವೇ ಒಂದು ನೀಳ್ಗವಿತೆಯನ್ನು ಬರೆದಿದ್ದರವರು . ಅದರಲ್ಲವರು ಪ್ರತಿ ನಾಯಕನ ಪರಾಕ್ರಮವನ್ನು ಮೆಚ್ಚಿದ್ದರು. ಆತನ ದೈವಭಕ್ತಿ ಆಕರ್ಷಿಸಿತ್ತು . ಸದಾ ಭೋಗದಲ್ಲಿ ಮುಳುಗಿದ್ದ ದೇವತೆಗಳ ನಡು ಮುರಿದದ್ದು ತಮಗೊಂದು ತರಹದ ಮುದವನ್ನೇ ಕೊಟ್ಟಿತ್ತು . ಆ ರಾವಣನ ಕಥೆಯನ್ನು ಕೇಳಿ ಮಾರು ಹೋಗಿದ್ದ ತಮಗೆ , ಆತನ ತಪ್ಪು ಕ್ಷಮಾರ್ಹವೆನಿಸಿತ್ತು . ’ಯಾವ ಮನುಷ್ಯನಲ್ಲಿ ದುರ್ಬಲಾಂಶವಿಲ್ಲ ? ಒಂದಲ್ಲ ಒಂದು ನ್ಯೂನತೆ ಎಲ್ಲರಲ್ಲಿಯೂ ಇದ್ದೇ ಇರುತ್ತದೆ . ಅದರಿಂದ ಹೊರತಾಗಿಯೂ , ಅವನು ಹೇಗೆ ಬದುಕಿದ ಎಂಬುದೇ ಮುಖ್ಯ . ರಾವಣನಲ್ಲಿ ಇದ್ದದ್ದು ಒಂದೇ ಒಂದು ದೌರ್ಬಲ್ಯ . ಸ್ತ್ರೀಚಾಪಲ್ಯ . ಅದರಿಂದಾಗಿ ಹಾಳಾಗಿ ಹೋದ ; ರಾಜ್ಯ ಕಳೆದ ; ಬಂಧುಗಳ ಬಲಿಯಿತ್ತ ; ಸಿರಿಯನ್ನು ಸುಟ್ಟ ; ಮಡದಿಯನ್ನು ವಿಧವೆ ಮಾಡಿದ... ಛೆಛೆ ! ಎಂತಹ ವೀರ...!! ಸತ್ತೇ ಹೋದ . ರಣಭೂಮಿಯಲ್ಲಿ ಉರುಳಿಬಿದ್ದ .’ ತಾವೂ ವ್ಯಥಿಸಿದ್ದರು ರಾವಣನ ಸಾವು ಕೇಳಿ . ಅವನನ್ನೇ ಕಥಾನಾಯಕನನ್ನಾಗಿಟ್ಟು ಬರೆದ ತಮ್ಮ ಕಿರುಕಾವ್ಯಕ್ಕೆ " ಪೌಲಸ್ತ್ಯ ವಧಾ " ಎಂದೇ ಹೆಸರಿಟ್ಟಿದ್ದರು . 
ಆದರೆ ಇಂದು ರಾಮಕಥೆಯನ್ನು ಕೇಳಿದ ಮೇಲೆ , ರಾಮ ದರ್ಶನ ಮಾಡಿದ ಮೇಲೆ ತಮ್ಮ ನಾಯಕ ಆ ಸ್ಥಾನದಿಂದ ಬಿದ್ದೇ ಬಿಟ್ಟ . ಅಲ್ಲಿಯವರೆಗೆ ಮೆಚ್ಚುಗೆಗೆ ಪಾತ್ರನಾಗಿದ್ದ ಪೌಲಸ್ತ್ಯ ಪತಿತನಾಗಿಬಿಟ್ಟ . ತಾವು ಯಾವುದೋ ಒಂದು ದೌರ್ಬಲ್ಯವೆಂದು ಭಾವಿಸಿದ್ದದ್ದು ಒಂದಲ್ಲ , ಹತ್ತಲ್ಲ , ಅವನು ಮಾತು , ಕಥೆ , ವರ್ತನೆ , ನಡತೆ ... ಎಲ್ಲವೂ ಅನಾಗರಿಕವೇ . ಎಲ್ಲವೂ ದೋಷ ಪೂರ್ಣವೇ . ಅರಣ್ಯನ್ಯಾಯವೇ . ಕೇವಲ ದರ್ಪ , ಮನಸೋ ಇಛ್ಛೆ ನಡೆವ ಚಟ , ಎದುರಾದವರ ತಲೆತಗೆವ , ಬುದ್ಧಿ ಹೇಳುವವರ ನಾಲಗೆ ಸೀಳುವ , ಬಂಧುಗಳನ್ನು ಬಡಿವ , ಕೇವಲ ಕಾಮಪಿಶಾಚಿಯಾಗಿದ್ದ . ಯಾರನ್ನೂ ಲೆಕ್ಕಿಸದ , ಎಲ್ಲರನ್ನೂ ಬಗ್ಗುಬಡಿವ ನಿರಂಕುಶನಾಗಿದ್ದ . ದೇವರ ವರ-ದೇಹದ ಬಲ ಈ ಎರಡೂ ಇದ್ದೂ ಅಧರ್ಮಿಯಾದರೆ , ಹೇಗೆ ಒಬ್ಬ ಕೊಬ್ಬಿ , ಮೈಮರೆತು , ನೀತಿ ನಿಯಮಗಳನ್ನು ಗಾಳಿಗೆ ತೂರಿ , ಲಂಗು ಲಗಾಮಿಲ್ಲದೆ ನುಗ್ಗಿ , ಕೊನೆಗೆ ಪಾಪದ ಕೊಡ ತುಂಬಿ  ಸತ್ತಾಗ ಸಂಸ್ಕರಿಸಲು ಮಗನಿಲ್ಲದೆ ಹೋಗಿ , ಪಿಂಡ ಪ್ರದಾನಕ್ಕೆ ಒಬ್ಬನನ್ನೂ ಉಳಿಸದೇ ತನ್ನ ಕಾಮಕ್ಕೆ ಎಲ್ಲ ಮಕ್ಕಳನ್ನೂ ಬಲಿಕೊಟ್ಟು ನಿರ್ನಾಮವಾದನೆಂಬ ದುರಂತಕ್ಕೆ ಸಾಕ್ಷಿಯಾಗಿ ಬಿಟ್ಟ !!!!! ಈ ಯೋಚನೆ ಬರುತ್ತಿದ್ದಂತೆಯೇ ತಮ್ಮ ದೀರ್ಘ ಕವನ ಅರ್ಥಹೀನವೆನಿಸಿತು . ಅದನ್ನು ಬದಲಿಸಬೇಕು . ಮೊದಲು ಆ ಶೀರ್ಷಿಕೆಯನ್ನು ಕಿತ್ತೆಸೆಯಬೇಕು ಎನಿಸಿತು . ಪೌಲಸ್ತ್ಯವಧ ಶಿರೋನಾಮೆ ಮೇಲೆ ಅಡ್ಡಗೀಟು ಬಿತ್ತು. 
ಯೋಚಿಸುತ್ತ , ಚಿಂತಿಸುತ್ತ ನದಿ ದಡಕ್ಕೆ ಬಂದುಬಿಟ್ಟಿದ್ದಾರೆ ಮಹರ್ಷಿ . ದಾರಿ ಸವೆದದ್ದೇ ಗೊತ್ತಾಗಲಿಲ್ಲ . ಇನ್ನೇನು ಸ್ನಾನಕ್ಕೆ ಇಳಿಯಬೇಕು , ಓಹ್ ! ಅದೆಂತಹ ಕರುಳಿರಿಯುವ ತಣ್ಣನೆಯ ನೋವಿನ ಉಲಿ . ಗೋಳಿನ ಕಡೆ ನೋಡಿದರೆ ಹಕ್ಕಿಯೊಂದು ಬಿದ್ದು ವಿಲವಿಲನೆ ಒದ್ದಾಡುತ್ತಿದೆ . ಒಡನಾಡಿ , ಸುತ್ತಿ ಸುತ್ತಿ ತನ್ನ ಸಂಕಟವನ್ನು ಕೂಗಿ ಕೂಗಿ ಹೊರಹಾಕುತ್ತಿದೆ . ಎಲ್ಲಿದ್ದನೋ ಬೇಡನೊಬ್ಬ ಬಂದು ಸತ್ತ ಹಕ್ಕಿಯನ್ನು ಹೆಕ್ಕಿ ಭುಜದ ಚೀಲಕ್ಕೆ ಇಳಿಬಿಟ್ಟು ಹೊರಟೇ ಹೋದ . ತನ್ನ ಎದೆ ನಡುಗಿಹೋಗಿತ್ತು . ಕಣ್ಣಲ್ಲಿ ನೀರು ಕಾರಿತ್ತು . ಅಪ್ರಯತ್ನವಾಗಿ ಕಮಂಡಲದ ನೀರು ಕೈಗೆ ಬಿದ್ದು ಶಾಪವಾಕ್ಯ ಬಾಯಿಂದ ಹೊರಬಿತ್ತು. 
" ಎಲಾ ನಿಷ್ಕರುಣಿ ! ಬೇಟೆ ನಿನ್ನ ಕುಲಧರ್ಮ ಇದ್ದಾತು . ಅದು ತಪ್ಪಲ್ಲ . ಆದರೆ ಎಂತಹ ಬೇಟೆಯಾಡಬೇಕೆಂಬ ವಿವೇಚನೆ ಬೇಡವೆ ? ಪ್ರಾಣಿ ಪ್ರಪಂಚಕ್ಕೆ ಸರ್ವ ಮಾನ್ಯವಾದ ಸುಖದ ಪರಾಕಾಷ್ಠೆಯೆಂದರೆ ಸಂಭೋಗ . ಸಂಯೋಗ ನಿರತವಾಗಿದ್ದ ಜೋಡಿ ಹಕ್ಕಿಗಳಲ್ಲಿ ಒಂದನ್ನು ಕೊಂದೆಯಲ್ಲಾ , ಅದು ಅಧರ್ಮ . ಇದರಿಂದಾಗಿ ನಿನ್ನನ್ನು ಶಪಿಸುತ್ತಿರುವೆ..... ( ಏನೆಂದು ಶಪಿಸಲಿ ? ಬೇಡನದು ಪೂರ್ಣಪ್ರಮಾಣದ ತಪ್ಪಲ್ಲ . ಅವನಿಗೆ ಈ ಸಂಸ್ಕಾರ ಗೊತ್ತಿರುವುದೂ ಶಂಕೆಯೇ . ಆದರೂ ಆದರೂ ನನಗೆ ಅವನ ಕ್ರಿಯೆ ನೋವು ತಂದಿದೆ . ಅದು ಶಮನವಾಗಬೇಕು . ಅದ್ದರಿಂದ ಉಗ್ರ ಶಾಪ ಬೇಡ , ಲಘು ಶಿಕ್ಶೆ ಕೊಡುವ ) ನಿನ್ನ ಕೀರ್ತಿ , ನಿನ್ನ ಪ್ರತಿಷ್ಠೆ , ಬಹಳ ಕಾಲ ಇರದೇ ಇರಲಿ !  (ಮಾ ನಿಶಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ ಯತ್ ಕ್ರೌಂಚ ಮಿಥುನಾದೇಕಂ ಅವಧೀ ಕಾಮಮೋಹಿತಂ
(ಮುಂದುವರೆಯುವುದು...) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com